ಪಾಕಿಸ್ತಾನದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, 15 ನವಜಾತ ಶಿಶುಗಳ ಸಜೀವದಹನ
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ PIMS ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 15 ನವಜಾತ ಶಿಶುಗಳು ದುರಂತ ಸಾವಿಗೀಡಾಗಿವೆ. ಎಸಿ ಕಂಪ್ರೆಸರ್ ಸ್ಫೋಟದಿಂದ ಬೆಂಕಿ ಹತ್ತಿಕೊಂಡಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಇಂತಹ ಘಟನೆಗಳನ್ನು ತಡೆಯಲು ಆಸ್ಪತ್ರೆಗಳಲ್ಲಿ ಉತ್ತಮ ಸುರಕ್ಷತಾ ಕ್ರಮಗಳು, ಅಂದರೆ ಹೊಗೆ ಪತ್ತೆಕಾರಕಗಳು ಮತ್ತು ಎಲೆಕ್ಟ್ರಿಕಲ್ ಆಡಿಟ್ ಕಡ್ಡಾಯಗೊಳಿಸಬೇಕೆಂದು ಆರೋಗ್ಯ ತಜ್ಞರು ಆಗ್ರಹಿಸಿದ್ದಾರೆ.

ಇಸ್ಲಾಮಾಬಾದ್, ಆಗಸ್ಟ್ 26: ಪಾಕಿಸ್ತಾನ(Pakistan)ದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಪ್ರಮುಖ ಸರ್ಕಾರಿ ಆಸ್ಪತ್ರೆ ‘ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್’ನ ನವಜಾತ ಶಿಶುಗಳ ಆರೈಕೆ ಘಟಕದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 15 ನವಜಾತ ಶಿಶುಗಳು ಸಜೀವ ದಹನವಾಗಿವೆ.
ಬುಧವಾರ ಬೆಳಗಿನ ಜಾವ ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ಸ್ತ್ರೀರೋಗ ಮತ್ತು ಹೆರಿಗೆ ವಿಭಾಗದ ನರ್ಸರಿಯಲ್ಲಿ ಏಕಾಏಕಿ ಏರ್ ಕಂಡೀಷನರ್ (AC) ಕಂಪ್ರೆಸರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ನರ್ಸರಿ ವಾರ್ಡ್‌ನಲ್ಲಿ ಒಟ್ಟು 16 ನವಜಾತ ಶಿಶುಗಳನ್ನು ಇರಿಸಲಾಗಿತ್ತು.
ಬೆಂಕಿಯ ಜ್ವಾಲೆ ಮತ್ತು ದಟ್ಟ ಹೊಗೆ ಕ್ಷಣಾರ್ಧದಲ್ಲೇ ಇಡೀ ಕೊಠಡಿಯನ್ನು ಆವರಿಸಿದ್ದರಿಂದ 14 ರಿಂದ 15 ಶಿಶುಗಳು ಸ್ಥಳದಲ್ಲೇ ಉಸಿರುಗಟ್ಟಿ ಹಾಗೂ ಸುಟ್ಟು ಮೃತಪಟ್ಟಿವೆ. ಕೇವಲ ಒಂದು ಶಿಶುವನ್ನು ಮಾತ್ರ ರಕ್ಷಣಾ ಸಿಬ್ಬಂದಿ ಜೀವಂತವಾಗಿ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತಷ್ಟು ಓದಿ: ವಿದ್ಯಾರ್ಥಿಗಳ ಹೆದರಿಸಲು ಪತ್ನಿಯಿಂದ ಪತಿಗೊಂದು ಕಾಲ್: ಯೂನಿವರ್ಸಿಟಿಯಲ್ಲಿ ಗುಂಡು ಹಾರಿಸಿ ಗೂಂಡಾಗಿರಿ ಮೆರೆದ ಪಾಕ್ ಸೇನಾಧಿಕಾರಿ
ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ರಕ್ಷಣಾ ತಂಡಗಳು ನರ್ಸರಿಯ ಕಿಟಕಿಗಳ ಗಾಜುಗಳನ್ನು ಒಡೆದು ಒಳನುಗ್ಗಿ ಬೆಂಕಿಯನ್ನು ನಂದಿಸಿ, ನಂತರ ಕೂಲಿಂಗ್ ಕಾರ್ಯಾಚರಣೆಯನ್ನು ನಡೆಸಿದವು. ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಅಥವಾ ಎಸಿ ಸ್ಫೋಟವೇ ಕಾರಣವೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಇಸ್ಲಾಮಾಬಾದ್ ಜಿಲ್ಲಾಡಳಿತವು ಹೆಚ್ಚುವರಿ ಜಿಲ್ಲಾಧಿಕಾರಿಗಳ (ADC) ನೇತೃತ್ವದಲ್ಲಿ ವಿಶೇಷ ತನಿಖಾ ಸಮಿತಿಯನ್ನು ರಚಿಸಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ದೇಶದ ಪ್ರಮುಖ ಗಣ್ಯರಿಗೆ ವೈದ್ಯಕೀಯ ಸೇವೆ ನೀಡುವ ದೇಶದ ಪ್ರತಿಷ್ಠಿತ ಪಿಮ್ಸ್ (PIMS) ಆಸ್ಪತ್ರೆಯಲ್ಲೇ ಇಂತಹ ಭದ್ರತಾ ವೈಫಲ್ಯ ನಡೆದಿರುವುದು ಸಾರ್ವಜನಿಕರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಆಸ್ಪತ್ರೆಗಳ ನವಜಾತ ಶಿಶು ನಿಗಾ ಘಟಕಗಳಲ್ಲಿ ನಿರಂತರವಾಗಿ ವಿದ್ಯುತ್ ಉಪಕರಣಗಳು ಮತ್ತು ಆಕ್ಸಿಜನ್ ಪೂರೈಕೆ ಇರುವುದರಿಂದ, ಸಣ್ಣ ಶಾರ್ಟ್ ಸರ್ಕ್ಯೂಟ್ ಕೂಡ ಕ್ಷಣಾರ್ಧದಲ್ಲಿ ಬೃಹತ್ ಅಗ್ನಿ ದುರಂತಕ್ಕೆ ಕಾರಣವಾಗುತ್ತದೆ. ಇಂತಹ ಅವಘಡಗಳನ್ನು ತಪ್ಪಿಸಲು ಆಸ್ಪತ್ರೆಗಳಲ್ಲಿ ಸ್ವಯಂಚಾಲಿತ ಹೊಗೆ ಪತ್ತೆಕಾರಕಗಳು (Smoke Detectors), ಆಟೋಮ್ಯಾಟಿಕ್ ಸ್ಪ್ರಿಂಕ್ಲರ್‌ಗಳು ಮತ್ತು ನಿಯಮಿತ ಎಲೆಕ್ಟ್ರಿಕಲ್ ಆಡಿಟ್ ಕಡ್ಡಾಯಗೊಳಿಸಬೇಕೆಂದು ಆರೋಗ್ಯ ತಜ್ಞರು ಒತ್ತಾಯಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




