ಕೊಲ್ಕತ್ತಾ: ಚುನಾವಣಾ ಪ್ರಚಾರದ ವೇಳೆ ಹಲ್ಲೆಗೊಳಗಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಾಸಿಗೆಯಲ್ಲಿ ಮಲಗಿಕೊಂಡೇ ಶಾಂತಿಯ ಸಂದೇಶ ರವಾನಿಸಿದ್ದಾರೆ. ಆಸ್ಪತ್ರೆಯಿಂದ ವಿಡಿಯೋ ಮುಖೇನ ಸಂದೇಶ ನೀಡಿರುವ ಮಮತಾ ಬ್ಯಾನರ್ಜಿ, ಎಲ್ಲರೂ ಶಾಂತಿಯಿಂದಿರಿ, ಕೋಪವನ್ನು ನಿಯಂತ್ರಿಸಿಕೊಳ್ಳಿ, ಇನ್ನೊಬ್ಬರಿಗೆ ಹಾನಿಯಾಗುವಂತಹ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಬೇಡ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಬುಧವಾರ ಪೂರ್ವ ಮಿಡ್ನಾಪುರ್ ಜಿಲ್ಲೆಯ ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವಾಗ ಹಲ್ಲೆ ನಡೆದಿತ್ತು. ಹಲ್ಲೆಯಿಂದಾಗಿ ಅವರ ಬಲಭುಜ, ಮೊಣಕಾಲಿಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಸದ್ಯ ಮಮತಾ ಬ್ಯಾನರ್ಜಿ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. ಎಡ ಮೊಣಕಾಲು, ಪಾದ, ಬಲಭುಜ, ಮೊಣಕೈ ಮತ್ತು ಕುತ್ತಿಗೆಗೆ ಗಾಯಗಳಾಗಿರುವುದು ತಪಾಸಣೆಯಲ್ಲಿ ಕಂಡು ಬಂದಿದೆ ಎಂದು ವೈದ್ಯಕೀಯ ವರದಿ ಹೇಳಿದ ಕಾರಣ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ 5 ಹಿರಿಯ ವೈದ್ಯರ ತಂಡ ಬ್ಯಾನರ್ಜಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಿದೆ. ಹಲ್ಲೆಗೊಳಗಾದ ಬೆನ್ನಲ್ಲೇ ಮಮತಾ ಅವರಿಗೆ ಎದೆ ನೋವು ಮತ್ತು ಉಸಿರಾಟದ ಸಮಸ್ಯೆ ಕಂಡು ಬಂದಿರುವುದರಿಂದ ಹೆಚ್ಚು ನಿಗಾ ವಹಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದರು.
ಹಲ್ಲೆ ಬಗ್ಗೆ ಪ್ರತಿಕ್ರಿಯಿಸಿದ್ದ ಮಮತಾ ಬ್ಯಾನರ್ಜಿ, ಒಂದಷ್ಟು ಜನರ ಗುಂಪು ಉದ್ದೇಶಪೂರ್ವಕವಾಗಿ ನನ್ನ ಮೇಲೆ ಹಲ್ಲೆ ಮಾಡಿದೆ. ಇದು ದುರುದ್ದೇಶಪೂರಿತ ಕೃತ್ಯ ಎಂದು ಆರೋಪಿಸಿದ್ದಾರೆ. ಹಲ್ಲೆಯಿಂದಾಗಿ ಹೆಚ್ಚಿನ ನೋವಾಗಿದೆ. ಆದರೂ ನಾನು ನನ್ನ ಚುನಾವಣಾ ಕಾರ್ಯಗಳನ್ನು ನಿಲ್ಲಿಸಲು ಆಗುವುದಿಲ್ಲ. ಹೀಗಾಗಿ, ನಾನು ಪುನಃ ನನ್ನ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ. ಕೆಲ ದಿನಗಳ ತನಕ ವೀಲ್ ಚೇರ್ನಲ್ಲಿ ಕುಳಿತು ಓಡಾಡಬಹುದು. ದಯಮಾಡಿ ನನಗೆ ಸಹಕಾರ ನೀಡಿ ಎಂದು ಮನವಿಯನ್ನೂ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಪ್ರಧಾನ ವಕ್ತಾರ ಶಮಿಕ್ ಭಟ್ಟಾಚಾರ್ಯ, ಹಿರಿಯ ನಾಯಕ ತಥಾಗತ ರಾಯ್ ಸೇರಿದಂತೆ ಬಿಜೆಪಿ ನಾಯಕರು ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಲು ಎಸ್ಎಸ್ಕೆಎಂ ಆಸ್ಪತ್ರೆಗೆ ಹೋಗಿದ್ದರಾದರೂ ಆಸ್ಪತ್ರೆಯ ವೈದ್ಯರು ಬಿಜೆಪಿ ನಾಯಕರಿಗೆ ಭೇಟಿ ಅನುಮತಿ ನಿರಾಕರಿಸಿದ್ದಾರೆ.
ಇದನ್ನೂ ಓದಿ:
ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಲು ಬಂದ ಬಿಜೆಪಿ ನಾಯಕರಿಗೆ ಅನುಮತಿ ನಿರಾಕರಿಸಿದ ವೈದ್ಯರು
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮೊಣಕಾಲು, ಬಲ ಭುಜ ಮತ್ತು ಕುತ್ತಿಗೆಗೆ ಗಾಯಗಳಾಗಿವೆ: ವೈದ್ಯರ ಹೇಳಿಕೆ