ಚೆನ್ನೈನಲ್ಲೊಬ್ಬ ವ್ಯಕ್ತಿ ತನ್ನ ಸ್ನೇಹಿತೆ ಕರೆದ ಎಂದು ಅವರ ಮನೆಗೆ ಈದ್ ಹಬ್ಬಕ್ಕೆ ಹೋಗಿ, ಅಲ್ಲಿ ಬಿರ್ಯಾನಿ ತಿನ್ನುವ ಜತೆ 1.45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣವನ್ನೂ ನುಂಗಿದ್ದಾನೆ. ಇದೀಗ ಪೊಲೀಸರು ಆತನ ಹೊಟ್ಟೆಯಲ್ಲಿದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಅಂದಹಾಗೇ ಈ ವ್ಯಕ್ತಿಯ ಹೊಟ್ಟೆಯಲ್ಲಿದ್ದ ಚಿನ್ನವನ್ನು ಹೊರಗೆ ತೆಗೆಯಲು ಆತನಿಗೆ ವೈದ್ಯರು ಎನೆಮಾವನ್ನು ಕೊಟ್ಟಿದ್ದರು..!
ಪೊಲೀಸರು ಈ ಪ್ರಕರಣದ ವಿವರಣೆಯನ್ನು ನೀಡಿದ್ದಾರೆ. ಯುವತಿಯೊಬ್ಬಳು ತಮ್ಮ ಮನೆಯ ಈದ್ ಹಬ್ಬಕ್ಕೆ ಈ ವ್ಯಕ್ತಿಯನ್ನು ಮತ್ತು ಈತನ ಪ್ರೇಯಸಿಯನ್ನು ಆಹ್ವಾನಿಸಿದ್ದಳು. ಇವರಿಬ್ಬರೂ ಹಬ್ಬಕ್ಕೆ ಹೋಗಿದ್ದರು. ಹಬ್ಬದ ಭೋಜನವೆಲ್ಲ ಮುಗಿದ ಮೇಲೆ ಆತಿಥ್ಯ ವಹಿಸಿದ್ದ ಯುವತಿಗೆ ಶಾಕ್ ಕಾದಿತ್ತು. ಅವಳ ಮನೆಯಲ್ಲಿದ್ದ 1.45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಚೈನ್, ಡೈಮಂಡ್ ಪೆಂಡೆಂಟ್ ಮತ್ತು ಒಂದು ಡೈಮಂಡ್ ನೆಕ್ಲೆಸ್ ಕಾಣೆಯಾಗಿತ್ತು. ಕೂಡಲೇ ಪೊಲೀಸರಿಗೆ ದೂರು ನೀಡಿದ ಆಕೆ, ನನಗೆ ಈ ವ್ಯಕ್ತಿಯ ಮೇಲೆ ಅನುಮಾನವಿದೆ ಎಂದೂ ಹೇಳಿದ್ದಳು.
ಯುವತಿ ನೀಡಿದ ಹೇಳಿಕೆಯಂತೆ ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಈತ ತಾನು ಅವುಗಳನ್ನೆಲ್ಲ ನುಂಗಿದ್ದಾಗಿ ಹೇಳಿಕೊಂಡಿದ್ದಾನೆ. ಬಳಿಕ ವೈದ್ಯರು ಸ್ಕ್ಯಾನಿಂಗ್ ಮಾಡಿ. ಚಿನ್ನವೆಲ್ಲಿದೆ ಎಂದು ಪತ್ತೆ ಹಚ್ಚಿದ್ದಾರೆ. ನಂತರ ಹೊರತೆಗೆಯಲು ಎನೆಮಾ ನೀಡಿದ್ದಾರೆ. ಆದರೆ ಈ ವ್ಯಕ್ತಿ ಈದ್ ಪಾರ್ಟಿಯಲ್ಲಿ ಮದ್ಯಪಾನ ಮಾಡಿ, ಅಮಲೇರಿದ ಸ್ಥಿತಿಯಲ್ಲಿದ್ದ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಯುವತಿ ತನ್ನ ದೂರನ್ನು ವಾಪಸ್ ಪಡೆದಿದ್ದಾಳೆ. ಆಕೆ ದೂರನ್ನು ಹಿಂಪಡೆದಿದ್ದರಿಂದ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Published On - 3:58 pm, Fri, 6 May 22