ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Decision : ಹರಿದ ನನ್ನ ಕಿವಿಗೆ ಹೊಲಿಗೆ ಹಾಕಿಸಿದ ಮೇಲೆ ನಾನೊಂದು ನಿರ್ಧಾರಕ್ಕೆ ಬಂದೆ. ಇನ್ನು ಮುಂದೆ ನನ್ನಿಂದ ಯಾವುದಾದರೊಂದು ಮಹಾಕಾರ್ಯ ಘಟಿಸುವವರೆಗೂ ಕಿವಿಯೋಲೆ ಧರಿಸಬಾರದು ಎಂದು.
ಆಗಾಗ ಅರುಂಧತಿ : ಯೂನಿವರ್ಸಿಟಿಯಲ್ಲಿ ಆ ಪಿಎಚ್. ಡಿ ಓದುತ್ತಿದ್ದ ಮತ್ತು ಮೇಧಾವಿ, ಜ್ಞಾನಿ ಅಂದುಕೊಂಡ ಆ ಗಂಡಸಿನಲ್ಲೂ ಇಂಥದೊಂದು ಕ್ರೌರ್ಯ ಇರುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಪ್ರೊಫೆಸರ್ ಆಗಿ ಮೂರು ವರ್ಷ ಕಾರ್ಯನಿರ್ವಹಿಸಿದ ಅನುಭವ ಇದ್ದರೂ, ಪಾಶ್ಚಾತ್ಯ ಸಾಹಿತ್ಯವನ್ನು ಅರೆದು ಕುಡಿದಿದ್ದರೂ ಆತ ವಿಶಾಲ ಸಮುದ್ರದಂತೆ ಕಂಡುಬಂದರೂ ಆತನಲ್ಲೂ ಕೂಪಮಂಡೂಕದ ಅಲ್ಪತೆ ಇತ್ತು. ಅದು ಆಗಾಗ ಇಣುಕುತ್ತಿತ್ತು. ನನ್ನ ಕ್ಲಾಸಿನ ಹುಡುಗರು ನನ್ನನ್ನು ಕಾಡಿಸಿದರೆ ಅವ ಸಂತುಷ್ಟನಾಗುತ್ತಿದ್ದ ಎನ್ನುವುದು ಕ್ರಮೇಣ ಅರ್ಥವಾಗುತ್ತ ಬಂದಿತು. ನಾನು ಅಧ್ಯಯನ, ನೆಟ್, ಕೆ-ಸೆಟ್ ಪರೀಕ್ಷೆಗಳ ಬಗ್ಗೆ ಮಾಹಿತಿ, ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ಪರೀಕ್ಷೆ ಬರೆಯುವುದು ಹೇಗೆ ಅಂತೆಲ್ಲ ಕೇಳಿದಾಗ ವಿಶ್ವಾಸದಿಂದಲೇ ಉತ್ತರಿಸುತ್ತಿದ್ದ. ಈ ವಿಶ್ವಾಸದಿಂದಲೇ ತುಂಬಾ ಒತ್ತಡ ಉಂಟಾದಾಗ ನನ್ನ ವೈಯಕ್ತಿಕವನ್ನು ಕೆಲಸಲ ಹೇಳಿಕೊಂಡಿದ್ದೆ. ನನ್ನ ಸಂಬಂಧಿಕರು, ಡಿಗ್ರೀ ಓದಿದ್ದು ಸಾಕು ಮದುವೆಯಾಗಿ ಹೋಗು ಎಂದು ಒತ್ತಾಯಿಸಿದ್ದು. ನಾನು ಒಪ್ಪದೇ ಇದ್ದಾಗ ಕೊಲ್ಲಲು ಪ್ರಯತ್ನಿಸಿದ್ದು. ಆ ಘರ್ಷಣೆಯಲ್ಲಿ ಓಲೆ ಸಿಕ್ಕಾಕಿಕೊಂಡು ನನ್ನ ಕಿವಿ ಹರಿದಿದ್ದು ಹೀಗೆ. ಇದೆಲ್ಲವನ್ನೂ ಆ ಪುಂಡ ಹುಡುಗರಿಗೆ ಸುಳಿವು ಬಿಟ್ಟುಕೊಡುತ್ತಿದ್ದ ಎನ್ನುವುದು ನನಗೆ ಬರುಬರುತ್ತ ಅರ್ಥವಾಗತೊಡಗಿತು. ಅರುಂಧತಿ (Arundhathi)
(ಸತ್ಯ 4)
ಅವ ನನಗೆ ಹೀಗೆ ವಿಶ್ವಾಸದ್ರೋಹ ಬಗೆದರೂ ನಾನು ನನ್ನ ಕನಸುಗಳನ್ನು ಕಡಿದುಕೊಂಡಿಲ್ಲ. ನೆಟ್, ಕೆ-ಸೆಟ್ ಪರೀಕ್ಷೆಗಳಿಗಾಗಿ ಓದಲು ತೊಡಗಿಕೊಳ್ಳುತ್ತೇನೆ. ಒಬ್ಬ ಪ್ರೊಫೆಸರ್ ಎಂದರೆ ಎಷ್ಟು ಘನತೆಯಿಂದ ಇರಬೇಕು. ಅದು ಬಿಟ್ಟು ಪುಂಡ ಹುಡುಗರೊಂದಿಗೆ ಹೀಗೆಲ್ಲ ಮಾಡಿದರೆ ಹೇಗೆ? ನನ್ನ ಅಪ್ಪ ಅಮ್ಮ ನನಗೆ ತಕ್ಕಮಟ್ಟಿಗೆ ಆಸ್ತಿ ಮಾಡಿಟ್ಟಿದ್ದರೂ ಅದು ನನ್ನದಲ್ಲ. ಅದು ಅವರ ಶ್ರಮದ ಫಲ. ನಾನು ಏನಿದ್ದರೂ ನನ್ನ ಶ್ರಮದಿಂದ ಬದುಕಬೇಕು. ಹಾಗಾಗಿ ನನ್ನ ಬದುಕನ್ನು ನಾನೇ ರೂಪಿಸಿಕೊಳ್ಳಬೇಕು. ತಿಳಿಯದ ವಿಷಯವನ್ನು ತಿಳಿದವರ ಬಳಿ ಕೇಳಿ ತಿಳಿದುಕೊಂಡು ಗುರಿಯತ್ತ ಸಾಗಬೇಕು. ಇಂಥ ಆಲೋಚನೆ, ಹುಡುಕಾಟದಲ್ಲೇ ಆ ಪ್ರೊಫೆಸರ್ ಜ್ಞಾನಕ್ಕೆ ತಲೆಬಾಗಿದೆ. ಹಾಗೆಯೇ ವಯೋಸಹಜ ಆಕರ್ಷಣೆಗೂ ಒಳಗಾದೆ. ನಾನೂ ಅವನಂತಾಗಬೇಕು ಎನ್ನುವ ಪ್ರಯತ್ನಕ್ಕೆ ಬಿದ್ದೆ.
ಅತಿ ಶ್ರೇಷ್ಠವಾದುದರ ಮುಂದೆ, ಅಲ್ಪವಾದುದು ತಾನು ಅದರಂತಾಗಬೇಕು ಎಂದುಕೊಳ್ಳುವುದು ತಪ್ಪೆ? ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿ ಅವ ಓದಲಿಲ್ಲವೆ? ಆದರೆ ಅವ ಎಲ್ಲ ರೀತಿಯಿಂದಲೂ ನನ್ನ ನೋಯಿಸಲೆಂದೇ ಹುಡುಗರನ್ನು ಎತ್ತಿಕಟ್ಟುತ್ತ ಬಂದ. ಬೇಕೆಂತಲೇ ಬೇರೆ ಹುಡುಗಿಯರೊಡನೆ ಫೋಟೋ ತೆಗೆದುಕೊಳ್ಳುವಂತೆ, ಅವರೊಂದಿಗೆ ಮಾತನಾಡುತ್ತಿರುವಂತೆ ನಟಿಸುತ್ತಿದ್ದ. ಆದರೆ ಆತನ ದೃಷ್ಟಿ ಮಾತ್ರ ನನ್ನ ಕಡೆಯೇ ಇರುತ್ತಿತ್ತು.
ಇದೆಲ್ಲ ಅವನಿಂದ ತಿಳಿದುಕೊಂಡ ಹುಡುಗರು ವಾಟ್ಸಪ್ಪ್ ಗ್ರೂಪ್ನಲ್ಲಿ, ಇಂಟರ್ನಲ್ ಟೆಸ್ಟ್ಗಳು ನಡೆಯುತ್ತಿರುವಾಗ ಕೆಟ್ಟ ಸಂದೇಶಗಳನ್ನು ರವಾನಿಸುತ್ತಿದ್ದರು. ಎದುರಿಗೆ ಸಿಕ್ಕಾಗಲೂ ಆಡಿಕೊಳ್ಳುತ್ತಿದ್ದರು; ಅಯ್ಯೋ ಪಾಪ ಸೂಪರ್ ಫಿಗರ್ಗೆ ಕಿವಿ ಪಂಚರ್ ಮಾಡಬಾರದಿತ್ತು ಅಂತನೋ ಇನ್ನೊಂದೇನೋ. ಇದೆಲ್ಲವೂ ನನ್ನ ಸ್ನೇಹಿತೆಯರಿಗೆ ಅರ್ಥವಾಗುತ್ತಿರಲಿಲ್ಲ. ಏಕೆಂದರೆ ನಾನು ಅವರಿಗೆ ನನ್ನ ವೈಯಕ್ತಿಕವನ್ನು ಹೇಳಿರಲಿಲ್ಲ. ಆದರೆ, ಹರಿದ ನನ್ನ ಕಿವಿಗೆ ಹೊಲಿಗೆ ಹಾಕಿಸಿದ ಮೇಲೆ ನಾನೊಂದು ನಿರ್ಧಾರಕ್ಕೆ ಬಂದೆ. ಇನ್ನು ಮುಂದೆ ನನ್ನಿಂದ ಯಾವುದಾದರೊಂದು ಮಹಾಕಾರ್ಯ ಘಟಿಸುವವರೆಗೂ ಕಿವಿಯೋಲೆ ಧರಿಸಬಾರದು ಎಂದು.
ಅದೇನೋ ಡಿಗ್ರಿಯಲ್ಲಿ ಕೈತುಂಬಾ ಮ್ಯಾಚಿಂಗ್ ಫ್ಯಾನ್ಸಿ ಬಳೆ, ದೊಡ್ಡ ಮ್ಯಾಚಿಂಗ್ ಈಯರಿಂಗ್ಸ್ ಧರಿಸುತ್ತಿದ್ದ ನಾನು, ಯೂನಿವರ್ಸಿಟಿ ಮೆಟ್ಟಿಲು ಹತ್ತಿದ ನಂತರ ಕಿವಿಯಲ್ಲಿ, ಕತ್ತಲ್ಲಿ, ಕೈಯಲ್ಲಿ ಏನೂ ಹಾಕದೆ ಒಂದು ಕಾಟನ್ ಚೂಡಿಯಲ್ಲಿ ಹೋಗುತ್ತಿದ್ದೆ. ಆದರೆ ಕಣ್ಣಿಗೆ ಐಲೈನರ್ ಹಾಗೂ ಲಿಪ್ಸ್ಟಿಕ್ ಹಚ್ಚಲು ಎಂದೂ ಮರೆಯುತ್ತಿರಲಿಲ್ಲ. ಲಿಪ್ಸ್ಟಿಕ್, ಐಲೈನರ್ ಎರಡೂ ನನ್ನ ಸಮವಸ್ತ್ರದಂತಾಗಿ ಹೋಗಿದ್ದವು. ಕೇಶವಿನ್ಯಾಸಗಳಲ್ಲಿಯೂ ನನಗೆ ಆಸಕ್ತಿ ಹುಟ್ಟಲಿಲ್ಲ. ಬನ್ ಹೇರ್ಸ್ಟೈಲ್ ಅಂತೆ. ಆದರೆ ನನಗದು ಬುದ್ಧನ ಉಷ್ಣೀಷದಂತೆ ತೋರುತ್ತಿತ್ತು. ಅದೊಂದೇ ನನ್ನ ಕೇಶವಿನ್ಯಾಸವಾಗಿತ್ತು. ಕೋಚಿಂಗ್ಗೆ ಹೋಗುವಾಗ, ಹಾಸ್ಟೆಲ್ಲಿನಲ್ಲಿದ್ದಾಗ ಊರಿಗೆ ಮರಳುವಾಗ, ಯೂನಿವರ್ಸಿಟಿಗೆ ಹೋಗುವಾಗಲೂ ಕೂಡ. ನನಗೆ ತಿಳಿಯದಂತೆ ನನ್ನಲ್ಲಿ ಆದ ಬಹುದೊಡ್ಡ ಬದಲಾವಣೆ ಅದು. ಕನ್ನಡಿ ನೋಡಿದಾಗೆಲ್ಲ ಇದು ನಾನೇ ಎಂದು ನಿಧಾನ ಅನ್ನಿಸತೊಡಗಿತು.
ನಮ್ಮ ಕ್ಲಾಸಿನ ಪುಂಡಹುಡುಗರು ಕಾಡಿಸುವಾಗ ಈ ಪ್ರೊಫೆಸರ್ ಕೈವಾಡ ಇದೆ ಎಂದು ಮೊದಮೊದಲು ಗೊತ್ತಾಗುತ್ತಿರಲಿಲ್ಲ. ಅವನ ಬಳಿಯೇ ಹೋಗಿ ಹೀಗೆಲ್ಲ ಆಯಿತು ಎಂದು ಹಂಚಿಕೊಳ್ಳುತ್ತಿದ್ದೆ. ಆಗ ಅವನು, ಓದಿನ ಕಡೆ ಗಮನ ಹರಿಸು ಉಳಿದದ್ದನ್ನು ನಿರ್ಲಕ್ಷಿಸು ಎಂದು ಹೇಳುತ್ತಿದ್ದ. ಆದರೆ, ನಾನು ಅವನ ಮಾತಿನ ಪ್ರಕಾರ ನಡೆದರೂ ಆ ಹುಡುಗರ ನಡೆವಳಿಕೆ ಬದಲಾಗಲಿಲ್ಲ. ಆಮೇಲೆ ಗೊತ್ತಾಯಿತು, ಮಗುವನ್ನು ಚಿವುಟುವವನೂ ಅವನೇ, ತೊಟ್ಟಿಲನ್ನು ತೂಗುವವನೂ ಅವನೇ ಎಂದು.
ಇದನ್ನೂ ಓದಿ : ಋತುವಿಲಾಸಿನಿ: ಅನಾಥ ಕಣ್ಣೀರ ಬಿಂದುವೊಂದು ನಿಮ್ಮ ನೋಟಕ್ಕೆ ಬೀಳದೆ ಓಡಾಡುತ್ತಿದ್ದವರ ಚಪ್ಪಲಿಯಡಿ ಸತ್ತುಹೋಯಿತು
ಆಗ ಮತ್ತಷ್ಟು ಒಂಟಿಯಾದೆ. ಕ್ಲಾಸಿನಲ್ಲಿ ಅಲ್ಲಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದವು ಹುಡುಗ ಹುಡುಗಿಯರ ಮಧ್ಯೆ. ಅದೇನು ಪೊಳ್ಳು ಆಕರ್ಷಣೆಯೋ ಏನು ಮಣ್ಣೋ! ಓದು ಬಿಟ್ಟು ಬರೀ ಚೆಲ್ಲಾಟಗಳು. ಬುದ್ಧಿ, ಭಾವ, ಧೈರ್ಯ ಇಂಥ ಕನಿಷ್ಟ ಮಾನದಂಡಗಳಾದರೂ ಬೇಕಲ್ಲವೆ ನಮ್ಮ ಆಯ್ಕೆ ಎಂದಮೇಲೆ? ಹಾಗಂತ ನಮ್ಮ ಆಯ್ಕೆಗಳು ಎಲ್ಲ ಸಮಯದಲ್ಲೂ ಉತ್ತಮ ಫಲಿತಾಂಶವನ್ನೇ ಕೊಡುತ್ತವೆ ಎಂದು ಹೇಳಲಾಗದು. ಅದಕ್ಕೆ ನನ್ನ ಉದಾಹರಣೆಯೇ ಸಾಕು. ಹಾಗಂತ ಇಲ್ಲಿ ಯಾರನ್ನೂ ಹೀಯಾಳಿಸುತ್ತಿಲ್ಲ. ಪುರಾಣಕತೆಗಳಲ್ಲಿ, ಇಂಗ್ಲಿಷ್ ನಾಟಕಗಳಲ್ಲಿ, ಹೋಗಲಿ ಸಿನಿಮಾಗಳಲ್ಲಿ ನಾಯಕನನ್ನು ನೋಡುವ ರೀತಿಯೇ ಬೇರೆ! ನಾಯಕ ಶೌರ್ಯದ ಖನಿ ಆಗಿರುತ್ತಾನೆ. ಅಪರಿಮಿತ ಬುದ್ಧಿವಂತನಾಗಿರುತ್ತಾನೆ. ಸಂಯಮಿಯಾಗಿರುತ್ತಾನೆ. ಸದೃಢ ಕಾಯದವನಾಗಿರುತ್ತಾನೆ. ನಾಯಕಿ ಕೂಡ ಅಷ್ಟೆ, ಅಪರಿಮಿತ ಸೌಂದರ್ಯದ ಖನಿ ಆಗಿರುತ್ತಾಳೆ, ಬುದ್ಧಿವಂತೆಯೂ ಆಗಿರುತ್ತಾಳೆ ಹಾಗೂ ಗುಣವತಿಯೂ. ಹಾಗಾಗಿ ಆ ಪ್ರೇಮವನ್ನು ನೋಡಲು ಮನಸ್ಸಿಗೆ ಆನಂದವಾಗುತ್ತದೆ. ಅದು ತೆರೆಯ ಮೇಲೆ. ಅಲ್ಲಷ್ಟೇ. ಯಾಕೆಂದರೆ ಅದು ಕಟ್ಟಿಕೊಟ್ಟ ಪಾತ್ರ. ಆದರೆ ವಾಸ್ತವದಲ್ಲಿ? ನಮಗೆ ಬೇಕಾದ, ದಕ್ಕಿದ ಪಾತ್ರಗಳನ್ನು ನಾವೇ ರೂಪಿಸಿಕೊಳ್ಳುತ್ತ ಹೋಗಬೇಕಲ್ಲ, ಅದಕ್ಕೆ ಪರಸ್ಪರ ಒಪ್ಪಿಗೆ ಇರಬೇಕಲ್ಲ?
ಬಂದಾಗ ನಮ್ಮಂತೆಯೇ ಸಾದಾಸೀದಾ ಆಗಿದ್ದವಳು. ಬರುಬರುತ್ತ ಫೆಮಿನಿಸ್ಟ್ನಂತೆ ಆಡುತ್ತಿದ್ದಾಳೆ. ಅದೇನು ಐಲೈನರ್, ಲಿಪ್ಸ್ಟಿಕ್! ಹುಡುಗಿಯರು ತಮ್ಮತಮ್ಮಲ್ಲೇ ಮಾತನಾಡಿಕೊಂಡರು. ನಾನು ನಿರ್ಲಕ್ಷಿಸಿದನೆಂದು ಕೆಂಡಾಮಂಡಲವಾದ ಹುಡುಗರು, ಕೆಲವರನ್ನು ಗೆಳತಿಯರನ್ನಾಗಿಸಿಕೊಂಡು ಹಾಸ್ಟೆಲ್ಲಿನಲ್ಲಿಯೂ ಹಾಗೂ ಯುನಿವರ್ಸಿಟಿಯಲ್ಲಿ ನನ್ನನ್ನು ಕಾಡಿಸಿ ಆಟವಾಡಿಸತೊಡಗಿದರು. ಅದು ನನಗೆ ತಿಳಿದಿದ್ದರೂ ನಾನು ಏನೂ ಆಗಿಯೇ ಇಲ್ಲದಂತೆ ನಿರ್ಲಿಪ್ತವಾಗಿ ಇರುತ್ತಿದ್ದುದನ್ನು ಕಂಡೇ ಅವರು ಮತ್ತಷ್ಟು ಕೆರಳುತ್ತಿದ್ದರು.
ಅದು ಎಷ್ಟೆಂದರೆ ನಾನು ಹಾಸ್ಟೆಲ್ಲಿನಲ್ಲಿ ಊಟ ಮಾಡುವುದನ್ನು ಕೂಡ ಬಿಟ್ಟುಬಿಟ್ಟಿದ್ದೆ. ಏಕೆಂದರೆ ನನ್ನನ್ನು ಕಾಡುವ ಗುಂಪು ಅಲ್ಲಿಯೂ ಕೂಡ ಗುಂಪು ಕಟ್ಟಿದ್ದವು. ಬೆಳಿಗ್ಗೆ 6ಗಂಟೆಗೆ ಕೋಚಿಂಗ್ ಹೋದಾಗ ಅಲ್ಲಿಯೇ ಏಳೂವರೆಗೆ ಕ್ಯಾಂಟೀನಿನಲ್ಲಿ ತಿಂಡಿ ತಿಂದು ಹಾಸ್ಟೆಲ್ಲಿಗೆ ಬಂದು ನಂತರ ಕಾಲೇಜಿಗೆ ಹೋಗಬೇಕಾಗುತ್ತಿತ್ತು. ಮಧ್ಯಾಹ್ನ ಕ್ಲಾಸ್ ಇಲ್ಲವಾದರೆ ಲೈಬ್ರರಿಗೆ ಓಡುತ್ತಿದ್ದೆ. ಲೈಬ್ರರಿಯಿಂದ ಊಟಕ್ಕೆ ಮಧ್ಯಾಹ್ನ ಹಾಸ್ಟೆಲ್ಲಿಗೆ ಹೋಗಬೇಕು ಎಂದಾದಾಗ ಬೇಸರವಾಗುತ್ತಿತ್ತು. ಹೇಗೆ ಅವರೆಲ್ಲರೊಂದಿಗೆ ಕೂತು ಊಟ ಮಾಡುವುದು? ಅಬ್ಬ ರಾತ್ರಿಯಂತೂ ತಾಸುಗಟ್ಟಲೇ ಅವರು ಅಲ್ಲೇ ಬಿಡಾರ ಬಿಟ್ಟಿರುತ್ತಾರೆ, ಹೊಟ್ಟೆ ಹಸಿದು ಕಣ್ಣಿಗೆ ಕತ್ತಲು ಬಂದಂತಾದಾಗಲೂ ನಾನು ರಾತ್ರಿ ಊಟ ಮಾಡುತ್ತಿರಲಿಲ್ಲ. ವಾಪಾಸು ಕೋಣೆಗೆ ಬಂದು ಮಲಗಿಬಿಡುತ್ತಿದ್ದೆ.
ಹಾಗಾದರೆ ನಾನು ರಾತ್ರಿ ಏನು ಊಟ ಮಾಡುತ್ತಿದ್ದೆ? ಆ ಪ್ರೊಫೆಸರ್ ಎಲ್ಲಿ ಹೋದ? ಮುಂದಿನ ಕಂತಿನಲ್ಲಿ ತಿಳಿಸುತ್ತೇನೆ.
*
(ಮುಂದುವರಿಕೆ ಅರುಂಧತಿ ಬರೆದಾಗ)
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/aagaaga-arundhathi
Published On - 3:22 pm, Fri, 6 May 22