ಪ್ರೀತಿಸಿ ಮದುವೆಯಾದ ದಂಪತಿ ಸೇರಿ ತಂದೆ ತಾಯಿಗೂ ಬಹಿಷ್ಕಾರ: ಮಾತಾಡದಂತೆ ತಾಕೀತು!
ಕೊಪ್ಪಳ ತಾಲೂಕಿನ ಚಿಲಕಮುಖಿಯಲ್ಲಿ ಪ್ರೀತಿಸಿ ಮದುವೆಯಾದ ಹನುಮಂತಪ್ಪ ದಂಪತಿಯನ್ನು ಪರ್ವತ ಮಲ್ಲಯ್ಯ ಸಮುದಾಯದಿಂದ ಬಹಿಷ್ಕಾರ ಹಾಕಲಾಗಿದೆ. ಎಂಟು ವರ್ಷಗಳ ಹಿಂದೆ ಮದುವೆಯಾದ ಈ ದಂಪತಿ ಹಾಗೂ ಅವರ ಪೋಷಕರಿಗೆ ಸಮುದಾಯದಿಂದ ಬಹಿಷ್ಕಾರ ಹಾಕಲಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕಿದ್ದಾರೆ.

ಕೊಪ್ಪಳ, ಮೇ 18: ಅವರಿಬ್ಬರು ಪ್ರೀತಿಸಿ (love) ಮದುವೆಯಾಗಿದ್ದರು. ಬಾಲ್ಯ ವಿವಾಹವಾಗಿದ್ದರು ಆ ಯುವತಿ ಪ್ರೀತಿಸಿದವನ ಕೈ ಹಿಡಿದಿದ್ದಳು. ಆದರೆ ಪ್ರೀತಿ ಮಾಡಿ ಮದುವೆಯಾಗಿದ್ದೆ ಅವರು ಮಾಡಿದ ದೊಡ್ಡ ತಪ್ಪಾಗಿದೆ. ಏಕೆಂದರೆ ಪ್ರೀತಿಸಿ ಮದುವೆಯಾದ ಜೋಡಿಗೆ ಕಳೆದ ಎಂಟು ವರ್ಷಗಳಿಂದ ಅವರ ಸಮಾಜವೇ ಅವರನ್ನು ಬಹಿಷ್ಕಾರ (Boycott) ಹಾಕಿದೆ. ಇದೀಗ ಗ್ರಾಮಕ್ಕೆ ಬಂದರೂ ಸಮಾಜದವರು ಅವರನ್ನು ಮಾತಾಡಿಸುವ ಹಾಗಿಲ್ಲ, ಅವರ ಮನೆಗೆ ಹೋಗುವ ಹಾಗಿಲ್ಲ. ಒಂದಾಗಿ ಬಾಳಬೇಕು ಅಂದರೂ ಸಮಾಜ ಒಪ್ಪುತ್ತಿಲ್ಲ. ಸಮಾಜ ಹಾಕಿರುವ ಬಹಿಷ್ಕಾರ ಎಂಬ ಬೇಲಿಗೆ ಆ ಕುಟುಂಬ ರೋಸಿ ಹೋಗಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕಿದ್ದಾರೆ.
ಕೊಪ್ಪಳ ತಾಲೂಕಿನ ಚಿಲಕಮುಖಿ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗೆ ಬಹಿಷ್ಕಾರ ಹಾಕಲಾಗಿದೆ. ಚಿಲಕಮುಖಿಯ ಅಲೆಮಾರಿ ಕುಟುಂಬವಾಗಿರುವ ಪರ್ವತ ಮಲ್ಲಯ್ಯ ಸಮಾಜದ ಹನುಮಂತಪ್ಪ ಹಾಗೂ ಅದೇ ಸಮಾಜದ ಮಂಜುಳಾ ಎಂಬುವವರು 8 ವರ್ಷದಿಂದ ಪ್ರೀತಿಸಿದ್ದರು. ಮಂಜುಳಾಗೆ ಮೊದಲು ಬಾಲ್ಯ ವಿವಾಹವಾಗಿತ್ತು. ಆದರೆ ಪ್ರೀತಿಸಿದವನಿಂದ ದೂರವಾಗಲು ಇಷ್ಟವಿಲ್ಲದ ಮಂಜುಳಾ, ಹನುಮಂತಪ್ಪನೊಂದಿಗೆ ಮದುವೆಯಾಗಿದ್ದಾಳೆ. ಮದುವೆಯಾದ ಬಳಿಕ ಸಮಾಜ ಅವರನ್ನು ಬಹಿಷ್ಕಾರ ಹಾಕಿದೆ. ಎಂಟು ವರ್ಷಗಳ ಕಾಲ ಆ ಜೋಡಿ ಊರು ತೊರೆದು ಯಲಬುರ್ಗಾದಲ್ಲಿ ಜೀವನ ನಡೆಸಿದ್ದರು. ಆದರೆ ಕಳೆದ 4 ತಿಂಗಳ ಹಿಂದೆ ಸ್ವಂತ ಊರಿಗೆ ಬಂದು ವಾಸವಾಗಿದ್ದಾರೆ. ರಾಜಿಯಾದ ಬಳಿಕವೂ ಸಮಾಜ ಅವರನ್ನು ಮತ್ತೆ ಬಹಿಷ್ಕಾರ ಹಾಕಿದೆ.
ಹನುಮಂತಪ್ಪ ತಂದೆ ತಾಯಿಗೂ ಬಹಿಷ್ಕಾರ
ಈ ಮಧ್ಯೆ ಹನುಮಂತಪ್ಪನ ತಂದೆ ಶಿವಾಜಪ್ಪ ಮನೆಯಲ್ಲಿ ಕಾರ್ಯಕ್ರಮವೊಂದು ಏರ್ಪಡಿಸಲಾಗಿತ್ತು. ಹಾಗಾಗಿ ಸಮಾಜದ ಕೆಲವರಿಗೆ ಊಟಕ್ಕೆ ಕರೆಯಲಾಗಿತ್ತು. ಅವರ ಮನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಂಕರಪ್ಪ ಸೇರಿ ಸುಮಾರು 16 ಕುಟುಂಬಗಳಿಗೆ ಚಿಲ್ಕಮುಖಿಯ ಪರ್ವತ ಮಲ್ಲಯ್ಯ ಸಮಾಜದವರು ಬಹಿಷ್ಕಾರ ಹಾಕಿದ್ದಾರೆ. ನಮ್ಮನ್ನು ಸಹ ಮಾತನಾಡಿಸುತ್ತಿಲ್ಲ ಮಾಜಿ ಗ್ರಾಪಂ ಸದಸ್ಯ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ ಕೇಸ್: ಮ್ಯಾನೇಜರ್ ಬಂಧನ, ಜಿಎಸ್ ಸೂಟ್ ಹೋಟೆಲ್ ಸೀಜ್
ಹನುಮಂತಪ್ಪ ತಂದೆ-ತಾಯಿಯನ್ನು ಕಳೆದ ಏಂಟು ವರ್ಷಗಳಿಂದ ಚಿಲ್ಕಮುಖಿಯಲ್ಲಿ ಪರ್ವತ ಮಲ್ಲಯ್ಯ ಸಮಾಜದವರು ಮಾತನಾಡಿಸುವುದಿಲ್ಲ. ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ನಮ್ಮನ್ನು ಕರೆಯುತ್ತಿಲ್ಲ. ಇದರಿಂದಾಗಿ ನಾವು ಬಹಿಷ್ಕೃತರಾಗಿದ್ದೇವೆ. ನಾನು ಸಾಯೋದು ಒಂದು ಬಾಕಿ ಇದೆ ಎಂದು ಟಿವಿ9 ಬಳಿ ಗಂಗಮ್ಮ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ರಾತ್ರಿ ಸುರಿದ ಭಾರಿ ಮಳೆಗೆ ನಡುಗಿದ ಬೆಂಗಳೂರು: ಸಾಯಿಲೇಔಟ್ ಜಲಾವೃತ, ಮನೆಗಳಿಗೆ ನೀರು ನುಗ್ಗಿ ಅವಾಂತರ
ಅಲೆಮಾರಿ ಕುಟುಂಬಗಳಲ್ಲಿ ಇನ್ನೂ ನ್ಯಾಯ ಪಂಚಾಯಿತಿಗಳಿದ್ದು, ಇಲ್ಲಿ ಮುಖಂಡರ ಹೇಳಿದ್ದನ್ನು ಪಾಲಿಸಲಾಗುತ್ತದೆ. ಇದೇ ರೀತಿ ಸಮಾಜದ ಮುಖಂಡರು ವಿವಾಹಿತಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಹಿಷ್ಕಾರ ಹಾಕಿದ್ದಾರೆ. ಚಿಲ್ಕಮುಖಿ ಗ್ರಾಮದಲ್ಲಿ ಸುಮಾರು 80 ಪರ್ವತ ಮಲ್ಲಯ್ಯ ಕುಟುಂಬಗಳಲ್ಲಿ ಈಗ 16 ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.