Literature: ನೆರೆನಾಡ ನುಡಿಯೊಳಗಾಡಿ; ‘ಭಾವನಾತ್ಮಕ ಕನಸುಗಳನ್ನು ಕಾಣುವ ಸರದಿ ಆ ಸ್ವಾಭಿಮಾನಿ ಪುರುಷ ಶಿಖಾಮಣಿಗಳದ್ದಲ್ಲವೇ?’
Rukaiya Shekhawath Hussain : ‘ಮರುದಿನವೇ ರಾಣಿ ದೇಶದ ಘನತೆಯನ್ನು ಕಾಪಾಡಲು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಸಲುವಾಗಿ, ಪುರುಷರೆಲ್ಲರೂ ಜನಾನದ ಒಳಕ್ಕೆ ವಿಶ್ರಾಂತಿಗಾಗಿ ತೆರಳಬೇಕೆಂದು ಕರೆನೀಡಿದಳು. ಗಾಯಾಳುಗಳಾಗಿ ಬಳಲುತ್ತಿದ್ದ ಅವರೆಲ್ಲರೂ ರಾಣಿಯ ಆದೇಶವನ್ನು ವರವೆಂದೇ ಭಾವಿಸಿದರು!
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ‘ಹೆಂಗಸರು ಗಂಡಸರಿಗಿಂತಲೂ ಕುಶಾಗ್ರಮತಿಗಳು. ಹತ್ತು ವರುಷಗಳ ಹಿಂದೆ, ನೈನ್ಯದ ಅಧಿಕಾರಿಗಳು ನಮ್ಮ ವೈಜ್ಞಾನಿಕ ಆವಿಷ್ಕಾರಗಳನ್ನು ‘‘ಭಾವನಾತ್ಮಕ ದುಃಸ್ವಪ್ನಗಳೆಂದು’’ ಮೂದಲಿಸುತ್ತಿದ್ದಾಗ ಅದಕ್ಕೆ ಪ್ರತ್ಯುತ್ತರವಾಗಿ ನಮ್ಮ ಮಹಿಳಾ ಯುವ ವಿಜ್ಞಾನಿಗಳು ಏನೋ ಹೇಳಲು ಬಯಸಿದ್ದರು. ಆಗ ನಮ್ಮ ಇಬ್ಬರು ಪ್ರಾಂಶುಪಾಲಕಿಯರೂ ಅವರನ್ನು ಪುಸಲಾಯಿಸಿ ನಿಯಂತ್ರಿಸಿದರು. ಮರು ಸವಾಲೆಸಗುವ ಅವಕಾಶ ಒದಗಿ ಬಂದಲ್ಲಿ, ಅದನ್ನು ಶಬ್ದಗಳ ಮುಖಾಂತರವಾಗಿ ಮಾಡಿ, ಮೌಖಿಕವಾದ ಸವಾಲೊಡ್ಡುವುದಕ್ಕಿಂತ, ಕಾರ್ಯರೂಪದಲ್ಲಿ ಏನನ್ನಾದರೂ ಮಾಡಿ ತೋರಿಸುವುದೇ ಉತ್ತಮವೆಂದು ಅದರ ಅಭಿಪ್ರಾಯವಾಗಿತ್ತು. ಈ ಸುವರ್ಣಾವಕಾಶಕ್ಕಾಗಿ ಅವರೇನೂ ಸುದೀರ್ಘಕಾಲ ಕಾಯಬೇಕಾಗಿರಲಿಲ್ಲ.’ ‘ಅದ್ಭುತ!’ ಎಂದು ನಾನು ಹೃತ್ಪೂರ್ವಕವಾಗಿ ಚಪ್ಪಾಳೆ ತಟ್ಟಿ ಅಭಿನಂದಿಸಿದೆ. ‘ಈಗ ಭಾವನಾತ್ಮಕ ಕನಸುಗಳನ್ನು ಕಾಣುವ ಸರದಿ ಆ ಸ್ವಾಭಿಮಾನಿ ಪುರುಷ ಶಿಖಾಮಣಿಗಳದ್ದಲ್ಲವೇ?’ ಎಂದು ನಗುತ್ತಾ ಕೇಳಿದೆ.
ಕಥೆ : ಸುಲ್ತಾನಾಳ ಕನಸು | ಮೂಲ : ರುಕಿಯಾ ಶೇಖಾವತ್ ಹುಸೇನ್ | ಕನ್ನಡಕ್ಕೆ : ಡಾ. ಕೆ. ಎಸ್. ವೈಶಾಲಿ | ಸೌಜನ್ಯ : ‘ದೇಶಕಾಲ’ ಸಾಹಿತ್ಯ ಪತ್ರಿಕೆ
(ಭಾಗ 3)
‘ಇದಾದ ಬಳಿಕ ಕೆಲವು ವ್ಯಕ್ತಿಗಳು ನಮ್ಮ ನೆರೆ ರಾಜ್ಯದಿಂದ ಇಲ್ಲಿಗೆ ಬಂದು, ನಮ್ಮಲ್ಲಿ ಆಶ್ರಯ ಪಡೆದರು. ಅವರು ರಾಜಕೀಯವಾಗಿ ಕೆಲವು ಅಪಚಾರಗಳನ್ನೆಸಗಿದ್ದುದರಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಅಧಿಕಾರಲಾಲಸೆಯಾದ ಅವರ ರಾಜನಿಗೆ ಉತ್ತಮ ಆಡಳಿತ ನಡೆಸುವುದರಲ್ಲಿ ಆಸಕ್ತಿಯಿರಲಿಲ್ಲ. ನಮ್ಮ ಕರುಣಾಮಯಿಯಾದ ರಾಣಿಯನ್ನು ಆತ ತನ್ನ ದೇಶದ ಅಧಿಕಾರಿಗಳನ್ನು ವಾಪಾಸು ಕಳಿಸಿಕೊಡುವಂತೆ ಕೇಳಿಕೊಂಡ. ಆಕೆ ಅತನ ಕೋರಿಕೆಯನ್ನು ಈಡೇರಿಸಲಿಲ್ಲ. ತನ್ನಲ್ಲಿ ಆಶ್ರಯ ಪಡೆದವರನ್ನು ಹೊರದೂಡುವುದು ತನ್ನ ಧರ್ಮ ಹಾಗೂ ಆದರ್ಶಗಳಿಗೆ ವಿರುದ್ಧವಾದ ಆಚರಣೆಯೆಂದು ಆಕೆ ರಾಜನ ಸಲಹೆಯನ್ನು ತಿರಸ್ಕರಿಸಿದಳು. ಆಕೆಯ ನಿರಾಕರಣೆಯಿಂದ ರೊಚ್ಚಿಗೆದ್ದ ರಾಜ ನಮ್ಮ ದೇಶದ ವಿರುದ್ಧ ಯುದ್ಧವನ್ನು ಘೋಷಿಸಿದ.’
‘ನಮ್ಮ ಸೈನ್ಯಾಧಿಕಾರಿಗಳು ಕೂಡಲೇ ಸನ್ನದ್ಧರಾಗಿ ಶತ್ರುವನ್ನು ಎದುರಿಸಲು ಹೊರಟರು. ಆದರೆ ಶತ್ರು ಅವರಿಗಿಂತ ತುಂಬಾ ಬಲಶಾಲಿಯಾಗಿದ್ದ. ನಿಸ್ಸಂದೇಹವಾಗಿಯೂ ನಮ್ಮ ಸೈನಿಕರು ವೀರಾವೇಶದಿಂದ ಹೋರಾಡಿದರು. ಆದರೆ ಅವರ ಶೌರ್ಯ, ಕೆಚ್ಚುಗಳ ಪ್ರದರ್ಶನ ಅನುಪಮವಾಗಿದ್ದರೂ, ಶತ್ರು ಸೈನ್ಯ ಪ್ರಬಲವಾಗಿತ್ತು. ಹಂತ ಹಂತವಾಗಿ ನಮ್ಮ ದೇಶದೊಳಗೆ ಮುನ್ನುಗ್ಗತೊಡಗಿತು.’
‘ಎಲ್ಲಾ ಪುರುಷರೂ ಯುದ್ಧದಲ್ಲಿ ಹೋರಾಡಲು ತೆರಳಿದ್ದರು. ಹದಿನಾರು ವರ್ಷದ ಒಬ್ಬನೇ ಒಬ್ಬ ಹುಡುಗನೂ ಕೂಡ ಮನೆಯಲ್ಲಿ ಉಳಿದಿರಲಿಲ್ಲ. ನಮ್ಮಲ್ಲಿದ್ದ ತುಂಬಾ ಯೋಧರು ಯುದ್ಧದಲ್ಲಿ ಮಡಿದಿದ್ದರು. ಉಳಿದವರನ್ನು ವಾಪಾಸು ಅಟ್ಟಲಾಗಿತ್ತು. ಶತ್ರುಗಳು ನಮ್ಮ ರಾಜಧಾನಿಯಿಂದ ಕೇವಲ ಇಪ್ಪತ್ತೈದು ಮೈಲುಗಳ ದೂರದಲ್ಲಿದ್ದರು.’
‘ರಾಣಿಯ ಅರಮನೆಯಲ್ಲಿ ದೇಶದ ಅನೇಕ ವಿವೇಕಶಾಲಿ ಮಹಿಳೆಯರ ಸಭೆ ಕರೆಯಲಾಯಿತು. ದೇಶದ ರಕ್ಷಣೆ ಕುರಿತು ಅವರ ಸಲಹೆಗಳನ್ನು ಸ್ವೀಕರಿಸಿ, ಚರ್ಚಿಸುವುದು ಸಭೆಯ ಉದ್ದೇಶವಾಗಿತ್ತು. ಕೆಲವರು ತಾವು ಸೈನಿಕರಂತೆ ಹೋರಾಟ ಮಾಡುತ್ತೇವೆಂದರು. ಮತ್ತಿನ್ನು ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಮಹಿಳೆಯರು ಕತ್ತಿ ಮತ್ತು ಪಿಸ್ತೂಲುಗಳನ್ನು ಬಳಸಿ ಹೋರಾಟ ಮಾಡಲು ತರಬೇತಿ ಪಡೆದಿಲ್ಲವೆಂದೂ ಹಾಗೂ ಅವರಿಗೆ ಯಾವುದೇ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಸೆಣೆಸಾಡುವ ಅಭ್ಯಾಸವೂ ಇಲ್ಲವೆಂದೂ ವಾದಿಸಿದರು. ಮೂರನೆಯ ಗುಂಪಿನವರು ಕ್ಷಮೆಯಾಚಿಸುವ ಧ್ವನಿಯಲ್ಲೇ ತಾವು ದೈಹಿಕವಾಗಿ ತುಂಬಾ ನಿರಾಸೆ ಹುಟ್ಟಿಸುವಷ್ಟು ದುರ್ಬಲರಾದ ಕಾರಣ ಹೋರಾಟ ಮಾಡಲು ಅಶಕ್ತರೆಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.’
‘ದೈಹಿಕ ಅಸಾಮರ್ಥ್ಯದಿಂದ ನಿಮ್ಮ ದೇಶವನ್ನು ರಕ್ಷಿಸಲಾಗದಿದ್ದರೆ. ನಿಮ್ಮ ಬುದ್ಧಿಮತ್ತೆಯನ್ನುಪಯೋಗಿಸಿ, ನಿಮ್ಮ ಮೆದುಳಿನ, ಯುಕ್ತಿಯ ಬಲದಿಂದಾದರೂ ದೇಶವನ್ನು ರಕ್ಷಿಸಿರಿ’ ಎಂದಳು ರಾಣಿ.
ಕೆಲವು ನಿಮಿಷಗಳ ಕಾಲ ನಿರ್ಜೀವವಾದ ಮೌನ ನೆಲೆಸಿತು. ಆ ಬಳಿಕ ರಾಣಿಯು ಪುನಃ ಹೇಳಿದಳು, ‘ನಾವು ಈ ದೇಶವನ್ನಾಗಲೀ ಅಥವಾ ನನ್ನ ಘನತೆಯನ್ನಾಗಲೀ ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವಿಸಿದಲ್ಲಿ, ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.’
ಆಗ, ಸೌರಶಕ್ತಿ ಶೇಖರಣೆ ಮಾಡಿದ ಎರಡನೇ ವಿಶ್ವವಿದ್ಯಾನಿಲಯದ ಪ್ರಾಂಶುಪಾಲಕಿ, ಈವರೆಗೂ ನಡೆದ ಸಂವಾದದಲ್ಲಿ ಮೌನವಾಗಿದ್ದು ಯೋಚನೆ ಮಾಡುತ್ತಿದ್ದವಳು, ಎದ್ದುನಿಂತು ತನ್ನ ಪ್ರತಿಕ್ರಿಯೆ ನೀಡಿದಳು. ತಾವೆಲ್ಲರೂ ಪರಾಭವಗೊಂಡಿದ್ದೇವೆ, ತಮಗೆ ಆಶಾದಾಯಕವಾದ ಸನ್ನಿವೇಶವೇನೂ ಉಳಿದಿಲ್ಲವಾದರೂ ತಾವು ಪ್ರಯತ್ನಿಸಬಹುದಾದ ಒಂದು ಉಪಾಯವಿದೆ. ಇದೇ ತನ್ನ ಮೊದಲನೆಯ ಮತ್ತು ಅಂತಿಮ ಯೋಜನೆಯೆಂದು ಆಕೆ ಸ್ಪಷ್ಟ ಪಡಿಸಿದಳು. ಅವಳೇನಾದರೂ ಈ ಪ್ರಯತ್ನದಲ್ಲಿ ಯಶಸ್ವಿಯಾಗದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದರ ಹೊರತು ಇನ್ನೇನೂ ಉಳಿದಿರಲಿಲ್ಲ. ಅಲ್ಲಿ ಹಾಜರಿದ್ದವರೆಲ್ಲಾ ಏನೇ ಆದರೂ, ತಾವೆಂದೂ ಗುಲಾಮಗಿರಿಗೆ ಇಳಿಯುವುದಿಲ್ಲವೆಂದು ಗಂಭೀರವಾದ ಪ್ರತಿಜ್ಞೆ ಮಾಡಿದರು.
ರಾಣಿಯು ಹೃತ್ಪೂರ್ವಕವಾಗಿ ಅವರೆಲ್ಲರ ಉಪಕಾರವನ್ನು ಸ್ಮರಿಸಿ, ಯೋಜನೆಯನ್ನು ಕಾರ್ಯರೂಪಗೊಳಿಸಲು ಪ್ರಾಂಶುಪಾಲಕಿಯನ್ನು ಕೇಳಿಕೊಂಡಳು. ಆಗ ಪ್ರಾಂಶುಪಾಲಕಿ ಮತ್ತೆ ಎದ್ದುನಿಂತು ತನ್ನ ವಿನಂತಿಯನ್ನು ಸಭೆಯ ಮುಂದಿಟ್ಟಳು. ‘ನಾವು ಹೊರಗೆ ಹೋಗುವ ಮುನ್ನ ಪುರುಷರೆಲ್ಲರೂ ಜನಾನದ ಒಳಕ್ಕೆ ತೆರಳಬೇಕು. ನಾವೆಲ್ಲರೂ ಪರ್ದಾನಿಶೀನರಾದ ಕಾರಣ ಈ ಸವಿನಯ ಪೂರ್ವಕ ಪ್ರಾರ್ಥನೆ.’
‘ಖಂಡಿತವಾಗಿಯೂ ಹಾಗೇ ಆಗಲಿ’ ಎಂದು ರಾಣಿ ಸಮ್ಮತಿಸಿದಳು.
‘ಮರುದಿನವೇ ರಾಣಿ ದೇಶದ ಘನತೆಯನ್ನು ಕಾಪಾಡಲು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಸಲುವಾಗಿ, ಪುರುಷರೆಲ್ಲರೂ ಜನಾನದ ಒಳಕ್ಕೆ ವಿಶ್ರಾಂತಿಗಾಗಿ ತೆರಳಬೇಕೆಂದು ಕರೆನೀಡಿದಳು. ಗಾಯಾಳುಗಳಾಗಿ ಬಳಲುತ್ತಿದ್ದ ಅವರೆಲ್ಲರೂ ರಾಣಿಯ ಆದೇಶವನ್ನು ವರವೆಂದೇ ಭಾವಿಸಿದರು! ಆಕೆಗೆ ತಲೆಬಾಗಿ, ಒಂದೇ ಒಂದು ವಿರೋಧದ ಸೊಲ್ಲೆತ್ತದೆ, ಜನಾನಗಳನ್ನು ಪ್ರವೇಶಿಸಿದರು. ಅವರಲ್ಲಿ ಯಾರಿಗೂ, ಈ ದೇಶಕ್ಕೇನಾದರೂ ಭವಿಷ್ಯವಿದೆ ಎನ್ನುವ ಆಸೆಯೇ ಉಳಿದಿರಲಿಲ್ಲ.’
‘ತರುವಾಯ ಆ ಪ್ರಾಂಶುಪಾಲಕಿ ತನ್ನ ಎರಡು ಸಾವಿರ ವಿದ್ಯಾರ್ಥಿ ಸಮೂಹದೊಡನೆ ರಣಭೂಮಿಯತ್ತ ಧಾವಿಸಿದಳು. ತಾವು ಶೇಖರಿಸಿಟ್ಟಿದ್ದ ಸೌರಶಕ್ತಿಯ ಕಿರಣಗಳನ್ನು ಮತ್ತು ಶಾಖವನ್ನು ಸೈನ್ಯದ ಮೇಲೆ ಹರಿಬಿಡುವಂತೆ ವಿದ್ಯಾರ್ಥಿಗಳಿಗೆ ನಿರ್ದೇಶನ ಮಾಡಿದಳು.’
ಇದನ್ನೂ ಓದಿ : Music: ವೈಶಾಲಿಯಾನ; ‘ಮುಸ್ಲಿಂ ಟೆಕ್ನಿಷಿಯನ್ ಕಳಿಸಿಕೊಟ್ಟರೆ ಅಭ್ಯಂತರವಿಲ್ಲ ತಾನೆ?’
‘ಶತ್ರುಗಳಿಗೆ ಆ ಶಾಖದ ಬೇಗೆ ಹಾಗೂ ಪ್ರಖರವಾದ ಬೆಳಕನ್ನು ಸಹಿಸಲು ಸಾಧ್ಯವಾಗಲಿಲ್ಲ. ಅವರೆಲ್ಲಾ ಭಯಗ್ರಸ್ತರಾಗಿ ಅಲ್ಲಿಂದ ಪಲಾಯನಗೈದರು. ಆ ಶಾಖದ ತೀವ್ರತೆಯನ್ನು, ಧಗೆಯನ್ನು, ನಿವಾರಣೆ ಮಾಡುವ ಬಗೆಯನ್ನು ಅರಿಯದೆ ದಿಗ್ಭ್ರಮೆಗೊಳಗಾದರು. ತಮ್ಮ ಪಿಸ್ತೂಲುಗಳು ಮತ್ತಿತರ ಶಸ್ತ್ರಾಸ್ತ್ರಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು. ಅವರ ಶಸ್ತ್ರಗಳನ್ನು ಸೂರ್ಯಕಿರಣಗಳ ಶಾಖದಿಂದಲೇ ಸುಡಲಾಯಿತು. ಅದಾದಬಳಿಕ ಮತ್ತಿನ್ನಾರೂ ನಮ್ಮ ದೇಶವನ್ನು ಆಕ್ರಮಣ ಮಾಡುವ ಪ್ರಯತ್ನ ಮಾಡಲಿಲ್ಲ.’
‘ಈ ಘಟನೆಯ ನಂತರ ನಿಮ್ಮ ದೇಶದ ಗಂಡಸರಾರೂ ಜನಾನದಿಂದ ಹೊರ ಬರುವ ಪ್ರಯತ್ನ ಮಾಡಲಿಲ್ಲವೆ?’
‘ಪ್ರಯತ್ನ ಮಾಡಿದರು. ಅವರಿಗೆ ಹೊರ ಬರುವ ಆಸೆಯೇನೋ ಇತ್ತು. ಸ್ವಾತಂತ್ರ್ಯವೂ ಬೇಕಿತ್ತು. ಕೆಲವು ಪೋಲಿಸು ಅಧಿಕಾರಿಗಳು ಮತ್ತು ಜಿಲ್ಲಾ ನ್ಯಾಯಾಧೀಶರುಗಳು ರಾಣಿಗೆ ಮನವಿ ಮಾಡಿಕೊಂಡರು. ಹೀನಾಯವಾಗಿ ಸೋತಿದ್ದರಿಂದ ಖಂಡಿತವಾಗಿಯೂ ಸೈನ್ಯಾಧಿಕಾರಿಗಳು ಶಿಕ್ಷಾರ್ಹರು. ಆದರೆ ತಮ್ಮ ಕರ್ತವ್ಯ ಪಾಲನೆಯನ್ನು ಎಂದೂ ಕಡೆಗಣಿಸದ ಇನ್ನಿತರ ಅಧಿಕಾರಿಗಳು ಮತ್ತು ನ್ಯಾಯಾಧೀಶರುಗಳನ್ನು ಎಂದೂ ಶಿಕ್ಷಿಸಬಾರದು. ಅಧಿಕಾರ, ಪದವಿಗಳನ್ನು ಅವರಿಗೆ ಹಿಂದಿರುಗಿಸಬೇಕೆಂಬ ತಮ್ಮ ಪ್ರಾರ್ಥನೆಯನ್ನು ರಾಣಿ ಮನ್ನಿಸಬೇಕೆಂಬುದೇ ಆ ಮನವಿಯ ಒಕ್ಕಣೆಯಾಗಿತ್ತು.’
‘ಆಗ ಮಹಾರಾಣಿ ಅವರಿಗೊಂದು ಸುತ್ತೋಲೆಯನ್ನು ಕಳಹಿಸಿದಳು. ಅದರಲ್ಲಿ ಆಕೆ ಅಧಿಕಾರಿಗಳ ಸೇವೆಯ ಅವಶ್ಯಕತೆಯಿದ್ದಾಗ ಅವರನ್ನು ಹಿಂದಿನ ಸ್ಥಾನಗಳಿಗೆ ಕಳಿಸಲಾಗುವುದೆಂದೂ ಹಾಗೂ ಈಗಿನ ಮಧ್ಯಂತರದಲ್ಲಿ ಅವರೆಲ್ಲಿದ್ದಾರೋ ಅಲ್ಲಿಯೇ ಇರಬೇಕೆಂದು ತಾಕೀತು ಮಾಡಿದ್ದಳು. ಈಗ ಅವರೆಲ್ಲರೂ ಪರ್ದಾ ವ್ಯವಸ್ಥೆಗೆ ಹೊಂದಿಕೊಂಡಿರುವುದರಿಂದ, ತಮ್ಮ ಏಕಾಂಗಿತನದ ಬಗ್ಗೆ ಗೊಣಗಾಡುವುದನ್ನು ನಿಲ್ಲಿಸಿದ್ದಾರೆ. ನಾವೀಗ ಈ ವ್ಯವಸ್ಥೆಯನ್ನು ‘‘ಜನಾನ’’ ಎಂಬುದರ ಬದಲಿಗೆ ‘‘ಮರ್ದಾನ’’ ಎಂದು ಕರೆಯುತ್ತೇವೆ.’
‘ಅಕಸ್ಮಾತ್ ಕಳ್ಳತನ ಅಥವಾ ಕೊಲೆ ನಡೆದಲ್ಲಿ ನೀವು ಪೋಲಿಸರು ಹಾಗೂ ನ್ಯಾಯಾಧೀಶರಿಲ್ಲದೆ ಹೀಗೆ ನಿಭಾಯಿಸುತ್ತೀರಿ?’ ಎಂದು ನಾನು ಸಹೋದರಿ ಸಾರಾಳನ್ನು ಪ್ರಶ್ನಿಸಿದೆ.
‘‘ಮರ್ದಾನಾ’’ ವ್ಯವಸ್ಥೆಯು ಪ್ರಾರಂಭವಾದಾಗಲಿಂದ ಇಲ್ಲಿ ಯಾವುದೇ ಅಪರಾಧ, ಕೊಲೆ ಮುಂತಾದ ಘಟನೆಗಳು ಸಂಭವಿಸಿಲ್ಲ. ಹಾಗಾಗಿ ಅಪರಾಧಿಯನ್ನು ಹಿಡಿದುಕೊಡಲು ನಮಗೆ ಪೊಲೀಸರ ಅವಶ್ಯಕತೆಯಿಲ್ಲ. ಮೊಕದ್ದಮೆಗಳಲ್ಲಿ ತೀರ್ಪು ನೀಡಿ ಅಪರಾಧಿಗೆ ಶಿಕ್ಷೆ ವಿಧಿಸುವ ನ್ಯಾಯಾಧೀಶರ ಅಗತ್ಯವೂ ಇಲ್ಲ.
‘ಇದು ಬಹಳ ಒಳ್ಳೆಯ ಬೆಳವಣಿಗೆ. ಆದರೂ ಯಾರಾದರೂ ಪ್ರಮಾಣಿಕರಲ್ಲದೇ ಇರುವ ವ್ಯಕ್ತಿ ಕಂಡು ಬಂದಲ್ಲಿ ನೀವು ಅವರನ್ನು ಬಹಳ ಸುಲಭವಾಗಿ ಕಂಡುಹಿಡಿದು ಶಿಕ್ಷೆನೀಡಬಹುದು. ಹೇಗೆ ನೀವು ಒಂದು ತೊಟ್ಟು ರಕ್ತವನ್ನೂ ಹರಿಸದೆ, ನಿರ್ಣಾಯಕ ಗೆಲುವನ್ನು ಸಾಧಿಸಿದಿರೋ ಹಾಗೆಯೇ ನೀವು ಸುಲಭವಾಗಿ ನಿಮ್ಮ ನಾಡಿನಿಂದ ಅಪರಾಧ ಮತ್ತು ಅಪರಾಧಿಗಳನ್ನು ಹೊರಗಟ್ಟಬಹುದು!’
‘ಪ್ರಿಯ ಸುಲ್ತಾನಾ, ನೀನು ನನ್ನ ಅಂಗಳಕ್ಕೆ ಬಂದು ಕುಳಿತುಕೊಳ್ಳುತ್ತೀಯಾ?’ ಎಂದು ಸಾರಾ ನನ್ನನ್ನು ಕರೆದಳು.
‘ನಿನ್ನ ಅಡಿಗೆ ಮನೆ ಒಬ್ಬ ರಾಣಿಯ ಅಂತಃಪುರಕ್ಕಿಂತಲೇನೂ ಕಡಿಮೆ ದರ್ಜೆಯದಲ್ಲ.’ ಎಂದು ನಾನು ಮುಗುಳ್ನಗುತ್ತಾ ಹೇಳಿದೆ. ‘ಆದರೂ ನಾವೀಗ ಹೊರಡಬೇಕು. ಇಲ್ಲಿನ ಗಂಡಸರು ಆಗಲೇ ನಾವು ಅವರ ಅಡಿಗೆ ಮನೆಯ ಕೆಲಸಗಳಿಗೆ ಭಂಗವುಂಟು ಮಾಡಿ, ಅವರನ್ನಾಚೆ ದೂಡಿದ್ದೇವೆಂದು ಶಾಪ ಹಾಕುತ್ತಿರಬಹುದು’ ಎಂದು ನಾವಿಬ್ಬರೂ ಹೊಟ್ಟೆ ಹುಣ್ಣಾಗುವಂತೆ ನಕ್ಕೆವು.
(ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ನಮ್ಮ ಧರ್ಮವು ಪ್ರೀತಿ, ಸತ್ಯಗಳ ಆದರ್ಶ ಬುನಾದಿಯ ಮೇಲೆ ನಿಂತಿದೆ
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಅಂಕಣದ ಎಲ್ಲ ಅನುವಾದಿತ ಕಥೆಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 11:17 am, Fri, 6 May 22