Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್ ಹುಸೇನ್ ಕಥೆ ‘ಸುಲ್ತಾನಳ ಕನಸು’
Rukaiya Sakhawat Hossain : ‘ಏನಾಯಿತು ಪ್ರಿಯ ಗೆಳತಿ?’ ಕಕ್ಕುಲಾತಿಯಿಂದ ವಿಚಾರಿಸಿದಳು ಆ ಅಪರಿಚಿತ ಹೆಂಗಸು. ಆಗ ನಾನು ಕ್ಷಮೆಯಾಚಿಸುವ ದೈನ್ಯದನಿಯಿಂದ ‘ನನಗೇಕೋ ಮುಜುಗರವೆನಿಸುತ್ತಿದೆ. ನಾನು ಪರ್ದಾನಿಶೀನ ಮಹಿಳೆಯಾದುದರಿಂದ ಪರ್ದಾ ಧರಿಸದೆ ನಡೆದಾಡುವ ರೂಢಿ ಇಲ್ಲ’ ಎಂದು ಹೇಳಿದೆ.
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಈಗಿನ ಬಾಂಗ್ಲಾದೇಶದ ಪೈರಾಬಾದ್ ಎಂಬ ಗ್ರಾಮದಲ್ಲಿ ಜನಿಸಿದ ರುಕಿಯಾ ಶೇಖಾವತ್ ಹುಸೇನ್ (1880-1932) ಜೀವನದುದ್ದಕ್ಕೂ ಮುಸ್ಲಿಂ ಮಹಿಳೆಯರ ಹಕ್ಕುಗಳ ಪರವಾಗಿ ಹೋರಾಡಿದರು. ‘ಸುಲ್ತಾನಳ ಕನಸು’ ಎಂಬ ವಿಡಂಬನಾತ್ಮಕ, ಸ್ತ್ರೀಕೇಂದ್ರಿತ ಆದರ್ಶ ರಾಜ್ಯದ ನೀಳ್ಗತೆಯನ್ನು ಇವರು ಬರೆದಿದ್ದು 1905ರಲ್ಲಿ. ಮೊದಲು ಇಂಗ್ಲಿಷ್ನಲ್ಲಿ ಬರೆದು ನಂತರ ಬೆಂಗಾಲಿಗೆ ಅನುವಾದಿಸಿದರು. ಅವರ ಕಲ್ಪನೆಯ ಕೂಸಾದ ಈ ಚೊಚ್ಚಿಲ ಕೃತಿಯನ್ನು ಭಾರತೀಯ ಮಹಿಳಾ ಸಾಹಿತ್ಯದ ಇತಿಹಾಸ ಪರಂಪರೆಯಲ್ಲಿ ಬಂದ ಮೊತ್ತ ಮೊದಲ ಕಥನವೆನ್ನಬಹುದು. ಅದರಲ್ಲೂ, ಮಹಿಳಾಪರ ನಿಲುವುಗಳ ಸುತ್ತಲೇ ಹೆಣೆದ ಈ ಆದರ್ಶ ರಾಜ್ಯದ ಪರಿಕಲ್ಪನೆ, ಸುಮಾರು ಅದೇ ಸಮಯದಲ್ಲಿ ಪ್ರಕಟವಾದ ಅಮೆರಿಕಾದ ಲೇಖಕಿ ಶಾರ್ಲೆಟ್ ಪರ್ಕಿನ್ಸ್ ಗಿಲ್‍ಮನ್‍ರವರ ಕಾದಂಬರಿ ‘ಅವಳ ನಾಡು’ ((Herland) ವಿಗಿಂತ ಹಿಂದಿನದು. ಆದುದರಿಂದ ಸ್ತ್ರೀವಾದಿ ವಿಮರ್ಶಾ ಪರಂಪರೆಯಲ್ಲಿ ಈ ಕೃತಿಗೆ ಒಂದು ಮಹತ್ವವಾದ ಚಾರಿತ್ರಿಕ ಪ್ರಾಮುಖ್ಯತೆ ದೊರೆತಿದೆ. ತನ್ನ ಪತ್ನಿಯ ಸಾಹಿತ್ಯ ರಚನೆಗೆ ಉತ್ತೇಜನ ನೀಡುತ್ತಿದ್ದ ಆಕೆಯ ಪತಿ ಶೇಖಾವತ್ ಹುಸೇನ್‍ರವರು ಈ ಕಥೆಯನ್ನು ಕುರಿತು ಹೆಮ್ಮೆಯಿಂದ ‘ಪುರುಷರ ಮೇಲೆ ತೆಗೆದುಕೊಂಡ ಒಂದು ಉಗ್ರ ಪ್ರತೀಕಾರ’ ವೆಂದೇ ಬಣ್ಣಿಸಿದ್ದರು.
ಕಥೆ : ಸುಲ್ತಾನಾಳ ಕನಸು | ಮೂಲ : ರುಕಿಯಾ ಶೇಖಾವತ್ ಹುಸೇನ್ | ಕನ್ನಡಕ್ಕೆ : ಡಾ. ಕೆ. ಎಸ್. ವೈಶಾಲಿ | ಸೌಜನ್ಯ : ‘ದೇಶಕಾಲ’ ಸಾಹಿತ್ಯ ಪತ್ರಿಕೆ
(ಭಾಗ 1)
ಒಂದು ಸಂಜೆ ನಾನು ನನ್ನ ಮಲಗುವ ಕೊಠಡಿಯಲ್ಲಿದ್ದ ಆರಾಮ ಕುರ್ಚಿಯಲ್ಲಿ ತೂಗುಬಿದ್ದುಕೊಂಡು ಭಾರತೀಯ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಯೋಚಿಸುತ್ತಿದ್ದೆ. ಒಂದು ರೀತಿಯ ಮಂಪರು ಸ್ಥಿತಿಯಲ್ಲೇ ಯೋಚನೆ ಮಾಡುತ್ತಿದ್ದ ನನಗೆ ಝೊಂಪು ಹಿಡಿದಿತ್ತೋ ಇಲ್ಲವೋ ತಿಳಿಯದು. ಆದರೆ, ನನಗೆ ನೆನಪಿರುವಂತೆ ನಾನು ಎಚ್ಚರವಾಗಿಯೇ ಇದ್ದೆ, ಬೆಳದಿಂಗಳ ಆಗಸದಲ್ಲಿ ತಾರೆಗಳು ಸಾವಿರಾರು ವಜ್ರಗಳಂತೆ ಮಿನುಗುತ್ತಿದ್ದವು. ಇದು ನನಗೆ ಸ್ಪಷ್ಟವಾಗಿಯೇ ಕಾಣಿಸುತ್ತಿತ್ತು.
ಇದ್ದಕ್ಕಿದ್ದಂತೆ ಒಬ್ಬ ಮಹಿಳೆ ನನ್ನ ಮುಂದೆ ನಿಂತಿದ್ದಳು. ಅವಳು ಹೇಗೆ ಒಳಗೆ ಬಂದಳೆಂಬುದು ನನಗೆ ತಿಳಿಯದು. ನಾನು ಅವಳನ್ನು ನನ್ನ ಸ್ನೇಹಿತೆ ಸಹೋದರಿ ಸಾರಾಳೆಂದು ಭಾವಿಸಿದೆ.
‘ಶುಭೋದಯ’ ಎಂದಳು ಸಹೋದರಿ ಸಾರಾ. ಆದರೆ ಆಗಿನ್ನೂ ಬೆಳಗಾಗಿರಲಿಲ್ಲ. ಬದಲು ತಾರೆಗಳಿಂದ ಜಗಮಗಿಸುತ್ತಿರುವ ರಾತ್ರಿಯಾಗಿದ್ದುದರಿಂದ, ನಾನು ಒಳಗೊಳಗೇ ನಗುತ್ತಿದ್ದರೂ, ಅವಳನ್ನು ಸ್ವಾಗತಿಸುತ್ತಾ ಅವಳ ಕುಶಲವನ್ನು ವಿಚಾರಿಸಿದೆ.
‘ನಾನು ಚೆನ್ನಾಗಿದ್ದೇನೆ, ಧನ್ಯವಾದಗಳು, ದಯವಿಟ್ಟು ನೀನು ಹೊರಗೆ ಬಂದು ನಮ್ಮ ತೋಟವನ್ನು ನೋಡುತ್ತೀಯಾ?’
ತೆರೆದ ಕಿಟಕಿಯಲ್ಲಿ ಚಂದ್ರನನ್ನು ಮತ್ತೆ ನೋಡಿದೆ. ಆ ಸಮಯದಲ್ಲಿ ಹೊರಗೆ ಹೋಗುವುದರ ಬಗ್ಗೆ ನನಗೇನೂ ಕೆಡುಕೆನಿಸಲಿಲ್ಲ. ಹೊರಗಿನ ಕೆಲಸಗಾರರು ಆಗಷ್ಟೇ ನಿದ್ರಾವಶರಾಗಿದ್ದರು. ನಾನು ಸಹೋದರಿ ಸಾರಾಳೊಡನೆ ಕಾಲ್ನಡಿಗೆಯ ಒಂದು ಆಹ್ಲಾದಕರ ಅನುಭವದಲ್ಲಿ ಪಾಲ್ಗೊಳ್ಳಬಹುದೆನಿಸಿತು.
ನಾವು ಡಾರ್ಜಲಿಂಗ್‍ನಲ್ಲಿರುವಾಗ, ನಾನು ಆಗಾಗ್ಗೆ ಸಹೋದರಿ ಸಾರಾಳೊಡನೆ ಆಡ್ಡಾಡಲು ಹೋಗುತ್ತಿದ್ದೆ. ಎಷ್ಟೋ ಬಾರಿ ನಾವು ಕೈ ಕೈ ಹಿಡಿದು, ಅಲ್ಲಿನ ಬೊಟಾನಿಕಲ್ ತೋಟಗಳಲ್ಲಿ ನಡೆಯುತ್ತಾ, ಲಘುವಾಗಿ ಹರಟುತ್ತಿದ್ದೆವು. ಬಹುಶಃ ಸಹೋದರಿ ಸಾರಾ ನನ್ನನ್ನು ಅಂಥದ್ದೇ ಒಂದು ತೋಟಕ್ಕೆ ಕರೆದುಕೊಂಡು ಹೋಗಲು ಬಂದಿದ್ದಾಳೆ ಎಂದು ನಾನು ಕಲ್ಪಿಸಿಕೊಂಡೆ. ಕೂಡಲೇ ಅವಳ ಪ್ರಸ್ತಾಪಕ್ಕೆ ಸಮ್ಮತಿ ನೀಡಿ ಅವಳೊಡನೆ ಹೊರಟೆ.
ನಾವು ನಡೆದುಕೊಂಡು ಹೋಗುತ್ತಿದ್ದಾಗಲೇ, ಇದ್ದಕ್ಕಿದ್ದಂತೆ ಬೆಳ್ಳಂಬೆಳಗಾದುದನ್ನು ಗಮನಿಸಿ ನಾನು ಆಶ್ಚರ್ಯಗೊಂಡೆ. ಪಟ್ಟಣವು ಪೂರ್ಣವಾಗಿ ಎಚ್ಚರಗೊಂಡಿತ್ತು. ಜನಜಂಗುಳಿಯಿಂದ ರಸ್ತೆಗಳಲ್ಲಿ ಹೊಸ ಜೀವ ಸಂಚಾರ ಮೂಡಿತ್ತು. ನಾನು ಹಾಡುಹಗಲೇ ರಸ್ತೆಯಲ್ಲಿ ತಿರುಗಾಡುತ್ತಿದ್ದೇನೆಂದು ಬಹಳ ಲಜ್ಜೆಯಿಂದ ಮುಜುಗರಗೊಂಡಿದ್ದೆ. ಆದರೆ ಒಬ್ಬ ಗಂಡಸೂ ಕಾಣಲಿಲ್ಲ. ಕೆಲವರು ದಾರಿಹೋಕರು ನನ್ನನ್ನು ಹಾಸ್ಯ ಮಾಡಿದರು. ನನಗೆ ಅವರ ಭಾಷೆ ಅರ್ಥವಾಗದಿದ್ದರೂ ಅವರು ಗೇಲಿ ಮಾಡುತ್ತಿದ್ದಾರೆಂದು ಸ್ಪಷ್ಟವಾಗಿ ಅನ್ನಿಸಿತು. ನಾನು ಸ್ನೇಹಿತೆಯನ್ನು ಕೇಳಿದೆ.
‘ಅವರು ಏನು ಹೇಳುತ್ತಿದ್ದಾರೆ?’
‘ನೀನು ತುಂಬಾ ಗಂಡಸಿನಂತೆಯೇ ಕಾಣಿಸುತ್ತಿದ್ದೀಯೆಂದು ಆ ಹೆಂಗಸರು ಹೇಳುತ್ತಿದ್ದಾರೆ.’
‘ಪುರುಷರಂತೆಯೇ?’ ಎಂದು ನಾನು ಕೇಳಿದೆ. ‘ಯಾವ ಅರ್ಥದಲ್ಲಿ ಅವರು ಹಾಗೆ ಹೇಳುತ್ತಿದ್ದಾರೆ?’
‘ಅವರ ಅರ್ಥದಲ್ಲಿ ಹೇಳುವುದಾದರೆ ನೀನು ಪುರುಷರಂತೆಯೇ ನಾಚಿಕೆ ಸ್ವಭಾವದವಳು ಮತ್ತು ಅಂಜುಬುರುಕಿ.’
‘ಗಂಡಸರಂತೆಯೇ ನಾಚಿಕೆ ಸ್ವಭಾವ ಮತ್ತು ಆಂಜುಬುರುಕತನ?’ ಆ ಪ್ರತಿಕ್ರಿಯೆ ನಿಜವಾಗಿಯೂ ತಮಾಶೆಯಾಗಿತ್ತು. ಅದೇ ಸಮಯದಲ್ಲಿ ನನ್ನ ಜೊತೆಗಾತಿ ಸಹೋದರಿ ಸಾರಾಳಲ್ಲದೆ ಒಬ್ಬ ಅಪರಿಚಿತೆಯೆಂದು ನನಗೆ ಗೊತ್ತಾಗಿ ನಾನು ಬಹಳ ಗಾಬರಿಯಾದೆ. ಓಹ್! ನಾನೆಷ್ಟು ಮೂರ್ಖಳಾಗಿ ಆ ಅಪರಿಚಿತ ಹೆಂಗಸನ್ನು ನನ್ನ ಆತ್ಮೀಯ ಗೆಳತಿ ಸಹೋದರಿ ಸಾರಾಳೆಂದು ತಪ್ಪು ಭಾವಿಸಿಬಿಟ್ಟಿದ್ದೆ!
ನಾವು ಕೈ ಕೈ ಹಿಡಿದು ನಡೆಯುತ್ತಿದ್ದದುದರಿಂದ, ಅವಳ ಕೈಯಲ್ಲಿದ್ದ ನನ್ನ ಕೈ ಬೆರಳುಗಳು ಕಂಪಿಸುತ್ತಿರುವುದನ್ನು ನೋಡಿ, ನನ್ನ ಬೆರಳುಗಳನ್ನು ಆಕೆ ಮೃದುವಾಗಿ ಸ್ಪರ್ಶಿಸಿದಳು.
‘ಏನಾಯಿತು ಪ್ರಿಯ ಗೆಳತಿ?’ ಎಂದು ಕಕ್ಕುಲಾತಿಯಿಂದ ವಿಚಾರಿಸಿದಳು ಆ ಅಪರಿಚಿತ ಹೆಂಗಸು. ಆಗ ನಾನು ಕ್ಷಮೆಯಾಚಿಸುವ ದೈನ್ಯದನಿಯಿಂದ ‘ನನಗೇಕೋ ಮುಜುಗರವೆನಿಸುತ್ತಿದೆ. ನಾನು ಪರ್ದಾನಿಶೀನ ಮಹಿಳೆಯಾದುದರಿಂದ ಪರ್ದಾ ಧರಿಸದೆ ನಡೆದಾಡುವ ರೂಢಿ ಇಲ್ಲ’ ಎಂದು ಹೇಳಿದೆ.
‘ಇಲ್ಲಿ ನೀನು ಒಬ್ಬ ಗಂಡಸು ಎದುರಿಗೆ ಬಂದಾನೆಂದು ಭಯಗ್ರಸ್ತಳಾಗಬೇಕಿಲ್ಲ ಗೆಳತಿ. ಇದು ಮಹಿಳೆಯರ ರಾಜ್ಯ. ಅಪರಾಧ ಹಾಗೂ ಅಪಾಯಗಳಿಂದ ಮುಕ್ತವಾದ ನಿರ್ಭಯ ವಾತಾವರಣ, ಸಚ್ಚಾರಿತ್ರ್ಯ, ಸನ್ನಡತೆಗಳೇ ಇಲ್ಲಿ ರಾರಾಜಿಸುತ್ತಿವೆ.’
ಇದನ್ನೂ ಓದಿ : Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
ನಿಧಾನವಾಗಿ ನಾನು ಸುತ್ತುವರಿದಿದ್ದ ಸೊಬಗಿನ, ರಮ್ಯ ವಾತಾವರಣವನ್ನು ಆಸ್ವಾದಿಸತೊಡಗಿದೆ. ನಿಜವಾಗಿಯೂ ಆ ದೃಶ್ಯ ಭವ್ಯವಾಗಿತ್ತು. ಹಚ್ಚಹಸಿರಿನ ಹುಲ್ಲು ಹಾಸನ್ನು ನಾನು ಮಕಮಲ್ಲಿನ ಹಾಸೆಂದು ಭ್ರಮಿಸಿದೆ.
ನಾನು ಒಂದು ಮೃದುವಾದ ರತ್ನಗಂಬಳಿಯ ಮೇಲೆ ನಡೆದಾಡುತ್ತಿದ್ದೇನೋ ಎಂಬ ಭ್ರಮೆ ಮೂಡಿತು. ನಾನು ಕೆಳಗೆ ನೋಡಿದಾಗ ನಾವು ಸಾಗಿ ಬಂದ ರಸ್ತೆಯಲ್ಲಿ ಎಲ್ಲೆಲ್ಲೂ ಹೂವುಗಳ ರಾಶಿಯೇ ಕಾಣುತ್ತಿತ್ತು.
‘ಎಷ್ಟು ಸುಂದರವಾದ ದೃಶ್ಯ’ ಎಂದೆ ನಾನು.
‘ನಿನಗೆ ಇಷ್ಟವಾಯಿತೇ?’ ಎಂದು ಕೇಳಿದಳು ಸಹೋದರಿ ಸಾರಾ. (ನಾನು ಅವಳನ್ನು ಸಹೋದರಿ ಸಾರಾ ಎಂದೇ ಕರೆಯತೊಡಗಿದೆ. ಮತ್ತು ಆಕೆ ನನ್ನನ್ನು ನನ್ನ ಹೆಸರಿನಿಂದಲೇ ಕರೆಯುತ್ತಿದ್ದಳು.)
‘ಹೌದು ತುಂಬಾ ಹಿಡಿಸಿತು. ಆದರೆ ನನಗೆ ಈ ಸುಂದರ, ಕೋಮಲ ಪುಷ್ಪರಾಶಿಯ ಮೇಲೆ ನಡೆಯಲು ಖೇದವೆನಿಸುತ್ತದೆ.’
‘ಪ್ರಿಯ ಸುಲ್ತಾನ, ಬೇಸರ ಪಡಬೇಡ. ನೀನು ನಡೆಯುವುದರಿಂದ ಅವುಗಳಿಗೇನೂ ಕೆಡುಕು ಸಂಭವಿಸುವುದಿಲ್ಲ. ಅವು ಬೀದಿಯ ಹೂವುಗಳಷ್ಟೆ.’
‘ಇಡೀ ಜಾಗವೇ ಒಂದು ಉದ್ಯಾನವನದಂತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
‘ನೀವು ಪ್ರತಿಯೊಂದು ಗಿಡವನ್ನು ಎಷ್ಟು ನೈಪುಣ್ಯತೆಯಿಂದ ಸಿಂಗರಿಸಿದ್ದೀರಿ.’
‘ನಿಮ್ಮ ದೇಶದ ಗಂಡಸರು ಮನಸ್ಸು ಮಾಡಿದ್ದರೆ ನಿಮ್ಮ ಕಲ್ಕತ್ತೆಯೂ ಕೂಡ ಇದಕ್ಕಿಂತ ಸುಂದರವಾದ ಉದ್ಯಾನ ನಗರಿಯಾಗಲು ಸಾಧ್ಯವಿತ್ತು.’
‘ಬೇರೆ ಎಷ್ಟೋ ಕೆಲಸಗಳಿರುವಾಗ, ತೋಟಗಾರಿಕೆಗೆ ತುಂಬಾ ಪ್ರಾಮುಖ್ಯತೆ ಕೊಡುವುದು ನಿರರ್ಥಕವೆಂದೇ ಅವರು ಭಾವಿಸಿರಬೇಕು.’
‘ಅವರಿಗೆ ಅದಕ್ಕಿಂತಾ ಒಳ್ಳೆಯ ನೆಪ ಸಿಕ್ಕಿರಲಾರದು’ ಎಂದು ನಕ್ಕಳು ಸಾರಾ.
ನನಗೆ ಅಲ್ಲಿ ಪುರುಷರು ಎಲ್ಲಿರಬಹುದೆಂಬ ಕುತೂಹಲ ಮೂಡಿತು. ನಾನು ನಡೆದಾಡುವಾಗ ನೂರಾರು ಮಹಿಳೆಯರನ್ನು ನೋಡಿದೆ. ಆದರೆ ಒಬ್ಬ ಗಂಡಸನ್ನೂ ನೋಡಿರಲಿಲ್ಲ.
‘ನಿಮ್ಮಲ್ಲಿ ಗಂಡಸರೆಲ್ಲಿದ್ದಾರೆ?’ ಎಂದು ಅವಳನ್ನು ಕೇಳಿದೆ.
‘ಅವರೆಲ್ಲಿರಬೇಕೋ ಅಲ್ಲಿದ್ದಾರೆ.’
‘ಹಾಗೆಂದರೆ?’
‘ಓಹ್, ನನಗೆ ನನ್ನ ತಪ್ಪಿನ ಅರಿವಾಯಿತು. ನಿನಗೆ ನಮ್ಮ ಸಂಪ್ರದಾಯಗಳ ಅರಿವು ಇರಲಿಕ್ಕಿಲ್ಲ ಅಲ್ಲವೇ? ಏಕೆಂದರೆ ನೀನು ಇಲ್ಲಿಗೆ ಯಾವಾಗಲೂ ಬಂದಿರಲಿಲ್ಲ. ನಾವು ನಮ್ಮ ಪುರುಷರನ್ನು ಒಳಗೇ ಕದ ಮುಚ್ಚಿ ಇರಿಸಿದ್ದೇವೆ. ಅವರು ಹೊರಗೆ ಬರುವುದಿಲ್ಲ.’
‘ಹೇಗೆ ಮಹಿಳೆಯರನ್ನು ಜನಾನದಲ್ಲಿ ಇರಿಸುತ್ತಾರೋ ಹಾಗೆಯೇ?’
‘ಹೌದು ಕರಾರುವಾಕ್ಕಾಗಿ’
‘ಎಂಥಾ ತಮಾಶೆ!’ ನಾನು ನಗತೊಡಗಿದೆ. ಸಹೋದರಿ ಸಾರಾ ಕೂಡ ಮುಗುಳ್ನಕ್ಕಳು.
‘ಆದರೆ ಪ್ರಿಯ ಸುಲ್ತಾನ, ನಿರುಪದ್ರವಿ ಹೆಂಗಸರನ್ನು ನಿರ್ಬಂಧಿಸಿ, ಗಂಡಸರನ್ನು ಮುಕ್ತವಾಗಿ ಓಡಾಡಲು ಬಿಡುವುದು ಘೋರ ಅನ್ಯಾಯ’
‘ಏಕೆ? ನಾವು ಜನಾನದಿಂದ ಹೊರಬರುವುದು ನಮಗೇನೂ ಕ್ಷೇಮಕರವಲ್ಲ. ನಾವು ಸ್ವಾಭಾವಿಕವಾಗಿಯೇ ಅಬಲೆಯರಲ್ಲವೇ?’
‘ಹೌದು ಸುಲ್ತಾನ. ಗಂಡಸರು ರಸ್ತೆಯಲ್ಲಿ ಓಡಾಡುತ್ತಿರುವಾಗ ಅಪಾಯ ಖಂಡಿತ. ದುಷ್ಟ ಕಾಡು ಪ್ರಾಣಿಯೊಂದು ಧುತ್ತೆಂದು ಮಾರುಕಟ್ಟೆಯ ಜಾಗಕ್ಕೆ ಬಂದ ಹಾಗೆ’
‘ನಿಸ್ಸಂದೇಹವಾಗಿಯೂ ಹಾಗಲ್ಲ’
‘ಒಂದು ಕಾಲ್ಪನಿಕ ಸಂದರ್ಭವನ್ನು ಊಹಿಸಿಕೊ ಸುಲ್ತಾನ: ಮಾನಸಿಕವಾಗಿ ಅಸ್ವಸ್ಥರಾದವರಿಗೆಂದೇ ಇರುವಂಥಾ ದವಾಖಾನೆಯಿಂದ ತಪ್ಪಿಸಿಕೊಂಡು ಬಂದ ಕೆಲವು ಅರೆ ಹುಚ್ಚರು, ಬೇರೆ ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಉಪದ್ರವವನ್ನು ಉಂಟುಮಾಡಿದರೆ, ನಿಮ್ಮ ದೇಶದ ಗಂಡಸರು ಏನು ಮಾಡುತ್ತಾರೆ?’
‘ಅವರನ್ನು ಬಂಧಿಸಿ ಮತ್ತೆ ದವಾಖಾನೆಯಲ್ಲಿಡಲು ಪ್ರಯತ್ನಿಸುತ್ತಾರೆ.’
‘ಧನ್ಯವಾದಗಳು. ಮಾನಸಿಕವಾಗಿ ಸಬಲರಾಗಿ ಆರೋಗ್ಯವಂತರಾಗಿರುವವರನ್ನು ಹುಚ್ಚಾಸ್ಪತ್ರೆಯಲ್ಲಿಟ್ಟು, ಅಸ್ವಸ್ಥ ಮನಸ್ಥಿತಿಯಿಂದ ಉನ್ಮಾದದಲ್ಲಿರುವವರನ್ನು ಹೊರಗೆ ಮುಕ್ತವಾಗಿ ಓಡಾಡಿಕೊಂಡಿರಲು ಬಿಡುವುದು ನಿನಗೆ ವಿವೇಕಯುತವಾದ ಆಚರಣೆಯೆಂದೆನಿಸುತ್ತದೆಯೇ?’
‘ಖಂಡಿತವಾಗಿಯೂ ಇಲ್ಲ’ ಎಂದು ಕಿರುನಗೆಯ ಉತ್ತರವನ್ನು ನೀಡಿದೆ.
‘ಆದರೆ ನಿಮ್ಮ ದೇಶದಲ್ಲಿ ಹೀಗೇ ನಡೆಯುತ್ತಿದೆ. ತುಂಬಾ ಉಪಟಳ ಉಪದ್ರವ ನೀಡುವ ಜಾಯಮಾನದ ಪುರುಷರನ್ನು ಸ್ವತಂತ್ರವಾಗಿ ತಿರುಗಾಡಲು ಬಿಡಲಾಗುತ್ರದೆ. ಅಮಾಯಕ, ಮುಗ್ಧ ಹೆಂಗಸರನ್ನು ಜನಾನದಲ್ಲಿ ಕೂಡಿಹಾಕಲಾಗುತ್ತದೆ. ಆ ಅಶಿಕ್ಷಿತ ಗಂಡಸರನ್ನು ನಂಬುವುದಾದರೂ ಹೇಗೆ? ಅವರನ್ನು ಹೊರಗೆ ತಿರುಗಾಡಲು ಹೇಗೆ ಬಿಡುತ್ರಾರೆ?’
‘ನಮಗೆ ಸಾಮಾಜಿಕ ವ್ಯವಹಾರಗಳ ನಿರ್ವಹಣೆಯಲ್ಲಿ ಯಾವ ಪಾತ್ರವೂ ಇಲ್ಲ, ದನಿಯೂ ಇಲ್ಲ, ಭಾರತದಲ್ಲಿ ಪುರುಷನೇ ಯಜಮಾನ. ಎಲ್ಲಾ ಹಕ್ಕುಗಳೂ, ಅಧಿಕಾರ ಸವಲತ್ತುಗಳೂ ಪುರುಷರಿಗೇ ಸೀಮಿತವಾಗಿದ್ದು, ಮಹಿಳೆಯರನ್ನು ಜನಾನದಲ್ಲಿ ಕೂಡಿ ಇಡಲಾಗಿದೆ.’
*
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಅಂಕಣದ ಎಲ್ಲ ಅನುವಾದಿತ ಕಥೆಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 8:47 am, Fri, 6 May 22