Literature: ನೆರೆನಾಡ ನುಡಿಯೊಳಗಾಡಿ; ನಿಮ್ಮ ದೇಶದ ಹೆಂಗಸರು ತಮ್ಮ ಸ್ವಹಿತಾಸಕ್ತಿ ಕಳೆದುಕೊಂಡು ಕುರುಡರಂತೆ ವರ್ತಿಸುತ್ತಿದ್ದಾರೆ

Rukaiya Sakhawat Hossain : ‘ಪುರುಷರನ್ನು ಹಿಡಿದು ಜನಾನದಲ್ಲಿ ಪ್ರತಿಷ್ಠಾಪನೆ ಮಾಡಬೇಕು’, ‘ಆದರೆ ಅವರನ್ನು ಹಿಡಿದು ನಾಲ್ಕು ಗೋಡೆಗಳ ಒಳಗೆ ಬಂಧಿಸಿಡುವುದು ಸುಲಭವೇ?’ ‘ಇದೇನಾದರೂ ಸಫಲಗೊಂಡಲ್ಲಿ ಪುರುಷರ ಎಲ್ಲಾ ರಾಜಕೀಯ, ವಾಣಿಜ್ಯ ವ್ಯವಹಾರಗಳ ಗತಿಯೇನು? ಅವೂ ಜನಾನ ಪಾಲಾಗುತ್ತವೆಯೇ?’

Literature: ನೆರೆನಾಡ ನುಡಿಯೊಳಗಾಡಿ; ನಿಮ್ಮ ದೇಶದ ಹೆಂಗಸರು ತಮ್ಮ ಸ್ವಹಿತಾಸಕ್ತಿ ಕಳೆದುಕೊಂಡು ಕುರುಡರಂತೆ ವರ್ತಿಸುತ್ತಿದ್ದಾರೆ
ಲೇಖಕಿ ರುಕಿಯಾ ಶೇಖಾವತ್ ಹುಸೇನ್ ಮತ್ತು ಡಾ. ಕೆ.ಎಸ್. ವೈಶಾಲಿ
Follow us
|

Updated on:May 06, 2022 | 11:43 AM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ನೀವೇಕೆ ಪುರುಷರ ಅಧಿಪತ್ಯವನ್ನು ಸಹಿಸಿಕೊಂಡಿದ್ದೀರಿ? ಜನಾನದಲ್ಲಿ ಕೂಡಿ ಹಾಕುವುದನ್ನು ನೀವೇಕೆ ಪ್ರತಿಭಟಿಸುತ್ತಿಲ್ಲ?’ ‘ಏಕೆಂದರೆ ನಾವು ಅಸಹಾಯಕರು, ಅಬಲೆಯರು, ಪುರುಷರು ನಮಗಿಂತಾ ಬಲಿಷ್ಠರು’, ‘ಸಿಂಹವು ಮನುಷ್ಯನಿಗಿಂತಾ ಅಧಿಕ ಶಕ್ತಿಶಾಲಿ ಪ್ರಾಣಿಯಾದರೂ ಅದು ಮನುಷ್ಯ ಕುಲವನ್ನೇ ತನ್ನ ಶಕ್ತಿಯ ಆಧಾರದ ಮೇಲೆ ಆಳಲು ಸಾಧ್ಯವಾಗುವುದಿಲ್ಲ. ಹಾಗಿದ್ದ ಮೇಲೆ ಪುರುಷರು ಹೆಂಗಸರನ್ನು ಆಳಲು ಹೇಗೆ ಸಾಧ್ಯ? ನಿಮ್ಮ ದೇಶದ ಹೆಂಗಸರು ತಮ್ಮ ಸ್ವಹಿತಾಸಕ್ತಿಗಳನ್ನು ಕಳೆದುಕೊಂಡು, ಕುರುಡರಂತೆ ವರ್ತಿಸುತ್ತಿದ್ದಾರೆ.’, ‘ಹಾಗಾದರೆ, ಪ್ರಿಯ ಸಹೋದರಿ ಸಾರಾ, ನಾವು ಹೆಂಗಸರೇ ಎಲ್ಲವನ್ನೂ ಮಾಡುವುದಾದರೆ, ಪುರುಷರು ಮಾಡುವುದಾದರೂ ಏನು?’, ‘ಅವರು ಏನೂ ಮಾಡುವುದು ಬೇಡ. ದಯವಿಟ್ಟು ನನ್ನನ್ನು ಕ್ಷಮಿಸು, ಅವರು ಏನನ್ನಾದರೂ ಮಾಡಲು ಅಸಮರ್ಥರು. ಅವರನ್ನು ಹಿಡಿದು ಜನಾನದಲ್ಲಿ ಪ್ರತಿಷ್ಠಾಪನೆ ಮಾಡಬೇಕು.’, ‘ಆದರೆ ಅವರನ್ನು ಹಿಡಿದು ನಾಲ್ಕು ಗೋಡೆಗಳ ಒಳಗೆ ಬಂಧಿಸಿಡುವುದು ಸುಲಭವೇ?’ ಎಂದು ನಾನು ಆಶ್ಚರ್ಯ ಪಟ್ಟೆ. ‘ಇದೇನಾದರೂ ಸಫಲಗೊಂಡಲ್ಲಿ ಪುರುಷರ ಎಲ್ಲಾ ರಾಜಕೀಯ, ವಾಣಿಜ್ಯ ವ್ಯವಹಾರಗಳ ಗತಿಯೇನು? ಅವೂ ಜನಾನ ಪಾಲಾಗುತ್ತವೆಯೇ?’

ಕಥೆ : ಸುಲ್ತಾನಾಳ ಕನಸು | ಮೂಲ : ರುಕಿಯಾ ಶೇಖಾವತ್ ಹುಸೇನ್ | ಕನ್ನಡಕ್ಕೆ : ಡಾ. ಕೆ. ಎಸ್. ವೈಶಾಲಿ | ಸೌಜನ್ಯ : ‘ದೇಶಕಾಲ’ ಸಾಹಿತ್ಯ ಪತ್ರಿಕೆ 

(ಭಾಗ 2)

ಸಹೋದರಿ ಸಾರಾ ಉತ್ತರಿಸಲಿಲ್ಲ. ಮುದ್ದಾದ ಮುಗುಳ್ನಗೆ ಬೀರಿದಳು. ಬಹುಶಃ ಅವಳು ಬಾವಿಯಲ್ಲಿರುವ ಕಪ್ಪೆಯಂತಿದ್ದ ನನ್ನೊಡನೆ ವೃಥಾ ವಾದ ಮಾಡುವುದು ನಿರರ್ಥಕ ಎಂದುಕೊಂಡಳೇನೋ.

ಅದೇ ವೇಳೆಗೆ ನಾವು ಸಹೋದರಿ ಸಾರಾಳ ಮನೆಯನ್ನು ತಲುಪಿದೆವು. ಅವಳ ಮನೆ ಒಂದು ಸುಂದರವಾದ, ಹೃದಯದ ಆಕಾರದಲ್ಲಿದ್ದ ಉದ್ಯಾನವನದ ಬಳಿ ಇತ್ತು. ಕಬ್ಬಿಣದ ಮೇಲ್ಛಾವಣಿ ಹೊದಿಸಿದ ಬಂಗಲೆಯಾಗಿತ್ತು. ನಮ್ಮ ಎಲ್ಲಾ ಶ್ರೀಮಂತ ಬಂಗಲೆಗಳಿಗಿಂತ ತಂಪಾಗಿ, ಸುಂದರವಾಗಿತ್ತು. ಅಲ್ಲಿರುವ ಪೀಠೋಪಕರಣಗಳನ್ನು ಎಷ್ಟು ಅಚ್ಚಚುಕಟ್ಟಾಗಿ, ವ್ಯವಸ್ಥಿತವಾಗಿ, ಸದಭಿರುಚಿಯಿಂದ ಜೋಡಿಸಿಡಲಾಗಿತ್ತೆಂದರೆ ನನಗೆ ಅದನ್ನು ಬಣ್ಣಿಸಲು ಮಾತುಗಳೇ ಹೊರಡಲಿಲ್ಲ.

ನಾವು ಒಂದೇ ಬದಿಗೆ ಕುಳಿತಿದ್ದೆವು. ಆಕೆ ತಾನು ಹಾಕುತ್ತಿದ್ದ ಕಸೂತಿ ಹೆಣಿಗೆಯೊಂದನ್ನು ಹಜಾರದಿಂದ ತಂದು, ಹೊಸ ವಿನ್ಯಾಸವನ್ನು ಕಸೂತಿ ಹಾಕಲು ಆರಂಭಿಸಿದಳು.

‘ನಿನಗೆ ಹೊಲಿಗೆ, ಕಸೂತಿ ಕೆಲಸಗಳೂ ಗೊತ್ತಿವೆಯೇ?’

‘ಹೌದು. ನಮ್ಮ ಜನಾನದಲ್ಲಿ ಬೇರೇನೂ ಕೆಲಸವಿರುವುದಿಲ್ಲವಾದರೂ, ಕಸೂತಿ ಕೆಲಸದಲ್ಲಿ ನಮ್ಮ ಜನಾನದ ಸದಸ್ಯರ ನೈಪುಣ್ಯತೆಯನ್ನು ನೆಚ್ಚಿಕೊಳ್ಳುವಂತೆಯೇ ಇಲ್ಲ. ಗಂಡಸರಿಗೆ ಸೂಜಿದಾರ ಪೋಣಿಸುವಷ್ಟು ತಾಳ್ಮೆಯೂ ಇರುವುದಿಲ್ಲ.’

ಮೇಜಿನ ಮೇಲಿದ್ದ ವಿವಿಧ ಬಗೆಯ ಕಸೂತಿ ವಿನ್ಯಾಸಗಳಿಂದ ಅಲಂಕೃತಗೊಂಡ ವಸ್ತ್ರಗಳನ್ನು ನೋಡಿ, ‘ಈ ಕೆಲಸವನ್ನೆಲ್ಲಾ ನೀನೊಬ್ಬಳೇ ಮಾಡಿದೆಯಾ?’ ಎಂದು ಅವಳನ್ನು ಕೇಳಿದ.

‘ಹೌದು’

‘ಇಷ್ಟೆಲ್ಲಾ ಕೆಲಸ ಮಾಡಲು ನಿನಗೆ ಸಮಯವೆಲ್ಲಿದೆ? ನೀನು ಕಛೇರಿಯಲ್ಲಿಯೂ ದುಡಿಯಬೇಕಲ್ಲವೇ?’

‘ಹೌದು. ಆದರೆ ಇಡೀದಿನ ಪ್ರಯೋಗ ಶಾಲೆಯಲ್ಲಿಯೇ ಕಳೆಯುವುದಿಲ್ಲ. ನನ್ನ ಕೆಲಸವನ್ನು ಎರಡು ತಾಸುಗಳಲ್ಲಿ ಮುಗಿಸುತ್ತೇನೆ.’

‘ಎರಡೇ ಗಂಟೆಗಳಲ್ಲಿ! ಹೇಗೆ ಸಾಧ್ಯ! ಉದಾಹರಣೆಗೆ ಹೇಳುವುದಾದರೆ, ನಮ್ಮ ದೇಶದಲ್ಲಿ ಕಛೇರಿಗಳಲ್ಲಿ ಕೆಲಸ ಮಾಡುವವರು, ನ್ಯಾಯಾಧೀಶರುಗಳು ಪ್ರತೀದಿನ ಏಳು ಗಂಟೆಗಳ ದುಡಿಮೆ ಮಾಡುತ್ತಾರೆ.’

‘ನಾನು ಅವರು ಕೆಲಸ ಮಾಡುವುದನ್ನು ಗಮನಿಸಿದ್ದೇನೆ ಸುಲ್ತಾನಾ. ಅವರೆಲ್ಲರೂ ಏಳು ಗಂಟೆಗಳ ಕಾಲ ದುಡಿಯುತ್ತಾರೆಂದು ತಿಳಿದಿದ್ದೀಯಾ?’

‘ನಿಸ್ಸಂದೇಹವಾಗಿಯೂ ಹೌದು’

‘ಇಲ್ಲ ಪ್ರಿಯ ಸುಲ್ತಾನಾ. ಅವರು ದುಡಿಯುತ್ತಿಲ್ಲ. ಬೀಡಿ ಸೇದುತ್ತಾ ಸಮಯವನ್ನು ಪೋಲು ಮಾಡುತ್ತಾರೆ. ಕಚೇರಿಯ ವೇಳೆಯಲ್ಲಿ ಕೆಲವರು ಎರಡು ಅಥವಾ ಮೂರು ಚೇರೂಟುಗಳನ್ನು ಸೇದುತ್ತಾರೆ. ಅವರ ಕೆಲಸದ ಬಗ್ಗೆ ಬಡಾಯಿ ಕೊಚ್ಚುತ್ತಾರೆಯೇ ಹೊರತು ಏನನ್ನೂ ಮಾಡುವುದಿಲ್ಲ. ಒಂದು ಬೀಡಿ ಸೇದಲು ಅರ್ಧಗಂಟೆ ಬೇಕಾದರೆ, ಒಬ್ಬ ಮನುಷ್ಯ ದಿನಾ ಹನ್ನೆರಡು ಬೀಡಿಗಳನ್ನು ಸೇದುತ್ತಾನೆ. ಹೀಗೆ ಆತ ಆರು ಗಂಟೆಗಳನ್ನು ವ್ಯರ್ಥವಾಗಿ ಕಾಲಹರಣ ಮಾಡುತ್ತಾನೆ.’

ಹೀಗೆ ನಾವು ಬೇರೆ ವಿಷಯಗಳನ್ನು ಕುರಿತು ಚರ್ಚಿಸಿದೆವು, ಅವರಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳಿಲ್ಲವೆಂದೂ, ಅವರು ನಮ್ಮಂತೆ ಸೊಳ್ಳೆಗಳ ಕಡಿತದ ಕಾಟದಿಂದ ನರಳುವುದಿಲ್ಲವೆಂದೂ ನನಗೆ ತಿಳಿಯಿತು. ಈ ಪ್ರಮಿಳಾ ರಾಜ್ಯದಲ್ಲಿ ಯಾರೊಬ್ಬರೂ ಕೂಡಾ ಯೌವನಾವಸ್ಥೆಯಲ್ಲಿ ಸಾಯುವುದು ಅತ್ಯಂತ ಅಪರೂಪದ ಸಂಗತಿಯೆಂದೂ ಹಾಗೂ ಸಾವು ಸಂಭವಿಸಿದರೆ, ಬಹಳ ವಿರಳ ಸಂಖ್ಯೆಯಲ್ಲಿ ನಡೆಯುವ ಅಪಘಾತಗಳಲ್ಲಿ ಮಾತ್ರವೆಂದೂ ತಿಳಿದು ನನಗೆ ಆಶ್ಚರ್ಯವಾಯಿತು.

‘ನಮ್ಮ ಅಡಿಗೆಯ ಮನೆಯನ್ನು ನೋಡಲು ಬಯಸುತ್ತೀಯಾ?’ ಎಂದು ನನ್ನನ್ನು ಕೇಳಿದಳು ಸಾರಾ. ತುಂಬಾ ಉತ್ಸಾಹದಿಂದ ನನ್ನ ಸಮ್ಮತಿ ಸೂಚಿಸಿದೆ. ನಾವಿಬ್ಬರೂ ಅಲ್ಲಿಗೆ ಹೋದೆವು. ಅಲ್ಲಿದ್ದ ಗಂಡಸರನ್ನೆಲ್ಲರನ್ನೂ ಹೊರಗೆ ಕಳಿಸಲಾಗಿತ್ತು. ಅಡುಗೆ ಕೋಣೆಯ ಪಕ್ಕದಲ್ಲಿ ಸುಂದರವಾದ ತರಕಾರಿ ಬೆಳೆಗಳ ತೋಟವಿತ್ತು. ಪ್ರತಿಯೊಂದು ಲತೆಯೂ, ಟೋಮೇಟೋ ಗಿಡಗಳೂ ಕೂಡ ಆಭರಣಗಳಂತೆ ಕಂಡುಬರುತ್ತಿದ್ದವು. ಅಲ್ಲಿ ಹೊಗೆ ಇರಲಿಲ್ಲ, ಉಸಿರು ಕಟ್ಟಿಸುವ ವಾಸನೆ, ಚಿಮಣಿಯ ಸುಳಿವಿರಲಿಲ್ಲ. ಎಲ್ಲವೂ ಸ್ವಚ್ಛವಾಗಿತ್ತು. ಸಾಕಷ್ಟು ಬೆಳಕಿತ್ತು. ಕಿಟಕಿಗಳು ಪುಷ್ಪಗಳಿಂದ ಅಲಂಕೃತಗೊಂಡಿದ್ದವು. ಇದ್ದಲಿನ ಅಥವಾ ಬೆಂಕಿ ಉರಿಯುತ್ತಿದ್ದ ಕುರುಹುಗಳೇ ಇರಲಿಲ್ಲ.

‘ನೀವು ಅಡುಗೆ ಹೇಗೆ ಮಾಡುತ್ತೀರಿ?’ ಎಂದು ನಾನು ಕೇಳಿದೆ.

‘ಸೌರಶಕ್ತಿಯ ಬಳಕೆಯಿಂದ’ ಎನ್ನುತ್ತಾ, ಆಕೆ ನನ್ನನ್ನು ಒಂದು ಕೊಳವೆಯ ಬಳಿ ಕರೆದೊಯ್ದಳು. ಆ ಕೊಳವೆಯ ಮುಖಾಂತರ, ಅವರು ಶೇಖರಿಸಿಟ್ಟುಕೊಂಡ ಸೌರಶಕ್ತಿ ಹಾಗೂ ಶಾಖ ಪ್ರವಹಿಸುತ್ತಿದ್ದವು.

ಆಕೆ ಅಲ್ಲಿಯೇ ಸ್ವಲ್ಪ ಅಡುಗೆ ಮಾಡಿ, ತಮ್ಮ ಅಡುಗೆ ತಯಾರಿಸುವ ವಿಧಾನವನ್ನು ಪರಿಚಯಿಸಿ ಕೊಟ್ಟಳು.

‘ಈ ಸೌರಶಕ್ತಿಯನ್ನು ನೀವು ಹೇಗೆ ಶೇಖರಿಸಿಟ್ಟುಕೊಂಡಿರಿ?’ ಎಂದು ಆಶ್ಚರ್ಯಚಕಿತಳಾಗಿ ಕೇಳಿದೆ.

‘ನಿನಗೆ ನಾನು ನಮ್ಮ ಗತ ಇತಿಹಾಸವನ್ನು ಸ್ವಲ್ಪ ಮಟ್ಟಿಗೆ ತಿಳಿಸಿ ಹೇಳಬೇಕು. ಮೂವತ್ತು ವರ್ಷಗಳ ಹಿಂದಿನ ಮಾತು. ಆಗ ಸಿಂಹಾಸನವನ್ನು ಅಲಂಕರಿಸಿದಾಗ ನಮ್ಮ ರಾಣಿ ಕೇವಲ ಹದಿಮೂರು ವಯಸ್ಸಿನ ಬಾಲೆ. ನಾಮಕಾವಸ್ತೆಗೆ ಮಾತ್ರ ರಾಣಿಯಾಗಿದ್ದಳು. ದೇಶದ ಆಡಳಿತದ ಜವಾಬ್ದಾರಿಯನ್ನು ಪ್ರಧಾನ ಮಂತ್ರಿಗಳೇ ನಿರ್ವಹಿಸುತ್ತಿದ್ದರು. ನಮ್ಮ ರಾಣಿ ಅಧ್ಯಯನ ಶೀಲೆ. ವಿಜ್ಞಾನವೆಂದರೆ ಅವಳಿಗೆ ಅಚ್ಚುಮೆಚ್ಚು. ನಮ್ಮ ದೇಶದ ಎಲ್ಲಾ ಮಹಿಳೆಯರೂ ವಿದ್ಯಾಭ್ಯಾಸ ಮಾಡಲೇಬೇಕೆಂದು ಸುತ್ತೋಲೆ ಹೊರಡಿಸಿದಳು. ಆಕೆಯ ಆದೇಶಕ್ಕೆ ಅನುಸಾರವಾಗಿ ಸರ್ಕಾರವು ಅಧಿಕ ಸಂಖ್ಯೆಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ಪ್ರಾರಂಭಿಸಿತು. ಬಾಲ್ಯ ವಿವಾಹವನ್ನು ನಿಷೇಧಿಸಲಾಯಿತು. ತನ್ನ ಇಪ್ಪತ್ತೊಂದನೇ ವಯಸ್ಸಿಗೆ ಮುನ್ನ ಯಾವ ಸ್ತ್ರಿಯೂ ವಿವಾಹವಾಗುವಂತಿರಲಿಲ್ಲ. ಈ ಬದಲಾವಣೆಯಾಗುವ ಮುನ್ನ, ಈ ದೇಶದ ಸ್ತ್ರೀಯರೆಲ್ಲಾ ಪರ್ದಾಧಾರಿಣಿಯರಾಗಿದ್ದರು.’

ಇದನ್ನೂ ಓದಿ : ವೈಶಾಲಿಯಾನ: ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವಾ

‘ಈಗ ಪರಿಸ್ಥಿತಿ ಹೇಗೆ ಬುಡಮೇಲಾಗಿದೆ?’ ಎಂದು ಅವಳಿಗೆ ಮಾರುತ್ತರ ನೀಡಿ ನಗೆಯಾಡಿದೆ.

‘ಸ್ವಲ್ಪ ವರ್ಷಗಳಲ್ಲೇ ನಮ್ಮಲ್ಲಿ ಸ್ತ್ರಿಯರಿಗಾಗಿ ಪ್ರತ್ಯೇಕ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಯಿತು. ಅವುಗಳಲ್ಲಿ ಪುರುಷರಿಗೆ ಪ್ರವೇಶವಿರಲಿಲ್ಲ.’

‘ರಾಣಿಯು ವಾಸವಾಗಿರುವ ನಮ್ಮ ರಾಜಧಾನಿಯಲ್ಲಿ ಎರಡು ವಿಶ್ವವಿದ್ಯಾನಿಲಯಗಳಿವೆ. ಅವುಗಳ ಪೈಕಿ ಒಂದು ವಿಶ್ವವಿದ್ಯಾನಿಲಯದವರು ಒಂದು ಅದ್ಭುತವಾದ ಬಲೂನನ್ನು ಆವಿಷ್ಕಾರ ಮಾಡಿದರು. ಅದಕ್ಕೆ ಹಲವಾರು ಕೊಳವೆಗಳನ್ನು ಅಳವಡಿಸಿ, ಅದನ್ನು ಮೋಡಗಳ ಮಧ್ಯೆ ತೇಲಿ ಬಿಟ್ಟು ಕೊಳವೆಗಳ ಮೂಲಕ ನೀರನ್ನು ಶೇಖರಿಸಿಟ್ಟುಕೊಂಡರು. ಬಲೂನಿನ ಕೊಳವೆಗಳ ಮೂಲಕ ನೀರು ಸತತವಾಗಿ ಬಳಕೆಯಾಗುತ್ತಿದುದರಿಂದ, ಮೋಡ ಕವಿಯುವ ಪ್ರಕ್ರಿಯೆಯೇ ನಿಂತು ಹೋಯಿತು. ವಿಶ್ವವಿದ್ಯಾನಿಲಯದ ಕುಶಾಗ್ರಮತಿ ಪ್ರಾಂಶುಪಾಲಕಿ, ಅತಿವೃಷ್ಟಿ ಹಾಗೂ ಚಂಡಮಾರುತಗಳ ಅಪಾಯದಿಂದ ನಮ್ಮನ್ನು ರಕ್ಷಿಸಿದಳು.’

‘ನಿಜವಾಗಿಯೂ!? ಇಲ್ಲಿ ಎಲ್ಲೂ ಮಣ್ಣೇಕೆ ಕಾಣಿಸುತ್ತಿಲ್ಲವೆಂದು ನನಗೀಗ ಅರ್ಥವಾಗುತ್ತಿದೆ.’ ಎಂದು ನಾನು ಹೇಳಿದೆ, ಆದರೆ, ಬಲೂನಿನ ಕೊಳವೆಗಳ ಮೂಲಕ ನೀರನ್ನು ಶೇಖರಿಸಿಡುವ ವಿಧಾನ ನನಗೆ ಸ್ಪಷ್ಟವಾಗಿ ಅರ್ಥವಾಗಲಿಲ್ಲ. ಸಾರಾ ನನಗೆ ವಿಸ್ತಾರವಾಗಿ ವಿವರಿಸಿದರೂ, ನನ್ನ ವೈಜ್ಞಾನಿಕ ವಿಷಯಗಳ ಜ್ಞಾನ ಹಾಗೂ ಗ್ರಹಿಕೆ ತುಂಬಾ ಅಲ್ಪ ಮಟ್ಟದ್ದಾದ್ದರಿಂದ ನನಗೆ ಅರ್ಥವಾಗಲಿಲ್ಲ.

ಆದಾಗ್ಯೂ ಆಕೆ ಹೇಳತೊಡಗಿದಳು : ‘ಈ ಅದ್ಭುತ ಆವಿಷ್ಕಾರದ ಬಗ್ಗೆ ಮತ್ತೊಂದು ವಿಶ್ವವಿದ್ಯಾನಿಲಯದವರಿಗೆ ತಿಳಿದಾಗ, ಅವರು ಬಹಳ ಅಸೂಯೆ ಪಟ್ಟರು. ಹಾಗೂ ತಾವು ಇದಕ್ಕೆ ಮಿಗಿಲಾಗಿ ಅಸಾಧಾರಣವಾದುದೇನಾದರೂ ಸಾಧನೆ ಮಾಡಬೇಕೆಂದು ಹಂಬಲಿಸಿದರು. ಸೌರಶಕ್ತಿಯನ್ನು ಶೇಖರಿಸಿಡುವ ಒಂದು ಉಪಕರಣವನ್ನು ಅವರು ಕಂಡುಹಿಡಿದರು. ಸೌರಶಕ್ತಿಯನ್ನು ಶೇಖರಿಸಿಟ್ಟು, ಅವಶ್ಯಕತೆಯಿದ್ದಾಗ, ಎಲ್ಲರಿಗೂ ಲಭ್ಯವಾಗುವಂತೆ ವಿನಿಯೋಗ ಮಾಡುವ ವ್ಯವಸ್ಥೆಯನ್ನೂ ಮಾಡಿದರು.

‘ದೇಶದ ಮಹಿಳೆಯರು ಸಂಶೋಧನೆಗಳಲ್ಲಿ ನಿರತರಾಗಿದ್ದಾಗ, ಪುರುಷರೆಲ್ಲರೂ ಸೈನ್ಯದ ಬಲವನ್ನು ವೃದ್ಧಿಗೊಳಿಸುವುದರಲ್ಲೇ ಮಗ್ನರಾಗಿದ್ದರು. ಅವರಿಗೆ ಎರಡೂ ಮಹಿಳಾ ವಿಶ್ವವಿದ್ಯಾನಿಲಯಗಳವರು ವಾತಾವರಣದಿಂದ ನೀರನ್ನು ಹಾಗೂ ಸೂರ್ಯನಿಂದ ಸೌರಶಕ್ತಿಯನ್ನೂ ಶೇಖರಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆಂದು ತಿಳಿದು ಬಂದಾಗ, ನಮ್ಮ ದೇಶದ ಗಂಡಸರು ಆ ಮಹಿಳೆಯರನ್ನು ಅಪಹಾಸ್ಯ ಮಾಡಿದರು. ಈ ಪ್ರಯತ್ನವನ್ನು ಅವರು ‘‘ಭಾವನಾತ್ಮಕ ದುಃಸ್ವಪ್ನ’’ ವೆಂದು ಹೀಯಾಳಿಸಿದರು!’

‘ನಿಮ್ಮ ಸಾಧನೆಗಳು ನಿಜವಾಗಿಯೂ ಅದ್ಬುತವಾಗಿವೆ. ಆದರೆ ನನಗೆ ನೀನಿನ್ನೂ ಹೇಗೆ ನಿಮ್ಮ ದೇಶದ ಪುರುಷರನ್ನು ಸ್ವಪ್ರೇರಣೆಯಿಂದಲೇ ಜನಾನದಲ್ಲಿ ಇರುವಂತೆ ಮಾಡಿದಿರೆಂಬುದನ್ನು ತಿಳಿಸಿ ಹೇಳಿಲ್ಲ. ಮೊದಲಿಗೆ ನೀವು ಅವರನ್ನು ಬಂಧಿಸಿಡಬೇಕಾಯಿತೇ?’

‘ಇಲ್ಲ’

‘ಅವರು ಹೇಗೆ ಇಷ್ಟು ಸುಲಭವಾಗಿ ಹೊರಗಿನ ಪ್ರಪಂಚದಲ್ಲಿ ತಮಗಿದ್ದ ಮುಕ್ತವಾದ, ಸ್ವತಂತ್ರ, ಸ್ವಚ್ಛಂದ ಬದುಕಿಗೆ ಶರಣು ಹೊಡೆದು, ಸ್ವಯಿಚ್ಛೆಯಿಂದಲೇ ಜನಾನದ ನಾಲ್ಕು ಗೋಡೆಗಳ ಒಳಗೆ ಇದ್ದು ಬಿಡಲು ಬಯಸಿದರು!? ಖಂಡಿತವಾಗಿಯೂ ಅವರು ಪರಾಭವಗೊಂಡಿರಬೇಕು.’

‘ಹೌದು, ಅವರು ಪರಾಭವಗೊಂಡಿದ್ದಾರೆ!’

‘ಯಾರಿಂದ? ಬಹುಶಃ ಕೆಲವು ವೀರಾಂಗನೆಯರಿಂದಂಲೇನೋ?’

‘ಇಲ್ಲ. ಶಸ್ತ್ರಾಸ್ತ್ರಗಳಿಂದ ಅಲ್ಲ. ಯುದ್ಧದಿಂದಲೂ ಇಲ್ಲ’

‘ಹೌದು. ಅದು ಸಾಧ್ಯವಿಲ್ಲ. ಪುರುಷರ ಸೈನ್ಯವು ಮಹಿಳೆಯರ ಸೈನ್ಯಕ್ಕಿಂತ ಪ್ರಬಲವಾಗಿರುತ್ತದೆ. ಹಾಗಿದ್ದರೆ ಇದೆಲ್ಲಾ ಹೇಗೆ ಸಾಧ್ಯವಾಯಿತು?’

‘ಯುಕ್ತಿಯಿಂದ, ಮೇಧಾ ಶಕ್ತಿಯಿಂದ’

‘ಪುರುಷರ ಮೆದುಳೂ ಕೂಡ ಮಹಿಳೆಯರಿಗಿಂತ ದೊಡ್ಡದಾಗಿರುತ್ತದೆ ಹಾಗೂ ಜಾಸ್ತಿ ತೂಕವಿರುತ್ತದೆಯಲ್ಲವೇ?’

‘ಆದರೇನಂತೆ? ಒಂದು ಆನೆಯ ಮೆದುಳು ಮನುಷ್ಯನಿಗಿಂತ ದೊಡ್ಡದಾಗಿರುತ್ತದೆ ಮತ್ತು ಭಾರವಾಗಿರುತ್ತದೆ. ಹೀಗಿದ್ದರೂ, ಮನುಷ್ಯನು ಆನೆಯನ್ನು ಮಣಿಸಿ, ಸರಪಳಿಯಿಂದ ಕಟ್ಟಿಹಾಕಿ, ಅದನ್ನು ತನಗೆ ಹೇಗೆ ಬೇಕೋ ಹಾಗೆ ದುಡಿಸಿಕೊಳ್ಳುತ್ತಾನೆ.’

‘ನಿನ್ನ ಉತ್ತರ ಸಮರ್ಪಕವಾಗಿದೆ. ಆದರೆ ದಯವಿಟ್ಟು ಇದೆಲ್ಲಾ ಹೇಗಾಯಿತು ಎಂದು ನನಗೆ ವಿವರಿಸಿ ಹೇಳು. ಇದನ್ನು ತಿಳಿದುಕೊಳ್ಳಲು ನನಗೆಷ್ಟು ಕುತೂಹಲವಿದೆಯೆಂದರೆ, ನಾನು ಅದನ್ನು ತಡೆದುಕೊಳ್ಳಲಾರದೇ ಸತ್ತೇ ಹೋಗಿ ಬಿಡುತ್ತೇನೋ ಎನ್ನುವಷ್ಟು!’

*

(ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ‘ಭಾವನಾತ್ಮಕ ಕನಸುಗಳನ್ನು ಕಾಣುವ ಸರದಿ ಆ ಸ್ವಾಭಿಮಾನಿ ಪುರುಷ ಶಿಖಾಮಣಿಗಳದ್ದಲ್ಲವೇ?’)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಕಥೆಯ ಮತ್ತು ಅಂಕಣದ ಎಲ್ಲ ಅನುವಾದಿತ ಕಥೆಗಳನ್ನು ಇಲ್ಲಿ ಓದಿ :  https://tv9kannada.com/tag/nerenaada-nudiyolagaadi

Published On - 10:25 am, Fri, 6 May 22

ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ