ವೈಶಾಲಿಯಾನ: ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವಾ
Disability : ರಾಬರ್ಟ್ ಲೂಯಿಸ್ ಸ್ಟೀವನ್‍ಸನ್‍ನ ಕಥೆ ‘ಡಾ.ಜೆಕಿಲ್ ಮತ್ತು ಮಿಸ್ಟರ್ ಹೈಡ್’ ಇದಕ್ಕೊಂದು ಉತ್ತಮ ಉದಾಹರಣೆ. ರಾಮಾಯಣದ ಗೂನು ಬೆನ್ನಿನ ಮಂಥರೆ, ಕುಟಿಲೋಪಾಯಗಳನ್ನು, ಷಡ್ಯಂತ್ರಗಳನ್ನು ರಚಿಸುವ ಕೌರವರ ಕುಂಟ ಸೋದರಮಾವ ಶಕುನಿ -ಹೀಗೆ ಅನೇಕ ನೇತ್ಯಾತ್ಮಕ ಉದಾಹರಣೆಗಳು ನಮಗೆ ಎದುರಾಗುತ್ತವೆ.
ವೈಶಾಲಿಯಾನ | Vaishaliyaana : ನನಗೆ ಎಷ್ಟೋ ಬಾರಿ ಅನ್ನಿಸಿದ್ದಿದೆ. ವಿಮೋಚನೆ ಎಂಬುದು ಕೇವಲ ಯಾವುದೋ ಒಂದು ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯದ ಅಭ್ಯುದಯಕ್ಕೆ ಮಾತ್ರ ಸಂಬಂಧಿಸಿದಂಥ ಖಾಸಗಿ ವಿಚಾರವಲ್ಲ. ಅದು ನೇಪಥ್ಯಕ್ಕೆ ಸರಿಸಲ್ಪಟ್ಟ ಅನೇಕ ಶೋಷಿತ ಸಮುದಾಯಗಳಿಗೆ ದೊರೆಯಬೇಕಾದ ಸವಲತ್ತು ಮತ್ತು ಅವರ ಹಕ್ಕು ಕೂಡ. ಅದರ ಮೂಲಕ ಮುಖ್ಯವಾಹಿನಿಯಲ್ಲಿರುವವರೂ ತಮ್ಮ ಜಡ್ಡುಗಟ್ಟಿದ ಮನಸ್ಸುಗಳ ಸಂಕೋಲೆಗಳಿಂದ ಬಂಧಮುಕ್ತರಾಗಬೇಕಿದೆ. ನಾವು ವರ್ಣ-ಭೇದ ನೀತಿಯನ್ನು ಖಂಡಿಸುತ್ತೇವೆ, ಅದು ಇಂದು ಒಂದು ಬೃಹತ್ತಾದ ಆಂದೋಲನವೇ ಆಗಿದೆ. ಮಹಿಳಾ ಹಕ್ಕುಗಳ ಪ್ರತಿಪಾದನೆಯ ಬಗ್ಗೆ ಮಾತನಾಡುತ್ತೇವೆ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಾದ ಜಾತಿ ಪದ್ಧತಿಯಲ್ಲಿ ತಳ ಸಮುದಾಯದವರನ್ನು ಹೇಗೆ ಅಮಾನುಷವಾಗಿ ತುಚ್ಛೀಕರಿಸಲಾಗಿದೆಯೆಂದು ಮನವರಿಕೆ ಮಾಡಿಕೊಡುವ ಮಾರ್ಮಿಕ ವಿಶ್ಲೇಷಣೆಗಳನ್ನು ಮಾಡುತ್ತೇವೆ. ಆದರೆ ಶತಮಾನಗಳಿಂದ ನಮ್ಮ ನಿರ್ಲಕ್ಷ್ಯಕ್ಕೆ, ಅನಾದರಕ್ಕೆ ಗುರಿಯಾಗಿ, ತಮ್ಮ ಕನಸುಗಳನ್ನು, ಆಸೆ –ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ನೋವು, ಅವಮಾನಗಳಿಂದ ಬಸವಳಿಯುವ ವಿಶೇಷ ಚೇತನರ ಬಗ್ಗೆ, ಅವರ ಹಕ್ಕುಗಳ ಬಗ್ಗೆ ಎಷ್ಟು ಆಳವಾಗಿ ಯೋಚಿಸಿದ್ದೇವೆ? ಡಾ. ಕೆ. ಎಸ್. ವೈಶಾಲಿ (Dr. K.S.Vaishali)
(ಯಾನ 9)
ಈ ದಮನಿತ ವರ್ಗದಲ್ಲಿ ನಾನು ಮೇಲೆ ಹೆಸರಿಸಿದ ಎಲ್ಲಾ ಸಮುದಾಯದವರೂ ಇದ್ದಾರೆ. ಶ್ವೇತ ವರ್ಣಿಯರು ಕಪ್ಪು ಜನರ ಮೇಲೆ ತಮ್ಮ ಸೌಂದರ್ಯ- ಬಣ್ಣದ ಕುರಿತಾದ ಮಾನದಂಡವನ್ನು ಬಲವಂತವಾಗಿ ಹೇರಿದಂತೆ, ಪುರುಷರು ಮಹಿಳೆಯರನ್ನು ತಮ್ಮ ಅಂಕೆಯಲ್ಲಿರಿಸಿಕೊಂಡಂತೆ, ತಾವು ಸದೃಢರು, ಸಬಲರು ಹಾಗೂ ಸಮರ್ಥರೆಂದೆನಿಸಿಕೊಂಡ ಜನರು, ವಿಶೇಷ ಚೇತನರಾದ ಜನರ ಮೇಲೆ ತಮ್ಮ ಪ್ರಭುತ್ವವನ್ನು ಚಲಾಯಿಸುತ್ತಿದ್ದಾರೆ. ಅವರಿಗೆ ‘ಅಂಗವಿಕಲರು’ ಎಂಬ ಹಣೆಪಟ್ಟಿಯನ್ನು ಹೊರಿಸಿ, ತಮ್ಮ ಹುಂಬತನವನ್ನು ಯಾವ ಹಿಂಜರಿಕೆಯೂ ಇಲ್ಲದೇ, ರಾಜಾರೋಷವಾಗಿ ಪ್ರದರ್ಶಿಸುತ್ತಿದ್ದಾರೆ. ಅಂಗವಿಕಲತೆಯ ಬಗ್ಗೆ ಪ್ರಚಲಿತವಿರುವ ಎಲ್ಲಾ ಚಿತ್ರಣಗಳೂ, ನಮಗೆ ಪರೋಕ್ಷವಾಗಿಯಾದರೂ ಯಾವುದು ಸುಂದರವಾಗಿ, ಸರಿಯಾಗಿರುವಂಥದ್ದು ಎಂಬುದರ ತಿಳಿವಳಿಕೆ ನೀಡುವುದಷ್ಟೇ ಅಲ್ಲದೇ, ‘ಅಂಗವಿಕಲತೆ’ಯನ್ನು ಅಮಂಗಳಕಾರಿ, ವಿಕೃತಿಯೆಂದೂ, ಪ್ರಾರಬ್ಧ ಕರ್ಮದ, ದುಷ್ಟತನದ, ಕುರೂಪಿ ಲಾಂಛನವೆಂದು ಸಂವೇದನಾಶೂನ್ಯತೆಯಿಂದ ಬಿಂಬಿಸುತ್ತವೆ.
ಸಮಾಜದಿಂದ ಬಹಿಷ್ಕೃತರಾಗಿ, ಒಂಟಿಯಾಗಿ ನಲುಗುವ, ವಿಶೇಷ ಚೇತನರ ಅನೇಕ ವ್ಯಥೆಯ ಕಥೆಗಳು ನಮ್ಮ ಮುಂದಿವೆ. ಇಲ್ಲಿ ನಮಗೆ ಎದುರಾಗುವ ಮುಖ್ಯ ಪ್ರಶ್ನೆಯೆಂದರೆ, ನಮ್ಮ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ, ವಿಶೇಷ ಚೇತನರ ಬಗ್ಗೆ, ಎಷ್ಟರ ಮಟ್ಟಿಗೆ, ಅಪಹಾಸ್ಯದ, ಅಣಕದ, ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ, ಕಳಂಕ ಪ್ರಾಯವಾದ ಮಾದರಿಗಳ ನಿರೂಪಣೆಗಳಿವೆ ಮತ್ತು ಅವು ಹೇಗೆ ಜನಮಾನಸದಲ್ಲಿ ಬೇರೂರಿ, ‘ಅಂಗವಿಕಲತೆ’ಯ ಒಂದು ಕರಾಳ ಪ್ರತಿಮೆಯನ್ನು ನಿರ್ಮಿಸುತ್ತವೆ? ಎಂಬುದಾಗಿದೆ. ಸಾಹಿತ್ಯದಲ್ಲಿ ಅನೇಕ ಬಾರಿ ನಾವು ಅಂಗವಿಕಲತೆ ಎಂಬ ಸ್ಥಿತಿ, ಕೇವಲ ದೇಹದ ಯಾವುದೋ ಅಂಗದ ನ್ಯೂನತೆಯಾಗಿ, ಅದಕ್ಕೆ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆಯಿದೆ ಎಂಬುದಷ್ಟೇ ಆಗಿರದೆ, ಸಾಮಾಜಿಕ- ಧಾರ್ಮಿಕ- ಸಾಂಸ್ಕೃತಿಕ ಚೌಕಟ್ಟುಗಳಲ್ಲಿ ಬೇರೆಂದು ರೀತಿಯ ನಕಾರಾತ್ಮಕ ಅರ್ಥವನ್ನು ಧ್ವನಿಸುವ ರೂಪಕವೂ ಆಗಿರುತ್ತದೆ ಎನ್ನುವ ಕಹಿ ಸತ್ಯವನ್ನು ಗಮನಿಸಿಯೇ ಇರುತ್ತೇವೆ.
ಅಂಗವಿಕಲತೆಯೊಂದಿಗೆ ತಳುಕಿ ಹಾಕಿಕೊಂಡಿರುವ ಈ ಬಗೆಯ ನೈತಿಕ ಗೂಂಡಾಗಿರಿಯ ರೂಪಕಗಳನ್ನು ನಿರಚನಗೊಳಿಸುವುದು ಹೇಗೆಂದು ನಾವು ಆಲೋಚಿಸಬೇಕಾಗಿದೆ. ಈ Institutional ableism ನ ಪ್ರತೀಕವಾದ ಮನೋ ವಿಕಲ್ಪಗಳನ್ನು ನಾವು ತೀಕ್ಷ್ಣವಾದ, ಅತಿಕ್ರಮಣಶೀಲ ಪ್ರತಿಸ್ಪಂದನೆಯ ಮರುವ್ಯಾಖ್ಯಾನಗಳಿಂದ (Transgressive resignification) ನಿವಾರಿಸಿಕೊಳ್ಳಬಹುದೆಂದು ವಿಶೇಷ ಚೇತನ ಅಧ್ಯಯನ ತಜ್ಞರಾದ ಡೇವಿಡ್ ಮಿಷೆಲ್ ಮತ್ತು ಶಾರೆನ್ ಸ್ನೈಡರ್ ಅಭಿಪ್ರಾಯ ಪಡುತ್ತಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ಕಡೆಗಣಿಲ್ಪಟ್ಟಿದ್ದೇವೆಂದು ಕೊರಗುವ ಬದಲು ವಿಶಿಷ್ಟ ಚೇತನರ ವ್ಯಕ್ತಿತ್ವದಲ್ಲಿ ಉತ್ಪ್ರೇಕ್ಷಿಸಲಾಗುವ ಕೆಲವು ಗುಣ -ಲಕ್ಷಣಗಳನ್ನು ಬುಡಮೇಲು ಮಾಡಿ ಅವುಗಳ ವಿದ್ರೋಹಕಾರಿ ಶಕ್ತಿಯನ್ನು, ವಿಡಂಬನಾತ್ಮಕವಾಗಿ ಅನಾವರಣಗೊಳಿಸಬಹುದಾಗಿದೆ ಎಂಬ ವಾದವನ್ನೂ ಮಂಡಿಸುತ್ತಾರೆ. ಹನ್ನೆರಡನೇ ಶತಮಾನದಲ್ಲಿಯೇ ಇಂತಹ ಒಂದು ಅದ್ಭುತ ಪ್ರಯೋಗವನ್ನು ಬಸವೇಶ್ವರರು ತಮ್ಮ ವಚನಗಳಲ್ಲಿ ಮಾಡಿದ್ದರು. ಅವರ ವಚನವೊಂದು ಹೀಗಿದೆ :
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ ಮಾತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವಾ.
ಈ ವಚನವು ವಿಶೇಷ ಚೇತನ ಸ್ಥಿತಿ ಮತ್ತು ಪ್ರಜ್ಞೆಯ ಬಗ್ಗೆ ಒಂದು ವೈಶಿಷ್ಟ್ಯಪೂರ್ಣವಾದ, ಪ್ರತಿರೋಧಕಾತ್ಮಕ ದೃಷಿಕೋನವನ್ನು ಬಿಂಬಿಸುತ್ತದೆ. ಇಲ್ಲಿ ಬಸವಣ್ಣನವರ ಅಂಗವಿಕಲತೆಯ ಕುರಿತಾದ ಗ್ರಹಿಕೆಗಳು ಬಹಳ ಸ್ವಾರಸ್ಯಕರವಾಗಿವೆ. ಇದು ಸಮಾಜದ ನಕರಾತ್ಮಕ ಧೋರಣೆಯ ಖಂಡನೆಯೂ ಆಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ವಚನಕಾರನ ಕಲ್ಪನೆಯಲ್ಲಿ, ಬಹಿಷ್ಕೃತಗೊಂಡ, ಅವಹೇಳನಕ್ಕೆ ಗುರಿಯಾದ, ವಿಶೇಷ ಚೇತನನ ದೇಹವೇ, ವಿಸ್ಮಯಕಾರಿಯಾಗಿ, ಪವಾಡಸದೃಶವಾಗಿ, ಪರ್ಯಾಯ ಮಾರ್ಗದಲ್ಲಿ ಕ್ರಮಿಸುವಾಗ ಲಭಿಸುವ, ಒಳನೋಟಗಳ ವಿನೂತನವಾದ ದೃಷ್ಟಿಕೋನವನ್ನು ಸಾಕ್ಷಾತ್ಕರಿಸಿಕೊಳ್ಳುವ ಹೊಸ ಬಗೆಯ ಅರಿವಿಗೆ ಆಶ್ರಯತಾಣವಾಗುತ್ತದೆ.
ಯಾವ ಸೃಜನಶೀಲ ಸಾಹಿತ್ಯ ಸೃಷ್ಟಿಯೂ ನಿರ್ವಾತದಲ್ಲಿ ಸಂಭವಿಸುವುದಿಲ್ಲ. ಕಥೆ, ಕಾದಂಬರಿಗಳಲ್ಲಿ, ಪೌರಾಣಿಕ ಕಥಾ ನಿರೂಪಣೆಗಳಲ್ಲಿ ಕಾಣಬರುವ ಪಾತ್ರಗಳ ಚಿತ್ರಣವೂ ವಿಶಿಷ್ಟ ಚೇತನರಾದ ಸ್ತ್ರೀ- ಪುರುಷರನ್ನು ನೋಡುವ ಸಾಮಾಜಿಕ ದೃಷ್ಟಿಕೋನವನ್ನು ಪ್ರಭಾವಿಸುತ್ತದೆ. ಅದನ್ನು ನಿಯಂತ್ರಿಸುತ್ತದೆ ಕೂಡ. ದಿವ್ಯಾಂಗರನ್ನು ಮನುಷ್ಯರೇ ಅಲ್ಲವೇನೋ ಎಂಬಂತೆ ಉಪೇಕ್ಷೆ ಮಾಡುವುದು, ಅವರ ವ್ಯಕ್ತಿತ್ವವನ್ನೇ ಕುಂಠಿತಗೊಳಿಸಿ, ಬುದ್ಧಿ ಬೆಳೆಯದ ಮಕ್ಕಳೆಂಬಂತೆ ಗಣನೆಗೇ ತಂದುಕೊಳ್ಳದಿರುವುದು, ಅವರನ್ನು ವಿಕೃತ ಸ್ವಭಾವದ ಅಪರಾಧಿಗಳೆಂಬಂತೆ ನೋಡುವುದು – ಇತ್ಯಾದಿ ದುಷ್ಟ ನಡವಳಿಕೆಗಳು ಸರ್ವೇ ಸಾಮಾನ್ಯ. ಹಲವಾರು ಬಾರಿ ಸಾಹಿತ್ಯದಲ್ಲಿ ಮನೋವಿಕಾರಗಳನ್ನು ಬಿಂಬಿಸಲು ಬಾಹ್ಯ ದೇಹದ ಅಂಗವಿಕಲತೆಯನ್ನೇ ಚಿಹ್ನೆಯಾಗಿ ಬಳಸಲಾಗುತ್ತದೆ. ಒಳ್ಳೆಯದು ಹಾಗೂ ಕೆಟ್ಟದರ ನಡುವಿನ ಸಂಘರ್ಷವನ್ನು ಕೂಡ ಎಷ್ಟೋ ಬಾರಿ ಸಹಜ, ಸ್ವಸ್ಥ ಮತ್ತು ಅಸ್ವಸ್ಥ, ಅಂಗವಿಕಲತೆಯ ಸ್ಥಿತಿಯ ನಡುವಿನ ಹಣಾಹಣಿಯೆಂದು ಬಿಂಬಿಸಲಾಗುತ್ತದೆ.
ಸೌಜನ್ಯ : ಅಂತರ್ಜಾಲರಾಬರ್ಟ್ ಲೂಯಿಸ್ ಸ್ಟೀವನ್‍ಸನ್‍ನ ಕಥೆ ‘ಡಾ.ಜೆಕಿಲ್ ಮತ್ತು ಮಿಸ್ಟರ್ ಹೈಡ್’ ಇದಕ್ಕೊಂದು ಉತ್ತಮ ಉದಾಹರಣೆ. ರಾಮಾಯಣದ ಗೂನು ಬೆನ್ನಿನ ಮಂಥರೆ, ಕುಟಿಲೋಪಾಯಗಳನ್ನು, ಷಡ್ಯಂತ್ರಗಳನ್ನು ರಚಿಸುವ ಕೌರವರ ಕುಂಟ ಸೋದರಮಾವ ಶಕುನಿ -ಹೀಗೆ ಅನೇಕ ನೇತ್ಯಾತ್ಮಕ ಉದಾಹರಣೆಗಳು ನಮಗೆ ಎದುರಾಗುತ್ತವೆ. ಕ್ರಿಸ್ತಪೂರ್ವ ಕಾಲದ ಸುಪ್ರಸಿದ್ಧ ನಾಟಕಕಾರ ಸೋಫೋಕ್ಲಿಸ್‍ನ ತ್ರಿವಳಿ ನಾಟಕಗಳಾದ ಈಡಿಪಸ್ ರೆಕ್ಸ್, ಈಡಿಪಸ್ ಕೊಲೋನಸ್ ಹಾಗೂ ಅಂತಿಗೊನೆಯಲ್ಲಿ ತಾನು ತನ್ನ ಸ್ವಂತ ತಾಯಿಯಾದ ಜೊಕಾಸ್ಟಳನ್ನೇ ವರಿಸಿ ಅವಳಿಂದ ಮಕ್ಕಳನ್ನು ಪಡೆದೆನೆಂಬ ಅರಿವಾದೊಡನೆ ಈಡಿಪಸ್ ದೊರೆ ತನ್ನ ಪಾಪ ಕಾರ್ಯಕ್ಕಾಗಿ ಪರಿತಪಿಸುತ್ತ, ತನ್ನ ಕಣ್ಣುಗಳನ್ನೇ ಕಿತ್ತುಕೊಳ್ಳುತ್ತಾನೆ, ಇಲ್ಲಿ ಆತನ ಅಂಧತ್ವ ಘೋರ ಪಾಪಕ್ಕೆ ಮಾಡಿಕೊಂಡ ಪ್ರಾಯಶ್ಚಿತ್ತ ಎಂಬ ಎಳೆಯೂ ಗೋಚರಿಸುತ್ತದೆ. ಈ ರೀತಿ ಪಾಪ- ಪುಣ್ಯಗಳೊಡನೆ ಶಾರೀರಿಕ ನ್ಯೂನತೆಗಳನ್ನು ಬೆಸೆಯುವುದು ಲಾಗಾಯ್ತಿನಿಂದ ನಡೆದುಕೊಂಡೇ ಬಂದಿದೆ. ನಮ್ಮ ಮನಸ್ಸುಗಳನ್ನು ಆಕ್ರಮಿಸಿಕೊಳ್ಳುವ ಪೂರ್ವಗ್ರಹೀತಗಳಲ್ಲಿ ಇವುಗಳದೇ ಸಿಂಹ ಪಾಲು ಎಂದರೆ ತಪ್ಪಾಗಲಾರದು.
ಅಂಗವಿಕಲತೆ ಹಾಗೂ ಸಹಜ ದೇಹಸ್ಥಿತಿಗಳನ್ನು ವೈರುಧ್ಯಗಳೆಂದು ಪರಿಗಣಿಸುವುದು ಕೂಡ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಸಬಲ, ಸ್ವಸ್ಥ, ಆರೋಗ್ಯಕರ ಶರೀರದಲ್ಲಿ ಏರು ಪೇರುಗಳು ಆಗುವುದು ಸಹಜ, ಆಕಸ್ಮಿಕವಾಗಿ ಸಂಭವಿಸುವ ಅಪಘಾತದಲ್ಲಿ ವ್ಯಕ್ತಿಯು ಅಂಗವಿಕಲತೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ, ಆರೋಗ್ಯವಂತರಾದ ಪುರುಷ ಅಥವಾ ಮಹಿಳೆ ಮಧ್ಯವಯಸ್ಸಿನಲ್ಲಿ ಸಂಧಿವಾತದಂಥ ಕಾಯಿಲೆಯಿಂದ ಬಳಲುತ್ತ, ಮೊಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು, ಕಣ್ಣಿನಲ್ಲಿ ಪೊರೆ ಬೆಳೆದು, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು, ಶ್ರವಣದೋಷದಿಂದ ಹಿಯರಿಂಗ್ ಏಡ್ ಬಳಸಬಹುದು – ಹೀಗೆ ಯಾವ ಹಂತದಲ್ಲಾದರೂ ನಾರ್ಮಲ್ ಎಂದೆನಿಕೊಂಡ ವ್ಯಕ್ತಿ ವಿಶೇಷ ಚೇತನನಾಗುವ ಸಾಧ್ಯತೆಗಳೂ ಇವೆಯೆಂಬುದನ್ನು ಕಿಂಚಿತ್ತೂ ಪರಿಗಣಿಸದೇ, ಹುಂಬತನದಿಂದ ಈ ವರ್ಗೀಕರಣದ ತಾರತಮ್ಯ ಭಾವವನ್ನು ಅನುಮೋದಿಸುವದರ ಬಗ್ಗೆ ಜಿಗುಪ್ಸೆಯೆನಿಸುತ್ತದೆ.
ಇದನ್ನೂ ಓದಿ : New Column: ಆಗಾಗ ಅರುಂಧತಿ; ‘ನಿನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ ಏಕೆ ಗೊತ್ತೆ?’
ವಿಶೇಷಚೇತನರ ಕುರಿತಾದ ಸಮಾವೇಶವೊಂದರಲ್ಲಿ ನಾನು ಭಾಗವಹಿಸಿದ್ದೆ. ಪ್ರತಿಷ್ಠಿತ ಕಂಪನಿಯಲ್ಲಿ Chartered accountant ಆಗಿ ಸೇವೆ ಸಲ್ಲಿಸುತ್ತಿರುವ ವಿಶೇಷ ಚೇತನರಾದ ನನ್ನ ಸ್ನೇಹಿತೆ ರಜನಿ ಹೇಳಿದ ಮಾತುಗಳು ಇನ್ನೂ ನನ್ನನ್ನು ವಿಚಲಿತಗೊಳಿಸುತ್ತವೆ. ‘ಆರ್ಥಿಕ ಸ್ವಾವಲಂಬಿಯಾದ ನಾನು ಅವಿವಾಹಿತ ಮಹಿಳೆ. ನನ್ನ ತಂದೆ- ತಾಯಿಯರು ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ನಾನು ಬ್ಯಾಂಕ್ ಲಾಕರ್ ಅನ್ನು ನಾನೇ ನಿಭಾಯಿಸುತ್ತೇನೆಂದು ಎಷ್ಟು ಬಾರಿ ಹೇಳಿದರೂ, ಬ್ಯಾಂಕ್ ಅಧಿಕಾರಿಗಳು ನನಗೆ ಆ ಸವಲತ್ತನ್ನು ಒದಗಿಸಲಿಲ್ಲ ಏಕೆಂದರೆ ನಾನು ಕಣ್ಣಿಲ್ಲದವಳು. ಕಠಿಣವಾದ ಪರೀಕ್ಷೆಗಳನ್ನು ತೇರ್ಗಡೆ ಹೊಂದಿ ಉನ್ನತ ಉದ್ಯೋಗದಲ್ಲಿದ್ದರೂ ಅವರು ನನ್ನನ್ನು ನಡೆಸಿಕೊಂಡ ರೀತಿ, ನನಗೆ ಲಾಕರ್ ಅನ್ನು ಒಬ್ಬಳೇ ನಿರ್ವಹಿಸಲು ತಕರಾರು ಮಾಡಿದ್ದು ಬಹಳ ನೋವನ್ನುಂಟುಮಾಡಿತು. ನಮ್ಮ ಭಾಷೆಯಲ್ಲಿ ಬಳಸಲಾಗುವ ಕೆಲವು ಅನಾಗರಿಕ ನುಡಿಗಟ್ಟುಗಳು ‘ಕುರುಡು ಪ್ರೇಮ’ ಇತ್ಯಾದಿ ನನಗೆ ತುಂಬಾ ಮುಜುಗರವುಂಟು ಮಾಡುತ್ತವೆ. ಅಂಧತ್ವದ ಬಗ್ಗೆ ಇಂತಹ ಕೀಳರಿಮೆ ಮೂಡಿಸುವ ವಿಶೇಷಣಗಳೇಕಿವೆ? ಎಂದು ಆಕೆ ನೋವಿನಿಂದ ಪ್ರಶ್ನಿಸಿದಾಗ, ಅಲ್ಲಿ ನೆರೆದವರೆಲ್ಲರೂ ತಲೆತಗ್ಗಿಸಬೇಕಾಯಿತು!
ಅಂಗವೈಕಲ್ಯದ ಅಧ್ಯಯನಗಳು ಅದರ ಕುರಿತಾದ ತಾತ್ವಿಕ ಜಿಜ್ಞಾಸೆ, ಸಂಶೋಧನೆ, ವಿಶೇಷ ಚೇತನರ ಹಕ್ಕುಗಳ ಪರವಾಗಿ ಹೋರಾಟ ಮತ್ತು ಸಾಮಾಜಿಕ ಪರಿವರ್ತನೆ – ಇವೆಲ್ಲವುಗಳನ್ನೂ ಒಳಗೊಂಡಿವೆ. ಇದು ಪರಿವರ್ತನಾತ್ಮಕ ಚಿಂತನೆ ಏಕೆಂದರೆ ಇಲ್ಲಿ ಅಂಗವೈಕಲ್ಯವನ್ನು ಒಂದು ದೌರ್ಬಲ್ಯವೆಂದು ನೋಡುವ ದೃಷ್ಟಿಕೋನವನ್ನು ಪ್ರಶ್ನಿಸಲಾಗುತ್ತದೆ. ಕೆಲವರಿಗೆ ಶಾರೀರಿಕ, ಬೌದ್ಧಿಕ ಅಥವಾ ಮಾನಸಿಕ ನ್ಯೂನತೆಗಳಿರಬಹುದು ಆದರೆ ಅಂಗವೈಕಲ್ಯದ ಅಧ್ಯಯನಗಳು ಈ ವಿಕಲತೆಯನ್ನು ಒಂದು ಸಾಮಾಜಿಕ ಚೌಕಟ್ಟನಲ್ಲಿಟ್ಟು ವ್ಯಾಖ್ಯಾನಿಸುತ್ತವೆ. ಇದೊಂದು ಮಾದರಿ ಬದಲಾವಣೆ. ಅಂಗವೈಕಲ್ಯವನ್ನು ಕೇವಲ ವೈಯುಕ್ತಿಕ ನೆಲೆಯಿಂದ ನೋಡುವುದು ಅದರ ಮುಖ್ಯ ರಾಜಕೀಯ ಹುನ್ನಾರಗಳಲ್ಲೊಂದು ವರಸೆ. ಇದರಿಂದ ಯಥಾಸ್ಥಿತಿ ಬದಲಾಗಲು ಸಾಧ್ಯವಿಲ್ಲ. ಅಂಗವೈಕಲ್ಯವನ್ನು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆ ಎಂದು ಅರ್ಥೈಸಿಕೊಳ್ಳದೇ, ಅದನ್ನು ಸಾಮಾಜಿಕ ಹೊಣೆಗಾರಿಕೆಯ ನೆಲೆಯಲ್ಲಿ ಗಮನಿಸಿದಾಗಲೇ ಒಂದು ಸಮಾಜದಲ್ಲಿ ಎಷ್ಟು ಘೋರವಾದ ಅಸಮಾನತೆಗಳಿವೆ, ನಮ್ಮ ಇಡೀ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ವ್ಯವಸ್ಥೆಗಳು ಹೇಗೆ ದೈಹಿಕವಾಗಿ, ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಸಬಲರಾದವರನ್ನು, ಸಮರ್ಥರೆನಿಸಿಕೊಂಡವರನ್ನು ಆರಾಧಿಸುತ್ತವೆ ಮತ್ತು ಅವುಗಳಲ್ಲಿ ಎಂತಹ ಕ್ರೌರ್ಯ, ದರ್ಪ, ಅಧಿಕಾರದ ಲಾಲಸೆಗಳು ಅಂತರ್ಗತವಾಗಿವೆ ಎಂಬ ವಿಚಾರವೂ ಬಯಲಿಗೆ ಬರುತ್ತದೆ. ಅದು ನಮ್ಮ ಮಾನವೀಯತೆಯ ಹೃದಯ ಭಾಗಕ್ಕೇ ಕೊಡಲಿ ಪೆಟ್ಟನ್ನು ನೀಡುತ್ತದೆ, ನಮ್ಮ ಅಸಲಿ ಮಾನವೀಯತೆಯ ಸತ್ವ ಪರೀಕ್ಷೆ ನಡೆಯುವುದೇ ಅಂಗವೈಕಲ್ಯದ ಅಧ್ಯಯನಗಳ ನೆಲೆಯಲ್ಲಿ ಎಂದು ನಾನು ಭಾವಿಸುತ್ತೇನೆ.
ನನ್ನ ಗುರುಗಳಾದ ಪಂಡಿತ್ ಶೇಷಾದ್ರಿ ಗವಾಯಿಯವರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಮತ್ತು ಅವರ ಶಿಷ್ಯೋತ್ತಮರಾದ ಡಾ, ಪುಟ್ಟರಾಜ ಗವಾಯಿಗಳ ನೇರ ಶಿಷ್ಯರು. ತಮ್ಮ ಇಬ್ಬರು ಗುರುಗಳ ಪಾಂಡಿತ್ಯ, ಸಂಗೀತ ಜ್ಞಾನ, ಕಾರ್ಯತತ್ಪರತೆ , ಶಿಷ್ಯ ವಾತ್ಸಲ್ಯವನ್ನು ನೆನೆಸಿ ಭಾವೋದ್ವೇಗದಿಂದ ಅವರು ಎಷ್ಟೋ ಬಾರಿ ನನ್ನ ಬಳಿ ‘ ಅವರ ಅಲೌಕಿಕ ಪಾಂಡಿತ್ಯ ಮತ್ತು ಜ್ಞಾನ ಚಕ್ಷುಗಳಿಗೆ ನಮ್ಮ ಈ ಕಣ್ಣುಗಳ ಸಾಧಾರಣ ದೃಷ್ಟಿ ಯಾವ ಸಾಟಿಯಮ್ಮಾ ? ಅಂತಹ ಅಸಾಮಾನ್ಯ ಕಲಾವಿದರು ಹೇಗೆ ಅಂಧರೆನಿಸಿಕೊಂಡಾರು? ಕಣ್ಣಿಲ್ಲದವರ ಕಣ್ಣಾಗಿ, ದಿಕ್ಕಿಲ್ಲದವರ ಭರವಸೆಯ ಬೆಳಕಾಗಿ, ನೂರಾರು ಬಡ ವಿದ್ಯಾರ್ಥಿಗಳಿಗೆ ಅನ್ನ, ನೀರು, ವಸತಿ, ಸಂಗೀತ ವಿದ್ಯೆಯನ್ನು ಧಾರೆಯೆರೆದು ಅವರನ್ನು ಸಬಲರನ್ನಾಗಿ ಮಾಡಿದ ಮಹಾಮಹಿಮರು’ ಎಂದು ಹೇಳುತ್ತಿದ್ದರು.
ನಾನು ಇಲ್ಲಿ Molyneux’s Problem ಬಗ್ಗೆಯೂ ಸ್ವಲ್ಪ ಹೇಳಲೇಬೇಕು. ಇದು ವಿಲಿಯಂ ಮೋಲಿನಾಕ್ಸ್ ಎಂಬ ಐರಿಷ್ ವಿಜ್ಞಾನಿಯ ಪ್ರಶ್ನೆ. ಇದೊಂದು ಬೌದ್ಧಿಕ ಪ್ರಯೋಗ ಕೂಡ. ಹುಟ್ಟಿನಿಂದ ಅಂಧನಾದ ವ್ಯಕ್ತಿ ಗಂಡು ಅಥವಾ ಹೆಣ್ಣು, ಯಾರೇ ಆಗಿರಲಿ, ಬೇರೆ ಬೇರೆ ಗಾತ್ರದ ಹಾಗೂ ಆಕೃತಿಯ ವಸ್ತುಗಳನ್ನು ಗುರುತಿಸಬಲ್ಲವರಾಗಿದ್ದರೆ, ಆ ವ್ಯಕ್ತಿಗೇನಾದರೂ ದೃಷ್ಟಿ ಬಂದರೆ, ಅವರು ತಾವು ದೃಷ್ಟಿಹೀನರಾಗಿದ್ದಾಗ ಗುರುತು ಹಿಡಿಯುತ್ತಿದ್ದ ವಸ್ತುಗಳನ್ನು ಗುರುತು ಹಿಡಿಯಲು ಸಾಧ್ಯವೇ? ಎಂಬ ಪ್ರಶ್ನೆ. ಮೊದಲ ಬಾರಿಗೆ ಮೋಲಿನಾಕ್ಸ್ನ ಪ್ರಶ್ನೆಯ ಕುರಿತಾಗಿ ಮಂಥನ ನಡೆಸಿದವನು 17 ನೇ ಶತಮಾನದ ತತ್ತ್ವಜ್ಞಾನಿ ಜಾನ್ ಲಾಕ್. ಇದು ಹಾಗಿರಲಿ, ನಾನು ಇದರ ಬಗ್ಗೆ ಸಂಗೀತ ಕಲಾವಿದೆಯಾದ ಹಾಗೂ ದೃಷ್ಟಿ ವಿಶೇಷ ಚೇತನರಾದ ಗೆಳತಿಯೊಬ್ಬರೊಡನೆ ಚರ್ಚಿಸಿದಾಗ, ಅದು ಪಡೆದುಕೊಂಡ ತಿರುವೇ ಭಿನ್ನವಾದದ್ದು. ಆಕೆ ನೋವು, ಹಾಸ್ಯದ ತಿಳಿ ಲೇಪ ಮತ್ತು ವ್ಯಂಗ್ಯ ಬೆರೆತ ಉತ್ತರ ನೀಡುತ್ತ ‘ಈ ಜಿಜ್ಞಾಸೆ ನಡೆಸಲು ಇಚ್ಛಿಸುವವರಿಗೆ, ಒಂದು ಮೂರು- ನಾಲ್ಕು ದಿನಗಳ ಕಾಲ, ಕಣ್ಣುಗಳಿಗೆ ಬಟ್ಟೆ ಕಟ್ಟಿಬಿಡೋಣ. ಆಗ ಅವರಿಗೆ ಒಂದು ದಿನವೇಕೆ? ಒಂದೊಂದು ಘಂಟೆಯೂ ಯುಗದಂತೆ ಭಾಸವಾಗುತ್ತದೆ. ತಾವು ಆಕೃತಿಗಳನ್ನು ಹೇಗೆ ಕಲ್ಪಿಸಿಕೊಂಡೆವೆಂದು ಅವರು ಮೂರು- ನಾಕು ದಿನಗಳ ಬಳಿಕ ಹೇಳಲಿ’ ಎಂದಳು. ಆಕೆಯ ದನಿಯಲ್ಲಿದ್ದ ವಿಷಾದದ ಎಳೆಗೆ ನಾನು ತತ್ತರಿಸಿದ್ದೆ.
ವಿಶೇಷ ಚೇತನರ ಬಗ್ಗೆ ನಡೆಸುವ ಅಧ್ಯಯನಗಳಲ್ಲಿ Access intimacy (ಆತ್ಮೀಯ ಪ್ರವೇಶ) ಎಂಬ ಪರಿಕಲ್ಪನೆಯ ಕುರಿತಾಗಿಯೂ ವಿಶ್ಲೇಷಿಸಲಾಗಿದೆ. ಇದು ಒಬ್ಬ ವಿಶೇಷ ಚೇತನಳಾಗಿರುವ ವ್ಯಕ್ತಿ ಮತ್ತೊಬ್ಬ ದಿವ್ಯಾಂಗ ವ್ಯಕ್ತಿಯ ಸಹವಾಸದಲ್ಲಿ ಅನುಭವಿಸುವ ವಿಶಿಷ್ಟವಾದ ಆಹ್ಲಾದತೆ, ಇದಕ್ಕೆ ಮತ್ತೊಬ್ಬ ವ್ಯಕ್ತಿ ‘ವಿಶೇಷ ಚೇತನ’ರೇ ಆಗಿರಬೇಕೆಂದಿಲ್ಲ. ಕೆಲವೊಮ್ಮೆ ಈ ಅನುಭೂತಿ ನೀಡುವ ಆ ವ್ಯಕ್ಕಿ ವಿಶೇಷ ಚೇತನರ ಹಕ್ಕುಗಳು, ಅವರು ಎದುರಿಸುವ ಸಂಕೀರ್ಣ ಸವಾಲುಗಳು, ಇಲ್ಲಿನ ರಾಜಕೀಯದ ಅರಿವಿಲ್ಲದವರೂ ಆಗಿರಬಹುದು. ಇದು ಹೇಗಿರುತ್ತದೆಂದರೆ ಕಳೆದುಹೋದ ಕೊಂಡಿ ಮತ್ತೆ ಸಿಕ್ಕಿದರೆ ಉಂಟಾಗುವ ನಿರಾಳತೆ, ನಿರುಮ್ಮಳ ಭಾವವನ್ನು ಇದು ನೀಡುತ್ತದೆ. ಹೀಗೆ ನಾವು ಎಷ್ಟೋ ಹೊಸ ಪರಿಭಾಷೆಗಳೊಡನೆ ಅನುಸಂಧಾನ ನಡೆಸಬೇಕಾದ ಅವಶ್ಯಕತೆಯಿದೆ.
ಅಮೇಲಿಯಾ ಕವಾಲೋ ಎಂಬ ಅದ್ಭುತ ನ್ಯತ್ಯಗಾತಿ, ತಾನು ಸರ್ಕಸ್‍ನಲ್ಲಿ ಅತ್ಯಂತ ಕಠಿಣವಾದ, ಮೈ ನವಿರೇಳಿಸುವ ಕಂಬಿಗಳ ಮೇಲೆ ತಿರುಗುವ ಕಸರತ್ತುಗಳನ್ನು ಪ್ರೇಕ್ಷಕರು ನಿಬ್ಬೆರಗಾಗುವಂತೆ ಪ್ರದರ್ಶಿಸುವಾಗ, ಅವರಲ್ಲಿ ಅನೇಕರು ತನ್ನ ಬಳಿ ‘ನಿಮ್ಮ ನೃತ್ಯದಿಂದ ಮಂತ್ರಮುಗ್ಧರಾದ ನಾವು, ನೀವು ಒಬ್ಬ ಅಂಧ ನ್ಯತ್ಯಾಂಗನೆ ಎಂಬುದನ್ನೇ ಮರೆತುಬಿಟ್ಟೆವು’ ಎಂದು ಹೇಳುವಾಗ ತನಗೆ ಬಹಳ ಇರುಸು-ಮುರುಸಾಗುತ್ತಿತ್ತು. ಅದು ತನಗೆ ಎಷ್ಟು ಅಸಹಜವಾದ, ಅಸಂಬದ್ಧ ಪ್ರತಿಕ್ರಿಯೆ ಎಂದೆನಿಸಿತ್ತು. ಯಾರಾದರೂ ಸುಪ್ರಸಿದ್ಧ ಹಾಲಿವುಡ್ ನಟನಾದ ಬ್ರಾಡ್ ಪಿಟ್‍ನ ಬಳಿ ಹೋಗಿ ‘ನೀವೊಬ್ಬ ಶ್ವೇತ ವರ್ಣೀಯ, ಭಿನ್ನಲಿಂಗರತಿಯನ್ನು ಅನುಮೋದಿಸುವ ಪುರುಷನೆಂಬುದನ್ನೇ ಮರೆತಿದ್ದೆ!’ ಎಂದು ಹೇಳುತ್ತಾರೆಯೇ? ತನಗೆ ತನ್ನ ಅಂಧತ್ವ ಒಂದು ಸಹಜ ಸ್ಥಿತಿ ಎಂದು ಈ ಜನರಿಗೇಕೆ ಅರ್ಥವಾಗುವುದಿಲ್ಲ? ಎಂದು ಗಂಭೀರವಾಗಿ ಪ್ರಶ್ನಿಸುತ್ತಾರೆ. ನಿಜಕ್ಕೂ ನಮ್ಮನ್ನು ವಿಚಲಿತಗೊಳಿಸುವ ಪ್ರಶ್ನೆ ಇದು. ಅಂಗವೈಕಲ್ಯದ ಅಧ್ಯಯನಗಳು ಒದಗಿಸುವ ಹೊಸ ದೃಷ್ಟಿಕೋನಗಳು, ಒಳನೋಟಗಳೊಡನೆ, ವಿಶೇಷ ಚೇತನರನ್ನು ಕೆಳ ದರ್ಜೆಯ ವ್ಯಕ್ತಿಗಳೆಂದು ನೋಡುವ ಬೂಟಾಟಿಕೆಯ ಸಮಾಜ, ಪ್ರಾಮಾಣಿಕವಾಗಿ ಮುಖಾಮುಖಿಯಾಗಲು ತಯಾರಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಬೇಕಿದೆ.
ಪ್ರತಿಕ್ರಿಯೆಗಾಗಿ : tv9kannadadigital@gmail.com
(ಮುಂದಿನ ಯಾನ : 14.5.2022)
ಈ ಅಂಕಣದ ಎಲ್ಲಾ ಬರಹಗಳನ್ನೂ ಇಲ್ಲಿ ಓದಿ : https://tv9kannada.com/tag/vaishaliyaana
Published On - 11:11 am, Sat, 30 April 22