Qatar Mail : ಮಲಯಾಳಿಗಳು ನಮ್ಮ ಕನ್ನಡದ ನಾಯಕನನ್ನು ಅನುಕರಣೆ ಮಾಡುವುದು ಕಂಡಾಗ ಬಹಳ ಖುಷಿ

Cinema : ಇಂಟರ್ವೆಲ್​ನಲ್ಲಿ ಪಕ್ಕಕ್ಕೆ ತಿರುಗಿದರೆ ಅವ ಸೀಟಿಗೊರಗಿ ಆರಾಮವಾಗಿ ನಿದ್ರೆ ಮಾಡುತ್ತಿದ್ದ. ಕೆಟ್ಟ ಕೋಪ ಬಂದು, “ಏಳಯ್ಯ, ಮೇಲಕ್ಕೆ,” ಎಂದೆ. ಈ ಕೋಪದ ಸಮಯದಲ್ಲೇ ನೋಡಿ ನಮ್ಮ ಲೋಕಲ್ ಮಂಡ್ಯ ಭಾಷೆ ನನ್ನ ನಾಲಿಗೆ ಮೇಲೆ ನಲಿದಾಡುವುದು.

Qatar Mail : ಮಲಯಾಳಿಗಳು ನಮ್ಮ ಕನ್ನಡದ ನಾಯಕನನ್ನು ಅನುಕರಣೆ ಮಾಡುವುದು ಕಂಡಾಗ ಬಹಳ ಖುಷಿ
Follow us
|

Updated on: Apr 29, 2022 | 1:41 PM

ಕತಾರ್ ಮೇಲ್ | Qatar Mail : ಗೆಳೆಯನೊಬ್ಬ ‘ಕೆಜಿಎಫ್ 2’ ನೋಡಲು ಹೋಗುತ್ತಿದ್ದೀರಾ ಎಂದು ಅದು ಬಿಡುಗಡೆಯಾಗುವ ಮೂರ್ನಾಲ್ಕು ದಿನಗಳ ಮುಂಚೆ ಕೇಳಿದ. ಕತಾರಿನಲ್ಲಿ ರಂಜಾನ್ ಸಮಯದಲ್ಲಿ ಹೊಸ ಚಿತ್ರಗಳು ಬಿಡುಗಡೆಯಾಗುವುದಿಲ್ಲವೆಂದು ಹೇಳಿ ಸುಮ್ಮನಾದೆ. ಆದರೆ ಆ ಚಿತ್ರ ಎಂದಿನ ದಿನಗಳ ಹಾಗೆ ಒಂದು ದಿನ ಮುಂಚಿತವಾಗಿಯೇ, ಅಂದರೆ ಏಪ್ರಿಲ್ 13ರಂದು ಇಲ್ಲಿ ಬಿಡುಗಡೆಯಾಯಿತು. ನನ್ನ ಗಂಡ ಮತ್ತವನ ಗೆಳೆಯರು ಮೊದಲ ದಿನದ ಮೊದಲ ಶೋಗೆ ಮುಂಚಿತವಾಗಿಯೇ ಕಿಕೆಟ್ ಬುಕ್ ಮಾಡಿಕೊಂಡು ಬುಧವಾರ ಬರುವುದನ್ನೇ ಕಾದು, ಕೊನೆಗೂ ಚಿತ್ರವನ್ನು ತಮಿಳಿನಲ್ಲಿ ನೋಡಿಕೊಂಡು ಬಂದರು. ಈ ಚಿತ್ರ ಹದಿನೈದು ವರ್ಷ ಮೇಲಿನವರಿಗಾಗಿರುವುದರಿಂದ ನಾನು, ಮಗ ಎಂದಿನಂತೆ ಮನೆಯಲ್ಲಿಯೇ ಉಳಿದೆವು. 2018ರಲ್ಲಿ ‘ಕೆ.ಜಿ.ಎಫ್’ ಬಿಡುಗಡೆಯಾದಾಗಲೂ ಮೊದಲ ದಿನದ ಮೊದಲ ಪ್ರದರ್ಶನ ನೋಡಿಕೊಂಡು ಬಂದಿದ್ದರು ಅವನು, ಮತ್ತವನ ಗೆಳೆಯರು. ಮಲಯಾಳಿಗಳು ನಮ್ಮ ಕನ್ನಡದ ಚಿತ್ರವನ್ನು (ತಮಿಳಿನಲ್ಲೇ ಆದರೂ ಪರವಾಗಿಲ್ಲ) ಥಿಯೇಟರಿನಲ್ಲಿ ನೋಡಿ ನಮ್ಮ ಕನ್ನಡದ ನಾಯಕನನ್ನು ಅನುಕರಣೆ ಮಾಡುವುದು ಕಂಡಾಗ ಬಹಳ ಖುಷಿಯಾಗಿತ್ತು ಆಗಲೂ, ಈಗಲೂ. ಚೈತ್ರಾ ಅರ್ಜುನಪುರಿ (Chaitra Arjunpuri)

(ಪತ್ರ 9)

‘ಮುಂಗಾರು ಮಳೆ’ ಪಜೀತಿ: 

ನನಗೆ ನೆನಪಿರುವ ಹಾಗೆ, ‘ಕೆ.ಜಿ.ಎಫ್ 2’ ಇದುವರೆಗೂ ನನ್ನ ಗಂಡ ನೋಡಿದ ಕನ್ನಡದ ನಾಲ್ಕನೇ ಚಿತ್ರ. ನಾನೂ, ಅವನೂ ಮನೆಯಲ್ಲಿ ಕೂತು ಕನ್ನಡದಲ್ಲೇ (ಸಬ್ ಟೈಟಲ್ ಜೊತೆಗೆ) ನೋಡಿದ, ಮತ್ತು ಅವನು ಮೆಚ್ಚಿಕೊಂಡ ಚಿತ್ರ ‘ಯು ಟರ್ನ್’. ಅವನು ಮೊದಲ ಸಲ ನೋಡಿದ, ಅದೂ ಅರ್ಧಂಬರ್ದ ಕನ್ನಡ ಚಿತ್ರ, ‘ಮುಂಗಾರು ಮಳೆ’. ಆ ಸಿನೆಮಾದ ಹಾಡುಗಳು ಕಿವಿಗೆ ಬಿದ್ದಾಗಲೆಲ್ಲಾ ಈಗಲೂ ಅವನನ್ನು ಗೇಲಿ ಮಾಡುತ್ತಿರುತ್ತೇನೆ. ಆ ಚಿತ್ರ ಬಿಡುಗಡೆಯಾಗಿ ಎಂಟು ಅಥವಾ ಒಂಬತ್ತು ತಿಂಗಳುಗಳೇ ಕಳೆದಿದ್ದರೂ, ಕೆಲವು ಥಿಯೇಟರುಗಳಲ್ಲಿ ಇನ್ನೂ ಪ್ರದರ್ಶನವಾಗುತ್ತಿತ್ತು. ಎಲ್ಲ ಕಡೆಯೂ ಅದರ ಹಾಡುಗಳದ್ದೇ ಕಾರುಬಾರು, ಅದರಲ್ಲೂ “ಅನಿಸುತಿದೆ ಯಾಕೋ ಇಂದು…” ಜನರ ಎವರ್ ಗ್ರೀನ್ ಫೇವರಿಟ್​ಗಳಲ್ಲಿ ಈಗಲೂ ಎದ್ದು ನಿಲ್ಲುತ್ತದೆ. ಇದನ್ನು ಬರೆಯುವಾಗಲೂ ನನ್ನ ಲ್ಯಾಪ್ಟಾಪ್ ಬ್ಯಾಕ್​ಗ್ರೌಂಡಿನಲ್ಲಿ ಇದೇ ಹಾಡು ಪ್ಲೇ ಆಗುತ್ತಿದೆ. ಅಂಥಾ ಕನ್ನಡ ಚಿತ್ರ ನೋಡಲು ಥಿಯೇಟರಿಗೆ ಹೋದೆವು. ಚಿತ್ರ ಶುರುವಾಗಿ ಅರ್ಧ ಗಂಟೆಯೂ ಕಳೆದಿರಲಿಲ್ಲ, ಪಕ್ಕದಲ್ಲಿ ಕೂತಿದ್ದ ಗಂಡ ನಿದ್ರೆಗೆ ಜಾರಿದ್ದು ನನ್ನ ಅರಿವಿಗೇ ಬಂದಿರಲಿಲ್ಲ.

ಇಂಟರ್ವೆಲ್ ನಲ್ಲಿ ಪಕ್ಕಕ್ಕೆ ತಿರುಗಿ ನೋಡಿದರೆ ಅವನು ಸೀಟಿಗೊರಗಿ ಆರಾಮವಾಗಿ ನಿದ್ರೆ ಮಾಡುತ್ತಿದ್ದ. ನನಗೆ ಕೆಟ್ಟ ಕೋಪ ಬಂದು, “ಏಳಯ್ಯ, ಮೇಲಕ್ಕೆ,” ಎಂದೆ ನನ್ನ ಟಿಪಿಕಲ್ ಮಂಡ್ಯ ಭಾಷೆಯಲ್ಲಿ. ಈ ಕೋಪದ ಸಮಯದಲ್ಲೇ ನೋಡಿ ನಮ್ಮ ಲೋಕಲ್ ಮಂಡ್ಯ ಭಾಷೆ ನನ್ನ ನಾಲಿಗೆ ಮೇಲೆ ನಲಿದಾಡುವುದು. ಏನೋ ಆಯಿತೆಂದು ಗಡಬಡಿಸಿ ಮೇಲೆದ್ದ ಮನುಷ್ಯ ಕಣ್ಣುಜ್ಜಿಕೊಂಡು ಸುತ್ತಮುತ್ತಲೂ ನೋಡಿದ. “ವಾಟ್ ಹ್ಯಾಪೆನ್ಡ್?” ಚಿತ್ರ ಮುಗಿಯಿತು ನಡಿ ಮನೆಗೆ ಎಂದೆ. ನಿಜವಿರಬೇಕೆಂದುಕೊಂಡು ಪಕ್ಕದ ಸೀಟಿನಲ್ಲಿದ್ದ ಹೆಲ್ಮೆಟ್ಟಿಗೆ ಕೈಹಾಕಿ ಹೊರಡಲನುವಾದವನಿಗೆ ಇಂಟರ್ವೆಲ್ ಎಂದು ಮನವರಿಕೆಯಾಯಿತು, ನನ್ನ ಕೋಪವೂ ಅರ್ಥವಾಯಿತು. ಈಗ ಪೂರ್ತಿ ಚಿತ್ರ ನೋಡುತ್ತೇನೆ ಎಂದವನು ಮತ್ತೆ ಹತ್ತೇ ನಿಮಿಷದಲ್ಲಿ ನಿದ್ರೆಗೆ ಜಾರಿಬಿಟ್ಟಿದ್ದ.

ಒಂದರ್ಥದಲ್ಲಿ, ತಪ್ಪು ನನ್ನದೇ. ಕನ್ನಡ ಬರದ ಮಲಯಾಳಿ ಗಂಡನನ್ನು ಕನ್ನಡ ಚಿತ್ರ ನೋಡಲು ಕರೆದುಕೊಂಡು ಹೋಗುವುದಕ್ಕಿಂತ ಮುಂಚೆ ನಾನು ಯೋಚಿಸಬೇಕಾಗಿತ್ತು. ಅದೇ ಮೊದಲು, ಅದೇ ಕೊನೆ, ಮತ್ತೆಂದೂ ಅವನ ಜೊತೆ ಕನ್ನಡ ಚಿತ್ರಗಳನ್ನು ನಾನು ಥಿಯೇಟರಿನಲ್ಲಿ ನೋಡಿಯೇ ಇಲ್ಲ!

‘ಕಬಾಲಿ’ಯ ಹವಾ:

ಇಲ್ಲಿ ನನ್ನ ಗಂಡ ಮತ್ತವನ ಗೆಳೆಯರು ಥಿಯೇಟರಿಗೆ ಸಿನಿಮಾ ನೋಡಲು ಹೋಗುವ ಪರಿ ಕೇಳಿದರೆ ನಗುತ್ತೀರೋ, ಬೆಚ್ಚಿ ಬೀಳುತ್ತಿರೋ ಗೊತ್ತಿಲ್ಲ, ಆದರೂ ಆ ಹುಚ್ಚಾಟಗಳ ಬಗ್ಗೆ ಹೇಳುತ್ತೇನೆ. ಕೆಲವು ವರ್ಷಗಳ ಹಿಂದೆ, ನಿಖರವಾಗಿ ಹೇಳಬೇಕೆಂದರೆ 2016ರಲ್ಲಿ, ದುಬೈನಲ್ಲಿ ವಾಸವಿರುವ ಗೆಳೆಯನೊಬ್ಬ ಹಲವು ತಿಂಗಳುಗಳ ಬಳಿಕ ನನ್ನ ಗಂಡನಿಗೆ ಕರೆ ಮಾಡಿ ‘ಕಬಾಲಿ’ ಚಿತ್ರದ ಟಿಕೆಟ್ ಸಿಗಲು ಏನಾದರೂ ದಾರಿ ಇದೆಯೇ ಎಂದು ಕೇಳಿದ. ನನಗೆ ಇವರ ಹುಚ್ಚಾಟ ಕಂಡು ನಗಬೇಕೋ ಅಳಬೇಕೋ ಒಂದೂ ಅರ್ಥವಾಗಲಿಲ್ಲ. ನಾವಿರುವುದು ದೋಹಾದಲ್ಲಿ, ಆತನಿಗೆ ಟಿಕೆಟ್ ಬೇಕಿರುವುದು ಪಕ್ಕದ ದೇಶದ ದುಬೈನಲ್ಲಿ!

ಕೊನೆಗೆ ಆತ ಎರಡು, ಮೂರು ದಿನ ಕರೆ ಮಾಡಿ ಟಿಕೆಟಿಗೆ ದಂಬಾಲು ಬಿದ್ದಾಗ ನನ್ನ ಗಂಡ ತನಗೆ ದುಬೈನಲ್ಲಿ ಪರಿಚಯವಿರುವ ತಮಿಳು ಹುಡುಗರಿಗೆಲ್ಲಾ ಫೋನಾಯಿಸಿ ಟಿಕೆಟ್ ಬೇಕೆಂದು ವಿಚಾರಿಸಿದ, ಆದರೆ ಏನೂ ಪ್ರಯೋಜನವಾಗಲಿಲ್ಲ. ಏಕೆಂದರೆ ಗೆಳೆಯ ಕೇಳುತ್ತಿದ್ದ ಟಿಕೆಟ್ ಮೊದಲ ದಿನದ ಮೊದಲ ಶೋನದ್ದು. ಚಿತ್ರದ ಟಿಕೆಟ್ ಸಿಗದಿರುವುದಕ್ಕೆ ಇಷ್ಟೊಂದು ನಿರಾಸೆಯೇ ಎಂದುಕೊಳ್ಳಬೇಡಿ. ವಿಷಯ ಇರುವುದೇ ಇಲ್ಲಿ. ನನ್ನ ಗಂಡ ಮತ್ತವನ ಗೆಳೆಯರೆಲ್ಲರೂ ರಜನಿಕಾಂತ್ ನ ಕಟ್ಟಾ ಅಭಿಮಾನಿಗಳು. ಅವರ ಪಾಲಿಗೆ “ತಲೈವರ್” ಭೂಮಿಯ ಮೇಲೆ ನಡೆದಾಡುವ ದೇವರು. ರಜನಿಯ ಪ್ರತಿಯೊಂದು ಸಿನಿಮಾವನ್ನೂ ಕಾದು ನೋಡುವವರು. ಅವನ ಡೈಲಾಗುಗಳನ್ನು ದಿನಕ್ಕೊಮ್ಮೆಯಾದರೂ ಹೇಳಿ ನೆಮ್ಮದಿ ಕಂಡುಕೊಳ್ಳುವವರು. ಆತನ ಪ್ರತಿಯೊಂದು ಸಿನಿಮಾವನ್ನು ಐದಾರು ಬಾರಿಯಾದರೂ ನೋಡುವವರು. ಮಾತ್ರವಲ್ಲ, ಹತ್ತಿಪ್ಪತ್ತು ಸಲ ನೋಡಿದರೂ ಮೊದಲನೇ ಸಲ ನೋಡುವಷ್ಟೇ ಆಸಕ್ತಿ, ಕುತೂಹಲ ಮತ್ತು ವ್ಯಾಮೋಹದಿಂದ ನೋಡುವ ಅಭಿಮಾನಿಗಳು.

“ಕಬಾಲಿ” ಚಿತ್ರ ಬಿಡುಗಡೆಗೆ ಸಿದ್ಧವಾಗಿದೆಯೆಂದು ಟ್ರೈಲರ್ ರಿಲೀಸ್ ಆಗಿದ್ದೇ ತಡ ಇವರೆಲ್ಲರ ಮೈಯಲ್ಲಿ ಮಿಂಚು ಸುಳಿದ ಅನುಭವವಾಗಿಬಿಟ್ಟಿತ್ತು. ಭೇಟಿ ಮಾಡಿದರೂ ಅದೇ ವಿಚಾರ, ಕರೆ ಮಾಡಿದರೂ ಅದೇ ವಿಚಾರ. ಬಹುಶಃ ಕನಸಿನಲ್ಲೂ ಇವರನ್ನು ಕಬಾಲಿ ಕಾಡಿದ್ದರೆ ಅಚ್ಚರಿಯೇನಿಲ್ಲ.

ಅದೇ ಸಮಯದಲ್ಲಿ ನಾನು, ನನ್ನ ಮಗ ಎರಡು ತಿಂಗಳು ರಜೆ ಮುಗಿಸಿ ಭಾರತದಿಂದ ದೋಹಾಕ್ಕೆ ಮರಳಿದಾಗ, ನನ್ನ ಪುಟ್ಟ ಮಗನಿಗೆ ಅವನ ಮೆಚ್ಚಿನ “The wheels on the bus” ಹಾಡು ನೋಡುವ ತವಕವಾದರೆ, ನನ್ನ ಪತಿಗೆ “ಕಬಾಲಿ”ಯ ಟ್ರೈಲರನ್ನು ನಮಗೆ ತೋರಿಸುವ ತವಕ. ಮಗ ನೋಡುತ್ತಿದ್ದ ಹಾಡನ್ನು ಮಧ್ಯದಲ್ಲಿ ನಿಲ್ಲಿಸಿ ಟ್ರೈಲರ್ ತೋರಿಸುತ್ತಾ, “ಸಿದ್, ಸೀ ರಜನಿ ಅಂಕಲ್,” ಎಂದು ಟಿವಿಯತ್ತ ಬೊಟ್ಟು ಮಾಡಿ ನನ್ನ ಗಂಡ ನಿಂತರೆ, ಅಚಾನಕ್ಕಾಗಿ ತನ್ನ ಹಾಡು ನಿಲ್ಲಿಸಿ ಯಾರನ್ನೋ ಅಪ್ಪ ತೋರಿಸುತ್ತಿದ್ದಾನೆ ನೋಡು ಎಂದು ದೂರುವಂತೆ ಟಿವಿಯತ್ತ ಬೆರಳು ಮಾಡಿ “ಏ… ಡಾ, ಏ…ಡಾ” ಎನ್ನುತ್ತಾ ನನ್ನನ್ನೊಮ್ಮೆ, ತನ್ನ ಅಪ್ಪನನ್ನೊಮ್ಮೆ ನೋಡುತ್ತಾ ಒಂದೂವರೆ ವರ್ಷದ ಮಗ ಗದ್ದಲವೆಬ್ಬಿಸಿದ್ದ. ಅಪ್ಪ ಮಗನನ್ನು ಸಂತೈಸುವಂತೆ, “ನೆರುಪ್ಪು ಡಾ, ನೆರುಂಗು ಡಾ, ಮುಡಿಯುಮಾ?” (ನಾನು ಬೆಂಕಿ ಕಣೋ, ಹತ್ತಿರ ಬಾರೋ, ನಿನ್ನಿಂದ ಸಾಧ್ಯವೇ?) ಎಂದು ರಜನಿಯ ಸ್ಟೈಲಿನಲ್ಲಿ ಹಾಡಿದರೂ ಪ್ರಯೋಜನವಾಗಿರಲಿಲ್ಲ. ಮಗನಿಗೆ ಮಕ್ಕಳ ಹಾಡು ಬೇಕು, ಅವನ ಅಪ್ಪನಿಗೆ ಕಬಾಲಿ ಬೇಕು. ಇಬ್ಬರ ಮಧ್ಯದಲ್ಲಿ ನನಗೆ ತಲೆ ಚಿಟ್ಟು ಹಿಡಿದಂತಾಗಿ, “ಇದು ಮುಡಿಯುಮ್” (ಇದು ಸಾಧ್ಯ) ಎಂದು ಟಿವಿ ಆರಸಿದ್ದೆ.

ಈ ನಡುವೆ ದಿ ಅನ್ ರಿಯಲ್ ಟೈಮ್ಸ್ ಎನ್ನುವ ಜಾಲತಾಣದಲ್ಲಿ ‘ಕಬಾಲಿ’ ಚಿತ್ರವನ್ನು ನಿರ್ಮಾಪಕರು ಪ್ರತಿ 15 ದಿನಗಳಿಗೊಮ್ಮೆ ಒಂದು ನಿಮಿಷದ ಟ್ರೈಲರ್ ಗಳ ರೂಪದಲ್ಲಿ ಎರಡು ವರ್ಷಗಳಲ್ಲಿ ಬಿಡುಗಡೆ ಮಾಡುತ್ತಾರೆ, ಹಂಚಿಕೆದಾರರಿಗೆ ಪಡೆದ ಹಣವನ್ನು ಹಿಂತಿರುಗಿಸುತ್ತಾರೆ ಎನ್ನುವ ಹಾಸ್ಯ ಲೇಖನವೊಂದು ಪ್ರಕಟವಾಯಿತು. ಇದನ್ನು ನೋಡಿದ ನನ್ನ ಗಂಡನ ಗೆಳೆಯನೊಬ್ಬ ಫೇಸ್ ಬುಕ್ಕಿನಲ್ಲಿ ತನ್ನ ಸಂಕಟವನ್ನು ಹಂಚಿಕೊಂಡ. ಆ ಲೇಖನವನ್ನಾಗಲಿ, ಅದು ಪ್ರಕಟವಾದ ಜಾಲತಾಣವನ್ನಾಗಲಿ ಗೆಳೆಯ ನೋಡಲು ಹೋಗಿರಲಿಲ್ಲ. ಅವನು ಓದಿದ್ದು ಕೇವಲ ಅದರ ಶೀರ್ಷಿಕೆಯನ್ನು: “Kabali producers decide to cancel the release of the film and release the same as many ‘teasers’. ಅವನನ್ನು ಸಂತೈಸಲು ಮತ್ತೊಂದಷ್ಟು ಗೆಳೆಯರು ಲೈಕು, ಕಾಮೆಂಟುಗಳನ್ನು ಮಾಡಿದ್ದರು. ಎಲ್ಲರ ಮಾತಿನಲ್ಲೂ ಸಂತಾಪ, ಕೋಪ.

ಇದನ್ನೂ ಓದಿ : New Column: ಆಗಾಗ ಅರುಂಧತಿ; ‘ನಿನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ ಏಕೆ ಗೊತ್ತೆ?’

ನಾನು ಲೇಖನವನ್ನು ಓದಿ ಅದು ಸುಮ್ಮನೆ ವ್ಯಂಗ್ಯವಾಗಿ ಬರೆದಿರುವ ಲೇಖನ, ನಿಮ್ಮಂಥ ಜನರನ್ನು ರೇಗಿಸಲು ಲೇಖಕ ಮಾಡಿರುವ ಹುನ್ನಾರ ಎಂದು ಎಷ್ಟು ಹೇಳಿದರೂ ಗೆಳೆಯನಿಗೆ ಸಮಾಧಾನವಾಗಿರಲಿಲ್ಲ. “ನೀನು ಹೇಳಿದ ಹಾಗೆಯೇ ಇದು ತಮಾಷೆಯಾಗಿರಲಿ ಎಂದು ದೇವರನ್ನು ಪ್ರಾರ್ಥಿಸುತ್ತಿದ್ದೇನೆ,” ಎಂದು ಅವನು ಹೇಳಿದಾಗ ನನಗೆ ತಲೆ ತಿರುಗುವುದೊಂದೇ ಬಾಕಿ. ಸತ್ಯ ಹೇಳಿದರೂ ಕೇಳಲು ತಯಾರಿಲ್ಲವಲ್ಲ ಎಂದುಕೊಂಡು, ನನ್ನ ಗಂಡನ ಕೈಯಲ್ಲಿ ಅವನಿಗೆ ಕರೆ ಮಾಡಿಸಿ ಸಮಾಧಾನ ಪಡಿಸಿದೆ. “ಥ್ಯಾಂಕ್ ಗಾಡ್! ಅದು ಕೇವಲ ತಮಾಷೆಗೆ ಬರೆದ ಲೇಖನವೇ? ಎರಡು ವರ್ಷಗಳಿಂದ ತಲೈವರ್ ಚಿತ್ರಕ್ಕೆ ಕಾಯುತ್ತಿದ್ದೇವೆ. ಇಂಥಾ ವಿಚಾರದಲ್ಲಿ ಆ ಲೇಖಕ ಹೇಗೆ ತಮಾಷೆ ಮಾಡಿದ್ದಾನೆ ನೋಡು, ಗುರು,” ಎಂದು ನಿಟ್ಟುಸಿರುಬಿಟ್ಟ ಗೆಳೆಯನನ್ನು ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೆ.

ಸಿನಿಮಾ ನೋಡಲು ಚೆನ್ನೈಗೆ:

ಅಸಲಿಗೆ, ಇವರ ಹುಚ್ಚಾಟದ ಪರಿಚಯ ನನಗಾಗಿದ್ದು ಬೆಂಗಳೂರಿನಲ್ಲಿದ್ದಾಗ. ನಾನಾಗ ಈ ಮಲಯಾಳಿ ಹುಡುಗನನ್ನು ಮದುವೆಯಾಗಿರಲಿಲ್ಲ. ರಜನಿಯ ‘ಶಿವಾಜಿ’ ಬಿಡುಗಡೆಯ ಸುದ್ದಿ ಕಿವಿಗೆ ಬಿದ್ದದ್ದೇ ತಡ, ಚೆನ್ನೈನಲ್ಲಿರುವ ಗೆಳೆಯರಿಗೆ ಒಂದಷ್ಟು ಕರೆ ಮಾಡಿ ತನ್ನ ಟಿಕೆಟ್ ಖಾತ್ರಿ ಪಡಿಸಿಕೊಂಡಿದ್ದ ನನ್ನ ಹುಡುಗ. ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಅನೇಕರ ಪರಿಚಯವಿದ್ದುದ್ದರಿಂದ ಬಿಡುಗಡೆಯ ಮುನ್ನದ ಶೋ ನೋಡಲು ಟಿಕೆಟ್ ಆತನ ದಾರಿ ಕಾಯುತ್ತಾ ಚೆನ್ನೈನಲ್ಲಿ ಕುಳಿತಿರುತ್ತಿತ್ತು. ಅರೆಕ್ಷಣ ನನಗೇ ಅನುಮಾನ, ಪ್ರಾಯಶಃ ತಮಾಷೆ ಮಾಡುತ್ತಿರಬಹುದೆಂದು. ಇಲ್ಲ, ಆತ ನಿಜಕ್ಕೂ ರಜನಿಯ ಚಿತ್ರ ನೋಡಲು ಚೆನ್ನೈಗೆ ಹೊರಟು ನಿಂತಿದ್ದ.

ಮಾರನೆಯ ದಿನ ರಾತ್ರಿ ಮಡಿವಾಳದಿಂದ ಚೆನ್ನೈ ಬಸ್ ಹತ್ತಿ, ಮುಂಜಾನೆ 4.45ಗೆ ಪ್ರದರ್ಶನಗೊಂಡ ‘ಶಿವಾಜಿ’ ಚಿತ್ರವನ್ನು ಕಂಡು, ಸಂಜೆಯಾಗುವ ಮುನ್ನ ಬೆಂಗಳೂರು ಸೇರಿದ್ದ. ಮೊದಲ ಪ್ರದರ್ಶನವನ್ನು ತಪ್ಪಿಸದೆ ನೋಡಿದ ತೃಪ್ತಿ, ಸಂತಸ ಅವನ ಮೊಗದ ಮೇಲೆ ಲಾಸ್ಯವಾಡುತ್ತಿತ್ತು. ನಿದ್ದೆಗೆಟ್ಟ ಆಯಾಸವನ್ನು, ಪ್ರಯಾಣದ ಮೈ ಕೈ ನೋವನ್ನು ರಜನಿ ಮತ್ತವನ ಚಿತ್ರ ಮರೆಸಿತ್ತು.

ರಜನಿಯ ಪ್ರತಿ ಚಿತ್ರ ಬಿಡುಗಡೆಯಾದಾಗಲೂ ಇದೇ ಕಥೆ. ರಜನಿಕಾಂತ್ ನ ಹುಚ್ಚು ನನ್ನ ಗಂಡನಿಗೆ ಬಾಲ್ಯದಿಂದಲೂ ಇದ್ದು, ಕಾಲೇಜಿನ ಸಮಯದಲ್ಲಿ ಗೆಳೆಯರು ಮೊದಲ ದಿನದ ಮೊದಲ ಪ್ರದರ್ಶನದ ಟಿಕೆಟ್ ಕೊಳ್ಳಲು ರಾತ್ರಿ 1 ಗಂಟೆಯಿಂದಲೂ ಕ್ಯೂ ನಿಲ್ಲುತ್ತಿದ್ದ ಬಗ್ಗೆ ಹಲವು ಬಾರಿ ಕೇಳಿ ನಕ್ಕಿದ್ದೇನೆ. ‘ಕಬಾಲಿ’ ಚಿತ್ರಕ್ಕೆ ಅವನು ಟಿಕೆಟ್ ಕೊಂಡ ಬಗ್ಗೆಯೂ ನಗೆ ಬರಿಸುತ್ತದೆ. ಹಣ್ಣು ತರಕಾರಿ ತರಲು ಸೂಪರ್ ಮಾರ್ಕೆಟ್ಟಿಗೆ ಹೋಗಿದ್ದ ನಮಗೆ, ಗೆಳೆಯನೊಬ್ಬ ‘ಕಬಾಲಿ’ ಟಿಕೆಟ್ ಬುಕಿಂಗ್ ಶುರುವಾಗಿದೆಯೆಂದು ಫೋನ್ ಮಾಡಿದ. ಕರೆ ಬಂದ ಹತ್ತೇ ನಿಮಿಷದಲ್ಲಿ ನಾವು ಸಿಟಿ ಸೆಂಟರ್ ನ ಸಿನಿಮಾ ಥಿಯೇಟರ್ ಮುಂದೆ ಹಾಜರ್! ನೋಡಿದರೆ, ಆಗಲೇ ತಮಿಳು ಮಾತನಾಡುತ್ತಿದ್ದ ಹತ್ತನ್ನೆರಡು ಭಾರತೀಯರು ಹಾಗೂ ಶ್ರೀಲಂಕಾದವರು ಟಿಕೇಟಿಗೆ ಸಾಲುಗಟ್ಟಿ ನಿಂತಿದ್ದರು. ಎಲ್ಲರೂ ತಲಾ ಏಳೆಂಟು ಟಿಕೆಟ್ ಗಳನ್ನು ಕೊಳ್ಳುತ್ತಿದ್ದರೆ, ತನ್ನ ಸರದಿಗಾಗಿ ಕಾಯುತ್ತಿದ್ದ ನನ್ನ ಗಂಡನ ಮುಖದಲ್ಲಿ ಆತಂಕ. ಕೊನೆಗೆ, ತನ್ನ ಸರದಿ ಬಂದಾಗ ಮುಂದಿನ ಸಾಲಿನಲ್ಲಿ ಉಳಿದಿದ್ದ ಹತ್ತೂ ಟಿಕೆಟುಗಳನ್ನು ಕೊಂಡುಕೊಂಡು ತನ್ನ ಗೆಳೆಯರಿಗೆ ಟಿಕೆಟ್ ಸಿಕ್ಕ ಸಂತೋಷವನ್ನು ಹಂಚಿಕೊಂಡಿದ್ದ.

ಪ್ರತಿ ದಿನವೂ ಬಿಡುಗಡೆಯ ಆ ಗುರುವಾರವನ್ನು ಚಾತಕ ಪಕ್ಷಿಯಂತೆ ಎದುರು ನೋಡುವುದೇ ಆಗಿತ್ತು. ಆ ದಿನ ಆಫೀಸಿನಿಂದ ಬಂದವನೇ, ಏಳು ಗಂಟೆಗೆಲ್ಲಾ ಗೆಳೆಯರೊಡನೆ ಸಿಟಿ ಸೆಂಟರ್ ನಲ್ಲಿ ಹಾಜರಾಗಿದ್ದ. ಫೈನಲ್ ಎಕ್ಸಾಂಗೂ ಅವರು ಅಷ್ಟು ನಿಯತ್ತಿನಿಂದ, ಸಮಯಕ್ಕೆ ಮುನ್ನ ಹಾಜರಾದದ್ದು ನನಗೆ ಅನುಮಾನವೇ!

ಚಿತ್ರ ಕಂಡ ಬಳಿಕ ಅತಿಯಾದ ನಿರೀಕ್ಷೆ ಬೇಡವೆಂದು ಇತರೆ ಗೆಳೆಯರಿಗೆ ಕಿವಿಮಾತು ಹೇಳಿದ್ದ ಗಂಡ, ಆ ಬಳಿಕ ಏನಿಲ್ಲವೆಂದರೂ ಅದೇ ಚಿತ್ರವನ್ನು ಏಳೆಂಟು ಸಲ ನೋಡಿದ್ದ. ಆಗ ಮನೆಯಲ್ಲಿ ಸದಾ ಕೇಳುವ, ಗುನುಗುವ ಪದ “ನೆರುಪ್ಪು ಡಾ, ನೆರುಂಗು ಡಾ, ಮುಡಿಯುಮಾ?” ಮಾತ್ರವೇ ಆಗಿತ್ತು.

ದೋಹಾದಲ್ಲಿ ರಜನಿಯ ಎಲ್ಲಾ ಚಿತ್ರಗಳೂ ತೆರೆಕಾಣುವುದರಿಂದ ಸ್ವಲ್ಪ ಸಮಾಧಾನ. ಒಂದು ವೇಳೆ ಹಾಗಾಗದೆ ಹೋಗಿದ್ದಿದ್ದರೆ, ನನ್ನ ಗಂಡ ಚಿತ್ರ ನೋಡಲು ಭಾರತಕ್ಕೆ ಹೋಗಬೇಕಾಗುತ್ತಿತ್ತು, ಹೋಗುತ್ತಿದ್ದ ಸಹ! ಇಲ್ಲದ್ದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಬಿಡಿ, ಸಧ್ಯಕ್ಕೆ ನಮ್ಮ ಮನೆಯಲ್ಲಿ ಫೋನ್ ಕರೆಗಳು ಬಂದಾಗ ಮಲಯಾಳಿ ಮತ್ತು ತಮಿಳು ಗೆಳೆಯರ ಮಾತಿನೆಡೆಯಲ್ಲಿ ಚರ್ಚೆಗೊಳಗಾಗುತ್ತಿರುವುದು ನಮ್ಮ ಕನ್ನಡದ ಚಿತ್ರ ಎನ್ನುವುದು ಮಾತ್ರ ಬಹಳ ಖುಷಿ ಮತ್ತು ಹೆಮ್ಮೆಯ ವಿಚಾರ. ಬಹುಶಃ ರಜನಿಯ ‘ತಲೈವರ್ 169’ ಚಿತ್ರ ತೆರೆ ಕಾಣುವವರೆಗೂ ಇದೇ ಹವಾ ಅವರ ಮಾತಿನಲ್ಲಿ ಮುಂದುವರೆಯುವುದೋ ಏನೋ ಕಾದು ನೋಡಬೇಕು!

(ಮುಂದಿನ ಪತ್ರ : 13.5.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಅಂಕಣದ ಎಲ್ಲಾ ಬರಹಗಳನ್ನೂ ಇಲ್ಲಿ ಓದಿ : https://tv9kannada.com/tag/qatar-mail

ತಾಜಾ ಸುದ್ದಿ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ
ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ
ಮೈ ತುಂಬಿ ಹರಿಯುತ್ತಿದೆ ಧನುಷ್ ಕೋಟಿ; ಚುಂಚನಕಟ್ಟೆ ಫಾಲ್ಸ್ ವಿಡಿಯೋ ನೋಡಿ
ಮೈ ತುಂಬಿ ಹರಿಯುತ್ತಿದೆ ಧನುಷ್ ಕೋಟಿ; ಚುಂಚನಕಟ್ಟೆ ಫಾಲ್ಸ್ ವಿಡಿಯೋ ನೋಡಿ
10 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ಬರೆದ ಮಾರ್ನಸ್ ಲಾಬುಶೇನ್
10 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ಬರೆದ ಮಾರ್ನಸ್ ಲಾಬುಶೇನ್