Qatar Mail : ಚೈತ್ರಾ ಅರ್ಜುನಪುರಿಯವರ ಮರಳುಗಾಡಿನ ಪತ್ರಗಳು ‘ಕತಾರ್ ಮೇಲ್’ ಮೂಲಕ ನಾಳೆಯಿಂದ ನಿಮ್ಮ ಓದಿಗೆ
Night Photography : ‘ನಾನು ಅಡುಗೆ ಮಾಡಿ ಮಗನನ್ನು ಶಾಲೆಗೆ ಕಳುಹಿಸುವವರೆಗೂ ನೀನು ಉದಯಿಸಬೇಡ ಎಂದರೆ ಕೇಳಲು, ಮಗ ಮೇಲೇಳುವವರೆಗೂ ಮುಳುಗಬೇಡ, ನಿನ್ನ ಚಿತ್ರ ತೆಗೆಯಲು ಬರುತ್ತೇನೆ ಎಂದರೆ ನಿಲ್ಲಲು, ಅವನೇನು ನಾನು ಮಾಡಿಟ್ಟ ರೊಟ್ಟಿಯೇ?! ಈ ಜಂಜಾಟದಲ್ಲಿ ಕೊನೆಗೆ ನನ್ನ ಪಾಲಿಗೆ ಉಳಿಯುವುದು ಚಂದ್ರನೊಡನೆ ಮಿನುಗಲು ಪೈಪೋಟಕ್ಕಿಳಿಯುವ ನಕ್ಷತ್ರಗಳ ಸಮಯ ಮಾತ್ರ.’ ಚೈತ್ರಾ ಅರ್ಜುನಪುರಿ
Qatar Mail | ಕತಾರ್ ಮೇಲ್ : ಮಂಡ್ಯ ಜಿಲ್ಲೆಯ ಮದ್ದೂರು ಮೂಲದ, ಸದ್ಯಕ್ಕೆ ದೋಹಾ-ಕತಾರ್ ವಾಸಿಯಾಗಿರುವ ಚೈತ್ರಾ ಅರ್ಜುನಪುರಿ (Chaitra Arjunpuri) ಪತ್ರಕರ್ತೆ, ನೈಟ್ ಫೋಟೋಗ್ರಾಫರ್. ಶಾಲಾಶಿಕ್ಷಣವೆಲ್ಲ ಮದ್ದೂರು. ಪದವಿ ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಎಂ.ಎ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಎಂ.ಎ. ಉಪನ್ಯಾಸಕಿಯಾಗಿ ಇಂಗ್ಲಿಷ್ ಬೋಧನೆ. ಬೆಂಗಳೂರಿನ ವಿಜಯ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್ನಲ್ಲಿ ಕೆಲ ಕಾಲ ಪತ್ರಕರ್ತೆ. ಕತಾರಿನ ಅಲ್ಜಜೀರಾ ಚಾನೆಲ್ನಲ್ಲಿ ಆನ್ಲೈನ್ ಪ್ರೊಡ್ಯೂಸರ್. ಹಲವಾರು ಲೇಖನ, ಕಥೆ, ಪ್ರವಾಸ ಕಥನ, ಪುಸ್ತಕ ವಿಮರ್ಶೆಗಳು ಅಲ್ಜಜೀರಾ, ಪೊಲಿಟಿಕಲ್ ಎಕಾನಮಿ ಜರ್ನಲ್ ಒಳಗೊಂಡಂತೆ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟ. 60 ಪುಸ್ತಕಗಳ ವಿಮರ್ಶೆ ‘ಸಖಿ’ ಪಾಕ್ಷಿಕದಲ್ಲಿ ‘ಇಂಗ್ಲಿಷ್ ಲೇಡಿ’ ಕಾಲಂನಡಿ ಪ್ರಕಟ. ‘ಚೈತ್ರಗಾನ’ (ಕವನಗಳು), ‘ಪುಸ್ತಕ ಪ್ರದಕ್ಷಿಣೆ’, ‘ಓದುವ ವೈಭವ’ (ವಿಮರ್ಶೆ) ಪ್ರಕಟಿತ ಕೃತಿಗಳು. ಕೆಲ ಚಿತ್ರಗಳು ನ್ಯಾಷನಲ್ ಜಿಯೋಗ್ರಾಫಿಕ್, ನ್ಯಾಟ್ ಜಿಯೋ ಟ್ರಾವೆಲ್ಲರ್, ಟ್ಯಾಗ್ರೀ ಮ್ಯಾಗಝೀನ್, ಮರಿಕಾ ಮ್ಯಾಗಝೀನ್ ಕಿಡ್ಸ್ ನಲ್ಲಿ ಪ್ರಕಟ. All India Salon of Photography Exhibition (2019), Indian Cultural Centre (ICC) Photo Exhibition, (2020), Moments Annual Photography Exhibition (2021) ಕತಾರಿನಲ್ಲಿ ಕೆಲ ಚಿತ್ರಗಳ ಪ್ರದರ್ಶನ.
ಹದಿನೈದು ದಿನಕ್ಕೊಮ್ಮೆ (ಶುಕ್ರವಾರ) ಕತಾರ್ ಮೇಲ್ ಮೂಲಕ ನಮ್ಮನ್ನು ಎದುರುಗೊಳ್ಳಲಿರುವ ಚೈತ್ರಾ ಅರ್ಜುನಪುರಿ ತಮ್ಮ ಆಶಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.
*
ಕತಾರ್ ಎನ್ನುವ ಮರಳುಗಾಡಿಗೆ ಬಂದ ಮೇಲೆ ಕಲಿತ ಪಾಠಗಳು, ಕಲಿತವಲ್ಲಿ ಮರೆತ ಪಾಠಗಳು, ಮರೆತವಲ್ಲಿ ಹುಡುಕಿಕೊಂಡ ಪಾಠಗಳು ಅನೇಕ. ಮಗ ಒಡಲೊಳಗೆ ಮೂಡುತ್ತಿದ್ದಂತೆ ಉದ್ಯೋಗ ತೊರೆದು ಫ್ರೀಲಾನ್ಸರ್ ಆದೆ. ಆಗಲೇ ಹೆಚ್ಚು ಹುಚ್ಚು ಹತ್ತಿಕೊಂಡಿದ್ದು ಫೋಟೋಗ್ರಫಿಯಲ್ಲಿ. ನಾನು ತೆಗೆದ ಚಿತ್ರಗಳನ್ನು ನೋಡಿದ ಕೆಲವರು, “ಅವಳಿಗೇನು ಬಿಡು ಫಾರಿನ್ ನಲ್ಲಿದ್ದಾಳೆ, ನಮ್ಮ ಹಾಗಾ?” ಎನ್ನುವ ರಾಗದಿಂದ ಹಿಡಿದು, “ಅದೇನು ಅವಳೇ ತೆಗಿತಾಳೋ ಅಥವಾ ಅವಳ ಗಂಡ ತೆಗೆದುಕೊಡುವ ಚಿತ್ರಗಳನ್ನೇ ತನ್ನದು ಎಂದು ಹೇಳುತ್ತಾಳೋ…” ಎನ್ನುವವರೆಗಿನ ಮಾತುಗಳನ್ನು ಕೇಳಿಸಿಕೊಳ್ಳುವಾಗಲೆಲ್ಲಾ ನಗಬೇಕೋ, ಅಳಬೇಕೋ ಅರ್ಥವಾಗುವುದಿಲ್ಲ. ಕಾರಣ, ಭಾರತದಲ್ಲಿದ್ದಾಗಲೂ ಇದೇ ರೀತಿಯ ಮಾತುಗಳು ಕಿವಿಗೆ ಬೀಳುತ್ತಿದ್ದವು – “ಅದೇನು ಅವಳೇ ಬರೆಯುತ್ತಾಳೋ, ಅವಳಪ್ಪ ಬರೆದುಕೊಡುತ್ತಾರೋ” ಎನ್ನುವ ಕುಹಕದ ನುಡಿಗಳಿಗೇನೂ ಕಡಿಮೆಯಿರಲಿಲ್ಲ. ಇವುಗಳ ನಡುವಿನಲ್ಲಿ ನನ್ನದೇ ಸ್ಥಾನ ಕಂಡುಕೊಳ್ಳುವಲ್ಲಿ ನಾನು ಪಟ್ಟ, ಪಡುತ್ತಿರುವ ಸವಾಲುಗಳು ಹತ್ತು ಹಲವಾರು.
ಬಾಲ್ಯದಿಂದಲೂ ಫೋಟೋಗ್ರಫಿಯ ಹುಚ್ಚು ಹಕ್ಕಿ ತಲೆಗೇರಿದ್ದರೂ, ಅದು ರೆಕ್ಕೆ ಬಿಚ್ಚಿ ಹಾರತೊಡಗಿದ್ದು ಕತಾರ್ ಎನ್ನುವ ಮರಳುಗಾಡಿಗೆ ಕಾಲಿಟ್ಟ ಮೇಲೆಯೇ. ಮಗ ಹುಟ್ಟಿದ ಮೇಲೆ ಪ್ರತಿ ದಿನ ಅವನ ಚಿತ್ರಗಳನ್ನು ತೆಗೆದು ಆ ನೆನಪುಗಳನ್ನು ಆಲ್ಬಂನಲ್ಲಿ ಶೇಖರಿಸಿ, ಊರಿನಲ್ಲಿದ್ದ ಅಪ್ಪ-ಅಮ್ಮನಿಗೆ ಪ್ರತಿ ವರ್ಷ ಕಳುಹಿಸುವುದರೊಂದಿಗೆ ಫೋಟೋಗ್ರಫಿಯ ಕನಸು ಹೊಸ ರೂಪ ಪಡೆದುಕೊಳ್ಳುತ್ತಾ ಹೋಯಿತು. ಹಾಗೆ ನೋಡಿದರೆ, ಸದಾ ಓದು, ಬರವಣಿಗೆಯಲ್ಲಿಯೇ ಮುಳುಗಿರುತ್ತಿದ್ದ ನನಗೆ ಫೋಟೋಗ್ರಫಿ ಅದರ ಮುಂದುವರೆದ ಭಾಗವಾಗಿಯೇ ಕಾಣಿಸಿತು ಎಂದರೆ ತಪ್ಪಾಗಲಾರದೇನೋ. ಓದಿದ ಪುಸ್ತಕಗಳ ಹಾಗೂ ಲೇಖನಗಳ ಬಗ್ಗೆ, ಬರವಣಿಗೆಯ ಬಗ್ಗೆ ದಿನನಿತ್ಯ ಅಪ್ಪನೊಂದಿಗೆ ಚರ್ಚಿಸುತಿದ್ದ ನನಗೆ ಅವರ ಅಚಾನಕ್ ಮರಣ ದಿಕ್ಕೆಡಿಸಿಬಿಟ್ಟಿತು. ಆಗ ನನಗೆ ಬೇಕಾಗಿದ್ದದ್ದು ಓದು, ಬರವಣಿಗೆಯಲ್ಲ, ನಾಲ್ಕು ಗೋಡೆಗಳಿಂದ ಹೊರಗೆ ಹೋಗಿ ನನ್ನ ನೋವಿಗೆ ನಾನೇ ಮದ್ದನ್ನು ಕಂಡು ಹಿಡಿದುಕೊಳ್ಳುವುದಾಗಿತ್ತು. ಪತಿಯ ಭಾಷೆ ಬೇರೆಯಾಗಿರುವುದರಿಂದ ಓದಿದ ಪುಸ್ತಕಗಳ ಬಗ್ಗೆ, ಲೇಖನಗಳ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲವೆನ್ನುವುದು ಅರಿವಿದ್ದುದ್ದರಿಂದ, ಅದರ ಹೊರತಾಗಿಯೂ ಆತನೊಂದಿಗೆ ಕನೆಕ್ಟ್ ಆಗಲು, ಗಂಭೀರ ಚರ್ಚೆಗಿಳಿಯಲು ಫೋಟೋಗ್ರಫಿಗಿಂತಲೂ ಉತ್ತಮ ಮಾಧ್ಯಮ ಬೇರೆ ಇಲ್ಲವೆನ್ನುವುದು ತಿಳಿಯಿತು. ಆಗ ನನ್ನ ಮುಂದೆ ತೆರೆದುಕೊಂಡ ಫೋಟೋಗ್ರಫಿಯ ಹೊಸ ಪ್ರಪಂಚದಲ್ಲಿ ನನ್ನದೇ ಪುಟ್ಟ ಲೋಕವನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದೆ.
ಓದು, ಬರವಣಿಗೆ, ಮಗ, ಸಂಸಾರದ ಮಧ್ಯೆ ಸಮಯ ಹೊಂದಿಸಿಕೊಂಡು, ಚಿತ್ರ ತೆಗೆಯಲು ಹೊರಗೆ ಹೋಗುವುದು ಇತರರರಿಗೆ ಹೇಗೋ ತಿಳಿದಿಲ್ಲ, ಆದರೆ ನನ್ನ ಪಾಲಿಗೆ ದೊಡ್ಡ ಸವಾಲಿನ ವಿಷಯವೇ ಹೌದು. ಸೂರ್ಯ ಉದಯಿಸುವಾಗ ಅವನನ್ನು ಸೆರೆ ಹಿಡಿಯ ಬೇಕೆನ್ನುವ ಕನಸು, ಅವನು ಮುಳುಗುವಾಗ ಅವನನ್ನು ಬಂಧಿಸಬೇಕೆನ್ನುವ ಹಂಬಲ, ಅವೆರಡರ ನಡುವಲ್ಲಿ ಸಿಗುವ ಸಮಯದಲ್ಲಿ ಅಡುಗೆ, ಒಂದಿಷ್ಟು ಓದು, ಬರವಣಿಗೆ, ಮಗನ ಹೋಂವರ್ಕ್ ಎನ್ನುತ್ತಿರುವಾಗಲೇ ನೇಸರ ಕಾಣದೂರಿಗೆ ಮರೆಯಾಗಿ ಹೋದರೆ ಹೇಗಾಗಬೇಡ? ಇಂದಿಲ್ಲದಿದ್ದರೆ ನಾಳೆ ಎನ್ನುವ ಹಾಗಿಲ್ಲ, ಇದು ನನ್ನಂಥ ಗೃಹಿಣಿಯರ ನಿತ್ಯದ ದಿನಚರಿ. ನಾನು ಅಡುಗೆ ಮಾಡಿ ಮಗನನ್ನು ಶಾಲೆಗೆ ಕಳುಹಿಸುವವರೆಗೂ ನೀನು ಉದಯಿಸಬೇಡ ಎಂದರೆ ಕೇಳಲು, ಮಗ ಮೇಲೇಳುವವರೆಗೂ ಮುಳುಗಬೇಡ, ನಿನ್ನ ಚಿತ್ರ ತೆಗೆಯಲು ಬರುತ್ತೇನೆ ಎಂದರೆ ನಿಲ್ಲಲು ಅವನೇನು ನಾನು ಮಾಡಿಟ್ಟ ರೊಟ್ಟಿಯೇ!? ಈ ಜಂಜಾಟದಲ್ಲಿ ಕೊನೆಗೆ ನನ್ನ ಪಾಲಿಗೆ ಉಳಿಯುವುದು ಚಂದ್ರನೊಡನೆ ಮಿನುಗಲು ಪೈಪೋಟಕ್ಕಿಳಿಯುವ ನಕ್ಷತ್ರಗಳ ಸಮಯ. ಇನ್ನು ಅದನ್ನು ಬಿಟ್ಟರೆ ಬೇರೆ ನನಗೆ ಬೇರೆ ದಾರಿಯುಂಟೆ? ಸರಿ, ಅದೇ ರಾತ್ರಿಯನ್ನು ಬೆಳಗು ಮಾಡಿಕೊಂಡು, ನನ್ನ ಫೋಟೋಗ್ರಫಿಯ ವ್ಯಾಮೋಹಕ್ಕೆ ಒಂದು ಆಯಾಮ ಕಂಡುಕೊಂಡೆ. ಆದರೆ, ಅಲ್ಲಿಯೂ ದಾರಿ ಸುಗಮವೇನಾಗಿರಲಿಲ್ಲ. ದೆವ್ವ, ಭೂತ, ಪ್ರಾಣಿ, ಕೀಟಗಳ ನಡುವೆ ಜನರ ಕುಹಕ-ವ್ಯಂಗ್ಯಗಳೂ ಸೇರಿಕೊಂಡು ಮತ್ತಷ್ಟು ಸವಾಲುಗಳನ್ನೊಡ್ಡಿದವು.
ನಾಲ್ಕು ಗೋಡೆಗಳ ಮಧ್ಯೆ ವಾರಗಟ್ಟಲೆ ಕೂತು ಓದುವ ಅಥವಾ ಬರೆಯುವ ಗೀಳಿರುವ ನನಗೆ ಒಂದು ಚಿತ್ರ ತೆಗೆಯಲು ಹೊರಗೆ ಸುತ್ತಾಡುವುದೂ ಬೇಕಾಗಿಲ್ಲ, ಅದೇ ಗೋಡೆಗಳ ನಡುವೆಯೇ ಇದ್ದುಕೊಂಡು ಕಥೆ ಹೇಳುವ ಚಿತ್ರಗಳನ್ನು ತೆಗೆಯಬಹುದೆಂದು ಕರೋನಾ ಲಾಕ್ಡೌನ್ ಕಲಿಸಿಕೊಟ್ಟಿತು. ಬರೋಬರಿ ನೂರು ದಿನಗಳು ಮನೆಯ ಹೊಸ್ತಿಲನ್ನೂ ದಾಟದೆ, ಹೊರಗಿನ ಜನ ಸಂಪರ್ಕವೇ ಇಲ್ಲದೆ ಕಳೆದ ಆ ದಿನಗಳ ನೆನಪುಗಳು ತಮ್ಮದೇ ಕಥೆ ಹೇಳುತ್ತಾ ಕ್ಯಾಮೆರಾದಲ್ಲಿ ಸೆರೆಯಾದ ಅನುಭವ ಮರೆಯಲಾಗದಂಥದ್ದು.
ಭಾರತದ ಹಾಗೆ ಮುಕ್ತವಾಗಿ ಎಲ್ಲೆಂದರಲ್ಲಿ ಚಿತ್ರಗಳನ್ನು ತೆಗೆಯುವ ಸ್ವಾತಂತ್ರ್ಯವಿಲ್ಲದೆ, ಪ್ರತಿಯೊಂದು ಚಿತ್ರ ತೆಗೆಯುವಾಗಲೂ ಮೈಯೆಲ್ಲಾ ಕಣ್ಣಾಗಿ, ತೆಗೆದ ಚಿತ್ರಗಳೊಂದಿಗೆ ಸುರಕ್ಷಿತವಾಗಿ ಮನೆ ತಲುಪುವವರೆಗೂ ಮನಸಲ್ಲಿ ಮನೆಮಾಡುವ ಆತಂಕ ಎಂತಹದು ಎನ್ನುವುದನ್ನು ಸಾಲುಗಳಲ್ಲಿ ಹಿಡಿದಿಡಲಾಗುವುದಿಲ್ಲ. ಸುಮಾರು 29 ಲಕ್ಷ ಜನಸಂಖ್ಯೆಯಿರುವ, ವಿಸ್ತೀರ್ಣದಲ್ಲಿ ತ್ರಿಪುರಾ ರಾಜ್ಯಕ್ಕಿಂತಲೂ ಚೂರು ದೊಡ್ಡದಾಗಿರುವ ಕತಾರಿನಲ್ಲಿ ಫೋಟೋ ತೆಗೆಯುವ ವಿಚಾರ ಬಂದಾಗ do’sಗಿಂತಲೂ don’tsಗಳ ಪಟ್ಟಿ ದೊಡ್ಡದಿರುವುದು ವಿಚಿತ್ರವಾದರೂ ಅಷ್ಟೇ ಸತ್ಯ. ಇಂತಹ ದೇಶದಲ್ಲಿ ಸಾಮಾನ್ಯ ಗೃಹಿಣಿಯೊಬ್ಬಳ ಬದುಕಿನಲ್ಲಿ ಫೋಟೋಗ್ರಫಿ ಒಂದು ಕಲೆಯಾಗಿ, ಮಾಧ್ಯಮವಾಗಿ, ಗೆಳೆಯನಾಗಿ, ಸಲಹೆಗಾರನಾಗಿ, ಮಾರ್ಗದರ್ಶಕನಾಗಿ ಜೊತೆ ನಿಂತ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಬನ್ನಿ, ಈ ನನ್ನ ಪಯಣದಲ್ಲಿ ನೀವೂ ಜೊತೆಯಾಗಿ.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಚೈತ್ರಾ ಅರ್ಜುನಪುರಿ ಅವರ ಈ ಬರಹವನ್ನೂ ಓದಿ : Motherhood: ನಾನೆಂಬ ಪರಿಮಳದ ಹಾದಿಯಲಿ; ಕ್ಷೀರಪಥದೊಳಗಿನ ಚೈತ್ರಗಾನ
ಇದನ್ನೂ ಓದಿ : Next Door : ಕರಾಗ್ರೇ ವಸತೇ ಮೊಬೈಲ್ ತಲೆದಿಂಬೇ ಲ್ಯಾಪ್ಟಾಪ್
Published On - 4:44 pm, Thu, 6 January 22