Lockdown Stories : ಚಲನಾಮೃತ ; ‘ಮೇಣದಬತ್ತಿ ಉತ್ಪಾದನೆ ಮೌಢ್ಯ’ ಉತ್ತರ ಕಂಡುಕೊಳ್ಳುತ್ತ ಹೋದೆ…

Candles : ‘ಬೆಂಗಳೂರಿನ ಪುಟ್ಟ ಮೇಣದ ಅಂಗಡಿಯಲ್ಲಿ ದಾರವನ್ನು ಹೊಸೆಯುವ ಸಿದ್ಧಪ್ಪಜ್ಜ, ನನ್ನ ಪಾಲಿಗೆ ಮೇಣದಬತ್ತಿಯ ಜಗತ್ತಿನ ವಿಕಿಪೀಡಿಯಾದಂತೆ ಕಂಡ ದಿವಸವದು. ಪ್ರಪಂಚದಲ್ಲಿರುವ 200ಕ್ಕೂ ಹೆಚ್ಚು ಮೇಣದ ಪ್ರಕಾರಗಳನ್ನು ಗುರುತಿಸುವುದು, ಗುಣಮಟ್ಟ ಖಾತರಿಪಡಿಸಿಕೊಳ್ಳುವುದು, ಸೋಯಾ ಮೇಣದ ಹೈಡ್ರೋಜನೀಕರಣ... ಏನೆಲ್ಲಾ ಮನಮುಟ್ಟುವಂತೆ ಹೇಳಿಕೊಟ್ಟರು. ಬೆಂಗಳೂರು ನಿಧಾನಕ್ಕೆ ಬೆಳಕಿನ ಊರು ಎನ್ನಿಸುತ್ತಿದೆ. ಸಿದ್ಧಪಜ್ಜನಂಥ ಬೆಳಕಿನ ಕುಡಿಗಳ ಸಂತತಿ ಹೆಚ್ಚಲಿ. ಅವರೂ ಬೆಳಕಿನಲ್ಲಿ ಪಾಲು ಪಡೆಯುತ್ತ ಹೋಗಲಿ. ‘ ಶ್ರೀವಿದ್ಯಾ ಕಾಮತ್ 

Lockdown Stories  : ಚಲನಾಮೃತ ; ‘ಮೇಣದಬತ್ತಿ ಉತ್ಪಾದನೆ ಮೌಢ್ಯ’ ಉತ್ತರ ಕಂಡುಕೊಳ್ಳುತ್ತ ಹೋದೆ...
ಶ್ರೀವಿದ್ಯಾ ಕಾಮತ್
Follow us
|

Updated on:Jun 23, 2021 | 1:16 PM

ಅನಿವಾರ್ಯವೆಂಬ ಹಾವು ಕಾಲಬುಡಕ್ಕೇ ಬಂದಾಗ ಯಾರೂ ಚಲನಶೀಲರಾಗಿಬಿಡುತ್ತಾರೆ. ಆಗ ಮುಂದಿನ ಏರುಇಳಿವಿನ ಹಾದಿ ಅವರಲ್ಲಿ ಮತ್ತಷ್ಟು ಶಕ್ತಿಯನ್ನೂ ಸಂಕಲ್ಪವನ್ನೂ ಹೂಡುತ್ತಾ ಬರುತ್ತದೆ. ಬರುಬರುತ್ತ ಅದು ಅವರನ್ನು ಮತ್ತೊಂದು ಸ್ತರದಲ್ಲಿ ಯೋಚಿಸಿ, ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಾ ಪಾಯಾ ಗಟ್ಟಿಮಾಡುತ್ತದೆ. ಅಲ್ಲಿಗೆ ಅವರು ಅರಿವಿಲ್ಲದೆಯೇ ಅಷ್ಟುದಿನ ಕಟ್ಟಿಕೊಂಡ ಗೋಡೆಯನ್ನು ಹಾರಿಯಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆಯೇ ಆನ್​ಲೈನ್​ ಮಾರುಕಟ್ಟೆ ಸಂಸ್ಕೃತಿ. ಲಾಕ್​ಡೌನ್ ಶುರುವಾಗುತ್ತಿದ್ದಂತೆ ವೃತ್ತಿ, ಆಸಕ್ತಿ, ಕೌಶಲಗಳು ಆನ್​ಲೈನ್​ ಮೂಲಕ ವಾಣಿಜ್ಯ ಸ್ವರೂಪ ಪಡೆದುಕೊಳ್ಳುತ್ತಾ ಬಂದವು. ಫೇಸ್​ಬುಕ್​ ಅಕೌಂಟ್​ಗಳು ಪುಟಗಳಾದವು. ವಾಟ್ಸಪ್, ಬಿಝಿನೆಸ್ ನಂಬರುಗಳಾದವು. ​ಫೇಸ್​ಬುಕ್​ ಗ್ರೂಪ್​ಗಳು, ತಮ್ಮ ಸದಸ್ಯರನ್ನು ಹೆಚ್ಚು ವೃತ್ತಿಪರರನ್ನಾಗಿಸಲು ಪ್ರಯತ್ನಿಸಿದವು. ಸ್ವಂತ ವೆಬ್​, ಆ್ಯಪ್​ಗಳು ಹುಟ್ಟಿಕೊಂಡು ಪ್ರತ್ಯೇಕ ವಹಿವಾಟುತಾಣಗಳೇ ನಿರ್ಮಾಣಗೊಂಡವು. ಕೊರೊನಾದಿಂದಾಗಿ ಸಾವುನೋವು ಸಂಕಷ್ಟಗಳ ಮಧ್ಯೆಯೇ ಹಳ್ಳಿಹಳ್ಳಿಗಳೂ ಆನ್​ಲೈನ್​ ಭಾಷೆಯನ್ನು ಉಸಿರಾಡುತ್ತ ನಗರಗಳಿಗೆ ತಮ್ಮ ಸೊಗಡನ್ನು ಪಸರಿಸಿದವು. ಪರಿಣಾಮವಾಗಿ ಸಣ್ಣ ಪುಟ್ಟ ಉದ್ಯಮಗಳು ಕಣ್ಣುಬಿಟ್ಟುಕೊಂಡವು. ಗೃಹಕೈಗಾರಿಕೋದ್ಯಮ ಮತ್ತು ದೇಸೀ ಮಾರುಕಟ್ಟೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡವು. ಗ್ರಾಹಕರೂ ಈ ಆನ್​ಲೈನ್ ಸಂತೆಗೆ ಕಣ್ಣನ್ನೂ ಮನಸ್ಸನ್ನೂ ಜೇಬನ್ನು ಬಲುಬೇಗನೇ ಹೊಂದಿಸಿಕೊಂಡುಬಿಟ್ಟರು. 

ಹಾಗಂತ ಇದು ಇಲ್ಲಿಗೇ ನಿಂತಿಲ್ಲ, ನಿಲ್ಲುವುದೂ ಇಲ್ಲ. ಮುಂದೇನು ಎನ್ನುವ ಕುತೂಹಲದ ಕಣ್ಣು ನೆಟ್ಟುಕೊಂಡೇ  ಮಾರುವವರೂ ಇದ್ದಾರೆ ಕೊಳ್ಳುವವರೂ. ಆದರೆ ಆನ್​ಲೈನ್​ ಆಗಲಿ ಆಫ್​ಲೈನ್ ಆಗಲಿ, ಎಡೆಬಿಡದೆ ಶ್ರದ್ಧೆಯಿಂದ ವ್ಯಾಪಾರ ಸೂತ್ರಗಳನ್ನು ನೇಯುತ್ತಿದ್ದರೆ ಮಾತ್ರ ಇಲ್ಲಿ ಬೆಳಕು. ಈ ದೃಷ್ಟಿಕೋನದಲ್ಲಿ ರೂಪಿಸಿದ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ಚಲನಾಮೃತ’ ; ಕೊರೊನಾ ಕಾಲದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವವರ ಅನುಭವ ಕಥನಗಳು. ನೀವು ಅಥವಾ ನಿಮ್ಮ ಸುತ್ತಮುತ್ತಲಿನವರು ಈ ಪರಿಧಿಗೆ ಒಳಪಟ್ಟಲ್ಲಿ ನಾಲ್ಕೈದು ಫೋಟೋಗಳೊಂದಿಗೆ ಬರೆದು ಕಳುಹಿಸಿ. ಪದಮಿತಿ ಕನಿಷ್ಟ 800, ಗರಿಷ್ಟ 1,500.  tv9kannadadigital@gmail.com 

* AURA Candles ನ ಶ್ರೀವಿದ್ಯಾ ಕಾಮತ್ ಎರಡೆರಡು ಸ್ನಾತಕೋತ್ತರ ಪದವಿ ಪಡೆದರೂ ಯಾಕೆ ಸ್ವಾವಲಂಬಿ ಜೀವನಕ್ಕೆ ತೆರೆದುಕೊಳ್ಳಬೇಕೆನ್ನಿಸಿತು, ಆ ಹಾದಿ ಹೇಗಿತ್ತು? * ಮೈಸೂರು ಎಂಬ ಸಾತ್ವಿಕ ನಗರಿಯಿಂದ, ಬೆಂಗಳೂರೆಂಬ ಮಾಯಾನಗರಿಗೆ ತೆರಳುವ ನಿರ್ಧಾರ ಸುಲಭದ್ದಾಗಿರಲಿಲ್ಲ. ಎಷ್ಟೇ ಮುಂದುವರಿದರೂ, ಸಮಾಜದಲ್ಲಿ ಮದುವೆಯ ನಂತರ ತವರೂರನ್ನ ಬಿಟ್ಟು ಹೋಗುವುದು ರೂಢಿಯಲ್ಲವೇ? ಹುಟ್ಟಿ ಬೆಳೆದ ಊರಿನ ಬಗ್ಗೆ ಎಲ್ಲರಿಗೂ ಇರುವ ಸಹಜ ಪ್ರೀತಿ ಮತ್ತು ಬಾಂಧವ್ಯದ ಜೊತೆಗೆ, ಮೈಸೂರಿಗರಿಗೆ ಹಿರಿದಾದ ಹೆಮ್ಮೆ ಮತ್ತು ಲಗತ್ತು ಇರುತ್ತದೆ. ಅಪ್ಪ ಅಮ್ಮನ ಪ್ರೀತಿಯ ಒಬ್ಬಳೇ ಮಗಳಾಗಿ ಸುರಕ್ಷಿತ ಸುಸಜ್ಜಿತ ವಾತಾವರಣದಲ್ಲಿ ಬೆಳೆದು, ಬೆಂಗಳೂರಿನ ಜನದಟ್ಟಣೆಗೆ ಸೇರಿದಾಗ, ಅಲ್ಲಿ ಸಿಗಬಹುದೆಂದು ಎಣಿಸಿದ್ದ ಅವಕಾಶಗಳ ಬಗ್ಗೆ, ಕಟ್ಟಿಕೊಂಡಿದ್ದ ಕನಸುಗಳ ಮೇಲೆ ನಿರಾಸೆಯ ತಣ್ಣೀರು ಸುರಿದಾಗಿತ್ತು. ಎಷ್ಟೇ ದೊಡ್ಡ ನಗರಿಯಾದರೂ, ಎಷ್ಟು ಜನರ ಕನಸುಗಳಿಗೆ ನಾಂದಿ ಹಾಡಬಹುದು? ಅವಕಾಶಗಳ ಕೊರತೆ, ಮಾರ್ಗದರ್ಶನವಿಲ್ಲದೆ ಖುದ್ದಾಗಿ ದಾರಿ ಹುಡುಕಿಕೊಳ್ಳುವ ಅನಿವಾರ್ಯತೆ ಮತ್ತು ಏನಾದರೊಂದು ಸಾಧಿಸಬೇಕೆನ್ನುವ ಛಲ, ಹಂಬಲ! ಇವುಗಳೊಂದಿಗೆ ಜೀವನದ ಎರಡನೆಯ ಪುಟ ಆರಂಭವಾಗಿತ್ತು.

ಜೀವ ತಂತ್ರಜ್ಞಾನ ಮತ್ತು ಪತ್ರಿಕೋದ್ಯಮ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದ ನಾನು, ನನ್ನ ಕನಸಿನ ಕೆಲಸಕ್ಕಾಗಿ ಮಾಡಿದ ಪ್ರಯತ್ನಗಳು ಅಷ್ಟಿಷ್ಟಲ್ಲ. ಕೆಲವೆಡೆ ತಾತ್ಕಾಲಿಕ ಹುದ್ದೆಗಳು, ಕೆಲವೆಡೆ ಸಂಬಳ ನಾಲ್ಕು ಕಾಸು, ಕೆಲವೆಡೆ ಶಿಫಾರಸ್ಸು ಪತ್ರ ಅತಿ ಮುಖ್ಯ, ಇನ್ನು ಹಲವಕ್ಕೆ ಮನೆಯಿಂದ ಬಹಳಷ್ಟು ದೂರ ಹೋಗಬೇಕು. ನಿರಾಸೆಯ ಮಡಿಲಿಗೆ ಹಲವು ವ್ಯರ್ಥ ಪ್ರಯತ್ನಗಳು ಜಾರಿಹೋಗಿದ್ದವು. ಬೆಂಗಳೂರಿನ ನಿಜವಾದ ಬೆಂದ ಕಾಳ ಬದುಕಿನ ದುಃಸ್ವಪ್ನದ ದಿನಗಳವು. ಮಾಡುತ್ತಿದ್ದ ಕೆಲಸದಲ್ಲಿ, ಎಲ್ಲವನ್ನು ಮೊದಲಿನಿಂದ ಮೊದಲ್ಗೊಂಡು, ಸ್ವಲ್ಪ ಸ್ವಲ್ಪವಾಗಿ ಕಲಿತು, ಮೆಟ್ಟಲುಗಳನ್ನೇರಿ ಕೂರುವಷ್ಟರಲ್ಲಿ, ನನ್ನ ಕೆಲಸದ ಬಗೆಗಿನ ತೃಪ್ತಿಯ ಬಗ್ಗೆ, ಅದಕ್ಕಾಗಿ ನಾನು ತೆರಬೇಕಾದ ಬೆಲೆಯ ಬಗ್ಗೆ, ನನಗೆ ನನ್ನದೇ ಆದ ಪ್ರಶ್ನೆಗಳು, ಗೊಂದಲಗಳಿದ್ದವು. ಆಗಲೇ ಸಣ್ಣದಾಗಿ, ಮೊದಲಿಗೆ ಆರಂಭ ಮಾಡಿದ್ದು ಸ್ವ-ಉದ್ಯೋಗ ಮತ್ತು ವ್ಯವಹಾರ ಸಂವಹನ ತರಬೇತಿ ನೀಡುವ ಪುಟ್ಟ ಕಂಪನಿ. ಇದರ ಪ್ರಾರಂಭ, ಮತ್ತಷ್ಟು ಹೊಸ ಅಮೋಘ ಆರಂಭಗಳಿಗೆ ನಾಂದಿ ಹಾಡಿತು.

lockdown stories

ಕರಗುತ್ತ ವೃತ್ತವಾಗುವುದೆಂದರೆ

ಕೈಯಲ್ಲಿದ್ದ ಸಂಬಳ ತರುವ ಕೆಲಸಕ್ಕೆ ರಾಜೀನಾಮೆ ನೀಡಿ ಆಗಿತ್ತು. ಕನಸುಗಳ ಬೆನ್ನೇರಿ ಹೊರಡುವ ಆಸೆಯಿಂದ ಕುದುರೆಯೇರುವಷ್ಟರಲ್ಲಿ ಆರ್ಥಿಕ ಬದ್ಧತೆಗಳನ್ನು ಆಗಾಗ ನೆನಪಿಸುವ ಕೆಲಸ ತಪ್ಪದೆ ಮಾಡುತ್ತಿದ್ದ ಬ್ಯಾಂಕಿನ ಫೋನ್ ಕರೆಗಳು ಭಯ ಹುಟ್ಟಿಸಿದ್ದವು. ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ, ಒಬ್ಬ ಹೆಣ್ಣು ಇದ್ದೆ ಇರುತ್ತಾಳೆ ಎಂಬುದು ಲೋಕಾರೂಢಿಯ ಮಾತಾದರೆ, ನನ್ನ ವಿಷಯದಲ್ಲಿ ಅದು ಸಂಪೂರ್ಣ ವಿರುದ್ಧ. ನನ್ನ ಕನಸಿನ ಕುದುರೆಗೆ ರೆಕ್ಕೆ ಕಟ್ಟುವ ಕೆಲಸ, ಹಾರಲು ಹುರಿದುಂಬಿಸುವ ಕಾಯಕ ತಪ್ಪದೆ ಮಾಡಿದ್ದೂ, ನನ್ನ ಗಂಡ. ಸೋಲಿನಲ್ಲೂ ಒಮ್ಮೆಯೂ ಮುನಿಸು ತೋರದೆ, ಆರ್ಥಿಕ ಹೊಡೆತಗಳನ್ನ ಎದುರಿಸಬೇಕಾದಾಗ, ಕುಟುಂಬದ ಬೇರೆಲ್ಲರೂ ಇದ್ದ ಕೆಲಸ ಬಿಡುವಂತಹ ನನ್ನ ಮೂರ್ಖತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಾಗ, ಅದನ್ನು ಕಡೆಗಣಿಸುವಷ್ಟು ಸಮಾಧಾನ ತುಂಬುವಲ್ಲಿ ಅವನದೇ ಮೇಲುಗೈ. ಅಷ್ಟೇ ಅಲ್ಲದೆ, ಯಾವುದೇ ವ್ಯಾವಹಾರಿಕ ಸಭೆಗಳಿಗೆ ತೆರಳಬೇಕಾದಲ್ಲಿ, ದೂರದ ಊರುಗಳಿಗೆ ಯಾವುದಾರೂ ಒಪ್ಪಂದದ ವಿಷಯವಾಗಿ ಹೋಗಬೇಕಾದಾಗ, ಜೊತೆಗೂಡುವುದಲ್ಲದೆ, ನನ್ನ ಕಂಪನಿಯನ್ನು ಹಂತಹಂತವಾಗಿ ಬೆಳೆಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದಾನೆ. ಇಷ್ಟೆಲ್ಲಾ ಸಹಕಾರವಿದ್ದಾಗ ನನ್ನೆಲ್ಲ ಕನಸುಗಳಿಗೆ ಬೆಳಕಿನ ದಾರಿ ಹುಡುಕುವುದು ನನ್ನ ಕರ್ತವ್ಯವಲ್ಲವೇ?

ಬ್ಯಾಂಕಿನಿಂದ ಪಡೆದಿದ್ದ ಎಲ್ಲ ರೀತಿಯ ಎರವಲುಗಳನ್ನು ಒಂದು ಡೈರಿಯಲ್ಲಿ ಬರೆದಿಟ್ಟು, ನನ್ನ ಹೊಸ ಕಂಪನಿಗೆ ಬೇಕಾದ ಬಂಡವಾಳವನ್ನು ಸಾಲವಾಗಿ ಪಡೆದು, ನನ್ನದೇ ಆದ ಲೆಕ್ಕಾಚಾರದ ಮೇಲೆ ಅದನ್ನು ಹಿಂದಿರುಗಿಸಲು ಬೇಕಾದ ಸಮಯಾವಕಾಶದ ಬಗ್ಗೆ ಒಂದು ಸಮಯದ ಮಿತಿಗೆರೆಯನ್ನು ಹಾಕಿಕೊಂಡು ರಚನಾತ್ಮಕವಾಗಿ ಕಂಪನಿಯನ್ನು ನಡೆಸಿಕೊಂಡು ಹೋಗುವ ನಂಬಿಕೆಯಿಂದ ಆರಂಭಿಸಿದೆ.

ಉರಿದುಹೋದ ಬತ್ತಿ ಕರಗಿಹೋದ ಮೇಣ ಕಳಚಿಬಿದ್ದ ತಾರೆಯ ತುಣುಕುಗಳು ಕಳೆದ ಕತ್ತಲಿನ ಪಳೆಯುಳಿಕೆಗಳಲ್ಲವೇ?

ಬದುಕೂ ಹೀಗೆ… ಹಲವು ಸುಖ ದುಃಖಗಳು, ನೋವು ನಲಿವುಗಳ ಕತ್ತಲೆ-ಬೆಳಕಿನಾಟದಲ್ಲಿ, ಕಾಡುವ ಕಗ್ಗತ್ತಲ ಕಾರ್ಮೋಡವ ಕಳೆಯುವ ಪ್ರತಿ ಪ್ರಯತ್ನವೂ, ಗೆಲುವಿನ ಹಾದಿಯ ಮೊದಲ ಮಿಂಚು.

lockdown stories

ಕರಗುತ್ತ ಅರಳುವುದೆಂದರೆ

ಅಂತೆಯೇ 2017ರ ದೀವಳಿಗೆಯಲ್ಲಿ ನನ್ನ ಬದುಕಿಗೆ ಜೊತೆಯಾದುದು ಮೇಣದಬತ್ತಿಯ ಬೆಳಕು. ವ್ಯವಹಾರ ಸಂವಹನ, ಜೀವನಕಲೆ, ಸ್ವಉದ್ಯಮ ಮತ್ತಿತರ ತರಬೇತಿ ನೀಡುವಂತಹ ಮತ್ತು ಬೇರೆ ಬೇರೆ ರೀತಿಯ ಉದ್ಯೋಗಗಳಿಗೆ ತಕ್ಕಂತಹ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ದೊರಕಿಸಿಕೊಡುವಂತಹ ಕಂಪನಿಯನ್ನು ಹೊಂದಿದ್ದ ನಾನು, ನನ್ನದೇ ಒಬ್ಬ ಕಕ್ಷಿಗಾರರ ಅವಶ್ಯಕತೆಯ ಮೇರೆಗೆ ಮೊದಲುಗೊಂಡ ನನ್ನ ಮೇಣದ ಬತ್ತಿಗಳ ಉತ್ಪಾದನಾ ಕಾರ್ಯಾಗಾರ, ಇಂದು AURA Candles ಎಂಬ ಹೆಸರಿನಡಿಯಲ್ಲಿ ವಿದೇಶಗಳಲ್ಲಿಯೂ ಬೆಳಕುಹಚ್ಚುವ ಕಾರ್ಯಕ್ಕೆ ಸಜ್ಜಾಗಿ ನಿಂತಿದೆ.

ಇಂದು ಮೇಣದಬತ್ತಿಗಳನ್ನು ಯಾರೂ ಅದರ ವಾಸ್ತವಿಕ ಅಥವಾ ಪ್ರಕೃತಿ ಸಹಜ ಉಪಯೋಗಕ್ಕಾಗಿ ಖರೀದಿಸುವುದಿಲ್ಲ. ಹಾಗಾಗಿ, ‘ಮೇಣದಬತ್ತಿಗಳನ್ನ ಉತ್ಪಾದಿಸುವುದು ಮೌಢ್ಯ’ ಎಂಬ ಧೃತಿಗೆಡೆಸುವಂತಹ ಮಾತುಗಳನ್ನಾಡಿದ ಎಷ್ಟೋ ಜನರಿಗೆ ಉತ್ತರ ನೀಡುವ ಮೊದಲು, ಅದರ ನಿಜವಾದ ಉತ್ತರವನ್ನು ನಾನು ಕಂಡುಕೊಳ್ಳುವುದಿತ್ತು. ಹೈದರಾಬಾದ್, ಮುಂಬೈ, ದೆಹಲಿ ಮತ್ತು ಬೆಂಗಳೂರಿನ ಹೋಲ್ ಸೇಲ್ ಮಾರ್ಕೆಟ್​ಗಳಲ್ಲಿ ಕಳೆದ ಎಷ್ಟೋ ದಿನಗಳನ್ನು ಮರೆಯಲಾಗದು. ಮೇಣದ ಉತ್ಪಾದಕರು, ಮೇಣದಬತ್ತಿಯನ್ನು ಮಾಡಲು ಬಳಸುವ ಅಚ್ಚುಗಳನ್ನು ಉತ್ಪಾದಿಸುವ ಕಾರ್ಖಾನೆಗಳ ಮಾಲೀಕರುಗಳು, ವಿವಿಧ ರೀತಿಯ ಮೇಣದ ಹೋಲ್ಸೇಲ್ ಡೀಲರ್ಗಳು, ಅಂತಹ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರುಗಳು, ಅವರಿಂದ ಅದನ್ನು ಕೊಂಡುಕೊಂಡು ಮಾರಾಟ ಮಾಡುತಿದ್ದ ಸಣ್ಣ ಪುಟ್ಟ ಫ್ಯಾನ್ಸಿ ಸ್ಟೋರ್​ಗಳ ಮಾಲೀಕರುಗಳು, ಇವರುಗಳೇ ನನ್ನ ಮೊದಲ ಗುರುಗಳು.

ಬೆಂಗಳೂರಿನ ಸಗಟು ಮಾರಾಟ ಮರುಕಟ್ಟೆಯೊಂದರ ಪುಟ್ಟ ಮೇಣದ ಅಂಗಡಿಯಲ್ಲಿ ಕುಳಿತು, ಮೇಣದಬತ್ತಿಗೆ ಬೇಕಾದ ದಾರವನ್ನು ಹೊಸೆಯುವ ಕೆಲಸ, ಬೇರೆ ಬೇರೆ ರೀತಿಯ ಮೇಣಗಳನ್ನು ಸರಿಯಾಗಿ ಅವುಗಳ ಗುಣ, ಮತ್ತು ಬೇಡಿಕೆಗೆ ತಕ್ಕಂತೆ ಜೋಡಿಸುವ ಕಾಯಕದ ಒಬ್ಬ ಅಜ್ಜ, ಸಿದ್ಧಪ್ಪಜ್ಜ, ನನ್ನ ಪಾಲಿಗೆ ಮೇಣದಬತ್ತಿಯ ಜಗತ್ತಿನ ವಿಕಿಪೀಡಿಯಾದಂತೆ ಕಂಡ ದಿವಸವದು. ಒಟ್ಟು ಪ್ರಪಂಚದಲ್ಲಿ 200ಕ್ಕೂ ಹೆಚ್ಚು ಮೇಣಗಳಿದ್ದು, ಅವುಗಳ ಬಳಕೆ, ಅವುಗಳನ್ನು ಹೇಗೆ ಗುರುತಿಸುವುದು ಹಾಗೂ ಅವುಗಳ ಗುಣಮಟ್ಟವನ್ನು ಹೇಗೆ ಖಾತರಿಪಡಿಸಿಕೊಳ್ಳುವುದು ಎಂಬ ಪಾಠವನ್ನ ಮನಮುಟ್ಟುವಂತೆ ಹೇಳಿಕೊಟ್ಟರು. ತನ್ನ ಹೆಸರು ಮಾತ್ರ ಬರೆಯುವಷ್ಟು ಓದಲು ಕಲಿತಿರುವ ಸಿದ್ಧಪ್ಪಜ್ಜ, ಸೋಯಾ ಮೇಣದ ಹೈಡ್ರೋಜನೀಕರಣದ ಬಗ್ಗೆ, ಅದರ ವೈಜ್ಞಾನಿಕ ಉತ್ಪಾದನೆಯ ಬಗ್ಗೆ, ನೈಸರ್ಗಿಕವಾಗಿ ಸಿಗುವ ಜೇನುಮೇಣದ ಬಗ್ಗೆ, ಅದರಿಂದ ಮಾಡಿದ ಕ್ಯಾಂಡಲುಗಳಿಗೆ ಪ್ರಪಂಚದಲ್ಲೆಲ್ಲೆಡೆ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ, ಒಬ್ಬ ಬೃಹತ್ ವ್ಯವಹಾರ ತಂತ್ರಜ್ಞನ ಹಾಗೆ ತನ್ನ ಜ್ಞಾನ ಭಂಡಾರವನ್ನ ನನ್ನೊಡನೆ ಹಂಚಿಕೊಂಡ. ಈಗಲೂ ಸಹ ಎಂದಾದರೂ, ಹೊಸ ಕ್ಯಾಂಡಲೆಗಳ ಡಿಸೈನ್ ಮಾಡುವಾಗ ಆತನ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುವುದಿದೆ.

lockdown stories

ಕರಗುವುದೆಂದರೆ….

ಅಂದಿನ ದಿನಗಳ ಪ್ರೇರಣೆ, ಇಲ್ಲಿಯವರೆಗೂ ಕಲಿಕೆಯೂ ನಿಂತಿಲ್ಲ, ಉತ್ಪಾದನೆಯೂ ನಿಂತಿಲ್ಲ, ಮೇಣದಬತ್ತಿಯ ಉತ್ಪಾದನಾ ಘಟಕವನ್ನು ತೆರೆಯುವ ಆಸೆ ಹೊಂದಿರುವವರಿಗೆ ಕಲಿಸುವ ಕಾಯಕವೂ ನಡೆಯುತ್ತಿದೆ.

ಸುಗಂಧಪೂರಿತ ಕ್ಯಾಂಡಲ್ಗ​ಳ ಉತ್ಪಾದನೆಯಲ್ಲಿ ಭಾರತದ ಪಾತ್ರ ಅತೀ ಮುಖ್ಯ. ಅದರಲ್ಲೂ ಅರಬ್ ದೇಶದ ಪ್ರವಾಸಿಗರು, ಇಂಗ್ಲೆಂಡ್ ಮತ್ತು ಜರ್ಮನಿ ದೇಶಗಳಲ್ಲಿನ ಕ್ಯಾಂಡಲ್ ಪ್ರಿಯರು, ಭಾರತದಲ್ಲಿನ ಸುಗಂಧಪೂರಿತ ಮೇಣದಬತ್ತಿಗಳನ್ನು ಹೇಳಿದ ಬೆಲೆ ಕೊಟ್ಟುಕೊಳ್ಳಲು ಮುಂದಾಗಿರುವಂತಹ ಎಷ್ಟೋ ಉದಾಹರಣೆಗಳಿವೆ.

ಐಷಾರಾಮಿ ಸುಗಂಧಪೂರಿತ ಡಿಸೈನರ್ ಮೇಣದಬತ್ತಿಗಳನ್ನು ಉತ್ಪಾದಿಸುವ ನನ್ನ ಪುಟ್ಟ ಘಟಕ ಬಹಳಷ್ಟು ಜನರ ಮನೆಬೆಳಗಿದೆ. ಜೀವನದಲ್ಲಿ ಹೆಚ್ಚಿನ ಸವಲತ್ತುಗಳಿಂದ ವಂಚಿತರಾದ, ಅಗತ್ಯವುಳ್ಳ ಹೆಂಗಸರನ್ನು ಕಲೆಹಾಕಿ, ಅವರಿಗೆ ಮೇಣದಬತ್ತಿಗಳನ್ನು ಮಾಡುವ ತರಬೇತಿ ನೀಡಿ, ಅವರಿಂದ ಮಾಡಿಸಿದ ಮೇಣದಬತ್ತಿಗಳನ್ನು ಬೇರೆ ಬೇರೆ Online ಮತ್ತು Offline ವೇದಿಕೆಗಳಲ್ಲಿ ಮಾರಾಟ ಮಾಡುತ್ತಾ, ತನ್ನದೇ ವಿಶೇಷ ಅಸ್ತಿತ್ವವನ್ನು ಪಡೆಯುವತ್ತ ಬೆಳಕಿನ ಹೆಜ್ಜೆಯಿಟ್ಟಿದೆ ನನ್ನ ಮೇಣದ ಕುಡಿಗಳು.

ಅಷ್ಟೇ ಅಲ್ಲದೆ, ಕಳೆದ ಮೂರು ತಿಂಗಳುಗಳಿಂದ, ಮೈಸೂರಿನ ‘ಚಿಗುರು’ ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಹೆಂಗಸರಿಗಾಗಿ ಪ್ರಾರಂಭಗೊಂಡಿರುವ ಆಶ್ರಮಕ್ಕೆ ನನ್ನ ಮೇಣದಬತ್ತಿಗಳ ವ್ಯವ್ಯಹಾರದ ಶೇಕಡಾ  ಒಂದು ಭಾಗವನ್ನ ಕೊಡುಗೆಯಾಗಿ ಕೊಡಲು ಸಾಧ್ಯವಾಗುತ್ತಿದೆ.

ಹೆಣ್ಣು ಸ್ವಾವಲಂಬಿಯಾಗುವ ಹುಚ್ಚು ಕಿಡಿ ಮನಸ್ಸಿಗೆ ಹತ್ತಿದರೆ, ಹಿಂದೆ ಕಾಲೆಳೆಯಲು ಕಾಯುತ್ತಿರುವ ಅನೇಕ ಮಹಿಳೆಯರಿರುತ್ತಾರೆ, ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಅನೇಕ ನಂಬಿಕೆಗಳನ್ನು ಸುಳ್ಳಾಗಿಸುವ ಒಂದು ಸಾರ್ಥಕ ಪ್ರಯತ್ನ ‘ಧೃತಿ ಮಹಿಳಾ ಮಾರುಕಟ್ಟೆ‘ ಅದು. ಕೊರೊನಾ ಎಂಬ ಬರಸಿಡಿಲು ಪ್ರಪಂಚಕ್ಕೆಲ್ಲ ಬಡಿದು ಬದುಕನ್ನು ಬರಡಾಗಿಸಿದ ಲಾಕ್​ಡೌನ್ ಸಮಯದಲ್ಲಿ ಆರಂಭಗೊಂಡ ಧೃತಿ ಮಹಿಳಾ ಮಾರುಕಟ್ಟೆ ಇಂದು 42,000 ಹೆಚ್ಚು ಸದಸ್ಯರನ್ನೊಳಗೊಂಡಿದ್ದು, ನೂರಾರು ಹೆಂಗಸರ ಗೃಹೋದ್ಯಮವನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿದೆ. ಇದರ ಸದಸ್ಯಳಾಗಿ, ಮಾರಾಟಗಾರ್ತಿಯಾಗಿ, ಈಗ ನಿರ್ವಾಹಕಿಯಾಗಿಯೂ ಸಹ ಕೆಲಸ ನಿರ್ವಹಿಸುವ ಅವಕಾಶ ದೊರೆತಿದೆ. ಹಲವಾರು ಮಹಿಳೆಯರು ತಮ್ಮ ಕುಟುಂಬದ ನೊಗ ಹೊರುವ, ಹಣಕಾಸಿನ ಗಳಿಕೆಯಲ್ಲಿ ಮನೆಯಿಂದಲೇ ಸಣ್ಣಪುಟ್ಟ ವ್ಯವಹಾರಗಳನ್ನು ಆರಂಭಿಸಿ ಲಕ್ಷಾಂತರ ಸಂಪಾದಿಸುವವರೆಗಿನ ಪಯಣದಲ್ಲಿನ ಸವಾಲುಗಳು, ಅವರು ಅದನ್ನು ಎದುರಿಸುತ್ತಿರುವ ರೀತಿಗಳನ್ನು ಹತ್ತಿರದಿಂದ ನೋಡಿ ಕಲಿಯುವ ಅವಕಾಶ ಸಿಕ್ಕಿದೆ. ಅಗತ್ಯ ಬಿದ್ದಾಗ ಅವರುಗಳಿಂದ ಕಲಿಯುತ್ತ, ಸಾಧ್ಯವಾದಾಗ ಅವರಿಗೆ ಮಾರ್ಗದರ್ಶನ ನೀಡುತ್ತಾ ಜೊತೆಯಾಗಿ ಬೆಳೆಯುವ ಕಲ್ಪನೆಗೆ ಸಾರ್ಥಕದ ಜೊತೆಯಿದೆ.

lockdown stories

ಕರಗುತ್ತ ಹಾರುವುದೆಂದರೆ

ಅಸತ್ತಿನಿಂದ ಸತ್ತಿನೆಡೆಗೆ ತಮಸ್ಸಿನಿಂದ ಜ್ಯೋತಿಯೆಡೆಗೆ ನನ್ನ ನಡಿಗೆ, ನನ್ನ ಬೆಳಕಿನ ಕುಡಿಗಳೊಂದಿಗೆ, ಮಿಂಚ್ಹೆಜ್ಜೆ ಮುಂದುವರೆಯುತ್ತಲೇ ಇದೆ. ಬೆಂಗಳೂರು ನಿಧಾನಕ್ಕೆ ಬೆಳಕಿನ ಊರು ಎನ್ನಿಸುತ್ತಿದೆ. ಸಿದ್ಧಪಜ್ಜನಂಥ ಬೆಳಕಿನ ಕುಡಿಗಳ ಸಂತತಿ ಹೆಚ್ಚಲಿ, ಅವರೂ ಬೆಳಕಿನಲ್ಲಿ ಪಾಲು ಪಡೆಯುತ್ತ ಹೋಗಲಿ.

ಇದನ್ನೂ ಓದಿ : Lockdown Stories : ಚಲನಾಮೃತ ; ‘ನನ್ನ ವ್ಯಾಪಾರದ ಅದೃಷ್ಟ 2019ರಲ್ಲಿತ್ತು!

Published On - 12:59 pm, Wed, 23 June 21

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್