Lockdown Stories : ಚಲನಾಮೃತ ; ನೆಂಟರು ಒಂದು ದಿನಕ್ಕೋ ಇಲ್ಲವೆ ಹನ್ನೊಂದನೇ ದಿನಕ್ಕೋ ಉಳಿದಂತೆ ನಮಗೆ ನಾವೇ!

Corona Death : ‘ನನ್ನವನ ದೇಹ ಮಣ್ಣಿಗಿಟ್ಟ ಮೇಲೆ ಬದುಕುವುದು ನಿಜಕ್ಕೂ ನರಕವೇ ಆಗಿತ್ತು. ಆದರೆ ಹೆಣ್ಣು ಸುಲಭವಾಗಿ ಗಂಡಾಗಬಲ್ಲಳು, ಒಮ್ಮೆಲೆ ಹೆಣ್ಣೂ-ಗಂಡೂ ಆಗಿ ಬದುಕೆಂಬ ರಥವ ಸಲೀಸಾಗಿ ಎಳೆಯಬಲ್ಲಳು, ಆ ಶಕ್ತಿ ಅವಳಿಗೆ ಮಾತ್ರವಿದೆ. ಬದುಕನ್ನೇ ಕಳೆದುಕೊಂಡವರು ಯಾರೂ ಇಲ್ಲ, ಒಂದು ಬಂಧ ಕಳಚಿಕೊಂಡ ಕೂಡಲೆ ಬದುಕೇ ಮುಗಿಸಿಬಿಟ್ಟರೆ ನಮ್ಮ ಹುಟ್ಟಿಗೊಂದು ಅರ್ಥ ಬೇಡವೆ?’ ನೀಲಿ ಲೋಹಿತ್

Lockdown Stories : ಚಲನಾಮೃತ ; ನೆಂಟರು ಒಂದು ದಿನಕ್ಕೋ ಇಲ್ಲವೆ ಹನ್ನೊಂದನೇ ದಿನಕ್ಕೋ ಉಳಿದಂತೆ ನಮಗೆ ನಾವೇ!
ನಿರೂಪಕಿ, ಲೇಖಕಿ, ಟೆರಾಕೋಟಾ ಆಭರಣ ವಿನ್ಯಾಸಕಿ ನೀಲಿ ಲೋಹಿತ್
ಶ್ರೀದೇವಿ ಕಳಸದ | Shridevi Kalasad

|

Jun 15, 2021 | 7:47 PM

ಅನಿವಾರ್ಯವೆಂಬ ಹಾವು ಕಾಲಬುಡಕ್ಕೇ ಬಂದಾಗ ಯಾರೂ ಚಲನಶೀಲರಾಗಿಬಿಡುತ್ತಾರೆ. ಆಗ ಮುಂದಿನ ಏರುಇಳಿವಿನ ಹಾದಿ ಅವರಲ್ಲಿ ಮತ್ತಷ್ಟು ಶಕ್ತಿಯನ್ನೂ ಸಂಕಲ್ಪವನ್ನೂ ಹೂಡುತ್ತಾ ಬರುತ್ತದೆ. ಬರುಬರುತ್ತ ಅದು ಅವರನ್ನು ಮತ್ತೊಂದು ಸ್ತರದಲ್ಲಿ ಯೋಚಿಸಿ, ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಾ ಪಾಯಾ ಗಟ್ಟಿಮಾಡುತ್ತದೆ. ಅಲ್ಲಿಗೆ ಅವರು ಅರಿವಿಲ್ಲದೆಯೇ ಅಷ್ಟುದಿನ ಕಟ್ಟಿಕೊಂಡ ಗೋಡೆಯನ್ನು ಹಾರಿಯಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆಯೇ ಆನ್​ಲೈನ್​ ಮಾರುಕಟ್ಟೆ ಸಂಸ್ಕೃತಿ. ಲಾಕ್​ಡೌನ್ ಶುರುವಾಗುತ್ತಿದ್ದಂತೆ ವೃತ್ತಿ, ಆಸಕ್ತಿ, ಕೌಶಲಗಳು ಆನ್​ಲೈನ್​ ಮೂಲಕ ವಾಣಿಜ್ಯ ಸ್ವರೂಪ ಪಡೆದುಕೊಳ್ಳುತ್ತಾ ಬಂದವು. ಫೇಸ್​ಬುಕ್​ ಅಕೌಂಟ್​ಗಳು ಪುಟಗಳಾದವು. ವಾಟ್ಸಪ್, ಬಿಝಿನೆಸ್ ನಂಬರುಗಳಾದವು. ​ಫೇಸ್​ಬುಕ್​ ಗ್ರೂಪ್​ಗಳು, ತಮ್ಮ ಸದಸ್ಯರನ್ನು ಹೆಚ್ಚು ವೃತ್ತಿಪರರನ್ನಾಗಿಸಲು ಪ್ರಯತ್ನಿಸಿದವು. ಸ್ವಂತ ವೆಬ್​, ಆ್ಯಪ್​ಗಳು ಹುಟ್ಟಿಕೊಂಡು ಪ್ರತ್ಯೇಕ ವಹಿವಾಟುತಾಣಗಳೇ ನಿರ್ಮಾಣಗೊಂಡವು. ಕೊರೊನಾದಿಂದಾಗಿ ಸಾವುನೋವು ಸಂಕಷ್ಟಗಳ ಮಧ್ಯೆಯೇ ಹಳ್ಳಿಹಳ್ಳಿಗಳೂ ಆನ್​ಲೈನ್​ ಭಾಷೆಯನ್ನು ಉಸಿರಾಡುತ್ತ ನಗರಗಳಿಗೆ ತಮ್ಮ ಸೊಗಡನ್ನು ಪಸರಿಸಿದವು. ಪರಿಣಾಮವಾಗಿ ಸಣ್ಣ ಪುಟ್ಟ ಉದ್ಯಮಗಳು ಕಣ್ಣುಬಿಟ್ಟುಕೊಂಡವು. ಗೃಹಕೈಗಾರಿಕೋದ್ಯಮ ಮತ್ತು ದೇಸೀ ಮಾರುಕಟ್ಟೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡವು. ಗ್ರಾಹಕರೂ ಈ ಆನ್​ಲೈನ್ ಸಂತೆಗೆ ಕಣ್ಣನ್ನೂ ಮನಸ್ಸನ್ನೂ ಜೇಬನ್ನು ಬಲುಬೇಗನೇ ಹೊಂದಿಸಿಕೊಂಡುಬಿಟ್ಟರು. 

ಹಾಗಂತ ಇದು ಇಲ್ಲಿಗೇ ನಿಂತಿಲ್ಲ, ನಿಲ್ಲುವುದೂ ಇಲ್ಲ. ಮುಂದೇನು ಎನ್ನುವ ಕುತೂಹಲದ ಕಣ್ಣು ನೆಟ್ಟುಕೊಂಡೇ  ಮಾರುವವರೂ ಇದ್ದಾರೆ ಕೊಳ್ಳುವವರೂ. ಆದರೆ ಆನ್​ಲೈನ್​ ಆಗಲಿ ಆಫ್​ಲೈನ್ ಆಗಲಿ, ಎಡೆಬಿಡದೆ ಶ್ರದ್ಧೆಯಿಂದ ವ್ಯಾಪಾರ ಸೂತ್ರಗಳನ್ನು ನೇಯುತ್ತಿದ್ದರೆ ಮಾತ್ರ ಇಲ್ಲಿ ಬೆಳಕು. ಈ ದೃಷ್ಟಿಕೋನದಲ್ಲಿ ರೂಪಿಸಿದ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ಚಲನಾಮೃತ’ ; ಕೊರೊನಾ ಕಾಲದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವವರ ಅನುಭವ ಕಥನಗಳು. ನೀವು ಅಥವಾ ನಿಮ್ಮ ಸುತ್ತಮುತ್ತಲಿನವರು ಈ ಪರಿಧಿಗೆ ಒಳಪಟ್ಟಲ್ಲಿ ನಾಲ್ಕೈದು ಫೋಟೋಗಳೊಂದಿಗೆ ಬರೆದು ಕಳುಹಿಸಿ. ಪದಮಿತಿ ಕನಿಷ್ಟ 800, ಗರಿಷ್ಟ 1,500.  tv9kannadadigital@gmail.com 

* ಆನ್​ಲೈನ್​ನಲ್ಲಿ ಆಭರಣ ವಿನ್ಯಾಸ ಕುರಿತು ತರಗತಿ ತೆಗೆದುಕೊಳ್ಳುವುದು, ಬೇಡಿಕೆಗೆ ತಕ್ಕಂತೆ ಆಭರಣ ತಯಾರಿಸಿ ಕೊಡುವುದು, ಸ್ಥಳೀಯ ಚಾನೆಲ್​ಗಾಗಿ ವಾರ್ತೆಗಳನ್ನು ಓದುವುದು ಹೀಗೆ ಫೋನಿನಲ್ಲಿ ಪಟ್ಟಿ ಬೆಳೆಸುತ್ತಿದ್ದರು ಮೈಸೂರಿನ ನೀಲಿ ಲೋಹಿತ್. ಅವರ ಧ್ವನಿ-ಧಾಟಿ ಆಲಿಸುತ್ತ ಇಲ್ಲ ಇಲ್ಲ ಇದಷ್ಟೇ ಅಲ್ಲ ಆಳದಲ್ಲಿ ಇನ್ನೂ ಏನೋ ಇದೆ ಎನ್ನಿಸಿ ಮೆಲ್ಲಗೆ ಸರಣಿಯ ನಿರೀಕ್ಷೆಯನ್ನು ಅವರ ಲಯಕ್ಕೆ ತಕ್ಕಂತೆ ವಿವರಿಸುತ್ತ ಹೋದಾಗ, ತಕ್ಷಣವೇ ಅತ್ತಕಡೆಯಿಂದ ಉಡಿಯೊಳಗಿದ್ದ ಹೂವನ್ನೂ, ಕೆಂಡವನ್ನೂ ಏಕಕಾಲಕ್ಕೆ ತೂರಿಬಿಟ್ಟ ಭಾವ. ತನ್ನತನದ ಹಾದಿಯೊಳಗೆ ಹೂ ಕೆಂಡವಾಗಿ, ಕೆಂಡ ಹೂವಾಗುವ ಪರಿ ಇದು.

*

ಅದೇನೂ ನಡೆಯದೆ, ಅನಿಷ್ಟವೊಂದು ಜರುಗದೆ, ನಿಂತ ನೆಲ ನಡುಗಿಸದೆ, ಎದೆಯೇ ಒಮ್ಮೆ ಧಸ್ಸಕ್ ಎನ್ನದೆ, ನಂಬಿಕೆಯೊಂದು ಕಮರದೆ, ಜಗತ್ತೇ ಪ್ರತ್ಯೇಕವಾಗಿ ದೂರ ಸರಿದಂತಾಗದೆ, ನಿಸ್ಸಾರ ಎನಿಸದೇನು ಬದುಕು… ಕಳೆದ ವರ್ಷದಿಂದ ಜಗವ-ಜನರ ಅಮರಿಕೊಂಡ ಕೊರೊನಾ ಕಲಿಸಿದ ಪಾಠಗಳನ್ನು ಇಲ್ಲಿ ಕಮಕ್ ಕಿಮಕ್ ಎನ್ನದೆ ಕಲಿಯದೆ ಬೇರೆ ದಾರಿ ಇಲ್ಲ. ಕಳೆದುಕೊಂಡು ನಡೆಯೋದು ಇಲ್ಲಿ ಯಾರಿಗೂ ಹೊಸದಲ್ಲ, ಯಾರಿಗೂ ತಪ್ಪಿದ್ದಲ್ಲಾ. ಗೊತ್ತಿಲ್ಲ ಯಾರೆಲ್ಲಾ ಏನೆಲ್ಲಾ ಕಳೆದುಕೊಂಡಿದ್ದೀವಿ ಈ ಮಾರಿಯಿಂದ ಎಂದು. ನಾನು ಹೊರಗೆ ಕಲ್ಲು ಹಾಸಿನ ಮೇಲೆ ಕುಳಿತು ಈ ಸುಳ್ಳನ್ನು ನಿಜವೆಂದು ಭರಿಸಬೇಕೆಂಬ ಊಹೆಯೂ ಇಲ್ಲದೆ ಸಕಲ ದೇವಾನುದೇವತೆಗಳನ್ನು ಅದೊಂದೆ ಕ್ಷಣಕ್ಕೆ ಭುವಿಗಿಳಿಸಿಕೊಂಡು ಗಂಡನನ್ನ ಉಳಿಸಿಕೊಳ್ಳಬಲ್ಲೇ ಅನ್ನೋ ಭಂಡ ಧೈರ್ಯ ಮಾಡಿ ಬದುಕನ್ನೇ ಚೆಲ್ಲಿ ಕೂತಿದ್ದೆ.

ನಿಜಾ, ಸುಳ್ಳೊಂದು ಸತ್ಯವಾಗಿತ್ತು ಜನುಮ ಜನುಮಕ್ಕೂ ಜೊತೆ ಸಾಗಿಬರುವೆನೆಂದು ಮಾತು ಕೊಟ್ಟಿದ್ದ ಸಖ ತುಸು ನಕ್ಕು ಎರಡು ಭಾರಿ ಕಾಲು ಕೊಡವಿ ಹೃದಯದ ಬಡಿತ ನಿಲ್ಲಿಸಿದ್ದ. ಅಲ್ಲೂ ಸೋಮಾರಿ ಅವನು, ಹೆಚ್ಚು ಒದ್ದಾಡದೆ ಸುಖವಾಗಿ ಸಾವನ್ನಪ್ಪಿದ್ದ. ಇಲ್ಲಿ ನನ್ನ ಬದುಕು ಮತ್ತೆ ಒದ್ದಾಟದ ಮಡಿಲಿಗೆ ಅನುಮತಿ ಕೇಳದೆ ಬಿದ್ದಿತ್ತು.

ಎರಡು ತಿಂಗಳ ಹಿಂದೆ ಸಾಯುವ ವಾರದ ಹಿಂದಷ್ಟೇ ಗಂಡ ಹೇಳಿದ್ದ, ಅಷ್ಟು ದೂರದ ಊರಿನ ಕೆಲಸ ಸಾಕಾಗಿದೆ ಕಣೇ, ಇನ್ನು ಇರೋವಷ್ಟು ದಿನ ಒಟ್ಟಿಗೆ ಪ್ರೀತಿಯ ಸವಿಯುತ್ತಾ ಬದುಕೋಣಾ. ನಾನು ಇರೋ ಜಾಗದಲ್ಲೇ ಹೊಸ ವ್ಯಾಪಾರ ಮಾಡ್ತೀನಿ, ನೀನು ಆರಾಮಾಗಿ ಇನ್ನು ಗೃಹಿಣಿಯಾಗಿರು ಸಾಕು ಅಂತ. ಆವತ್ತಿಗೆ ನನ್ನ ಬಹುದಿನದ ಕನಸಿಗೆ ರೆಕ್ಕೆ ಸಿಕ್ಕಿತ್ತು, ಅತಿಯಾಗಿ ಹಚ್ಚಿಕೊಳ್ಳೋ ಗಂಡನ ಎದೆಯ ಸಂಪೂರ್ಣ ಒಲವನ್ನು, ಸುಂದರ ಸಂಸಾರದೊಳಗೇ ಉಳಿದು, ಸದ್ಗೃಹಿಣಿಯಾಗಿ ಸವಿದು, ಸಾಯಬೇಕು ಎಂದು.

ಅಲ್ಲೇಲ್ಲೋ ಹಾಡು ಕೇಳಿದ ಭಾವ ‘ಅಂದುಕೊಂಡಂಗೆಲ್ಲಾ ಜೀವನ ಸಾಗದೂ ಗೆಳತಿ’ ಅತ್ತ ಅವನ ಮರಣ ಇತ್ತ ನನ್ನ ಹೆಣ. ಎರಡನ್ನೂ ಒಪ್ಪಿಕೊಳ್ಳದಿದ್ದರೆ ಬದುಕೋದಕ್ಕೆ ಬೇರೆನಿದೆ? ಮಗಳಿದ್ದಾಳೆ, ಜವಾಬ್ದಾರಿ ಬೆನ್ನು ಮುರಿಯೋವಷ್ಟಿದೆ, ಅವನೇನೋ ಸಲೀಸಾಗಿ ಉಸಿರ ಕೆಲಸ ಮುಗಿಸಿ ಮಣ್ಣಿನೆಡೆಗೆ ಮುಖ ಮಾಡಿ ಮಲಗಿಬಿಟ್ಟ, ಆದರೆ ನಾನು? ಅವನ ಹೆಂಡತಿ ಅವನನ್ನೇ ಅನುಸರಿಸೋದು ಧರ್ಮ. ನಾನೂ ಮಣ್ಣಿನ ಕಡೆಗೆ ತಿರುಗಿದೆ.

lockdown stories

ಮಣ್ಣೊಳಗೆ ಮಣ್ಣಾಗಿ ಬೆಂದರಷ್ಟೇ ಬದುಕು

ಮಣ್ಣು ನನಗೆ ಹೊಸದಲ್ಲ, ಇದೇ ಮಣ್ಣಿನ ನೆಪವಿಟ್ಟು ಅಲ್ಲವೇ ನನ್ನವನು ನನ್ನ ಕೆಲಸ ಬಿಡಿಸಿದ್ದು, ಇದೇ ನೆಪಕ್ಕಲ್ಲವೇ ನನ್ನ ಕನಸಿನ ಪತ್ರಿಕೋದ್ಯಮದೆಡೆಗೆ ನಾ ತಿರುಗದಂತೆ ಕೈ ಕಟ್ಟಿದ್ದು, ಇದೇ, ಇದೇ ಮಣ್ಣು ನನ್ನನ್ನು ನಾಲ್ಕು ಗೋಡೆಗಳ ಒಳಗೆ ಗೋರಿಯಾಗಿಸಿದ್ದು. ಅದೆಷ್ಟು ಬೈದುಕೊಂಡಿದ್ದೆ ಈ ಮಣ್ಣಿಗೆ ಏನೆಲ್ಲಾ ಮಾಡಬೇಕೆಂದರೂ ಬಿಡದೆ ಹಿಡಿದು ಮತ್ತೆ ಗೋಡೆಗಳ ಮಧ್ಯೆ ಕೂರಿಸೋ ಹಠ ನಿನಗೂ ಏಕೆ, ಹುಟ್ಟಿದಾಗಿಂದ ಹೋರಾಟ ಮಾಡಿ ಓದಿದ್ದು ಬರೀ ಇಷ್ಟಕ್ಕಾ? ಏನಿದೆ ಮಣ್ಣಲ್ಲಿ ಕೂತು ಕೈ ಕೆಸರಲ್ಲಿ ಕೊಡವಿ, ಪದೇಪದೆ ನೀರಲ್ಲಿ ಅದ್ದಿ ಬದುಕೋದೇ ಬದುಕಾ? ಹೊರಗಿನ ಪ್ರಪಂಚಕ್ಕೆ ಹೆಜ್ಜೆ ಇಡದೆ, ಒಂದಷ್ಟು ಸುತ್ತಾಡದೆ, ಅವನೆಲ್ಲೋ ಅಲ್ಲಿ ಆಫೀಸು ಕೆಲಸದ ಒತ್ತಡದಲ್ಲಿದ್ದರೆ, ನಾನೋ ನಾಲ್ಕು ಗೋಡೆಗಳ ನಡುವೆ ಒತ್ತರಿಸಿಕೊಂಡು ಬರುವ ಬೇಸರವ ಮಣ್ಣಮೇಲೆ ಬಿಟ್ಟು ಒಲ್ಲದ ಬದುಕಿಗೆ ಅಂಟಿಕೊಳ್ಳೋದೇ ಬದುಕಾ? ಒಂದಲ್ಲ ಎರಡಲ್ಲಾ ಬಂದ ಅವಕಾಶಗಳು. ಸಿನೆಮಾ, ಧಾರವಾಹಿ, ನಾಟಕ. ಒಳ್ಳೆಯ ಕಲೆ ಬೆಳೆಯಲಿ, ಜಗತ್ತಿಗೆ ಒದಗಲಿ ಎಂದೆಲ್ಲಾ. ಸುತರಾಂ ಒಪ್ಪಲಿಲ್ಲ ಪತಿದೇವರು. ನಿನಗೆ ಮಣ್ಣಲ್ಲೇ ಕಲೆಯಿದೆ ಕೂತಲ್ಲೇ ಹುಡುಕು ಎಂದು ಪ್ರೀತಿಯ ಬಲೆಹಾಕಿ ಕೂರಿಸಿಬಿಟ್ಟ.

ಕೆಲಸ ಬಿಟ್ಟ ಮೇಲೆ ಮಾನಸಿಕವಾಗಿ ಆರ್ಥಿಕವಾಗಿ ಅವನನ್ನೇ ಅವಲಂಬಿಸುವುದು ನಿಜಕ್ಕೂ ನನಗೆ ಭಿಕ್ಷೆಯ ಬದುಕಾಗಿತ್ತು. ನನ್ನದು ಹತ್ತನೆಯ ತರಗತಿಯಿಂದ ದುಡಿಯೋದಕ್ಕೆ ಪ್ರಾರಂಭಿಸಿದ ಕೈ, ಅಪ್ಪ ಅಮ್ಮನಿಗೆ ಹೆತ್ತ ಒಂಭತ್ತು ತಿಂಗಳಿಗೆ ಸಾಕಾಗಿ, ಅಜ್ಜಿಯ ಮನೆಯ ಹಂಗಿನ ಬದುಕಲ್ಲಿರದೆ ಸ್ವಾವಲಂಬಿ ಬದುಕಿನೆಡೆಗೆ ಮುಖ ಮಾಡಿದವಳು. ಇಂದು ಮತ್ತೆ ಕೈ ಚಾಚಿ ನಿಲ್ಲು ಎಂದರೆ ಅದ್ಹೇಗೆ ಸಾಧ್ಯ? ಸರಿ, ಬೇಡವೆಂದು ಎಸೆದಿದ್ದ ಮಣ್ಣನ್ನೇ ಕಳೆದ ವರ್ಷದ ಲಾಕ್​ಡೌನ್ ಸಮಯದಲ್ಲಿ ಮತ್ತೆ ಕೈಗೆತ್ತಿಕೊಂಡೆ. ಅಷ್ಟೇ ಮತ್ತೆ ಅವನತ್ತ ತಿರುಗಿ ಬೇಡಿದ್ದು ಬರಿ ಸಾಂಗತ್ಯಕ್ಕೆ, ಸಾಮೀಪ್ಯಕ್ಕೆ ಮಾತ್ರ. ಇವೆರಡಕ್ಕೂ ಅವನಲ್ಲದೆ ಬೇರೆ ದಾರಿಯಾದರೂ ಏನಿತ್ತು? ಹೊಸ ಹೊಸ ಆಭರಣಗಳನ್ನ ತಯಾರಿಸೋದಕ್ಕೆ ಕುಳಿತೆ, ಮಣ್ಣಿನ ಕಸ ಕಡ್ಡಿ ತೆಗೆದು ಹದ ಮಾಡಿ ರೂಪ ಕೊಟ್ಟು ಒಣಗಿಸಿ ಮತ್ತೆ ಬೆಂಕಿಯೊಳಗಿಟ್ಟು ಒಡೆಯದಂತೆ ಬೇಯಿಸಿ ಬಣ್ಣ ಕಟ್ಟಿ ಸುಂದರ ರೂಪಕೊಟ್ಟೆ. ಸಾಲದ್ದಕ್ಕೆ ನನ್ನ ಒಡವೆಗಳಿಗೆ ನಾನೇ ರೂಪದರ್ಶಿಯಾಗಿ ಚಂದದ ಭಾವಚಿತ್ರ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪಣಕ್ಕಿಟ್ಟು ಒಂದಷ್ಟು ವ್ಯಾಪಾರ ಗಿಟ್ಟಿಸಲು ನೋಡಿದ್ದು ನಿಜಕ್ಕೂ ಸವಾಲಾಗಿತ್ತು.

lockdown stories

ಅವ ಆ ಮಣ್ಣಿಗೆ ನಾ ಈ ಮಣ್ಣಿಗೆ

ಆದರೂ ಛಲಬಿಡದೆ ನಿಂತೆ, ಒಂದೇ ಹಠಕ್ಕೆ ಬಿದ್ದು, ಇಂದು ನನ್ನ ಸೊನ್ನೆಯಂತೆ ನೋಡುವ ನನ್ನವನೆದುರು ಬಹುದೊಡ್ಡ ಮೊತ್ತವಾಗಿ ಬೆಳೆದು ಅವನಷ್ಟೇ ದುಡಿದು ತೋರಿಸಬೇಕಿತ್ತು ಅಷ್ಟೇ. ನೋಡು ನಾಲ್ಕು ಗೋಡೆಗಳ ನಡುವೆ ನೀ ಕೂಡಿಟ್ಟರೂ ನಾ ಇಲ್ಲೇ ಅಂತಸ್ತುಗಳ ಕಟ್ಟಬಲ್ಲೇ ಎಂದು. ಆರು ತಿಂಗಳುಗಳಲ್ಲಿಯೇ ನನ್ನ ವ್ಯಾಪಾರ ವಿದೇಶವನ್ನೂ ತಲುಪಿತ್ತು, ಧೃತಿ ಮಹಿಳಾ ಮಾರುಕಟ್ಟೆಯ ಮೂಲಕ ನಾನು ಅತಿ ಹೆಚ್ಚು ಗ್ರಾಹಕರನ್ನೂ ಪಡೆದೆ, ಗ್ರಾಹಕರ ಅಪೇಕ್ಷೆಯ ಮೇರೆಗೆ ಅವರಿಷ್ಟದ ಆಭರಣಗಳನ್ನು ತಯಾರಿಸಿಕೊಡುವುದು ನಿಜಕ್ಕೂ ಹೊಸ ಚಾಲೆಂಜ್, ಗೆದ್ದೆ ಕೂಡ. ನನ್ನ ಮಣ್ಣಿನ ಪಯಣಕ್ಕೆ ನನ್ನ ಪತಿದೇವರು ಪರೋಕ್ಷ ಕಾರಣವಾದರೆ, ನನ್ನ ಮಗಳ ಪುಟ್ಟ ಕೈಗಳು ಕೊಟ್ಟ ಸಹಕಾರ ನಿಜಕ್ಕೂ ಬೆಲೆಕಟ್ಟಲಾಗದ್ದು, ಇವತ್ತಿಗೂ Free Hand Painting ಆಭರಣಗಳನ್ನು ಖುದ್ದು ಅವಳೇ ಮಾಡುವುದು. ಮಣ್ಣನ್ನು ಕೊಳೆಸಿ, ಗಂಟೆಗಟ್ಟಲೆ ಬಟ್ಟೆಯಲ್ಲಿ ಸೋಸಿ ಹದವಾದ ಮಣ್ಣನ್ನು ತಯಾರಿಸಿಕೊಡುತ್ತಿರುವುದು ಈ ಪುಟ್ಟ ದೇವತೆಯೇ. ನನಗಿಂತ ಅಚ್ಚುಕಟ್ಟಾಗಿ, ನನಗಿಂತ ಜತನದಿಂದ ಬಣ್ಣಕಟ್ಟಬಲ್ಲ ಗಟ್ಟಿಗಿತ್ತಿ‌ ನನ್ನ ಮಗಳು ಶ್ರಾವಣಿ.

ಆಭರಣ ತಯಾರಿಕೆಯೊಂದೇ ಸಾಲದು ಎಂದು ಕಳೆದ ಸೆಪ್ಟೆಂಬರ್​ನಿಂದ ಆನ್​ಲೈನ್ ತರಗತಿಯನ್ನೂ ಪ್ರಾರಂಭ ಮಾಡಿದೆ, ಇವತ್ತಿಗೆ ನನ್ನ ಬಳಿ ಕಲಿತ ನನ್ನ ವಿದ್ಯಾರ್ಥಿಗಳ ಸಂಖ್ಯೆ 79 ದಾಟಿದೆ, ತುಂಬಾ ಹೆಣ್ಣು ಮಕ್ಕಳು ತಮ್ಮದೇ ಸ್ವಂತ ಉದ್ಯಮ ಪ್ರಾರಂಭಿಸಿದ್ದಾರೆ. ಕಾಲೇಜಿಗೆ ಹೋಗುವುದರ ಜೊತೆಗೆ ದುಡಿದು ಅಮ್ಮನಿಗೆ ಆರ್ಥಿಕವಾಗಿ ನೆರವಾಗಿದ್ದಾರೆ. ಮೊಬೈಲ್, ಟಿವಿ ಬಿಟ್ಟು ಹೊಸ ಕ್ರಿಯಾಶೀಲ ಜಗತ್ತಿಗೆ ತೆರೆದುಕೊಂಡಿದ್ದಾರೆ. ಸಹನೆ‌- ಸೃಜನಶೀಲತೆಯನ್ನು ರೂಢಿಸಿಕೊಂಡಿದ್ದಾರೆ. ಕೋಪ ನಿಯಂತ್ರಿಸಲು, ಸಹನೆ ರೂಢಿಸಿಕೊಳ್ಳಲು, ಮಣ್ಣಿನ ಸಹವಾಸ ಉತ್ತಮ ನೈಸರ್ಗಿಕ ಚಿಕಿತ್ಸೆಯೂ ಆಗಿದೆ.

ನನ್ನವನ ದೇಹ ಮಣ್ಣಿಗಿಟ್ಟ ಮೇಲೆ ಬದುಕುವುದು ನಿಜಕ್ಕೂ ನರಕವೇ ಆಗಿತ್ತು. ಗಳಿಗೆಗಳಿಗೆಗೂ ಮೊಬೈಲ್‌ ರಿಂಗಣಿಸಿ ಕರೆದಂತೆ, ಆಗಷ್ಟೇ ಸಂಪೂರ್ಣ ದಾಂಪತ್ಯ ಜೀವನ ಕೊಡಲು ಬಂದ ಅವನನ್ನು ಸಾವು ಹೀಗೆ ನುಂಗಬೇಕೆ?  ‘ಪಾಪ’ ನನ್ನದಾ  ಇಲ್ಲ ಅವನದಾ? ಉತ್ತರ ಸಿಗದ ಪ್ರಶ್ನೆಗಳನ್ನ ಹಿಡಿದು, ವಾರಪೂರ ಅತ್ತವಳಿಗೆ ಅನಿಸಿದ್ದು, ಬದುಕುಪೂರ ಅತ್ತರೂ ಕರಗದ ನೋವಿದು, ನಡಿ ಅಳುತ್ತಲೇ ಮಣ್ಣು ಹಿಡಿಯೋಣ ಎಂದು, ಮತ್ತೆ ಮಣ್ಣು ಮತ್ತೆ ಬಣ್ಣ ಹಿಡಿದೆ. ತಿಂಗಳೇನು ಗಳಿಗೆ ಕಳೆದಂತೆ ಬಂದು ಎದುರು ನಿಂತರೆ, ಯಾರಿದ್ದಾರೆ ಬಾಡಿಗೆ ಕಟ್ಟಲು, ತೆಗೆದುಕೊಂಡ ಸಾಲಕ್ಕೆ ಬಡ್ಡಿ ಕಟ್ಟಲು, ಖಾಲಿಯಾಗೋ ಡಬ್ಬಿಗಳ ಹೊಟ್ಟೆ ಮತ್ತೆ ಭರ್ತಿ ಮಾಡಲು, ಮಗಳ ವಿದ್ಯಾಭ್ಯಾಸಕ್ಕೆ ಒಂದಿಷ್ಟು ಕೂಡಿಡಲು, ನಾನಲ್ಲದೆ ಮತ್ತ್ಯಾರು?

ಈ‌ ಕೊರೊನಾದಿಂದಾಗಿ ನನ್ನಂತೆ ಒಂಟಿಯಾಗಿ ಬಯಲಲ್ಲಿ ನಿಂತ ಜೀವಗಳು ಅದೆಷ್ಟೋ. ನಿಂತರೆ ಕಾಲು ನೋವಷ್ಟೇ, ನಡೆದರೆ ನಿಜಕ್ಕೂ ಸಾಧನೆಯಾದೀತು, ಉಳಿದವರಿಗೆ ಸ್ಫೂರ್ತಿಯಾದೀತು. ಇವತ್ತಿಗೂ ನನಗೆ ದುಡಿಯುವುದು ಕಷ್ಟ ಎನಿಸಿಲ್ಲ, ಹೆಣ್ಣು ಸುಲಭವಾಗಿ ಗಂಡಾಗಬಲ್ಲಳು, ಒಮ್ಮೆಲೆ ಹೆಣ್ಣೂ-ಗಂಡೂ ಆಗಿ ಬದುಕೆಂಬ ರಥವ ಸಲೀಸಾಗಿ ಎಳೆಯಬಲ್ಲಳು, ಆ ಶಕ್ತಿ ಅವಳಿಗೆ ಮಾತ್ರವಿದೆ. ಬದುಕನ್ನೇ ಕಳೆದುಕೊಂಡವರು ಯಾರೂ ಇಲ್ಲ, ಒಂದು ಬಂಧ ಕಳಚಿಕೊಂಡ ಕೂಡಲೆ ಬದುಕೇ ಮುಗಿಸಿಬಿಟ್ಟರೆ ನಮ್ಮ ಹುಟ್ಟಿಗೊಂದು ಅರ್ಥ ಬೇಡವೆ? ಸಾವು-ಸತ್ಯ ಬಂದಹಾಗೆ ಸ್ವೀಕರಿಸೋಣ, ಅತ್ತು ಮತ್ತೆ ಮುನ್ನಡೆಯೋಣ, ಬಂದ ನೆಂಟರು ಒಂದೋ, ಹನ್ನೊಂದು ದಿನದವರೆಗೆ ಇಲ್ಲ ತಿಂಗಳ ತಿಥಿಯವರೆಗೆ. ಆದರೆ ಕಡೆವರೆಗೂ ನಿಮಗೆ ನೀವೇ.

lockdown stories

ಯಾರಿಲ್ಲದೆಯೂ ಬದುಕು ನಡೆಯುತ್ತದೆ ನಿನ್ನೊಳಗೆ ನೀನಿದ್ದರೆ

ವಿಧವೆಯಾದೆ. ನಾಳೆ ನನ್ನ ಯಾರು ಕರೆದು ಭಾವಿಸುತ್ತಾರೆ, ಹೊಸ ಸೀರೆ ಉಟ್ಟರೆ ಹಂಗಿಸುತ್ತಾರೆ, ಚೆಂದವಾಗಿ ಸಿಂಗರಿಸಿಕೊಳ್ಳೋದುಂಟೆ ಈ ಕೆಟ್ಟ ಪ್ರಪಂಚದಲ್ಲಿ, ನಕ್ಕರೊಂದು ಕಥೆ, ಅತ್ತರೆ ಸೋಗು ಅನ್ನೋರೇ ಜೊತೆ, ನಗೋದಾ ಅಳೋದಾ ಈ ಮಂದಿ ಜೊತೆ? ಬಿಟ್ಟು ಹಾಕಿಬಿಡಬೇಕು ಇದೆಲ್ಲ. ಒಮ್ಮೆ ಸಾವನ್ನು ಅವನ ಮೇಲಿಂದ ತೆಗೆದು ನಿಮ್ಮ ಮೇಲೆ ಹೊದ್ದು ನೋಡಿದರೆ? ಇಡೀ ಪ್ರಪಂಚದ ವರ್ತನೆ ಬೇರೆಯೇ ಆಗಿರುತ್ತದೆ. ಬೇಸರದ ಗಂಡ ಬಾರಿನ ಕಡೆಗೆ ಹೋಗಬಹುದು ನೋವು ಮರೆಯಲಾರದೆ, ಭರಿಸಲಾರದೆ, ಅದಕ್ಕೂ ಮನ್ನಣೆ ಇದೆ ಈ ಜಗದಲ್ಲಿ. ವರ್ಷ ತುಂಬುವುದರೊಳಗೆ ಮದುವೆ ಆಗಬೇಕು. ಅವನಿಗಾಗಿ ಅಲ್ಲ, ಅವಳು ಹಡೆದು ಬಿಟ್ಟು ಹೋದ ಮಕ್ಕಳ ಪಾಲನೆಗಾಗಿ, ಅವನಿಗೆ ಬೇಯಿಸಲು ಸಮಯಕ್ಕೆ ಸರಿಯಾಗಿ, ಹಾಸಿಗೆ ಹಿಡಿದರೆ ಹಸ್ನೀರು ಬಿಸ್ನೀರು ಕಾಸಿ ಕೊಡಲು ತಾಯಿಯಾಗಿ. ಜಗದ ಕೈಲಿರೋ ತಕ್ಕಡಿ ತೂಗೋದೆ ಹೀಗೆ…

ಅದೇ ಅವಳು ಒಂಟಿಯಾದಾಗ ಇದೇ ಜಗದ ವೇದ ಹೇಳೋದು ಹೀಗೆ; ಗಂಡ ಇಲ್ಲದ ಮನೆ, ಹೆಣ್ಣಿನ ಭಾರ ಹೊರೋಕೆ ಅತ್ತೆ ಮಾವನಿಗೆ ಕಸುವಿಲ್ಲ ದಯಮಾಡಿ ಕರೆದೊಯ್ಯಬೇಕು ತವರಿಗೆ. ಆದರೆ ತವರಿನವರಿಗೆ ನೂರಾರು ನೆಪ. ಮತ್ತೆ ಕೆಂಡ ಮಡಿಲಿಗೆ ಬೇಡವೇ ಬೇಡ. ಮನೆಯಲ್ಲಿ ಮದುವೆಯಾಗದವರಿದ್ದಾರೆ. ಇರಲಿ ಬೇರೊಂದು ಬಾಡಿಗೆ ಮನೆಯಲ್ಲಿ, ಇಲ್ಲ ಮನೆಯ ಮೇಲಿನ ಪುಟ್ಟ ಕೋಣೆಯಲ್ಲಿ, ಅಣ್ಣ, ತಮ್ಮ, ಅಪ್ಪಾ ಯಾರೋ ತಿಂಗಳಿಗೆ ಇಷ್ಟಿಷ್ಟು ಕೊಡುತ್ತಾರೆ, ಬದುಕಲಿ‌ ಮತ್ತೆ ಹಂಗಲ್ಲಿ. ಇಲ್ಲವಾ ನಿನ್ನಂಥವರು ಲೆಕ್ಕವಿಲ್ಲದಷ್ಟು ಇದ್ದಾರೆ, ನಡಿ ಕಚ್ಚೆ ಕಟ್ಟಿ ದುಡಿ, ಎರಡೂ ಮನೆ ಮಾನ ಮರ್ಯಾದೆ ಮಾತ್ರ ಜೋಪಾನವಾಗಿ ಹಿಡಿ. ಮಕ್ಕಳಾಗದ ಆಪರೇಷನ್ ಆಗಿದೆ, ಫಲಕೊಡದ ಭೂಮಿ ಬೆಲೆ ಕಡಿಮೆ ನಿಮ್ಮ ಪ್ರಪಂಚದಲ್ಲಿ. ಮತ್ತೆ ಮದುವೆಯೆಲ್ಲಾ ಹೆಣ್ಣಿಗಲ್ಲಾ, ಅವಳ ದೇಹಕ್ಕಾಗಲಿ, ಮನಸ್ಸಿಗಾಗಲಿ ಅದರೊಟ್ವಿಗೆ ಅವಳಿಗೇ ಇಲ್ಲಿ ಸಂಬಂಧವಿಲ್ಲ, ನೆನಪಿರಲಿ.

lockdown stories

ನೀಲಿ ಕಲಾ

ಮೊನ್ನೆವರೆಗೂ ತಲೆ ಬೋಳಿಸಿ ಬಿಳಿಸೀರೆ ಹೊದಿಸಿದ್ದ ಸಂಸೃತಿ ಬೇರೆಯಲ್ಲ, ಇಂದು ಭಾವನೆಗಳ ಬೋಳಿಸಿ, ಹೆಜ್ಜೆಗೊಂದು ಮುಳ್ಳ ಹಾಸಿ ನಡೆಸೋ ಸಮಾಜವೂ ಬೇರೆಯಲ್ಲ, ಬದಲಾವಣೆಗಾಗಿ ಕಾದು ಕುಳಿತರೆ ನೋಡು ಗಂಡ ಬಿಟ್ಟು ಹೋದ ಕೂಸಿಗಿಲ್ಲಿ ಸುಂದರ ಬದುಕಿಲ್ಲ. ಹೆತ್ತ ಮಕ್ಕಳಿಗಾಗಿ ಮಾತ್ರವಲ್ಲ, ನಿನ್ನೊಳಗಿನ ನಿನಗಾಗಿ, ನೀನು ಬದಲಾಗಬೇಕಿದೆ. ದುಡಿಯೋದಕ್ಕೆ ಇಲ್ಲಿ ನೂರು ದಾರಿ, ಕೂತುಂಡರಷ್ಟೇ ಏಕೆ, ಲೆಕ್ಕಹಾಕುಂಡರೂ ಕರಗೋ ಆಸ್ತಿ ಎಷ್ಟು ದಿನ, ನಿನ್ನ ಬದುಕು ನಿನ್ನ ಕೈಲಿರಲಿ, ನಿನ್ನ ದುಡಿಮೆ ನಿನ್ನ ಭರವಸೆಯಾಗಲಿ, ಗಂಡ ಲಕ್ಷ-ಲಕ್ಷ ದುಡಿಯಲಿ, ಜೊತೆಗೆ ನಿನ್ನದೂ ಅಂತಾ ಒಂದೆರಡಾಣೆ ಸೇರಲಿ, ಸ್ವಾವಲಂಬಿ ಬದುಕು ಪ್ರತಿ ಹೆಣ್ಣಿನ ಆಯ್ಕೆಯಾದ ದಿನ, ಜಗತ್ತು ತಾನಾಗೆ ಬದಲಾಗುತ್ತದೆ. ಪ್ರಕೃತಿಯ ತಕ್ಕಡಿಯಲ್ಲಿ ಗಂಡು ಹೆಣ್ಣಿಗೆ ಸಮಾನ ಬದುಕಿದೆ ಅಲ್ಲವೆ?‘

ಇದನ್ನೂ ಓದಿ : Lockdown Stories : ಚಲನಾಮೃತ ; ಹಾಸನ ಜಿಲ್ಲೆಯ ರಾಜಮುಡಿ ಅಕ್ಕಿಯು ಎಂಎನ್​ಸಿ ಕ್ಯಾಂಟೀನ್ ತಲುಪಿದ ಕಥೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada