ತ್ರಿವಿಕ್ರಮ್ ಅನ್ನು ಬಳಸಿಕೊಂಡರೇ ಭವ್ಯಾ: ಸುದೀಪ್ ಎದುರು ಬಿಸಿ-ಬಿಸಿ ಚರ್ಚೆ
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ನಲ್ಲಿ ಭವ್ಯಾ ಮತ್ತು ತ್ರಿವಿಕ್ರಮ್ ಆರಂಭದಿಂದಲೂ ಆತ್ಮೀಯರಾಗಿದ್ದರು. ಆದರೆ ಫಿನಾಲೆ ವಾರ ಹತ್ತಿರ ಬರುತ್ತಿದ್ದಂತೆ ಇಬ್ಬರ ನಡುವೆ ಬಿರುಕು ಮೂಡಿದೆ. ‘ನೀನು ನನ್ನನ್ನು ಬಳಸಿಕೊಂಡು ಇಲ್ಲಿಯವರೆಗೆ ಬಂದಿದ್ದೀಯ’ ಎಂದು ಭವ್ಯಾಗೆ ತ್ರಿವಿಕ್ರಮ್ ಹೇಳಿದ್ದರು. ಈ ವಿಷಯವನ್ನು ವಾರದ ಪಂಚಾಯಿತಿಯಲ್ಲಿ ಸುದೀಪ್ ಚರ್ಚೆ ಮಾಡಿದರು.
ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತು, ಮೋಕ್ಷಿತಾ ಮತ್ತು ತ್ರಿವಿಕ್ರಮ್ ಇದೀಗ ಫಿನಾಲೆ ತಲುಪಿದ್ದಾರೆ. ಆದರೆ ಸೀಸನ್ ಆರಂಭದಿಂದಲೂ ಆತ್ಮೀಯರಾಗಿದ್ದ ಭವ್ಯಾ ಮತ್ತು ತ್ರಿವಿಕ್ರಮ್ ನಡುವೆ ಬಿರುಕು ಮೂಡಿದೆ. ತ್ರಿವಿಕ್ರಮ್ ಅಂತೂ ಭವ್ಯಾಗೆ, ‘ನೀನು ನನ್ನ ಬಳಸಿಕೊಂಡು ಇಲ್ಲಿವರೆಗೂ ಬಂದಿದ್ದೀಯ’ ಎಂದಿದ್ದಾರೆ. ಇದು ಭವ್ಯಾಗೆ ತೀವ್ರ ನೋವು ತಂದಿದೆ. ಶನಿವಾರ ನಡೆದ ಈ ಸೀಸನ್ನ ಕೊನೆಯ ವಾರದ ಪಂಚಾಯಿತಿಯಲ್ಲಿ ಸುದೀಪ್ ಅವರು ಇದೇ ವಿಷಯವನ್ನು ಎಲ್ಲರೆದುರು ಚರ್ಚೆಗಿಟ್ಟರು.
ಈ ವೇಳೆ ಮಾತನಾಡಿದ ಭವ್ಯಾ, ‘ಖಂಡಿತ ನಾನು ಬಳಸಿಕೊಂಡಿಲ್ಲ. ನನ್ನ ಆಟ ನಾನು ಆಡಿಕೊಂಡು ಇಲ್ಲಿ ವರೆಗೆ ಬಂದಿದ್ದೀನಿ’ ಎಂದರು. ಆದರೆ ತ್ರಿವಿಕ್ರಮ್, ಹಿಂದೆ ನಡೆದ ಟಾಸ್ಕ್ನ ಉದಾಹರಣೆ ಕೊಟ್ಟು, ‘ಪ್ರತಿ ಕ್ಯಾಪ್ಟನ್ ಆಯ್ಕೆ ಬಂದಾಗ ಬಾರಿ ನನ್ನ ಹೆಸರು ತಗೊಂಡಿದ್ದಾರೆ. ನನ್ನ ಜೊತೆ ಗೇಮ್ ಪ್ಲ್ಯಾನ್ ಮಾಡಿದ್ದಾರೆ. ನನ್ನ ಜೊತೆಗೆ ಇದ್ದರು, ಭಾವನಾತ್ಮಕ ಬೆಂಬಲ ಕೊಟ್ಟಿದ್ದಾರೆ, ತೆಗೆದುಕೊಂಡಿದ್ದಾರೆ. ಇಷ್ಟು ದಿನ ಮಾಡಿ ಕೊನೆಯ ಆಟಕ್ಕೆ ಬಂದಾಗ ನನಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ನನ್ನನ್ನು ಆಯ್ಕೆ ಮಾಡಲಿಲ್ಲ. ಟಾಸ್ಕ್ನಲ್ಲಿ ಮೋಕ್ಷಿತಾ ಜೊತೆ ಮಾತನಾಡಿದ ವಿಷಯ ನನಗೆ ಹೇಳಬಹುದಿತ್ತು, ಎಂಡ್ಗೇಮ್ ಬಂದಾಗ ಹೀಗೆ ಆಡುವುದು ಸರಿಯಲ್ಲ. ಹಾಗಾಗಿ ನೀವು ನನ್ನನ್ನು ಬಳಸಿಕೊಂಡಿರಿ ಎಂದು ಹೇಳಿದೆ’ ಎಂದರು ತ್ರಿವಿಕ್ರಮ್.
ಇದನ್ನೂ ಓದಿ:ಮಧ್ಯರಾತ್ರಿ ಬಿಗ್ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಆದರೆ ಇದನ್ನು ಒಪ್ಪದ ಭವ್ಯಾ ಗೌಡ, ‘ಆ ಟಾಸ್ಕ್ನ ಒಂದು ರೌಂಡ್ ಆದ ಬಳಿಕವೇ ನಮಗೆ ಹೀಗೊಂದು ಸ್ಟ್ರಾಟಜಿ ಮಾಡಬಹುದು ಎಂದು ಗೊತ್ತಾಗಿದ್ದು, ಹಾಗಾಗಿ ನಾನು ಆ ಸ್ಟ್ರಾಟಜಿ ಮಾಡಿದೆ. ಅಲ್ಲದೆ ಅದೇ ಟಾಸ್ಕ್ನಲ್ಲಿ ಮೂರನೇ ರೌಂಡ್ನಲ್ಲಿ ತ್ರಿವಿಕ್ರಮ್ ಅವರನ್ನು ಆಯ್ಕೆ ಮಾಡಿದೆ ಸಹ’ ಎಂದರು ಭವ್ಯಾ. ಈ ಚರ್ಚೆಯ ವೇಳೆ ಭವ್ಯಾ ಗೌಡ ಕಣ್ಣೀರು ಸಹ ಹಾಕಿದರು. ಆದರೆ ಕಣ್ಣೀರಿಗೆ ಕರಗದ ತ್ರಿವಿಕ್ರಮ್, ‘ಮೋಕ್ಷಿತಾ ಜೊತೆಗೆ ಮಾಡಿದ ಸ್ಟ್ರಾಟಜಿಯನ್ನು ನನ್ನ ಜೊತೆಗೆ ಮಾಡಬಹುದಿತ್ತು. ಅದೇ ಸ್ಟ್ರಾಟಜಿಯನ್ನು ನನ್ನೊಂದಿಗೆ ಮಾಡಿದ್ದಿದ್ದರೆ ಇಬ್ಬರೂ ಸಹ ಒಟ್ಟಿಗೆ ಗೆಲ್ಲುವ ಸಾಧ್ಯತೆ ಇತ್ತು. ಒಂದೊಮ್ಮೆ ನೀನು ಆಡಿದರೆ ನಾನು ಸೋಲುತ್ತೀನಿ ಎಂದು ಅನಿಸಿದ್ದರೆ ಅದನ್ನು ನೇರವಾಗಿ ಹೇಳಬಹುದಿತ್ತು’ ಎಂದು ತ್ರಿವಿಕ್ರಮ್ ಹೇಳಿದರು.
ಇಬ್ಬರ ಚರ್ಚೆ ಆಲಿಸಿದ ಸುದೀಪ್, ‘ನಾನು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದೀನಿ, ಯಾವುದೇ ಕಾರಣಕ್ಕೂ ಅನವಶ್ಯಕ ಬಂಧಗಳನ್ನು ಬೆಳೆಸಿಕೊಳ್ಳಬೇಡಿ. ಆ ಅನವಶ್ಯಕ ಸಂಬಂಧ ನಿಮ್ಮ ಆಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಲೇ ಬಂದಿದ್ದೇನಿ. ನೀವು ಬಂಧ ಬೆಳೆಸಿಕೊಂಡಾಗ ಸಹಜವಾಗಿಯೇ ನಿರೀಕ್ಷೆಗಳು ಹುಟ್ಟುತ್ತವೆ, ಆ ನಿರೀಕ್ಷೆಗಳು ಫುಲ್ಫಿಲ್ ಆಗದಾಗ ಸಹಜವಾಗಿಯೇ ಬಿರುಕು ಮೂಡುತ್ತದೆ ಅದು ನಿಮ್ಮ ಆಟದ ಮೇಲೆ ಪರಿಣಾಮ ಬೀರುತ್ತದೆ’ ಎಂದರು ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ