Lockdown Stories : ಚಲನಾಮೃತ ; ಅಂದು ಕಾಲು ಕಿತ್ತಿಟ್ಟಿದ್ದಕ್ಕೇ ಇಂದು ‘ಮಣ್ಣಿ’ಯೆಂಬ ಅಮೃತ ಕೈಹಿಡಿದಿದ್ದು…

Identity : ‘ಮದುವೆಯ ನಂತರ ಹೆಂಡತಿಯನ್ನು ಅಥವಾ ಸೊಸೆಯನ್ನು ಕೆಲಸಕ್ಕೆ ಕಳಿಸುವ ಅಗತ್ಯ ಏನೂ ಇಲ್ಲ ಎಂಬ ಧೋರಣೆ ಹೊಮ್ಮಿತು. ಗಂಡನೊಂದಿಗೆ ಬೇರೆ ಮನೆ ಮಾಡಿದೆ. ನಂತರ ಕೊರೊನಾ ಬದುಕಿನ ಅಸ್ಮಿತೆಯ ಪ್ರಶ್ನೆ ಹುಟ್ಟುಹಾಕಿತು. ಈ ಎರಡು ಸಂದರ್ಭಗಳು ಒದಗದಿದ್ದಲ್ಲಿ ನಾನೆಂದೂ ಇಂಥದೊಂದು ಹೊಸತನಕ್ಕೆ ಖಂಡಿತ ತೆರೆದುಕೊಳ್ಳುತ್ತಿರಲಿಲ್ಲ.’ ಆಶಾ ಹೆಗಡೆ

Lockdown Stories : ಚಲನಾಮೃತ ; ಅಂದು ಕಾಲು ಕಿತ್ತಿಟ್ಟಿದ್ದಕ್ಕೇ ಇಂದು ‘ಮಣ್ಣಿ’ಯೆಂಬ ಅಮೃತ ಕೈಹಿಡಿದಿದ್ದು...
ಆಶಾ ಹೆಗಡೆ
Follow us
ಶ್ರೀದೇವಿ ಕಳಸದ
|

Updated on:Jun 18, 2021 | 6:41 PM

ಅನಿವಾರ್ಯವೆಂಬ ಹಾವು ಕಾಲಬುಡಕ್ಕೇ ಬಂದಾಗ ಯಾರೂ ಚಲನಶೀಲರಾಗಿಬಿಡುತ್ತಾರೆ. ಆಗ ಮುಂದಿನ ಏರುಇಳಿವಿನ ಹಾದಿ ಅವರಲ್ಲಿ ಮತ್ತಷ್ಟು ಶಕ್ತಿಯನ್ನೂ ಸಂಕಲ್ಪವನ್ನೂ ಹೂಡುತ್ತಾ ಬರುತ್ತದೆ. ಬರುಬರುತ್ತ ಅದು ಅವರನ್ನು ಮತ್ತೊಂದು ಸ್ತರದಲ್ಲಿ ಯೋಚಿಸಿ, ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಾ ಪಾಯಾ ಗಟ್ಟಿಮಾಡುತ್ತದೆ. ಅಲ್ಲಿಗೆ ಅವರು ಅರಿವಿಲ್ಲದೆಯೇ ಅಷ್ಟುದಿನ ಕಟ್ಟಿಕೊಂಡ ಗೋಡೆಯನ್ನು ಹಾರಿಯಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆಯೇ ಆನ್​ಲೈನ್​ ಮಾರುಕಟ್ಟೆ ಸಂಸ್ಕೃತಿ. ಲಾಕ್​ಡೌನ್ ಶುರುವಾಗುತ್ತಿದ್ದಂತೆ ವೃತ್ತಿ, ಆಸಕ್ತಿ, ಕೌಶಲಗಳು ಆನ್​ಲೈನ್​ ಮೂಲಕ ವಾಣಿಜ್ಯ ಸ್ವರೂಪ ಪಡೆದುಕೊಳ್ಳುತ್ತಾ ಬಂದವು. ಫೇಸ್​ಬುಕ್​ ಅಕೌಂಟ್​ಗಳು ಪುಟಗಳಾದವು. ವಾಟ್ಸಪ್, ಬಿಝಿನೆಸ್ ನಂಬರುಗಳಾದವು. ​ಫೇಸ್​ಬುಕ್​ ಗ್ರೂಪ್​ಗಳು, ತಮ್ಮ ಸದಸ್ಯರನ್ನು ಹೆಚ್ಚು ವೃತ್ತಿಪರರನ್ನಾಗಿಸಲು ಪ್ರಯತ್ನಿಸಿದವು. ಸ್ವಂತ ವೆಬ್​, ಆ್ಯಪ್​ಗಳು ಹುಟ್ಟಿಕೊಂಡು ಪ್ರತ್ಯೇಕ ವಹಿವಾಟುತಾಣಗಳೇ ನಿರ್ಮಾಣಗೊಂಡವು. ಕೊರೊನಾದಿಂದಾಗಿ ಸಾವುನೋವು ಸಂಕಷ್ಟಗಳ ಮಧ್ಯೆಯೇ ಹಳ್ಳಿಹಳ್ಳಿಗಳೂ ಆನ್​ಲೈನ್​ ಭಾಷೆಯನ್ನು ಉಸಿರಾಡುತ್ತ ನಗರಗಳಿಗೆ ತಮ್ಮ ಸೊಗಡನ್ನು ಪಸರಿಸಿದವು. ಪರಿಣಾಮವಾಗಿ ಸಣ್ಣ ಪುಟ್ಟ ಉದ್ಯಮಗಳು ಕಣ್ಣುಬಿಟ್ಟುಕೊಂಡವು. ಗೃಹಕೈಗಾರಿಕೋದ್ಯಮ ಮತ್ತು ದೇಸೀ ಮಾರುಕಟ್ಟೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡವು. ಗ್ರಾಹಕರೂ ಈ ಆನ್​ಲೈನ್ ಸಂತೆಗೆ ಕಣ್ಣನ್ನೂ ಮನಸ್ಸನ್ನೂ ಜೇಬನ್ನು ಬಲುಬೇಗನೇ ಹೊಂದಿಸಿಕೊಂಡುಬಿಟ್ಟರು. 

ಹಾಗಂತ ಇದು ಇಲ್ಲಿಗೇ ನಿಂತಿಲ್ಲ, ನಿಲ್ಲುವುದೂ ಇಲ್ಲ. ಮುಂದೇನು ಎನ್ನುವ ಕುತೂಹಲದ ಕಣ್ಣು ನೆಟ್ಟುಕೊಂಡೇ  ಮಾರುವವರೂ ಇದ್ದಾರೆ ಕೊಳ್ಳುವವರೂ. ಆದರೆ ಆನ್​ಲೈನ್​ ಆಗಲಿ ಆಫ್​ಲೈನ್ ಆಗಲಿ, ಎಡೆಬಿಡದೆ ಶ್ರದ್ಧೆಯಿಂದ ವ್ಯಾಪಾರ ಸೂತ್ರಗಳನ್ನು ನೇಯುತ್ತಿದ್ದರೆ ಮಾತ್ರ ಇಲ್ಲಿ ಬೆಳಕು. ಈ ದೃಷ್ಟಿಕೋನದಲ್ಲಿ ರೂಪಿಸಿದ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ಚಲನಾಮೃತ’ ; ಕೊರೊನಾ ಕಾಲದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವವರ ಅನುಭವ ಕಥನಗಳು. ನೀವು ಅಥವಾ ನಿಮ್ಮ ಸುತ್ತಮುತ್ತಲಿನವರು ಈ ಪರಿಧಿಗೆ ಒಳಪಟ್ಟಲ್ಲಿ ನಾಲ್ಕೈದು ಫೋಟೋಗಳೊಂದಿಗೆ ಬರೆದು ಕಳುಹಿಸಿ. ಪದಮಿತಿ ಕನಿಷ್ಟ 800, ಗರಿಷ್ಟ 1,500.  tv9kannadadigital@gmail.com 

*

ಆಶಾ ಹೆಗಡೆ ಮೂಲತಃ ಶಿರಸಿಯ ಬಕ್ಕಳದವರು. ಬಿ.ಎಸ್​ಸಿ ಪದವೀಧರೆ. ಮಕ್ಕಳ ಬಹುಮುಖ್ಯ ಆಹಾರವಾದ ‘ಮಣ್ಣಿ’ ತಯಾರಿಸುತ್ತ ‘ಆರಾಧ್ಯಾ ಹೋಮ್ ಇಂಡಸ್ಟ್ರೀ’ ಮಾಲೀಕರಾದ ಬಗೆ ಹೇಗೆ? ಓದಿ. * ಮದುವೆಯ ನಂತರ ಬಂದಿದ್ದು ಕಡಲ ದಂಡೆಯ ಹೊನ್ನಾವರವೆಂಬ ಪುಟ್ಟ ಊರಿಗೆ. ಮಲೆನಾಡಿನ ತಂಪುಂಡು ಬೆಳೆದವಳಿಗೆ ಇಲ್ಲಿ ಕೆಂಡ ಕವುಚಿಟ್ಟಂತ ಧಗೆಯಾದರೂ ಬದುಕು ತಣ್ಣಗೇ ಇತ್ತು ಗಂಡ ಮಗಳೊಂದಿಗೆ. ಮುಚ್ಚಟೆಯಾಗಿ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದ ನನ್ನ ಆರಕ್ಕೇರದ ಮೂರಕ್ಕಿಳಿಯದ ಬದುಕು ಹೊಸದೊಂದು ಮಗ್ಗುಲಿಗೆ ತೆರೆದುಕೊಂಡು ಈಗ ಒಂದು ವರ್ಷವಾಯ್ತಷ್ಟೇ. ಹಗಲು ರಾತ್ರಿ ಊಟ ನಿದ್ದೆಗಳ ಪರಿವಿಲ್ಲ ಈಗೀಗ. ಇಂಡಸ್ಟ್ರಿಯ ಕೆಲಸದ ಜೊತೆ ಮನೆಗೆಲಸ ಮತ್ತೆ ಮಗಳದ್ದು. ಪುಟ್ಟ ಕಿನ್ನರಿಯೀಗ ಮೂರು ವರ್ಷಕ್ಕೆ ಒಂದೇ ತಿಂಗಳು ಕಮ್ಮಿ. ಸಾವಿರದೆಂಟು ಪ್ರಶ್ನೆ ಕೇಳುವಷ್ಟು ಮಾತು ಕಲಿತಿದ್ದಾಳೆ. ವಿಪರೀತ ಹಠವನ್ನೂ. ಅಮ್ಮ ಇದು ತಗತ್ತಿ ಪ್ಲೀಸ್, ಅಮ್ಮ ಅಲ್ಲೋಗ್ತಿ ಪ್ಲಿಸ್, ಅಮ್ಮ ಊಟ ಮಾಡ್ಸಡ ಪ್ಲೀಸ್, ನೈಸಾಗಿ ಮಾತಾಡಿ ಮರುಳು ಮಾಡೋದ್ರಲ್ಲಿ ಅಪ್ಪನಿಗಿಂತ ಜಾಣೆ.

ನಿಮಿಷಕ್ಕೊಂದು ಫೋನು, ಮೆಸೇಜು. ಅದರ ಮಧ್ಯ ಫೋನು ಕೊಡೆ ಅಮ್ಮಾ ಅನ್ನೋ ಇವಳ ವರಾತ. ತಾಳ್ಮೆ ತುಂಬಿದಷ್ಟೂ ಮುಗಿಯುವ ಸರಕು. ಮಧ್ಯಮಧ್ಯ ಕಾಡುವ ಅಲ್ಲೇಲ್ಲೋ ಮರೆತಿದ್ದೆ ಅಂದುಕೊಳ್ಳುವ ಅದೇ ಹಳೆಯದ್ಯಾವುದೋ ನೋವು. ಇನ್ನೆನು ಯೋಚಿಸಿ ಕಳೆದೇ ಹೋದೆ ಅನ್ನುವಾಗ ಥೇಟು ಕರಡಿಯಂತೆ ಧೊಪ್ಪನೆ ತೆಕ್ಕೆಬೀಳುವ ಮಗಳು ಮನೆತುಂಬ ಮೊಳಗುವ ಅವಳ ನಗು. ನಿಧಾನಕ್ಕೆ ಬದುಕಿಗೊಂದು ಗತಿ ದಕ್ಕುತ್ತಿದೆ. ಎಲ್ಲಿಂದ ಎಲ್ಲಿಗೆ ಬಂದು ನಿಂತೆ ಈ ಓಟದಲ್ಲಿ.

lockdown stories

ಮಣ್ಣಿಯ ತಯಾರಿ

ನನ್ನ ಪಾಡಿಗೆ ಆಫೀಸು ಪಿಜಿ ಎಂದು ಓಡಾಡಿಕೊಂಡಿದ್ದವಳಿಗೆ ಮದುವೆಯ ನಂತರದಲ್ಲಿ ಯಾವುದೋ ದ್ವೀಪಕ್ಕೆ ಬಂದಂತಹ ಭಾವ‌‌‌‌‌. ಮನೆಯಿಂದ ಆಫೀಸಿಗೆ ಎರಡು ಬಸ್ಸು ಬದಲಾಯಿಸಿ ಹೋಗಬೇಕು ಎನ್ನುವ ಕಾರಣಕ್ಕೆ ಕೆಲಸ ಬಿಡಬೇಕಾಯಿತು. ಮತ್ತೆ, ಹೆಂಡತಿಯನ್ನು ಅಥವಾ ಸೊಸೆಯನ್ನು ಕೆಲಸಕ್ಕೆ ಕಳಿಸುವ ಅಗತ್ಯ ಏನೂ ಇಲ್ಲ ಎಂಬ ಧೋರಣೆ ಇದ್ದಾಗ ಅಸಹಾಯಕಳಾದೆ. ವಾಸ್ತವವನ್ನು ಒಪ್ಪಿಕೊಳ್ಳುವುದು ಕಷ್ಟವಾಯಿತು. ನಿಧಾನಕ್ಕೆ ಒಗ್ಗಿಕೊಂಡೆ. ಆದರೆ ಒಂದು ವರ್ಷವೂ ಆ ವಾತಾವರಣದಲ್ಲಿ ಇರಲಾಗಲಿಲ್ಲ. ಮನಸಿಗೆ ನೋವುಂಟುಮಾಡುವ ಕೆಲ ಘಟನೆಗಳು ನಡೆದು, ನಾವಿಬ್ಬರೂ ಅನಿವಾರ್ಯವಾಗಿ ಬೇರೆ ಮನೆಗೆ ಶಿಫ್ಟ್ ಆಗಬೇಕಾಯಿತು. ಆ ಹೊತ್ತಿನ ತಳಮಳಗಳನ್ನು ಈಗ ಕನಸಿಗೂ ಬಾರಗೊಡುವುದಿಲ್ಲ ನಾನು. ಬದುಕಿನ ಬಗ್ಗೆ ನೂರು ಕನಸುಗಳನ್ನು ಕಂಡ ನಾವಿಬ್ಬರೂ ಮದುವೆಯ ಮೊದಲ ವಾರ್ಷಿಕೋತ್ಸವದ ಹೊತ್ತಿಗೆ ದಿಕ್ಕುಗಾಣದ ಹಕ್ಕಿಗಳಂತೆ ನಿಂತಿದ್ದೆವು.

ಗಂಡ ಸ್ವಭಾವತಃ ತುಂಬಾ ಮೌನಿ. ಈಗ ಮತ್ತೂ ಅಂತರ್ಮುಖಿಯಾಗಿಬಿಟ್ಟರು. ಮತ್ತೆ ಕೆಲಸಕ್ಕೆ ಸೇರಬೇಕೆಂಬ‌ ಯೋಚನೆಯನ್ನು ಅಲ್ಲೇ ಕೈಬಿಟ್ಟೆ. ಒಂದು ಮಗುವಾದರೆ ಮನೆಗೊಂದು ಖುಷಿ ಮರಳಿ ಬರಬಹುದೆಂದು ಆಸೆಪಟ್ಟ ಹೊತ್ತಿನಲ್ಲೇ ಭಗವಂತ ಅಸ್ತು ಅಂದುಬಿಟ್ಟ. ಅಲ್ಲಿಂದ ನಮ್ಮೆಲ್ಲ ಬೇಸರ ಹತಾಶೆಗಳನ್ನು ಮೂಟೆಕಟ್ಟಿ ಮನಸಿನ ಮೂಲೆಗೆಸೆದು ನಮ್ಮನ್ನು ನಮ್ಮ ಪುಟ್ಟಗೂಡನ್ನು ಮರಿಗುಬ್ಬಿಯ ಆಗಮನಕ್ಕೆ ಸಜ್ಜುಗೊಳಿಸಿಕೊಂಡೆವು. ಆಷಾಢದ ಧೋ ಮಳೆಯ ಜೊತೆ ಕೆಂಪು-ಬಿಳುಪಿನ ಕಿನ್ನರಿ ಮಡಿಲಿಗೆ ಬಂದಳು. ಆಗಲೂ ಮಾನಸಿಕವಾಗಿ ಆರ್ಥಿಕವಾಗಿ ದೈಹಿಕವಾಗಿ ಶತಾಯಗತಾಯ ಹೋರಾಟ ನಡೆದೇ ಇತ್ತು. ನಮ್ಮೊಂದಿಗೆ ಮತ್ಯಾರೂ ಇಲ್ಲವೆಂಬ ಕೊರಗೂ ಅವಳ ಅಬೋಧ ನಗುವಿನ ನಡುವೆ ದೊಡ್ಡದಾಗಲಿಲ್ಲ.

ಅಕ್ಷರಷಃ ಸ್ವರ್ಗ ನಮ್ಮ ಮನೆ. ಬದುಕಲು ಸಾಕಾಗುವಷ್ಟು ದುಡಿಮೆ, ಮನೆತುಂಬ ಘಿಲಿ ಘಿಲಿ ಗೆಜ್ಜೆ ಕುಣಿಸುತ್ತ ಸುತ್ತುವ ಮಗಳು ಒಬ್ಬರನ್ನೊಬ್ಬರು ಅನುಸರಿಸಿ ಬಿಟ್ಟಿರದಂತೆ ಬೆಸೆದ ನಾವು. ಮತ್ತೇನು ಬೇಕು? ಆಗ ನಮ್ಮಗಳ ಎಲ್ಲ ಸಂತೋಷ ಅಡಿಮೇಲು ಮಾಡುವಂತೆ ಬಂದಿದ್ದೇ ಕೊರೋನಾ, ಲಾಕಡೌನ್‌. ಇರುವ ಸ್ವಲ್ಪ ಉಳಿತಾಯದಲ್ಲಿ ಒಂದೆರಡು ತಿಂಗಳು ಕಳೆದಿದ್ದು ಗೊತ್ತಾಗಲಿಲ್ಲ. ಆಮೇಲಿನದೇ ನಿಜವಾದ ಸವಾಲು. ಇನ್ನೂ ಎಷ್ಟು ದಿನ ಈ ಅನಿಶ್ಚಿತತೆ ಅನ್ನೋದರ ಅರಿವಿಲ್ಲ. ಕೂತು ತಿಂದರೆ ಕುಡಿಕೆ ಹೊನ್ನು ಸಾಲದಂತೆ. ಆಗ ನಿಜವಾಗಲೂ ಬದುಕಿಗೆ ಪರ್ಯಾಯ ಮಾರ್ಗವೊಂದರ ಹುಡುಕಾಟ ಅನಿವಾರ್ಯವಾಯಿತು. ಏನು ಮಾಡೋಕೂ ತೋಚಲಿಲ್ಲ. ಆಗ ಮಹಿಳಾ ಮಾರುಕಟ್ಟೆ ಎಂಬ ಫೇಸ್​ಬುಕ್ ಗುಂಪು ಶುರುವಾಗಿ ಒಂದು ತಿಂಗಳು ಕಳೆದಿತ್ತು‌. ಅಲ್ಲಿ ಏನಾದರೂ ಮಾಡಿ ಮಾರಬಹುದಾ ಎಂಬ ಯೋಚನೆ ಸುಳಿದಿತ್ತು ಒಂದೆರಡು ಸಲ. ಆದರೆ ಏನು ಅಂತ ಸ್ಪಷ್ಟತೆ ಇರಲಿಲ್ಲ.

ಈ ಸಂದರ್ಭದಲ್ಲೇ ಒಂದು ಘಟನೆ ನಡೆಯಿತು. ನನ್ನ ಕಸಿನ್ ಒಬ್ಬಳ ಫೋನ್ ಕಾಲ್. ರಾಗಿ ಸರಿಹಿಟ್ಟು ಬೇಕಿತ್ತು ಕಣೇ, ನಿನ್ನ ಮಗೂಗೆ ಮಾಡಿದ್ದು ಇದ್ದರೆ ಸ್ವಲ್ಪ ಕೊಡ್ತೀಯಾ ಅಂತ‌. ಅವಳಿ ಪ್ರಿಮೆಚ್ಯೂರ್ ಮಕ್ಕಳ ತಾಯಿಯಾದ ಆಕೆಗೆ ಪ್ಯಾಕ್ಡ್​ ಫುಡ್ ಹಾಕಲು ಮನಸ್ಸಿಲ್ಲ. ಮನೆಯಲ್ಲಿ ಮಾಡಲು ಸಮಯವಿಲ್ಲ. ಸರಿ ಆಯ್ತು ಅಂತ ಮೂರು ಕೇಜಿಯಷ್ಟು ಫ್ರೆಶ್ ಹಿಟ್ಟು ಮಾಡಿದೆ. ಫೋಟೋ ತೆಗೆಯಬೇಕು ಅನ್ನಿಸಿತು. ನಂತರ ಆಕೆಗೆ ಕೊಟ್ಟು ಕಳಿಸಿದೆ. ಆವತ್ತೇ ಸಂಜೆ ಮಹಿಳಾ ಮಾರುಕಟ್ಟೆಯ ಪೇಜಿನಲ್ಲಿ ಒಂದು ಪೋಸ್ಟ್ ಹಾಕಿದರೆ ಹೇಗೆ ಎಂದು ಅನುಮಾನಿಸುತ್ತಲೇ ಪೋಸ್ಟ್ ಹಾಕಿದೆ.

lockdown stories

ಪ್ಯಾಕಿಂಗ್​ನಲ್ಲಿ ನಿರತ ಆಶಾ

ನನಗೆ ನಿಜಕ್ಕೂ ಧೈರ್ಯವಿರಲಿಲ್ಲ. ಯಾಕೆಂದರೆ ಈಗೆಲ್ಲ ಮನೆಗೆ ಒಂದೊಂದೇ ಮಗು. ಯಾರೋ ಗುರುತು ಪರಿಚಯವಿಲ್ಲದ ಜನರ ಬಳಿ ತಮ್ಮ ಮಗುವಿಗೆ ಆಹಾರ ಖರೀದಿಸಲು ಯಾರು ಒಪ್ಪುತ್ತಾರೆ ಅಂತೆಲ್ಲ. ಆದರೆ ಅದೆಲ್ಲ ಸುಳ್ಳಾಗಿ ಮೊದಲ ಪೋಸ್ಟಿಗೆ ಆರು ಕೆ.ಜಿ ಆರ್ಡರ್ ಬಂತು. ಆಹಾ! ಖುಷಿಯೋ ಖುಷಿ. ಕಾಳುಗಳನ್ನ ನೆನೆ ಹಾಕಿಕೊಂಡೆ. ಮರುದಿನ ಬೇಗಬೇಗ ಮಗಳನ್ನು ಮಲಗಿಸಿ ರಾತ್ರಿಯಿಡೀ ಕೂತು ಮೊಳಕೆಯೊಡೆದ ಕಾಳುಗಳನ್ನು ಹುರಿದೆ. ಪೌಡರ್ ರೆಡಿ ಮಾಡಿದೆ. ಇಷ್ಟೆಲ್ಲ ಸರಿ. ಆದರೆ ಪ್ಯಾಕಿಂಗ್ ಗಂಧ ಗಾಳಿಯಿಲ್ಲ. ಕೊರಿಯರ್ ರೇಟ್ ಗೊತ್ತಿಲ್ಲ. ಮಾರುಕಟ್ಟೆಯಲ್ಲಿ ಓಡಾಡಿ ಅವರಿವರನ್ನು ಕೇಳಿ ಸಲಹೆ ತೆಗೆದುಕೊಂಡು ಬೇಕಾದುದನ್ನೆಲ್ಲ ಕೊಂಡು ತಂದಾಯ್ತು. ಅಂತೂ ಹೆದರುತ್ತ ಹೆದರುತ್ತ ಮೊದಲ ಬ್ಯಾಚಿನ ಆರ್ಡರುಗಳನ್ನು ಕಳಿಸಿ ಅವು ಗ್ರಾಹಕರ ಮನೆಯನ್ನು ತಲುಪಿಯೂ ಆಯ್ತು. ರಾತ್ರಿಯಿಡೀ ನಿದ್ದೆ ಇಲ್ಲ; ತಯಾರಿಸಿದ ಹಿಟ್ಟು ಸರಿ ಇದೆಯಾ, ಮಗುವಿಗೆ ಆರೋಗ್ಯ ವ್ಯತ್ಯಾಸವಾದರೆ? ಅಂತೆಲ್ಲ.

ಸದ್ಯ ಆರೂ ಮಕ್ಕಳು ಆಸೆಯಿಂದ ತಿಂದಿದ್ದವು. ಪೌಡರ್ ಕೂಡ ತುಂಬಾ ಚೆನ್ನಾಗಿದೆ ಎನ್ನುವ ರಿವ್ಯೂ ಬಂದಿತ್ತು. ಅಲ್ಲಿಂದ ಒಂದು ದಿನ ಕೂಡ ಖಾಲೀ ಕೂರಲು ಅವಕಾಶ ಸಿಗಲಿಲ್ಲ. ಹಿಟ್ಟು ಆರರಿಂದ ಹತ್ತಿಪ್ಪತ್ತು ಕೇಜಿಗೆ ಏರುತ್ತ ಹೋಯಿತು. ಊಟ ಬಿಟ್ಟೆ. ನಿದ್ದೆ ಬಿಟ್ಟೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಕಣ್ಣು ಮುಚ್ಚದೇ ದುಡಿದ ದಿನಗಳು ಎಷ್ಟೋ. ಬಾಣಲೆಯಲ್ಲಿ ಹುರಿದು ಮಾಡಿ ಮುಗಿಸಲು ಸಾಧ್ಯವೇ ಇಲ್ಲ ಎನ್ನುವಷ್ಟು ಆರ್ಡರುಗಳು ಬರತೊಡಗಿದಾಗ ರೋಸ್ಟಿಂಗ್ ಮಷಿನ್ ಖರೀದಿಸಿದೆ. ಮಕ್ಕಳಿಗೆ ಮಾತ್ರವಾ? ವಯಸ್ಕರಿಗೆ ಯಾವ ಪೌಡರುಗಳಿಲ್ಲವಾ ಎಂದು ಹೊಸತನ್ನು ಮಾಡಲು ಪ್ರೇರೇಪಿಸಿದರು ನನ್ನ ಗ್ರಾಹಕರು. ಆ ಕುರಿತು ಒಂದಷ್ಟು ಅಭ್ಯಾಸ ಮಾಡಿ ವಯಸ್ಕರಿಗೂ ಮಕ್ಕಳಿಗಗೂ ಹೊಂದುವ ಮಾಲ್ಟ್ ಪೌಡರುಗಳ ತಯಾರಿಕೆ ಕೂಡ ಶುರುಮಾಡಿದೆ. ಹಾಗಂತ ಕಷ್ಟಗಳು ಬರಲೇ ಇಲ್ಲ ಎಂಬುದಿಲ್ಲ. ಮನೆಯನ್ನೂ ಮಗಳನ್ನೂ ಈ ಕೆಲಸವನ್ನೂ ಸಂಬಾಳಿಸಿಕೊಂಡು‌ ಹೋಗಲು ಹಗಲಿನಲ್ಲಿ ಸಮಯವೇ ಉಳಿಯುತ್ತಿರಲಿಲ್ಲ. ಈ ಪೌಡರ್ ತಯಾರಿಕೆ ತುಂಬಾ ಸಮಯ ಶ್ರಮ ಎರಡನ್ನೂ ಬೇಡುವ ಕೆಲಸ.‌ ಪ್ರತಿಯೊಂದು ಹಂತದಲ್ಲೂ ಸ್ವಚ್ಛತೆ ಅತ್ಯವಶ್ಯ. ಮೊಳಕೆಯೊಡೆಯುವ ತನಕ ಕಾಯಲೇಬೇಕು. ಕಾಳುಗಳು ಗರಿಗರಿಯಾಗುವ ತನಕ ಹುರಿಯಲೇಬೇಕು. ಹಗಲಿಗೆ ಸಮಯವಿಲ್ಲ ಎಂದು ರಾತ್ರಿ ವಿಪರೀತ ನಿದ್ರೆಗೆಟ್ಟ ಪರಿಣಾಮ ಆರೋಗ್ಯ ಏರುಪೇರಾಯ್ತು. ಆಗೆಲ್ಲ ನನ್ನ ಜೊತೆಗಿದ್ದು ಎಲ್ಲ ಕೆಲಸಕ್ಕೂ ಹೆಗಲಾಗಿದ್ದು ನನ್ನ ಗಂಡ. ಈಗಲೂ ಅಷ್ಟೇ. ಇದೆಲ್ಲದರ ಹೆಸರು ಮಾತ್ರ ನನ್ನದು. ಹಿಂದಿರುವ ಶ್ರಮದಲ್ಲಿ ಅವರದ್ದೇ ಸಿಂಹಪಾಲು.

ಕೊರಿಯರ್ ಸರಿಯಾದ ಸಮಯಕ್ಕೆ ತಲುಪಿಡುವುದೇ ಒಂದು ಸವಾಲು. ಈ ಲಾಕೌಡೌನಿನಲ್ಲಂತೂ… ಪುಟ್ಟ ಕಂದಮ್ಮಗಳ ಹಸಿದ ಹೊಟ್ಟೆಯ ಅಳು ಕೂತಲ್ಲಿ ನಿಂತಲ್ಲಿ ಕಾಡುತ್ತದೆ ಒಮ್ಮೊಮ್ಮೆ. ಎಷ್ಟೋ ಜನ ನಮ್ಮೂರು ಸೀಲ್ ಡೌನ್ ಆಗಿದೆ ಲಾಕಡೌನ್ ಆಗಿದೆ. ಪಾರ್ಸಲ್ ಬರೋದಿಲ್ಲ ರೆಸಿಪಿ ಹೇಳಿದ್ರೆ ನಾವೇ ಮಾಡ್ಕೋತೀವಿ ಅಂತ ನನ್ನನ್ನು ಎಮೋಷನಲ್ ಫೂಲ್ ಮಾಡಿ ವ್ಯಾಪಾರಕ್ಕಿಳಿದರು. ಇರಲಿ, ಆದರೂ ನನ್ನ ಶ್ರಮ ನನ್ನ ಕೈಹಿಡಿಯಿತು. ಎಲ್ಲ ಕನಸಿನಂತೆ ಕಳೆದು ಇವತ್ತು ನನ್ನದೇ ಒಂದು ಇಂಡಸ್ಟ್ರಿ ರಿಜಿಸ್ಟರ್ ಮಾಡಿಸುವ ಹಂತಕ್ಕೆ ಬಂದು ನಿಂತಿದೆ. ಇವತ್ತಿನ ದಿನ ತಿಂಗಳಿಗೆ ಸುಮಾರು ಎರಡು ಕ್ವಿಂಟಾಲಿನಷ್ಟು ಪೌಡರ್ ಗೆ ಬೇಡಿಕೆಯಿದೆ. ಊರು ಪರವೂರು ಜಿಲ್ಲೆ ರಾಜ್ಯಗಳ ಗಡಿ ಮೀರಿ ವಿದೇಶದ ತನಕವೂ ನನ್ನ ಗ್ರಾಹಕರಿದ್ದಾರೆ. ಆರು ತಿಂಗಳಿಂದ ಎರಡು ವರ್ಷಗಳ ತನಕ ಕೊಡಬಹುದಾದ ಮೂರ್ನಾಲ್ಕು ವಿಧದ ಸರಿ/ಮಣ್ಣಿ ಪುಡಿಯ ಜೊತೆ ಬೆಳೆಯುವ ಮಕ್ಕಳು ಹಾಗೂ ವಯಸ್ಕರಿಗಾಗಿ ನಾಲ್ಕಾರು ಫ್ಲೇವರುಗಳಲ್ಲಿ ಮಾಲ್ಟ್ಗಳು ಲಭ್ಯ. ಫ್ಲೇವರಿಗಾಗಿ ಯಾವುದೇ ಕೆಮಿಕಲ್ ಅಥವಾ ಸಿಂಥೆಟಿಕ್ ಎಸೆನ್ಸ್ ನಾವು ಬಳಸುವುದಿಲ್ಲ. ಕೇಸರಿಯೆಂದರೆ ದುಬಾರಿ, ಶ್ರೀಮಂತರ ಬಳಕೆಗಷ್ಟೇ ಎಂಬ ಯೋಚನೆ ಇತ್ತು. ಆದರೀಗ ನನ್ನ ಮಾಲ್ಟಿನ ಮೂಲಕ ಪ್ರತಿದಿನವೂ ಒರಿಜಿನಲ್ ಕೇಸರಿ ದಳಗಳು ಎಷ್ಟೋ ಜನರ ನಾಲಿಗೆಯಲ್ಲಿ ನಲಿದಾಡಿವೆ. ಕೇಸರಿಯಂತದೇ ರಂಗು ಬದುಕಿನಲ್ಲಿ ಪಸರಿಸಿದೆ.

ಅವಶ್ಯಕತೆ ಮತ್ತು ಅನಿವಾರ್ಯತೆ ಎಲ್ಲ ಆವಿಷ್ಕಾರಗಳ ಮೂಲ ಅನ್ನೋ ಮಾತಿದೆ. ನನ್ನ ವಿಷಯದಲ್ಲಿ ಖಂಡಿತ ಇದು ಅಕ್ಷರಶಃ ಸತ್ಯ. ಇದೊಂದು ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಸ್ಸಿನಿಂದ ಬದುಕಿನ ಅಸ್ಮಿತೆಯ ಪ್ರಶ್ನೆ ಎದುರಾಗದಿದ್ದರೆ ನಾನೆಂದೂ ಇಂಥದೊಂದು ಹೊಸತನಕ್ಕೆ ಖಂಡಿತ ತೆರೆದುಕೊಳ್ಳುತ್ತಿರಲಿಲ್ಲ. ಪುಟ್ಟ ಮಗಳ ತಾಯಿಯಾಗಿ ಈ ಜನರೇಷನ್ ಮಕ್ಕಳ ಊಟ ತಿಂಡಿಯ ಕಿರಿಕಿರಿಯ ಬಗ್ಗೆ ನನಗೆ ಚೆನ್ನಾಗಿ ಅರಿವಿದೆ. ಮಗು ಸತಾಯಿಸದೆ ಹೊಟ್ಟೆ ತುಂಬಿಸಿಕೊಂಡರೆ ತಾಯಂದಿರಿಗೆ ತಮ್ಮ ಹೊಟ್ಟೆ ತುಂಬಿದಷ್ಟೇ ಸಮಾಧಾನ. ಅಂಥ ನೂರಾರು ಮಕ್ಕಳ ಹೊಟ್ಟೆ ತುಂಬಿ ಅವರ ತಾಯಂದಿರು ಹರಸಿದ ಪುಣ್ಯ ಜನುಮಗಳಿಗೂ ಸಾಕು. ದುಡ್ಡೇ ಎಲ್ಲವೂ ಅಲ್ಲ. ಎಷ್ಟೋ ಇಳಿವಯಸ್ಕರು ಗಟ್ಟಿ ಆಹಾರ ತಿನ್ನಲಾಗದವರು ನಾನು ಮಾಡಿದ ಮಾಲ್ಟ್ ಕುಡಿದು ಹರಸುವಾಗ ಮನಸ್ಸು ಆರ್ದ್ರವಾಗುತ್ತದೆ.

lockdown stories

ಗ್ರಾಹಕರನ್ನು ತಲುಪಲು

ವಿಪರೀತ ತೂಕದಿಂದ ಡಯಟ್ ಮಾಡ್ಬೇಕು ಅನ್ನಿಸಿದ್ರೂ ಹೊಟ್ಟೆಹಸಿವು ಕಾಡ್ತಿತ್ತು. ನಿಮ್ಮ ಮಾಲ್ಟ್​ನಿಂದ ಮತ್ತಷ್ಟು ಕೆಲಸ ಮಾಡುವುದಕ್ಕೆ ಹುಮ್ಮಸ್ಸು ಬರುತ್ತೆ. ಮಾರ್ಕೆಟಿನಲ್ಲಿ ಸಿಗುವ ಸುಮಾರು ಬಗೆಯ ಉತ್ಪನ್ನಗಳನ್ನು ಬಳಸಿದ್ದೆವು‌. ಆದರೆ ನಿಮ್ಮ ಪೌಡರಿನಲ್ಲಿರುವ ರುಚಿ ಬೇರೆಯೇ. ಅದರಲ್ಲಿ ನಿಮ್ಮ ಪ್ರೀತಿಯಿದೆ ಅಂತೆಲ್ಲ ಗ್ರಾಹಕರ ರಿವ್ಯೂ ಓದುವಾಗ ನನ್ನ ಕನಸುಗಳಿಗೆ ರೆಕ್ಕೆ ಮೂಡುತ್ತದೆ. ಆದರೆ ಇದು ಇಷ್ಟೇ ಅಲ್ಲ. ಆಹಾರೋತ್ಪನ್ನಕ್ಕೆ ಸಂಬಂಧಿಸಿದಂತೆ ಕೋರ್ಸ್ ಮಾಡುವ ಕನಸು ಇದೆ. ನನ್ನ ಉತ್ಪನ್ನಗಳನ್ನು ವಿಸ್ತರಿಸುವಲ್ಲಿ ಹೆಚ್ಚು ಸಂಶೋಧನೆಗೆ ತೊಡಗಿಕೊಳ್ಳುವ ಆಲೋಚನೆ ಇದೆ.

ದುಡ್ಡು ಶಾಶ್ವತವಲ್ಲ. ಆದರೆ ನಾನು ಗಳಿಸಿದ ಸಾವಿರಾರು ಜನರ ಈ ಪ್ರೀತಿ ನನ್ನ ಅತಿದೊಡ್ಡ ಆಸ್ತಿ. ನಮ್ಮ ಇಡೀ ಕುಟುಂಬದಲ್ಲೇ ಬಾಡಿಗೆ ಮನೆಯಲ್ಲಿರುವುದು ನಾನೊಬ್ಬಳೇ.  ಏನಿದ್ದರೇನು ಸ್ವಂತಕ್ಕೊಂದು ಸೂರಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಆದರೂ ಇಷ್ಟು ಜನರೊಂದಿಗೆ ಪ್ರೀತಿಯಿಂದ ಒಡನಾಡುವ ಮತ್ತು ಸ್ವಂತ ಪರಿಶ್ರಮದಿಂದ ಸುಖ ಕಾಣುವ ಅವಕಾಶ? ಮುಂದೆ ಕೋಟಿ ಗಳಿಸಿ ಮನೆ ಕಟ್ಟಬಹುದು. ಇಷ್ಟೆಲ್ಲ ಜನರ ನಿಸ್ವಾರ್ಥ ಪ್ರೀತಿಗೆ ವಿಶ್ವಾಸಕ್ಕೆ ಬೆಲೆ ಕಟ್ಟಲಾಗುವುದಾ?

ಇದನ್ನೂ ಓದಿ : Lockdown Stories : ಚಲನಾಮೃತ ; ನೆಂಟರು ಒಂದು ದಿನಕ್ಕೋ ಇಲ್ಲವೆ ಹನ್ನೊಂದನೇ ದಿನಕ್ಕೋ ಉಳಿದಂತೆ ನಮಗೆ ನಾವೇ!

Published On - 5:54 pm, Fri, 18 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ