Lockdown Stories : ಚಲನಾಮೃತ ; ಆನ್​ಲೈನಿನ ನಿರಾಯಾಸ ಈಜಿಗೆ ಆಫ್​ಲೈನಿನ ಮೆಹನತ್​ ಮುಖ್ಯ

Patriarchy : ಒ೦ದೊ೦ದು ಪೈಸೆ ಖರ್ಚು ಮಾಡಲೂ ಹಿಂದೆಮುಂದೆ ನೋಡುತ್ತ ಮಾವನವರ ಅನುಮತಿಗಾಗಿ ಕಾಯಬೇಕಾಗುತ್ತಿತ್ತು. ಒಂದು ರೀತಿ ಜೈಲಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಹಾಗಂತ ಗ೦ಡನ ಮನೆಯವರೂ ಕೆಟ್ಟವರ೦ತಲ್ಲ ಆದರೆ ತಿಳಿವಳಿಕೆ ಇಲ್ಲದ ಜನ. ಜನರ ಸಂಪರ್ಕಕ್ಕೆ ತೆರೆದುಕೊಳ್ಳದೆ ತಾವು ತಮ್ಮ ಮನೆಯ ಸದಸ್ಯರು ಮಾತ್ರ ಪ್ರಪಂಚ ಎನ್ನುವ ಹಾಗೆ ಬದುಕುವವರು. ಪ್ರತಿಯೊ೦ದಕ್ಕೂ ಲೆಕ್ಕಾಚಾರ, ಜಿಪುಣ ಬುದ್ಧಿ. ವರುಷಕ್ಕೆ ಒಂದು ಜೊತೆ ಬಟ್ಟೆ ಕೊಡಿಸಲೂ ಹಿಂದೆಮುಂದೆ ನೋಡುವವರು.’ ಶ್ರೇಯಾ ಕೆ.ಎಂ.

Lockdown Stories : ಚಲನಾಮೃತ ; ಆನ್​ಲೈನಿನ ನಿರಾಯಾಸ ಈಜಿಗೆ ಆಫ್​ಲೈನಿನ ಮೆಹನತ್​ ಮುಖ್ಯ
ಶಿವಮೊಗ್ಗದ ಶ್ರೇಯಾ ಕೆ.ಎಂ.
Follow us
ಶ್ರೀದೇವಿ ಕಳಸದ
|

Updated on:Jun 11, 2021 | 1:51 PM

ಅನಿವಾರ್ಯವೆಂಬ ಹಾವು ಕಾಲಬುಡಕ್ಕೇ ಬಂದಾಗ ಯಾರೂ ಚಲನಶೀಲರಾಗಿಬಿಡುತ್ತಾರೆ. ಆಗ ಮುಂದಿನ ಏರುಇಳಿವಿನ ಹಾದಿ ಅವರಲ್ಲಿ ಮತ್ತಷ್ಟು ಶಕ್ತಿಯನ್ನೂ ಸಂಕಲ್ಪವನ್ನೂ ಹೂಡುತ್ತಾ ಬರುತ್ತದೆ. ಬರುಬರುತ್ತ ಅದು ಅವರನ್ನು ಮತ್ತೊಂದು ಸ್ತರದಲ್ಲಿ ಯೋಚಿಸಿ, ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಾ ಪಾಯಾ ಗಟ್ಟಿಮಾಡುತ್ತದೆ. ಅಲ್ಲಿಗೆ ಅವರು ಅರಿವಿಲ್ಲದೆಯೇ ಅಷ್ಟುದಿನ ಕಟ್ಟಿಕೊಂಡ ಗೋಡೆಯನ್ನು ಹಾರಿಯಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆಯೇ ಆನ್​ಲೈನ್​ ಮಾರುಕಟ್ಟೆ ಸಂಸ್ಕೃತಿ. ಲಾಕ್​ಡೌನ್ ಶುರುವಾಗುತ್ತಿದ್ದಂತೆ ವೃತ್ತಿ, ಆಸಕ್ತಿ, ಕೌಶಲಗಳು ಆನ್​ಲೈನ್​ ಮೂಲಕ ವಾಣಿಜ್ಯ ಸ್ವರೂಪ ಪಡೆದುಕೊಳ್ಳುತ್ತಾ ಬಂದವು. ಫೇಸ್​ಬುಕ್​ ಅಕೌಂಟ್​ಗಳು ಪುಟಗಳಾದವು. ವಾಟ್ಸಪ್, ಬಿಝಿನೆಸ್ ನಂಬರುಗಳಾದವು. ​ಫೇಸ್​ಬುಕ್​ ಗ್ರೂಪ್​ಗಳು, ತಮ್ಮ ಸದಸ್ಯರನ್ನು ಹೆಚ್ಚು ವೃತ್ತಿಪರರನ್ನಾಗಿಸಲು ಪ್ರಯತ್ನಿಸಿದವು. ಸ್ವಂತ ವೆಬ್​, ಆ್ಯಪ್​ಗಳು ಹುಟ್ಟಿಕೊಂಡು ಪ್ರತ್ಯೇಕ ವಹಿವಾಟುತಾಣಗಳೇ ನಿರ್ಮಾಣಗೊಂಡವು. ಕೊರೊನಾದಿಂದಾಗಿ ಸಾವುನೋವು ಸಂಕಷ್ಟಗಳ ಮಧ್ಯೆಯೇ ಹಳ್ಳಿಹಳ್ಳಿಗಳೂ ಆನ್​ಲೈನ್​ ಭಾಷೆಯನ್ನು ಉಸಿರಾಡುತ್ತ ನಗರಗಳಿಗೆ ತಮ್ಮ ಸೊಗಡನ್ನು ಪಸರಿಸಿದವು. ಪರಿಣಾಮವಾಗಿ ಸಣ್ಣ ಪುಟ್ಟ ಉದ್ಯಮಗಳು ಕಣ್ಣುಬಿಟ್ಟುಕೊಂಡವು. ಗೃಹಕೈಗಾರಿಕೋದ್ಯಮ ಮತ್ತು ದೇಸೀ ಮಾರುಕಟ್ಟೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡವು. ಗ್ರಾಹಕರೂ ಈ ಆನ್​ಲೈನ್ ಸಂತೆಗೆ ಕಣ್ಣನ್ನೂ ಮನಸ್ಸನ್ನೂ ಜೇಬನ್ನು ಬಲುಬೇಗನೇ ಹೊಂದಿಸಿಕೊಂಡುಬಿಟ್ಟರು. 

ಹಾಗಂತ ಇದು ಇಲ್ಲಿಗೇ ನಿಂತಿಲ್ಲ, ನಿಲ್ಲುವುದೂ ಇಲ್ಲ. ಮುಂದೇನು ಎನ್ನುವ ಕುತೂಹಲದ ಕಣ್ಣು ನೆಟ್ಟುಕೊಂಡೇ  ಮಾರುವವರೂ ಇದ್ದಾರೆ ಕೊಳ್ಳುವವರೂ. ಆದರೆ ಆನ್​ಲೈನ್​ ಆಗಲಿ ಆಫ್​ಲೈನ್ ಆಗಲಿ, ಎಡೆಬಿಡದೆ ಶ್ರದ್ಧೆಯಿಂದ ವ್ಯಾಪಾರ ಸೂತ್ರಗಳನ್ನು ನೇಯುತ್ತಿದ್ದರೆ ಮಾತ್ರ ಇಲ್ಲಿ ಬೆಳಕು. ಈ ದೃಷ್ಟಿಕೋನದಲ್ಲಿ ರೂಪಿಸಿದ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ಚಲನಾಮೃತ’ ; ಕೊರೊನಾ ಕಾಲದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವವರ ಅನುಭವ ಕಥನಗಳು. ನೀವು ಅಥವಾ ನಿಮ್ಮ ಸುತ್ತಮುತ್ತಲಿನವರು ಈ ಪರಿಧಿಗೆ ಒಳಪಟ್ಟಲ್ಲಿ ನಾಲ್ಕೈದು ಫೋಟೋಗಳೊಂದಿಗೆ ಬರೆದು ಕಳುಹಿಸಿ. ಪದಮಿತಿ ಕನಿಷ್ಟ 800, ಗರಿಷ್ಟ 1,500.  tv9kannadadigital@gmail.com 

*

ಶಿವಮೊಗ್ಗದ ಶ್ರೇಯಾ ಕೆ.ಎಂ. ಪ್ರಿಯಾ ಕೆ. ಎಂ. ಅವಳಿ  ಸಹೋದರಿಯರು. ಅಣ್ಣತಮ್ಮನನ್ನು ಮದುವೆಯಾಗಿ ಒಂದೇ ಮನೆಗೆ ಹೋದರು. ಶ್ರೇಯಾ ಮದುವೆಯ ನಂತರ ಯಾಕೆ ಉಪನ್ಯಾಸಕ ವೃತ್ತಿಗೆ ರಾಜಿನಾಮೆ ನೀಡಿದರು, ಮನೆಯಲ್ಲಿದ್ದುಕೊಂಡೇ ಅಕ್ಕತಂಗಿಯರು ಸ್ವಾವಲಂಬಿ ಜೀವನ ಸಾಗಿಸಲು ಏನೆಲ್ಲ ಹಾದಿ ಕಂಡುಕೊಂಡರು? ನಿಂತಲ್ಲೇ ನಿಂತು ಪರಂಪರೆಯ ಕಠಿಣಪದರಗಳನ್ನು ಸೀಳುತ್ತ ಹೇಗೆ ಸಂಸಾರವನ್ನೂ ತೂಗಿಸುತ್ತ ಬಂದರು, ಶಿಕ್ಷಣ ಮತ್ತು ಸಂಸ್ಕಾರ ಅವರನ್ನು ಲಾಕ್​ಡೌನ್​ನ ನಂತರವೂ ಸುಸ್ಥಿರ ಜೀವನಕ್ಕೆ ಹೂ ಎತ್ತಿದಂತೆ ಹಗೂರವಾಗಿಸಿದ್ದು ಹೇಗೆ ಎನ್ನುವ ಚಿತ್ರಣ ಇಲ್ಲಿದೆ.

*

ಹುಟ್ಟಿದ್ದು ಅವಳಿ ಸಹೋದರಿಯರಾಗಿ ಮಧ್ಯಮ ವರ್ಗಕ್ಕಿಂತ ಸ್ವಲ್ಪ ಹೆಚ್ಚೇ ಸ್ಥಿತಿವ೦ತರ ಮನೆಯಲ್ಲಿ. ವಿದ್ಯೆ ಬುದ್ಧಿ ವಿಷಯದಲ್ಲಿ ಹೆಣ್ಣುಮಕ್ಕಳೆಂದು ತಾರತಮ್ಯ ಮಾಡಲಿಲ್ಲ; ಶಿಕ್ಷಣದೊಂದಿಗೆ ಕಂಪ್ಯೂಟರ್, ಟೈಪಿಂಗ್, ಟೈಲರಿಂಗ್, ಪೇಂಟಿಂಗ್, ಜ್ಯೂವೆಲ್ಲರಿ ಮೇಕಿಂಗ್ ಎಲ್ಲ ಕಲಿಸಿದರು. ಹೆಣ್ಣುಮಕ್ಕಳಿಗೆ ಹೆಚ್ಚಿನ ಓದು ಏಕೆ ಎಂದು ಕೇಳಿದ ಸಂಬಂಧಿಕರ ಬಾಯಿ ಮುಚ್ಚಿಸಿ ಸ್ನಾತಕೋತ್ತರ ಪದವಿಯನ್ನೂ ಮಾಡಿಸಿದರು. ನನ್ನ ಅಮ್ಮನಿಗಂತೂ ಹೆಣ್ಣುಮಕ್ಕಳು ಕೇವಲ ಮನೆಯಲ್ಲಿರದೆ ತಮ್ಮ ಕಾಲಮೇಲೆ ತಾವು ನಿಲ್ಲಬೇಕೆಂಬ ಅಪೇಕ್ಷೆ. ಹಾಗಾಗಿ ಮದುವೆ ಮೊದಲು ಬದುಕಿಗೆ ಬೇಕಾದ ಎಲ್ಲ ಕೌಶಲಗಳನ್ನೂ ಕಲಿಸಿದರು.

ಆದರೆ ಮದುವೆ ಆದಮೇಲೆ ನಿಜವಾದ ಜೀವನ, ಕಷ್ಟ ಎ೦ದರೇನೆ೦ದು ಗೊತ್ತಾಯಿತು. ಗಂಡನ ಮನೆಗೂ ತವರುಮನೆಗೂ ಅಜಗಜಾಂತರ ವ್ಯತ್ಯಾಸ. ದುಡ್ಡಿನ ಮಹತ್ವ ಮದುವೆಯ ನಂತರ ಗೊತ್ತಾಯಿತು. ಒ೦ದೊ೦ದು ಪೈಸೆ ಖರ್ಚು ಮಾಡಲೂ ಹಿಂದೆಮುಂದೆ ನೋಡುತ್ತ ಮಾವನವರ ಅನುಮತಿಗಾಗಿ ಕಾಯಬೇಕಾಗುತ್ತಿತ್ತು. ಒಂದು ರೀತಿ ಜೈಲಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಹಾಗಂತ ಗ೦ಡನ ಮನೆಯವರೂ ಕೆಟ್ಟವರ೦ತಲ್ಲ ಆದರೆ ತಿಳಿವಳಿಕೆ ಇಲ್ಲದ ಜನ. ಜನರ ಸಂಪರ್ಕಕ್ಕೆ ತೆರೆದುಕೊಳ್ಳದೆ ತಾವು ತಮ್ಮ ಮನೆಯ ಸದಸ್ಯರು ಮಾತ್ರ ಪ್ರಪಂಚ ಎನ್ನುವ ಹಾಗೆ ಬದುಕುವವರು. ಪ್ರತಿಯೊ೦ದಕ್ಕೂ ಲೆಕ್ಕಾಚಾರ, ಜಿಪುಣ ಬುದ್ಧಿ. ವರುಷಕ್ಕೆ ಒಂದು ಜೊತೆ ಬಟ್ಟೆ ಕೊಡಿಸಲೂ ಹಿಂದೆಮುಂದೆ ನೋಡುವವರು.

lockdown stories

ಅಕ್ಕ ಶ್ರೇಯಾ ತಂಗಿ ಪ್ರಿಯಾ

ಮದುವೆಯ ನಂತರ ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಎಲ್ಲರಿಗೂ ಹೊಂದಿಕೊಳ್ಳುವಾಗ ಸಮಸ್ಯೆಗಳು ಬಂದೇ ಬರುತ್ತವೆ, ಆದರೆ ಇಲ್ಲಿ ಪ್ರತಿಯೊಂದಕ್ಕೂ ಕಷ್ಟ. ಇಸವಿ 2010 ಆದರೂ ಮನೆಯವರ ಪರಿಸ್ಥಿತಿ ಇನ್ನೂ 1950ರದ್ದು. ಏಕೆಂದರೆ ಹೆಣ್ಣುಮಕ್ಕಳು ಒಬ್ಬೊಬ್ಬರೇ ಓಡಾಡಬಾರದು, ಗಂಡುಮಕ್ಕಳ ಎದುರು ನಿಲ್ಲಬಾರದು, ಕುಳಿತು ಮಾತನಾಡಬಾರದು, ತಮಗೆ ಇಷ್ಟಪಟ್ಟಿದ್ದನ್ನು ತಿನ್ನುವ ಸ್ವಾತಂತ್ರ್ಯವೂ ಇಲ್ಲದ ಜೀವನ. 5 ವರುಷ ಹೇಗೆ ಕಳೆದೆವೆಂದರೆ ಸತ್ತು ಬದುಕಿದ ರೀತಿ. ಇಬ್ಬರೂ ಅಕ್ಕತಂಗಿಯರು ಒಂದೇ ಮನೆಗೆ ಸೇರಿದ್ದಕ್ಕಾಗಿ ಎಷ್ಟೇ ನೋವಾದರೂ ಹೊಂದಿಕೊಂಡು ಹೋಗುತ್ತಿದ್ದೆವು. ಅತ್ತೆಯವರ ಕಾಟವಾದರೂ ಸಹಿಸಬಹುದು ಆದರೆ ಇಲ್ಲಿ ಇದ್ದಿದ್ದು ಮಾವನವರದ್ದು. ಕುಂತರೂ ನಿಂತರೂ ತಪ್ಪು. ತವರುಮನೆಗೆ ಫೋನಿನಲ್ಲಿ ಮಾತಾಡುವಂತಿಲ್ಲ. ತವರಿನವರು ಬಂದಾಗ ನಮ್ಮ ಬಗ್ಗೆ ರಾಶಿ ಕಂಪ್ಲೆಂಟ್. ಅವರಿಗೂ ಹೆಚ್ಚು ಫೋನ್ ಮಾಡಬೇಡಿ ಎಂಬ ತಾಕೀತು. ಅಬ್ಬಾ ರೋಸಿ ಹೋದ ಜೀವನ.

ಮದುವೆ ಆದ ನಾಲ್ಕೈದು ತಿಂಗಳಿಗೆ ಮತ್ತೆ ಉಪನ್ಯಾಸಕ ವೃತ್ತಿಗೆ ಹೋಗಲು ಮನೆಯವರನ್ನು ಹೇಗೋ ಒಪ್ಪಿಸಿ ಹೊರಟೆ. ಅಲ್ಲಿಂದ ಮತ್ತಷ್ಟು ಕಷ್ಟಗಳ ಸುರಿಮಳೆ. ಅವಳಿ ಸಹೋದರಿ ಹೆರಿಗೆಗಾಗಿ ಊರಿಗೆ ಹೋದಮೇಲಂತೂ ನರಕ. ಬೆಳಗ್ಗೆ ಬೇಗ ಎದ್ದು ಎಲ್ಲಾ ಕೆಲಸ ಮಾಡಿಟ್ಟು ಹೋದರೂ, ಸಂಜೆ ಬರುವುದರೊಳಗೆ ಸಹಸ್ರ ನಾಮಾರ್ಚನೆ. ಸುಸ್ತಾಗಿ ಬಂದಿದ್ದಾಳೆ ಎಂದು ಪ್ರೀತಿಯ ಮಾತು ಕೂಡ ಇಲ್ಲಾ, ಅಷ್ಟು ಒರಟು. ಒಮ್ಮೆ ಕಾಲೇಜಿನಲ್ಲಿ ಮೀಟಿಂಗ್ ಇತ್ತು, ಸಂಜೆಗತ್ತಲು  7ಗಂಟೆ. ಒಬ್ಬಳೇ ಮನೆಗೆ ಹೋಗುವುದರೊಳಗೆ ಇನ್ನೂ ತಡವಾಗಬಹುದು ಎಂದು ನಮ್ಮ ಸೀನಿಯರ್ ಲೆಕ್ಚರರ್ ತಮ್ಮ ಬೈಕಿನಲ್ಲಿ ಮನೆಗೆ ಬಿಟ್ಟು ಹೋದರು. ‘ಅಯ್ಯೋ ಅಯ್ಯೋ ಯಾರ್ಯಾರ್ದೋ ಜೊತೆಗೆ ಮನೆಗೆ ಬರತಾಳೆ’ ಅಂತ ದೊಡ್ಡ ರಂಪಾನೇ ಮಾಡಿಬಿಟ್ಟರು. ನಮಗೆ ಇದೆಲ್ಲ ನೋಡಿ ಆಶ್ಚರ್ಯ, ಯಾಕೆಂದರೆ ನಾವು ಹುಡುಗ ಹುಡುಗಿ ಎನ್ನದೆ ಬೆಳೆದವರು, ಅದರಲ್ಲೂ ಒಮ್ಮೆ ಡ್ರಾಪ್ ಮಾಡಿದ್ದಕ್ಕೆ ಇಷ್ಟೊಂದು? ಆಮೇಲಿಂದ ಎಷ್ಟೇ ಲೇಟ್ ಆದರೂ ಯಾರ ಜೊತೆಗೂ ಬರುತ್ತಿರಲಿಲ್ಲ. ಒಬ್ಬಳೇ ನಡೆದುಕೊಂಡಾದರೂ ಬರುತ್ತಿದ್ದೆ. ಅದೂ ಸಮಾಧಾನವಿಲ್ಲದೆ ಒಂದಿನ ಕೆಲಸ ಬಿಡಿಸಿಯೇ ಬಿಟ್ಟರು. ನನಗೂ ಅನ್ನಿಸಿತು ಯಾರಿಗೋಸ್ಕರ ದುಡೀಬೇಕು ನಾನು ಇಷ್ಟೆಲ್ಲಾ ಕಷ್ಟಪಟ್ಟು, ರಿಸೈನ್ ಮಾಡಿ ಬಂದೆ. ಮಾರನೇ ದಿನ ನಮ್ಮ ಸೆಕ್ರೆಟರಿ, ಸೀನಿಯರ್ಸ್ ಫೋನ್ ಮಾಡಿ ಕೆಲಸ ಬಿಡಬೇಡಿ ಎಂದರೂ ಕೇಳಲಿಲ್ಲ.

lockdown stories

ಬೆಂಗಳೂರಿನಲ್ಲಿ ಸಂಸ್ಥೆಯೊಂದರ ಪುರಸ್ಕಾರ ಪಡೆದ ಸಂದರ್ಭದಲ್ಲಿ ಮಗಳು ಮತ್ತು ಹಿರಿಯ ನಟಿ ತಾರಾ ಅನುರಾಧಾ ಅವರೊಂದಿಗೆ ಶ್ರೇಯಾ

ನಂತರ ಬಸುರಿಯಾದೆ. ಆಗಲೂ ಒಂದು ದಿನವೂ ನೆಮ್ಮದಿಯಿಂದ ಬದುಕಲಾಗಲಿಲ್ಲ. ಅವಳಿ ಸಹೋದರಿ ಬೇರೆ ಅಮ್ಮನ ಮನೆಗೆ ಬಾಣಂತನಕ್ಕೆ. ನನಗೆ 5 ತಿಂಗಳವರೆಗೂ ಏನು ತಿಂದರೂ ವಾಂತಿ. ನಮ್ಮ ಮಾವ ಆಗಲೂ, ಕೆಲಸ ಮಾಡೋಕಾಗದೆ ನಾಟಕ ಮಾಡುತ್ತಿದ್ದಾರೆ ಎನ್ನುತ್ತಿದ್ದರು. ಡಾಕ್ಟರ್ ರೆಸ್ಟ್ ಮಾಡಿ ಅಂತ ಹೇಳಿದರೆ, ಇವಳೇ ಡಾಕ್ಟರ್ ಬಳಿ ಹೇಳಿಸಿದಾರೆ ಎನ್ನುತ್ತಿದ್ದರು. ಬಸುರಿ ಇದ್ದಾಗಿನ ಘಟನೆ ಹೇಳಲೇಬೇಕು. ಅವಳಿ ಸಹೋದರಿ ಬಸುರಿ ಆದಾಗ ಸೀಮಂತ ಮಾಡಿದ್ದರು, ಇದರಲ್ಲೂ ಸ್ವಾರ್ಥ, ನಾವು ಒಂದು ಮಾಡಿದ್ದೇವೆ ಇನ್ನೊಬ್ಬಳದು ತವರಿನವರು ಮಾಡಲಿ ಅಂತ. ನಮಗೆ ಇಂಥದೆಲ್ಲ ಗೊತ್ತಿರಲಿಲ್ಲ. ತುಂಬಿದ ಬಸುರಿ ನಾನು, ಒಂದು ಮಾತು ಕೇಳಿದ್ದೆ ಆಸೆಯಿಂದ ಸೀಮಂತ ಮಾಡಲ್ಲವಾ ಅಂತ. ಕೇಳಿದ್ದೇ ತಪ್ಪು ಅನ್ನೋ ಹಾಗೆ ದೊಡ್ಡ ರಾದ್ಧಾಂತ ಮಾಡಿ ಬಾಯಿಗೆ ಬಂದಂತೆ ಬೈದು ಜಗಳವಾಡಿದರು. ಅಂದು ಸಾಯಲು ಹೋಗಿದ್ದೆ. ಆದರೆ ಹೇಗೋ ಬಚಾವಾದೆ. ತವರಿನವರು ಕರೆದುಕೊಂಡು ಹೋಗಿ ಸೀಮಂತ ಮಾಡಿದರು.

ಇಷ್ಟೆಲ್ಲಾ ಆದರೂ ನನಗೇನೋ ಆಸೆ, ಹೆಣ್ಣು ಮಗುವೇ ಬೇಕು. ಅಂತೂ ದಿನ ತುಂಬಿದ ನಂತರ ತವರೂರಿನ ಆಸ್ಪತ್ರೆಗೆ ಹೋದರೆ, ಹೊಟ್ಟೆಯಲ್ಲಿ ನೀರು ಕಡಿಮೆ ಇದೆ, ಮಗು ಕರುಳುಬಳ್ಳಿ ಸುತ್ತುಕೊಂಡಿದೆ ಸಿಸೇರಿಯನ್ ಮಾಡಬೇಕು ಆದಷ್ಟು ಬೇಗ ಅಡ್ಮಿಟ್ ಮಾಡಿ ಎಂದರು. ಅದರಲ್ಲೂ ನಮ್ಮ ಮಾವ, ಶನಿವಾರ ಹುಟ್ಟುವ ಮಗು ಅನಿಷ್ಟ. ನಾಳೆ ಮಾಡಿಸಿ ಎಂದುಬಿಟ್ಟರು. ಡಾಕ್ಟರ್ ಅವರ ಮಾತನ್ನು ಒಪ್ಪುತ್ತಿಲ್ಲ. ಹಾಗೂ ಹೀಗೂ ಅಪ್ಪಾಜಿ ಡಾಕ್ಟರನ್ನು ಒಪ್ಪಿಸಿ ಸೋಮವಾರಕ್ಕೆ ಆಪರೇಷನ್ ಫಿಕ್ಸ್ ಮಾಡಿಸಿದರು. ಮೂರು ದಿನ ಆ ನೋವಿನಿಂದ ಬಳಲಿ ಹೋಗಿದ್ದೆ. ಅಂತೂ ಹೆಣ್ಣುಮಗು ಹುಟ್ಟಿತು. ಮಗುವಿನ ಮುದ್ದು ಮುಖ ಮಂದಹಾಸ ಮೂಡಿಸಿದ್ದು ಈಗಲೂ ನೆನಪಿದೆ.

ಅದಾದ ನಂತರವೂ 5 ವರುಷಗಳ ಕಾಲ ಪ್ರತೀದಿನ ಜಗಳ, ರಂಪಾಟ, ಅಳು. ಎಷ್ಟೋ ಸಾರಿ ಮನೆಬಿಟ್ಟು ಹೋಗಿ ಸತ್ತು ಹೋಗೋಣ ಅನ್ನಿಸಿದ್ದು ಇದೆ. ಆದರೆ ಮಕ್ಕಳ ಮುಖ. ತಂದೆ ತಾಯಿಯರ ಮುಖ ನೋಡಿ ಹೊಂದಿಕೊಂಡು ಹೋಗೋಣವೆಂದು ಪ್ರಯತ್ನಿಸಿದೆ. ಕೆಲವೊಮ್ಮೆ ತುಂಬಾ ರೋಸಿಹೋಗಿ ಮಹಿಳಾ ಸಾಂತ್ವನ ಕೇಂದ್ರಕ್ಕೂ ಹೋಗಿದ್ದೆವು. ತವರಿನವರು ಕೆಲವೊಮ್ಮೆ ಬಂದು ರಾಜಿ ಸೂತ್ರಗಳನ್ನು ಮಾಡುತ್ತಿದ್ದರು. ಅಷ್ಟೆಲ್ಲ ಓದಿಕೊಂಡು ಇಂಥ ಪರಿಸ್ಥಿತಿಯ ಮನೆಯಲ್ಲಿ ಹೊಂದಿಕೊಂಡು ಹೋಗುವುದೇ ಸವಾಲಾಗಿತ್ತು. ಇಂತಹ ಕಷ್ಟ ಕಾಲದಲ್ಲೂ ನಾವು ಮನೆಯಿಂದ ಹೊರಬರಲಿಲ್ಲ. ಈಸಬೇಕು ಇದ್ದು ಜಯಿಸಬೇಕು ಎನ್ನುವ ಮನೋಭಾವ. ಅಷ್ಟರಲ್ಲಿ ಮಕ್ಕಳು ಅವರ ಲಾಲನೆ ಪಾಲನೆ. ಇಷ್ಟೆಲ್ಲ ಆಗುವ ಹೊತ್ತಿಗೆ ಗಂಡಂದಿರಿಗೂ ಸ್ವಲ್ಪ ಸ್ವಲ್ಪ ಹೆಂಡತಿಯರ ಮೇಲೆ ನಂಬಿಕೆ, ಪ್ರೀತಿ ವಿಶ್ವಾಸ ಮೂಡಿತ್ತು. ಅಷ್ಟರಲ್ಲಾಗಲೇ ಮಕ್ಕಳ ಖರ್ಚು, ಮನೆಯ ಖರ್ಚು ಇವೆಲ್ಲಾ ಗಂಡಸರೊಬ್ಬರ ದುಡಿಮೆಯಿಂದ ಸರಿದೂಗಿಸುವುದು ಕಷ್ಟ ಎಂಬುದು ಮನವರಿಕೆ ಆಗುತ್ತಿತ್ತು.

lockdown stories

ಸಾಧನೆಗೆ ಪುರಸ್ಕಾರ ಪಡೆದ ಕ್ಷಣ

ಇಲ್ಲಿಂದ ನಮ್ಮ ಸ್ವಾವಲಂಬಿ ಜೀವನದ ಕಥೆ ಶುರು. ಹೇಗಾದರೂ ದುಡಿಯಲೇಬೇಕೆಂಬ ಹಠ. ಆದರೆ ಹೊರಗಡೆ ದುಡಿಯಲು ಕಳುಹಿಸಲು ತಯಾರಿಲ್ಲ. ಹಾಗಾಗಿ ಮನೆಯಲ್ಲೇ ಏನಾದರೂ ಮಾಡೋಣ ಎಂದು ಪೇಪರಿನಲ್ಲಿ ಬಂದ ಜಾಹೀರಾತನ್ನು ನೋಡಿ ರೈಟಿಂಗ್ ವರ್ಕ್​ಗೆ ಸೇರಿದೆವು. ಅದಕ್ಕೆ 1,500 ರೂಪಾಯಿ ಕಟ್ಟಬೇಕಿತ್ತು. ನಮ್ಮ ಗಂಡಂದಿರನ್ನು ಕೇಳಿದರೆ ಕೊಡುವುದಿಲ್ಲ. ತವರಲ್ಲಿ ಕೇಳಲು ಮನಸು ಒಪ್ಪುವುದಿಲ್ಲ. ಹಾಗಾಗಿ ಫ್ರೆಂಡ್ಸ್ ಹತ್ತಿರ ಕೇಳಿದೆವು. ಆಪ್ತ ಗೆಳತಿಯೊಬ್ಬಳು ಕೊಟ್ಟಳು. ಆದರೆ ನಮ್ಮ ಗ್ರಹಚಾರವೋ ಏನೋ ಆ ರೈಟಿಂಗ್ ವರ್ಕ್​ ಕೆಲಸದಲ್ಲಿ ಮೋಸವಾಯಿತು. ಫ್ರೆಂಡ್​ ಬಳಿ ತೆಗೆದುಕೊಂಡ ಸಾಲ ತೀರಿಸಲೇಬೇಕೆಂಬ ಅನಿವಾರ್ಯ ಒದಗಿತು. ಅಲ್ಲಿಂದ ಅದ್ಯಾವುದೋ ಇನ್ಶೂರೆನ್ಸ್ ಏಜನ್ಸಿಗೆ ಅವಕಾಶ ಬಂತು. ಆದರೆ ಅದು ನಮಗೆ ಕೈ ಹತ್ತಲಿಲ್ಲ. ಅಲ್ಲಿಂದ ಚೈನ್ ಲಿಂಕ್ ಜಾಬ್​ಗಳೆಲ್ಲ ಬಂದವು. ಅದ್ಯಾವುದೂ ಕೈಹಿಡಿಯಲಿಲ್ಲ.

ಆರ್ಥಿಕವಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದೆವು. ಹಾಗಂತ ಸಂಸಾರ ಎಂಬ ಸಾಗರದಲ್ಲಿ ಬಿದ್ದಾಗಿದೆ ಕಷ್ಟದಲ್ಲೇ ಜೀವನ ನಡೆಸೋಣ ಅಂತ ಕೂತಿದ್ದರೆ ನಮ್ಮ ಕಷ್ಟ ಕಡಿಮೆ ಆಗುತ್ತದೆಯೇ? ಹೇಗೂ ಓದಿದ ವಿದ್ಯೆ ನಮ್ಮ ಕೈಯಲ್ಲಿತ್ತು. ಮನೆಯವರನ್ನ ಒಪ್ಪಿಸಿ ಮನೆಯಲ್ಲೇ 8, 9, 10 ನೇ ತರಗತಿ ಟ್ಯೂಷನ್ ತರಗತಿ ಆರ೦ಭಿಸಿದೆವು. ಮೊದಲನೇ ವರ್ಷಕ್ಕೆ 10ನೇ ತರಗತಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಹೊಂದಿದರು. ಇದರಿಂದ ಟ್ಯೂಷನ್ ಚೆನ್ನಾಗಿ ಸಾಗಿತು. ಹಾಗೇ ಸೀರೆಗೆ ಕುಚ್ಚು ಕಟ್ಟುವುದನ್ನೂ ಶುರು ಮಾಡಿಕೊಂಡೆವು. ಮನೆಮನೆಗೆ ಹೋಗಿ ಸೀರೆಗೆ ಕುಚ್ಚು ಕಟ್ಟುತ್ತೇವೆ ಎಂದರೆ ನೋಡುವ ದೃಷ್ಟಿಯೇ ಬೇರೆ. ಆದರೆ ಅನಿವಾರ್ಯ ನಮಗೆ. ನಾವೇನು ಕೆಟ್ಟ ಕೆಲಸ ಮಾಡುತ್ತಿಲ್ಲ ನ್ಯಾಯವಾಗಿ ದುಡಿಯುತ್ತಿದ್ದೇವೆ ಎಂದು ಮುನ್ನುಗ್ಗಿದೆವು.

ಮುಂದೆ ಮಕ್ಕಳು ದೊಡ್ಧವರಾಗುತ್ತಿದ್ದ೦ತೆ ಖರ್ಚುಗಳು ಕೂಡ ಹೆಚ್ಚಾಗುತ್ತಾ ಹೋದವು. ಒಟ್ಟು ಹತ್ತುಜನಗಳ ಕುಟುಂಬ. ಇಷ್ಟು ದೊಡ್ಡ ಕುಟುಂಬ ನಿರ್ವಹಣೆ ಗಂಡಸರಿಂದಷ್ಟೇ ಸಾಧ್ಯವಾಗದು ಎನ್ನಿಸಿ ಟ್ಯೂಷನ್ ಜೊತೆಗೆ ಮದುವೆಗಿ೦ತ ಮು೦ಚೆ ಕಲಿತ೦ತಹ ಕರಕುಶಲ ವಸ್ತುಗಳ ತಯಾರಿಕೆಗೆ ತೊಡಗಿಕೊಂಡೆವು. ಅದು ನಮ್ಮ ಕೈ ಹಿಡಿಯಿತು. ಸಿಲ್ಕ್ ಥ್ರೆಡ್ ಜ್ಯೂವೆಲ್ಲರಿ ಮಾಡಿ ಹತ್ತಿರದಲ್ಲೇ ವ್ಯಾಪಾರ ಶುರು ಮಾಡಿ, ಆಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದೆವು. ವ್ಯಾಪಾರ ವೃದ್ಧಿಯಾಯಿತು. ಮುಂದುವರೆದು ಕೃತಕ ಆಭರಣ, ಗ್ಲಾಸ್ ಬೀಡ್ಸ್ ಆಭರಣ, ಈಗ ಇದರ ಜೊತೆಗೆ ಸೀರೆ ಬಟ್ಟೆಗಳ ವ್ಯಾಪಾರ ಕೂಡ ಕೈ ಹಿಡಿದಿದೆ. ಮಕ್ಕಳ ಖರ್ಚು ನಮ್ಮ ಖರ್ಚನ್ನು  ನಾವೇ ನೋಡಿಕೊ೦ಡು ಮನೆಯ ಖರ್ಚಿಗೂ ಒದಗುತ್ತಿದೆ. ಇಷ್ಟೇ ಅಲ್ಲ, ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಅಬಾಕಸ್, ಮೆಮೊರಿ ಕ್ಲಾಸ್, ವೇದಿಕ್ ಮ್ಯಾಥ್ಸ್ ಕಲಿತು ಅವುಗಳ ಕೋಚಿಂಗ್ ಕೂಡ ನಡೆಸಿದೆವು. ಇವೂ ಒಳ್ಳೆಯ ಫಲಿತಾಂಶ ನೀಡುತ್ತಿವೆ.

Lockdown Stories

ಕೊರೊನಾ ಸಂದರ್ಭದಲ್ಲಿ ರಾಖಿ ತಯಾರಿಸಿ ಆನ್​ಲೈನ್​ ಮಾರಾಟ ಮಾಡಿದ್ದು

ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದಾಗ ಬೇಸರ ಮೂಡಿದ್ದು ನಿಜ. ಆದರೆ ಈಗ ನಮ್ಮ ಸ್ವಾವಲ೦ಬಿ ಜೀವನದಿ೦ದ ಮನಸಿಗೆ ತುಂಬಾ ನೆಮ್ಮದಿ ಇದೆ. ಕಲಿಕೆಯಲ್ಲಿ ಹಿಂದುಳಿದ 10ನೇ ತರಗತಿಯ ಮಕ್ಕಳು ಗಣಿತದಲ್ಲಿ ಪಾಸ್ ಆದಾಗಲಂತೂ ಅವರ ತಂದೆ-ತಾಯಿಯರು ಕೃತಜ್ಞತಾ ಭಾವದಿಂದ ನೋಡುವುದನ್ನು ಯಾವ ದುಡ್ಡಿನಿಂದಲೂ ಅಳೆಯಲು ಸಾಧ್ಯವಿಲ್ಲ. ದುಡಿಯುವವರಿಗೆ ಸಾವಿರ ದಾರಿ. ನಮ್ಮಲ್ಲಿ ಧೈರ್ಯ, ಆತ್ಮವಿಶ್ವಾಸ ಇದ್ದರೆ ಮನೆಯಲ್ಲಿ ಕುಳಿತೂ ಸಂಸಾರ ತೂಗಿಸಬಹುದು.

ನಾವು ಓದಿದ ಸರ್ಕಾರಿ ಶಾಲೆಗೆ ನಮ್ಮಿಂದ ಆದಷ್ಟು ದೇಣಿಗೆಯನ್ನು ನೀಡುತ್ತಿದ್ದೇವೆ. ಇದೆಲ್ಲಾ ಸಾಧ್ಯ ಆಗಿರುವುದು ನಮ್ಮ ತ೦ದೆ ತಾಯಿಯರು ಕಲಿಸಿದ ವಿದ್ಯೆಯಿ೦ದ, ಅವರಿಗೆ ಯಾವಾಗಲೂ ಚಿರಋಣಿ. ನಮ್ಮ ಬಹುಮುಖ ಪ್ರತಿಭೆಯನ್ನು ಗುರುತಿಸಿ ಆಕಾಶವಾಣಿ ಭದ್ರಾವತಿ ತ೦ಡದವರು ಸ೦ದರ್ಶಿಸಿ ರಾಜ್ಯಾದ್ಯಂತ ಕಾರ್ಯಕ್ರಮ ಪ್ರಸಾರ ಮಾಡಿದರು. ಮೊನ್ನೆಮೊನ್ನೆ ಬೆಂಗಳೂರಿನ Velzoe ಸಂಸ್ಥೆ 40 ಸಾಧಕ ಮಹಿಳೆಯರನ್ನ ಗೌರವಿಸಿ ಸನ್ಮಾನಿಸಿದರು. ಅದರಲ್ಲಿ ನಾನೂ ಒಬ್ಬಳು ಎಂಬ ಹೆಮ್ಮೆ. ಹೆಣ್ಣು ಅಬಲೆಯಲ್ಲ ಶಕ್ತಿಯ ಸೆಲೆ. ಇದು ನನ್ನನ್ನು ನಾನು ಹೊಗಳಿಕೊಳ್ಳಲು ಬರೆದಿದ್ದಲ್ಲ. ಇತರರಿಗೂ ಸ್ಫೂರ್ತಿಯಾಗಲೆಂದು. ಹೆಣ್ಣು ಸ್ವಾವಲ೦ಬಿಯಾಗಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆ.

ಇನ್ನು ಲಾಕ್​ಡೌನ್​ ನಂತರ ಎಲ್ಲಾ ದುಡಿಮೆಗಳನ್ನು ಮೂರು ತಿಂಗಳ ತನಕ ನಿಲ್ಲಿಸಿದೆವು. ಆದರೂ ಎದೆಗುಂದಲಿಲ್ಲ. ಯಾಕೆಂದರೆ ಮೇ ತಿಂಗಳಲ್ಲಿ ಆನ್​ಲೈನ್​ ಕ್ಲಾಸ್​ ಆರಂಭಿಸಿದೆವು. ಎಷ್ಟೋ ಜನ ಶಿಕ್ಷಕರು ಅಬಾಕಸ್ ಆನ್​ಲೈನ್​ ಕ್ಲಾಸ್ ಸೇರಿದರು. ಕಡಿಮೆ ಫೀಸ್ ನಿಗದಿ ಮಾಡಿದೆವು. ಏಕೆಂದರೆ ಅವರಿಗೆ ಹೊರಗಡೆ ಹೋಗಿ ಕಲಿಯಲು ಸಮಯವಿಲ್ಲ ಮತ್ತು ತಾವು ಕಲಿತು ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ ಎನ್ನುವ ಕಾರಣಕ್ಕೆ. ಹಾಗೆ ಹೈಸ್ಕೂಲ್ ಮಕ್ಕಳಿಗೆ ಮೆಮೊರಿ ಕ್ಲಾಸ್ ಹಾಗೂ ಬೇಸಿಕ್ ಮ್ಯಾಥ್ಸ್ ಆನ್​ಲೈನ್​ ತರಗತಿ ಶುರು ಮಾಡಿದೆವು. ವ್ಯಾಪಾರವೆಂದರೆ ಕಾಲದ ಬೇಡಿಕೆಗಳನ್ನು ಪೂರೈಸಬೇಕು; ಸ್ಯಾನಿಟೈಸರ್, ಮಾಸ್ಕ್, ಸ್ಟೀಮರ್ ಇವುಗಳನ್ನು ಹೆಚ್ಚು ಸೇಲ್ ಮಾಡಿದ್ದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯಕವಾಯಿತು. ಮಂಡಲ ಆರ್ಟ್, ಮಣ್ಣಿನ ಆಭರಣಗಳ ಕಲಿಕೆ ಲವಲವಿಕೆ ಹೆಚ್ಚಿಸಿತು. ಈ ಎಲ್ಲದರಿಂದಾಗಿ ಲಾಕ್​ಡೌನ್​ನಲ್ಲಿ ದುಡಿಮೆ ಇಲ್ಲದೇ ಕುಳಿತುಕೊಳ್ಳಬೇಕೆಂಬ ಚಿಂತೆಯೂ ನೀಗಿತು.

ಅಷ್ಟರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧೃತಿ ಮಹಿಳಾ ಮಾರುಕಟ್ಟೆ ಗುಂಪು ಶುರುವಾಯಿತು. ಲಾಕಡೌನ್ ಗಿಂತ ಮುಂಚೆ ಟ್ಯೂಷನ್, ಸ್ಕೂಲ್, ಇತರೇ ಬಿಝಿನೆಸ್​ಗಳಿಂದ ಬರುತ್ತಿದ್ದ ಆದಾಯ ಲಾಕ್​ಡೌನ್​ ನಂತರ ಈ ಮಾರುಕಟ್ಟೆಯಿಂದ ಹೆಚ್ಚಿತು. ಇತರೇ ಮಹಿಳಾ ಗುಂಪುಗಳಿಂದ ಸಾಕಷ್ಟು ಹೊಸ ಗ್ರಾಹಕರು ಸಿಕ್ಕರು. ರಕ್ಷಾಬಂಧನದ ಸಮಯದಲ್ಲಿ ಈ ಮಾರುಕಟ್ಟೆಯ ಗ್ರಾಹಕರಿಗೆ ರಾತ್ರಿ 2 ಗಂಟೆವರೆಗೂ ಮನೆಯಲ್ಲೇ ರಾಖೀ ತಯಾರಿಸಿ ಪ್ಯಾಕ್ ಮಾಡುತ್ತಿದ್ದೆವು. ದೂರದ ಕೋಲ್ಕತ್ತ, ಮುಂಬೈ, ದೆಹಲಿಗೂ ಕೂಡ ಕಳುಹಿಸಿ ವ್ಯಾಪಾರ ವೃದ್ಧಿಸಿಕೊಂಡೆವು. ಕೃತಕ ಆಭರಣ ಬಟ್ಟೆಗಳೂ ಅಷ್ಟೇ ಮಧ್ಯರಾತ್ರಿ ತನಕವೂ ಆರ್ಡರ್ ಪಡೆಯುತ್ತಿದ್ದೆವು.

lockdown stories

ಅಂದು ಎಳೆಎಳೆ ಹಿಡಿದು ಕಟ್ಟಿದ್ದಕ್ಕೆ ಇಂದು….

ಈ ಬಾರಿಯೂ ಕೊರೊನಾ ಎರಡನೇ ಅಲೆಯಲ್ಲಿ ಇತರೇ ಬಿಝಿನೆಸ್ ಜೊತೆ ನಾಲ್ಕು ಬ್ಯಾಚ್ ಆನ್​ಲೈನ್​ ತರಗತಿಗಳು ನಡೆಯುತ್ತಿವೆ. ಕುಕ್ಕಿಂಗ್ ಕ್ಲಾಸ್, ಮಕ್ಕಳಿಗೆ ಕರಕುಶಲ ಕಲೆ… ಹೀಗೆ ಸಮಯದ ಸದುಪಯೋಗ ಮಾಡಿಕೊಳ್ಳುತ್ತಿದ್ದೇವೆ. ಇನ್ನು ಫೇಸ್​ಬುಕ್ ಗುಂಪುಗಳು ಕವಿತೆ, ಬರಹವಣಿಗೆ ಹವ್ಯಾಸವನ್ನು ಸುಧಾರಿಸಿಕೊಳ್ಳಲು ಪ್ರೇರೇಪಿಸಿವೆ. ‘ಸಾಹಿತ್ಯ ಲಾಲಿತ್ಯ’ ಎಂಬ ಪುಸ್ತಕದಲ್ಲಿ ಪ್ರಕಟಿಸಿ, ಬೆಂಗಳೂರಿನಲ್ಲಿ ಸನ್ಮಾನ ಕೂಡ ಮಾಡಿದ್ದಾರೆ.

ಕಷ್ಟ ಎಲ್ಲರಿಗೂ ಸಹಜ. ಆದರೆ ಕಲಿಯುವ ಮತ್ತು ಮುನ್ನುಗ್ಗುವ ಛಲ?

ಇದನ್ನೂ ಓದಿ : Lockdown Stories : ಚಲನಾಮೃತ ; ಆ ದಿನ 272 ರೂಪಾಯಿ ಮಾತ್ರವಿತ್ತು ಚಿತ್ರದುರ್ಗದ ವಿಜಯವ್ವೆಯ ಅಕೌಂಟ್​ನಲ್ಲಿ  

Published On - 3:47 pm, Thu, 10 June 21

ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ