ಬೆಳಗಾವಿ: ಮತ್ತೊಂದು ಕೃಷ್ಣಮೃಗ ಸಾವು; ಸಾವಿನ ಸಂಖ್ಯೆ 30ಕ್ಕೆ ಏರಿಕೆ
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರಿದಿದೆ. ಇಂದು ಸಂಜೆ ಚಿಕಿತ್ಸೆ ಫಲಿಸದೆ ಮತ್ತೊಂದು ಕೃಷ್ಣಮೃಗ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 30ಕ್ಕೆ ಏರಿಕೆ ಆಗಿದೆ. ಮೃಗಾಲಯದ ನಿರ್ವಹಣೆ ಹಾಗೂ ಕೃಷ್ಣಮೃಗಗಳ ಸಾವಿಗೆ ಕಾರಣಗಳ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.

ಬೆಳಗಾವಿ, ನವೆಂಬರ್ 16: ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿಯಿರುವ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ (Blackbuck) ಚಿಕಿತ್ಸೆ ಫಲಿಸದೆ ಇಂದು ಸಂಜೆ ಸಾವನ್ನಪ್ಪಿದೆ (death). ಆ ಮೂಲಕ ಕೃಷ್ಣಮೃಗಗಳ ಸಾವಿನ ಸಂಖ್ಯೆ 30ಕ್ಕೆ ಏರಿಕೆ ಆಗಿದೆ. ಬ್ಯಾಕ್ಟೀರಿಯಾ ಇನ್‌ಪೆಕ್ಷನ್‌ನಿಂದಲೇ ಕೃಷ್ಣಮೃಗಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ
ನವೆಂಬರ್ 13ರಂದು 8, ನಿನ್ನೆ ಒಂದೇ ದಿನ 20, ನಿನ್ನೆ ತಡರಾತ್ರಿ ಒಂದು, ಇಂದು ಸಂಜೆ ಗಂಡು ಕೃಷ್ಣಮೃಗ ಸಾವನ್ನಪ್ಪಿವೆ. ಆ ಮೂಲಕ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಈವರೆಗೆ 30 ಕೃಷ್ಣಮೃಗಗಳ ಸಾವಾಗಿದೆ. ಕೃಷ್ಣಮೃಗಗಳು ಮೃತಪಟ್ಟ ಪ್ರದೇಶವನ್ನು ಮೃಗಾಲಯದ ಸಿಬ್ಬಂದಿ ನಿರ್ಬಂಧಿಸಿದ್ದಾರೆ. ಸೋಂಕು ಹರಡದಂತೆ ಮೃಗಾಲಯದ ಸಿಬ್ಬಂದಿ ಮುಂಜಾಗ್ರತೆ ಕ್ರಮಕೈಗೊಂಡಿದ್ದು, ಗ್ರೀನ್ ಮ್ಯಾಟ್ ಕಟ್ಟಿ ಸಾರ್ವಜನಿಕರು ಓಡಾಡದಂತೆ ನಿರ್ಬಂಧಿಸಿದ್ದಾರೆ.
ರೋಗದಿಂದ ಮೃತಪಟ್ಟಿದ್ದಾಗಿ ಪ್ರಾಥಮಿಕ ವರದಿ ಬಂದಿದೆ: ಸಚಿವ ಸತೀಶ್ ಜಾರಕಿಹೊಳಿ
ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಕೃಷ್ಣಮೃಗಗಳು ರೋಗದಿಂದ ಮೃತಪಟ್ಟಿದ್ದಾಗಿ ಪ್ರಾಥಮಿಕ ವರದಿ ಬಂದಿದೆ. ಅದಕ್ಕೆ ಸಂಬಂಧಿಸಿದಂತೆ ನುರಿತರ ವರದಿ ಬಂದ ಮೇಲೆ ನೋಡೋಣ. ಅರಣ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ನುರಿತ ತಜ್ಞರು ವರದಿ ಕೊಟ್ಟ ಮೇಲೆ ಗೊತ್ತಾಗುತ್ತದೆ ನಾವು ಹೇಳಲು ಆಗಲ್ಲ. ಅರಣ್ಯ ಸಚಿವರು ತನಿಖೆಗೆ ಆದೇಶ ಮಾಡಿದ್ದಾರೆ ನೋಡೋಣ ಎಂದರು.
ಸಮಗ್ರ ತನಿಖೆಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ ವಾಟಾಳ್ ನಾಗರಾಜ್
ಪ್ರಕರಣ ಕುರಿತಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಮೃತಪಟ್ಟಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೃಷ್ಣಮೃಗಗಳ ಸಾವಿನ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು. ಜೊತೆಗೆ ನಾಗರಹೊಳೆ, ಬಂಡೀಪುರ ಅಭಯಾರಣ್ಯದಲ್ಲಿ ಹುಲಿ ದಾಳಿ ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ರಾಜ್ಯ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 28 ಕೃಷ್ಣಮೃಗಗಳ ಸಾವಿನ ಕೇಸ್: ಗೊಂದಲ ಮೂಡಿಸಿರುವ ಅರಣ್ಯ ಅಧಿಕಾರಿಗಳ ಹೇಳಿಕೆ
ಒಟ್ಟಿನಲ್ಲಿ ಕಾಡಿನಲ್ಲಿ ಸ್ವಚ್ಛಂದವಾಗಿದ್ದ ಪ್ರಾಣಿಗಳು ನಾಡಿಗೆ ಬಂದು ಹೀಗೆ ಅಂತ್ಯ ಕಂಡಿದ್ದು ಮಾತ್ರ ದುರಂತ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:18 pm, Sun, 16 November 25



