ಪ್ರಿಯಾಂಕ್ ಖರ್ಗೆ ತವರು ಚಿತ್ತಾಪುರದಲ್ಲಿ RSS ಅದ್ಧೂರಿ ಪಥಸಂಚಲನ: ಹೈಸೆಕ್ಯುರಿಟಿ ನಡುವೆ ಹೆಜ್ಜೆ ಹಾಕಿದ ಗಣವೇಷಧಾರಿಗಳು
ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ, ಇಡೀ ದೇಶದ ಗಮನ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಇಂದು ಯಾವುದೇ ಗದ್ದಲ, ಗಲಾಟೆ ಇಲ್ಲದೆ ಸುಸೂತ್ರವಾಗಿ ಜರುಗಿತು. ಪಥಸಂಚಲನ ಮಾಡುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆಗೆ ಟಕ್ಕರ್ ಕೊಡಲಾಗಿದೆ. ಜೊತೆಗೆ ಆರ್‌ಎಸ್‌ಎಸ್ ಶಕ್ತಿ ಪ್ರದರ್ಶನ ಮಾಡಿದ್ದಂತು ಸುಳ್ಳಲ್ಲ.

ಕಲಬುರಗಿ, ನವೆಂಬರ್ 16: ಆರ್‌ಎಸ್‌ಎಸ್‌ಗೆ (RSS) ಕಡಿವಾಣ ಹಾಕಬೇಕು ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಇದರಿಂದ ಸಿಟ್ಟಿಗೆದಿದ್ದ ಆರ್‌ಎಸ್‌ಎಸ್, ಪ್ರಿಯಾಂಕ್ ತವರು ನೆಲ ಚಿತ್ತಾಪುರದಲ್ಲೇ (Chittapur) ಪಥಸಂಚಲನ ಮಾಡಲು ನಿರ್ಧರಿಸಿತ್ತು. ಆದರೆ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಿರಲಿಲ್ಲ. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಆರ್‌ಎಸ್‌ಎಸ್, ಅಲ್ಲಿಂದಲೇ ಅನುಮತಿ ಪಡೆದು ಇಂದು ಪರೇಡ್ ಮಾಡಿ ಮುಗಿಸಿದೆ. ರಾಜಕೀಯ ತಿಕ್ಕಾಟದ ಮಧ್ಯೆ ಅದ್ಧೂರಿ ಪಥಸಂಚಲನ ನಡೆದಿದ್ದು, ಗ್ರಾಮೀಣ ಭಾಗದಲ್ಲಿ ಆರ್‌ಎಸ್‌ಎಸ್‌ಗೆ ಮತ್ತಷ್ಟು ಬಲ ಹಾಗೂ ಬೇರೂರಲು ಸಹಕಾರಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚಿತ್ತಾಪುರದ ಆರ್‌ಎಸ್‌ಎಸ್ ಪಥಸಂಚಲನ ಕೊನೆಗೂ ಇಂದು ನಿರ್ವಿಘ್ನವಾಗಿ ನಡೆದಿದೆ. 300 ಜನ ಗಣವೇಶಧಾರಿಗಳು ಮತ್ತು 50 ಜನ ಬ್ಯಾಂಡ್ ವಾದಕರು ಸೇರಿದಂತೆ 350 ಜನ ಆರ್‌ಎಸ್‌ಎಸ್ ಕಾರ್ಯಕರ್ತರು ಭಾಗಿಯಾಗಲು ಅವಕಾಶ ಕಲ್ಪಿಸಲಾಗಿತ್ತು.
ಇದನ್ನೂ ಓದಿ: ಚಿತ್ತಾಪುರದಲ್ಲಿ ಮೊಳಗಿದ ಆರ್‌ಎಸ್‌ಎಸ್ ಗೀತೆ: ವಿಡಿಯೋ ನೋಡಿ
ಚಿತ್ತಾಪುರ ಪಟ್ಟಣದಲ್ಲಿ ಮಧ್ಯಾಹ್ನ 3:45ಕ್ಕೆ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾದ ಪಥಸಂಚಲನ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಕೆನರಾ ಬ್ಯಾಂಕ್ ವೃತ್ತ ಮಾರ್ಗವಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು. ಸುಮಾರು ಒಂದೂವರೆ ಕಿ.ಮೀ ನಷ್ಟು ಪಥಸಂಚಲನ ನಡೆದಿದ್ದು, ನಿರೀಕ್ಷೆಗಿಂತ ಮೀರಿ ಜನರ ಬೆಂಬಲದೊಂದಿಗೆ ಅದ್ಧೂರಿ ಪಥಸಂಚಲನ ಜರುಗಿದೆ. ಪಥಸಂಚಲನದುದ್ದಕ್ಕೂ ಹೂಮಳೆ ಸ್ವಾಗತ ಕೋರಲಾಗಿತ್ತು. ಚಿಕ್ಕಮಕ್ಕಳಿಂದ ಹಿಡಿದು, ಮಹಿಳೆಯರು, ವೃದ್ದರು ಜಯಘೋಷ ಕೂಗುತ್ತಾ ಅದ್ದೂರಿ ಸ್ವಾಗತ ಕೋರಿದ್ದರು.
ಸಂತಸ ವ್ಯಕ್ತಪಡಿಸಿದ ಆರ್‌ಎಸ್‌ಎಸ್ ಜಿಲ್ಲಾ ಪ್ರಮುಖ ಅಶೋಕ ಪಾಟೀಲ್
ಬಳಿಕ ಅದೇ ಬಜಾಜ್ ಕಲ್ಯಾಣ ಮಂಟಪದಲ್ಲಿ ಸುಮಾರು 45 ನಿಮಿಷಗಳ ವೇದಿಕೆ ಕಾರ್ಯಕ್ರಮ ಜರಗಿತು. ಈ ವೇಳೆ ಗಣವೇಷಧಾರಿಗಳನ್ನ ಉದ್ದೇಶಿಸಿ ಆರ್‌ಎಸ್‌ಎಸ್ ಕರ್ನಾಟಕ ಪ್ರಾಂತ ಪ್ರಮುಖ ಕೃಷ್ಣ ಜೀ ಜೋಶಿ ಮಾತನಾಡಿದರು. ಅಲ್ಲದೇ ಕೊನೆಗೂ ಸಾಕಷ್ಟು ಅಡ್ಡಿ ಆತಂಕಗಳ ಮಧ್ಯೆ ಅದ್ದೂರಿ ಹಾಗೂ ಶಾಂತಿಯುತವಾಗಿ ಪಥಸಂಚಲನ ನಡೆದಿದ್ದಕ್ಕೆ ಕೋಟ್೯ಗೆ ಅರ್ಜಿ ಹಾಕಿದ್ದ ಆರ್‌ಎಸ್‌ಎಸ್ ಜಿಲ್ಲಾ ಪ್ರಮುಖ ಅಶೋಕ ಪಾಟೀಲ್ ಮಾತನಾಡಿ ಖುಷಿ ವ್ಯಕ್ತಪಡಿಸಿದರು.
ಇನ್ನು ಇದಕ್ಕೂ ಮುನ್ನ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಜಿಲ್ಲಾಡಳಿತ 10 ಷರತ್ತುಗಳನ್ನ ಹಾಕಿ ಅನುಮತಿ ನೀಡಿತ್ತು. ಪಥಸಂಚಲನದಲ್ಲಿ ಕೇವಲ ಸ್ಥಳೀಯರು ಮಾತ್ರ ಪಾಲ್ಗೊಳ್ಳಬೇಕು. 300 ಜನ ಗಣವೇಷಧಾರಿಗಳು ಮಾತ್ರ ಭಾಗಿಯಾಗಬೇಕು ಎಂಬ ನಿಯದ ಜೊತೆಗೆ ಮಧ್ಯಾಹ್ನ 3:30 ರಿಂದ 5:45 ರೊಳಗೆ ಮುಕ್ತಾಯ ಮಾಡಬೇಕು ಎಂಬ ನಿಯಮ ಹಾಕಿತ್ತು. ಸದ್ಯ ಅಷ್ಟರೊಳಗೆ ಅದ್ದೂರಿಯಾಗಿ ಪಥಸಂಚಲನ ಮಾಡಲಾಗಿದೆ.
ಹೆಜ್ಜೆಹೆಜ್ಜೆಗೂ ಬಿಗಿ ಪೊಲೀಸ್ ಭದ್ರತೆ
ಜಿದ್ದಾಜಿದ್ದಿನಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮವಾಗಿದ್ದರಿಂದ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿತ್ತು. 8 ಕೆಎಸ್‌ಆರ್‌ಪಿ, 3 ಡಿಎಆರ್ ತುಕಡಿ ಸೇರಿದಂತೆ 1200ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದರು. 300 ಜನರಿಗೆ ಮಾತ್ರ ಪರೇಡ್‌ಗೆ ಅವಕಾಶ ನೀಡಲಾಗಿತ್ತು. ಇನ್ನು ಪಥಸಂಚಲದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಮತ್ತೆ ಆರ್‌ಎಸ್‌ಎಸ್ ವಿರುದ್ಧ ಗುಡುಗಿದ್ದಾರೆ. ಚಿತ್ತಾಪುರದಲ್ಲಿ ನಾವು ಹೇಳಿದಂತೆ ಆರ್‌ಎಸ್‌ಎಸ್ ಪಥಸಂಚಲನ ನಡೆದಿದೆ ಅಂತಾ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಇವರೆಂತಹ ದರೋಡೆಕೋರರೆಂದು ದಾಖಲೆ ಸಮೇತ ಬಹಿರಂಗ ಮಾಡುವೆ: RSS ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
ಅದೇನೇ ಇರ್ಲಿ, ಗದ್ದಲ, ಗಲಾಟೆ ಇಲ್ಲದೆ ಸುಗಮವಾಗಿ ಆರ್‌ಎಸ್‌ಎಸ್ ಪಥಸಂಚಲನ ನಡೆದಿದ್ದು, ಎಲ್ಲರೂ ಖುಷಿಗೊಳ್ಳುವಂತೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:28 pm, Sun, 16 November 25



