ಇವರೆಂತಹ ದರೋಡೆಕೋರರೆಂದು ದಾಖಲೆ ಸಮೇತ ಬಹಿರಂಗ ಮಾಡುವೆ: RSS ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
ಚಿತ್ತಾಪುರದಲ್ಲಿ ನಡೆದ ಪಥಸಂಚಲನ ಅಂತ್ಯವಲ್ಲ, ಆರಂಭ. ದೇವಾಲಯಗಳ ಹುಂಡಿ ಹಣವನ್ನು ಸರ್ಕಾರ ಲೆಕ್ಕ ಹಾಕುತ್ತದೆ, ಅಂಥಾದ್ದರಲ್ಲಿ ಆರ್ಎಸ್ಎಸ್ ಹಣದ ಲೆಕ್ಕ ಕೇಳಬಾರದಾ? RSS ತೆರಿಗೆ ವಂಚನೆ ಬಗ್ಗೆ ದಾಖಲೆ ಸಮೇತ ಬಹಿರಂಗಪಡಿಸುವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕಲಬುರಗಿ, ನವೆಂಬರ್ 16: ಇಂದು ಜಿಲ್ಲೆಯ ಚಿತ್ತಾಪುರದಲ್ಲಿ ಆರ್ಎಸ್ಎಸ್ (RSS) ಪಥಸಂಚಲನ ಆಯೋಜಿಸಲಾಗಿದೆ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಹಣ RSSಗೆ ಹೋಗಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡ್ತೀನಿ. ಎಷ್ಟು ಲೂಟಿ ಮಾಡಿದ್ದಾರೆನ್ನುವುದು ಗೊತ್ತಾಗುತ್ತದೆ. ಇವರೆಂತಹ ದರೋಡೆಕೋರರೆಂದು ದಾಖಲೆ ಸಮೇತ ಬಹಿರಂಗ ಮಾಡುವೆ ಎಂದು ಕಿಡಿಕಾರಿದ್ದಾರೆ.
ಆರ್ಎಸ್ಎಸ್ ಕಥೆ ಇನ್ನೂ ಬಹಳ ಇದೆ ಮುಂದೆ ಹೇಳುತ್ತೇನೆ ಎಂದ ಪ್ರಿಯಾಂಕ್ ಖರ್ಗೆ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ಆಯ್ತೆಂದು ಮುಗಿದಿಲ್ಲ. ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ಮೂಲಕ ಶುರುವಾಗಿದೆ. ಆರ್ಎಸ್ಎಸ್ ಕಥೆ ಇನ್ನೂ ಬಹಳ ಇದೆ ಮುಂದೆ ಹೇಳುತ್ತೇನೆ. ಚಿತ್ತಾಪುರಕ್ಕೆ 3 ಲಕ್ಷ ಜನ ಬರ್ತಾರೆ ಅಂದ್ರು, ಬಂದ್ರಾ? ಆರ್.ಅಶೋಕ್, ವಿಜಯೇಂದ್ರ ಚಿತ್ತಾಪುರಕ್ಕೆ ಬರ್ತೀವಿ ಅಂದ್ರು, ಬಂದ್ರಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: RSS ದೇಣಿಗೆ ಕುರಿತಾದ ಭಾಗವತ್ ಮಾತಿಗೆ ಪ್ರಿಯಾಂಕ್ ಖರ್ಗೆ ಟ್ವೀಟ್: 11 ಪ್ರಶ್ನೆ ಮುಂದಿಟ್ಟ ಸಚಿವ
ದೇವಾಲಯಗಳ ಹುಂಡಿ ಹಣವನ್ನು ಸರ್ಕಾರ ಲೆಕ್ಕ ಹಾಕುತ್ತದೆ, ಅಂಥಾದ್ದರಲ್ಲಿ ಆರ್ಎಸ್ಎಸ್ ಹಣದ ಲೆಕ್ಕ ಕೇಳಬಾರದಾ? ಇವರು ಹೇಗೆ ಆದಾಯ ತೆರಿಗೆ ವಂಚಿಸುತ್ತಿದ್ದಾರೆಂದು ದಾಖಲೆ ಸಮೇತ ಬಹಿರಂಗಪಡಿಸುವೆ. ಇವರಿಗೆ ಯಾರೆಲ್ಲ ದೇಣಿಗೆ ಕೊಡುತ್ತಾರೆ, ಲೆಕ್ಕ ಹೇಗೆ ಕೊಡ್ತಾರೆ? ಆರ್ಎಸ್ಎಸ್ ದೇಣಿಗೆ ಸಂಗ್ರಹದ ಬಗ್ಗೆ ಹೊರಗಡೆ ಬರಲಿದೆ ಎಂದು ಹೇಳಿದ್ದಾರೆ.
ಆರ್ಎಸ್ಎಸ್ನವರು ಏಕೆ ಪ್ರತಿಭಟನೆಯಲ್ಲಿ ಭಾಗಿಯಾಗಲ್ಲ?
ಆರ್ಎಸ್ಎಸ್ನವರು ಎಂದಾದರೂ ರೈತರ ಬಗ್ಗೆ ಮಾತಾಡಿದ್ದಾರಾ? ಗಣವೇಷ ಧರಿಸಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರಾ? ಕಬ್ಬಿಗೆ ಎಫ್ಆರ್ಪಿ ನಿಗದಿ ಮಾಡಿ ಎಂದು ಏಕೆ ಹೋರಾಟ ಮಾಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: Chittapur RSS Pathsanchalan Live: ಚಿತ್ತಾಪುರದಲ್ಲಿ RSS ಪಥಸಂಚಲನ; ಲೈವ್ ನೋಡಿ
ಇನ್ನು ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆ RSS ದೇಣಿಗೆ ವಿಚಾರವಾಗಿ ಟ್ವೀಟ್ ಮಾಡುವ ಮೂಲಕ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ ಪ್ರಶ್ನೆ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



