Reshamandi: ಭಾರತದ ರೇಷ್ಮೆಯನ್ನು ಚೀನಾ ಜತೆಗೆ ಸ್ಪರ್ಧಿಸಲು ಸಜ್ಜುಗೊಳಿಸುವುದೇ ಅಗ್ರಿಟೆಕ್ ಸ್ಟಾರ್ಟ್​ಅಪ್ ರೇಶಮಂಡಿ ಗುರಿ

Reshamandi: ಭಾರತದ ರೇಷ್ಮೆಯನ್ನು ಚೀನಾ ಜತೆಗೆ ಸ್ಪರ್ಧಿಸಲು ಸಜ್ಜುಗೊಳಿಸುವುದೇ ಅಗ್ರಿಟೆಕ್ ಸ್ಟಾರ್ಟ್​ಅಪ್ ರೇಶಮಂಡಿ ಗುರಿ
ಕೆಲಸದಲ್ಲಿ ತೊಡಗಿರುವ ಮಹಿಳೆಯರು

ವಿವಿಧ ಹಂತಗಳಲ್ಲಿ ರೇಷ್ಮೆ ವ್ಯವಹಾರದಲ್ಲಿ ತೊಡಗಿಕೊಂಡಿರುವ ರೇಷ್ಮೆ ಬೆಳೆಗಾರರು, ರೀಲರ್​ಗಳು, ನೇಕಾರರು ಹಾಗೂ ರೀಟೇಲರ್​ಗಳಿಗೆ ನೆರವಾಗುತ್ತಿರುವ Reshamandi ಸ್ಟಾರ್ಟ್​ಅಪ್ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.

TV9kannada Web Team

| Edited By: Srinivas Mata

Jun 09, 2021 | 8:24 PM

ಮಯಂಕ್ ತಿವಾರಿ ಅವರ ಧೈರ್ಯವನ್ನು ಮೆಚ್ಚಿಕೊಳ್ಳಬೇಕು. ಏಕೆಂದರೆ, ಕೊರೊನಾ ಸನ್ನಿವೇಶದಲ್ಲೂ Reshamandiಯಂಥ ಸಾಹಸಕ್ಕೆ ಇಳಿದಿದ್ದಾರೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿ ಮುಖ್ಯಕಚೇರಿ ಇರುವ, 2020ರಲ್ಲಿ ಆರಂಭವಾಗಿರುವ ಈ ಕಂಪೆನಿಯ ಬಗ್ಗೆ ನಿಮ್ಮೆಲ್ಲರಿಗೂ ತಿಳಿಸಬೇಕು. ಅಂದ ಹಾಗೆ ಈ ಸ್ಟಾರ್ಟ್​ಅಪ್​ನ ಅಗ್ಗಳಿಕೆ ಏನು ಗೊತ್ತಾ? ಇದು ಭಾರತದ ಮೊದಲ ಅಗ್ರಿಟೆಕ್ ಸ್ಟಾರ್ಟ್​ಅಪ್. ಭಾರತದ ರೇಷ್ಮೆ ಸಪ್ಲೈ ಚೈನ್​ (ಪೂರೈಕೆ ಜಾಲ) ಡಿಜಿಟೈಸ್ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್​ ಅಭಿಯಾನದ ಪ್ರೇರಣೆಯಿಂದ ಸಾಕಾರಗೊಂಡಿರುವ ಸುಂದರವಾದ ಕನಸಿದು. ಏನು ಈ ರೇಶಮಂಡಿ ಅನ್ನೋ ನಿಮ್ಮ ಪ್ರಶ್ನೆಗೆ ಸಂಪೂರ್ಣವಾದ ಉತ್ತರ ದೊರಕಿಸುತ್ತದೆ ಈ ಲೇಖನ. ಕಂಪೆನಿಯ ಮಾರ್ಕೆಟಿಂಗ್ ಮುಖ್ಯಸ್ಥರಾದ ಸುನಂತ್ ಪವಿತ್ರನ್ ಜತೆಗೆ ಟಿವಿ9ಕನ್ನಡ ಡಿಜಿಟಲ್ ಮಾತುಕತೆಯನ್ನು ನಡೆಸಿದ್ದು, ಈ ಸ್ಟಾರ್ಟ್​ಅಪ್​ ನಮ್ಮ ರೈತರಿಗೆ ಹೇಗೆ ಪ್ರಯೋಜನಕಾರಿ ಹಾಗೂ ತಂತ್ರಜ್ಞಾನವನ್ನು ಅದೆಷ್ಟು ಪರಿಣಾಮಕಾರಿಯಾಗಿ ಬಳಸಲಾಗಿದೆ ಎಂಬುದನ್ನು ಇಲ್ಲಿ ತಿಳಿಸಲಾಗುತ್ತದೆ.

ರೇಷಮಂಡಿಯು ಬೆಳೆಗಾರರು, ರೀಲರ್​ಗಳು, ನೇಕಾರರು ಮತ್ತು ರೀಟೇಲರ್​ಗಳ ಮಧ್ಯೆ ಕೊಂಡಿಯಂತೆ ಕೆಲಸ ಮಾಡುತ್ತದೆ. ಚೀನಾ ರೇಷ್ಮೆಗೆ ಬೇಡಿಕೆ ಇರುವಲ್ಲಿ ಭಾರತದ ರೇಷ್ಮೆಗೆ ಬೇಡಿಕೆ ಬರಬೇಕು ಎಂದು ಕಂಪೆನಿ ಶ್ರಮಿಸುತ್ತಿದೆ. ಉತ್ತಮ ಗುಣಮಟ್ಟದ ಭಾರತದ ರೇಷ್ಮೆ ಪರಿಣಾಮಕಾರಿ ಬೆಲೆಯಲ್ಲಿ ದೊರೆತರೆ ಅದು ಸಾಧ್ಯ ಎಂಬ ನಂಬಿಕೆಯಲ್ಲಿ ಅದಕ್ಕಾಗಿ ತಳಮಟ್ಟದಿಂದ ತನ್ನ ಪ್ರಯತ್ನ ಆರಂಭಿಸಿದೆ. ಅಂದರೆ ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಬೆಳೆಯುವುದು, ರೇಷ್ಮೆಹುಳು ಸಾಕಣೆಯಲ್ಲಿ ಅತ್ಯುತ್ತಮ ಇಳುವರಿ, ಉತ್ತಮ ಗುಣಮಟ್ಟದ ನೂಲು ತಯಾರಿ, ಆ ನಂತರ ರೀಲರ್​ಗಳಿಂದ ಉತ್ತಮ ಗುಣಮಟ್ಟದ ನೂಲು ಖರೀದಿ, ರೀಟೇಲ್​ಗಳಿಗೆ ಅತ್ಯುತ್ಕೃಷ್ಟ ಗುಣಮಟ್ಟದ ರೇಷ್ಮೆ ಸೀರೆ ಖರೀದಿಗೆ ನೆರವು ನೀಡುವುದು ಇದು ಕಂಪೆನಿಯ ವಿವಿಧ ಹಂತದ ಕೆಲಸ ಆಗಿದೆ.

Rshamandi Cofounders

ರೇಶಮಂಡಿ ಸಹಸಂಸ್ಥಾಪಕರಾದ (ಎಡದಿಂದ ಬಲಕ್ಕೆ) ಉತ್ಕರ್ಷ್ ಅಪೂರ್ವ, ಮಯಂಕ್ ತಿವಾರಿ, ಸೌರಭ್ ಅಗರ್​ವಾಲ್

ಅಂದಹಾಗೆ, ಮಯಂಕ್ ತಿವಾರಿ, ಸೌರಭ್ ಅಗರ್ವಾಲ್ ಮತ್ತು ಉತ್ಕರ್ಷ್ ಅಪೂರ್ವ ಈ ಮೂವರು ಸಹಸಂಸ್ಥಾಪಕರ ಕನಸೇ ರೇಶಮಂಡಿ. ಸದ್ಯಕ್ಕೆ ಈ ಮೂವರು ಕ್ರಮವಾಗಿ ಕಂಪೆನಿಯ ಸಿಇಒ, ಸಿಟಿಒ ಹಾಗೂ ಸಿಬಿಒ ಆಗಿದ್ದಾರೆ. ಮಯಂಕ್ ತಿವಾರಿ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್​ಐಎಫ್​ಟಿ) ಪದವೀಧರರು. ಚಿನ್ನದ ಪದಕ ವಿಜೇತರು. ಹತ್ತಾರು ವರ್ಷದ ಅವರ ಅನುಭವ ರೇಶಮಂಡಿಯ ಕನಸನ್ನು ಬಿತ್ತಿದೆ. ಇನ್ನು ಅವರ ಸ್ನೇಹಿತರಾದ ಸೌರಭ್ ರೇಶಮಂಡಿ ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ. ಈ ಮೂಲಕವಾಗಿ ರೈತರು ತಮ್ಮ ಕೃಷಿಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಇನ್ನು ಮಾರುಕಟ್ಟೆಗಿಂತ ಉತ್ತಮ ಬೆಲೆಗೆ ರೇಷ್ಮೆ ಹುಳು ಖರೀದಿ ಮಾಡಲಾಗುತ್ತದೆ. ಇದರ ಜತೆಗೆ ರೀಲರ್​ಗಳು ಮತ್ತು ರೀಟೇಲರ್​ಗಳ ಮಧ್ಯೆಯೂ ರೇಶಮಂಡಿ ಕೊಂಡಿಯಂತಿದೆ.

ಹೇಗೆ ಕೆಲಸ ಮಾಡುತ್ತಿದೆ? ರೈತರು ರೇಶಮಂಡಿಗೆ ತಮ್ಮ ಉತ್ಪನ್ನಗಳ ಮಾರಾಟ ಮಾಡುತ್ತಿದ್ದಾರೆ.  ಈ ತನಕ 15 ಕೋಟಿ ಮೌಲ್ಯದ, 3 ಲಕ್ಷ ಕೇಜಿಯ ರೇಷ್ಮೆ ಹುಳು ಮಾರಿದ್ದಾರೆ. ಅದು ಕೂಡ ಮಾರುಕಟ್ಟೆಗೆ ತೆರಳುವ ಅಗತ್ಯ ಕೂಡ ಇಲ್ಲದೆ ಆಗಿರುವ ಕೆಲಸ ಇದು. ಈಚೆಗಷ್ಟೇ ರೇಶಮಂಡಿಯು ಆಮ್ನಿವೋರ್ ನೇತೃತ್ವದಲ್ಲಿ ಸ್ಟ್ರೈವ್ ವೆಂಚರ್ಸ್ ಮೂಲಕ ಹನ್ನೆರಡು ಕೋಟಿ ರೂಪಾಯಿ ಸಂಗ್ರಹಿಸಿದೆ. 10 ಸಾವಿರಕ್ಕೂ ಹೆಚ್ಚು ರೈತರು, 560 ರೀಲಿಂಗ್ ಪ್ಲಾಂಟ್​ಗಳು ಮತ್ತು 3840 ನೇಕಾರಿಕೆ ಘಟಕಗಳು ಕಂಪೆನಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಸದ್ಯಕ್ಕೆ ಕರ್ನಾಟಕದಲ್ಲಿ 9 ಕೇಂದ್ರಗಳಿವೆ.

Sunanth Pavithran, Marketing Lead, ReshaMandi

ಮಾರ್ಕೆಟಿಂಗ್ ಮುಖ್ಯಸ್ಥ ಸುನಂತ್ ಪವಿತ್ರನ್

ತಾಂತ್ರಿಕ ನೆರವು ರೇಶಮಂಡಿಯ ಜತೆಗೆ ಇರುವ ರೈತರಿಗೆ ಐಒಟಿ ಸಾಧನವನ್ನು ಒದಗಿಸಲಾಗುತ್ತದೆ. ಅದರ ಮೂಲಕ ಪಿಎಚ್​ ಮೌಲ್ಯ, ಮಣ್ಣಿನ ತೇವಾಂಶ ಕಂಡಿಕೊಳ್ಳಬಹುದು. ಮತ್ತೊಂದು ಸಾಧನವನ್ನು ಹುಳು ಸಾಕಣೆ ಕೇಂದ್ರದ ಬಳಿ ಇಡಲಾಗುತ್ತದೆ. ಅದು ಬೆಳಕು, ಗಾಳಿಯ ಗುಣಮಟ್ಟ, ಹ್ಯುಮಿಡಿಟಿ ಮತ್ತು ಉಷ್ಣಾಂಶವನ್ನು ನಿಗಾ ಮಾಡುತ್ತದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಒಗ್ಗೂಡಿಸಿ, ಕ್ಲೌಡ್ ಆಧಾರಿತ ಸರ್ವರ್ ಮೂಲಕವಾಗಿ ಸ್ಥಳೀಯ ಭಾಷೆಯಲ್ಲಿ ನೋಟಿಫಿಕೇಷನ್ ರೀತಿ ಸಂದೇಶ ಕಳುಹಿಸಲಾಗುತ್ತದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನದಿಂದ ರೇಷ್ಮೆಹುಳುವನ್ನು ಗುಣಮಟ್ಟದ ಆಧಾರದಲ್ಲಿ ಕಂಪ್ಯೂಟರ್ ವಿಷನ್ ಸಹಾಯದಿಂದ ಬೇರ್ಪಡಿಸಲು ಸಹಾಯ ಆಗುತ್ತದೆ. ಜತೆಗೆ ಅಗತ್ಯ ಇರುವ ಸಾಲ ಸೌಲಭ್ಯಕ್ಕೆ ಹಣಕಾಸು ಸಂಸ್ಥೆಗಳ ಜತೆಗೆ ಸಂಪರ್ಕ ಸಾಧಿಸಲು ನೆರವಾಗುತ್ತದೆ. ಇನ್ನು ರೇಷ್ಮೆ ಕೈಗಾರಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳು, ಸಲಹೆ- ಸೂಚನೆ, ಮಾರುಕಟ್ಟೆ ವಿವರ ಎಲ್ಲವೂ ಇಲ್ಲೇ ದೊರೆಯುತ್ತದೆ.

ರೀಲರ್​ಗಳು/ನೇಕಾರರಿಗೆ ಈ ಮೊಬೈಲ್​ ಆ್ಯಪ್​ ದೊಡ್ಡ ಮಟ್ಟದಲ್ಲಿ ಸಹಾಯ ಆಗಿದೆ. ರೇಷ್ಮೆಹುಳುಗಳ ಮಾರಾಟ ಮತ್ತು ಆ ನಂತರ ನೂಲುಗಳನ್ನು ಮಾರಲು ಸಹಾಯ ಆಗುತ್ತದೆ. ಖರೀದಿ ಹಾಗೂ ಮಾರಾಟವನ್ನು ರೇಶಮಂಡಿ ಆ್ಯಪ್​ ಮೂಲಕ ಆನ್​ಲೈನ್​ ಪಾವತಿಯಲ್ಲೇ ಮುಗಿಸಿಕೊಳ್ಳಬಹುದು. ಈ ಮೊಬೈಲ್ ಆ್ಯಪ್​ನಲ್ಲಿ ಸದ್ಯಕ್ಕೆ ರೇಷ್ಮೆ ಮಾರುಕಟ್ಟೆಯಲ್ಲಿ ಇರುವ ದರ ಇತ್ಯಾದಿಗಳ ಮಾಹಿತಿ ಸಿಗುತ್ತದೆ. ಇನ್ನು ಅಗತ್ಯ ಮಶೀನ್, ಸಲಕರಣೆ ಇತ್ಯಾದಿಗಳ ಸಲಕರಣೆಗೆ ಹಣಕಾಸು ನೆರವಿನ ಸಂಪರ್ಕ ಒದಗಿಸುತ್ತದೆ. ಮೊಬೈಲ್ ಆ್ಯಪ್ ಮೂಲಕ ಒಂದೇ ಕ್ಲಿಕ್​ನಲ್ಲಿ ಸಾಲಕ್ಕೆ ಅಪ್ಲೈ ಮಾಡುವ ಅವಕಾಶವೂ ಇದೆ.

ಒಟ್ಟಾರೆ ಹೇಳಬೇಕು ಅಂದರೆ, ರೇಷ್ಮೆ ಕೃಷಿಗೆ ಈ ಸ್ಟಾರ್ಟ್​ ಅಪ್​ನಿಂದ ಕ್ರಾಂತಿಕಾರಿ ಬದಲಾವಣೆ ನಿರೀಕ್ಷಿಸಲಾಗುತ್ತಿದೆ. ಬೆಳೆಗಾರರು, ರೀಲರ್​ಗಳು, ನೇಕಾರರು ಹಾಗೂ ರೀಟೇಲರ್​ಗಳು ಹೀಗೆ ಎಲ್ಲ ಹಂತದಲ್ಲೂ ಸಪ್ಲೈ ಚೈನ್ ಪರಿಣಾಮಕಾರಿಯಾಗಿ ಆಗಲು, ಚೀನಾ ರೇಷ್ಮೆಯ ಪಾರಮ್ಯವನ್ನು ಮುರಿಯಲು ರೇಶಮಂಡಿ ಯತ್ನಿಸುತ್ತಿದೆ. ಕಂಪೆನಿಯ ಮಾರ್ಕೆಟಿಂಗ್ ಮುಖ್ಯಸ್ಥ ಸುನಂತ್ ಅವರು ಹೇಳುವಂತೆ, ಸದ್ಯಕ್ಕೆ ತಮಿಳುನಾಡಿನ ಕಾಂಚೀಪುರಂ, ಬನಾರಸ್, ಕರ್ನಾಟಕದ ಹಲವೆಡೆ ರೇಶಮಂಡಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸುಮಾರು 130 ಮಂದಿ ಈ ಸ್ಟಾರ್ಟ್​ ಅಪ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶೇ 70ರಷ್ಟು ಮಂದಿ ಕನ್ನಡಿಗರು ಇದ್ದಾರೆ. ಅದರಲ್ಲೂ ಕೃಷಿ ಕುಟುಂಬದ ಹಿನ್ನೆಲೆಯವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಭವಿಷ್ಯದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂಬುದು ರೇಶಮಂಡಿ ಗುರಿ. ನೀವೂ ರೇಷ್ಮೆ ವ್ಯವಹಾರದಲ್ಲಿ ಹೇಗಾದರೂ ಒಂದು ರೀತಿ ನಂಟು ಹೊಂದಿದ್ದೀರಾ? ಹಾಗಿದ್ದಲ್ಲಿ ಈ ರೇಶಮಂಡಿಯನ್ನು ಒಮ್ಮೆ ಪರಿಶೀಲಿಸಿ.

ಇದನ್ನೂ ಓದಿ: ಬಿರು ಬಿಸಿಲಿನ ವಿಜಯಪುರದಲ್ಲಿ ರೇಷ್ಮೆ ಬೆಳೆ ಬೆಳೆದ ರೈತ

ಇದನ್ನೂ ಓದಿ: Koo app: ನೈಜೀರಿಯಾದಲ್ಲೂ ಭಾರತ ಮೂಲದ Koo ಆ್ಯಪ್; ಈಗಾಗಲೇ ಇರುವ ಜಟ್ಟಿ ಟ್ವಿಟ್ಟರ್ ಅನ್ನು ಚಿತ್ ಮಾಡಬಹುದಾ?

( Reshamandi startup company must know details about this)

Follow us on

Related Stories

Most Read Stories

Click on your DTH Provider to Add TV9 Kannada