Koo app: ನೈಜೀರಿಯಾದಲ್ಲೂ ಭಾರತ ಮೂಲದ Koo ಆ್ಯಪ್; ಈಗಾಗಲೇ ಇರುವ ಜಟ್ಟಿ ಟ್ವಿಟ್ಟರ್ ಅನ್ನು ಚಿತ್ ಮಾಡಬಹುದಾ?

Koo app: ನೈಜೀರಿಯಾದಲ್ಲೂ ಭಾರತ ಮೂಲದ Koo ಆ್ಯಪ್; ಈಗಾಗಲೇ ಇರುವ ಜಟ್ಟಿ ಟ್ವಿಟ್ಟರ್ ಅನ್ನು ಚಿತ್ ಮಾಡಬಹುದಾ?
ಸಾಂದರ್ಭಿಕ ಚಿತ್ರ

ಬೆಂಗಳೂರು ಮೂಲದ Koo ಆ್ಯಪ್​ಗೆ ಈಗ ಸೋಷಿಯಲ್ ಮೀಡಿಯಾ ಆಗಿ ಅವಕಾಶಗಳು ಹೆಚ್ಚಾಗುತ್ತಲೇ ಸಾಗಿದೆ. ಅದರ ಪ್ರತಿಸ್ಪರ್ಧಿ ಟ್ವಿಟ್ಟರ್​ ಅನ್ನು ನೈಜೀರಿಯಾದಲ್ಲಿ ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ. ಈ ಆ್ಯಪ್ ಬಗ್ಗೆ ಆಸಕ್ತಿಕರ ಮಾಹಿತಿ ಇಲ್ಲಿದೆ.

TV9kannada Web Team

| Edited By: Srinivas Mata

Jun 05, 2021 | 10:45 PM


ಭಾರತ ಸರ್ಕಾರವು ಸೋಷಿಯಲ್ ಮೀಡಿಯಾಗಳಿಗೆ ಹೊಸ ನಿಯಮ ಮಾಡಿದೆ. ತಕ್ಷಣದ ಮಟ್ಟಿಗೆ ಇವುಗಳನ್ನೆಲ್ಲ ಪಾಲನೆ ಮಾಡಿರುವ ಭಾರತೀಯ ಸೋಷಿಯಲ್ ಮೀಡಿಯಾ ಕಂಪೆನಿ Koo ಪಾಲಿಗೆ ಹಲವು ಅಂಶಗಳು ಕೂಡಿಬಂದಂತೆ ಕಾಣುತ್ತಿದೆ. ಶುಕ್ರವಾರದಂದು ಆಫ್ರಿಕನ್ ದೇಶವಾದ ನೈಜೀರಿಯಾದಲ್ಲಿ ಅಮೆರಿಕ ಮೂಲದ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್​ ಅನ್ನು ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ. ಅದಕ್ಕೆ ಕಾರಣ ಏನೆಂದರೆ, ಅಲ್ಲಿನ ಅಧ್ಯಕ್ಷರಾದ ಮುಹಮ್ಮದು ಬುಹಾರಿ ಅವರ ಖಾತೆಯಿಂದ ಟ್ವೀಟ್​ವೊಂದನ್ನು ಡಿಲೀಟ್ ಮಾಡಲಾಯಿತು. ಟ್ವಿಟ್ಟರ್ ನಿಯಮವನ್ನು ಉಲ್ಲಂಘಿಸಿದ್ದರಿಂದ ಹೀಗೆ ಮಾಡಲಾಯಿತು ಎಂದು ಕಂಪೆನಿ ಸಮರ್ಥನೆ ನೀಡಿದೆ. ಅದಾಗಿ ಎರಡು ದಿನಕ್ಕೆ ಟ್ವಿಟ್ಟರ್​ ಅನ್ನು ನೈಜೀರಿಯಾದಲ್ಲಿ ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ. ಇದೀಗ, “kooindia ನೈಜೀರಿಯಾದಲ್ಲಿ ಲಭ್ಯವಿದೆ. ಅಲ್ಲೂ ಕೂಡ ಸ್ಥಳೀಯ ಭಾಷೆಯನ್ನು ಬಳಸುವ ವ್ಯವಸ್ಥೆ ಮಾಡುವ ಬಗ್ಗೆ ನಾವು ಆಲೋಚಿಸುತ್ತಿದ್ದೇವೆ. ಏನು ಹೇಳ್ತೀರಿ?” ಎಂದು Koo ಕಂಪೆನಿ ಸಹಸಂಸ್ಥಾಪಕ ಅಪ್ರಮೇಯ ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್​ಗೆ ಟ್ವಿಟ್ಟರ್ ಬಳಕೆದಾರರು ಸಿಕ್ಕಾಪಟ್ಟೆ ಸಲಹೆಗಳನ್ನು ನೀಡಿದ್ದಾರೆ.

ಬೆಂಗಳೂರು ಮೂಲದ Koo ಹಳದಿ ಬಣ್ಣದಲ್ಲಿ ಟ್ವಿಟ್ಟರ್​ನಂತೆಯೇ ಕಾಣುತ್ತದೆ. ಇದನ್ನು ಸ್ಥಾಪಿಸಿದವರು ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಮ್ಯಾನೇಜ್​ಮೆಂಟ್​ನಲ್ಲಿ ವ್ಯಾಸಂಗ ಮಾಡಿರುವ ರಾಧಾಕೃಷ್ಣ ಮತ್ತು ಮಯಾಂಕ್ ಬಿಡವಟ್ಕ. ಕಳೆದ ವರ್ಷವಷ್ಟೇ ಇದು ಶುರುವಾಗಿದೆ. ಈ ತನಕ 3.40 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚು ಮೊತ್ತವನ್ನು ಕಂಪೆನಿ ಸಂಗ್ರಹಿಸಿದೆ. ಹೊಸ ಫೋರ್ಬ್ಸ್ ಇಂಡಿಯಾ ಪ್ರೊಫೈಲ್ ಪ್ರಕಾರ, Kooಗೆ ಎಷ್ಟು ಬಳಕೆದಾರರಿದ್ದಾರೆ ಎಂಬ ಮಾಹಿತಿಯನ್ನು ಅದು ಬಹಿರಂಗ ಮಾಡಿಲ್ಲ. ಆದರೆ ಮುಂದಿನ ಕೆಲ ವರ್ಷಗಳಲ್ಲಿ 10 ಕೋಟಿ ಬಳಕೆದಾರರನ್ನು ಹೊಂದುವ ಗುರಿ ಕಂಪೆನಿಗಿದೆ. ಭಾರತ ಮೂಲದ Koo ತನ್ನ ಉದ್ಯಮದ ಸಲುವಾಗಿ ಬಹಳ ಶ್ರಮ ಹಾಕಿದೆ. ಟ್ವಿಟ್ಟರ್​ಗೆ ಕೂಡ ಕಷ್ಟವಾಗುತ್ತಿರುವ ಭಾರತ ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಸೂಚನೆಯನ್ನು ಈ ಕಂಪೆನಿ ಅನುಸರಿಸಿದೆ. ಆದರೂ ಡೇಟಾ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಆತಂಕ ಇದ್ದೇ ಇದೆ.

ವಿಶ್ವದಾದ್ಯಂತ ವಿವಿಧ ಸರ್ಕಾರಗಳ ಜತೆಗೆ ಟ್ವಿಟ್ಟರ್​ ಘರ್ಷಣೆ
ಇತಿಹಾಸವನ್ನೊಮ್ಮೆ ನೋಡುವುದಾದರೆ ಅರಬ್ ಕ್ರಾಂತಿಯ ಕಾಲದಿಂದಲೂ ಟ್ವಿಟ್ಟರ್ ತನ್ನ ವೇದಿಕೆಯನ್ನು ಭಿನ್ನಮತ ವ್ಯಕ್ತಪಡಿಸುವುದಕ್ಕೆ ನೀಡುತ್ತಾ ಬಂದಿದೆ. ವಿಶ್ವದಾದ್ಯಂತ ವಿವಿಧ ಸರ್ಕಾರಗಳ ಜತೆಗೆ ಟ್ವಿಟ್ಟರ್​ ಕಂಪೆನಿಯ ಘರ್ಷಣೆಗಳನ್ನು ಕಾಣಬಹುದಾಗಿದೆ. ಈಗಿನ ನೈಜೀರಿಯಾದ ಘಟನೆ ಒಂದು ಉದಾಹರಣೆಯಾಗಿ ನಮ್ಮೆದುರಿಗೆ ಇದೆ. ಇಂಥ ಸಂದರ್ಭದಲ್ಲಿ ವ್ಯವಸ್ಥೆಯ ಪರವಾಗಿ ಬೆಳೆಯುವುದಕ್ಕೆ ಈ ಸ್ಟಾರ್ಟ್​ಅಪ್​ಗೆ ಅವಕಾಶಗಳಿವೆ. ನೈಜೀರಿಯಾದ ಆಗ್ನೇಯ ಭಾಗದಲ್ಲಿ ಈಚೆಗಿನ ಉದ್ವಿಗ್ನ ಸ್ಥಿತಿಯು ನಾಗರಿಕ ದಂಗೆಯ ಎಚ್ಚರಿಕೆ ಎಂದು ಅಧ್ಯಕ್ಷ ಟ್ವೀಟ್ ಮಾಡಿದ್ದರು. ಇದು ನಿಯಮಾವಳಿಗಳಿಗೆ ವಿರುದ್ಧವಾದ ಟ್ವೀಟ್ ಎಂದು ಟ್ವಿಟ್ಟರ್ ಅದನ್ನು ಡಿಲೀಟ್​ ಮಾಡುವ ಮೂಲಕ ಅಧಿಕಾರಿಗಳನ್ನು ಕೆಣಕಿತು.

ಅದಾಗಿ ಎರಡು ದಿನಗಳ ನಂತರ ನೈಜೀರಿಯಾದ ಮಾಹಿತಿ ಸಚಿವಾಲಯವು, ಟ್ವಿಟ್ಟರ್​ ಅನ್ನು ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ ಎಂದು ತಿಳಿಸಿತು. ನೈಜೀರಿಯಾದಲ್ಲಿ ಇರುವಂಥ ಸಾಂಸ್ಥಿಕ ಅಸ್ತಿತ್ವವನ್ನು ದುರ್ಬಲಗೊಳಿಸುವುದಲಕ್ಕೆ ಟ್ವಿಟ್ಟರ್​ನಿಂದ ಅದರ ಪ್ಲಾಟ್​ಫಾರ್ಮ್​ ಬಳಕೆ ಆಗುತ್ತಿದೆ ಎಂದು ಹೇಳಿತು. ಈ ನಿರ್ಧಾರಕ್ಕೆ ಕೂಡಲೇ ಹಕ್ಕುಗಳ ಹೋರಾಟಗಾರ ಗುಂಪುಗಳಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಯಿತು. ನಾಗರಿಕರ ಭಿನ್ನಮತದ ಧ್ವನಿ ಹತ್ತಿಕ್ಕಲು ಈ ರೀತಿ ಸೆನ್ಸಾರ್​ ಮಾಡಲಾಗುತ್ತಿದೆ ಎಂದು ಆರೋಪ ಮಾಡಲಾಯಿತು. ಟ್ವಿಟ್ಟರ್ ಬಗ್ಗೆ ವಿಶ್ಲೇಷಕರಾದ ಬುಲಾಮ ಬುಕರ್ಟಿ ಮಾತನಾಡಿ, ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಗೊಂದಲದ ಗರಿಷ್ಠ ಯತ್ನ. ಇದು ಸರ್ವಾಧಿಕಾರದಲ್ಲಿ ಮಾತ್ರ ನಡೆಯುವುದು ಎಂದಿದ್ದಾರೆ. ಅಂದಹಾಗೆ ಟ್ವಿಟ್ಟರ್ ಸೇವೆ ಚೀನಾ, ಟರ್ಕಿ ಹಾಗೂ ಇತ್ತೀಚೆಗೆ ಮ್ಯಾನ್ಮಾರ್​ನಲ್ಲೂ ಅಮಾನತು ಆಗಿದೆ.

Kooಗೆ ಬೆಳವಣಿಗೆ ಸಾಧಿಸುವುದಕ್ಕೆ ಸಕಲ ಅವಕಾಶಗಳಿವೆ
ಇಂಥ ಸನ್ನಿವೇಶದಲ್ಲಿ ಭಾರತ ಮೂಲದ Kooಗೆ ಬೆಳವಣಿಗೆ ಸಾಧಿಸುವುದಕ್ಕೆ ಸಕಲ ಅವಕಾಶಗಳಿವೆ. ಅಂದಹಾಗೆ ಮೇ 9, 2021ರ ಮಾಹಿತಿಯಂತೆ Koo ಆ್ಯಪ್​ಗೆ 60 ಲಕ್ಷ ಬಳಕೆದಾರರಿದ್ದಾರೆ. ಇತ್ತ ಟ್ವಿಟ್ಟರ್​ಗೆ ಭಾರತದಲ್ಲಿ 1.75 ಕೋಟಿ ಬಳಕೆದಾರರಿದ್ದಾರೆ. Kooದಿಂದ ಮುಂದಿನ 12 ತಿಂಗಳಲ್ಲಿ ಹೇಗೆ ಬೆಳೆಯಬೇಕು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಇದೆ. ಅದಕ್ಕೆ ಪೂರಕವಾಗಿ ನೇಮಕಾತಿಗಳು ನಡೆಯುತ್ತಿವೆ. ಆಸ್ಪತ್ರೆಯಲ್ಲಿ ಬೆಡ್​ಗಳನ್ನು ಹುಡುಕುವುದಕ್ಕೆ, ಆಕ್ಸಿಜನ್ ಸಿಲಿಂಡರ್ ಲಭ್ಯತೆ ಮತ್ತು ಇತರ ಸಂಪನ್ಮೂಲಗಳನ್ನು ಹುಡುಕಿಕೊಳ್ಳಲು Koo ಆ್ಯಪ್​ ಮೂಲಕ ನೆರವಾಗುತ್ತಿದೆ. ಪ್ಲಾಸ್ಮಾ ದಾನಿಗಳನ್ನು ಗುರುತಿಸುವುದಕ್ಕೆ ಸಲೀಸಾಗುವಂಥ ಪ್ರಯತ್ನವನ್ನು ಮುಂದುವರಿಸಿದೆ.

ಬಳಕೆದಾರರಿಗೆ ಯಾವ ಮಾಹಿತಿ ತಪ್ಪು ಅಥವಾ ಆಕ್ಷೇಪಾರ್ಹ ಎನಿಸುತ್ತದೋ ಆ ಬಗ್ಗೆ ಗಮನ ಸೆಳೆಯಬಹುದು. ಆಟೋಮೆಟೆಡ್ ಸಾಧನಗಳು ಮತ್ತು ಮ್ಯಾನ್ಯುಯೆಲ್ ಆಗಿಯೂ ಇಂಥ ಸಂಗತಿಗಳನ್ನು ನಿರ್ವಹಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಕೂ ಆ್ಯಪ್ ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಿದೆ. ತಮ್ಮ ಪ್ಲಾಟ್​ಫಾರ್ಮ್​ನಲ್ಲಿ ಬಾಲಿವುಡ್​ ನಟರು, ಕ್ರಿಕೆಟರ್​ಗಳು, ಸೆಲೆಬ್ರಿಟಿಗಳು ದೊಡ್ಡ ಸಂಖ್ಯೆಯಲ್ಲಿ ಇಲ್ಲ ಎಂದು ಹೇಳುವ ಸಹ ಸಂಸ್ಥಾಪಕರು, ಅವರು ಪ್ರವೇಶಿಸಿದಲ್ಲಿ ಸಂಖ್ಯೆ ಬಹಳ ವೇಗವಾಗಿ ಬೆಳೆಯುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: Koo ಆ್ಯಪ್​ನಿಂದ 3 ಕೋಟಿ ಡಾಲರ್ ಬಂಡವಾಳ ಸಂಗ್ರಹ, ಕಂಪೆನಿ ಮೌಲ್ಯಮಾಪನ ಈಗ 100 ಮಿಲಿಯನ್ ಯುಎಸ್​ಡಿಗೂ ಹೆಚ್ಚು

ಇದನ್ನೂ ಓದಿ: ಇದೇನಿದು Koo.. ಏನಿದರ ವಿಶೇಷತೆ? ಕೇಂದ್ರ ಸರ್ಕಾರ ಈ ಆ್ಯಪ್​ಗೆ ಮಹತ್ವ ಕೊಡ್ತಿರೋದೇಕೆ?

(How home grown Indian app Koo competing with Twitter? Here is the it’s expansion plan by founders)

Follow us on

Related Stories

Most Read Stories

Click on your DTH Provider to Add TV9 Kannada