ಇದೇನಿದು Koo.. ಏನಿದರ ವಿಶೇಷತೆ? ಕೇಂದ್ರ ಸರ್ಕಾರ ಈ ಆ್ಯಪ್​ಗೆ ಮಹತ್ವ ಕೊಡ್ತಿರೋದೇಕೆ?

Koo App ಕೂ ಆ್ಯಪ್​ ಮೊಟ್ಟ ಮೊದಲ ಬಾರಿಗೆ ಲಾಂಚ್​ ಆಗಿದ್ದು 2020 ಮಾರ್ಚ್​ ತಿಂಗಳಲ್ಲಿ. ಇದು ಬೆಂಗಳೂರು ಮೂಲದ ಸ್ಟಾರ್ಟ್​​-ಅಪ್​. ಭಾರತದಲ್ಲಿ ಟ್ವಿಟ್ಟರ್​ ಬದಲಿ ತಾಣ ಕೂ ಆಗಲಿದೆ ಎನ್ನುವುದು ಅನೇಕರ ಅಭಿಪ್ರಾಯ.

ಇದೇನಿದು Koo.. ಏನಿದರ ವಿಶೇಷತೆ? ಕೇಂದ್ರ ಸರ್ಕಾರ ಈ ಆ್ಯಪ್​ಗೆ ಮಹತ್ವ ಕೊಡ್ತಿರೋದೇಕೆ?
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Feb 10, 2021 | 6:03 PM

ನವದೆಹಲಿ: ಕೈಗಾರಿಕಾ ಸಚಿವ ಪಿಯೂಷ್​​ ಗೋಯಲ್​ ಸೇರಿ ಸಾಕಷ್ಟು ಕೇಂದ್ರ ಸಚಿವರು ಇಂದು ಕೂ (Koo) ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದಿದ್ದಾರೆ. ಅಷ್ಟೇ ಅಲ್ಲ, ಈ ಜಾಲತಾಣಕ್ಕೆ ಸೇರ್ಪಡೆ ಆಗುವಂತೆ ಸಾರ್ವಜನಿಕರಿಗೂ ಆಹ್ವಾನ ನೀಡಿದ್ದಾರೆ. ಇನ್ನು, ಸಾಕಷ್ಟು ಸಚಿವಾಲಯಗಳು ಕೂಡ ಕೂ ಆ್ಯಪ್​ಗೆ ಸೇರ್ಪಡೆ ಆಗಿವೆ. ಅಷ್ಟಕ್ಕೂ ಏನಿದು ಈ ಹೊಸ ಆ್ಯಪ್​? ಇದನ್ನು ಮೊಟ್ಟ ಮೊದಲ ಬಾರಿಗೆ ಹುಟ್ಟು ಹಾಕಿದವರು ಯಾರು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಕೂ ಆ್ಯಪ್​ ಮೊಟ್ಟ ಮೊದಲ ಬಾರಿಗೆ ಲಾಂಚ್​ ಆಗಿದ್ದು 2020 ಮಾರ್ಚ್​ ತಿಂಗಳಲ್ಲಿ. ಇದು ಬೆಂಗಳೂರು ಮೂಲದ ಸ್ಟಾರ್ಟ್​​-ಅಪ್​. ಭಾರತದಲ್ಲಿ ಟ್ವಿಟ್ಟರ್​ ಬದಲಿ ತಾಣ ಕೂ ಆಗಲಿದೆ ಎನ್ನುವುದು ಅನೇಕರ ಅಭಿಪ್ರಾಯ. ಆತ್ಮನಿರ್ಭರ ಆ್ಯಪ್​ ಚಾಲೆಂಜ್​ ಅನ್ನು ಕೂ ಗೆದ್ದಿದೆ. ಹೀಗಾಗಿ ಸರ್ಕಾರದಿಂದ ಈ ಆ್ಯಪ್​ಗೆ ಮತ್ತಷ್ಟು ಬೆಂಬಲ ಸಿಗುವ ಸಾಧ್ಯತೆ ಇದೆ. ಇಂಗ್ಲಿಷ್​ ಮಾತ್ರ ಅಲ್ಲದೆ, ಕನ್ನಡ ಸೇರಿ ಹಲವು ಭಾರತೀಯ ಭಾಷೆಗಳಲ್ಲಿ ಇದನ್ನು ಬಳಸಬಹುದು.

ಕೂ ಹುಟ್ಟು ಹಾಕಿದವರಾರು? ಅಪ್ರಮೇಯ ರಾಧಾಕೃಷ್ಣ ಹಾಗೂ ಮಯಾಂಕ್​ ಬಿದ್ವಕ್ತ ಅವರು 2020ರಲ್ಲಿ ಕೂ ಅನ್ನು ಹುಟ್ಟು ಹಾಕಿದ್ದರು. Bombinate Technologies Pvt Ltd ಈ ಆ್ಯಪ್​ ಮಾಲಿಕತ್ವ ಹೊಂದಿದೆ. ​ ಇತ್ತೀಚೆಗೆ ಈ ಆ್ಯಪ್​ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದೆ.

ಅಪ್ರಮೇಯ ಹಾಗೂ ಮಯಾಂಕ್​ ಯಾರು? ಅಪ್ರಮೇಯ ರಾಧಾಕೃಷ್ಣ Bombinate technologiesನ ಸಿಇಒ. ಐಐಟಿ ಅಹಮದಾಬಾದ್​​ನ ಪದವೀಧರರೂ ಕೂಡ ಹೌದು. ಅಪ್ರಮೇಯ ಕೂ ಗೂ ಮೊದಲು ಕ್ಯಾಬ್​ ಬುಕ್ಕಿಂಗ್​ ಸೇವೆ ನೀಡುವ TaxiForSure ಕೋ ಫೌಂಡರ್​ ಆಗಿದ್ದರು. 2015ರಲ್ಲಿ ಇದನ್ನು ಓಲಾ ಸಂಸ್ಥೆಗೆ ಮಾರಾಟ ಮಾಡಲಾಯಿತು. 2017ರಲ್ಲಿ Quoraದ ಬದಲಿಯಾಗಿ Vokalಅನ್ನು ಹುಟ್ಟು ಹಾಕಿದರು. ಇನ್ನು, ಮಯಾಂಕ್​ ಏಷಿಯನ್​ ಇನ್​​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ನಿಂದ ಪದವಿ ಪಡೆದಿದ್ದಾರೆ. ಇವರು Goodboxನ ಸಹ ಸಂಸ್ಥಾಪಕರು. Loca Ridea ಮತ್ತು Third Wave Coffeeಗೆ ಹೂಡಿಕೆ ಮಾಡಿದ್ದಾರೆ.

ಗೂಗಲ್​ ಪ್ಲೇಸ್ಟೋರ್​ನಲ್ಲಿ ಕೂ ಇದೆಯಾ? ಹೌದು, ಕೂ ಆ್ಯಪ್​ ಗೂಗಲ್​ ಪ್ಲೇಸ್ಟೋರ್​ನಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, 4.7 ರೇಟಿಂಗ್​ ಕೂಡ ನೀಡಲಾಗಿದೆ. ಭಾರತದ ಭಾಷೆಗಳಲ್ಲಿ ಬಳಕೆ ಆಗಲು ಇದು ಸಹಕಾರಿಯಾಗಲಿದೆ ಎಂಬುದು ಸಂಸ್ಥೆಯ ಅಭಿಪ್ರಾಯ. ಕೂ ಆ್ಯಪ್​ಅನ್ನು ಭಾರತದಲ್ಲಿ ಸುಮಾರು 25 ಲಕ್ಷ ಜನ ಡೌನ್​ಲೋಡ್ ಮಾಡಿದ್ದಾರೆ. ಪೀಯೂಶ್​ ಗೋಯಲ್​ ಜತೆಗೆ ಐಟಿ ಸಚಿವ ರವಿ ಶಂಕರ್​ ಪ್ರಸಾಸ್​, ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಕೂಡ ಕೂ ಬಳಸುತ್ತಿದ್ದಾರೆ.

ಸರ್ಕಾರದವರು ಕೂ ಗೆ ಬರೋಕೆ ಕಾರಣವೇನು? ಟ್ವಿಟ್ಟರ್​ ಹಾಗೂ ಭಾರತ ಸರ್ಕಾರದ ನಡುವೆ ಶೀತಲ ಸಮರ ನಡೆಯುತ್ತಿದೆ. ರೈತರ ಪ್ರತಿಭಟನೆ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ 257 ಖಾತೆಗಳನ್ನು ರದ್ದು ಮಾಡುವಂತೆ ಭಾರತ ಸರ್ಕಾರ ಟ್ವಿಟ್ಟರ್​ಗೆ ಸೂಚಿಸಿತ್ತು. ಈ ಖಾತೆಗಳನ್ನು ರದ್ದು ಮಾಡಿ ಕೆಲವೇ ಹೊತ್ತಿನಲ್ಲಿ ಬ್ಯಾನ್​ ಹಿಂಪಡೆದಿತ್ತು. ಇದು ಸರ್ಕಾರದ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ, ಟ್ವಿಟ್ಟರ್​ ಬದಲಿಗೆ ಕೂ ಬಳಸುವ ಆಲೋಚನೆ ಸರ್ಕಾರದ್ದು ಎನ್ನಲಾಗಿದೆ.

ಟ್ವಿಟ್ಟರ್​ಗೂ ಕೂ ಗೂ ಏನು ವ್ಯತ್ಯಾಸ? ಟ್ವಿಟ್ಟರ್​ ಹಾಗೂ ಕೂ ಎರಡಕ್ಕೂ ಸಾಮ್ಯತೆ ಇದೆ. ಕೂನಲ್ಲಿ ಹಿಂದಿ ಸೇರಿ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ನೀವು ಪೋಸ್ಟ್​ ಮಾಡಬಹುದು. ಇದಕ್ಕಾಗಿಯೇ ಇದನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: ಖಲಿಸ್ತಾನ, ಪಾಕಿಸ್ತಾನದ ಜತೆ ನಂಟು ಹೊಂದಿರುವ 1178 ಟ್ವಿಟ್ಟರ್ ಖಾತೆ ರದ್ದಿಗೆ ಕೋರಿದ ಕೇಂದ್ರ ಸರ್ಕಾರ