Chinghiz Aitmatova : ಅಭಿಜ್ಞಾನ ; ನಾನು ನೋಡುತ್ತಿದ್ದ ಮತ್ತು ಕೇಳುತ್ತಿದ್ದ ಎಲ್ಲದರಲ್ಲೂ ಅವನ ಹಾಡಿರುತ್ತಿತ್ತು

Chinghiz Aitmatova : ಅಭಿಜ್ಞಾನ ; ನಾನು ನೋಡುತ್ತಿದ್ದ ಮತ್ತು ಕೇಳುತ್ತಿದ್ದ ಎಲ್ಲದರಲ್ಲೂ ಅವನ ಹಾಡಿರುತ್ತಿತ್ತು
ಚಿಂಗೀಝ್ ಐತ್ಮತೋವ್

Jamila Novel : ನನ್ನ ಮಟ್ಟಿಗೆ ಅವನ ದನಿ ನನ್ನದೇ ಒಳ ದನಿಯಾಗಿತ್ತು. ಅದು ಬೆಳಗಿನ ಹೊತ್ತು ನಾನು ಹೋದಲ್ಲೆಲ್ಲಾ ನನ್ನನ್ನು ಹಿಂಬಾಲಿಸುತ್ತಿತ್ತು. ಇಬ್ಬನಿಯಿಂದ ತೋಯ್ದು ತೊಪ್ಪೆಯಾಗಿರುತ್ತಿದ್ದ ಕುದುರೆ ಸೊಪ್ಪಿನ ಮಾಳದಲ್ಲಿ ಬಗ್ಗಾಲು ಹಾಕಿದ್ದ ಕುದುರೆಗಳ ಬಳಿ ನಾನು ಓಡುತ್ತಿರುವಾಗ, ಬೆಳಗಿನ ನಗುಮೊಗದ ಸೂರ್ಯ ಪರ್ವತಗಳ ಹಿಂಬದಿಯಿಂದ ಇಣುಕುತ್ತಾ ನನ್ನನ್ನು ಸ್ವಾಗತಿಸುತ್ತಿರುವಾಗ, ಅವನ ದನಿ ನನ್ನೊಂದಿಗಿರುತ್ತಿತ್ತು.

ಶ್ರೀದೇವಿ ಕಳಸದ | Shridevi Kalasad

|

Jan 07, 2022 | 10:39 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿಯ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಎಸ್. ಗಂಗಾಧರಯ್ಯ ಅನುವಾದಿಸಿದ ಕಿರ್ಗೀಝ್ ಸೋವಿಯತ್ ಲೇಖಕ ಚಿಂಗೀಜ್ ಐತ್ಮತೋವಾ ಕಾದಂಬರಿ ‘ಜಮೀಲಾ’ ದಿಂದ.

*

ನನಗಾಗ ಒಮ್ಮೆಲೇ ಅರ್ಥವಾಗಿತ್ತು: ಅವನ ಆ ಕನಸು ಕಾಣುವ ಗುಣ, ಅವನ ಆ ಏಕಾಂತದ ತುಡಿತ, ಅವನ ಆ ದಣಿವರಿಯದ ಮೌನ, ಜನರೆಲ್ಲಾ ಹುಬ್ಬೇರಿಸುವಂತೆ ಮಾಡುತ್ತಿದ್ದ ಅವನ ಆ ನಗು ಮತ್ತು ಉದಾಸೀನತೆ, ಅರ್ಥವಾಗಿತ್ತು: ಅವನು ಯಾಕೆ ಹಾಗೆ ಕಾವಲುಗುತ್ತಿಯ ಮೇಲೆ ಸಂಜೆಗಳನ್ನೂ, ಇರುಳುಗಳನ್ನೂ ನದಿಯ ಬದಿಯಲ್ಲಿ ಒಂಟಿಯಾಗಿ ಕಳೆಯುತ್ತಿದ್ದ, ಬೇರೆಯವರಿಗೆ ಕೇಳಿಸದಿದ್ದ ಸದ್ದುಗಳಿಗೆ ಯಾಕೆ ಕಿವಿಗೊಡುತ್ತಿದ್ದ, ಯಾಕೆ ಅವನ ಕಣ್ಣುಗಳು ಒಮ್ಮೆಗೇ ಬೆಳಗುತ್ತಿದ್ದವು, ಹುಬ್ಬುಗಳು ಸರುಕಾಡುತ್ತಿದ್ದವು. ಅವನು ಗಾಢ ಪ್ರೀತಿಯಲ್ಲಿ ಬಿದ್ದಿದ್ದವನಾಗಿದ್ದ. ನನಗನ್ನಿಸಿತ್ತು: ಅದು ಕೇವಲ ವ್ಯಕ್ತಿಯೊಬ್ಬನ ಬಗ್ಗೆ ಇದ್ದ ಪ್ರೀತಿಯಾಗಿರಲಿಲ್ಲ, ಅದು ಬೇರೆಯೇ ಆಗಿತ್ತು. ಅದು ಬದುಕಿನ ಬಗೆಗಿನ ನೆಲದ ಬಗೆಗಿನ ಪ್ರಚಂಡ ಪ್ರೀತಿಯಾಗಿತ್ತು. ಹೌದು, ಅವನು ಈ ಪ್ರೀತಿಯನ್ನು ಹಾಡಿನ ಮೂಲಕ ತನ್ನೊಳಗೇ ಕಾಪಿಟ್ಟುಕೊಂಡಿದ್ದ. ಅದೇ ಅವನ ದಾರಿ ತೋರುವ ದೀವಟಿಗೆಯಾಗಿತ್ತು. ಒಬ್ಬ ಸಾಧಾರಣ ವ್ಯಕ್ತಿ, ಅವನಿಗೆ ಎಂಥಾ ಅದ್ಭುತ ದನಿ ಇದ್ದರೂ, ಅವನಂತೆ ಹಾಡುವುದು ಸಾಧ್ಯವಿರಲಿಲ್ಲ.

ಅವನ ಸಂಗೀತದ ಕೊನೆಯ ಸ್ವರದ ಅಲೆ ದೂರಾಗುತ್ತಿದೆ ಅನಿಸುತ್ತಿರುವಾಗಲೇ, ಮತ್ತೊಂದು ಹೊಸ ಕಾಡುವ ಅಲೆಯೊಂದು ನಿದ್ದೆಯಲ್ಲಿರುವ ಹುಲ್ಲುಮಾಳವನ್ನು ಎಚ್ಚರಗೊಳಿಸುತ್ತಿರುವಂತೆ ಕಾಣುತ್ತಾ, ಅದು ತನ್ನ ಪ್ರೀತಿಯ ನೆಲದ ಮಗನ ದನಿಗೆ ಮಹಾ ತನ್ಮಯತೆಯಿಂದ ಕಿವಿಯಾಗಿತ್ತು. ಅಂತೆಯೇ ಅದೊಂದು ನೆಲಮೂಲ ಪ್ರೀತಿಯ ಸ್ವರವಾಗಿತ್ತು. ಕೊಯ್ಲಿಗೆ ಬಂದಿದ್ದ ಹಳದಿ ಬಣ್ಣದ ಗೋಧಿ ತೆನೆಗಳು ಸರೋವರದ ಮೇಲೈನಂತೆ ಸಣ್ಣಸಣ್ಣ ಅಲೆಗಳನ್ನೇಳಿಸುತ್ತಾ ಕೊಯ್ಲಿಗಾಗಿ ಕಾಯುತ್ತಿದ್ದರೆ, ಬೆಳಗಿನ ಮೊದಲ ಕಿರಣಗಳು ಹೊಲದ ಮೇಲೆ ಕೈಯೂರುತ್ತಿದ್ದವು. ಗಿರಣಿಯ ಬಳಿ ಗುಪ್ಪಗೆ ಬೆಳೆದಿದ್ದ ಮುದಿ ವಿಲೋ ಮರಗಳು ತಮ್ಮ ಎಲೆಗಳ ಸರಪರ ಸದ್ದು ಮಾಡುತ್ತಿದ್ದವು. ನದಿಯಾಚೆ ಹೊಲದ ಕೆಲಸಗಾರರ ಬಯಲು ಬೆಂಕಿಗಳು ನಿಧಾನವಾಗಿ ನಂದುತ್ತಿದ್ದವು. ಹಳ್ಳಿಯತ್ತ ಸವಾರನೊಬ್ಬನ ನೆರಳು ಸದ್ದಿಲ್ಲದೆ ನದಿಯ ದಡದಗುಂಟ, ಹಣ್ಣುಗಳ ತೋಟಗಳ ನಡುವೆ, ಒಮ್ಮೆ ಕಾಣಿಸಿಕೊಳ್ಳುತ್ತಾ, ಮತ್ತೊಮ್ಮೆ ಮರೆಯಾಗುತ್ತಾ ನಾಗಾಲೋಟದಲ್ಲಿತ್ತು.

ಗಾಳಿಯ ತುಂಬಾ ಸೇಬಿನ ಘಮಲು ಕಿಕ್ಕಿರಿದಿತ್ತು. ಮಧುಪೂರಿತ, ಅರಳುತ್ತಿದ್ದ ಮೆಕ್ಕೆ ಗೋಳದ ಪರಿಮಳ ಮತ್ತು ಒಣಗುತ್ತಿದ್ದ ಸಗಣಿ ಬೆರಣಿಗಳ ಬೆಚ್ಚನೆಯ ವಾಸನೆ ಅದರೊಡನಿದ್ದವು.

ದನಿಯಾರ್ ವಿಸ್ಮೃತಿಗೆ ಜಾರಿದವನಂತೆ, ತನ್ನದೆಲ್ಲವನ್ನೂ ಮರೆತು ಹಾಡುತ್ತಾ ಹೋದ. ಅತ್ಯಾನಂದಗೊಂಡಿದ್ದ ಆಗಸ್ಟ್ ತಿಂಗಳ ಇರಳು ಅವನ ಹಾಡನ್ನು ಮೌನದಿಂದ ಆಲಿಸುತ್ತಿತ್ತು. ಆ ಮಾಂತ್ರಿಕ ಕ್ಷಣಗಳ ನಿನಾದಕ್ಕೆ ತಾವೆಲ್ಲಿ ಧಕ್ಕೆ ತಂದುಬಿಡುತ್ತೇವೋ, ಎಂಬ ಭಯದಿಂದ ಎಂಬಂತೆ ಕುದುರೆಗಳು ತಮ್ಮ ಬಿರುಸಾದ ನಡಿಗೆಯನ್ನು ನಿಧಾನಗತಿಗೆ ತಿರುಗಿಸಿಕೊಂಡಿದ್ದವು.

ಮೇಲು ಶ್ರುತಿಯಲ್ಲಿ  ಹಾಡುತ್ತಿದ್ದ ದನಿಯಾರ್ ಇದ್ದಕ್ಕಿದ್ದಂತೆ ಹಾಡನ್ನು ನಿಲ್ಲಿಸಿ, ಕುದುರೆಗಳನ್ನು ಗದರಿಸಿಕೊಂಡು, ಅವುಗಳನ್ನು ನಾಗಾಲೋಟಕ್ಕೆ ಪುಸಲಾಯಿಸಿದ. ಜಮೀಲಾಳೂ ಅವನ ಹಿಂದೆಯೇ ಗಾಡಿಯನ್ನು ಓಡಿಸಿಕೊಂಡು ಹೋಗುತ್ತಾಳೆ ಅಂದುಕೊಂಡೆ ನಾನು. ಅದಕ್ಕೆ ನಾನು ಪೂರಾ ತಯಾರಾಗಿರಲಿಲ್ಲ. ಆದರವಳು ಅಲುಗಾಡಲೇ ಇಲ್ಲ. ಗಾಳಿಯಲ್ಲಿ ತೇಲುತ್ತಿದ್ದ ಹಾಡಿನ ಕೊನೆಯ ಕಂಪನಗಳಿಗೆ ಇನ್ನೂ ಕಿವಿಗೊಟ್ಟಿದ್ದಾಳೇನೋ ಎಂಬಂತೆ, ಜಮೀಲಾ ತಲೆಯನ್ನು ಒಂದು ಬದಿಗೆ ವಾಲಿಸಿಕೊಂಡು, ಅದೇ ಭಂಗಿಯಲ್ಲಿ ಕೂತಿದ್ದಳು. ದನಿಯಾರ್ ಮುಂದೆ ಹೋದ. ಹಳ್ಳಿಯನ್ನು ತಲುಪುವವರೆಗೂ ನಾವಿಬ್ಬರೂ ಒಂದು ಮಾತೂ ಆಡಲಿಲ್ಲ. ಅಲ್ಲಿ ಮಾತುಗಳ ಅಗತ್ಯವೂ ಇರಲಿಲ್ಲ. ಮೇಲಾಗಿ, ಕೇವಲ ಮಾತುಗಳು ವ್ಯಕ್ತಿಯೊಬ್ಬನ ಭಾವನೆಗಳನ್ನು ಎಂದೂ ಪೂರಾ ಅಭಿವ್ಯಕ್ತಿಸಲಾರವು.

ನಮ್ಮ ಬದುಕು ಆ ದಿನದಿಂದ ಏನೋ ಒಂದು ಬದಲಾವಣೆ ಕಂಡಿತ್ತು. ಪ್ರತಿದಿನ ಬೆಳಗ್ಗೆ ಕಣದಲ್ಲಿ ನಾವು ಗಾಡಿಗಳನ್ನು ತುಂಬಿಸುತ್ತಿದ್ದೆವು, ಸ್ಟೇಷನ್‌ಗೆ ಹೋಗುತ್ತಿದ್ದೆವು, ದಾರಿಯಲ್ಲಿ ದನಿಯಾರ್‌ನ ಹಾಡನ್ನು ಕೇಳುವ ಸಲುವಾಗಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೊರಡುತ್ತಿದ್ದೆವು.

ನನ್ನ ಮಟ್ಟಿಗೆ ಅವನ ದನಿ ನನ್ನದೇ ಒಳ ದನಿಯಾಗಿತ್ತು. ಅದು ಬೆಳಗಿನ ಹೊತ್ತು ನಾನು ಹೋದಲ್ಲೆಲ್ಲಾ ನನ್ನನ್ನು ಹಿಂಬಾಲಿಸುತ್ತಿತ್ತು. ಇಬ್ಬನಿಯಿಂದ ತೋಯ್ದು ತೊಪ್ಪೆಯಾಗಿರುತ್ತಿದ್ದ ಕುದುರೆ ಸೊಪ್ಪಿನ ಮಾಳದಲ್ಲಿ ಬಗ್ಗಾಲು ಹಾಕಿದ್ದ ಕುದುರೆಗಳ ಬಳಿ ನಾನು ಓಡುತ್ತಿರುವಾಗ, ಬೆಳಗಿನ ನಗುಮೊಗದ ಸೂರ್ಯ ಪರ್ವತಗಳ ಹಿಂಬದಿಯಿಂದ ಇಣುಕುತ್ತಾ ನನ್ನನ್ನು ಸ್ವಾಗತಿಸುತ್ತಿರುವಾಗ, ಅವನ ದನಿ ನನ್ನೊಂದಿಗಿರುತ್ತಿತ್ತು. ವೃದ್ಧರು ಮೊರಗಳಲ್ಲಿ ಬಂಗಾರದ ಬಣ್ಣದ ಗೋಧಿ ಕಾಳುಗಳನ್ನು ಗಾಳಿಗೆ ಮೇಲೆತ್ತಿ ತೋರುತ್ತಿರುವಾಗ, ರಾಶಿರಾಶಿ ಬೀಳುತ್ತಿದ್ದ ಆ ಗೋಧಿಯ ಬಂಗಾರದ ಮೃದು ಸರಸರ ಸದ್ದಿನಲ್ಲಿ, ಆ ಹುಲ್ಲುಮಾಳದಲ್ಲಿ, ಬಲು ಎತ್ತರದಲ್ಲಿ ಹಾರುತ್ತಿದ್ದ ಒಂಟಿ ಹದ್ದಿನ ಪ್ರಶಾಂತತೆಯಲ್ಲಿ ಅವನ ದನಿಯಿರುತ್ತಿತ್ತು. ನಾನು ನೋಡುತ್ತಿದ್ದ ಮತ್ತು ಕೇಳುತ್ತಿದ್ದ ಎಲ್ಲದರಲ್ಲೂ ಅವನ ಹಾಡಿರುತ್ತಿತ್ತು.

Abhijnana excerpt of Jamila Novel by Chinghiz Aitmatov translated by S Gangadhariah

ಎಸ್. ಗಂಗಾಧರಯ್ಯ

ಸಂಜೆಯ ಹೊತ್ತು ಕಮರಿಯ ಮೂಲಕ ಗಾಡಿಗಳನ್ನು ಹೊಡೆದುಕೊಂಡು ಬರುವಾಗ, ನಾನು ಮತ್ತೊಂದು ಲೋಕಕ್ಕೆ ಒಯ್ಯಲ್ಪಟ್ಟಂಥ ಭಾವಕ್ಕೊಳಗಾಗುತ್ತಿದ್ದೆ, ಕಣ್ಣುಗಳನ್ನು ಅರೆಮುಚ್ಚಿಕೊಂಡು ಅವನ ಹಾಡನ್ನು ಧ್ಯಾನಿಸುತ್ತಿದ್ದೆ. ಆಗ ನನ್ನ ಬಾಲ್ಯದ ಏಚಿತ್ರ, ಆದರೆ ತುಂಬಾ ಪರಿಚಿತ ದೃಶ್ಯಗಳು ನನ್ನನ್ನು ಮುತ್ತಿಕೊಳ್ಳುತ್ತಿದ್ದವು-ಮೃದುವಾದ ಹೊಗೆ ನೀಲಿ ಬಣ್ಣದ, ವಸಂತ ಮಾಸದ ವಲಸೆ ಮೋಡಗಳು ನಮ್ಮ ಯೂರ್ತಾಗಳ (ಪಶುಪಾಲನಾ ಗುಡಾರಗಳು) ಮೇಲೆ ಕೈಗೆಟಕುವ ದೂರದಲ್ಲಿ ತೇಲುತ್ತಿದ್ದುದು, ನಂತರ ಕುದುರೆ ಹಿಂಡುಗಳು ಗಂಟೆ ನಾದದ ಅನುರಣನದೊಂದಿಗೆ ತಮ್ಮ ಬೇಸಿಗೆ ಹುಲ್ಲು ಮಾಳಗಳಿಗೆ ದೌಡಾಯಿಸುತ್ತಿದ್ದುದು, ಕಪ್ಪು ಕೆಂಡದಂಥ ಬೆಳಗುವ ಕಂಗಳ, ಉದ್ದನೆಯ ಮುಂಜುಟ್ಟುಗಳ ಎಳೆಯ ಬೀಜದ ಕುದುರೆಗಳು ಹೆಣ್ಣು ಕುದುರೆಗಳನ್ನು ಜಂಬದಿಂದ ಹಿಂದಾಕುತ್ತಾ ಓಡುತ್ತಿದ್ದುದು, ಕುರಿ ಗುಂಪುಗಳು ಬೆಟ್ಟಗಳ ಮೇಲೆ ಲಾವಾರಸದಂತೆ ಮೆಲ್ಲಗೆ ಹರವಿಕೊಳ್ಳುತ್ತಿದ್ದುದು, ಬೆಟ್ಟದ ನೆತ್ತಿಯಿಂದ ಜಲಪಾತವೊಂದು ಧುಮ್ಮಿಕ್ಕುತ್ತಿದ್ದುದು, ಕಣ್ಣು ಕೋರೈಸುತ್ತಿದ್ದ ಅದರ ಆ ಬಿಳೀ ನೊರೆ, ನದಿಯ ಆಚೆ ಪೊದೆಗಳ ಮರೆಯಲ್ಲಿ ನಿಧಾನವಾಗಿ ಮುಳುಗುತ್ತಿದ್ದ ಸೂರ್ಯ, ಬೆಂಕಿಯುಗುಳುವ ದಿಗಂತದಂಚಿನಲ್ಲಿ ಒಂಟಿ ಸವಾರನೊಬ್ಬ ಕೈ ನೀಡಿದರೆ ಸಾಕು, ಸೂರ್ಯನೇ ಕೈಗೆ ಸಿಗುವಂಥ ದೂರದಲ್ಲಿ ಸೂರ್ಯನನ್ನೇ ಬೆನ್ನಟ್ಟಿ ಹೋಗುತ್ತಿರುವವನಂತೆ ಕಾಣುತ್ತಿದ್ದುದು, ನಂತರ, ಸೂರ್ಯನೊಂದಿಗೆ ಅವನೂ ಆ ಪೊದೆಗಳ ಮರೆಯಲ್ಲಿ, ಆ ಮುಸ್ಸಂಜೆಯಲ್ಲಿ ಮರೆಯಾಗುತ್ತಿದ್ದುದು…

ಕಝಾಖ್ ಹುಲ್ಲುಮಾಳ ನದಿಯಾಚೆಗೂ ವಿಶಾಲವಾಗಿ ಹರವಿಕೊಂಡಿತ್ತು. ಅದು ತನಗಾಗಿ ಪರ್ವತಗಳನ್ನೇ ಇಬ್ಭಾಗ ಮಾಡಿಕೊಂಡು ಅನಾಕರ್ಷಕವಾಗಿ ಪಾಳುಬಿದ್ದಿತ್ತು.

ಯುದ್ಧ ಪ್ರಾರಂಭವಾದ ಆ ಮೊದಲ ಮರೆಯಲಾಗದ ಬೇಸಿಗೆಯಲ್ಲಿ, ಹುಲ್ಲುಮಾಳದಗಲಕ್ಕೂ ಬೆಂಕಿ ಹತ್ತಿಕೊಂಡು ಸೈನ್ಯ ಕುದುರೆಗಳ ಹಿಂಡುಗಳು ಅದರ ಮೇಲೆಲ್ಲಾ ಓಡಾಡಿ, ಸುಡುವ ಧೂಳಿನ ಮೋಡಗಳನ್ನೆಬ್ಬಿಸಿ ಅದನ್ನು ಮಂಕಾಗಿಸಿ, ಸವಾರರು ಸಕಲ ದಿಕ್ಕುಗಳಿಗೂ ಇನ್ನಿಲ್ಲದ ನಾಗಾಲೋಟದಿಂದ ಚದುರಿದ್ದರು.

ನನಗೆ ನೆನಪಿದೆ: ನದಿಯ ಎದುರು ದಡದಲ್ಲಿ ಕುದುರೆಯ ಮೇಲಿದ್ದ ಕಝಾಖನೊಬ್ಬ, ಕುರಿಗಾಹಿಯ ದನಿಯಲ್ಲಿ, “ಕಿರ್ಗೀಝಿಯನ್ನರೇ, ನಿಮ್ಮ ಕುದುರೆಗಳಿಗೆ ಜೀನು ಹಾಕಿ ಸನ್ನದ್ಧರಾಗಿರಿ, ಶತ್ರು ಬರುತ್ತಿದ್ದಾನೆ.’ ಅಂತ ಕೂಗುತ್ತಾ ಧೂಳಿನ ಮೋಡಗಳನ್ನೆಬ್ಬಿಸುತ್ತಾ, ಬಿಸಿ ಗಾಳಿಯ ಅಲೆಗಳಲ್ಲಿ ಮರೆಯಾಗಿಹೋಗಿದ್ದ.

ನಮ್ಮ ಮೊದಲ ಅಶ್ವದಳಗಳು ಪರ್ವತಗಳಿಂದ ಕೆಳಗಿಳಿದು, ಕಣಿವೆಗಳನ್ನು ತಟಾಯ್ದು ಹೋಗುತ್ತಿರುವಾಗ ಗಂಭೀರ ಹಾಗೂ ಗುಡುಗಿನಂಥ ಸದ್ದಾಗುತ್ತಿತ್ತು. ಸಾವಿರಾರು ರಿಕಾಬುಗಳು ರಿಂಗಣಿಸಿದ್ದವು. ಸಾವಿರಾರು ಜಿಗಿತಗಳು ಕುದುರೆಯೇರಿ ಜೀನಿಡಿದು ಹುಲ್ಲುಮಾಳದತ್ತ ನುಗ್ಗಿದ್ದರು. ಅವರುಗಳ ಮುಂದೆ ಕೆಂಪು ಬಾವುಟಗಳು ಹಾರಾಡುತ್ತಿದ್ದವು.

ಸೌಜನ್ಯ : ಬಿಸಿಲುಕೋಲು ಪ್ರಕಾಶನ, ತಿಪಟೂರು. 9448892305

ಇದನ್ನೂ ಓದಿ : Khalil Gibran Birthday : ಅಭಿಜ್ಞಾನ ; ‘ನೀವೇಕೆ ಮದುವೆಯಾಗಿಲ್ಲ’ ಹೀಗೆಂದು ಕೇಳಿದ ಆಕೆಗೆ ಖಲೀಲ್ ಗಿಬ್ರಾನ್ ಉತ್ತರಿಸಿದ್ದೇನು?

Follow us on

Most Read Stories

Click on your DTH Provider to Add TV9 Kannada