Hindustani Classical Music : ಅಭಿಜ್ಞಾನ ; ನುರಿತ ಸಂಗೀತಗಾರರೂ ಒಮ್ಮೊಮ್ಮೆ ರಾಗವನ್ನು ಕರಾರುವಾಕ್ಕಾಗಿ ಗುರುತಿಸಲಾರದೆ ಸೋಲುತ್ತಾರೆ ಯಾಕೆ ಗೊತ್ತೆ?

Raga : ‘ನಿಮ್ಮ ಗೆಳೆಯ ಬೇರೆ ಉಡುಪು ತೊಟ್ಟು ಬಂದರೂ ಗಡ್ಡ ಬಿಟ್ಟರೂ ಹೇರ್‌ಕಟ್‌ನಲ್ಲಿ ವ್ಯತ್ಯಾಸ ಮಾಡಿದರೂ ಮುದುಕನಾದರೂ ನೀವವನ ಗುರುತು ಹಿಡಿಯುತ್ತೀರಿ. ರಾಗಗಳು ಹೀಗೆಯೇ ಒಮ್ಮೊಮ್ಮೆ ವೇಷ ಬದಲಿಸಿ ಬರುವುದಿದೆ. ನಿಮಗವುಗಳ ವ್ಯಕ್ತಿತ್ವ ತಿಳಿದಿದ್ದರೆ ಸಾಕು.’ ಪಂ. ರವಿಶಂಕರ್

Hindustani Classical Music : ಅಭಿಜ್ಞಾನ ; ನುರಿತ ಸಂಗೀತಗಾರರೂ ಒಮ್ಮೊಮ್ಮೆ ರಾಗವನ್ನು ಕರಾರುವಾಕ್ಕಾಗಿ ಗುರುತಿಸಲಾರದೆ ಸೋಲುತ್ತಾರೆ ಯಾಕೆ ಗೊತ್ತೆ?
ಮೇರುಕಲಾವಿದರಾದ ಪಂ. ರವಿಶಂಕರ್ ಮತ್ತು ಪಂ. ಕುಮಾರ ಗಂಧರ್ವ
ಶ್ರೀದೇವಿ ಕಳಸದ | Shridevi Kalasad

|

Dec 22, 2021 | 12:53 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಕಥೆಗಾರ, ಅನುವಾದಕ ಎಸ್. ದಿವಾಕರ ಅವರು ಸಂಪಾದಿಸಿದ ‘ನಾದದ ನವನೀತ’ದಲ್ಲಿ ಅಡಕವಾಗಿರುವ ಭಾಸ್ಕರ್ ಚಂದಾವರ್ಕರ್ ಬರೆದ ಪ್ರಬಂಧದ ಆಯ್ದ ಭಾಗ. ಕನ್ನಡಕ್ಕೆ ಕವಿ, ಕಥೆಗಾರ್ತಿ ವೈದೇಹಿ.

*

ಒಮ್ಮೆ ಪಂರವಿಶಂಕರ್ ನಮಗೆ ‘ತಿಲಕ್ ಕಾಂಬೋಜಿ’ ರಾಗವನ್ನು ಕಲಿಸುತ್ತ ಇದ್ದರು. ಇದು ರಾಂಪುರ ಸಂಪ್ರದಾಯದ ರಚನೆ. ರವಿಶಂಕರ್ ಅವರಿಗಿಂತ ಮೂರು ಪೀಳಿಗೆ ಹಿಂದಿನ ಗುರುಗಳ ಕಾಲದ್ದು, ರವಿಶಂಕರ್ ನುಡಿಸುತ್ತ ಇದ್ದಂತೆ ನಾವು ಆಲಿಸುತ್ತ ಅನುಕರಿಸುತ್ತ ಇದ್ದಂತೆ ನಮ್ಮಲ್ಲೊಬ್ಬ ಕೇಳಿದ “ಇಲ್ಲಿ ವಾದಿ-ಸಂವಾದಿಗಳು ಯಾವುವೆಂದು ಹೇಳುತ್ತೀರ ಸರ್?”

ಗುರೂಜಿ ಸಿತಾರ್ ಕೆಳಗಿಟ್ಟು, “ನನಗೆ ನನ್ನ ಗುರು ಅಲ್ಲಾವುದ್ದೀನ್ ಖಾನ್ ಹೇಳಿದ್ದನ್ನು ನಿಮಗೆ ಹೇಳುತ್ತಿದ್ದೇನೆ. ರಾಗಗಳೆಂದರೆ ಮನುಷ್ಯರಂತೆಯೇ. ಯಾರನ್ನೇ ಆಗಲಿ ಮೊಟ್ಟಮೊದಲು ಭೇಟಿಯಾದಾಗ ವ್ಯಕ್ತಿಯ ಹೆಸರು, ಉದ್ಯೋಗ, ವಿಳಾಸ ಮುಂತಾಗಿ ತಿಳಿಯುತ್ತೀರಿ. ಹೀಗೆ ಒಮ್ಮೆ ಪರಿಚಯವಾದ ಮೇಲೆ ಅದನ್ನೇ ನೆನಪು ಮಾಡಿಕೊಳ್ಳುತ್ತ ಇರುವುದಿಲ್ಲ ಅಲ್ಲವೆ? ಅಷ್ಟೇ ಅಲ್ಲ, ನಿಮ್ಮ ಗೆಳೆಯ ಬೇರೆ ಉಡುಪು ತೊಟ್ಟು ಬಂದರೂ ಗಡ್ಡ ಬಿಟ್ಟರೂ ಹೇರ್‌ಕಟ್‌ನಲ್ಲಿ ವ್ಯತ್ಯಾಸ ಮಾಡಿದರೂ ಮುದುಕನಾದರೂ ನೀವವನ ಗುರುತು ಹಿಡಿಯುತ್ತೀರಿ. ರಾಗಗಳು ಹೀಗೆಯೇ ಒಮ್ಮೊಮ್ಮೆ ವೇಷ ಬದಲಿಸಿ ಬರುವುದಿದೆ. ನಿಮಗವುಗಳ ವ್ಯಕ್ತಿತ್ವ ತಿಳಿದಿದ್ದರೆ ಸಾಕು. ಒಂದು ಸಂಪೂರ್ಣ ವ್ಯಕ್ತಿತ್ವವನ್ನಾಗಿ ರಾಗವನ್ನು ಅರಿಯಬೇಕೇ ವಿನಾ ಅನಗತ್ಯ ವಿವರ ಕೆದಕಿಕೊಳ್ಳಬೇಡಿ. ರಾಗದ ವ್ಯಕ್ತಿತ್ವವನ್ನು ಒಮ್ಮೆ ಅರ್ಥಮಾಡಿಕೊಂಡಿರೆಂದರೆ ಅದು ನಿಮ್ಮೊಡನೆ ಸಂವಾದಿಸುತ್ತದೆ. ನೀವದನ್ನು ಹೆಚ್ಚು ಹೆಚ್ಚು ಅರಿಯುತ್ತೀರಿ. ಅದನ್ನು ಹಲವು ರೀತಿಯಿಂದ ಚಿತ್ರಿಸಲೂ ಸಮರ್ಥರಾಗುತ್ತೀರಿ. ಹೀಗೆ ಒಂದು ರಾಗವನ್ನು ಒಂದು ವ್ಯಕ್ತಿತ್ವವೆಂದು ತಿಳಿದುಕೊಳ್ಳುವುದು ಅದನ್ನು ಅರಿಯುವ ಒಂದು ಅದ್ಭುತ ಮಾರ್ಗ ಎಂದು ನನಗನ್ನಿಸುತ್ತದೆ.”

ಒಮ್ಮೆ ಕುಮಾರ ಗಂಧರ್ವರು ಸಂಜೆಯ ಕಛೇರಿಯೊಂದರಲ್ಲಿ ಮಧ್ಯಮಾದಿ ಸಾರಂಗ್ ಹಾಡುತ್ತಿದ್ದರು. ಶೋತೃಗಳಿಗೆ ಅವರು ಮಧ್ಯಮಾದಿ ಸಾರಂಗ್ ಹಾಡುತ್ತಿದ್ದಾರೆಂದು ನಂಬಲಿಕ್ಕಾಗಲಿಲ್ಲ. ಯಾರೋ ಒಬ್ಬರು ಕೇಳಿಯೇಬಿಟ್ಟರು

“ನೀವು ಹಾಡುತ್ತಿರುವುದು…”

“ಮದ್ಮಾದ್ ಸಾರಂಗ್, ಯಾಕೆ ? ಗೊತ್ತಾಗಲಿಲ್ಲವೇ?”

“ಇಲ್ಲವಲ್ಲ!”

“ಹಾಂ… ನಾನು ರಾಗದ ಮುಂಚಿತ್ರವನ್ನಲ್ಲ: ಪಾರ್ಶ್ವಚಿತ್ರವನ್ನಷ್ಟೇ ಚಿತ್ರಿಸುತ್ತ ಇದ್ದೆ. ನಿಮಗೆ ಒಬ್ಬ ವ್ಯಕ್ತಿ ಸರಿಯಾಗಿ ಪರಿಚಿತನಿದ್ದರೆ ಆತ ಯಾರೆಂದು ಎದುರಿನಿಂದ ಮಾತ್ರವಲ್ಲ ಹಿಂದಿನಿಂದ, ಪಾರ್ಶ್ವದಿಂದಲೂ ನಿಮಗೆ ತಿಳಿದುಬಿಡುತ್ತದಷ್ಟೆ?”

Abhijnana excerpt from Naadada Navaneeta by kannada Writer S Diwakar Published by Prism Books

ನಾದದ ನವನೀತ

-ಹೀಗೆ ಇದು, ಒಂದು ರಾಗವನ್ನು ಒಳಹೊಕ್ಕು ಅರಿಯುವ ಅತ್ಯಂತ ಸಮರ್ಥ ವಿಧಾನ. ಎಲ್ಲ ಕೋನಗಳಿಂದಲೂ ಅದನ್ನು ಚಿತ್ರಿಸುವುದು. ರಾಗವನ್ನು ಗುರುತಿಸುವುದಕ್ಕಿಂತ ಅನುಭವಿಸುವುದನ್ನು ಕಲಿಯುವುದು. ಎಂತೆಂತಹ ನುರಿತ ಸಂಗೀತಗಾರರೂ ಒಮ್ಮೊಮ್ಮೆ ರಾಗವನ್ನು ಕರಾರುವಾಕ್ಕಾಗಿ ಗುರುತಿಸಲಾರದೆ ಸೋಲುತ್ತಾರೆ ಗೊತ್ತೆ? ಕಾರಣ ಇಷ್ಟೆ. ಅವರಿಗದರ ಅನುಭವ ಮುಖ್ಯವೇ ಹೊರತು ಗುರುತಿಸುವುದಲ್ಲ.

ಸೌಜನ್ಯ : ಪ್ರಿಸಂ ಬುಕ್ಸ್​

ಇದನ್ನೂ ಓದಿ : Albert Camus : ಅಭಿಜ್ಞಾನ ; ಸಿರಿವಂತರ ಔತಣಕೂಟಗಳನ್ನು ತಿರಸ್ಕರಿಸುತ್ತಿದ್ದ, ಸಾಹಿತ್ಯ ಪುರಸ್ಕಾರಗಳಿಂದ ದೂರವಿರುತ್ತಿದ್ದ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada