Music : ಅಭಿಜ್ಞಾನ ; ‘ನಿನ್ನ ಊದುವ ತುತ್ತೂರಿ ದನಿಗೆ ಜಗತ್ತಿನಲ್ಲಿ ಅಷ್ಟೊಂದು ಬೆಲೆ ಇದೆ, ನನ್ನ ಸೂಜಿ ದಾರಕ್ಕೆ ಬೆಲೆ ಇಲ್ಲವಾ’
Bismillah Khan : ‘ಬಿಸ್ಮಿಲ್ಲಾ ಖಾನ್, ನೀನು ನಮ್ಮ ಮಾರ್ವಾಡಿ ಸಮುದಾಯದ ವಿವಾಹಕ್ಕೆ ಎರಡು ರೂಪಾಯಿಯಿಂದ ಐದು ರೂಪಾಯಿ ಸಂಭಾವನೆ ಪಡೆಯುತ್ತಿದ್ದೆ. ಈಗ ಇಪ್ಪತ್ತೈದು ಸಾವಿರ ಪಡೆಯುತ್ತಿದ್ದೀಯಾ, ಬೇಳೆಕಾಳು, ತುಪ್ಪ, ಗೋಧಿ ಹಿಟ್ಟು ಹೀಗೆ ಎಲ್ಲವೂ ದಿನೇದಿನೆ ನಿನ್ನ ಸಂಗೀತದಂತೆ ತುಟ್ಟಿಯಾಗುತ್ತಿವೆ.’
Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
* ಲೇಖಕ, ಅನುವಾದಕ ಎನ್. ಜಗದೀಶ್ ಕೊಪ್ಪ ಅವರ ‘ಸಂಗೀತಲೋಕದ ಸಂತ ಬಿಸ್ಮಿಲ್ಲಾ ಖಾನ್’ ಕೃತಿಯಿಂದ. *
ಬಿಸ್ಮಿಲ್ಲಾ ಖಾನರು ತಾವಾಯಿತು ತಮ್ಮ ಸಂಗೀತವಾಯಿತು ಇದನ್ನು ಹೊರತು ಪಡಿಸಿ, ಲೌಕಿಕ ಬದುಕಿನ ಬಗ್ಗೆ ಎಂದಿಗೂ ತಲೆ ಕೆಡಿಸಿಕೊಂಡವರಲ್ಲ. ಮನೆಗೆ ಬೇಕಾದ ದಿನಸಿ, ಇತ್ಯಾದಿ ಖರ್ಚುಗಳಿಗೆ ತಮ್ಮ ಕಿರಿಯ ಪುತ್ರ ಕಾಜಿಮ್ ಕೈಗೆ ಹಣ ಒಪ್ಪಿಸಿ ತಾವು ಅಲೌಕಿಕ ಲೋಕದಲ್ಲಿ ಮುಳುಗಿಬಿಡುತ್ತಿದ್ದರು. ಆದರೆ, ಕೊಟ್ಟ ಹಣಕ್ಕಾಗಿ ಪ್ರತಿ ಪೈಸೆಗೂ ಕರಾರುವಾದ ಲೆಕ್ಕ ಕೇಳುತ್ತಿದ್ದರು. ಒಮ್ಮೆ ಲೆಕ್ಕದ ಖರ್ಚಿನ ಪಟ್ಟಿಯನ್ನು ನೋಡಿ ಹೌಹಾರಿದರು. ಗೆಳೆಯ ತನಗೆ ಹೊಲಿದು ಕೊಡುವ ಜುಬ್ಬಾ ಮತ್ತು ಪೈಜಾಮಿಗೆ ಕೂಲಿ ದರ ಹದಿಮೂರು ರೂಪಾಯಿ ಹಾಕಿದ್ದಾನೆ ಮೂರು ರೂಪಾಯಿ ಇದ್ದದ್ದು ಹದಿಮೂರು ರೂಪಾಯಿ ಹೇಗಾಯ್ತು? ಒಂದು ಕಿಲೋ ಬೇಳೆಗೆ ಮೂವತ್ತೆಂಟು ರೂಪಾಯಿ ಹೇಗೆ ಸಾಧ್ಯ? ನಾನು ತರುವಾಗ ಮೂರು ರೂಪಾಯಿಗೆ ಐದು ಕೆ.ಜಿ. ಬೇಳೆ ಬರುತ್ತಿತ್ತು. ಹೀಗೆ ಆಲೋಚಿಸುತ್ತಾ ಮಗ ಕಾಜಿಂ ಸುಳ್ಳು ಲೆಕ್ಕ ನೀಡಿ ಹಣ ಲಪಟಾಯಿಸಿರಬಹುದೆ? ಎಂಬ ಸಂಶಯದಲ್ಲಿ ಮೊದಲು ಮನ್ನು ಮಾಸ್ತರ್ ಅಂಗಡಿಗೆ ತೆರಳಿದರು.
ಮನ್ನು ಮಾಸ್ತರ್ ತಲೆ ಬಗ್ಗಿಸಿಕೊಂಡು ಹೊಲಿಗೆ ಯಂತ್ರದಲ್ಲಿ ಬಟ್ಟೆ ಹೊಲಿಯುವುದರಲ್ಲಿ ನಿರತರಾಗಿದ್ದರು. ಅಂಗಡಿಯ ಬಾಗಿಲ ಬಳಿ ನಿಂತುಕೊಂಡ ಬಿಸ್ಮಿಲ್ಲಾ ಖಾನರು “ಏನೋ ದಿವಾನ? ಬಟ್ಟೆ ಹೊಲಿಯುವ ಕೂಲಿಯನ್ನು ಮೂರು ರೂಪಾಯಿಂದ ಹದಿಮೂರು ರೂಪಾಯಿಗೆ ಏರಿಸಿಬಿಟ್ಟಿದ್ದೀಯಾ? ಎಂದು ಕಿಚಾಯಿಸಿದರು. ತಣ್ಣನೆಯ ದನಿಯಲ್ಲಿ ಮನ್ನು ಮಾಸ್ತರ್, “ಬಿಸ್ಮಿಲ್ಲಾ, ಇಪ್ಪತ್ತು ವರ್ಷಗಳ ಹಿಂದೆ ನೀನು ಶಹನಾಯ್ ನುಡಿಸುವುದಕ್ಕೆ ಎಷ್ಟು ಸಂಭಾವನೆ ತಗೆದುಕೊಳ್ಳುತ್ತಿದ್ದೆ?” ಎಂದು ಕೇಳುತ್ತಿದ್ದಂತೆ, “ಹತ್ತು ಅಥವಾ ಹದಿನೈದು ಸಾವಿರ” ಎಂದು ಬಿಸ್ಮಿಲ್ಲಾ ಖಾನ್ ಉತ್ತರಿಸಿದರು. ಈಗ ಎಷ್ಟು ತೆಗೆದುಕೊಳ್ಳುತ್ತಿದ್ದೀಯಾ? ಎಂಬ ಮರುಪ್ರಶ್ನೆಗೆ ಅರವತ್ತು ಸಾವಿರದಿಂದ ತೊಂಬತ್ತು ಸಾವಿರದವರೆಗೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಪ್ರಾಮಾಣಿಕವಾಗಿ ಗೆಳೆಯನ ಪ್ರಶ್ನೆಗೆ ಬಿಸ್ಮಿಲ್ಲಾಖಾನರು ಉತ್ತರಿಸಿದರು. ನಂತರ ಮನ್ನು ಮಾಸ್ತರ್, “ಅಲ್ಲಯ್ಯ, ನಿನ್ನ ಊದುವ ತುತ್ತೂರಿ ದನಿಗೆ ಜಗತ್ತಿನಲ್ಲಿ ಅಷ್ಟೊಂದು ಬೆಲೆ ಇದೆ, ನನ್ನ ಸೂಜಿ ದಾರಕ್ಕೆ ಬೆಲೆ ಇಲ್ಲ ಅಂತಾ ತಿಳಿದುಕೊಂಡಿದ್ದಿಯೇನು?” ಎಂದು ಕೇಳಿದಾಗ, ಗೆಳೆಯನ ಮಾತಿಗೆ ಜೋರಾಗಿ ನಕ್ಕ ಬಿಸ್ಮಿಲ್ಲಾ ಖಾನರು “ದೋಸ್ತಾ, ನಿನ್ನ ಮಾತು ಸರಿಯಾಗಿದೆ, ಚಹಾ ತರಿಸು” ಎಂದು ಹೇಳುತ್ತಾ, ಸಿಗರೇಟ್ ಹಚ್ಚಿಕೊಂಡು ಅಂಗಡಿಯೊಳಕ್ಕೆ ಹೋಗಿ ಕುಳಿತುಕೊಂಡರು.
ದಿನಸಿ ಅಂಗಡಿಯಲ್ಲಿಯೂ ಸಹ ಇದೇ ಅವರಿಗೆ ಅನುಭವವಾಯ್ತು. ಅಂಗಡಿಯ ಮಾಲಿಕ “ಬಿಸ್ಮಿಲ್ಲಾ ಖಾನ್, ನೀನು ನಮ್ಮ ಮಾರ್ವಾಡಿ ಸಮುದಾಯದ ವಿವಾಹಕ್ಕೆ ಎರಡು ರೂಪಾಯಿಯಿಂದ ಐದು ರೂಪಾಯಿ ಸಂಭಾವನೆ ಪಡೆಯುತ್ತಿದ್ದೆ. ಈಗ ಇಪ್ಪತ್ತೈದು ಸಾವಿರ ಪಡೆಯುತ್ತಿದ್ದೀಯಾ, ಬೇಳೆಕಾಳು, ತುಪ್ಪ, ಗೋಧಿ ಹಿಟ್ಟು ಹೀಗೆ ಎಲ್ಲವೂ ದಿನೇದಿನೆ ನಿನ್ನ ಸಂಗೀತದಂತೆ ತುಟ್ಟಿಯಾಗುತ್ತಿವೆ.’’ ಎಂದು ಹೇಳುವುದರ ಮೂಲಕ ಲೌಕಿಕ ಜಗತ್ತಿನ ವ್ಯವಹಾರವನ್ನು ಬಿಸ್ಮಿಲ್ಲಾ ಖಾನರಿಗೆ ಪರಿಚಯ ಮಾಡಿಕೊಟ್ಟಿದ್ದರು.
ಬಿಸ್ಮಿಲ್ಲಾಖಾನರು ಲೋಕಪ್ರಸಿದ್ಧ ಕಲಾವಿದರಾಗಿದ್ದುಕೊಂಡು, ಹಣದ ವಿಷಯದಲ್ಲಿ ಜಾಗರೂಕತೆ ಇರುತ್ತಿತ್ತೇ ಹೊರತು, ಅವರು ಎಂದಿಗೂ ಜಿಪುಣತನ ತೋರಲಿಲ್ಲ. ಓರ್ವ ಸಾಮಾನ್ಯ ಬಡವನಂತೆ ಬದುಕಲು ಇಚ್ಛಿಸುತ್ತಿದ್ದ ಅವರು, ತಮ್ಮ ಸುತ್ತಮುತ್ತಲಿನ ಬಡವರ ಕುರಿತು ಅಪಾರ ಕಾಳಜಿ ತೋರಿಸುತ್ತಿದ್ದರು. ಬಕ್ರಿದ್ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ ತಮಗೆ ಸಂಭಾವನೆಯಾಗಿ ಬರುತ್ತಿದ್ದ ಇಪ್ಪತ್ತೊಂದರಿಂದ ಮೂವತ್ತು ಸಾವಿರ ರೂಪಾಯಿಗಳಲ್ಲಿ ತಾವೇ ಸ್ವತಃ ದಾಲ್ ಮಂಡಿ ಪ್ರದೇಶಕ್ಕೆ ಹೋಗಿ ಕುಟುಂಬದ ಸದಸ್ಯರಿಗೆ ಬಟ್ಟೆಗಳನ್ನು ಖರೀದಿಸುತ್ತಿದ್ದರು. ಎಲ್ಲವನ್ನು ಮನ್ನು ಮಾಸ್ತರ್ ಟೈಲರಿಂಗ್ ಅಂಗಡಿಗೆ ಕಳಿಸಿದ ನಂತರ, ತಮ್ಮ ಇಷ್ಟವಾದ ಸಿಹಿ ತಿಂಡಿಗಳನ್ನು ಖರೀದಿಸುತ್ತಾ, ಪರಿಚಯದ ಮಿತ್ರರ ಅಂಗಡಿಗಳಲ್ಲಿ ಚಹಾ ಹೀರುತ್ತಾ, ಬನಾರಸ್ ಪಾನ್ ಜಗಿಯುತ್ತಾ ಅಲ್ಲಿನ ರಸ್ತೆಗಳಲ್ಲಿ ಓಡಾಡುವುದು ಅವರ ಪಾಲಿಗೆ ಖುಷಿಯ ಸಂಗತಿಯಾಗಿತ್ತು.
ಇಂತಹ ಸಂಭ್ರಮದ ಕ್ಷಣಗಳ ನಡುವೆಯೂ ಅವರು ಬಡವರನ್ನು ನೆನಪಿಸಿಕೊಂಡು ಅವರಿಗೆ ಧನಸಹಾಯ ಮಾಡುತ್ತಿದ್ದರು. ತಮ್ಮ ಪುತ್ರರ ಕೈಗೆ ಹಣವನ್ನಿತ್ತು. ತಮ್ಮ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಡ ಮುಸ್ಲಿಂ ಕುಟುಂಬಗಳಿಗೆ ಹೊಸ ಉಡುಪು, ದಿನಸಿ ಸಾಮಾನು, ಮಾಂಸ ಇತ್ಯಾದಿ ಖರೀದಿಗೆ ಹಣ ನೀಡುವಂತೆ ಆದೇಶಿಸುತ್ತಿದ್ದರು. ಸಂತೋಷವಾಗಲಿ, ಸಂಭ್ರಮವಾಗಲಿ ಮನುಷ್ಯ ಏಕಾಂಗಿಯಾಗಿ ಅನುಭವಿಸುವುದಲ್ಲ, ಅವುಗಳನ್ನು ಎಲ್ಲರ ಜೊತೆಗೂಡಿ ಹಂಚಿಕೊಳ್ಳಬೇಕು, ಹಬ್ಬ ಹರಿದಿನಗಳಲ್ಲಿ ಕೇವಲ ಉಳ್ಳವರ ಮನೆಯಲ್ಲಿ ಬೆಳಕಿದ್ದರೆ ಸಾಲದು, ಇಲ್ಲದವರ ಮನೆಯಲ್ಲೂ ಬೆಳಕಿನ ಹಣತೆ ಇರಬೇಕು ಅಂತಹ ಕಾರ್ಯವನ್ನು ನನ್ನಂತಹವರು ಮಾಡಬೇಕು ಇದು ಬಿಸ್ಮಿಲ್ಲಾ ಖಾನರ ನಿಲುವಾಗಿತ್ತು. ಅವರಲ್ಲಿದ್ದ ಇಂತಹ ಸಂತ ಮನೋಭಾವದ ಗುಣದಿಂದಾಗಿ ಅವರು ಲೋಕದ ಪ್ರೀತಿಗೆ ಕಾರಣರಾದರು.
ಸೌಜನ್ಯ : ಮನೋಹರ ಗ್ರಂಥಮಾಲಾ
ಇದನ್ನೂ ಓದಿ : Autobiography : ಅಭಿಜ್ಞಾನ ; ಬಯ್ದೂ ಬಯ್ದೂ ಸುಸ್ತಾದ ಬಸಪ್ಪನಿಗೆ ಬೋಡರುದ್ರಗೌಡರು ಕೊಟ್ಟ ಬಿರುದೇನಾಗಿತ್ತು?