Gokak Falls : ‘ನೋಡಾ… ಸತ್ತ ಹೋದಾಕಿ ಎಲ್ಲವ್ವನ ದಯಾದಿಂದ ಈವತ್ತ ಇಲೆಕ್ಸನ್ ಗೆದ್ಲ!’

Savadatti Yellamma : ’ಮಕ್ಕಳ ಶಿಕ್ಷಣಕ್ಕಾಗಿ ನಗರದಲ್ಲಿದ್ದ ನೀಲಮ್ಮನ ಕೊರಳಲ್ಲೂ ಈಗ ಮುತ್ತುಗಳು ಜೋತಾಡುತ್ತಿವೆ. ಊರಲ್ಲಿ ನೀಲಮ್ಮನದ್ದು ಗೌರವಯುತ ಮನೆತನ. ಯಾವುದು ಮೌಢ್ಯ? ಯಾವುದು ಭಕ್ತಿ? ಎಂಬುದು ಅವಳ ಗಂಡನಿಗೆ ಗೊತ್ತು. ಅವಳಿಗೂ ಗೊತ್ತು. ಆದರೆ ಊರ ಜನರಿಗೆ..?’ ಸುಷ್ಮಾ ಸವಸುದ್ದಿ

Gokak Falls : ‘ನೋಡಾ... ಸತ್ತ ಹೋದಾಕಿ ಎಲ್ಲವ್ವನ ದಯಾದಿಂದ ಈವತ್ತ ಇಲೆಕ್ಸನ್ ಗೆದ್ಲ!’
ಸಾಂದರ್ಭಿಕ ಚಿತ್ರ : ‘ಉಧೋ ಉಧೋ ಎಲ್ಲವ್ವ’ ಏಕವ್ಯಕ್ತಿ ಪ್ರದರ್ಶನದಲ್ಲಿ ಜಾನಪದ ಗಾಯಕಿ, ರಂಗಕಲಾವಿದೆ ಸವಿತಕ್ಕ.
Follow us
|

Updated on:Dec 10, 2021 | 1:48 PM

ಗೋಕಾಕ ಫಾಲ್ಸ್ : Gokak Falls : ಅಂದು ಹುಣ್ಣಿಮೆ ಊರವರೆಲ್ಲ ಸವದತ್ತಿ ಯಲ್ಲಮ್ಮನ ಜಾತ್ರೆಗೆ ಹೋಗಲು ತಯಾರಾಗಿ ನಿಂತಿದ್ದಾರೆ. ಆಕಡೆ ಶಾಂತಕ್ಕ ತನ್ನ ಮೂರನೆಯ ಮಗುವಿಗೆ ಜನ್ಮ ಕೊಟ್ಟವಳು ಮರಳಿ ಕಣ್ಣೇ ತೆರೆದಿಲ್ಲ. ಮಗೂನ ಮಾತ್ರ ಉಳಿಸಿದ್ವಿ ತಾಯಿನಾ ಉಳಿಸೋಕೆ ಆಗಲಿಲ್ಲ ಎಂದು ಡಾಕ್ಟ್ರು ಹೇಳಾಯ್ತು. ಅಂತ್ಯ ಸಂಸ್ಕಾರ ನಡೆಸೋಕೆ ಅಂತ ದೇಹವನ್ನು ಊರಿಗೆ ತೆಗೆದುಕೊಂಡು ಬರ‍್ತಾ ಇದ್ರು. ವಾಹನ ಊರ ಪ್ರವೇಶದ್ವಾರ ದಾಟಿ ಬಸವಣ್ಣನ ಪಾದಗಟ್ಟಿ ತಲುಪುತ್ತಿದ್ದಂತೆ ಶಾಂತಕ್ಕ ಕಣ್ಣು ತೆರೆದಳು. ಇದು ಯಲ್ಲಮ್ಮ ತಾಯಿಯ ಮಹಿಮೆ ಎಂದು ತಿಳಿದು ಆಕೆಗೆ ಯಲ್ಲಮ್ಮದೇವಿಯ ಮುತ್ತುಗಳನ್ನು ಕಟ್ಟಲಾಯಿತು. ಸತ್ತವಳು ಮತ್ತೆ ಕಣ್ಣು ತೆರೆದಿದ್ದು ಪವಾಡವೇ ಸರಿ ಎನ್ನುವುದು ಕೆಲವರ ನಂಬಿಕೆಯಾದರೇ, ಅವಳಿಗೆ ಮೊದಲೇ ಮುತ್ತು ಕಟ್ಟುವಂತೆ ದೇವಿ ನುಡಿದಿದ್ದರೂ ಆಕೆ ಅದನ್ನು ನಿರಾಕರಿಸಿದ್ದೇ  ಅಂದು ಜೀವದೊಡನೆ ಆಟವಾಡುವ ಪ್ರಸಂಗ ಬಂದಿತ್ತೆನ್ನುವುದು ಇನ್ನು ಕೆಲವರ ನಿಲುವು. ತನ್ನ ಮಾತು ಕೇಳದ್ದಕ್ಕೆ ದೇವಿ ಅವಳ ಜೀವ ತೆಗೆದು ಎಚ್ಚರಿಸಿ ಮತ್ತೆ ಜೀವ ಕೊಟ್ಟಳಾ..?! ಸುಷ್ಮಾ ಸವಸುದ್ದಿ

*

(ಹರಿವು – 4)

ಕೆಲವು ಬಾರಿ ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ನಂಬಲು ಅರ್ಹ, ಯಾವುದು ಮೌಢ್ಯ ಎಂದು ಗುರುತಿಸುವುದೇ ಕಷ್ಟವಾಗಿ ಹೋಗುತ್ತದೆ. ಕೆಲವು ನಂಬಿಕೆಗಳು ನಮ್ಮ ಸಮಾಜದಲ್ಲಿ ಅದೆಷ್ಟು ಆಳವಾಗಿ ಬೇರುಬಿಟ್ಟು ಆಕಾಶಕ್ಕೆ ಎದೆಯೊಡ್ಡಿ ನಿಂತಿವೆ ಅಂದ್ರೆ ಅದು ತಪ್ಪು, ಅರ್ಥಹೀನ ಅಂತ ಗೊತ್ತಿದ್ದರೂ ಅದನ್ನು ಕಡೆದು ಹಾಕುವುದು ಸುಲಭವಲ್ಲ. ಬದಲಾಗಿ ಅದನ್ನೇ ಪೂಜಿಸಿ ಅದಕ್ಕೆ ಅಂಟಿಕೊಂಡು ಬದುಕು ನೂಕುವ ನಿದರ್ಶನಗಳಿವೆ. ಅದರಲ್ಲೂ ಧರ್ಮ, ದೈವ, ನಂಬಿಕೆ, ಆಚರಣೆ, ಸಂಪ್ರದಾಯಗಳ ಹೆಸರಲ್ಲಿಯೇ ಇಂತಹ ಕಳಂಕಗಳು ಹೆಚ್ಚು. ಅವುಗಳು ಸಾಮಾನ್ಯವೆಂಬಂತೆ ಕಂಡರೂ ನನಗ್ಯಾಕೋ ವಿಚಿತ್ರದಂತೆ ಭಾಸವಾಗುತ್ತವೆ. ತೀರ ಕಾಡುತ್ತವೆ. ಅಂತಹವುಗಳಲ್ಲಿ ಮನಸ್ಸನ್ನು ತುಂಬಾ ಗಾಸಿಗೊಳಿಸುವುದು ಆ ಮುತ್ತುಗಳು.

ಗ್ರಾಮ ಪಂಚಾಯತಿ ಎಲೆಕ್ಷನ್ ಫಲಿತಾಂಶ ಪ್ರಕಟವಾಗಿತ್ತು. ಶಾಂತಕ್ಕ ಚಿಕ್ಕ ವಯಸ್ಸಿಗೆ ಅಧ್ಯಕ್ಷಳಾಗಿದ್ದಳು. ಲಾಕಡೌನ್ ಮುಗಿದಿದ್ದರೂ ಕಾಲೇಜುಗಳ ಬಾಗಿಲಿನ್ನೂ ತೆರೆದಿರಲಿಲ್ಲವಾದರಿಂದ ನಾನಿನ್ನು ಊರಲ್ಲೇ ಇದ್ದೆ. ಅಧ್ಯಕ್ಷ ಸ್ಥಾನಕ್ಕೇರಿದ ದಿನ ಸಂಜೆ ಶಾಂತಕ್ಕ ತನ್ನ ಪತಿಯೊಡನೆ ಮನೆಗೆ ಬಂದಿದ್ದಳು. ಅಪ್ಪ ಅಭಿನಂದಿಸಿ ಒಂದೆರಡು ಒಳ್ಳೆ ಮಾತು ಹೇಳಿದರು. ಅವರು ನಾಲ್ಕು ಹೆಜ್ಜೆ ದೂರ ಹೋದಂತೆ ಕಟ್ಟೆ ಮೇಲೆ ಕುಳಿತ ಗಂಗಮ್ಮ ನನ್ನಮ್ಮನಿಗೆ ಹೇಳಿದಳು- “ನೋಡ ಸತ್ತ ಹೋದಕ್ಕಿ ಎಲ್ಲವ್ವನ ದಯೆಯಿಂದ ಇವತ್ತ ಇಲೆಕ್ಸನ್ ಗೆದ್ಲ.” ಅವಳ ಮಾತಿಗೆ ಅಷ್ಟೇನು ಗಮನ ಹರಿಸಿರಲಿಲ್ಲವಾದರೂ ‘ಸತ್ತು ಹೋದವಳು’ ಎಂಬ ಪದ ನನ್ನನ್ನು ಕೂತುಹಲಕ್ಕೀಡು ಮಾಡಿತು. ಇದರ ಹಿಂದೆ ಏನೋ ಕಥೆಯಿರಬಹುದು ಎಂಬ ಸಂಶಯ ಜನ್ಮ ತಾಳುತ್ತಿದ್ದಂತೆ ಗಂಗಮ್ಮನಿಗೆ ಪೂರ್ತಿ ವಿಷಯ ತಿಳಿಸುವಂತೆ ಪ್ರಚೋದಿಸಿದೆ. ಅಲ್ಲಿಗೆ ಆರಂಭವಾಯ್ತು ಗಂಗಮ್ಮನ ಬಾಯಲ್ಲಿ ಶಾಂತಕ್ಕನ ಕಥೆ;

ಅಂದು ಹುಣ್ಣಿಮೆ ಊರವರೆಲ್ಲ ಸವದತ್ತಿ ಯಲ್ಲಮ್ಮನ ಜಾತ್ರೆಗೆ ಹೋಗಲು ತಯಾರಾಗಿ ನಿಂತಿದ್ದಾರೆ. ಆಕಡೆ ಶಾಂತಕ್ಕ ತನ್ನ ಮೂರನೆಯ ಮಗುವಿಗೆ ಜನ್ಮ ಕೊಟ್ಟವಳು ಮರಳಿ ಕಣ್ಣೇ ತೆರೆದಿಲ್ಲ. ಮಗೂನ ಮಾತ್ರ ಉಳಿಸಿದ್ವಿ ತಾಯಿನಾ ಉಳಿಸೋಕೆ ಆಗಲಿಲ್ಲ ಎಂದು ಡಾಕ್ಟ್ರು ಹೇಳಾಯ್ತು. ಅಂತ್ಯ ಸಂಸ್ಕಾರ ನಡೆಸೋಕೆ ಅಂತ ದೇಹವನ್ನು ಊರಿಗೆ ತೆಗೆದುಕೊಂಡು ಬರ‍್ತಾ ಇದ್ರು. ವಾಹನ ಊರ ಪ್ರವೇಶದ್ವಾರ ದಾಟಿ ಬಸವಣ್ಣನ ಪಾದಗಟ್ಟಿ ತಲುಪುತ್ತಿದ್ದಂತೆ ಶಾಂತಕ್ಕ ಕಣ್ಣು ತೆರೆದಳು. ಇದು ಯಲ್ಲಮ್ಮ ತಾಯಿಯ ಮಹಿಮೆ ಎಂದು ತಿಳಿದು ಆಕೆಗೆ ಯಲ್ಲಮ್ಮದೇವಿಯ ಮುತ್ತುಗಳನ್ನು ಕಟ್ಟಲಾಯಿತು. ಸತ್ತವಳು ಮತ್ತೆ ಕಣ್ಣು ತೆರೆದಿದ್ದು ಪವಾಡವೇ ಸರಿ ಎನ್ನುವುದು ಕೆಲವರ ನಂಬಿಕೆಯಾದರೇ, ಅವಳಿಗೆ ಮೊದಲೇ ಮುತ್ತು ಕಟ್ಟುವಂತೆ ದೇವಿ ನುಡಿದಿದ್ದರೂ ಆಕೆ ಅದನ್ನು ನಿರಾಕರಿಸಿದ್ದೇ  ಅಂದು ಜೀವದೊಡನೆ ಆಟವಾಡುವ ಪ್ರಸಂಗ ಬಂದಿತ್ತೆನ್ನುವುದು ಇನ್ನು ಕೆಲವರ ನಿಲುವು. ತನ್ನ ಮಾತು ಕೇಳದ್ದಕ್ಕೆ ದೇವಿ ಅವಳ ಜೀವ ತೆಗೆದು ಎಚ್ಚರಿಸಿ ಮತ್ತೆ ಜೀವ ಕೊಟ್ಟಳಾ..?!

ಈ ಮುತ್ತುಗಳು ಶಾಂತಕ್ಕನ ಕಥೆಗಳಲ್ಲಿ ಮಾತ್ರವಲ್ಲ, ಉತ್ತರ ಕರ್ನಾಟಕದ ಅದೆಷ್ಟೋ ಹೆಂಗಸರ ಕೊರಳಲ್ಲಿ ಈ ಮುತ್ತುಗಳನ್ನು ಸರ್ವೇ ಸಾಮಾನ್ಯವೆಂಬಂತೆ ನೋಡಬಹುದು. ತೃತೀಯ ಲಿಂಗದವರಿಗಂತೂ ಇದು ಕಡ್ಡಾಯವೇ ಎನ್ನುವ ಹಾಗಿದೆ. ಪುರುಷರೂ ಇದರಿಂದ ಹೊರಗಿಲ್ಲ. ಕೆಲವು ಕಡೆ ಪುರುಷರು ಮುತ್ತು ಕಟ್ಟಿಸಿಕೊಂಡ ಬಳಿಕ ಹೆಣ್ಣಾಗಿ ಬದಲಾದರು ಎಂಬ ಸುದ್ದಿಗಳು ಇವೆ. ಅನೇಕ ಕಥೆಗಳಲ್ಲೂ ಓದಿದ್ದೇನೆ. ಆದರೆ ಅದರ ಸತ್ಯಾಸತ್ಯತೆಗಳು ನನಗೆ ಗೊತ್ತಿಲ್ಲ. ಅಂತಹ ದೃಶ್ಯಗಳಿಗೆ ನನ್ನ ಕಣ್ಣುಗಳು ಸಾಕ್ಷಿಯಾಗಿಲ್ಲ. ಅಷ್ಟಕ್ಕೂ ಈ ಮುತ್ತು ಕಟ್ಟಿಕೊಳ್ಳುವುದೆಂದರೇನು ಅಂತ ನಾನು ಚಿಕ್ಕವಳಿದ್ದಾಗ ಸುಮಾರು ಸಾರಿ ಅಜ್ಜಿಯ ಬಳಿ ಪ್ರಶ್ನಿಸಿದ್ದೆ. ನನ್ನಜ್ಜಿ ಎಂದೂ ದೇವರ ಕೋಣೆಗೆ ಹೋಗಿ ಕೈಮುಗಿದವರಲ್ಲ. ಇದೆಲ್ಲ ದೇವರ ಹೆಸರಿನಲ್ಲಾಡುವ ಹುಚ್ಚಾಟ ಎಂಬ ಸತ್ಯ ಅವರಿಗೆ ಗೊತ್ತು. ಆದರೆ ಬೇರೆ ಯಾರ ಮುಂದೆಯೂ ಅದನ್ನು ಸಾಬೀತು ಮಾಡುವ, ಉಪದೇಶಿಸುವ ಗೋಜಿಗೆ ಹೋದವರಲ್ಲ.

Gokak Falls column Sushma Savasuddi discussed Savadatti Yellamma jogathi rituals and superstitions

ಮುತ್ತುಗಳು

ಹೀಗಾಗಿ ನನ್ನ ಪ್ರಶ್ನೆಗೂ ಉತ್ತರ ಸಿಗುತ್ತಿರಲಿಲ್ಲ. ಊರಿಗೆ ಹೋದಾಗಲೆಲ್ಲ ನಾನೇ ನನ್ನ ಪ್ರಶ್ನೆಗಳಿಗೆ ಉತ್ತರ ಹುಡುಕಲು ಯತ್ನಿಸುತ್ತಿದ್ದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೆಟ್ಟಗಳ ಮಧ್ಯ ಯಲ್ಲಮ್ಮನ ದೇವಸ್ಥಾನವಿರುವುದು ಕರುನಾಡಿಗೆ ಪರಿಚಿತ. ಅದರಲ್ಲೂ ಉತ್ತರ ಕರ್ನಾಟಕದ ಪವಿತ್ರ ಸ್ಥಾನವೆಂಬ ಪ್ರತೀತಿ.  ಮಹಾರಾಷ್ಟ್ರದಿಂದಲೂ ಭಕ್ತರು ಹರಿದು ಬರುತ್ತಾರೆ. ಆ ದೇವಿಯ ಹೆಸರಲ್ಲಿ ಮುತ್ತು ಕಟ್ಟಲಾಗುತ್ತದೆ. ಯಾರೂ ತಾವಾಗೇ ಹೋಗಿ ಈ ಮುತ್ತುಗಳನ್ನು ಕಟ್ಟಿಸಿಕೊಂಡದ್ದನ್ನು ನಾನು ನೋಡಿಲ್ಲ. ಈಗಾಗಲೇ ಕಟ್ಟಿಸಿಕೊಂಡ ಹಿರಿಯರು ದೇವಿಯನ್ನು ಮೈದುಂಬಿಕೊಂಡು ಇಂತಹವರು ಕಟ್ಟಿಸಿಕೊಳ್ಳಬೇಕೆಂದು ಎಚ್ಚರಿಸುತ್ತಾರೆ, ಇವರಿಗೆ ಜೋಗತಿಯರು ಎಂದು ಕರೆಯುತ್ತಾರೆ. ಕೆಲವರಿಗೆ ಕೂದಲು ಸಿಕ್ಕಾಗಿ ಕಲ್ಲಾಂತಾದರೆ ಜಡೆ ಒಡಿದಿವೆ ಇದು ಮುತ್ತು ಕಟ್ಟಿಸಿಕೊಳ್ಳಲೇಬೇಕು ಎಂದು ದೇವಿ ನೀಡಿದ ಸೂಚನೆ ಎಂದು ಹೇಳುತ್ತಾರೆ.

ಇನ್ನು ಈ ಮುತ್ತುಗಳು ಪಾರಂಪರಿಕವಾಗಿ ಮುಂದುವರಿಯಬೇಕೆಂಬ ನಂಬಿಕೆಯೂ ಇದೆ. ಒಂದು ಕುಟುಂಬದ ಹಿರಿಯ ಮಹಿಳೆಗೆ ಮುತ್ತುಗಳಿದ್ದರೆ ಆಕೆಯ ಬಳಿಕ ಆಕೆಯ ಸೊಸೆಯೋ, ಮಗಳೊ ಅದಕ್ಕೆ ವಾರಸುದಾರರಾಗಿರಬೇಕು. ಒಂದು ವೇಳೆ ನಿರಾಕರಿಸಿದರೆ ಅವರ ಜೀವನದಲ್ಲಾಗುವ ಎಲ್ಲ ಕಷ್ಟಗಳಿಗೂ ಅದೇ ಕಾರಣ ಎಂಬ ಭಯಂಕರ ಬೆದರಿಕೆ ಹೆಜ್ಜೆ ಹೆಜ್ಜೆಗೂ ಇರುತ್ತದೆ. ಮುತ್ತು ಕಟ್ಟಿಸಿಕೊಂಡ ಬಳಿಕ ಬಹಳಷ್ಟು ಕಟ್ಟಳೆಗಳನ್ನು ಪಾಲಿಸಬೇಕಾಗುತ್ತದೆ. ವರ್ಷಕ್ಕೊಂದೆರಡು ಹುಣ್ಣಿಮೆಗೆ ಕಡ್ಡಾಯವಾಗಿ ಬರಿಗಾಲಲ್ಲಿ ಹರಿಜನ ಜನಾಂಗಕ್ಕೆ ಸೇರಿದ ಕೊಳದೊಂದಕ್ಕೆ ಹೋಗಿ ಪೂಜೆ ನಡೆಸಿ ಕನಿಷ್ಟ ಪಕ್ಷ ಐದು ಜನರ ಮನೆಗಾದರೂ ಹೋಗಿ ಭಿಕ್ಷೆ ಬೇಡಿ ಅಕ್ಕಿ, ಜೋಳ ಧಾನ್ಯಗಳನ್ನು ತರಬೇಕು. ಮಡಿ-ಮೈಲಿಗೆಗಳನ್ನು ಪಾಲಿಸಬೇಕು. ಊರಲ್ಲಿ ಯಾರಾದರೂ ಸತ್ತ ಸುದ್ದಿ ಕಿವಿಗೆ ಬಿದ್ದರೆ ಅಂತ್ಯ ಸಂಸ್ಕಾರವಾಗುವವರೆಗೆ ಹನಿ ನೀರು ಕುಡಿಯುವಂತಿಲ್ಲ. ಊಟದ ಮಧ್ಯೆ ದೀಪವಾರಿದರೆ, ಕರೆಂಟು ಹೋದರೆ ಊಟ ಅಲ್ಲಿಗೆ ನಿಲ್ಲಿಸಬೇಕು. ಪ್ರತಿವರ್ಷ ಉಟಗಿ ಉಡುವುದಂತೂ (ಒಂದು ತರಹದ ಹರಕೆ ಕೊಳದಲ್ಲಿ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ದೇವಿಗೆ ಪ್ರದಕ್ಷಿಣೆ ಹಾಕುವುದು) ಕಡ್ಡಾಯ. ಇನ್ನು ಏನೇನೋ ರೂಢಿಗಳು..!

ಮಕ್ಕಳ ಶಿಕ್ಷಣಕ್ಕಾಗಿ ನಗರದಲ್ಲಿದ್ದ ನೀಲಮ್ಮನ ಕೊರಳಲ್ಲೂ ಮುತ್ತುಗಳು ಜೋತಾಡುತ್ತಿವೆ. ಊರಲ್ಲಿ ನೀಲಮ್ಮನದ್ದು ಗೌರವಯುತ ಮನೆತನ. ಯಾವುದು ಮೌಢ್ಯ? ಯಾವುದು ಭಕ್ತಿ? ಎಂಬುದು ಅವಳ ಗಂಡನಿಗೆ ಗೊತ್ತು. ಅವಳಿಗೂ ಗೊತ್ತು. ಆದರೆ ಜನರಿಗೆ..? ಪ್ರತಿಬಾರಿ ಯಾವ ಧಾರ್ಮಿಕ ಕಾರ್ಯಕ್ಕೆ ಹೋದರೂ ಊರ ಸ್ವಾಮಿಗಳು, ಜೋಗತಿಯರದು ಒಂದೇ ಪಟ್ಟು “ನಿಂಗ ದೇವಿಯ ಮುತ್ತು ಬಂದಾವ ಯವ್ವಾ.. ಇಷ್ಟ ವರ್ಷ ನೀನ ಪೂಜೆ ಮಾಡಿದ ಮುತ್ತುಗಳು ಇಂದ ನಿನ್ನ ಕೊಳ್ಳಯೇರಾಕ ಬಯಸ್ಯಾವು..!” ನೀಲಮ್ಮನ ಗಂಡನ ಅಜ್ಜಿಗೆ ಈ ಮುತ್ತುಗಳಿದ್ದವು. ಅಜ್ಜಿಯ ನಂತರ ಇವಳೇ ಅವುಗಳ ಪೂಜೆ ಮಾಡುತ್ತ ಬಂದಿದ್ದಳು. ಇಂದು ಅದೇ ಮುತ್ತುಗಳು ಇವಳ ಮೇಲೆ ಆಸೆಪಟ್ಟಿವೆ ಎಂಬುದು ಎಲ್ಲರ ನಿಲುವು. ಆದರೆ ಅವಳಿಗಾಗಲಿ ಅವಳ ಮನೆಯವರಿಗಾಗಲಿ ಇದರ ಮೇಲೆ ನಂಬಿಕೆಯಿರಲಿಲ್ಲ. ಹೀಗಾಗಿ ಆಕೆ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಳು.

ಕೆಲದಿನಗಳ ಬಳಿಕ ಆಕೆ ಅನಾರೋಗ್ಯಕ್ಕೆ ತುತ್ತಾದಳು. ಆಕೆಗೆ ಆಗಿದ್ದು ಡೆಂಗ್ಯೂ, ಆ ಹಳ್ಳಿ ಡಾಕ್ಟರ್ ಕೊಟ್ಟಿದ್ದು ಮಲೇರಿಯಾ ಚಿಕಿತ್ಸೆ. ಇದು ಗೊತ್ತಾಗುವುದು ತಡವಾದ್ದರಿಂದ ಜೀವ ಬದುಕುಳಿದದ್ದೇ ದೊಡ್ಡ ವಿಷಯವಾಗಿತ್ತು. ಔಷಧದ ಅಡ್ಡಪರಿಣಾಮದಿಂದಾಗಿ ಕಾಲು ನೋವು, ಸಂದಿ-ಕೀಲು ನೋವುಗಳಿಂದ ಹೊರಬರಲು ಕಷ್ಟವಾಗಿತ್ತು. ಅಲೋಪತಿ, ಹೊಮಿಯೊಪತಿ, ಆಯುರ್ವೆದ ಎಲ್ಲ ಚಿಕಿತ್ಸೆಗಳ ಬಳಿಕವೂ ಆರೋಗ್ಯ ಚೇತರಿಸದಿದ್ದಾಗ, ಊರವರ ಮಾತಿನಂತೆ ಈ ಮುತ್ತುಗಳೇ ಕೊನೆಯ ಪರಿಹಾರ ಎಂಬ ನಂಬಿಕೆ ಅವಳಲ್ಲೂ ಮನೆಮಾಡಿತು. ಆಕೆಯ ನಂಬಿಕೆಯಾದರೂ ಆಕೆಯನ್ನು ಚೇತರಿಸಬಹುದೆಂಬ ವಿಶ್ವಾಸದಿಂದ ಆಕೆಯ ಮನೆಯವರು ಒಪ್ಪಿದರು. ಮುತ್ತು ಕೊರಳೇರಿದೊಡನೆ ರೋಗ ಮಾಯವಾಯಿತು. ಅದು ದೇವಿಯ ಶಕ್ತಿಯೋ, ಈ ಹಿಂದೆ ಅವಳಿಗೆ ನೀಡಿದ್ದ ಹೋಮಿಯೊಪತಿ, ಆಯುರ್ವೇದ ಇತ್ಯಾದಿ ಔಷಧಗಳ ಫಲವೋ? ನೀವೇ ನಿರ್ಧರಿಸಿ. ಮುತ್ತು ಕಟ್ಟಿಕೊಳ್ಳಲು ನಿರಾಕರಿಸಿದ್ದಕ್ಕೆ ಅನಾರೋಗ್ಯಕ್ಕೆ ಈಡಾದೆ. ಊರವರ ಮಾತು ಕೇಳಿ ಮುತ್ತು ಕಟ್ಟಿಕೊಂಡ ಬಳಿಕ ಆರಾಮಗೊಂಡೆ. ಆರೋಗ್ಯ ಅನಾರೋಗ್ಯವೆಲ್ಲ ಈ ದೇವಿ ಕೈಯಲ್ಲಿಯೇ ಇದೆಯೇ? ಇದೆಂತಹ ಭಕ್ತಿಯ ಬಂಧನ ಎಂಬ ಪ್ರಶ್ನೆಗಳು ಆಗಾಗ ಆಕೆಯನ್ನು ಕಾಡಲು ಶುರುಮಾಡಿವೆ. ಆದರೆ ಅವಳಿಗಿನ್ನೂ ಉತ್ತರ ಸಿಕ್ಕಿಲ್ಲ.

ಈ ವಿಷಯದ ಬಗ್ಗೆ ಸಮಾಜಶಾಸ್ತ್ರ ಉಪನ್ಯಾಸಕರ ಜೊತೆ ಚರ್ಚೆ ನಡೆಸಿದಾಗ ಅವರಿಂದ ಕೇಳಿದ ಕಥೆ ಅಂದು ಪೂರ್ತಿ ರಾತ್ರಿ ನನ್ನ ನಿದ್ದೆಗೆಡಿಸಿತ್ತು. ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದ ರೇಣುಕಾ ಇದ್ದಕ್ಕಿದ್ದಂತೆ ಶಾಲೆ ಬಿಟ್ಟಳು. ಸರ್ ವಿಚಾರಿಸಿದಾಗ ಗೊತ್ತಾಯಿತು, ಅವಳ ತಂದೆ ತನಗೆ ಗಂಡುಮಗುವಾದರೆ ಮಗಳಿಗೆ ಮುತ್ತು ಕಟ್ಟಿಸಿ ದೇವರಿಗೆ ಬಿಡುವುದಾಗಿ ಹರಕೆ ಹೊತ್ತಿದ್ದರಂತೆ. ಅದಕ್ಕೆ ಈಗ ಮಗಳು ದೊಡ್ಡವಳಾದ ಬಳಿಕ ಅವಳಿಗೆ ಮುತ್ತು ಕಟ್ಟಿಸಲು ಮುಂದಾಗಿದ್ದಾರೆ. ಮುತ್ತು ಕಟ್ಟಿಸಿಕೊಂಡ ಬಳಿಕ ಅವಳನ್ನು ಬಯಸಿದ ಗಂಡಸರಿಗೆಲ್ಲ ಆಕೆ ಸೆರಗು ಹಾಕಬೇಕು. ಮತ್ತೆ ಈ ಅನಾಚಾರಕ್ಕೆ ದೇವಿಯ ಸೇವೆ ಎಂಬ ಹೆಸರು..! ದೇವಿಯ ಮೂರ್ತಿಯೊಂದನ್ನು ಹಿಡಿದು ಭಿಕ್ಷೆ ಬೇಡಬೇಕು. ಆ ಹುಡುಗಿಗೆ ಈ ಕ್ರೂರತೆಗಳ ಯಾವ ಕಲ್ಪನೆಯೂ ಇಲ್ಲ. ಹೊಸ ಬಟ್ಟೆ ಕೊಡಿಸಿ ಸವದತ್ತಿ ಯಲ್ಲಮ್ಮನ ಜಾತ್ರೆಗೆ ಹೋಗೊಣ ಬಾ ಎಂದೊಡನೆಯೇ ಅವಳ ಅಪ್ಪನ ಕೈಹಿಡಿದು ಹೊರಟೇ ಬಿಟ್ಟವಳನ್ನು ಸರ್ ತಡೆದು, ಅವಳ ತಂದೆಗೆ ಬುದ್ಧಿ ಹೇಳಲು ಯತ್ನಿಸಿ ಸೋತರಂತೆ.

ಇದೆಂತಹ ಮೌಢ್ಯತೆಯ ಪರಾಕಾಷ್ಠೆ! ಗಂಡುಮಗುವಿನ ಆಸೆಗೆ ತನ್ನ ಮಗಳನ್ನೆ ಕಂಡಕಂಡ ಗಂಡಸರಿಗೆ ದೂಕುವ ಆ ತಂದೆಯ ವಿಚಾರಕ್ಕೆ ಮನುಷ್ಯತ್ವದ ಸಣ್ಣ ಕುರುಹು ಇರಲಿಲ್ಲವೇ? ಈ ನಾಚಿಕೆಗೇಡು ಅನಾಚಾರಕ್ಕೆ ದೇವರ ಹೆಸರೇಕೆ? ಮನುಷ್ಯನ ವಿಕಾರ ಮನಸ್ಥಿತಿಗಳಿಗೆ ಒಂದು ಎಲ್ಲೆಯೇ ಇಲ್ಲವೇ?

ಹೇಳು ಘಟಪ್ರಭೆ, ಬೆಟ್ಟಗಳ ಮಧ್ಯೆ ವಯ್ಯಾರದಿಂದ ಹರಿಯುವ ನಿನಗೆ ಈ ಸಲ್ಲದ ಮೌಢ್ಯಗಳನ್ನೆಲ್ಲ ನಿನ್ನ ಎಲ್ಲೆಯಿಂದ ಕಿತ್ತು ಹೊರಹಾಕುವ ಶಕ್ತಿ ಇಲ್ಲವೇ?

*

ಹಿಂದಿನ ಹರಿವು : Gokak Falls : ‘ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನ ಒಪ್ಪಿಸಲಾರೆವು ಹೀಗೆಲ್ಲ’ ಇನ್ನಾದರೂ ಮಾಡಿರೈ ಶಪಥ 

Published On - 12:33 pm, Fri, 10 December 21

ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ