Modern Love : ಮೀಟುಗೋಲು ; ಈಕೆ ರಾತ್ರಿಯ ಹುಡುಗಿ ಅವನು ಹಗಲಿನ ಹುಡುಗ

A Night Girl Finds a Day Boy : ಸರೀರಾತ್ರಿ ಬ್ರೇಕ್ ಫಾಸ್ಟ್ ತಿನ್ನುವ, ಹಗಲು ಸೂರ್ಯನನ್ನೇ ಕಾಣಲು ಬಯಸದ, 'ಎಲ್ಲರಂತೆ' ಇರದ, ತನ್ನ ಅಂತರ್ಮುಖಿತ್ವಕ್ಕೆ ನಿದ್ದೆಯ ನೆಪ ಹೇಳುವವಳ ಜೊತೆ ತನ್ನ ಭವಿಷ್ಯವನ್ನು ಕಲ್ಪಿಸಿಕೊಳ್ಳಲಾರದ ಅವ ಕೊನೆಗೆ ಆ ಸಂಬಂಧದ ಕುರಿತು ಏನು ನಿರ್ಧಾರ ತೆಗೆದುಕೊಳ್ಳಬಹುದು?

Modern Love : ಮೀಟುಗೋಲು ;  ಈಕೆ ರಾತ್ರಿಯ ಹುಡುಗಿ ಅವನು ಹಗಲಿನ ಹುಡುಗ
ಲೇಖಕಿ ರಮ್ಯಾ ಶ್ರೀಹರಿ
Follow us
ಶ್ರೀದೇವಿ ಕಳಸದ
|

Updated on:Dec 09, 2021 | 3:15 PM

Cinema : ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣಕ್ಕೆ ಓಡುತ್ತಲೇ ಇರುತ್ತೇವೆ, ಇದ್ದೇವೆ. ಆದರೂ ಬಿಡುವು ಮಾಡಿಕೊಂಡು ಒಂದು ಸಿನೆಮಾ ನೋಡುವ ಮನಸ್ಸು ಮಾಡುತ್ತೇವೆ; ಅರೆ! ಇಂಥದೇ ಒಂದು ಪಾತ್ರ, ಇಂಥದೇ ಒಂದು ಸನ್ನಿವೇಶ, ಇಂಥದೇ ಒಂದು ತಂತುವಿನೊಂದಿಗೆ ಜೀವಿಸುತ್ತಿದ್ದೇವಲ್ಲ ಎನ್ನಿಸಲಾರಂಭಿಸುತ್ತದೆ. ಎದುರಿನ ಪರದೆಯೊಳಗಿನ ಅಂತಃಸಾರ ಎದೆಮೆದುಳಿಗಿಳಿದು ಮೆಲ್ಲನೆ ಅಲೆಗಳನ್ನು ಹರಡುತ್ತದೆ. ಇಳಿದದ್ದು ಕಾಡದೇ ಇರದು, ಕಾಡುವುದು ಸುಮ್ಮನಿರಲು ಬಿಡದು. ಹಿಂಜಾಡಿ ಹಿಂಜಾಡಿ ಏನೇನೋ ನೆನಪುಗಳನ್ನುಕ್ಕಿಸುತ್ತದೆ, ಪ್ರಶ್ನೆಗಳನ್ನೆಬ್ಬಿಸುತ್ತದೆ. ಏಕೆಂದರೆ ಕಲೆ ಎನ್ನುವುದು ‘ರುಚಿಯವಿಚಾರ’, ನಮ್ಮ ಭಾವಭಿತ್ತಿಯನ್ನು ಮೀಟಿ, ಮೀರಿ ಪಾಕಗಟ್ಟುವ ಆತ್ಮಾವಲೋಕನದ ಪ್ರಕಾರ. ಈ ಪ್ರಕ್ರಿಯೆಯಲ್ಲಿ ನಿಮ್ಮನ್ನು ನೀವು ಕೆದಕಿಕೊಳ್ಳುತ್ತ ಅರಿವಿಲ್ಲದೆ ನೀವೇ ಒಂದು ಪಾತ್ರವಾಗಿಯೂ ನಿಂತುಬಿಡಬಹುದು! ಅಂತಹ ಅಭಿವ್ಯಕ್ತಿಗೊಂದು ವೇದಿಕೆಯಾಗಿ ‘ಟಿವಿ9 ಕನ್ನಡ ಡಿಜಿಟಲ್ : ಮೀಟುಗೋಲು’ ನೀವು ಬರೆದಾಗೆಲ್ಲ ಇದು ಪ್ರಕಟವಾಗುತ್ತದೆ. 

ನೀವು ನೋಡಿದ ಯಾವುದೇ ಭಾಷೆಯ ಸಿನೆಮಾ/ವೆಬ್​ ಸೀರೀಸ್ ಮತ್ತು ನಿಮ್ಮ ಬದುಕಿನ ಅನುಭವ ಪರಸ್ಪರ ಮಿಳಿತಗೊಂಡು ವಾಸ್ತವದ ಬಗ್ಗೆ ಯೋಚಿಸುವಂತೆ ಮಾಡಿದ ರೀತಿಯನ್ನು ಬರಹದ ಮೂಲಕ ಕಟ್ಟಿಕೊಡಬಹುದು. ಪದಮಿತಿ ಸುಮಾರು 600. ನಿಮ್ಮ ಸ್ಥೂಲ ಪರಿಚಯ, ಭಾವಚಿತ್ರವೂ ಇರಲಿ. ಮೇಲ್ :  tv9kannadadigital@gmail.com 

* ಕೆಲಕಾಲ ತರ್ಕಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ರಮ್ಯ ಶ್ರೀಹರಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಕಲೆ, ಅಧ್ಯಾತ್ಮ ಮತ್ತು ಜೀವನಸೌಂದರ್ಯ ಇವರ ಆಸಕ್ತಿ ಕ್ಷೇತ್ರಗಳು. ಅಮೇಝಾನ್ ಪ್ರೈಮ್ ವೆಬ್ ಸೀರೀಸ್ ‘ಮಾಡರ್ನ್ ಲವ್’ ಕುರಿತು ಈಗಿಲ್ಲಿ ಬರೆದಿದ್ದಾರೆ. *

ಬಂಧನ ಹೊರಗಿನದಲ್ಲ ಒಳಗಿನದೇ ಎಂದು ಅನೇಕ ಬಾರಿ ನಮಗೇ ಅನ್ನಿಸುತ್ತದೆ. ನಾವೆಲ್ಲರೂ ಈ ವಿಷಯದಲ್ಲಿ ಸಮಾನರು, ಎಲ್ಲರೂ ನಮ್ಮ ನಮ್ಮದೇ ಆವರಣದಲ್ಲಿ ಬಂಧಿತರು. ಗೋಡೆಯ ಮೇಲಿನ ನೆರಳಷ್ಟೇ ನಮಗೆ ಕಾಣಿಸುತ್ತದೆ, ನೆರಳ ಹಿಂದಿನ ನಿಜವಲ್ಲ ಎಂಬ ಪರಿಸ್ಥಿತಿಯಲ್ಲಿ ಇರುತ್ತೇವೆ. ನೆರಳ ಹಿಂದಿನ ನಿಜ ಒಮ್ಮೊಮ್ಮೆ ಕಾಣಿಸಿದರೂ ನಿಜದ ಪ್ರಖರತೆ ತಡೆಯಲಾರದೆ, ನಿಜಕ್ಕೆ ಹೊಂದಿಕೊಳ್ಳಲಾರದೆ ಒದ್ದಾಡುತ್ತೇವೆ. ನೆರಳು ನಿಜಗಳ ಈ ಹೋರಾಟ ನಮ್ಮ ಸಂಬಂಧಗಳ ನೆಲೆಯಲ್ಲಂತೂ ನಿತ್ಯವೂ ಘಟಿಸುವಂತದ್ದು. ನಮ್ಮ ಸತ್ಯ ಬೇರೆಯವರ ಸತ್ಯವಲ್ಲ, ಆದರೆ ಸತ್ಯ ನಮ್ಮೊಬ್ಬರದೇ ಆದಾಗ ಅದು ಸತ್ಯ ಎಂದು ಗುರುತಿಸಿಕೊಳ್ಳುತ್ತದೆಯೇ? ಒಂದೇ ಸತ್ಯ ಇಡೀ ಲೋಕಕ್ಕೆ ಅನ್ವಯಿಸುವುದಿಲ್ಲ ಎಂದಾದರೆ ನನಗೆ ಅನ್ವಯಿಸದ ಸತ್ಯವನ್ನು ನಾನು ಅರಿಯಬಲ್ಲೆನೆ? ಪರಸ್ಪರರ ಲೋಕದ ವಿಭಿನ್ನ ಸತ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗದಿದ್ದರೆ ಪ್ರೀತಿ ಎನ್ನುವುದಕ್ಕೆ ಆಗಲೂ ಅರ್ಥವಿರುತ್ತದೆಯೇ? ಇಂಥ ಹಲವು ಆಲೋಚನೆಗಳಿಗೆ ನನ್ನನ್ನು ತೆರೆದುಕೊಳ್ಳುವಂತೆ ಮಾಡಿದ್ದು ಅಮೇಝಾನ್  ಪ್ರೈಮ್ ನ ‘ಮಾಡರ್ನ್ ಲವ್’ ವೆಬ್ ಸೀರೀಸ್.

ಸಾಮಾಜಿಕ, ರಾಜಕೀಯ, ಆರ್ಥಿಕ ಬದಲಾವಣೆಗಳೊಟ್ಟಿಗೆ ಪ್ರೇಮದ, ದಾಂಪತ್ಯದ, ಸಂಬಂಧದ ಸ್ವರೂಪವೂ ಬದಲಾಗುತ್ತದೆ. ಈಗಿನ ದಿನಗಳಲ್ಲಿ ಲಿವ್ ಇನ್, ಸಲಿಂಗಕಾಮ, ತೃತೀಯ ಲಿಂಗಿಗಳ ಪ್ರೇಮಜೀವನ ಮುಂತಾದವು ಆಧುನಿಕ ಸಂಬಂಧದ ರೂಪಗಳು ಎನ್ನುವಂತೆ ಕಂಡರೂ, ಸಾಂಪ್ರದಾಯಿಕ ದಾಂಪತ್ಯದಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ವಿವಾಹೇತರ ಸಂಬಂಧಗಳು ಕಾನೂನಿನ ಪರಿಧಿಯೊಳಗೆ ಬರುವುದಿಲ್ಲ ಎಂಬ ಕೋರ್ಟ್ ನೀಡಿದ ತೀರ್ಪು, ಸಾಂಗತ್ಯದ ಬಯಕೆ ಜೀವನವನ್ನು ಪ್ರೀತಿಸುವ ಎಲ್ಲರಿಗೂ ಸಹಜ, ದಾಂಪತ್ಯದಾಚೆಗೆ ಪ್ರೇಮವನ್ನು ಹುಡುಕಿಕೊಳ್ಳುವುದಕ್ಕಿರುವ ಕಾರಣಗಳು ಮಾನವ ಸಂಬಂಧಗಳಷ್ಟೇ ಸಂಕೀರ್ಣ, ಅದನ್ನು ಅಪರಾಧವೆಂದು ಕರೆಯದಿರೋಣ ಎಂಬ ವಿವೇಕವನ್ನು ತನ್ನೊಳಗೆ ಹುದುಗಿಸಿಕೊಂಡಿದೆ.

ಆಧುನಿಕ ಸಂಬಂಧಗಳು ಸಹಬಾಳ್ವೆ ಮತ್ತು ವೈಯಕ್ತಿಕತೆಯ ನಡುವಿನ ಸಂಘರ್ಷಗಳನ್ನು ಮುನ್ನೆಲೆಗೆ ತರುತ್ತವೆ. ಈ ವೆಬ್ ಸೀರೀಸ್​ನ ಎರಡನೇ ಸೀಸನ್​ನ ಎರಡನೇ ಎಪಿಸೋಡ್ ‘A Night Girl Finds a Day Boy’ ಆಧುನಿಕ ಸಂಬಂಧಗಳ ಸಂಕಟವನ್ನು ಮೂವತ್ತೈದು ನಿಮಿಷಗಳಲ್ಲಿ ಚೆನ್ನಾಗಿ ಹಿಡಿದಿಡುತ್ತದೆ. ನಾಯಕಿ ನಿದ್ರೆಗೆ ಸಂಬಂಧಿಸಿದ ತೊಂದರೆಯಿಂದಾಗಿ ರಾತ್ರಿ ಪೂರ್ತಿ ಎಚ್ಚರಾಗಿದ್ದು, ಹಗಲು ನಿದ್ರಿಸುತ್ತಾಳೆ. ನಿದ್ರೆಯ ಸಮಯಕ್ಕೆ ಪೂರಕವಾಗಿರುವಂತೆ ಅವಳು ತನ್ನ ಕೆಲಸ ಮತ್ತು ಇತರ ಚಟುವಟಿಕೆಗಳನ್ನು ಹೊಂದಿಸಿಕೊಂಡಿರುತ್ತಾಳೆ. ಅವನು ‘ನಾರ್ಮಲ್’ ಎನಿಸಿಕೊಂಡಿರುವ ಹುಡುಗ, ಎಲ್ಲರಂತೆ ರಾತ್ರಿ ಮಲಗಿ ಹಗಲು ಕೆಲಸಕಾರ್ಯದಲ್ಲಿ ತೊಡಗಿಕೊಳ್ಳುವವನು, ಶಾಲೆಯೊಂದರಲ್ಲಿ ಶಿಕ್ಷಕ, ಸ್ನೇಹಪರ ವ್ಯಕ್ತಿತ್ವದವನು. ಇಬ್ಬರೂ ಆಕಸ್ಮಿಕವಾಗಿ ಭೇಟಿಯಾಗಿ ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ. ಇಬ್ಬರ ಲೋಕಗಳೂ ಹಗಲು ರಾತ್ರಿಗಳಂತೆ ಒಂದನ್ನೊಂದು ಸಂಧಿಸದೆಯೇ, ಒಂದರ ಹಿಂದೊಂದು, ಜೊತೆ ಜೊತೆಯಾಗಿಯೇ ಸಾಗುತ್ತಿರುತ್ತದೆ. ಮೊದಲ ದಿನಗಳ ಆಕರ್ಷಣೆಯಲ್ಲಿ ಇದು ಅಂಥದ್ದೇನೂ ದೊಡ್ಡ ತೊಡಕಾಗಿ ಇಬ್ಬರಿಗೂ ಕಾಣಿಸುವುದಿಲ್ಲ, ಕ್ರಮೇಣ ಆರಂಭದ ಉತ್ಸಾಹದ ಬಿಸಿ ಇಳಿದಂತೆ ವಾಸ್ತವದ ಅರಿವಾಗುತ್ತದೆ. ಅವರಿಬ್ಬರೂ ಯಾವ ಚಟುವಟಿಕೆಯಲ್ಲೂ ಒಟ್ಟಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಹಾಗೇನಾದರೂ ಒಟ್ಟಾಗಿ ಏನನ್ನಾದರೂ ಮಾಡಲು ಹೊರಟರಾದರೆ ಅಲ್ಲಿ ಇಬ್ಬರಲ್ಲಿ ಒಬ್ಬರು ತನ್ನ ನಿದ್ದೆಯನ್ನೋ, ಕೆಲಸವನ್ನೋ ಯಾವುದನ್ನಾದರೂ ಕಾಂಪ್ರಮೈಸ್ ಮಾಡಿಕೊಳ್ಳಬೇಕಾಗುತ್ತದೆ.

Meetugolu writer Ramya Shrihari penned about Modern love amazon prime web series

‘ಮಾಡರ್ನ್​ ಲವ್’ ನ ದೃಶ್ಯ

ಆಧುನಿಕ ಸಂಬಂಧದ ಒಂದು ಲಕ್ಷಣ ಇದು: ಇಲ್ಲಿ ನನ್ನತನ, ನನ್ನ ಆಸೆ ಆಕಾಂಕ್ಷೆ, ನನ್ನ ಪ್ರಿಯಾರಿಟಿ, ನನ್ನ ಬೌಂಡರಿ, ಇವುಗಳನ್ನು ಬಲಿಕೊಡದೆ, ಸಂಗಾತಿಯೂ ತನ್ನದನ್ನು ತ್ಯಾಗಮಾಡಬೇಕೆಂದು ಒತ್ತಾಯಿಸದೆ ಸಾಂಗತ್ಯದ ಆತ್ಮೀಯತೆ ಅನುಭವಿಸಬೇಕೆಂಬ ಹಂಬಲ. ಅದೂ ಸರಿಯೇ, ಏಕೆಂದರೆ ನನ್ನದೆಲ್ಲವನ್ನೂ ಬಿಟ್ಟುಕೊಟ್ಟಾಗ ಉಳಿಯುವ ಅಸಮಾಧಾನ ಯಾವ ಸೌಹಾರ್ದ ಸಂಬಂಧವನ್ನು ತಾನೇ ಪೋಷಿಸೀತು?

ಒಮ್ಮೆ ನಾಯಕ ತನ್ನ ತಾಯಿಯನ್ನು ಭೇಟಿಮಾಡಿಸುವ ಉದ್ದೇಶದಿಂದ ನಾಯಕಿಯನ್ನು ಮಧ್ಯಾಹ್ನದ ಊಟಕ್ಕೆ ಆಹ್ವಾನಿಸುತ್ತಾನೆ. ಹಗಲು ನಿದ್ದೆಯಲ್ಲಿದ್ದ ನಾಯಕಿ ಸರಿಯಾದ ಸಮಯಕ್ಕೆ ಬರಲಾಗದೆ ಕೊನೆ ಒಂದು ಘಳಿಗೆ ಮಾತ್ರ ತನ್ನ ತಾಯಿಯನ್ನು ಭೇಟಿಯಾದದ್ದಕ್ಕೆ ನಾಯಕ ಕೋಪಗೊಳ್ಳುತ್ತಾನೆ. ಸರೀರಾತ್ರಿ ಬ್ರೇಕ್ ಫಾಸ್ಟ್ ತಿನ್ನುವ, ಹಗಲು ಸೂರ್ಯನನ್ನೇ ಕಾಣಲು ಬಯಸದ, ‘ಎಲ್ಲರಂತೆ’ ಇರದ, ತನ್ನ ಅಂತರ್ಮುಖಿತ್ವಕ್ಕೆ ನಿದ್ದೆಯ ನೆಪ ಹೇಳುವವಳ ಜೊತೆ ತನ್ನ ಭವಿಷ್ಯವನ್ನು ಕಲ್ಪಿಸಿಕೊಳ್ಳಲಾರದ ಅವನು ಸಂಬಂಧಕ್ಕೆ ಅಂತ್ಯ ಹಾಡಲು ಬಯಸುತ್ತಾನೆ. ಇದಕ್ಕೇನೂ ಉತ್ತರ ಕೊಡದೇ ಅವಳೂ ಹೋಗಿಬಿಡುತ್ತಾಳೆ. ಸಂಬಂಧ ಮುರಿದುಕೊಂಡಮೇಲೆ ಒಂಟಿತನ, ಬಿಟ್ಟು ಬದುಕಲಾರದ ಅಸಾಹಾಯಕತೆ, ದುಃಖ ಆವರಿಸುತ್ತದೆ. ಜೊತೆಗಿದ್ದರೆ ಹೊಂದಾಣಿಕೆಯಿಲ್ಲ, ದೂರ ಸರಿದರೆ ಸುಖವಿಲ್ಲ, ಇದು ಎಲ್ಲ ಸಂಬಂಧಗಳ ಹಣೆಬರಹ. ಇದಕ್ಕೆ ಪರಿಹಾರ? ಸಂಗಾತಿ ಇರುವಂತೆಯೇ ಒಪ್ಪಿ ‘ಬದಲಾಗು’ ಎಂಬ ಒತ್ತಾಯವಿಲ್ಲದೆ, ಅವರ ಲೋಕದ ನಿಜವನ್ನೂ ಪ್ರೀತಿಸುವುದು, ಅವರಿರುವಂತೆಯೇ ಒಪ್ಪುವುದು. ನಾಯಕ ಕೊನೆಗೆ ಅದನ್ನೇ ಮಾಡುತ್ತಾನೆ. ತಾನು ಮುಂದೆ ವಾಸಮಾಡಲು ಬಯಸುವ ಮನೆಗೆ ಅವಳನ್ನು ಕರೆದುಕೊಂಡು ಹೋಗಿ, ಹೀಗೆ ಇಲ್ಲಿ ಒಟ್ಟಿಗೇ ಇರೋಣ ಎನ್ನುತ್ತಾನೆ. ಹೆಚ್ಚು ಹೊಂದಾಣಿಕೆ ಇಲ್ಲದಿದ್ದರೂ ಜೊತೆಗಿರೋಣ ಎಂಬ ಮಾತಿಗೆ ಅವಳು ಆಶ್ಚರ್ಯ ಪಡುತ್ತಾಳೆ.

‘ನಾವು ಪ್ರೀತಿಸುವವರು ತಮ್ಮದೇ ವಿಶಿಷ್ಟ ಲೋಕದಲ್ಲಿ ಇರುತ್ತಾರೆ ಎಂಬ ಸತ್ಯವನ್ನು ಮರೆತು ನಾವು ಅವರ ಲೋಕವನ್ನು ಅತಿಕ್ರಮವಾಗಿ ಪ್ರವೇಶಿಸಲು ಬಯಸುತ್ತೇವೆ. ಆದರೆ ಈಗ ನಾನು ನಿನ್ನ ಲೋಕದ ಸತ್ಯವನ್ನು ಪ್ರೀತಿಸುತ್ತಿರುವೆ, ನಾವು ಪರಸ್ಪರರ ಸತ್ಯವನ್ನು ಪ್ರೀತಿಸಬೇಕು’ ಎಂದು ಅವಳಿಗೆ ಹೇಳುತ್ತಾನೆ. ಅವಳು ತಾನು ಕಾಣದ ಹಗಲನ್ನು ಅವನ ಕಣ್ಣಲ್ಲಿ ನೋಡುತ್ತಾ, ಅವನು ತನ್ನ ರಾತ್ರಿಗಳನ್ನು ಅವಳ ಕಣ್ಣಲ್ಲಿ ಅರಸುತ್ತಾ ಮುಂದಿನ ಕಾಲ ಕಳೆಯುವ ಕನಸನ್ನು ಕಾಣುತ್ತಾರೆ.

ದಾಂಪತ್ಯ ಜೀವನದ ಅಥವಾ ಯಾವುದೇ ರೀತಿಯ ಸಹಜೀವನದ ದೊಡ್ಡ ಸವಾಲೆಂದರೆ ಇದೇ, ನಮ್ಮ ಭಿನ್ನತೆಗಳನ್ನು ಜೊತೆಗಿರುವವರು ‘ಸಹಿಸಿ’ ಬಾಳಬಹುದು ಆದರೆ ‘ಪ್ರೀತಿಸಿ’ ಬಾಳುತ್ತಾರೆಯೇ? ಭಿನ್ನತೆಗಳನ್ನು ಸಹಿಸುವುದೇ ಬೇರೆ ಪ್ರೀತಿಸುವುದೇ ಬೇರೆ ಅಲ್ಲವೇ? ಬೇರೆಯವರನ್ನು ಅರ್ಥಮಾಡಿಕೊಳ್ಳುವುದೆಂದರೆ ಪದಕೋಶದಲ್ಲಿ ಹುಡುಕಿ ತೆಗೆದು ಅರ್ಥ ಮಾಡಿಕೊಂಡಂತಲ್ಲ, ಅವರನ್ನು ಅವರ ಲೋಕದಲ್ಲಿರುವಂತೆಯೇ ಮೆಚ್ಚುವುದು. ಹಾಗಿಲ್ಲದೆ ಪ್ರೀತಿ ಎಂದರೇನು ಮತ್ತೆ?

ಇದನ್ನೂ ಓದಿ : Amazon Prime Video : ‘ನೆನಪುಗಳು ಮನಸ್ಸಿನಲ್ಲಿರಲಿ ಅಂತ ಇಟ್ಟುಕೊಳ್ಳಬೇಕು, ಯಾರನ್ನಾದರೂ ದೂಷಿಸುವುದಕ್ಕಂತ ಅಲ್ಲ’

Published On - 3:05 pm, Thu, 9 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ