New Novel : ಅಚ್ಚಿಗೂ ಮೊದಲು : ಕಥೆಗಾರ ಪದ್ಮನಾಭ ಭಟ್ ಶೇವ್ಕಾರ ಅವರ ಕಾದಂಬರಿ ‘ದೇವ್ರು’ ಇದೇ ಭಾನುವಾರ ಬಿಡುಗಡೆ

Literature : ‘ಮುಳ್ಳಿನ ಮೊನೆಯನ್ನು ಸೂಜಿತುದಿಯು ಮುಟ್ಟಿದ ಹಾಗೆ ಬರಹದ ಬೆರಳತುದಿಯಲ್ಲಿಯೇ ಬದುಕಿನ ಯಾವುದೋ ಆಳವನ್ನು ಸವರಿದಾಗ ಘಟಿಸುವ ಚುಳ್ಳನೆಯ ವಿಷಾದ. ಏಕಕಾಲದಲ್ಲಿ ಇಂದಿನಲ್ಲಿ ನಿಂತೇ ಮುಂದನ್ನು ಕಂಡೂ ಅತ್ತಲೇ ಸಾಗಬೇಕಾದ ವಿಷಾದ. ಅಥವಾ ಇದಾವುದೂ ಅಲ್ಲವೋ ಏನೋ. ಅದನ್ನು ಇದೇ ಅಂತ ಹಿಡಿದು ತೋರಲು ಸಾಧ್ಯವಿದ್ದರೆ ಸಾಹಿತ್ಯ ಯಾಕೆ ಬೇಕು?’ ಪದ್ಮನಾಭ ಭಟ್ ಶೇವ್ಕಾರ 

New Novel : ಅಚ್ಚಿಗೂ ಮೊದಲು : ಕಥೆಗಾರ ಪದ್ಮನಾಭ ಭಟ್ ಶೇವ್ಕಾರ ಅವರ ಕಾದಂಬರಿ ‘ದೇವ್ರು’ ಇದೇ ಭಾನುವಾರ ಬಿಡುಗಡೆ
ಕಥೆಗಾರ, ಪತ್ರಕರ್ತ ಪದ್ಮನಾಭ ಭಟ್ ಶೇವ್ಕಾರ್
Follow us
|

Updated on: Oct 19, 2021 | 11:14 AM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ದೇವ್ರು (ಕಾದಂಬರಿ) ಲೇಖಕರು : ಪದ್ಮನಾಭ ಭಟ್ ಶೇವ್ಕಾರ ಪುಟ : 360 ಬೆಲೆ : ರೂ. 350 ಮುಖಪುಟ ವಿನ್ಯಾಸ : ಅಪಾರ ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು

ಇದೇ ಭಾನುವಾರ (ಅ. 24) ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ವರ್ಲ್ಡ್​ ಕಲ್ಚರ್ ನಲ್ಲಿ ಬೆಳಗ್ಗೆ 10.30ಕ್ಕೆ ಈ ಕಾದಂಬರಿಯನ್ನು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅವರು ಬಿಡುಗಡೆ ಮಾಡಲಿದ್ದಾರೆ.

ಇದನ್ನು ಬರೆಯಲು ಕೂಡುವ ಹೊತ್ತಿಗೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೇಡ್ತಿ ನದಿ ಉಕ್ಕಿ, ನನ್ನೂರಿಗೂ ಹೊರಜಗತ್ತಿಗೂ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ನಡುಮಧ್ಯ ಮುರಿದುಬಿದ್ದಿದೆ. ಪ್ರತಿವರ್ಷ ಹೊಳೆ ಬಂದಾಗ ಆ ಸೇತುವೆ ಮೇಲೆ ನಿಂತು ನೋಡುವುದು, ಅದರ ಕಂಭಕ್ಕೆ ಹೊಳೆಯಲ್ಲಿ ತೇಲಿಬಂದ ದಿಮ್ಮಿಗಳು ಬಡಿದು ಕಂಪಿಸಿದಾಗ ಭಯಭೀತರಾಗುವುದು… ಎಷ್ಟೆಲ್ಲ ನೆನಪುಗಳು ಉಕ್ಕುತ್ತಿವೆ. ಮತ್ತೊಂದೆಡೆ ಪ್ರವಾಹದ ವಿವಿಧ ಚಿತ್ರ, ದೃಶ್ಯದ ತುಣುಕುಗಳು, ಉತ್ಸಾಹದಿಂದ ಕೊಡುತ್ತಿರುವ ವೀಕ್ಷಕ ವಿವರಣೆಯ ಪರಿಚಿತ ಧ್ವನಿಗಳು ಮೊಬೈಲ್‍ನೊಳಗೆ ಸಂದಣಿಗಟ್ಟಿ ಹೇಷಾರವಗೈಯುತ್ತಿವೆ. ಕೆಂಪಗೆ ಹೊಳೆಹೊಳೆಯುತ್ತ ಹರಿಯುತ್ತಿರುವ ಹೊಳೆಯ ಸರೀ ಒಳಸುಳಿಯ ಜಾಗಕ್ಕೇ ನಮ್ಮನ್ನು ಕರೆದೊಯ್ದು ಬಿಡುವಂತೆ ಕಾಣುತ್ತಿರುವ ಭಗ್ನಸೇತುವೆಯ ಚಿತ್ರ, ನಿಗೂಢ ರೂಪಕವಾಗಿಯೂ, ಗಾಢ ವಾಸ್ತವವಾಗಿಯೂ ದಿಕ್ಕೆಡಿಸುತ್ತಿರುವ ಈ ಹೊತ್ತಿನಲ್ಲಿ…

ಒಂದು ಕೃತಿ ಬರೆದು ಮುಗಿಸಿದ ಮೇಲೆ ಬರೆದವನ ಮನಸಲ್ಲಿ ಹುಟ್ಟುವ ಭಾವ ಯಾವುದು? ಸಂತೋಷವೋ? ನಿರಾಳವೋ? ಹೆಮ್ಮೆಯೋ? ಬಹುಶಃ ವಿಷಾದ… ತನ್ನೊಳಗೇ, ತನ್ನ ಭಾಗವಾಗಿಯೇ ತನ್ನಷ್ಟಕ್ಕೆ ಇದ್ದದ್ದು ಹರಿದು ಬೇರಾಗುತ್ತಿರುವ ವಿಷಾದ. ರಪಗುಟ್ಟಿ ಹೊಡೆಯುತ್ತಲೇ ಇರುವ ಅಲೆಗಳ ದೂರ ತಳ್ಳಲೂ ಆಗದೆ, ಬರಸೆಳೆದುಕೊಳ್ಳಲೂ ಆಗದೆ ಭರಿಸುತ್ತಲೇ ಇರುವ ದಡದ ರೇವಿನ ಮೌನ ವಿಷಾದ. ಮುಳ್ಳಿನ ಮೊನೆಯನ್ನು ಸೂಜಿತುದಿಯು ಮುಟ್ಟಿದ ಹಾಗೆ ಬರಹದ ಬೆರಳತುದಿಯಲ್ಲಿಯೇ ಬದುಕಿನ ಯಾವುದೋ ಆಳವನ್ನು ಸವರಿದಾಗ ಘಟಿಸುವ ಚುಳ್ಳನೆಯ ವಿಷಾದ. ಏಕಕಾಲದಲ್ಲಿ ಇಂದಿನಲ್ಲಿ ನಿಂತೇ ಮುಂದನ್ನು ಕಂಡೂ ಅತ್ತಲೇ ಸಾಗಬೇಕಾದ ವಿಷಾದ. ಅಥವಾ ಇದಾವುದೂ ಅಲ್ಲವೋ ಏನೋ. ಅದನ್ನು ಇದೇ ಅಂತ ಹಿಡಿದು ತೋರಲು ಸಾಧ್ಯವಿದ್ದರೆ ಸಾಹಿತ್ಯ ಯಾಕೆ ಬೇಕು? ಪದ್ಮನಾಭ ಭಟ್ ಶೇವ್ಕಾರ,  ಕಥೆಗಾರ, ಪತ್ರಕರ್ತ

ವಲಸೆಯಿಂದ ಹುಟ್ಟುವ ಘರ್ಷಣೆ ಮತ್ತು ಅನುಸಂಧಾನ ಮನುಷ್ಯ ಚರಿತ್ರೆಯ ಒಡಲಲ್ಲಿದೆ. ನೆಲೆ ಹುಡುಕುತ್ತ ಹೊರಟವರ ಚಲನಶೀಲತೆಯು ಇಂದು ಧರ್ಮ, ದೇಶ, ಭಾಷೆ, ವರ್ಣ ಇತ್ಯಾದಿಗಳ ನೆಪದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಇಂಥ ಮುಖ್ಯ ಸಮಸ್ಯೆಯೊಂದರ ಬಹುಮುಖಗಳನ್ನು ಅದರೆಲ್ಲ ಸಂಕೀರ್ಣತೆಯೊಡನೆ ಹಿಡಿಯುವ ಮಹತ್ವಾಕಾಂಕ್ಷೆ ಈ ಕಾದಂಬರಿಗಿದೆ. ಸಹ್ಯಾದ್ರಿ ತಪ್ಪಲಿನ ಹಳ್ಳಿಯೊಂದರ ಜೀವನವನ್ನು ಅದರ ಸೌಂದರ್ಯ, ಕ್ರೌರ್ಯ ಮತ್ತು ಕಟುವಾಸ್ತವತೆಯ ಹಿನ್ನೆಲೆಯಲ್ಲಿ ಶೋಧಿಸುತ್ತಲೇ ನಗರದ ಸಹವಾಸಗಳನ್ನೂ ಈ ಕಥನವು ಎದುರಿಗಿಡುತ್ತದೆ. ಆಧುನಿಕ ತಂತ್ರಜ್ಞಾನವು ನಮ್ಮೊಳಗೆ ಹುಟ್ಟಿಸಿರುವ ಹುಸಿ ತಿಳಿವಳಿಕೆಯ ಅಹಂಕಾರದ ಪುಗ್ಗೆಯನ್ನು ಒಡೆಯುತ್ತ, ಮನುಷ್ಯ-ಪ್ರಕೃತಿಯ ಸಂಬಂಧದ ಜಟಿಲತೆಯನ್ನು ಅರಿಯಲು ಅಗತ್ಯವಿರುವ ತಾಳ್ಮೆ, ಸಂಯಮ, ವಿನಯಗಳ ಮಹತ್ವವನ್ನು ಮನಗಾಣಿಸುತ್ತದೆ.

ವಿಶಾಲವಾದ ಹರಹಿನ ಕೃತಿಯುದ್ದಕ್ಕೂ ಕಾಣುವ ಸೂಕ್ಷ್ಮಜ್ಞತೆ, ಬದುಕಿನ ವಿಪರ್ಯಾಸಗಳನ್ನು ಕಾಣುವ ಎಚ್ಚರ, ನಿಲುವಿಗಾಗಿ ಹಾತೊರೆಯುವ ಆತುರವಿಲ್ಲದ ಬರವಣಿಗೆಯು ಸಶಕ್ತ, ಪ್ರತಿಭಾವಂತ ಕಾದಂಬರಿಕಾರನ ಬರುವನ್ನು ಸಾರುತ್ತಿದೆ. ವಿವೇಕ ಶಾನಭಾಗ, ಹಿರಿಯ ಕಾದಂಬರಿಕಾರ

Acchigoo Modhalu Devru novel by Padmanabh bhat Shevkar

(ಆಯ್ದ ಭಾಗ)

ಮನೆಗೆ ಹೋದಾಗ ಅತ್ತೆ, ಮಾವ ಇವರ ಬರುವಿಕೆಗೇ ಕಾದಿದ್ದವರಂತೆ ಬಾಗಿಲಲ್ಲೇ ನಿಂತಿದ್ದರು. ಅವರ ಮುಖದಲ್ಲಿನ ಕಾತರ ನೋಡಿಯೇ ದಿವ್ಯಾಳಿಗೆ ಇದು ಎಲ್ಲರೂ ಸೇರಿ ಹೆಣೆದಿರುವ ಜಾಲ ಎಂದು ಹೊಳೆದುಬಿಟ್ಟಿತು. ಸುಮಿತ್ರಕ್ಕ ಕುತೂಹಲ ಹತ್ತಿಕ್ಕಿಕೊಂಡು ಕಾಳಜಿ ತೋರಿಸುತ್ತ, ‘ಏನು? ಏನಂದ್ರು ಡಾಕ್ಟರು? ಪಿತ್ತ ಆಗಿದ್ಯಂತಾ? ಯಾಕ್ ವಾಂತಿ ಆಯ್ತು?’ ಎಂದು ಒಂದರ ಹಿಂದೆ ಇನ್ನೊಂದು ಪ್ರಶ್ನೆಗಳನ್ನು ಕೇಳುತ್ತಲೇ ಹೋದರು. ದಿವ್ಯಾ, ‘ಹೂ, ಪಿತ್ತ ಸಿಕ್ಕಾಪಟ್ಟೆ ಜಾಸ್ತಿ ಆಗಿದ್ಯಂತೆ. ಇಳಿಸ್ಕೊಳ್ಳಿ ಅಂದ್ರು’ ಎಂದು ಹೇಳಿ ತನ್ನ ಕೋಣೆಗೆ ಬಂದುಬಿಟ್ಟಳು. ಹರ್ಷ ಮತ್ತೆ ಅಪ್ಪ ಅಮ್ಮನ ಪಿಸುಮಾತು ಅವಳನ್ನು ಹಿಂಬಾಲಿಸಿತು.

ರೂಮಿನಲ್ಲಿ ಕೂತು, ಚೂಡಿದಾರದೊಳಗಿಂದ ಕೈ ತೂರಿಸಿ ತನ್ನ ಹೊಟ್ಟೆಯನ್ನು ಸವರಿಕೊಂಡಳು. ತನ್ನ ಜೀವದೊಳಗೆ ಇನ್ನೊಂದು ಜೀವ ರೂಪುಗೊಳ್ಳುತ್ತಿದೆ ಎಂಬ ಸಂಗತಿಯೇ ಅವಳಿಗೆ ಪುಳಕ ಹುಟ್ಟಿಸಿ, ಮೈ ರೋಮಗಳೆಲ್ಲ ನಿಮಿರಿದವು. ಹೊಟ್ಟೆಯೊಳಗೇ ಜೀವ ತಳೆದು, ಹೊರಬಂದು, ಅತ್ತು, ಹರೆದು, ಅಂಬೆಗಾಲಿಕ್ಕಿ, ನಡೆದು, ಬೆಳೆದು, ಶಾಲೆ, ಕಾಲೇಜಿಗೆಲ್ಲ ಹೋಗಿ ಏನೋ ಮಾಡುವ, ಎಲ್ಲೋ ಮುಟ್ಟುವ ಜೀವವೊಂದು ತನ್ನ ಜೀವನವನ್ನು ನನ್ನ ಹೊಟ್ಟೆಯೊಳಗಿಂದ ಶುರುಮಾಡುತ್ತಿದೆ ಎಂಬೆಲ್ಲ ಅಸ್ಪಷ್ಟ ಬಿಡಿ ಚಿತ್ರಗಳು ಮನಸಲ್ಲಿ ಮೂಡಿ, ಭಾವುಕತೆಯಲ್ಲಿ ಕಣ್ಣು ಒದ್ದೆಯಾಯ್ತು.

ಅದೇ ಸಮಯಕ್ಕೆ ಸರಿಯಾಗಿ ಸುಮಿತ್ರಕ್ಕ, ನರಸ ಹೆಗಡೆ, ಹರ್ಷ ಒಟ್ಟಿಗೇ ಒಳಗೆ ಬಂದರು. ದಿವ್ಯಾ ಕಣ್ಣೀರು ಒರೆಸಿಕೊಂಡಳು.

‘ಅರೆ, ಖುಷಿ ಸುದ್ದಿ ಹೇಳ್ಲೇ ಇಲ್ಲ ನೀನು. ಅಲ್ಲಾ ಕಣ್ಣೀರೆಂತಕ್ಕೆ? ಜಗತ್ತಲ್ಲಿ ಎಷ್ಟೋ ಜನರಿಗೆ ಮಕ್ಕಳೇ ಆಗೂದಿಲ್ಲ. ಅಂಥದ್ರಲ್ಲಿ ನಿಂಗೆ ಇಷ್ಟು ಬೇಗ ತಾಯಿ ಆಗೋ ಭಾಗ್ಯ ಕೊಟ್ಟಿದಾನೆ ದೇವ್ರು. ಖುಷಿಪಡು ಖುಷಿಪಡು’ ಎಂದು ವಿಚಿತ್ರ ಕೀರಲು ದನಿಯಲ್ಲಿ ಹೇಳುತ್ತ ಹೆಗಲು ಸವರಿದಳು ಸುಮಿತ್ರಕ್ಕ. ದಿವ್ಯಾಳಿಗೆ ಮೈಮೇಲೆ ಚೇಳು ಹರಿದಾಡಿದಂತಾಯ್ತು. ಮನಸ್ಸು ಕಲ್ಲು ಮಾಡಿಕೊಂಡು ಗಟ್ಟಿ ಕೂತಳು.

‘ಏನೇ ಆಗ್ಲಿ, ಪಾಪೂನ ಇವ್ರ ಹಾಗೆ ಬೆಳೆಸ್ಬಾರ್ದು. ಅದು ನನ್ನ ಹಾಗೆ ಮೋಸ ಹೋಗ್ಬಾರ್ದು. ಯಾವ್ದು ಸರಿ, ಯಾವ್ದು ತಪ್ಪು ಅಂತ ತಿಳಿಯೋ ಹಾಗೆ, ಗಟ್ಟಿ ಗಟ್ಟಿ ಮಾಡಿ ಬೆಳೆಸ್ಬೇಕು’ -ಹೊರಗಿನಿಂದ ಅತ್ತೆ, ಮಾವ, ಗಂಡ ಏನೇನೋ ಹೇಳುತ್ತಿರುವಾಗ, ದಿವ್ಯಾಳ ಮನಸ್ಸು ಹೀಗೆಲ್ಲ ಯೋಚಿಸುತ್ತಿತ್ತು.

ನಂತರದ ಕೆಲವು ದಿನಗಳು ಬಸಿರಿನ ಪುಳಕ, ಸಂಭ್ರದಲ್ಲಿಯೇ ಕಳೆಯಿತಾದರೂ ಅದು ಬಹುಬೇಗ, ಏರಿದ ಜ್ವರದ ಹಾಗೆ ಇಳಿಯುತ್ತ ಬಂತು. ಊಟಕ್ಕೆ ಕೂತಾಗ, ರಾತ್ರಿ ಮಲಗಿದ್ದಾಗ, ದೇವರ ಮುಂದಿದ್ದಾಗ, ಹೀಗೆ ಎಲ್ಲೆಂದರಲ್ಲಿ ವಾಕರಿಕೆ ಬರುತ್ತಿತ್ತು. ಆಗೆಲ್ಲ ಉಳಿದವರು ಅಸಹ್ಯಭಾವದಲ್ಲಿ ಅವಳನ್ನು ನೋಡುತ್ತಿರುವಂತೆ ಭಾಸವಾಗುತ್ತಿತ್ತು. ವಿಪರೀತ ಹೊಟ್ಟೆ ಹಸಿವು; ಆದರೆ ಬಾಯಿಗೆ ಏನು ಹಾಕಿದರೂ ಮರುಕ್ಷಣ ವಾಂತಿ. ‘ಮೂರು ತಿಂಗಳು ಕಳೆಯೋವರೆಗೂ ಇದೆಲ್ಲ ಇರೂದೇ. ಕೆಲವೊಬ್ರಿಗೆ ಐದು ತಿಂಗ್ಳಾದ್ರೂ ಇರ್ತದೆ’ ಎಂದು ಸುಮಿತ್ರಕ್ಕೆ ಹೇಳಿಬಿಟ್ಟಿದ್ದರು. ಕೊನೆಕೊನೆಗೆ ಎಲ್ಲರಿಗೂ ಅದು ರೂಢಿಯಾಗಿ ದಿವ್ಯಾಳಿಗೆ ವಾಂತಿ ಬಂದರೆ, ತಲೆಸುತ್ತು ಬಂದು ಕೂತರೆ ಯಾರೂ ನೋಡುತ್ತಲೂ ಇರಲಿಲ್ಲ.

ಸುಮಿತ್ರಕ್ಕ ಅಟ್ಟದ ಮೇಲಿನ ಚೀಲದಿಂದ ಯಾವ್ಯಾವುದೋ ಬೇರು ತಳೆದು ಕೊಡಲು ಶುರುಮಾಡಿದಳು. ದಿವ್ಯಾಳಿಗೆ ಅಡುಗೆ ವಾಸನೆ ಬಂದರೆ ಹೊಟ್ಟೆ ತೊಳಿಸುತ್ತಿತ್ತು. ಮೊದಮೊದಲು ಅತ್ತೆ ಕೊಡುತ್ತಿದ್ದ ಬೇರುಗಳನ್ನೆಲ್ಲ ತಿಂದಳು. ಕೊನೆಕೊನೆಗೆ ಅದರ ವಾಸನೆಗೂ ಹೊಟ್ಟೆ ತೊಳಿಸಲಾರಂಭಿಸಿತು. ‘ಬೇಡ’ ಅಂದ್ರೆ, ‘ಇದು ನಿಂಗಲ್ಲ. ನಿನ್ ಹೊಟ್ಟೆಲಿರೋ ನನ್ನ ಮೊಮ್ಮಗಂಗೆ. ತಿನ್ನು’ ಎಂದು ಹೇಳಿ ಒತ್ತಾಯ ಮಾಡುತ್ತಿದ್ದರು. ‘ಮೊಮ್ಮಗ ಅಂತ್ಲೇ ಹೇಗ್ ಹೇಳ್ತೀರಿ? ಮೊಮ್ಮಗಳಾದ್ರೆ?’ ಎಂದು ದಿವ್ಯಾ ಮರುಪ್ರಶ್ನೆ ಎಸೆದಳು. ‘ಹೂಂ, ಅದ್ಕೆಲ್ಲ ವ್ಯವಸ್ಥೆ ಮಾಡ್ಲಿಕ್ಕಾಗ್ತದೆ. ನಮ್ ಮನೆತನದಲ್ಲಿ ಎಲ್ಲರಿಗೂ ಮೊದ್ಲು ಗಂಡೇ ಹುಟ್ಟೂದು’ ಎಂದು ಎದ್ದು ಹೋದರು. ದಿವ್ಯಾಳಿಗೆ ಅವರ ಬಗೆಗಿನ ತಿರಸ್ಕಾರ ಇನ್ನಷ್ಟು ಹೆಚ್ಚಾಯ್ತು. ಏನು ಮಾತಾಡಿದರೂ, ‘ಇದು ನಿಂಗಲ್ಲ, ನಿನ್ನ ಹೊಟ್ಟೆಲಿರೋ ನನ್ ಮೊಮ್ಮಗಂಗೆ’ ಅನ್ನುವ ಮಾತು ಬರತೊಡಗಿತು. ದಿವ್ಯಾಳಿಗೆ ಆ ಮಾತು ಕೇಳಿ ಮೈಯೆಲ್ಲ ಉರಿಯುತ್ತಿತ್ತು. ‘ದೇವ್ರೇ ಇದು, ಹೆಣ್ಣುಮಗೂವೇ ಆಗಿರಲಿ’ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಳು.

ದಿವ್ಯಾಳಿಗೆ ಈಗ ಮೊದಲಿನ ಹಾಗೆ ಸಿಟ್ಟು, ದುಃಖಗಳನ್ನು ನುಂಗಿಕೊಂಡಿರಲು ಆಗುತ್ತಿರಲಿಲ್ಲ. ಅಸಹಾಯಕ ಅನಿಸಿದ ಕ್ಷಣದಲ್ಲಿ ಕೈಕಾಲು ನಡುಗಲಾರಂಭಿಸಿ, ಕಣ್ಣೀರು ಉಕ್ಕಿಬಿಡುತ್ತಿತ್ತು. ಕೋಪಬಂದರೆ, ಹಲ್ಲು ಕಟಕಟ ಕಡಿಯಲು ಶುರುವಾಗಿ ತಲೆಸುತ್ತು ಬಂದುಬಿಡುತ್ತಿತ್ತು.

ಹೀಗೆ ಒಂದುದಿನ, ಎಲ್ಲರೂ ಕೂತಿದ್ದಾಗ ಸುಮಿತ್ರಕ್ಕನೇ ವಿಷಯ ಎತ್ತಿದ್ದಳು. ‘ಅಂಸಳ್ಳಿಯಲ್ಲಿ ದೇವಸ್ಥಾನ ಭಟ್ರು ಒಂದು ಮದ್ದು ಕೊಡ್ತಾರಂತೆ. ಹಾಕಿಸ್ಕೊಂಡು ಬಂದ್ರಾಗ್ತಿತ್ತು. ತಗ್ಗಿನಕೇರಿ ಅಮ್ಮಕ್ಕನ ಸೊಸೆಗೆ ಹಾಕಿಸ್ಕೊಂಡು ಬಂದಿದ್ರು. ಅದ್ಕೆ ಗಂಡೇ ಆಗಿದ್ದು’ ಎಂದಳು. ದಿವ್ಯಾಳಿಗೆ ಅನುಮಾನವಾಗಿ, ‘ಏನು? ಏನ್ ಮದ್ದು ಅದು?’ ಕೇಳಿದಳು.

Acchigoo Modhalu Devru novel by Padmanabh bhat Shevkar

‘ಅದೊಂದು ಬೇರು ತಳೆದುಕೊಡ್ತಾರೆ. ಲೇಹ್ಯಾನೂ ಕೊಡ್ತಾರೆ. ಬೇರು ತಳೆದು ಮೂಗಿನಿಂದ ಬಿಟ್ಟುಕೊಂಡ್ರೆ ಗರ್ಭದಲ್ಲಿರೋ ಭ್ರೂಣ ಗಂಡಾಗ್ತದಂತೆ’ ಎಂದರು.

ದಿವ್ಯಾಳಿಗೆ ಏದುಸಿರು ಉಕ್ಕಿ ಮೈ ನಡುಗತೊಡಗಿತು. ಹರ್ಷನ ಕಡೆಗೆ ನೋಡಿದಳು. ಅವನು ತನಗೆ ಏನೂ ಕೇಳಿಸಿಯೇ ಇಲ್ಲ ಎನ್ನುವ ಹಾಗೆ ಮೊಬೈಲಿನಲ್ಲಿ ಮುಳುಗಿದ್ದ. ದಿವ್ಯಾ ಉಕ್ಕುತ್ತಿದ್ದ ಆಕ್ರೋಶವನ್ನು ತಡೆದುಕೊಂಡು, ‘ಅದೆಲ್ಲ ಬೇಡ’ ಎಂದಳು. ಸುಮಿತ್ರಕ್ಕ, ‘ಅಲ್ಲಾ… ಇದು ನಿಂಗಲ್ಲ, ನಿನ್ ಹೊಟ್ಟೆಲಿರೋ…’ ಎಂದು ಶುರುಮಾಡುತ್ತಿದ್ದ ಹಾಗೆ ದಿವ್ಯಾಳಿಗೆ ಆಕ್ರೋಶ ಕಟ್ಟೆಯೊಡೆಯಿತು. ಜೋರಾಗಿ, ‘ನನ್ ಹೊಟ್ಟೇಲಿರೋದು ನಂದೇ. ಅದ್ಕೆ ಏನ್ ಬೇಕು ಅಂತ ನಾನೇ ಡಿಸೈಡ್ ಮಾಡೂದು. ಆ ಮದ್ದನ್ನು ನಿಮ್ ಅಮ್ಮನೇ ತಿಂದಿದ್ರೆ ಎಷ್ಟೋ ಒಳ್ಳೆದಿತ್ತು’ ಎಂದು ಗುಡುಗಿ ಎದ್ದುನಿಂತಳು.

ಹರ್ಷ ದಡಬಡಾಯಿಸಿ ಮೊಬೈಲ್ ಪಕ್ಕಕ್ಕಿಟ್ಟು ತಿರುಗಿ ನೋಡಿದ. ಮಾವ ಕೂತಲ್ಲಿಂದ ಟಣ್ಣನೆ ಜಿಗಿದು ದಿವ್ಯಾಳ ಎದುರಿಗೆ ಬಂದು ದೊಡ್ಡ ಕಣ್ಣುಗಳನ್ನು ಬಿಟ್ಟು, ‘ಏಯ್ ಹೆಣ್ಣೇ…, ಇದು ನನ್ ಮನೆ. ಇಲ್ಲಿ ಇರ್ಬೇಕು ಅಂದ್ರೆ ನಾನ್ ಹೇಳ್ದಂಗೆ ಕೇಳ್ಕೊಂಡಿರ್ಬೇಕು. ನನ್ ಹೆಂಡ್ತಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಿದ್ರೆ… ಹೂಂ…’ ಎಂದು ಕೆಕ್ಕರಿಸಿ ನೋಡತೊಡಗಿದರು. ತನ್ನ ಎದೆಯೆತ್ತರಕ್ಕೂ ಬರದ ಅವರ ಕೆಕ್ಕರಿಸಿದ ನೋಟಕ್ಕೆ ಚೂರೂ ವಿಚಲಿತಳಾಗದೆ, ತುಸು ಬಾಗಿ, ಅಷ್ಟೇ ಜೋರಾಗಿ, ‘ಏನ್ ಮಾಡ್ತೀರಿ? ಈಗ, ಈ ಕ್ಷಣಾನೇ ಉಟ್ಟ ಬಟ್ಟೇಲಿ ಮನೆಬಿಟ್ಟು ಹೋಗ್ತೇನೆ ಬೇಕಾದ್ರೆ. ಆಮೇಲೆ ಈ ಮನೆ ಮೇಲೆ ಯಾರು ಯಾರದ್ದೆಲ್ಲ ಹಕ್ಕಿದೆ ಅಂತ ನೋಡ್ವ ಬೇಕಾದ್ರೆ. ನಾನೇನು ಇಲ್ಲಿ ಹೊಟ್ಟೆಗಿಲ್ದೆ ಬೇಡ್ಕೊಂಡು ಬಂದವ್ಳಲ್ಲ… ಅದೇನ್ ಮಾಡ್ತಿರೋ ಮಾಡಿ ನೋಡೇಬಿಡ್ವ’ ಎಂದು ಅವರ ಮುಖವನ್ನೇ ನೋಡುತ್ತ ನಿಂತಳು. ಸುಮಿತ್ರಕ್ಕ ಬಾಯಿಗೆ ಸೆರಗು ಹಾಕಿ ಮುಸಿಮುಸಿ ಅಳತೊಡಗಿದಳು. ಹರ್ಷ ಬಂದು ಅಪ್ಪನ ಬಳಿ ತುಸು ದೂರ ನಿಂತು ಹಿಂಜರಿಕೆಯಲ್ಲಿಯೇ, ‘ಅಪ್ಪಾ… ತಡಿಯೋ… ಸುಮ್ನಿರೋ’ ಎಂದು ಏನೇನೋ ಬಡಬಡಿಸತೊಡಗಿದ.

ದಿವ್ಯಾ ಅವನನ್ನೊಮ್ಮೆ ಅಸಹ್ಯಭಾವದಿಂದ ನೋಡಿ ದುಡುದುಡು ರೂಮಿಗೆ ಹೋಗಿ ಕೂತಳು. ಮೈ ಪೂರ್ತಿ ಬೆವರಿತ್ತು. ಹಲ್ಲುಕಚ್ಚಿ, ದವಡೆ ನೋಯುತ್ತಿತ್ತು. ಹೊಟ್ಟೆ ತೊಳಿಸಿಬಂತು. ವಾಂತಿಯಾದರೆ ಇಲ್ಲಿಯೇ ಆಗಲಿ ಎಂದು ಹಾಸಿಗೆಗಂಟಿ ಕೂತಳು. ವಾಂತಿಯಾಗಲಿಲ್ಲ. ಹೊರಗೆ ಸುಮಿತ್ರಕ್ಕ ಬಿಕ್ಕಳಿಸುವುದೂ, ಮಾವ ಭುಸುಗುಡುವುದೂ, ಹರ್ಷ ಅವರನ್ನು ಪಿಸುದನಿಯಲ್ಲಿಯೇ ಸಮಾಧಾನಿಸುವುದೂ ಕೇಳಿಸುತ್ತಿತ್ತು. ಈಗ ಒಮ್ಮೆ ಹರ್ಷ ತನ್ನ ಬಳಿಗೂ ಬಂದು ಸಂತೈಸಲಿ ಎಂದು ಮನಸ್ಸು ಬಯಸಿತು. ತನ್ನ ಹುಚ್ಚು ಆಸೆಗೆ ತನಗೇ ನಗುಬಂತು. ಎದ್ದು ಕಾಡೂರಿಗೆ ಹೋಗಿಬಿಡಲಾ ಎಂದು ಒಮ್ಮೆ ಯೋಚಿಸಿದಳು. “ಹೋಗಿ ಅಪ್ಪ ಅಮ್ಮನ ಎದುರಿಸುವುದು, ತನ್ನ ಗೋಳನ್ನು ಅವರಿಗೆ ಹೇಳುವುದೇ ಹಿಂಸೆ. ಇದು ನನ್ನ ಪಾಲಿಗೆ ಬಂದಿದ್ದು, ತಿನ್ನುವುದೋ ಉಗುಳುವುದೋ ತಾನೇ ಮಾಡಬೇಕು’ ಎಂದು ಗಟ್ಟಿ ಮನಸ್ಸು ಮಾಡಿಕೊಂಡು ನೆಲಕ್ಕೆ ಒರಗಿದಳು. ಹೊರಗಡೆಯಿಂದ ಇನ್ನೂ ಪಿಸುಪಿಸು ಗುಸುಗುಸು ಕೇಳಿಸುತ್ತಿತ್ತು.

Acchigoo Modhalu Devru Novel Padmanabh Bhat Shevkar

ಪದ್ಮನಾಭ ಅವರ ಕಥಾಸಂಕಲನಗಳು

ಪರಿಚಯ : ಬೆಂಗಳೂರಿನಲ್ಲಿ ನೆಲೆಸಿರುವ ಪದ್ಮನಾಭ ಭಟ್‌ ‘ಪ್ರಜಾವಾಣಿ’ಯಲ್ಲಿ ಪತ್ರಕರ್ತರು. 1990 ಜೂನ್‌ 27ರಂದು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶೇವ್ಕಾರ ಗ್ರಾಮದಲ್ಲಿ ಇವರ ಜನನ. ಸಿನಿಮಾ, ರಂಗಭೂಮಿ, ಸಾಹಿತ್ಯ ಇವರ ಆಸಕ್ತಿ ಕ್ಷೇತ್ರಗಳು. ಮೊದಲ ಕಥಾ ಸಂಕಲನ ‘ಕೇಪಿನ ಡಬ್ಬಿ’ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ, ಛಂದ ಪುಸ್ತಕ ಬಹುಮಾನ, ಮಾಸ್ತಿ ಕಥಾ ಪುರಸ್ಕಾರ, ಟೊಟೊ ಪುರಸ್ಕಾರಗಳು ಲಭಿಸಿವೆ.

(ಈ ಕಾದಂಬರಿಯ ಖರೀದಿಗಾಗಿ ಸಂಪರ್ಕಿಸಿ : ಅಂಕಿತ ಪುಸ್ತಕ)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ಇದೇ ಭಾನುವಾರ ಉದಯ ಇಟಗಿ ಅವರ ‘ಶೇಕ್ಸ್​ಪಿಯರನ ಶ್ರೀಮತಿ’ಯೊಂದಿಗೆ ಭೇಟಿ 

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ