Poetry : ಅವಿತಕವಿತೆ ; ‘ಚಹ ಮಾಡುವುದನ್ನು ಕಲಿತರೆ ಕೈ ಸುಡುವುದಿಲ್ಲ, ಖಂಡಿತವಾಗಿಯೂ ಯಶಸ್ಸು ಕಾಣುವಿರಿ’

Poem : ‘ಕವಿತೆ ಬರೆಯಬೇಕೆಂದುಕೊಂಡಾಗಲೆಲ್ಲ ಮನಸ್ಸು ಆರ್ದ್ರಗೊಂಡು, ನಂಜು ಕರಗಿ ಅಥವಾ ನಾನು ಕಳೆದು ಹೋಗಿ ಕೇವಲ ಆಶಯವಾಗಿಬಿಡುತ್ತೇನೆ. ‘ನಾನು’ ಇಲ್ಲವಾಗಲು, ‘ನಾನು’ ಕಳೆದು ಹೋಗಲು, ‘ನನ್ನನ್ನು’ ಬಿಟ್ಟು ಚಿಂತಿಸಲು ಕವಿತೆ ಸಾಧ್ಯವಾಗಿಸಿದೆ. ಹೀಗಾಗಿ ಕವಿತೆ ನನ್ನ ಅಭಿವ್ಯಕ್ತಿಯ ಪ್ರಿಯ ಮಾಧ್ಯಮ.’ ರವಿಕುಮಾರ ಜಿ. ಹಂಪಿ

Poetry : ಅವಿತಕವಿತೆ ; ‘ಚಹ ಮಾಡುವುದನ್ನು ಕಲಿತರೆ ಕೈ ಸುಡುವುದಿಲ್ಲ, ಖಂಡಿತವಾಗಿಯೂ ಯಶಸ್ಸು ಕಾಣುವಿರಿ’
Follow us
ಶ್ರೀದೇವಿ ಕಳಸದ
|

Updated on:Oct 17, 2021 | 10:57 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ರಾಯಚೂರಿನ ಆನ್ವರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿರುವ ರವಿಕುಮಾರ ಜಿ. ಹಂಪಿ ಅವರು ಕವಿ, ಅನುವಾದಕ. ಈಗಷ್ಟೇ ‘Animal Form (George Orwell), What I Talk About When I Talk About Running (Haruki Murakami) ಕೃತಿಗಳ ಅನುವಾದ ಕಾರ್ಯ ಮುಗಿಸಿ ಮುಂದಿನ ಹಂತದ ತಯಾರಿಯಲ್ಲಿ ಕೊಡಗಿಕೊಂಡಿದ್ದಾರೆ. ಧಾರವಾಡದ ಸಂಗಾತ ಪುಸ್ತಕದಿಂದ ಡಿಸೆಂಬರ್​ನಲ್ಲಿ ಈ ಕೃತಿಗಳು ಓದುಗರ ಕೈಸೇರುವ ನಿರೀಕ್ಷೆ ಇದೆ. ಆ ಮಧ್ಯೆ ಬರೆದ ಗಝಲ್ ಮತ್ತು ಕವಿತೆಗಳು ನಿಮ್ಮ ಇಲ್ಲಿ ನಿಮ್ಮ ಓದಿಗೆ.    

* ದೈನಂದಿನ ಅಪರೂಪದ ಕ್ಷಣಗಳಿಗೆ ಕಣ್ಣಾಗುವ ಮತ್ತು ಅವನ್ನು ತಾಜಾ ಎನ್ನುವಂತೆ ಬರೆಯಬಲ್ಲ ಅವರ ಕವಿತೆಗಳಲ್ಲಿ ಗತಕಾಲದ ಬೀಗದ ಕೈ, ಗೆಳತಿಯ ಬೆಚ್ಚಗಿನ ತೋಳ ಸ್ಪರ್ಶ ಮತ್ತು ಸಂಗಾತಿಯ ಓಲೈಕೆಗಾಗಿ ಹಪಹಪಿಸುವುದು ಎದ್ದು ಕಾಣುತ್ತದೆ. ಮನಸ್ಸು ಕುದಿವ ಕುಕ್ಕರಿನಂತಿದ್ದಾಗಲೂ ಅಭಿನಯಕೆ ಮಾನ್ಯತೆ ದಕ್ಕಿದ್ದೇಕೆಂದು ಪ್ರಶ್ನಿಸುತ್ತಲೇ ಸ್ನೇಹ ಯಾರ ಪಾಲಿನದು ಎಂದು ತಿಳಿಯದೆ ಒದ್ದಾಡುವ ಹಳವಂಡವಿದೆ. ಅವಳ ಹೂದೋಟವನ್ನೊಮ್ಮೆ ಸುಮ್ಮನೆ ದಿಟ್ಟಿಸಿ, ನೋವಾಗದಂತೆ ಹೂವ ನೇವರಿಸಿ, ಹೂ ಗಿಡದ ನೆರಳಲ್ಲಿ ಮಲಗಿ; ಏಳೇಳು ಜನುಮಗಳ ವಿರಹವನೆಲ್ಲ ಮಣ್ಣು ಮಾಡುವೆನು ಕರುಣೆ ತೋರು ಮಾಲಿ ಎಂಬ ನಿವೇದನೆ ಇದೆ. ತೀರಾ ನಿಕೃಷ್ಟ ಎನ್ನಿಸುವ ವಸ್ತುಗಳನ್ನು ಆಯ್ದು ಕವಿತೆ ಕಟ್ಟುವ ಚಾಲಾಕಿತನವು ಅವರಿಗೆ ದಕ್ಕಿದ್ದರೂ ಕವಿತೆಯ ಪರಿಣಾಮದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಂತೆ ತೋರುವುದಿಲ್ಲ. ಬಹು ದೂರದ ವಿಲಕ್ಷಣ ಕಾವ್ಯಯಾನಕ್ಕೆ ಬೇಕಾದ ಪರಿಕರಗಳನ್ನು ಪಡೆಯುವುದರತ್ತಲೇ ಅವರ ಗಮನ. ಶಿವರಾಜ ಬೆಟ್ಟದೂರು, ಕವಿ

*

ಕವಿತೆಗಳು ಅಪ್ಪಿದ ತಪ್ಪಿಗೆ

ಅಪ್ಪಿಕೊಳ್ಳುತ್ತೇನೆ ನಾನು ಕೆಲವರನ್ನು ಅಂಗಿ ತಾಕುವಂತೆ

ಮತ್ತೆ ಕೆಲವರನ್ನು ಎದೆಬಡಿತ ಕೇಳುವಂತೆ

ಇನ್ನೂ ಕೆಲವರನ್ನು ಮೈಮನಸು ಒಂದಾಗಿಸುವ ಮಗುವಿನಂತೆ

ಕೆಲವೇ ಕೆಲವರ ಇರವು ಮಾತ್ರ ಆತ್ಮ ಕರಗಿ ಒಂದಾಗುವಂತೆ ಮಾಡುತ್ತದೆ

*

ಚಹ ರೆಸಿಪಿ

ಭಾಗ-1

ಹೆಂಡತಿ ಊರಿಗೆ ಹೋಗುವ ಮೊದಲು ನಿಮಗೆ ಕಲಿಸಿಕೊಟ್ಟಂತೆ ಮೊದಲು ಸಾಧ್ಯವಿರುವಷ್ಟು ಸಣ್ಣಗೆ ಉರಿ ಬರುವಂತೆ ಸ್ಟವ್ ಹಚ್ಚಿಟ್ಟುಕೊಳ್ಳಿ ಕೈಗೆ ಉರಿ ತಾಕದಂತೆ ಪಾತ್ರೆ ಇಡಿ ನೀರು ಕುದಿಯುವಾಗ ಅದಕ್ಕೆ ಸಕ್ಕರೆ ಮತ್ತು ಚಹಪುಡಿ ಬೆರೆಸಿರಿ ಮತ್ತೂ ಕುದಿಸಿರಿ ಘಮ ಬರುತ್ತಿರುವಾಗ ಅದಕ್ಕೆ ಹಾಲು ಬೆರೆಸಿ ಸೋಸಿರಿ ಒಂದು ಕೈಯಲ್ಲಿ ಕಪ್ಪು ಹಿಡಿದುಕೊಂಡು ಇನ್ನೊಂದು ಕೈಲಿ ಪೇಪರ್ ಓದುತ್ತ ಖುಷಿಯಿಂದ ಕುಡಿಯಿರಿ

ಭಾಗ-2 ಎರಡು ಗುಟುಕು ಕುಡಿದ ನಂತರ ಮುಖ ಕಿವಿಚಿಕೊಂಡೇ ಸಿಂಕ್‌ಗೆ ಹೋಗಿ ಉಗಿದು ಉಪ್ಪುಪ್ಪಾದ ಬಾಯಿ ತೊಳೆದುಕೊಂಡು ಬಾಯಿಗಿಷ್ಟು ಸಿಹಿ ಅಡಿಕಿ ಹಾಕಿಕೊಂಡು ಪ್ಯಾಂಟು ಶರಟು ಧರಿಸಿ ಹೋಟೆಲಿನಲಿ ಚಹ ಕುಡಿದು ಬನ್ನಿರಿ ಉಳಿದಂತೆ ಇನ್ನೊಂದು ಬಾರಿ ಹೆಂಡತಿ ಊರಿನಿಂದ ಬಂದ ನಂತರ ಸೋಷಿಯಲ್ ಡಿಸ್ಟನ್ಸ್ ಇಟ್ಟುಕೊಂಡೇ ಚಹ ಮಾಡುವುದನ್ನು ಕಲಿತರೆ ಕೈ ಸುಡುವುದಿಲ್ಲ, ಖಂಡಿತವಾಗಿಯೂ ಯಶಸ್ಸು ಕಾಣುವಿರಿ.

*

AvithaKavithe Ravikumar Hampi

ಕೈಬರಹದೊಂದಿಗೆ ರವಿಕುಮಾರ

ನಾನೇಕೆ ಕಾವ್ಯದ ಮೊರೆ ಹೋಗುತ್ತೇನೆ? ಏನನ್ನಾದರೂ ವಿಶೇಷವಾಗಿ, ಪರಿಣಾಮಕಾರಿ, ಹೃದಯಕ್ಕೆ ತಾಕುವಂತೆ ಹೇಳಬೇಕೆನ್ನಿಸಿದಾಗ ಕಾವ್ಯದ ಮೊರೆ ಹೋಗುತ್ತೇನೆ. ಸಪ್ಪೆ ಮಾತುಗಳ ಬದಲಿಗೆ ಪ್ರತಿಮೆ, ರೂಪಕಗಳ ಮೂಲಕ ಹೇಳಲು ಕಾವ್ಯ ನೆರವಾಗುತ್ತದೆ. ಕಾವ್ಯ ನನ್ನನ್ನು ಇನ್ನಷ್ಟು ಸಂವೇದನಾಶೀಲನನ್ನಾಗಿಸಿದ್ದಕ್ಕೆ ಮತ್ತು ಅದು ನನ್ನ ಬಗೆಗೆ ನನಗೆ ವಿಶಿಷ್ಟ ಭಾವನೆ ಹುಟ್ಟು ಹಾಕುವುದರಿಂದ ಕಾವ್ಯಕ್ಕೆ ಶರಣಾಗಿದ್ದೇನೆ. ಕಾವ್ಯ ನನಗೆ ಇಷ್ಟ ಏಕೆಂದರೆ ಇಲ್ಲಿ ಭಿನ್ನಾಣವಿದೆ, ವೈಯಾರ ಇದೆ, ಆದರೆ ಕಪಟ ಇಲ್ಲ. ಗೆಳೆಯರೊಂದಿಗೆ ಏನೆಲ್ಲ ವಿಚಾರಗಳನ್ನು ಚರ್ಚಿಸುತ್ತೇವೆ. ಆದರೆ ಅವೇ ವಿಷಯಗಳನ್ನು ಕವಿತೆಯನ್ನಾಗಿಸಲು ಹೊರಟಾಗ ನನ್ನೊಳಗೆ ಏನೋ ಒಂದು ಪರಿವರ್ತನೆಯಾಗಿ ನನ್ನೊಳಗಿನ ನಂಜು, ಚೂಪಾದ ಒರಟು ಮಾತುಗಳನ್ನು ಬದಿಗಿರಿಸಿ ಸಮಾಜಮುಖಿಯಾಗಿ, ನಯವಾಗಿ, ಹೃದಯಸ್ಪರ್ಶಿ ಮತ್ತು ಪರಿಣಾಮಕಾರಿಯಾಗಿ ಹೇಳಲು ಹೊರಡುತ್ತೇನೆ. ಇಲ್ಲಿನ ವಿಭಿನ್ನ ದೃಷ್ಟಿಕೋನ ಶಬ್ದಗಳಿಗೆ ವಿಶಿಷ್ಟ ಧ್ವನಿ ಒದಗಿಸುತ್ತದೆ. ಕವಿತೆ ಬರೆಯಬೇಕೆಂದುಕೊಂಡಾಗಲೆಲ್ಲ ಮನಸ್ಸು ಆರ್ದ್ರಗೊಂಡು, ನಂಜು ಕರಗಿ ಅಥವಾ ನಾನು ಕಳೆದು ಹೋಗಿ ಕೇವಲ ಆಶಯವಾಗಿಬಿಡುತ್ತೇನೆ. ‘ನಾನು’ ಇಲ್ಲವಾಗಲು, ‘ನಾನು’ ಕಳೆದು ಹೋಗಲು, ‘ನನ್ನನ್ನು’ ಬಿಟ್ಟು ಚಿಂತಿಸಲು ಕವಿತೆ ಸಾಧ್ಯವಾಗಿಸಿದೆ. ಹೀಗಾಗಿ ಕವಿತೆ ನನ್ನ ಅಭಿವ್ಯಕ್ತಿಯ ಪ್ರಿಯ ಮಾಧ್ಯಮ. ಕವಿತೆಯಿಂದ ನಾನು, ಸಮಾಜ ಸುಧಾರಿಸುತ್ತದೆಯಾ? ಗೊತ್ತಿಲ್ಲ. ಆದರೆ ಬದಲಾಗಬೇಕೆನ್ನುವ ಸುಪ್ತ ಆಸೆ ಇದ್ದರೆ, ಅದಕ್ಕೆ ಪುಟ ಕೊಡುತ್ತದೆನ್ನುವುದಂತೂ ಸ್ಪಟಿಕ ಸತ್ಯ.

ಬರೆದದ್ದು ಕಾವ್ಯವೋ, ಬದುಕಿದ್ದು ಕಾವ್ಯವೋ ಅನ್ನುವುದಿನ್ನೂ ಅರಿಯಬೇಕಿದೆ. ಬಿಸಿಲಿರುವಾಗಿನ ಮಳೆಯಲ್ಲಿ ಕಾಮನಬಿಲ್ಲು ಮೂಡುವಂತೆ ಆಗಾಗ ಹೊಳೆದ ವಿಚಾರಗಳು, ಮನಸಿನ ಹಳವಂಡಗಳು, ಬದುಕಿನ ಸಂಕಟಗಳು, ತುಮುಲಗಳು, ಉದ್ವೇಗ ಹತಾಶೆ, ಸಂತೋಷ, ನೆಮ್ಮದಿ, ಸಾರ್ಥಕತೆಯ ಸಮಯದಲ್ಲಿ ಅಂತರಂಗದಲ್ಲಿ ಮೂಡಿದ ಬೆಳಕು ಅಕ್ಷರಗಳಾಗಿ ಕಾವ್ಯ ಅನಿಸಿಕೊಳ್ಳುತ್ತಿವೆ. ನಾನು ಕಾವ್ಯವನ್ನು ರಚಿಸಿದ್ದಕ್ಕಿಂತ ಕಾವ್ಯ ನನ್ನನ್ನು ರಚಿಸಿದೆ. ಒಂದು ಪುಟ್ಟ ಸ್ಟಂಟ್ ಹೃದಯಾಘಾತ ತಪ್ಪಿಸುವಂತೆ ಬದುಕು ಜೋಲಿ ಹೊಡೆದಾಗ, ಆಯತಪ್ಪಿದಾಗ ಕಾವ್ಯ ಕೈ ಹಿಡಿದಿದ್ದಿದೆ. ಕಾವ್ಯ ನನ್ನ ಆತ್ಮ ಪ್ರಜ್ಞೆ, ಧೈರ್ಯ ಕೂಡ!

*

ಪುಂಡಿಪಲ್ಯ

ಹೀಗೇ ಅವಳು ಹತ್ತುರೂಪಾಯಿಗೆ ಎರಡು ಸಿವುಡು ಅಂದಾಗ ಮುಖ ಸಿಂಡರಿಸಿ, ನಾಲ್ಕು ಕೊಡು ಎಂದು ಕೈಸನ್ನೆಯಿಂದಲೇ ಕೇಳಿದೆ ಅವಳ ಕಣ್ಣೊಳಗೇನಿತ್ತೋ ಒಂದೂ ಮಾತಾಡದೆ ಮುಖ ಕೆಳಗಿಳಿಸಿ ನಾಲ್ಕು ಸಿವುಡುಗಳನ್ನು ಎತ್ತಿ ಕೊಟ್ಟಳು ನನಗೇನೋ ಖುಷಿಯಾಗಲಿಲ್ಲ ಆರಾದರೂ ಕೇಳಬೇಕೆನಿಸಿತ್ತು, ಕಾಲ ಮಿಂಚಿತ್ತು ಚೀಲದಲ್ಲಿ ಹಾಕಿಕೊಂಡು, ಆರಿಸಿ ಹಳೆಯ ನೋಟನ್ನವಳಿಗೆ ನೀಡಿದೆ

ಅಚ್ಚ ಹಸಿರಿನ ಎಳೆಯ ಎಲೆಗಳ ಸಿವುಡು ಕಂಡಾಗ ಮಡದಿಗೆ ಅವಳ ಮೆಚ್ಚಿನ ಪುಂಡಿಪಲ್ಯದ ಸರ್​ಪ್ರೈಝ್ ಕೊಡಬೇಕೆಂದುಕೊಂಡೆ ಕ್ಷಣಾರ್ಧದಲ್ಲಿ ಸೋಸಿ, ತೊಳೆದಾಗ ಎಲ್ಲಿತ್ತೋ ಗೊತ್ತಿಲ್ಲ ಮಂದನೆಯ ಮಣ್ಣಿನ ರಾಡಿ ಹರಿಯಿತು ಅದು ನನ್ನ ದುರಾಸೆಯೇ? ಅವಳಿಗಾದ ನಿರಾಸೆಯೇ? ಜಿಜ್ಞಾಸೆ ನಡೆಸಲಿಲ್ಲ, ಮನೆಯವಳ ಮೆಚ್ಚಿಸಲೇಬೇಕಿತ್ತು, ತುಸು ತೊಗರಿಬೇಳೆಯೊಂದಿಗೆ ಕುದಿಸಿದೆ

ನನ್ನ ಮನಸ್ಸೂ ಕುದಿವ ಕುಕ್ಕರಾಗಿತ್ತು ಪುಂಡಿಪಲ್ಯ ಮಾಡಲು ನನ್ನೊಡನೆ ಯಾರಾರೋ ಕೈಜೋಡಿಸಿದ್ದರು ಬಿತ್ತಿದ ರೈತ, ಕಳೆತೆಗೆದ ಹೆಂಡತಿ, ಎಣ್ಣೆ ಹೊಡೆದ ಮಗ, ಕಿತ್ತಿದ ಆಳು ಸಿವುಡು ಕಟ್ಟಿದ ರೈತನ ಮಗಳು ಮಾರುಕಟ್ಟೆಗೆ ಹೊತ್ತ ಕೂಲಿಯಂವ ಎಲ್ಲರ ಬೆವರಿಗೆ, ನನ್ನ ಹೆಂಡತಿಯ ಪ್ರೀತಿಗೆ ಚೌಕಾಶಿ ಮಾಡಿ ಹತ್ತು ರೂಪಾಯಿಯ ಬೆಲೆ ಕಟ್ಟಿದ್ದೆ ಕುಕ್ಕರು ಸೀಟಿಯಾದಾಗ ನಾ ಬೆವೆತಿದ್ದೆ

ಹೊರತೆಗೆದು ಒಗ್ಗರಣೆಕೊಟ್ಟಾಗ ಪುಂಡಿಪಲ್ಯದ ಗಿಳಿ ಹಸಿರು ಕರಗಿ ಕರ‍್ರಗೆ ಪುಂಡಿ ಚಟ್ನಿಯಾಗಿತ್ತು ಮನಸ್ಸೂ ಮುದುಡಿ, ಮೊದಲ ಸಲ ನನ್ನವಳ ಮೆಚ್ಚಿಸಿದ್ದು ನೆನಪಾಯಿತು ಅವಳ ಹುಟ್ಟುಹಬ್ಬಕೆ ಐದುನೂರು ರೂಪಾಯಿಯ ಹಸಿರುಮರ ಚಿತ್ರದ ಗ್ರೀಟಿಂಗ್ ಕಾರ್ಡ್ ಕೊಟ್ಟಿದ್ದೆ, ಆಗ ನನ್ನವಳು ಹೇಳಿದ್ದಳು ‘ನೀವು ನನಗೆ ತುಂಬ ಇಷ್ಟ, ಪ್ರೀತಿಪಾತ್ರರಿಗೆ ಏನೇ ಕೊಂಡರೂ ಚೌಕಾಶಿ ಮಾಡುವುದಿಲ್ಲ ಬೆಲೆ ಕಟ್ಟುವುದಿಲ್ಲ’

*

ಗಝಲ್

ಹೃದಯದಲಿರುವ ಪ್ರೀತಿ ಯಾರ ಪಾಲಿನದೆಂದು ತಿಳಿಯದು ಎದೆಯಲಡಗಿದ ಸ್ನೇಹ ಯಾರ ಪಾಲಿನದೆಂದು ತಿಳಿಯದು

ತೇಲುವ ಮೋಡದ ಜೀವ ಕರುಣೆ ಯಾವ ನೆಲಕಿದೆಯೋ ಕರುಣೆಯಿರದ ಕನಸುಗಳು ಕಾಡುವುದೇಕೆಂದು ತಿಳಿಯದು

ದೊರೆಯದುದಕೆ ಸದಾ ಹಲುಬುವುದು ಮನಸದೇತಕೋ ಇಲ್ಲಿ ಅಭಿನಯಕೆ ಮಾನ್ಯತೆ ದೊರತದ್ದೇಕೆಂದು ತಿಳಿಯದು

ಹಗಲು ರಾತ್ರಿಗಳಿಗೆ ಇಷ್ಟೊಂದು ದ್ವೇಷ ಯಾಕಿದೆಯೋ ಪ್ರತಿ ಗಳಿಗೆಯೂ ವಿರಹಕೆ ಶರಣಾದದ್ದೇಕೆಂದು ತಿಳಿಯದು

ತನ್ನ ಪಾಡಿಗೆ ತಾನಿರದೆ ರವಿಯೆದೆ ಸದಾ ಸುಡುವುದೇಕೋ ಪತಂಗದ ಜೀವ ದೀಪಕೆ ಮರುಳಾದುದೇಕೆಂದು ತಿಳಿಯದು

AvithaKavithe Ravikumar G Hampi

ರವಿಕುಮಾರ ಅವರ ಮೊದಲ ಗಝಲ್ ಸಂಕಲನ

ಪರಿಚಯ : ರವಿಕುಮಾರ ಹಂಪಿ ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಿ ಗ್ರಾಮದವರು. ಪ್ರಸ್ತುತ ಲಿಂಗಸಗೂರು ತಾಲೂಕಿನ ಆನ್ವರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿದ್ದಾರೆ. 2007ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಸಹಾಯ ಪಡೆದ ‘ಸಖ-ಸಖಿ’ ಗಝಲ್  ಸಂಕಲನ ಸೃಷ್ಟಿ ಪ್ರಕಾಶನದಿಂದ ಪ್ರಕಟಗೊಂಡಿದೆ. ಅನುವಾದದಲ್ಲಿ ಆಸಕ್ತಿ ಹೊಂದಿರುವ ಇವರು ಇತ್ತೀಚಿಗೆ ಇಂಗ್ಲೀಷ್ ಕಾದಂಬರಿಗಳತ್ತ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸಂಚಯ ಕಾವ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.

ಇದನ್ನೂ ಓದಿ :Poetry : ಅವಿತಕವಿತೆ ; ‘ಸೋಲು ಗೆಲುವಿಲ್ಲದ ಪಂದ್ಯದಿಂದ ಹುಟ್ಟಿದವ ನೀನು ಮತ್ತೆ ಮತ್ತೆ ಪಂದ್ಯ ಕಟ್ಟುತ್ತೀ’

Published On - 10:52 am, Sun, 17 October 21

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್