H.S. Raghavendra Rao‘s Birthday: ಅವಿತಕವಿತೆ ; ನಿದ್ದೆಯನರಿಯದ ನವಿರಿನ ಲೋಕವೆ ನಿನ್ನ ಅಂಜುಸ್ಪರ್ಶ

ಶ್ರೀದೇವಿ ಕಳಸದ

|

Updated on:Aug 01, 2021 | 3:56 PM

Literature : ಸುಮಾರು 350 ಕವಿತೆಗಳನ್ನು ಮಾತ್ರ ಬರೆದಿರುವ ನೊಬೆಲ್ ಪುರಸ್ಕೃತೆ ಶಿಂಬೋರ್ಸ್ಕಾ ಅವರಿಗೆ ಈ ಬಗ್ಗೆ ಪ್ರಶ್ನಿಸಿದಾಗ, ‘ನಮ್ಮ ಮನೆಯಲ್ಲಿ ಕಸದ ಬುಟ್ಟಿಯಿದೆ’ ಎಂದು ಉತ್ತರಿಸಿದ್ದರಂತೆ. ಅವರ ಕಾವ್ಯದಲ್ಲಿ ಖಚಿತತೆ ಮತ್ತು ವ್ಯಂಗ್ಯಗಳಿವೆ, ಜೀವನದ ವಾಸ್ತವ ಸಂಗತಿಗಳ ಚೌಕಟ್ಟಿನಲ್ಲಿ, ಚಾರಿತ್ರಿಕ ಹಾಗೂ ಜೈವಿಕ ಸಂದರ್ಭಗಳನ್ನೂ ಅಳವಡಿಸಿಕೊಳ್ಳಲು ಈ ಗುಣಗಳು ಅವರಿಗೆ ನೆರವಾಗಿವೆ.’ ಡಾ. ಎಚ್. ಎಸ್. ರಾಘವೇಂದ್ರ ರಾವ್

H.S. Raghavendra Rao‘s Birthday: ಅವಿತಕವಿತೆ ; ನಿದ್ದೆಯನರಿಯದ ನವಿರಿನ ಲೋಕವೆ ನಿನ್ನ ಅಂಜುಸ್ಪರ್ಶ

Follow us on

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಈಗಿಲ್ಲಿ ಹಿರಿಯ ಲೇಖಕ, ಅನುವಾದಕ ಮತ್ತು ಕನ್ನಡದ ಪ್ರಮುಖ ವಿಮರ್ಶಕರುಗಳಲ್ಲಿ ಒಬ್ಬರಾದ ಡಾ. ಎಚ್.ಎಸ್. ರಾಘವೇಂದ್ರ ರಾವ್ ಅವರ ಒಂದು ಕವಿತೆ ಇರುವುದು ವಿಶೇಷ. ಜೊತೆಗೆ ಅವರು ಭಾವಾನುವಾದ ಮಾಡಿದ ಪೋಲೆಂಡಿನ ನೊಬೆಲ್ ಪುರಸ್ಕೃತ ಕವಿ ವಿಸ್ಲಾವಾ ಶಿಂಬೋರ್ಸ್ಕಾ, ಬಂಗಾಲಿಯ ಜೀಬನಾನಂದ ದಾಸ್ ಅವರ ಕವಿತೆ ಮತ್ತು ಶೇಕ್ಸ್​ಪಿಯರ್​ ಅವರ 60ನೇ ಸಾನೆಟ್ ಕೂಡ ನಿಮ್ಮ ಓದಿಗಿವೆ.

*

ಕೆಲವು ಜನರು

ಪೋಲಿಷ್ ಮೂಲ : ವಿಸ್ಲಾವಾ ಶಿಂಬೋರ್ಸ್ಕಾ, ಪೋಲೆಂಡ್

ಯಾವಾಗಲೂ ಅಷ್ಟೆ. ಯಾವುದೋ ದೇಶದಲ್ಲಿ, ಸುಡುವ ಸೂರ್ಯನ ಕೆಳಗೆ, ಮೋಡಗಳ ಕೆಳಗೆ ಕೆಲವು ಜನ ಓಡಿಹೋಗುತ್ತಿರುತ್ತಾರೆ, ಕೆಲವರಿಗೆ ಹೆದರಿ.

ಬಿಟ್ಟುಹೋಗುತ್ತಾರೆ, ಒಂದಿಷ್ಟು ಬದುಕು, ಬೀಜಬಿತ್ತಿದ ಹೊಲಗಳು, ಕೋಳಿಗಳು, ನಾಯಿಗಳು, ಕನ್ನಡಿಗಳು, ಕನ್ನಡಿಯಲ್ಲಿ ಮುಖನೋಡಿಕೊಳ್ಳುತ್ತಿರುವ ಬೆಂಕಿಗಳು.

ಕುಸಿವ ಹೆಗಲಿನ ಮೇಲೆ ಪಾತ್ರೆಪಗಡಗಳು, ಗಂಟುಮೂಟೆಗಳು, ದಿನದಿಂದ ದಿನಕ್ಕೆ, ಖಾಲಿಯಾದಂತೆಲ್ಲ ಭಾರವಾಗುವ ಬಡಹೊಟ್ಟೆಪಾಡುಗಳು.

ಕಳ್ಳನಂತೆ ಪಯಣವನ್ನು ನಿಲ್ಲಿಸಿ, ಎಲ್ಲಿಯೋ ನೆಲಸುವವನೊಬ್ಬ ಸದ್ದುಗದ್ದಲದಲ್ಲಿ, ಯಾರದೋ ರೊಟ್ಟಿಯನ್ನು ಯಾವನೋ ಕದ್ದ. ಮತ್ತೊಬ್ಬ, ಸತ್ತ ಮಗುವಿನ ನಾಡಿಬಡಿತ ನೋಡುತ್ತಿದ್ದ.

ಮುಂದೆ ಚಾಚಿವೆ ಹಲವು ಹಾದಿಗಳು. ಬಿಡುಗಡೆಗೋ ಕೊನೆಕಡೆಗೋ? ಅದೇಕೋ ಗುಲಾಬಿಬಣ್ಣ ತಳೆದ ನದಿಯಮೇಲೆ, ಇರಬಾರದ ಸೇತುವೆ. ಅವರ ಸುತ್ತ, ಒಂದಿಷ್ಟು ಮದ್ದುಗಂಡು, ಒಮ್ಮೆ ಹತ್ತಿರದಲ್ಲಿ, ಒಮ್ಮೆ ದೂರದಲ್ಲಿ ಅಗೊ, ಮೇಲೆ ಸುತ್ತುತ್ತಿದೆ ಹದ್ದುವಿಮಾನ.

ಅದೃಶ್ಯವಾಗಲು ಸಾಧ್ಯವಿದ್ದರೆ, ಎಷ್ಟೊಂದು ಚೆನ್ನ ಅಥವಾ ಕಣ್ಣಿಗೆ ಕಾಣದ ಬಂಡೆಯ ಬಣ್ಣ? ಇಲ್ಲದಿರುವಿಕೆಯಂತು ಇನ್ನಷ್ಟು ಚೆನ್ನ. ಕೊಂಚ ಕಾಲ ಅಥವಾ ಅನಂತಕಾಲ.

ಇನ್ನೂ ಏನೋ ಆಗಬೇಕಿದೆ. ಏನು ಮತ್ತು ಯಾವಾಗ? ಅವರ ಕಡೆಗೆ ಯಾರೋ ಬರುತ್ತಾರೆ. ಯಾರು ಮತ್ತು ಯಾವಾಗ? ಯಾವ ಯಾವ ಆಕಾರದಲ್ಲಿ? ಯಾವ ಯಾವ ಯಾವ ಉದ್ದೇಶದಿಂದ? ಆಯ್ಕೆಯ ಅವಕಾಶ ಕೊಟ್ಟರೆ, ಅವರು ಕೂಡ ಶತ್ರುವಾಗುವ ಹಿಂಸೆ ಒಲ್ಲೆನೆನಬಹುದು, ಇವರಿಗೂ ಬಾಳಿತ್ತು ತೆರಳಬಹುದು.

avithakavithe

ಬಂಗಾಳದ ಕವಿ ಜೀಬನಾನಂದ ದಾಸ್ ಮತ್ತು ಪೊಲ್ಯಾಂಡ್​ನ ಪ್ರಸಿದ್ಧ ಕವಿ ವಿಸ್ಲಾವಾ ಶಿಂಬೋರ್ಸ್ಕಾ

ನೀಲಿಮ ಗಗನ ವಿತಾನ

ಬೆಂಗಾಲಿ ಮೂಲ : ಜೀಬನಾನಂದ ದಾಸ್

ಹೊಳೆಬೆಳಕನು ತುಳುತುಳುಕುವ ಉದಯದ ಮುಗಿಲೇ, ನಡು ಇರುಳಿನ ಕಡುನೀಲಿಯೆ ಕೊನೆಯಿಲ್ಲದ ಚೆಲುವೆ ಮರಮರಳಿಯು ನೀ ಕಾಣುವೆ ಈ ನಗರದ ಮೇಲೆ ಗತಿಯಿಲ್ಲದ ಈ ನಗರದ ಸೆರೆಗೋಡೆಯ ಮೇಲೆ

ಇಲ್ಲಿ ಹರಿಯುವುದು ಹೊಗೆಹಾವಿನ ನುಲಿನುಲಿಯುವ ನೀಲಿ ಅನ್ನವು ಬೇಯುವ, ಒಡಲಬೇಗೆಗಳ ಸುಡುಬೆಂಕಿಯ ಬೇಲಿ ಮರುಭೂಮಿಯ ಬಿಸಿಯುಸಿರಲಿ ಮಿಂದಿಹ ಕೆಂಗಲ್ಲು ಅದಕಿರುವುದು ಬಿಸಿಲ್ಗುದುರೆಯ ಇಲ್ಲದ ನೀರ್‌ಚೆಲ್ಲು

ಹುಡುಕುವ ತಡಕುವ ಬಿಡುಗಡೆ ಕಾಣದ ಯಾತ್ರಿಕ ಹೃದಯ ಕಾಲನು ಕಟ್ಟಿಹ ಸಂಪ್ರದಾಯಗಳ ಬೇಡಿಗೆ ಇಲ್ಲ ದಯ ಎವೆ ಮಿಟುಕದ ನೀಲಾಗಸವೇ ಮಾಂತ್ರಿಕ ನೀನು ಮಾಂತ್ರಿಕದಂಡದಿ ಒಡೆದು ತೆಗೆದಿರುವೆ ಈ ಜೈಲಿನ ಬಾಗಿಲನು

ಈ ಜನಗಳ ಈ ಗಲಭೆಯ ನಡುವೆಯೆ ನಾ ಮೌನಿ ನೀ ಹೆಣೆದಿಹ ಮಾಂತ್ರಿಕ ಬಲೆ ಗುಟ್ಟುಗಳದೆ ಧ್ಯಾನಿ ಯಾವುದೊ ದೂರದ ನಿಗೂಢ ತಾಣದಿ ಬಲೆ ಹೆಣೆಯುವೆ ಜಾಣ ವಾಸ್ತವಲೋಕದ ರಕ್ತಿಮ ದಡಕ್ಕೆ ನಿನ್ನಯ ಆಗಮನ.

ಹರಳು ಬೆಳಕುಗಳ ಹರಹಿನ ಮೇಲಕೆ ನಿನ್ನ ನೀಲಿ ಹೊದಿಕೆ ಮಾತನೆ ಮರೆತಿಹ ಕನಸಿನ ನವಿಲಿನ ರೆಕ್ಕೆಯು ಸಮ ಅದಕೆ ಕಿರಾತಖಂಡಿತ ಧರೆರಕ್ತದ ಕಲೆ ಮರೆತಿವೆ ಕಣ್ಣು ಕಡೆಯಿಲ್ಲದ ಬಾನಿನ ಕಡೆ ನೆಗೆದಿದೆ ದೀಪದ ಹೂಕಣ್ಣು

ಗಳಿತ ವಸ್ತ್ರಗಳ ಪಲಿತ ಮುಂಡಗಳ ಭಿಕ್ಷುಗಳದೆ ಸರಣಿ ಹಾದಿಯೊ ನಿಷ್ಕರುಣಿ.

ಸಾಯಲು ನಡೆದಿಹ ಲಕ್ಷ ಲಕ್ಷಜನ ತುಂಬಿದ ಈ ಜೈಲು ಕತ್ತಲ ಸುತ್ತಲು ಹೊಗೆಯ ಮುಸುಕಿಹುದು ಈ ಧೂಳು ಎಲ್ಲ ಮುಳುಗುವುವು ನೀಲ ನಭದಲ್ಲಿ ಹಲವು ಹತ್ತು ಬಾಳು ಸ್ವಪ್ನ ವಿಸ್ತರಿತ, ಭಯ ವಿಹ್ವಲಿತ ಕಣ್ಣಿನ ಮನೆಪಾಲು

ಚಿಕ್ಕೆಬೆಳಕಿರುವ ಹೊಳೆಯುವ ಬಾನಿನ ಶಂಖಶ್ವೇತ ಮೋಡಗಳ ಮಡಿಲೊಳಗೆ

ನಿದ್ದೆಯನರಿಯದ ನವಿರಿನ ಲೋಕವೆ ನಿನ್ನ ಅಂಜುಸ್ಪರ್ಶ ಇದೊ ಒಡೆದಿದೆ ಕ್ರಿಮಿಸಮ ಭೂಮಿಯ ಒಣಗಿದ ಕೋಶ.

avithakavithe shakespeare

ಕವಿ ವಿಲಿಯಂ ಶೇಕ್ಸ್​ಪಿಯರ್

ಸಾನೆಟ್ 60

ಇಂಗ್ಲಿಷ್ ಮೂಲ : ವಿಲಿಯಂ ಶೇಕ್ಸ್ಪಿಯರ್

ಚಲಿಸುವಂತೆ ಕಡಲಿನ ಅಲೆ ಕಲ್ಲುಗೋರಿಯ ಕಡೆಗೆ ಧಾವಿಸುತಿವೆ ಬಾಳನಿಮಿಷ ಅಂತ್ಯದ ಅನಿವಾರ್ಯಕೆ ಮೊದಲು ಮಡಿದ ತೆರೆಯ ಹಿಂದೆ, ಇನ್ನೊಂದರ ನಡಿಗೆ ಈ ಕ್ಷಣ ಆ ಕ್ಷಣ ಊ ಕ್ಷಣ ಎಲ್ಲವು ಓಡಿವೆ ಮುಕ್ತಾಯಕೆ

ಕಡಲಂಚಲಿ ಹುಟ್ಟಿಹೊಳೆದ ಬೆಳಕಿನೊಂದು ಹೊನಲು ತೆವಳಿದೆ ನಡುಹಗಲ ಕಡೆಗೆ, ಸಿದ್ಧಿಯ ಕಿರೀಟ ತಲೆಗೆ ಶುರುವಾಯಿತು ಅಧಃಪತನ, ಗ್ರಹಣ, ಇರುಳು ಬರಲು ಕಾಲ ಕೊಟ್ಟ ಕೊಡುಗೆಯೀಗ ಅವನಿಂದಲೆ ಮಣ್ಣಿಗೆ

ಹರೆಯದ ವೈಭವದ ನಡುವೆ, ನಾಟಿದೆ ಕಾಲದ ಸಬಳ ಚೆಲುವಿನ ಹಣೆಗೆರೆಗಳಲ್ಲಿ ಸೀಳುವ ನೇಗಿಲ ದಾಳಿ ನೆಲದೊಡಲಿನ ಅತ್ಯಪೂರ್ವ ಸೊಬಗು ಅದರ ಕವಳ ಇರುವುದೆಲ್ಲ ಕಾಯುತ್ತಿವೆ ಕುಡುಗೋಲಿನ ಪಾಳಿ

ಕಾಲದಳವನು ಮೀರಿ ಈ ನನ್ನ ಕವಿತೆ, ಇಂದಿಗೂ ಎಂದಿಗೂ ಉಳಿಯಬಹುದು, ನಿನ್ನ ಚೆಲುವಿನ ಸ್ತವನ, ಮಾಡಿಮೆರೆಯುವ ಕವನ ಕ್ರೂರಿಕಾಲನ ಕೂಡ ಮೀರಬಹುದು.

avithakavithe h s raghavendra rao

ಡಾ. ಎಚ್. ಎಸ್. ರಾಘವೇಂದ್ರ ರಾವ್ ಅವರ ಕೈಬರಹ

ಬಹು ರೂಪಿಗೆ

ಡಾ. ಎಚ್. ಎಸ್. ರಾಘವೇಂದ್ರ ರಾವ್

ಫೇಸ್ಬುಕ್ಕು ಟ್ವಿಟರುಗಳ, ಮೊಬೈಲ್ ಮೆಸೇಜುಗಳ ಈ ನಮ್ಮ ಕಾಲದಲ್ಲಿ

‘ಶಾರುಕ್ಕು, ನೊರೆಯುಕ್ಕು, ರೋಷನ್ನು ಭೀಷನ್ನು ಫ್ಯಾಷನ್ನೆ ಪ್ಯಾಶನ್ನು ಪ್ರೇಮಕ್ಕೆ ರೇಷನ್ನು ಲಾಂಗುಮಚ್ಚು, ಸ್ಟುಪಿಡ್ ಬಿಚ್ಚು ಇಂದು ಕಚ್ಚು ನಾಳೆ ಚಚ್ಚು ಮಾಡ್ ಮೈಗಳ ಮೂಡ್ ಮನಗಳ ತೆರೆದು ಮುಚ್ಚು, ತೆರೆದು ಮುಚ್ಚು’ ‘ತಮದ ಸಂತೆಗದ್ದಲ’ದಲ್ಲಿ ಕೇಳಿಬಂತು ಆಹಾ ಕೊಳಲ ಕಿರುದನಿ. ಪ್ರಣಯಕವಿತೆ, ಎಂದೊಮರೆತ ಗತಕಾಲದ ಕಿಂಕಿಣಿ:

-2-

“ಆಧುನಿಕದ ಹಂಗು ತೊರೆದ ಹೃದಯಮತ್ತ ಹೃದಯವೆ, ಚಿರಂತನದ ಕೆಳೆಬೆಳೆಸಿದ ಅದಿಮ ಮಧುಭಾಂಡವೆ. ಎದೆಮರುಳಿಗೆ ಬೆದೆಮರುಳನು ಬೆರೆಸಿಬಂದ ಸಿರಿಯೆ ಮುದಿತನದಲು ಹದಿಹರೆಯವ ಚಾಚುವೆಂಥ ಪರಿಯೆ!

ನೆಲಮುಗಿಲನು ಬುವಿ ಹಸಿರನು ನದಿಹಾಲನು ಪ್ರೀತಿಸಿ, ಇಂದ್ರಿಯಗಳ ಸುಖವನ್ನೆಲ್ಲ ನಗುವಿನಲ್ಲೆ ತುಂಬಿಸಿ, ಕರಿಕೂದಲ ಹರಹಿನಿಂದ ಕಡುದುಃಖವ ಕರಗಿಸಿ, ನಿಮಿಷವನ್ನೆ ವರುಷದಂತೆ ಮಾಡಿಬಿಟ್ಟ ರೂಪಸಿ.”

-3-

ಈ ಮಾತಿನ ಛೂಮಂತ್ರಕೆ ಮರುಳಾಗಲು ತನುಮನ ಬಿಡಲೆ ಇಲ್ಲ, ಬುಸ್ಸೆಂದಿತು ಯುಗಯುಗಗಳ ತಲ್ಲಣ. ‘ಇಂದು ಏನಾಗಿಹುದೆ ಗೆಳತಿ ಏಕೆ ಸಡಗರಗೊಳುವೆನೆ?’ ರಾಧೆಯನ್ನು ಬಿಟ್ಟುಹೋದ ಮಾಧವನನು ಮರೆತೆನೆ? ಶೃಂಗಾರದ ಗೊಂಬೆಯಾದ ಆ ದಿನಗಳ ಕೊರಗು ಹೊನ್ನಪಂಜರದಲ್ಲಿ ಅದುಮಿಟ್ಟ ಉಸಿರು ‘ಮೈಯೆ ಭಾರ, ಮನವೆ ಭಾರ ಬದುಕೆ ಭಾರವೆಂಬ’ ಗಂಡಿನೊಲವು ಗಂಡನೊಲವು, ಎಲ್ಲ ನೇಣುಗಂಬ.

ಹೆಣ್ಣುತನವ, ಜೀವಜಲವ ಪೊರೆಯುವಂಥ ಸತ್ವವ ಬಯಸಿ, ಜೊಲ್ಲಸುರಿಸಿ ಇವಳೆ ಸುಖದ ಶಿಖರವೆಂದು, ನರಕದ ಹೆದ್ದಾರಿಯೆಂದು ಹೊಗಳಿ, ದೂರಸರಿಸಿ ಗೃಹಿಣಿತನದ, ತಾಯಿತನದ, ತಂಗಿತನದ, ಭಂಗಿತನದ ದಾಸ್ಯದ ಸಿಹಿಭಾರ ಹೊರಿಸಿ, ಕನಸ ಕೊಂದು ಮಣಿಸಿ

-4-

ಇಂದಿನ ಈ ಮರುಳು ದಿಟವೊ, ಅಂದಿನ ಆ ಉರುಳು ದಿಟವೊ ಎರಡು ಕೂಡ ಗಂಡು ಕೊಟ್ಟ ಸರ್ಪಸುಖದ ಒಡವೆಯೊ? ಗಿಣಿಯಾದರೆ ಒಂದು ಕಷ್ಟ, ಮುಗಿಲಗಮನ ಒಂದು ಕಷ್ಟ ಮಾರಾಟದ ಸರಕಾದರೆ ನೂರು ಕಷ್ಟವೊ, ಅದು ಜೀವನಷ್ಟವೋ?

ಹೊಸಕಾಲದ ತಿರುಳೆಲ್ಲಿದೆ, ಬಣ್ಣದ ಮಿರುಗಿನಲೆ? ಕಟ್ಟುಕಳೆದ ಮುಕ್ತಮನವು ಹಾರಾಡುವ ಮುಗಿಲೆ? ನಸುಮುನಿಸಿನ ಹುಸಿಬಿಂಕದ ಬಹಿರಂಗದ ಮರುಳು ಮನೆಯ ಗೆದ್ದು ಜಗವ ಗೆಲುವ ವಿಶ್ವಾಸದ ತಿರುಳು.

ಕಟ್ಟುಕಳಚಿದಂಥ ಕಾಲ ಮಾಡಿತೇನು ಮಾಟ ಬಿಟ್ಟುಬಂದ ರೇವಿನಿಂದ ಮತ್ತೆಲ್ಲಿಗೆ ಓಟ? ಬಿಡುಗಡೆಯಿದು, ಬಂಧನವಿದು ಸ್ಪಂದನವಿದು ವಿಸ್ಮಯ ಕ್ಷಣಕೆ ಜನನ, ಕ್ಷಣಕೆ ಮರಣ ಮನವಿದರಲಿ ತನ್ಮಯ.

*

avithakavithe h s raghavendra rao

ಎಚ್.ಎಸ್. ರಾಘವೇಂದ್ರ ರಾವ್ ಅವರ ಪುಸ್ತಕಗಳು

* ವಿಸ್ಲಾವಾ ಶಿಂಬೋರ್ಸ್ಕಾ : Wislawa Szymborska ( 1923 -2012) ಪೋಲ್ಯಾಂಡ್ ದೇಶದ ಪ್ರಸಿದ್ಧ ಕವಿ, ಪ್ರಬಂಧಕಾರ್ತಿ, ಚಿತ್ರಗಾರ್ತಿ ಮತ್ತು ಅನುವಾದಕಿ. ಇವರು, ತಮ್ಮ ಬದುಕಿನ ಬಹುಭಾಗವನ್ನು ಕ್ರಾಕೋ ನಗರದಲ್ಲಿ ಕಳೆದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ, ರೈಲುರಸ್ತೆಗಳನ್ನು ಕಟ್ಟುವ ಸಂಸ್ಥೆಯಲ್ಲಿ ಕೆಲಸಮಾಡಿ, ಹಿಟ್ಲರನ ಕಾನ್ಸೆಂಟ್ರೇಷನ್ ಶಿಬಿರಕ್ಕೆ ಹೋಗುವ ಅಪಾಯದಿಂದ ಪಾರಾದರು. ವೃತ್ತಪತ್ರಿಕೆಗಳು ಮತ್ತು ಸಾಹಿತ್ಯಕ ಪತ್ರಿಕೆಗಳಲ್ಲಿ ಕೆಲಸಮಾಡಿದರು. ಮೊದಮೊದಲು ಕಮ್ಯೂನಿಸ್ಟ್ ವಿಚಾರಧಾರೆಯಿಂದ ಕ್ರಮೇಣ ಅದರಿಂದ ದೂರವಾಗಿ, ಸರ್ಕಾರದ ಕೋಪವನ್ನು ಎದುರಿಸಿದರು. ಅವರ ಮೊದಲ ಪುಸ್ತಕವನ್ನು ಪ್ರಕಟಿಸಲು ಸರ್ಕಾರವು, ಮೂರು ವರ್ಷಗಳು ಅನುಮತಿ ಕೊಡಲಿಲ್ಲ.

‘That’s why we are alive’, ‘Questioning yourself’, ‘Salt’, ‘People on a Bridge’, “View with a grain of sand’ ಮುಂತಾದವು ಅವರ ಪ್ರಸಿದ್ಧ ಕವನಸಂಕಲನಗಳು. ಅವರ ಇಪ್ಪತ್ತು ಪುಸ್ತಕಗಳಲ್ಲಿ ಕೆಲವು ಅನೇಕ ಭಾಷೆಗಳಿಗೆ ಅನುವಾದವಾಗಿವೆ. ಶಿಂಬೋರ್ಸ್ಕಾ ಅವರಿಗೆ, 1996 ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪಾರಿತೋಷಕ ಬಂದಿದೆ. ಸುಮಾರು 350 ಕವಿತಗೆಳನ್ನು ಮಾತ್ರ ಬರೆದಿರುವ ಶಿಂಬೋರ್ಸ್ಕಾ ಅವರನ್ನು, ಈ ಬಗ್ಗೆ ಪ್ರಶ್ನಿಸಿದಾಗ, ‘ನಮ್ಮ ಮನೆಯಲ್ಲಿ ಕಸದ ಬುಟ್ಟಿಯಿದೆ’ ಎಂದು ಉತ್ತರಿಸಿದ್ದರಂತೆ. ಅವರ ಕಾವ್ಯದಲ್ಲಿ ಖಚಿತತೆ ಮತ್ತು ವ್ಯಂಗ್ಯಗಳಿವೆ, ಜೀವನದ ವಾಸ್ತವ ಸಂಗತಿಗಳ ಚೌಕಟ್ಟಿನಲ್ಲಿ, ಚಾರಿತ್ರಿಕ ಹಾಗೂ ಜೈವಿಕ ಸಂದರ್ಭಗಳನ್ನೂ ಅಳವಡಿಸಿಕೊಳ್ಳಲು ಈ ಗುಣಗಳು ಅವರಿಗೆ ನೆರವಾಗಿವೆಯೆಂದು ಹೇಳಲಾಗಿದೆ.

avithakavithe Wislawa Szymborska

ವಿಸ್ಲಾವಾ ಶಿಂಬೋರ್ಸ್ಕಾ ಕಲಾಕೃತಿ. ಸೌಜನ್ಯ : Wisława Szymborska Foundation

ಜೀಬನಾನಂದ ದಾಸ್ : ಜೀಬನಾನಂದ ದಾಸ್(1899-1954) ಅವರು ಬಂಗಾಳಿಯ ಹಿರಿಯ ಕವಿ, ಕಾದಂಬರಿಕಾರ, ಕಥೆಗಾರ, ವಿಮರ್ಶಕ ಮತ್ತು ಪ್ರಬಂಧಕಾರ. ‘ರೂಪಸಿ ಬಾಂಗ್ಲಾ’, ‘ಬನಲತಾ ಸೇನ್’, ಮತ್ತು ‘ಮಹಾಪೃಥ್ವಿ’ ಅವರ ಕೆಲವು ಕವನ ಸಂಕಲನಗಳು. ‘ವೈಭವ್’, ‘ಕಲ್ಯಾಣಿ’ ಮತ್ತು ‘ನಿರುಪಮ್ ಯಾತ್ರಾ’ ಮುಖ್ಯ ಕಾದಂಬರಿಗಳು. ಅವರು ಆಧುನಿಕ ಬಂಗಾಳೀ ಸಾಹಿತ್ಯದ ನಿರ್ಮಾಪಕರಲ್ಲಿ ಒಬ್ಬರು.

*

ಡಾ. ಎಚ್.ಎಸ್. ರಾಘವೇಂದ್ರ ರಾವ್ : ಮೂಲತಃ ಚಿತ್ರದುರ್ಗದವರಾದ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ನಿವೃತ್ತ ಪ್ರಾಧ್ಯಾಪಕರು. ಸಾಹಿತ್ಯ ವಿಮರ್ಶೆ, ನಿಲುವು, ಪ್ರಗತಿಶೀಲತೆ, ಹಾಡೆ ಹಾದಿಯ ತೋರಿತು (ಪಿಎಚ್.ಡಿ. ಮಹಾಪ್ರಬಂಧ-ಬೇಂದ್ರೆ, ಕುವೆಂಪು ಮತ್ತು ಪು.ತಿ.ನ ಅವರ ಕಾವ್ಯದ ತೌಲನಿಕ ಅಧ್ಯಯನ), ತರು ತಳೆದ ಪುಷ್ಪ, ನಮಸ್ಕಾರ, ಸಂಗಡ, ಚಕ್ರವರ್ತಿಯ ಬಟ್ಟೆಗಳು, ಕಣ್ಣಹನಿಗಳೆ ಕಾಣಿಕೆ, ನಿಜವು ತೋರದಲ್ಲ, ನೀರಿಗೆ ಮೂಡಿದ ಆಕಾರ, ಜನಗಣಮನ, ಹುಡುಕಾಟ, ನವ ಸಾಕ್ಷರರಿಗಾಗಿ ಕೃತಿಗಳನ್ನು ರಚಿಸಿದ್ದಾರೆ.

ಅನುವಾದಿಸಿದ ಕೃತಿಗಳು : ಬಾಲಮೇಧಾವಿ (ಜರ್ಮನ್ ಕಥೆಗಳು), ಇರುವೆಗಳು ಮತ್ತು ಇತರ ಕಥೆಗಳು (ಗೋಪೀನಾಥ ಮೊಹಂತಿಯವರ ಒರಿಯಾ ಕಥೆಗಳು), ಪ್ರೀತಿಸುವುದೆಂದರೆ (ಎರಿಕ್ ಫ್ರಾಂ ಅವರ ‘ಆರ್ಟ್ ಆಫ್ ಲವಿಂಗ್’, ಕೆ.ವಿ. ನಾರಾಯಣ ಅವರೊಂದಿಗೆ), ಸಂಸ್ಕೃತಿ ಸಂಗತಿ (ಜಿಡ್ಡು ಕೃಷ್ಣಮೂರ್ತಿ ಅವರ ‘ದಿಸ್ ಮ್ಯಾಟರ್ ಆಫ್ ಕಲ್ಚರ್), ಶಿಕ್ಷಣ ಮತ್ತು ಜೀವನ ಜಿಡ್ಡು ಕೃಷ್ಣಮೂರ್ತಿ ಅವರ ‘ಎಜುಕೇಷನ್ ಅಂಡ್ ದಿ ಸಿಗ್ನಿಫಿಕೆನ್ಸ್ ಆಫ್ ಲೈಫ್’, ಕಲೆಯಲ್ಲಿ ಮಾನವತಾವಾದ ಸ್ವೆಟಸ್ಲೋವ್ ರೋರಿಚ್, ಕಾಳಜಿ ತೋರಿಸುವುದು- ಹಾಗೆಂದರೇನು? (ಜಿಡ್ಡು ಕೃಷ್ಣಮೂರ್ತಿ), ಕಪ್ಪು ಕವಿತೆ (ನೂರು ಆಫ್ರಿಕನ್ ಕವಿತೆಗಳ ಅನುವಾದ), ಮಂಜು ಮಣ್ಣು ಮೌನ (ಟೆಡ್ ಕೂಸರ್ ಅವರ ಕವಿತೆಗಳ ಅನುವಾದ, ಹತ್ತು ದಿಕ್ಕಿನ ಬೆಳಕು (ವೈಚಾರಿಕ ಲೇಖನಗಳು), ಮಂಜಿನ ಶಿವಾಲಯಕ್ಕೆ (ರಿಲ್ಕ್ ಕವಿತೆಗಳು), ಪ್ಲೇಗ್ (ಆಲ್ಬರ್ಟ್ ಕಮೂ ಕಾದಂಬರಿ), ಕಲ್ಲು ನೆಲದ ಹಾಡು-ಪಾಡು (ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಕಟ್ ಸೇ) ಕಾದಂಬರಿ, ನಿಚ್ಚಂ ಪೊಸತು (ತಮಿಳು ಸಂಗಂ ಕಾವ್ಯ), ಪ್ರೀತಿ ಮತ್ತು ಇತರ ಭೂತಗಳು (ಕಾದಂಬರಿ) -ಗೇಬ್ರಿಯೆಲ್ ಗಾರ್ಸಿಯಾ ಮಾರ್ಕೆಜ್ (ಪ್ರಕಟಣೆಗೆ ಸಿದ್ಧ). ಇವುಗಳೊಂದಿಗೆ ಹಲವು ಕೃತಿಗಳನ್ನೂ ಸಂಪಾದಿಸಿದ್ದಾರೆ.

ಇದನ್ನೂ ಓದಿ : Poetry : ಅವಿತಕವಿತೆ : ನಾ ಸ್ವಾಗತಿಸುವ ಭವಿಷ್ಯದ ಹೆಸರು ‘ಋಜು ಮಾರ್ಗ’

ತಾಜಾ ಸುದ್ದಿ

Most Read Stories

Click on your DTH Provider to Add TV9 Kannada