Poetry : ಅವಿತಕವಿತೆ ; ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು…

Kannada Literature : ‘ಕವಿತೆ ಎಂದರೆ ಏನು? ಗೊತ್ತಿಲ್ಲ. ನಾನು ಬರೆಯುವ ಪ್ರತಿಯೊಂದು ಕವಿತೆಯೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಗಳು. ಮೃತ್ಯುವಿನ ಆಗರವಾಗಿರುವ ಈ ಜಗತ್ತಿನಲ್ಲಿ ಕವಿತೆ ಒಂದು ಸಂಜೀವಿನಿಯಾಗಿ ಸಮಸ್ತ ಲೋಕಕ್ಕೊದಗಿ ಬರಬಲ್ಲುದೆ?’ ಡಾ. ಎಚ್. ಎಸ್. ಶಿವಪ್ರಕಾಶ್

Poetry : ಅವಿತಕವಿತೆ ; ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು...
Follow us
|

Updated on:Jun 20, 2021 | 9:24 PM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಹಿರಿಯ ಕವಿ ಡಾ. ಎಚ್. ಎಸ್. ಶಿವಪ್ರಕಾಶ್ ಅವರ ಕವಿತೆಗಳು ನಿಮ್ಮ ಓದಿಗೆ. ಹುಲಕುಂಟೆಮಠ ಶಿವಮೂರ್ತಿ ಶಾಸ್ತ್ರೀ ಶಿವಪ್ರಕಾಶ್ ಕನ್ನಡದ ಪ್ರಮುಖ ಕವಿ, ನಾಟಕಕಾರರು. ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಲಾ ಮತ್ತು ಸೌಂದರ್ಯಶಾಸ್ತ್ರ ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಬರ್ಲಿನ್ ನಲ್ಲಿರುವ ಟ್ಯಾಗೋರ್ ಸೆಂಟರ್​ನ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿದ್ದರು. ಒಟ್ಟು ಏಳು ಕವನ ಸಂಕಲನಗಳು, ಹನ್ನೆರಡು ನಾಟಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಇಂಗ್ಲಿಷ್, ಫ್ರೆಂಚ್, ಇಟ್ಯಾಲಿಯನ್, ಸ್ಪ್ಯಾನಿಶ್, ಜರ್ಮನ್, ಪೋಲಿಷ್, ಹಿಂದಿ, ಮಲಯಾಳಂ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಿಗೂ ಅನುವಾದಗೊಂಡಿದೆ. ಕನ್ನಡ, ಹಿಂದಿ, ಮೈತಿ, ರಭಾ, ಅಸ್ಸಾಮಿ, ಬೋಡೋ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅವರ ನಾಟಕಗಳು ಪ್ರದರ್ಶನಗೊಂಡಿವೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ಧಾರೆ. * ‘ಮಿಲರೇಪ’ (1977) ದಿಂದ ಈಚಿನ ‘ಯಾವ ಶಹರು ಯಾವ ಬೆಳಕು’ (2021) ಕವನ ಸಂಕಲನದವರೆಗೆ ಕಳೆದ ಸುಮಾರು 44 ವರ್ಷಗಳಲ್ಲಿ ಶಿವಪ್ರಕಾಶ್ ಅವರ ಕವಿತೆಗಳು ಚಲಿಸಿದ ದಾರಿ ಬಹಳ ದೂರ. ಈ ಹಾದಿಯ ಎತ್ತರ, ಆಳ, ವಿಸ್ತಾರಗಳನ್ನು ಅಳೆಯಲು ಬಹಳ ಸಿದ್ಧತೆಗಳು ಬೇಕು. ಅದಕ್ಕಾಗಿ ನಾವೂ ಅವರೊಂದಿಗೆ ಗಿರಿ ಶಿಖರಗಳನ್ನು ಏರಬೇಕು, ಕಂದಕಗಳನ್ನು ಇಳಿಯಬೇಕು, ಅನುಭಾವದ ಜಾಡು ಹಿಡಿಯಬೇಕು, ರುದ್ರನ ಹೆಜ್ಜೆ ಗುರುತುಗಳ ಮೇಲೆ ಹೆಜ್ಜೆಯಿಡುತ್ತಾ ಕೈಲಾಸದ ಪಂಚಮುಖಗಳ ದರ್ಶನ ಮಾಡಲೆತ್ನಿಸಬೇಕು. ಪುರಾಣಗಳ ಸಾರ್ವಕಾಲಿಕ ಪ್ರತಿಮೆಗಳ ಅರ್ಥ ಒಡೆಯಬೇಕು, ಕಲ್ಯಾಣದಿಂದ ಹೊರಟು ಕಟ್ಟದ ಕೆಲಸಗಾರರವರೆಗೆ ತೆವಳುತ್ತಾ ಹೊರಳುತ್ತಾ, ನಡುನಡುವೆ ಮಳೆ, ಬಾನು, ನಕ್ಷತ್ರ, ಮೋಡ, ಜೀರುಂಡೆ, ಚಿಟ್ಟೆ, ತಿಗಣೆ, ಗುಬ್ಬಚ್ಚಿ, ನವಿಲು, ಗಡಿಯಾರ, ಮಿಂಚು ಹುಳಗಳ ಜೊತೆ ಸಂಭಾಷಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ, ತುಳುನಾಡಿನ ದೈವಗಳ ಹಾಗೆ ಜೋಗದಿಂದ ಮಾಯಕ್ಕೆ ಜಿಗಿಯುವ ಕಲೆಯ ಕಲಿಯಬೇಕು. ಹೀಗೆ ಮಾಡುವಾಗಲೇ ಅವರು ಹಿಗ್ಗಲಿಸುವ ಕನ್ನಡದ ಗಡಿರೇಖೆಗಳನ್ನು ಮೀರುತ್ತಾ ನಾವೂ ಬೆಳೆಯಬೇಕು.

ಪರಂಪರೆಯೊಡನೆ ಅನುಸಂಧಾನಗೊಳ್ಳುತ್ತಾ ಅಲ್ಲಿಯೇ ಸ್ಥಗಿತಗೊಳ್ಳದೆ, ಆಧುನಿಕತೆಗೆ ಮುಖಾಮುಖಿಯಾಗಬೇಕು. ಮಿಲರೇಪ, ಮಳೆಬಿದ್ದ ನೆಲದಲ್ಲಿ, ಅಣುಕ್ಷಣ ಚರಿತೆ, ಸೂರ್ಯ, ಜಲ, ಮಳೆಯೇ ಮಂಟಪ, ನವಿಲು ನಾಗರ, ಮತ್ತೆ ಮತ್ತೆ, ಮಬ್ಬಿನ ಹಾಗೆ ಕಣಿವೆಯಾಸಿ, ಮೊದಲಾದ ಅವರ ಪ್ರಸಿದ್ಧ ಕವನ ಸಂಕಲನಗಳು ಬಿಡುಗಡೆಯಾದಾಗ ನಾವು ಹಲವರು ಅವರ ಜೊತೆಗೇ ಇದ್ದೆವು. ಅವರು ಓದಿದ ಕವಿತೆಗಳಿಗೆ ಸಾಕ್ಷಿಗಳಾಗುತ್ತಾ ಅಲ್ಲಿಯೇ ನಿಂತಿದ್ದೆವು. ಆದರೆ ಶಿವಪ್ರಕಾಶ್ ಮಾತ್ರ ಎಲ್ಲಿಯೂ ನಿಲ್ಲದ ನಿಜ ಜಂಗಮನಾಗುತ್ತಾ, ಕಾವ್ಯದ ತೀವ್ರತೆಯನ್ನೆಂದೂ ಬಿಟ್ಟುಕೊಡದೆ, ಉತ್ಸಾಹಿತರಾಗಿ ಮುಂದೆ ಸಾಗುತ್ತಲೇ ಇದ್ದಾರೆ. (‘ಸಂಕಥನ’ ಹೊರತರುತ್ತಿರುವ ಶಿವಪ್ರಕಾಶರ ಅಭಿನಂದನಾ ಗ್ರಂಥದಿಂದ) ಡಾ. ಪುರುಷೋತ್ತಮ ಬಿಳಿಮಲೆ, ಹಿರಿಯ ಲೇಖಕ, ದೆಹಲಿ. * ಹದಿನಾರು ವರುಷದ ಹಿಂದೆ ‘ನದಿಯ ನಾಡಿನಲ್ಲಿ’ ಕವಿತೆಯನ್ನು ಓದಿ ಬೆರಗಾಗಿ ಇಂದಿಗೂ ಅವರ ನೂರಾರು ಕವಿತೆಗಳನ್ನು ಓದುತ್ತಲೇ ಹೊಸ ಹೊಸ ಅರ್ಥವಿಸ್ತಾರಗಳಿಗೆ ಒಳಗಾಗುತ್ತಲೇ ಇದ್ದೇನೆ. ಭಕ್ತಿಯ ನುಡಿಗಟ್ಟುಗಳಲಿ ಕಲಾಪ್ರಜ್ಞೆಯ ಹೊಸ ಆಯಾಮಗಳನ್ನು ಕಂಡುಕೊಂಡಿದ್ದೇನೆ. ‘ಅಣುಕ್ಷಣ ಚರಿತೆ’ ಸಂಕಲನ ಕೈಲಿ ಹಿಡಿದಾಗೆಲ್ಲಾ ಕಲ್ಯಾಣದ ನಾಲ್ಕು ದ್ವಾರಗಳಲ್ಲಿ ನಿಂತು ಪ್ರತ್ಯಭಿಜ್ಞಾನ, ಬೌದ್ಧ, ಶರಣೇತ್ಯಾದಿ ದರ್ಶನಗಳನ್ನು ಅನುಭವಿಸಿದ್ದೇನೆ. ಶಿವಪ್ರಕಾಶರ ಕಾವ್ಯವು ಭಕ್ತಿ, ಅಧ್ಯಾತ್ಮ, ದರ್ಶನ ಮತ್ತು ನುಡಿಗಟ್ಟುಗಳಿಂದ ನನಗೆ ಅಪಾರ ಪ್ರಿಯವಾದುದು. ಹಾಗೆಯೇ ಅವರೊಂದಿಗೆ ತಕರಾರುಗಳು, ಭಿನ್ನಮತಗಳೂ ಇವೆ. ರಾಜೇಂದ್ರ ಪ್ರಸಾದ್, ಕವಿ, ಮಂಡ್ಯ. *

ಹೀಗೂ ಒಂದು ಗಜಲ್

ಸತ್ಯಗಳಿವೆ ತಥ್ಯಗಳಿವೆ ಬದುಕಿದ್ದಾಗ ಹೇಳಲು ಬಾರದವು ನನ್ನ ಹೂಳಿದಾಗ ದಹಿಸಿದಾಗ ದಿವಸ ತಾವೂ ಸಾಯುವುವು

ಬಗೆಯನು ಬಗೆಬಗೆ ಬಗೆದು ತಿನುತಿದ್ದ ರಾಗದ್ವೇಷವೇಸೋ ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು

ಗಂಡು, ಹೆಂಗಸರು ಚೂರಿ ಹಾಕಿ ನನ್ನ ಮೈಯ ತುಂಬಾ ಕಲ್ಲು-ಮುಳ್ಳಿನ ನೀಳ ಹಾದಿಯಲಿ ಮಾಡಿದ ಗಾಯಗಳು

ಬುದ್ಧಿ, ತರ್ಕಗಳ ಬೀದಿ ಪ್ರಹಸನದ ಚಾಚಿನಿಂದ ದೂರ ಅರ್ಥ ತಿಳಿಯಲು ನನ್ನ ದಣಿಸಿದ ಬಾಯಾರಿಕೆ ಹಸಿವುಗಳು

ಯಾರು ಯಾರಿಗೂ ಅಡಿಯಾಳಾಗದ ಹಾಗೆ ಕಟ್ಟಿದ ದೀನರಲ್ಲಿ ಕಡು ದೀನರಾಳಿಕೆಯ ಕನಸಿನ ನಾಡುಗಳು

ಇತಿ ಇತಿ ಇತ್ಯಾದಿ ಹೇಳಬೇಕಿತ್ತು ಅಯ್ಯೊ ಹೇಳಲಾಗಲಿಲ್ಲ ಗಂಟುಮೂಟೆ ಜೊತೆ ನಾನು ಹೊರಟಾಗ ಹೋಗಿಬಿಡುವುವವೂ

ಎಂದಾದರಮ್ಮೆ ನಾ ಹೋದ ಮೇಲೆ ಆ ದಿವಸ ಬರುವುದೇನು ಹೇಳುವರೆ ಯಾರೋ ಶಿವಪ್ರಕಾಶ ಹೇಳದೇ ಹೋದುದನು

avithakavithe

ಡಾ. ಎಚ್. ಎಸ್. ಶಿವಪ್ರಕಾಶ್ ಕೈಬರಹದೊಂದಿಗೆ

ಅವೇ ಕಣ್ಣುಗಳು

ಅವೇ ಕಣ್ಣುಗಳು ಅವೇ ದೂರಗಳು ಅವೇ ನೋಟಗಳು ಅವೇ ಮಾಟಗಳು ಅವೇ ಬೆಳಕುಗಳು ಅವೇ ಹಗಲುಗಳು ಅವೇ ಕಡಲುಗಳು ಅವೇ ಊರ್ಮಿಗಳು

ಮರಳ ಹಾಸುಗಳ ಮೇ- ಲವೇ ಸುಯಿಲುಗಳು ಅದೇ ಕಾಯುವಿಕೆ ಅದೇ ಮಾಯುವಿಕೆ ಅವೇ ಕಣಿವೆಗಳು ಅವೇ ಶಿಖರಗಳು ಅವೇ ಚುಕ್ಕಿಗಳು ಅದೇ ನಿರುವಯಲು ಅದೇ ದೇಗುಲ ಇದೇ ಬಯಲು ಜನ್ಮಪತ್ರಿ! ಅದೇ ಉಯಿಲು ಸುಡುಗಾಡಿನ ರುಚಿರುಚಿ ಅಡಿಗೆಗಳು ನಿನ್ನ ಅಂದಿನಾ ಕಂಗಳೇ ಬೇರೆ ಇಂದು ಈ ಸೋತ ಕಂಗಳೇ ಬೇರೆ ಅವೇ ಬಿಂಬಗಳು ಪ್ರತಿಬಿಂಬಗಳು

*

ಕಸ್ತೂರಿ ಮಿಗವಾಗಿ

ಕಸ್ತೂರಿ ಮಿಗವಾಗಿ ಸುಳಿದೆನಯ್ಯಾ ಬನಬನಗಳಲ್ಲಿ ನಾನು ನಾಡು ನಾಡು ಕಾಡುಗಳ ಒಳಗೆ ಕೋಡುಗಳ ಮೇಲೆ ಮರುಧರೆಯ ಕತ್ತಾಳೆ ಕುಸುಮಗಳಲ್ಲಿ ಎಲ್ಲಿತ್ತು ಎಲ್ಲಿ ಎಲ್ಲಿತ್ತು ಆ ದಟ್ಟ ಗಮಲು?

ಆ ಕಣ್ಣ ಬೆಳಕ ಹುಡುಕುತ್ತ ಹೊಂಟೆನಯ್ಯಾ ಸೂರ್ಯ-ಚಂದ್ರೋದಯಾಸ್ತಗಳಲ್ಲಿ ದಿಕ್ಕೆಟ್ಟು ವ್ಯೋಮದಲಿ ಉಜ್ವಲ ಬೇವಾರ್ಸಿ ನಕ್ಷತ್ರವಾಗಿ

ಹೂಹಣ್ಣು ಹೊರೆ ನಾನಾಗಿ ಹೊತ್ತಿರುವ ನಿಜ ಮರೆತು ಮೈಯ ಬಾಗಿಸಿಬಾಗಿಸಿ ಎಲೆಎಲೆ ಕಣ್ಣಲ್ಲಿ ಹರಸುತ್ತ ಯುಗಜಗ ಕಳೆದೆನಯ್ಯಾ ಮರಮರದ ಮರುಮರು ಜನುಮಗಳಲ್ಲಿ

ಇಷ್ಟೊಂದು ಮೂರ್ಖತನ ಯಾಕಿತ್ತು ನನಗೆ ಯಾಕಿತ್ತೆ ನನಗೆ ಈ ಚಿತ್ತುಚಿತ್ತು ಚಿತ್ತವಿಲಾಸ ಈ ಹುಟ್ಟುಗುರುಡತನದ ಕತೆ ಕವಿತೆ ನೀತಿಯೆ ವಿಯತಿಯೆ ಹುಟ್ಟು ಹರಿದ ಕಲ್ಪಾಂತಸ್ಥಾಯಿ ಕಲ್ಪತರುವೆ ಶಿವಲಿಂಗ ಗುರುವೆ

avitha kavithe

ಎಚ್. ಎಸ್. ಶಿವಪ್ರಕಾಶರ ಕೃತಿಗಳು

ಬಂದರು ಮನೆಗೆ

ಬಂದರು ಮನೆಗೆ ಈ ಸಂಜೆ ಯಾರೋ ಹೊಸಬರು ಬಾಗಿಲು ಕಿಟಕಿ ತೆರೆಯದೆ ಸೀದಾ ಒಳಬಂದರು

ಕೂರಿ ಅನ್ನುವ ಮೊದಲೇ ಕೂತರು ಆರಾಮು ಅವರ ಸಹಜ ಪ್ರವೇಶಕೆ ಮಾಡುವೆ ಸಲಾಮು

ಆಪ್ತ ಸಮಿತಿಯ ಸದಸ್ಯರು ಮಿಕ್ಕವರಿಗೆಲ್ಲಿ? ಪರಮಾಪ್ತರು ಬರುವಾಗ ಅವರೆಲ್ಲಾ ಖಾಲಿ

ಪರಮಾಪ್ತರ ಜೊತೆ ಹೇಗಿರುವೆ ಅದಕಿದೆ ಈ ಉಪಮೆ ಸುಡು ಮರುಭೂಮಿಯ ಮೇಲೆ ಚಂದ್ರಿಕೆ ಇಳಿದಂತೆ

ಒಕ್ಕೊರಲಾಗಿ ಹಾಡಿದವು ದೂರದ ಆ ತಾರೆ ಶೋಭನ ಶೋಭನ ಶೋಭನವು ಈ ಸಾರ್ಥಕ ಗಳಿಗೆ

ನಾಳೆಯ ಸಂಜೆಯೂ ಯಾರಾರಾ ಬರುವರೆ ಹಾಗೇನೆ ಪ್ರತಿ ಸಂಜೆಯ ಚಮತ್ಕಾರ ಕಾಯುತಿರುವುದೇನೆ?

* ಇದನ್ನೂ ಓದಿ : Poetry : ಅವಿತಕವಿತೆ ; ದೇಹದ ಸಂಬಂಧ ಅರಿಯುವುದು ಸಂತಸ ಮತ್ತು ದ್ವೇಷದಲ್ಲಿ

Published On - 10:58 am, Sun, 20 June 21