Poetry : ಅವಿತಕವಿತೆ ; ದೇಹದ ಸಂಬಂಧ ಅರಿಯುವುದು ಸಂತಸ ಮತ್ತು ದ್ವೇಷದಲ್ಲಿ

Translation : ‘ಬಾಲ್ಯದಿಂದಲೂ ಓದಿನ ಗೀಳಿಗೆ ಬಿದ್ದ ನಾನು ಎಂದಾದರೂ ಕವಿತೆ ಬರೆಯುತ್ತೇನೆ ಅಂದುಕೊಂಡಿರಲೇ ಇಲ್ಲ. ಮನಸಿನ ಭಾವ, ಬೇಗುದಿಗೆ ಅಕ್ಷರ ರೂಪ ನೀಡುತ್ತೇನಷ್ಟೇ. ಅದು ಕವಿತೆಯೋ ಅಲ್ಲವೋ ಇಂದಿಗೂ ಅರಿಯೇ. ಇನ್ನು ಅನುವಾದದ ವಿಚಾರಕ್ಕೆ ಬಂದರೆ, ಪ್ರಾರಂಭದಲ್ಲಿ ಖುಷಿಗಾಗಿ, ನನಗಾಗಿ ಅನುವಾದಿಸುತ್ತಾ ಬಂದೆ.’ ಮಂಜುಳಾ ಕಿರುಗಾವಲು

Poetry : ಅವಿತಕವಿತೆ ; ದೇಹದ ಸಂಬಂಧ ಅರಿಯುವುದು ಸಂತಸ ಮತ್ತು ದ್ವೇಷದಲ್ಲಿ
Follow us
|

Updated on:Jun 13, 2021 | 10:49 AM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಮಂಡ್ಯ ಮೂಲದ ಪತ್ರಕರ್ತೆ, ಕವಿ, ಅನುವಾದಕಿ ಮಂಜುಳಾ ಕಿರುಗಾವಲು ಅವರು ಅಪರೂಪದ ಹಿರಿಯ ಕವಿಗಳಾದ ಅಮೃತಾ ಪ್ರೀತಮ್, ಗುಲ್ಝಾರ್, ಅಹಮ್ಮದ್ ಫರಾಝ್ ಮತ್ತು ಪಾಶ್ ಕಾವ್ (ಅವತಾರ್ ಸಿಂಗ್ ಸಂಧು) ಅವರ ಕವನಗಳನ್ನು ಇಲ್ಲಿ ಅನುವಾದಿಸಿದ್ದಾರೆ. ಜೊತೆಗೆ ಇವರ ಎರಡು ಕವನಗಳೂ ನಿಮ್ಮ ಓದಿಗಿವೆ. ಹದಿನೆಂಟು ವರ್ಷಗಳ ಕಾಲ ಕನ್ನಡ ಮತ್ತು ಹಿಂದಿ ಪತ್ರಿಕೆಯಲ್ಲಿ, ವಿವಿಧ ಚಾನೆಲ್​ಗಳಲ್ಲಿ ಕೆಲಸ ಮಾಡಿದ ಇವರು ಸದ್ಯ ಸ್ಥಳೀಯ ಪತ್ರಿಕೆಯೊಂದರ ಮಾಲೀಕರು ಮತ್ತು ಸಂಪಾದಕರು. ಇವರು ಕವನದ ವ್ಯಾಮೋಹಕ್ಕೆ ಗಂಭೀರವಾಗಿ ಒಳಗಾಗಿದ್ದು ಇತ್ತೀಚಿನ ಒಂದು ವರ್ಷದಿಂದ. 

*

ಒಮ್ಮೆಗೇ ಅಬ್ಬರಿಸಿ ಖಾಲಿಯಾಗುವುದು ಬೇಡ, ತನುವಿನ ತಂತುಗಳ ಮೆಲ್ಲನೆ ನುಡಿಸು… ಎಂಬಂಥ ಅಪರೂಪದ ಸಾಲುಗಳನ್ನು ಕೊಟ್ಟ ಮಂಜುಳಾ ಕಿರುಗಾವಲು, ಸದ್ಯದ ಕನ್ನಡದ ಓದಲೇಬೇಕಿಸುವ ಕವಿಗಳಲ್ಲಿ ಪ್ರಮುಖರು. ಅವರ ಸ್ವಂತ ಕವಿತೆಗಳಿರಬಹುದು ಅಥವಾ ಅವರ ಭಾವಾನುವಾದಗಳಿರಬಹುದು, ಅವುಗಳು ಓದುಗರನ್ನು ಥಟ್ಟನೆ ಬರಸೆಳೆದು ಅವರೆದೆಯೊಳಗೆ ಇಳಿದುಬಿಡುತ್ತವೆ. ಅವುಗಳ ಈ ಆಪ್ತತೆಗೆ, ಅವರು ಹಿಡಿದಿಡುವ ಅನುಭವ ಮತ್ತು ಭಾವನೆಗಳೊಂದಿಗೆ, ಅವುಗಳನ್ನು ಓದುಗರ ಎದೆಗೆ ದಾಟಿಸಲು ಬಳಸುವ ಸರಳ ಮತ್ತು ಆಪ್ತ ಭಾಷೆ ಕೂಡ ಕಾರಣ. ಕಾವ್ಯವೆಂದರೆ ಕೇವಲ ಭಾವಯಾನವೂ ಅಲ್ಲ, ಭಾಷೆಯ ಸರ್ಕಸ್ ಕೂಡ ಅಲ್ಲ; ಅವರೆಡರ ಹದವರಿತ ಬೆಸುಗೆಯ ಮೂಲಕ ಓದುಗನ ಎದೆಯಲ್ಲೊಂದು ಸಂಚಲನ ಹುಟ್ಟಿಸುವ ಕಲೆ ಎನ್ನುವುದನ್ನು ಒಪ್ಪುವುದಾದರೆ, ಖಂಡಿತವಾಗಿಯೂ ಮಂಜುಳಾ ಅವರ ಕವಿತೆಗಳು ಸದ್ಯದ ಕನ್ನಡದ ಅತ್ಯುತ್ತಮ ಮಾದರಿಗಳು ಎಂದರೆ ಅತಿಶಯೋಕ್ತಿಯಲ್ಲ. ಶಶಿ ಸಂಪಳ್ಳಿ, ಕವಿ, ಪತ್ರಕರ್ತ, ಶಿವಮೊಗ್ಗ.

* ಕನ್ನಡ ಕಾವ್ಯದಲ್ಲಿ ಇತ್ತೀಚೆಗೆ ಬೆಳೆಯುತ್ತಿರುವ ಟ್ರೆಂಡ್ ಅಂದರೆ ಅನುವಾದಿತ ಕವಿತೆಗಳು. ಫೇಸ್​ಬುಕ್, ವಾಟ್ಸಪ್, ಟ್ವಿಟರ್​ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಗುಲ್ಝಾರ್, ಶಾರುಖ್ ಹೈದರ್, ಅಮೃತಾ ಪ್ರೀತಮ್, ಪರ್ವಿನ್ ಶಾಕೀರ್, ಜಸಿಂತ ಕೆರಕೆಟ್ಟ, ಅದ್ನಾನ್ ಸಾಮಿ, ಅವತಾರ್ ಸಿಂಗ್ ಸಂಧೂ, ಅಹಮದ್ ಫರಾಜ್, ಅಹಮದ್ ಫೈಜ್ ಮುಂತಾದವರ ಅನೇಕ ಕವಿತೆಗಳನ್ನು ಮಂಜುಳಾ ಕನ್ನಡಕ್ಕೆ ತರುತ್ತ ವಿಶೇಷ ಗಮನ ಸೆಳೆಯುತ್ತಿದ್ದಾರೆ. ನೇರಾನೇರ ಅನುವಾದಿಸದೆ ಕವಿಯ ಮೂಲ ಭಾವವನ್ನು ಅರಿತುಕೊಂಡು ಅನುವಾದಿಸಲು ಪ್ರಯತ್ನಿಸುತ್ತಿದ್ದಾರೆ. ‘ನಾನೀಗ ಹೊರಡುತ್ತೇನೆ’ ಅವತಾರ್ ಸಿಂಗ್ ಸಂಧು ಅವರ  ಸುದೀರ್ಘ ಕವಿತೆಯನ್ನು ಸಮರ್ಥವಾಗಿ ಅನುವಾದಿಸಿದ್ದಾರೆ. ‘ಸಾಸಿವೆಯ ಪುಟ್ಟ ಕುಸುಮಗಳಿಗೆ ಕೃತಜ್ಞನಾಗಿರುವೆ, ಅನೇಕ ಬಾರಿ ಅವಕಾಶ ನೀಡಿದವು, ನನಗೆ ನಿನ್ನ ಕೂದಲಿನಿಂದ ಪರಾಗ ಹೆಕ್ಕಲು’ ಎಂಬ ಸಾಲುಗಳಲ್ಲಿ ಇವರ ಅನುವಾದದ ನಯವನ್ನು ಕಾವ್ಯಶಿಲ್ಪವನ್ನು ಗಮನಿಸಬಹುದಾಗಿದೆ. ಅಮೃತಾ ಪ್ರೀತಮ್ ಅವರ ‘ಓ ನನ್ನ ಅಪರಿಚಿತ ಸ್ನೇಹಿತ’ ಕವಿತೆಯಲ್ಲಿ ‘ಸೂರ್ಯ ಈಗ ಸಮಯಕ್ಕೆ ಸರಿಯಾಗಿ ಮುಳುಗಿ ಬಿಡುತ್ತಾನೆ, ಕತ್ತಲೀಗ ಪ್ರತಿ ದಿನವೂ ನನ್ನ ಎದೆಗಿಳಿಯುತ್ತದೆ’ ಆರ್ದ್ರ ಅನುಭವವಕ್ಕೆ ಬರುತ್ತದೆ. ಮೂಲ ಉರ್ದು, ಹಿಂದಿಯಲ್ಲಿರುವ ಕವಿತೆಗಳನ್ನು ಕನ್ನಡಕ್ಕೆ ತರುವ ಅವರ ಪ್ರಯತ್ನ ಶ್ಲಾಘನೀಯ. ಸಿದ್ಧರಾಮ ಹಿರೇಮಠ, ಕನ್ನಡ ಉಪನ್ಯಾಸಕರು, ಕೂಡ್ಲಿಗಿ

*

avithakavithe

ಪಂಜಾಬಿ ಕವಿ ಪಾಶ್ (ಅವತಾರ್ ಸಿಂಗ್ ಸಂಧು)

ನಾನೀಗ ಹೊರಡುತ್ತೇನೆ ಪಂಜಾಬಿ ಮೂಲ: ಪಾಶ್ (ಅವತಾರ್ ಸಿಂಗ್ ಸಂಧು)

ನಾನೀಗ ಹೊರಡುತ್ತೇನೆ ಗೆಳತಿ ನಾನೀಗ ಹೊರಡುತ್ತೇನೆ ನಾನೊಂದು ಕವಿತೆ ಬರೆಯಬೇಕಿತ್ತು ನೀ ಅದ ಜೀವನದುದ್ದಕ್ಕೂ ಓದಬಹುದಿತ್ತು

ಆ ಕವಿತೆಯಲ್ಲಿ ಕೊತ್ತಂಬರಿಯ ಪರಿಮಳದ ಉಲ್ಲೇಖವಿರಬೇಕಿತ್ತು ಕಬ್ಬಿನ ತೂಗುವಿಕೆಯ ಶಬ್ದದ ಉಲ್ಲೇಖವಿರಬೇಕಿತ್ತು

ಆ ಕವಿತೆಯಲ್ಲಿ ಮರಗಳಿಂದ ತೊಟ್ಟಿಕ್ಕುವ ಇಬ್ಬನಿ ಪಾತ್ರೆಯಲ್ಲಿ ಕುದಿಯುತ್ತಾ ಕೆನೆಗಟ್ಟುವ ಹಾಲಿನ ಉಲ್ಲೇಖವಿರಬೇಕಿತ್ತು

ನಾನು ನೋಡಿದ ನಿನ್ನ ದೇಹದ ಎಲ್ಲವನ್ನೂ ಉಲ್ಲೇಖಿಸಬೇಕಿತ್ತು ಆ ಕವಿತೆಯಲ್ಲಿ ನನ್ನ ಕೈಗಳ ಗಡುಸುತನ ನಗಬೇಕಿತ್ತು ನನ್ನ ತೊಡೆಯಲ್ಲಿನ ಮೀನುಗಳು ಈಜಬೇಕಿತ್ತು ನನ್ನ ಎದೆಯ ಮೇಲಿನ ಕೂದಲಿನ ಮೃದುವಾದ ಶಾಲುಗಳಿಂದ ಜ್ವಾಲೆ ಹೊರಹೊಮ್ಮಬೇಕಿತ್ತು

ಆ ಕವಿತೆಯಲ್ಲಿ ನನಗಾಗಿ ನಿನಗಾಗಿ ಮತ್ತು ಜೀವನದ ಪ್ರತಿ ಬಂಧಗಳಿಗೂ ಬಹಳಷ್ಟು ಸಂಗತಿಗಳು ಸಂಭವಿಸಬೇಕಿತ್ತು ಆದರದು ಸ್ವಾದಹೀನವಾಗಿತ್ತು ಜಗದ ಅವ್ಯವಸ್ಥಿತ ನಕ್ಷೆಯಲ್ಲಿ ವ್ಯವಹರಿಸುವುದು

ನಾ ಬರೆಯಲೂಬಹುದಿತ್ತು ಎಲ್ಲಾ ಶಕುನಗಳ ತುಂಬಿದ ಆ ಕವಿತೆಯು ಅದು ಹಾಗೆಯೇ ಸಾಯಲೂಬಹುದಿತ್ತು ನೀನು ನನ್ನ ಎದೆಗೊರಗಿ ಅಳುವುದೊಂದನ್ನು ಬಿಟ್ಟರೆ ಗೆಳತಿ, ಕವಿತೆ ಬಹಳ ಬಡವಾಗುತ್ತಿತ್ತು

ಆಯುಧಗಳ ಉರುಗುಗಳು ಕೆಟ್ಟದಾಗಿ ಬೆಳೆದಿವೆ ಈಗ ಎಲ್ಲಾ ಬಗೆಯ ಕವಿತೆಗಳಿಗೂ ಮುನ್ನ ಆಯುಧಗಳ ವಿರುದ್ಧ ಯುದ್ಧ ಅನಿವಾರ್ಯವಾಗಿದೆ

ಯುದ್ಧದಲ್ಲಿ ಎಲ್ಲವನ್ನು ಸುಲಭವೆಂದುಕೊಳ್ಳುತ್ತೇವೆ! ನಮ್ಮ ಮತ್ತು ಶತ್ರುವಿನ ಹೆಸರು ಬರೆಯುವ ಹಾಗೆ ಮತ್ತು ಮುತ್ತು ನೀಡಲು ನನ್ನ ಬಳಿ ಬರುವ ದುಂಡಗಿನ ತುಟಿಗಳನ್ನು ಗುಂಡಗಿನ ಭೂಮಿಗೆ ಹೋಲಿಸಬಹುದು ಅಥವಾ ನಿನ್ನ ಸೊಂಟದಂತೆ ನುಲಿಯುವಿಕೆಯನ್ನು ಉಸಿರಾಡುವ ಸಮುದ್ರಕ್ಕೆ ಹೋಲಿಸಿದರೆ ದೊಡ್ಡ ಹಾಸ್ಯದಂತೆ ಭಾಸವಾಗುತ್ತದೆ ಆದುದರಿಂದ ನಾ ಹಾಗೇನು ಮಾಡಲಿಲ್ಲ

ನಿನಗೆ, ನನ್ನ ಅಂಗಳದೀ ನನ್ನ ಕೂಸಿಗೆ ತುತ್ತನ್ನಿಕ್ಕುವ ಕನಸು ಆದರೆ, ಯುದ್ಧದ ತುರ್ತಿನಿಂದ ನಾ ಒಂದೇ ಸಾಲಿನಲ್ಲಿ ನಿಲ್ಲಲಾಗಿಲ್ಲ ನಾನೀಗ ಹೊರಡುತ್ತೇನೆ

ಗೆಳತಿ, ಬೇಯೋಣ ನಾವು ಹಗಲಿನಲ್ಲಿ ಕಮ್ಮಾರನ ಕುಲುಮೆಯಂತೆ, ಒಣಗಿದ ಕಬ್ಬಿನೆಲೆಗಳ ಮೇಲೆ ಮಲಗಿ ಸ್ವರ್ಗವ ನಿಂದಿಸೋದು ಸಂಗೀತಮಯವಾಗಿರುತ್ತದೆ

ಹಾಂ, ನಾವಿದನ್ನು ನೆನೆಯಲೇಬೇಕು ಏಕೆಂದರೆ, ಹೃದಯದ ಜೇಬಿನಲ್ಲಿ ಏನೂ ಇಲ್ಲವಾದಾಗ ನೆನಪಿಸಿಕೊಳ್ಳುವುದು ತುಂಬಾ ಚಂದವೆನ್ನಿಸುತ್ತದೆ

ನಾ ಈ ವಿದಾಯದ ಕ್ಷಣಕ್ಕೆ ಧನ್ಯವಾದ ಹೇಳಬಯಸುವೆ ಈ ಎಲ್ಲಾ ಸುಂದರ ವಸ್ತುಗಳಿಗೆ ನಮ್ಮ ಮಿಲನಕ್ಕೆ ಶಾಮಿಯಾನದಂತೆ ತೂಗಾಡುತ್ತಿದ್ದ ನಮ್ಮ ಮಿಲನದಿಂದ ಸುಂದರವಾಗುತ್ತಿದ್ದ ಆ ಎಲ್ಲಾ ಮಾಮೂಲಿ ಸ್ಥಳಗಳಿಗೆ

ನಾ ವಂದಿಸಲಿಚ್ಛಿಸುವೆ, ನನ್ನ ತಲೆಯ ಬಳಿ ನಿಂತು ನಿನ್ನಂತೆಯೇ ಗುನುಗುವ ಹಗುರಾದ ಗಾನಭರಿತ ಗಾಳಿಗೆ, ನಿನ್ನ ಕಾಯುವಾಗ ಮನಕ್ಕೆ ಮುದ ನೀಡಿದಕ್ಕೆ, ನಡೆಯುವ ಹಾದಿಯಲಿ ರೇಷ್ಮೆಯಂತೆ ಬೆಳೆದುನಿಂತು ನೀ ನಡೆಯುವಾಗ ತೆರೆದುಕೊಂಡ ಹುಲ್ಲಿಗೆ ಧನ್ಯವಾದ ಹೇಳಬಯಸುವೆ. ಟೊಂಗೆಗಳಿಂದ ಉದುರುತ್ತಿದ್ದ ಹತ್ತಿಗಳಲ್ಲಿ ಎಂದಿಗೂ ಮನವಿ ಮಾಡಲಿಲ್ಲ. ಅವು ನಗುತ್ತಲೇ ಹಾಸಿಗೆಯಾದವು ಕಬ್ಬಿನ ಮೇಲೆ ನಲಿಯುವ ಹಕ್ಕಿಗಳು ಹೋಗಿ ಬರುವವರ ಬಗ್ಗೆ ಕಣ್ಣಿಟ್ಟವು ಬೆಳೆದು ನಿಂತ ಗೋದಿ ಫಸಲು ಕುಳಿತಾಗಲ್ಲ ಮಲಗಿದಾಗ ನಮ್ಮ ಸುತ್ತುವರೆದವು

ಸಾಸಿವೆಯ ಪುಟ್ಟ ಕುಸುಮಗಳಿಗೆ ಕೃತಜ್ಞನಾಗಿರುವೆ ಅನೇಕ ಬಾರಿ ಅವಕಾಶ ನೀಡಿದವು ನನಗೆ ನಿನ್ನ ಕೂದಲಿನಿಂದ ಪರಾಗ ಹೆಕ್ಕಲು

ಮನುಷ್ಯ ನಾನು ಸಣ್ಣ ಸಣ್ಣ ಎಲ್ಲಾ ವಿಚಾರಗಳಿಂದಾಗಿರುವೆ ಯಾರು ನನ್ನ ಛಿದ್ರಗೊಳ್ಳದಂತೆ ಕಾಯ್ದರೋ ಅವರೆಲ್ಲರಿಗೂ ಆಭಾರಿಯಾಗಿದ್ದು ಅವರಿಗೆಲ್ಲಾ ವಂದಿಸಬಯಸುವೆ

ಪ್ರೀತಿಸುವುದು ಸಹಜ ಹಿಂಸೆಯ ಸಹಿಸುತ್ತಾ ತನ್ನ ಹೋರಾಟಕ್ಕೆ ಸಿದ್ಧಗೊಳಿಸುವುದು ಅಥವಾ ಗವಿಯಲ್ಲಿ ಕುಳಿತು ತಾಗಿದ ಗುಂಡಿನ ಗಾಯ ಮಾಯುವ ದಿನವ ಕಲ್ಪಿಸುವುದು

ಪ್ರೇಮಿಸಬಹುದು ಮತ್ತು ಹೋರಾಡಬಹುದು ಜೀವನದಲ್ಲಿ ನಂಬಿಕೆ ಇರಲಿ ಗೆಳತಿ, ಬಿಸಿಲಿನಂತೆ ಭುವಿಯಲ್ಲಿ ಅರಳು ಮತ್ತು ಅಪ್ಪುಗೆಯಲ್ಲಿ ಲೀನವಾಗು ಸ್ಪೋಟಕದಂತೆ ಭುಗಿಲೆದ್ದು ನಾಲ್ಕು ದಿಕ್ಕುಗಳಲ್ಲಿ ಪ್ರತಿಧ್ವನಿಸು ಇದೇ ಜೀವಿಸುವ ವಿಧಾನ

ಪ್ರೇಮಿಸುವುದನ್ನು, ಬದುಕುವುದನ್ನು ಯಾರು ಅರಿಯಲಾರರೋ ಅವರನ್ನು ಜೀವನವೂ ವ್ಯಾಪಾರಿಗಳನ್ನಾಗಿಸಿದೆ

ದೇಹದ ಸಂಬಂಧ ಅರಿಯುವುದು ಸಂತಸ ಮತ್ತು ದ್ವೇಷದಲ್ಲಿ ಯಾವುದೇ ರೇಖೆ ಗೀಚದಿರು. ಜೀವನದ ಆಕಾರ ಕಳೆದು ಹೋಗಿದೆ ಸಹಿಸುವುದು ಸಾಯಿಸಿ ಮುಖಾಮುಖಿಯಾಗುವುದು ಅಥವಾ ವಿದಾಯ ಹೇಳುವುದು ವೀರತ್ವದ ಸಂಗತಿ ಗೆಳತಿ ನಾನೀಗ ಹೊರಡುತ್ತೇನೆ.

ನೀ ಇದ ಮರೆತುಬಿಡು ನಾ ಹೇಗೆ ಕಣ್ಣರೆಪ್ಪೆಯಂತೆ ನಿನ್ನ ಸಲುಹಿದೆ ನನ್ನ ಕಣ್ಣುಗಳು ಏನ್ನೆಲ್ಲಾ ಮಾಡಿದವು ನಿನ್ನ ನಕ್ಷೆಗಳ ಎಳೆ ರೂಪಿಸಲು

ನನ್ನ ಮುತ್ತುಗಳು ನಿನ್ನ ಮುಖವನ್ನೆಷ್ಟು ಸುಂದರಗೊಳಿಸಿವೆ ನನ್ನಪ್ಪುಗೆಯೂ ನಿನ್ನ ಮೇಣದಂತಹ ತನುವನ್ನು ಹೇಗೆ ರೂಪಿಸಿತು ಇದೆಲ್ಲವನ್ನೂ

ನೀ ಮರೆತುಬಿಡು ಗೆಳತಿ ನಾ ಇನ್ನೂ ಚಂದ ಬದುಕ ಬಯಸಿದ್ದೇನಲ್ಲದೇ ನಾ ಕಂಠಮಟ್ಟ ಜೀವನದಲ್ಲಿ ಮುಳಗಬಯಸಿದ್ದೆ ನನ್ನ ಪಾಲಿನ ಬದುಕನ್ನು ಬದುಕಿ ಬಿಡು ಗೆಳತಿ ನನ್ನ ಪಾಲಿನ ಬದುಕನ್ನೂ. *

avithakavithe

ಕವಿ ಅಮೃತಾ ಪ್ರೀತಮ್

ಹಿಂದೀ ಮೂಲ: ಅಮೃತಾ ಪ್ರೀತಮ್ 

ನನ್ನ ಅಪರಿಚಿತ ಸ್ನೇಹಿತ ಒಂದು ಸಾರಿ ಆಕಸ್ಮಿಕವಾಗಿ ನೀ ಬಂದೆ ಅದ ಕಂಡು ಸಮಯವೇ ಚಕಿತಗೊಂಡು ನನ್ನ ಕೋಣೆಯಲ್ಲೇ ನಿಂತುಬಿಟ್ಟಿತು ಸಂಜೆ ಸೂರ್ಯ ಮುಳುಗಬೇಕಿತ್ತು. ಆದರೆ, ಅವ ಮುಳುಗಬೇಕೆಂಬ ಸಂಗತಿಯನ್ನೇ ಮರೆತಿದ್ದ.

ಆವಾಗಲೇ ಪ್ರಕೃತಿ ನಿಯಮ ಕರೆ ನೀಡಿತು. ಸಮಯವೂ ನಿಂತ ಕ್ಷಣಗಳ ಕಂಡು ಕಿಟಕಿಯ ರಸ್ತೆಯಲ್ಲಿ ಹೊರನಡೆಯಿತು

ಗತಿಸಿದ, ನಿಶ್ಚಲ ಕ್ಷಣಗಳ ಆ ಘಟನೆಗಳನ್ನು ಅರಿತು ಈಗ ನೀನು ತುಂಬಾ ಆಶ್ಚರ್ಯಗೊಂಡೆ. ನಾನೂ ಮತ್ತೀಗ ಸಮಯವೂ ಕೂಡ ಆ ತಪ್ಪನ್ನು ಮಾಡಲು ಸಮ್ಮತಿಸದು.

ಸೂರ್ಯ ಈಗ ಸಮಯಕ್ಕೆ ಸರಿಯಾಗಿ ಮುಳುಗಿ ಬಿಡುತ್ತಾನೆ ಕತ್ತಲೀಗ ಪ್ರತಿ ದಿನವೂ ನನ್ನ ಎದೆಗಿಳಿಯುತ್ತದೆ.

ಆದರೆ, ಗತಿಸಿದ ಮತ್ತು ನಿಶ್ಚಲ ಕ್ಷಣಗಳ ಸತ್ಯ ಒಂದಿದೆ ಈಗ ನೀನು, ನಾನು ಒಪ್ಪಲಿ ಬಿಡಲಿ ಈ ಮಾತು ಬೇರೆ.

ಆದರೆ, ಆ ದಿನ ಆ ಸಮಯ ಕಿಟಕಿ ಹಾದಿಯಲ್ಲಿ ಹೊರ ಹೋದಾಗ ನಿನ್ನ ಮೊಣಕಾಲಿನಿಂದ ಇಳಿದ ನೆತ್ತರು ನನ್ನ ಕಿಟಕಿಯ ಕೆಳಗೆ ಇನ್ನೂ ಹೆಪ್ಪುಗಟ್ಟಿದೆ

*

avithakavithe

ಕವಿಗಳಾದ ಗುಲ್ಝಾರ್ ಮತ್ತು ಅಹಮ್ಮದ್ ಫರಾಝ್

ಉರ್ದು ಮೂಲ : ಗುಲ್ಝಾರ್

ಯಾರೋ ನಿನಗೆ ಕೇಳುತ್ತಾರೆ ನಾನು ಯಾರು? ನೀ ಹೇಳಿಬಿಡು ಅಂತಹ ವಿಶೇಷದವನಲ್ಲ

ಒಬ್ಬ ಸ್ನೇಹಿತ ಇದ್ದಾನೆ ತುಂಬಾ ಎಳಸಿನಂತೆ, ಒಂದು ಸುಳ್ಳು ಅರ್ಧ ಸತ್ಯದಂತೆ

ಭಾವದಿಂದ ಸುತ್ತಿದ ಒಂದು ಪರದೆ ಇದೆ ಒಂದು ನೆಪ ಯಾವುದೋ ಒಳಿತಿನದು

ಅಂತಹ ಜೀವನದ ಜೊತೆಗಾರ ಅವ ಹತ್ತಿರವಿದ್ದೂ ಹತ್ತಿರವಿಲ್ಲದ

ಯಾರೋ ನಿನಗೆ ಕೇಳುತ್ತಾರೆ ನಾನು ಯಾರು? ನೀ ಹೇಳಿ ಬಿಡು ಅಂತಹ ವಿಶೇಷದವನಲ್ಲ

ಆ ಒಬ್ಬ ಜೊತೆಗಾರನಿಗೆ ಹೇಳಲಾಗದ ಕೆಲವು ಮಾತುಗಳನ್ನು ಹೇಳಬಹುದು

ನೆನಪುಗಳಲ್ಲಿ ಹೀಗೆ ಮಸುಕಾದ ಮುಖವೊಂದು ಇಳಿದು ಹೋಗುತ್ತದೆ

ಹೀಗೆ ಸುಮ್ಮನೆ ಅವನ ಇಲ್ಲದಿರುವಿಕೆಗೆ ನನಗೆ ಯಾವ ದುಃಖವಿಲ್ಲ

ಆದರೆ, ಕೆಲವೊಮ್ಮೆ ಕಣ್ಣುಗಳಿಂದ ಕಣ್ಣೀರಾಗಿ ಹರಿದು ಹೋಗುವವ

ಹಾಗೆಯೇ ಇದ್ದಾನೆ ನನ್ನ ಮನದಲ್ಲಿ ಆದರೆ, ನನ್ನ ಕಣ್ಣುಗಳು ಅವನ ಹುಡುಕುತ್ತಿಲ್ಲ

ಯಾರೋ ನಿನಗೆ ಕೇಳುತ್ತಾರೆ ನಾನು ಯಾರು? ನೀ ಹೇಳಿ ಬಿಡು ಅಂತಹ ವಿಶೇಷದವನಲ್ಲ

ಜೊತೆಗಾರನಾಗಿ ಅವ ಉಳಿದು, ನೋವು ಹಂಚುತ್ತಾ ಇರುವವ

ಮರೆಯಬಯಸುವೆ ಅವನ. ಆದರೆ, ಅವನ ನೆನಪುಗಳಲ್ಲಿ ಆವರಿಸಿರುವ ಒಂಟಿತನ ಭಾವ ಕಾಡಿದಾಗಲೊಮ್ಮೆ ಕನಸಿನಲ್ಲಿ ಬಂದು ಬಿಡುವವ

ನಾ ಜೊತೆ ನಿಂತಿರುವೆ ಯಾವಾಗಲೂ ನಿನ್ನೊಡನೆಂದು ಹೇಳುತ್ತಾ ಧೈರ್ಯ ನೀಡುವವ

ಹೀಗೆ ಇರುತ್ತಾನೆ ನನ್ನೊಡನೆ, ಅವನ ಉಪಸ್ಥಿತಿಯ ಅಭಾವವಿಲ್ಲದಂತೆ

ಯಾರೋ ನಿನಗೆ ಕೇಳುತ್ತಾರೆ ನಾನು ಯಾರು? ನೀ ಹೇಳಿ ಬಿಡು ಅಂತಹ ವಿಶೇಷದವನಲ್ಲ

* ಕೊಲೆಗಾರ ಉರ್ದು ಮೂಲ : ಅಹಮ್ಮದ್ ಫರಾಜ್

ಕೊಲೆಗಾರ ಅಡಗಿದ್ದಾನೆ ಅವನ ಕೈಯಲ್ಲಿದ್ದ ರಕ್ತಸಿಕ್ತ ಕತ್ತಿ ಇನ್ನು ಥರ ಥರ ನಡುಗುತ್ತಿದೆ.

ಅವನ ಸುತ್ತುವರೆದ ಜನತೆ ಕಿರುಚುತ್ತಲಿದ್ದಾರೆ ಕೊಲೆಗಾರನಿವ ಕೊಲೆಗಾರನಿವ!

ರಕ್ತ ಮತ್ತು ಧೂಳಿನಲ್ಲಿ ತೋಯಿಸಿದ್ದ ಶವದ ತುಟಿಯಲ್ಲಿ ವಿಚಾರವೊಂದು ಹೆಪ್ಪುಗಟ್ಟಿದೆ

ಆದರೆ ಇವ ಯಾರ ಕೊಲೆಗಾರ ಇವ ತನ್ನದೇ ಸೃಷ್ಟಿಯ ಕೊಲೆಗಾರ ಇವ ತನ್ನನ್ನು ತಾನೇ ಕೊಲೈದಿರುವ

ಆದರೆ ಜನ ಸಮೂಹ ಎಲ್ಲಿ ಕೇಳುವುದು

ಕೊಲೆಗಾರ ಯಾರು? ಯಾರು ಯಾರನ್ನು ಕೊಲೆಗೈದಿರುವರು *

avithakavithe

ಕವಿ ಮಂಜುಳಾ ಕಿರುಗಾವಲು ಮತ್ತವರ ಕೈಬರಹ

ಕಾವ್ಯವೆಂದರೆ ಮನದಾಳದ ಅಭಿವ್ಯಕ್ತಿ. ಮಾತಿಗೆ ನಿಲುಕದು. ದನಿ ಇಲ್ಲದವರ, ನೊಂದವರ, ಶೋಷಿತರ, ಕೆಳದೂಡಲ್ಪಡಲ್ಪಟ್ಟವರ, ಅಸಂಘಟಿತರ, ಅಸಹಾಯಕರ ಧ್ವನಿ. ಅದೊಂದು ಕುದಿ. ಒಳಗಿನ ಭಾವವೆಲ್ಲ ಕುದ್ದು ಹೊರಬರುವ ಹೊಳಪು. ಶಬ್ದಗಳ ಜೋಡಣೆಯಷ್ಟೇ ಕಾವ್ಯವಲ್ಲ. ಕಾವ್ಯ ಅಂತರ್ಮುಖಿಯೂ, ಬಹಿರ್ಮುಖಿಯೂ. ಬಾಲ್ಯದಿಂದಲೂ ಓದಿನ ಗೀಳಿದ್ದ ನಾನು ಎಂದಾದರೂ ಕವಿತೆ ಬರೆಯುತ್ತೇನೆ ಅಂದುಕೊಂಡಿರಲೇ ಇಲ್ಲ. ಮನಸಿನ ಭಾವ, ಬೇಗುದಿಗೆ ಅಕ್ಷರ ರೂಪ ನೀಡುತ್ತೇನಷ್ಟೇ. ಅದು ಕವಿತೆಯೋ ಅಲ್ಲವೋ ಇಂದಿಗೂ ಅರಿಯೇ. ಮನಸಿಗೆ ತಾಕಿದ್ದು, ಅನ್ನಿಸಿದ್ದು, ನೋಯಿಸಿದ್ದು, ಕಾಡಿಸಿದ್ದು, ಇನ್ಯಾವುದೇ ಆಗಲಿ ಅದನ್ನೆಲ್ಲಾ ಬರೆಯುತ್ತಾ ಬಂದಿರುವೆ. ಇನ್ನು ಅನುವಾದದ ವಿಚಾರಕ್ಕೆ ಬಂದರೆ, ಪ್ರಾರಂಭದಲ್ಲಿ ಖುಷಿಗಾಗಿ, ನನಗಾಗಿ ಅನುವಾದಿಸುತ್ತಾ ಬಂದೆ. ಒಂದು ಭಾಷಾ ಸಾಹಿತ್ಯವನ್ನು ಮತ್ತೊಂದು ಭಾಷೆಗೆ ತಂದು ಓದುಗರಿಗೆ ತಲುಪಿಸುವುದು ಕೂಡ ಉತ್ತಮ ಅಭಿವ್ಯಕ್ತಿ ಎಂದು ಸ್ನೇಹಿತರು ಮೆಚ್ಚಿ ಸಲಹೆ ನೀಡುತ್ತಿದ್ದಂತೆ ಕ್ರಮೇಣ ಅನುವಾದದಲ್ಲೂ ತೊಡಗಿಕೊಂಡೆ. ಮಂಜುಳಾ ಕಿರುಗಾವಲು

(ಮಂಜುಳಾ ಅವರ ಕವಿತೆಗಳು) 

ಮಳೆ ಮತ್ತು ಅವಳು ಅವಳಿಗೆ ಮಳೆ ಎಂದರೆ ತುಂಬಾ ಇಷ್ಟ ಮಳೆ ಬಂತೆಂದರೆ ನವಿಲಿನಂತೆ ಕುಣಿದು ಕುಪ್ಪಳಿಸುತ್ತಿದ್ದಳು

ಹದಿನಾರು ಕಂಬದ ಮನೆಯ ತೊಟ್ಟಿಯಂಗಳದಲ್ಲಿ ಮಳೆಗೆ ಮೈಯೊಡ್ಡಿ ನಿಲ್ಲುತ್ತಿದ್ದಳು.

ಈಗೀಗ ಅವಳ್ಯಾಕೊ ತುಂಬಾ ಬದಲಾಗಿದ್ದಾಳೆ ಮಳೆಯೆಂದರೆ ಸಿಡಿಮಿಡಿಗೊಳ್ಳುತ್ತಾಳೆ ಅಂಗಳದಲ್ಲಿ ಕುಣಿಯುವ ಮಕ್ಕಳಿಗೆ ಗದರುತ್ತಾಳೆ

ಸದಾ ಮಳೆಗಾಗಿ ಕಾತರಿಸುತ್ತಿದ್ದವಳು ಈಗೀಗ ಹಿಡಿಹಿಡಿ ಶಪಿಸುತ್ತಾಳೆ

ಮಳೆ ಹನಿಸುತ್ತಿದ್ದಂತೆ ಮಹಡಿಯ ಮೇಲೇರುತ್ತಾಳೆ ಒಣಗಿದ ಬಟ್ಟೆಗಳನ್ನು ತಂದು ಸೋಫಾ ಮೇಲಿಟ್ಟು ಮತ್ತೆ ಮಹಡಿಗೇರುತ್ತಾಳೆ

ಹಪ್ಪಳ, ಸಂಡಿಗೆಯನ್ನು ಲಗುಬಗೆಯಿಂದ ಡಬ್ಬಿಗೆ ತುಂಬಿಡುತ್ತಾಳೆ

ಮನೆಯ ಮುಂಬಾಗಿಲಿಗೆ ಬಂದು ಹಾದಿಯುದ್ದಕ್ಕೂ ಎಡತಾಕುತ್ತಾಳೆ ಮಕ್ಕಳಿನ್ನೂ ಮನೆಗೆ ಬಂದಿಲ್ಲ ಎಲ್ಲಿ ನೆನೆದು ಬರುತ್ತಾರೆಂದು ತಳಮಳಗೊಳ್ಳುತ್ತಾಳೆ

ಗುಡುಗು ಮಿಂಚಿಗೆ ಬೆಚ್ಚಿ ಬೀಳುವ ಗಂಡ ಮನೆ ಮುಟ್ಟುವಷ್ಟರಲ್ಲಿ ಮಳೆ ನಿಂತರೆ ಸಾಕೆನ್ನುತ್ತಾಳೆ

ಏನೋ ನೆನೆದು ಹಿತ್ತಲಿಗೋಡುತ್ತಾಳೆ ನೀರೊಲೆಯ ಸೌದೆ ಒದ್ದೆಯಾಗುವ ಮೊದಲೇ ತೆಗೆದಿಡುತ್ತಾಳೆ

ಅವಳು ಈಗ ಅತ್ತೆಗೆ ಸೊಸೆಯಾಗಿ ಇದ್ದಾಳೆ ಗಂಡನ ಹೆಂಡತಿ ಆಗಿದ್ದಾಳೆ ಮಕ್ಕಳ ತಾಯಿಯಾಗಿದ್ದಾಳೆ * ಮೌನ

ಇಂದೇನೂ ಬರೆಯಲಾಗುತ್ತಿಲ್ಲ ಈ ಮೌನವನ್ನೇ ನೀ ಓದಿಕೋ

ಕಣ್ಮರೆಯಾಗುವ ಮೊದಲೇ ಈ ಪದಗಳನ್ನೆಲ್ಲಾ ಬಾಚಿ ತಬ್ಬಿಬಿಡು

ಈ ಮೌನದ ರಾತ್ರಿಯ ಮೆಲುದನಿ ಆಲಿಸು ಮನದ ಭಾವಗಳ ಅರಿತು ನೀ ಪದ ಕಟ್ಟಿಕೋ

ಇರುಳ ಆಗಸಕ್ಕೆ ಮೆರಗು ಆ ಚಂದಿರಾ ನನ್ನ ಮನದಂಗಳದಲ್ಲಿ ನೀ ಅವನ ಅನುಭೂತಿಸು

ಚದುರಿದ ಪದಗಳ ಗುರುತು ಅಳಿಸುವ ಮುನ್ನ ನೀ ನಶೆಯಾಗಿಸಿ ಬಿಡು

ಬಾ ಈಗ ನಿನ್ನ ಬಾಹುಗಳಲ್ಲಿ ಬಂಧಿಸಿ ಬಿಡು

ಇಂದೇನು ಬರೆಯಲಾಗುತ್ತಿಲ್ಲ ಮೌನವನ್ನೇ ಓದಿಕೋ

*

ಪರಿಚಯ ; ಮಂಜುಳಾ ಕಿರುಗಾವಲು : ಇವರು ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾಲಿನವರು. ಹುಟ್ಟಿದ್ದು ಜೂನ್ 1, 1984. ತಾಯಿ ಮಹಾದೇವಮ್ಮ ತಂದೆ ಸಿದ್ದಯ್ಯ. ಓದಿದ್ದು ಬಿಎ, ಡಿಪ್ಲೊಮಾ ಇನ್ ಜರ್ನಲಿಸಮ್. ಹದಿನೆಂಟು ವರ್ಷಗಳಿಂದ ಪತ್ರಕರ್ತೆಯಾಗಿ ವೃತ್ತಿನಿರತರಾಗಿದ್ದಾರೆ. ಮಂಡ್ಯದ ಕೆಮ್ಮುಗಿಲು ಸಂಜೆಪತ್ರಿಕೆಯಿಂದ ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶಿಸಿ ಮೈಸೂರಿನ ಆಂದೋಲನ, ಸಂಜೆವಾಣಿ (ಮೈಸೂರು ಆವೃತ್ತಿ), ಅಮೋಘ ಚಾನೆಲ್, ಹಿಂದಿಯ  ರಾಜಸ್ಥಾನ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿದ್ದಾರೆ. ಹಲವು ಪುರಸ್ಕಾರಗಳು ಇವರಿಗೆ ಲಭಿಸಿದ್ದು, 2020ನೇ ಸಾಲಿನಲ್ಲಿ ಪತ್ರಿಕಾರಂಗದಿಂದ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ತಮ್ಮದೇ ಮಾಲೀಕತ್ವ ಮತ್ತು ಸಂಪಾದಕತ್ವದಲ್ಲಿ ‘ಜನೋದಯ ಪ್ರಾದೇಶಿಕ ಸಂಜೆ ದಿನಪತ್ರಿಕೆ’ ನಡೆಸುತ್ತಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಮತ್ತು ರಾಮನಗರ ಜಿಲ್ಲೆಗಳಲ್ಲಿ ಪತ್ರಿಕೆ ಪ್ರಸಾರಗೊಳ್ಳುತ್ತಿದೆ. * ಅಮೃತಾ ಪ್ರೀತಮ್ : ಇವರು ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಪಂಜಾಬೀ ಕವಿ. ಇವರು ಕವಿಯಷ್ಟೇ ಅಲ್ಲ ಕಾದಂಬರಿಗಾರ್ತಿ, ಪ್ರಬಂಧಗಾರ್ತಿ, ಸುಮಾರು 100ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ ನೇರ ನಿರ್ಭಿಡೆಯ ಹೆಣ್ಣುಮಗಳು. ಇವರ ಜೀವನ ಚರಿತ್ರೆ ಭಾರತೀಯ ವಿವಿಧ ಭಾಷೆಗಳಲ್ಲಿ ಹಾಗೂ ವಿದೇಶಿ ಭಾಷೆಗಳಲ್ಲೂ ಅನುವಾದಗೊಂಡಿವೆ. ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಪಡೆದಿರುವ ಇವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿದ್ದಾರೆ. 1947ರಲ್ಲಿ ಭಾರತ ಇಬ್ಭಾಗವಾದ ನಂತರ ಸುಮಾರು ಒಂದು ದಶಲಕ್ಷದಷ್ಟು ಮುಸ್ಲಿಮರು, ಹಿಂದೂಗಳು ಮತ್ತು ಸಿಖ್ಖರು ಕೋಮುಗಲಭೆಗಳಲ್ಲಿ ಮೃತಪಟ್ಟರು. ಆಗ 28 ವರ್ಷ ವಯಸ್ಸಿನ ಅಮೃತಾ ಪ್ರೀತಮ್ ಲಾಹೊರ್ನಲ್ಲಿನ ಪಂಜಾಬೀ ನಿರಾಶ್ರಿತರ ತಾಣದಿಂದ ನವದೆಹಲಿಗೆ ತೆರಳಿದರು. ನಂತರ 1948 ರಲ್ಲಿ ಅವರು ತಮ್ಮ ಪುತ್ರನನ್ನು ಒಡಲಲ್ಲಿ ಹೊತ್ತಾಗ ಡೆಹರಾಡೂನ್ನಿಂದ ದೆಹಲಿಗೆ ಪ್ರಯಾಣಿಸುವ ಸಂದರ್ಭದಲ್ಲಿ ತಮ್ಮ ಆಕ್ರೋಶವನ್ನು ತುಂಡು ಕಾಗದವೊಂದರ ಮೇಲೆ ಕಾಣಿಸಿ ಅದಕ್ಕೆ ಕವನದ ರೂಪ ಕೊಟ್ಟರು. ಆ ಕವಿತೆ,‘ಆಜ್ ಅಖಾನ್ ವಾರಿಸ್ ಶಾಹ್ ನು’ (ನಾನಿಂದು ಶಾಹ್ನು ವಾರಿಸ್​ನನ್ನು ಪ್ರಶ್ನಿಸುತ್ತಿದ್ದೇನೆ) ಈ ಕವಿತೆ ನಂತರ ಬಹಳ ಜನಪ್ರಿಯವಾಗಿ ಜನಮಾನಸದಲ್ಲಿ ಸ್ಥಿರಸ್ಥಾಯಿಯಾಯಿತು. ಅಮೃತಾ ಪ್ರೀತಂ ತಮ್ಮ 86ನೇ ವಯಸ್ಸಿನಲ್ಲಿ ನಿಧನಹೊಂದಿದರು. * ಪಾಶ್ ಕಾವ್ (ಅವತಾರ್ ಸಿಂಗ್ ಸಂಧು) : ಇವರು ಪಂಜಾಬಿ ಕವಿ, ಪಂಜಾಬಿಯಲ್ಲಿಯೇ ಬರೆಯುತ್ತಿದ್ದರು. ತಲ್ವಂಡಿ ಇವರ ಹುಟ್ಟೂರು. ಪಂಜಾಬಿನ ಕ್ರಾಂತಿಕಾರಿ ಮತ್ತು ನಕ್ಸಲ್ ಚಳವಳಿಯಲ್ಲೂ ತೊಡಗಿಸಿಕೊಂಡಿದ್ದರು ಜೊತೆಗೆ ರಾಜಕೀಯದಲ್ಲೂ ಮುಕ್ತವಾಗಿದ್ದರು. ಕ್ರಾಂತಿ, ಕ್ರೋಧ, ಪ್ರೇಮ ಮತ್ತು ಅಪರೂಪದ ರಸಿಕತನವನ್ನು ಅವರ ಕವಿತೆಗಳು ಕೇಂದ್ರಿಕರಿಸುತ್ತಿದ್ದವು.  ಪಾಶ್ ಕಾವ್, ಬೀಚ್ ಕಾ ರಾಸ್ತಾ ನಹೀ, ಸಂಪೂರ್ಣ ಕವಿತೆ, ಬಿಕರೆ ಹುವೆ ಪನ್ನೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದರು. 37 ನೇ ವಯಸ್ಸಿನಲ್ಲೇ ಖಾಲೀಸ್ಥಾನಿ ಉಗ್ರರಿಂದ ಹತರಾದರು. * ಅಹಮ್ಮದ್ ಫರಾಝ್ : (1931-2008) ಪಾಕಿಸ್ತಾನದ ಸೈಯ್ಯದ್ ಅಹಮ್ಮದ್ ಷಾ ‘ಫರಾಝ್’ ಕಾವ್ಯನಾಮದೊಂದಿಗೆ ಬರೆಯುತ್ತಿದ್ದರು. ನವ ಶಹ್ರಾದಲ್ಲಿ ಜನಸಿದ ಅವರ ಪೂರ್ವಜರ ಊರು ಕೊಹತ್. ಪೇಶಾವರದ ಎಡ್ವರ್ಡ್ಸ್ ಕಾಲೇಜು ಮತ್ತು ಪೇಶಾವರ ವಿಶ್ವವಿದ್ಯಾಲಯದಲ್ಲಿ ಉರ್ದು ಮತ್ತು ಪರ್ಷಿಯನ್ ಎಂ. ಎ. ಮಾಡಿದರು. ರೇಡಿಯೋ ಪಾಕಿಸ್ತಾನದಲ್ಲಿ ನಿರ್ಮಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಪೇಶಾವರದ ಇಸ್ಲಾಮಿಯಾ ಕಾಲೇಜಿನಲ್ಲಿ ಉಪನ್ಯಾಸಕರಾದರು. ಪಾಕಿಸ್ತಾನದಲ್ಲಿ ಮಿಲಿಟರಿ ಸರ್ವಾಧಿಕಾರವನ್ನು ಅವರು ನಿರಾಕರಿಸುತ್ತಿದ್ದುದರಿಂದ  ಬಂಧನಕ್ಕೊಳಗಾದರು. ಅದನ್ನು ಸ್ವತಃ ಅನಾವರಣಗೊಳಿಸಿಕೊಂಡರು. ಬಿಡುಗಡೆಯಾದ ನಂತರ ಆರು ವರ್ಷಗಳ ಸ್ವಯಃ ಗಡಿಪಾರಿಗೆ ಒಳಗಾಗಿ ಯುರೋಪ್, ಕೆನಡಾದಲ್ಲಿ ವಾಸಿಸಿದರು. ವಾಪಾಸು ದೇಶಕ್ಕೆ ಮರಳಿದ ಅವರು  ಪಾಕಿಸ್ತಾನ ರಾಷ್ಟ್ರೀಯ ಕೇಂದ್ರದ ನಿವಾಸ ನಿರ್ದೇಶಕರಾಗಿ, ಅಕಾಡೆಮಿ ಅಡಾಬಿಯಾತ್ ಪಾಕಿಸ್ತಾನದ ನಿರ್ದೇಶಕರಾಗಿ, ಲೋಕ ವಿರ್ಸಾ ಮತ್ತು ರಾಷ್ಟ್ರೀಯ ಪುಸ್ತಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕಾಲೇಜು ದಿನಗಳಿಂದ ಕಾವ್ಯ ಆರಂಭಿಸಿದ ಅವರು ಪ್ರತಿರೋಧ ಕಾವ್ಯದ ಅತ್ಯುತ್ತಮ ಮಾದರಿಗಳನ್ನು ನಿರ್ಮಿಸಿದರು. * ಗುಲ್ಝಾರ್ : ಸಂಪೂರಣ್ ಸಿಂಗ್ ಕಾಲ್ರಾ ಅವರ ಕಾವ್ಯನಾಮ ಗುಲ್ಝಾರ್. ಅಪರೂಪದ ಗೀತರಚನೆಕಾರ, ಕವಿ, ಲೇಖಕ, ಚಿತ್ರಕಥೆಗಾರ ಮತ್ತು ಚಲನಚಿತ್ರ ನಿರ್ದೇಶಕ, ನಿರ್ಮಪಕ. ತಮ್ಮ ವೃತ್ತಿಜೀವನವನ್ನು 1963ರಲ್ಲಿ ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್ ಅವರ ‘ಬಂದಿನಿ’ ಮೂಲಕ ಗೀತರಚನೆಕಾರರಾಗಿ ಆರಂಭಿಸಿದರು. ಮುಂದೆ ಸಲೀಲ್ ಚೌಧರಿ, ವಿಶಾಲ್ ಭಾರದ್ವಾಜ್, ಎ. ಆರ್. ರೆಹಮಾನ್ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದರು. ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ. 1980 ರಲ್ಲಿ ‘ಮಿರ್ಜಾ ಗಾಲಿಬ್’ ಮತ್ತು 1993 ರಲ್ಲಿ ‘ಕಿರ್ದಾರ್’ ನಿರ್ದೇಶಿಸಿದರು. * ಇದನ್ನೂ ಓದಿ : Poetry ; ಅವಿತಕವಿತೆ : ಒಬ್ಬಂಟಿಗರಾಗುವ ಹೆಂಗಳೆಯರು ಬಿರುಗಾಳಿ ಬುಡಕೀಳದ ಹೆಮ್ಮರದ ಹಾಗೆ

Published On - 10:35 am, Sun, 13 June 21