Lake Conservation: ಜನರ ಪಾಲುದಾರಿಕೆಯಿಂದ ಕೆರೆ ಸಮೃದ್ಧಿ ಯೋಜನೆಯ ಆಶಯಕ್ಕೆ ಹೊಸ ವೇಗ ಬಂತು: ಮದನ್ ಗೋಪಾಲ್

ವಿಶ್ವಬ್ಯಾಂಕ್​ ಯೋಜನೆಯಂತೆ ಕೆರೆ ಬಳಕೆದಾರರ ಸಂಘದ ಪರಿಕಲ್ಪನೆ ಅನುಷ್ಠಾನಕ್ಕೆ ಬಂತು. ಒಂದು ಕೆರೆಗೆ ಅನುದಾನ ₹ 5 ಲಕ್ಷ ಇದ್ದರೆ ಇನ್ನೊಂದು ಕೆರೆಗೆ ಹೆಚ್ಚು ಬೇಕಾಗಬಹುದು. ಈ ಖರ್ಚಿನ ಶೇ 10ರಷ್ಟು ಮೊತ್ತವನ್ನು ಜನರು ಕೊಟ್ಟಿದ್ದಾರೆ ಎನ್ನುವುದು ಗಮನಾರ್ಹ ಅಂಶ.

  • Updated On - 3:08 pm, Sun, 13 June 21 Edited By: Ghanashyam D M | ಡಿ.ಎಂ.ಘನಶ್ಯಾಮ
Lake Conservation: ಜನರ ಪಾಲುದಾರಿಕೆಯಿಂದ ಕೆರೆ ಸಮೃದ್ಧಿ  ಯೋಜನೆಯ ಆಶಯಕ್ಕೆ ಹೊಸ ವೇಗ ಬಂತು: ಮದನ್ ಗೋಪಾಲ್
ಪ್ರಾತಿನಿಧಿಕ ಚಿತ್ರ

ನೀರಿಗಾಗಿ ಹಾಹಾಕಾರ ಸೃಷ್ಟಿಯಾದಾಗ ಸಮಾಜವನ್ನು ಸಮತಲ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ನೀರ ಕಾಳಜಿ ಈ ಸಂದರ್ಭದಲ್ಲಿ ಬಹಳ ಮುಖ್ಯ ಎನಿಸಿಕೊಳ್ಳುತ್ತದೆ. ಇಂತಹ ಸಾಮಾಜಿಕ ಕಳಕಳಿಯನ್ನು ಹೊತ್ತ ಅದಷ್ಟೋ ಜನರು ನಮ್ಮ ನಡುವೆ ಇದ್ದಾರೆ. ಅದರಲ್ಲೂ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕು ಎಂಬ ಮಹತ್ತರವಾದ ಆಕಾಂಕ್ಷೆಯ ಜೊತೆಗೆ ಒಂದಷ್ಟು ಅಧಿಕಾರಿಗಳು ಶ್ರಮಿಸಿದ್ದಾರೆ. ಅಂತಹವರ ಪಟ್ಟಿಗೆ ನಿವೃತ್ತ ಐಎಎಸ್​ ಅಧಿಕಾರಿ ಮದನ ಗೋಪಾಲ್ ಕೂಡ ಸೇರಿಕೊಂಡಿದ್ದಾರೆ. ಕೆರೆ ಅಭಿವೃದ್ಧಿ ಕಾರ್ಯದಲ್ಲಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು ಕೆರೆಗಳ ಪಾಲನೆ ಹೇಗೆ ಎನ್ನುವುದರ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕೆರೆಗಳ ಅಭಿವೃದ್ಧಿ ಎನ್ನುವುದು ಒಂದು ತಂಡವಾಗಿ ನಾವು ಮಾಡಬೇಕಾದ, ಸಮುದಾಯದ ಸಹಭಾಗಿತ್ವವನ್ನು ಹೆಚ್ಚಾಗಿ ಬೇಡುವ ಕೆಲಸ. ಕೆರೆ ಅಭಿವೃದ್ಧಿ ಸಂಘದ ಸದಸ್ಯರಿಗೆ ಮತ್ತು ಕ್ಲಸ್ಟರ್ ಯೋಜನೆಯ ಕಾರ್ಯದರ್ಶಿಗಳಿಗೆ ನಾವು ₹ 17 ಲಕ್ಷದವರೆಗಿನ ಕಾರ್ಯಕ್ರಮಕ್ಕೆ ಸಹಿ ಹಾಕುವ ಅಧಿಕಾರವನ್ನು ನೀಡಿದ್ದೆವು. ಇನ್ನು ಈ ಯೋಜನೆ ಮಾಡಿರುವುದು ಸರ್ಕಾರದ ಇಲಾಖೆ ಮಾತ್ರ ಅಲ್ಲ. ಕೆರೆ ಬಳಕೆದಾರರ ಸಂಘವು ಇದರಲ್ಲಿ ಪ್ರಮುಖ ಮಾತ್ರ ವಹಿಸಿದೆ ಎನ್ನುವುದನ್ನು ಮರೆಯುವಂತಿಲ್ಲ.

ಕೆರೆ ಬಳಕೆದಾರರ ಸಂಘದ ಪರಿಕಲ್ಪನೆಯ ಹಿಂದೆ ವಿಶ್ವಬ್ಯಾಂಕ್​ ರೂಪಿಸಿಕೊಟ್ಟ ಪರಿಕಲ್ಪನೆಯ ಪ್ರಭಾವವಿದೆ. ಒಂದು ಕೆರೆಯ ಅಭಿವೃದ್ಧಿಗೆ ₹ 5 ಲಕ್ಷ ಸಾಕಾದರೆ ಮತ್ತೊಂದು ಕೆರೆಯ ಕೆಲಸಕ್ಕೆ  ಹೆಚ್ಚು ಖರ್ಚಾಗುತ್ತದೆ. ಈ ಖರ್ಚಿನಲ್ಲಿ ಶೇ 10ರಷ್ಟು ಮೊತ್ತವನ್ನು ಜನರು ಕೊಟ್ಟಿದ್ದಾರೆ. ಆ ನಂತರ ಸಂಘದಲ್ಲಿ ಇರುವ ಹಣವನ್ನು ಖರ್ಚು ಮಾಡಿದ್ದಾರೆ. ಇನ್ನುಳಿದಂತೆ ವಿಶ್ವ ಬ್ಯಾಂಕ್ ಸಾಕಷ್ಟು ಪ್ರಮಾಣದ ಸಾಲ ಒದಗಿಸುವ ಮೂಲಕ ಈ ಯೋಜನೆಗೆ ನೆರವು ನೀಡಿದೆ.

ಜನರ ನೆರವು
ಈ ಯೋಜನೆಗೆ ಬಂಡವಾಳ ವೆಚ್ಚವನ್ನು (ಕ್ಯಾಪಿಟಲ್ ಎಕ್ಸ್​ಪೆಂಡಿಚರ್) ಜನರು ನೀಡಿದ್ದಾರೆ. ಒಂದು ಕೆರೆ ಅಭಿವೃದ್ಧಿ ಯೋಜನೆಗೆ 5 ರಿಂದ 6 ತಿಂಗಳು ಬೇಕಾಗುತ್ತದೆ. ಆ ಸಂದರ್ಭದಲ್ಲಿ ಅಲ್ಲಿನ ಜನರು ಮತ್ತು ಆ ಊರಿನ ಶಾಸಕರು ಸಾಕಷ್ಟು ಸಹಾಯ ಮಾಡಿದ್ದಾರೆ. ಜನರ ಪಾಲುದಾರಿಕೆಯೇ ಈ ಯೋಜನೆಗೆ ಒಂದು ರೀತಿಯಾದ ಸ್ಪೂರ್ತಿ. ಇದಕ್ಕೆ ಜನರ ಆರ್ಥಿಕ ಸಹಾಯ ಅಷ್ಟೇ ಅಲ್ಲ ಅವರ ಪಾಲ್ಗೋಳ್ಳುವಿಕೆ ಕೂಡ ಮುಖ್ಯ ಪಾತ್ರವಹಿಸಿದೆ. ಸಭೆಗೆ ಬರುವುದು, ಚರ್ಚೆಗಳಲ್ಲಿ ಭಾಗಿಯಾಗಿ ಯಾವ ಕೆರೆಗೆ ಯಾವ ರೀತಿಯ ಅಭಿವೃದ್ಧಿ ಅಗತ್ಯ ಎನ್ನುವುದನ್ನು ಅವರೇ ಅರಿತು ಮಾಡಿರುವಂತದ್ದು. ಜನರು ರೂಪಿಸಿರುವ ಇಂಟಿಗ್ರೇಟೆಡ್ ಟ್ಯಾಂಕ್ ಡೆವಲಪ್‌ಮೆಂಟ್ ಪ್ಲಾನ್ ಇದು.

ಈ ಯೋಜನೆಯ ಬಗೆಗಿನ ತೃಪ್ತಿ
ಯಾವೆಲ್ಲಾ ಕೆಲಸ ನನ್ನ ವೃತ್ತಿ ಜೀವನದಲ್ಲಿ ಮಾಡಿದ್ದೇನೆ ಅದರಲ್ಲಿ ನನಗೆ ಹೆಚ್ಚು ತೃಪ್ತಿ ಸಿಕ್ಕಿರುವಂತದ್ದು, ಜಲ ಸಮೃದ್ಧಿ ಯೋಜನೆ. ಏಕೆಂದರೆ ಇದು ಜನರ ಜೊತೆ ನೇರವಾಗಿ ಕೆಲಸ ಮಾಡಿರುವಂತಹ ಯೋಜನೆ ಹೀಗಾಗಿ ಜನರ ಜೊತೆ ಕೆಲಸ ಮಾಡಿದಾಗ ಸಿಗುವ ಖುಷಿ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ದೇಶದ ಸಂಪ್ರದಾಯದ ಬಗ್ಗೆ ನೋಡಿ ಬಹಳಷ್ಟು ಸಂತೋಷವಾಯಿತು. ಕೆರೆಗಳ ಯೋಜನೆ ಅನುಷ್ಠಾನ ಮಾಡುವಾಗ ಆ ಊರಿನ ಜನರ ಜೊತೆ ಒಂದು ಉತ್ತಮ ಸಂಬಂಧ ಬೆಳೆಯಿತು. ಈಗಲೂ ಕೂಡ ಆ ಕೆರೆಗಳನ್ನು ನಾವು ಚೆನ್ನಾಗಿ ಬಳಸುತ್ತಿದ್ದೇವೆ. ಕುಡಿಯಲು ನೀರು ಈಗ ಸಿಗುತ್ತಿದೆ ಎಂದು ಜನರು ಹೇಳುವಾಗ ಬಹಳ ಸಂತಸವಾಯಿತು.

ಕೆರೆ ಬಳಕೆದಾರರ ಸಂಘ ಮಾಡಿದಾಗ ಜಿಲ್ಲಾ ಮಟ್ಟದಲ್ಲಿ ಈ ಯೋಜನೆ ನಿರೂಪಣೆಯಾಗಬೇಕು. ನಂತರ ಅದು ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಅಭಿಲಾಷೆ ಇತ್ತು. ಬಹಳಷ್ಟು ಕೆರೆ ಬಳಕೆದಾರರ ಸಂಘದ ಸದಸ್ಯರು ಇದನ್ನು ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಆಗಲಿಲ್ಲ. ಇನ್ನು ಸರ್ಕಾರದ ಒಂದು ಪ್ರಮುಖ ಲೋಪದೋಷ ಎಂದರೆ ಯಾವುದೇ ಯೋಜನೆಯ ಪ್ರಾರಂಭ ಚೆನ್ನಾಗಿ ಆಗುತ್ತದೆ. ಆದರೆ ನಂತರದಲ್ಲಿ ಅಧಿಕಾರಿಗಳ ಬದಲಾವಣೆಯಿಂದ ಈ ಕಾರ್ಯಪೂರ್ಣವಾಗುವುದಿಲ್ಲ ಇದಕ್ಕೆ ಕಾರಣ ಕೆಲವು ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಿ ಕಾರ್ಯನಿರ್ವಹಿಸುತ್ತಾರೆ. ಇನ್ನು ಕೆಲವು ಅಧಿಕಾರಿಗಳು ಈ ಬಗ್ಗೆ ಗಮನ ಕೊಡುವುದಿಲ್ಲ ಹೀಗಾಗಿ ಯೋಜನೆ ಪೂರ್ಣವಾಗುವುದಿಲ್ಲ.

ನಿವೃತ್ತಿಯ ನಂತರವು ಕೂಡ ಜನರಿಂದ ಉತ್ತಮ ಪ್ರಶಂಸೆ ಸಿಕ್ಕಿದೆ. ಕೆರೆ ಅಭಿವೃದ್ಧಿ ಕಾರ್ಯದ ಅಡಿಯಲ್ಲಿ ಮಾಡಿದ ಯೋಜನೆಯನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಶಿವಮೊಗ್ಗ, ಕೋಲಾರ, ಕೊಪ್ಪಳ, ಹಾವೇರಿ, ರಾಯಚೂರು, ಮಾಲೂರು ಇಲ್ಲಿ ಕೆರೆಗಳನ್ನು ಅಭಿವೃದ್ಧಿಗೆ ತೆಗೆದುಕೊಂಡಿದ್ದೇವು ಹೀಗಾಗಿ ಆ ಸ್ಥಳಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಜನರು ಗುರುತಿಸಿ ಅಭಿನಂದಿಸುತ್ತಾರೆ.

ಪರಿಕಲ್ಪನೆ ಮತ್ತು ಬರಹ: ಪ್ರೀತಿ ಶೆಟ್ಟಿಗಾರ್

ಇದನ್ನೂ ಓದಿ: ನೀರೆಚ್ಚರದ ಬದುಕು | ಬೆಂಗಳೂರಿನಲ್ಲಿ ಇಂಗುಬಾವಿ ಜಾಗೃತಿ, ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ

ಇದನ್ನೂ ಓದಿ:  ನೀರೆಚ್ಚರದ ಬದುಕು | ನಾಡಿನ ಜಲಸುರಕ್ಷೆಗೆ ವರದಾನವಾಗಬಲ್ಲ ಇಂಗುಬಾವಿಗಳು

(Madan Gopal shares his idea and implement plans about lake development)