Covid Diary : ಕವಲಕ್ಕಿ ಮೇಲ್ ; ನೋಯಾ ಕಮ್ಮಾನ್ಯಾ ಲಿಸನ್ಯಾ, ಕನ್ನಡಾ ಮಾತಾಡಿದ್ಯೋ ಫೈವ್ ರೂಪೀಸ್ ಫೈನ್ ಪುಟ್ಯಾ

Teacher : ‘ಆ ವೇಳೆಗೆ ಬಿಸಿಯೂಟದ ವಸ್ತುಗಳನ್ನು ಮನೆಮನೆಗೊಯ್ದು ಹಂಚುವ ಕೆಲಸ ಬಂದಿತು. ಕೆಲವರು ‘ಕಂಡವರ’ ಮನೆಗೆ ಹೋಗಲು ಹೆದರಿದರು. ತಪ್ಪಿಸಿಕೊಳ್ಳಲು ನೋಡಿದರು. ಆದರೆ ನರ್ಮದಕ್ಕೋರು ಮಾತ್ರ ಇಡೀ ಏರಿಯಾವನ್ನು ತಾನೊಬ್ಬಳೇ ಬೇಕಾದರೂ ಸುತ್ತಿ, ರೇಷನ್ ಕೊಟ್ಟು ಬಂದೇನು ಎಂದರು. ಈ ಮೊದಲೂ ಆ ಗಣತಿ, ಈ ಸರ್ವೇ, ಲೆಕ್ಕಪತ್ರ ಮುಂತಾಗಿ ಯಾವ ಕೆಲಸಕ್ಕೂ ಕಳ್ಳಬಿದ್ದವರಲ್ಲ. ಈಗಲೂ ಅದೇ ಉತ್ಸಾಹದಲ್ಲಿ ಹೊರಟರು.’

Covid Diary : ಕವಲಕ್ಕಿ ಮೇಲ್ ; ನೋಯಾ ಕಮ್ಮಾನ್ಯಾ ಲಿಸನ್ಯಾ, ಕನ್ನಡಾ ಮಾತಾಡಿದ್ಯೋ ಫೈವ್ ರೂಪೀಸ್ ಫೈನ್ ಪುಟ್ಯಾ
ಶ್ರೀದೇವಿ ಕಳಸದ | Shridevi Kalasad

|

Jun 14, 2021 | 9:45 PM

ಅಕ್ಕೋರು ಶಾಲೆಗೆ ಬಂದು ನೋಡುತ್ತಾರೆ, ಮಕ್ಕಳಿಲ್ಲದೆ ಭಣಭಣ ಎನ್ನುತ್ತಿದೆ! ಈಗವರು ಹೆಡ್ ಅಕ್ಕೋರಾಗಿದ್ದಾರೆ. ಏನು ಮಾಡುವುದು? ಎಲ್ಲರನ್ನು ಸೇರಿಸಿ ಸಭೆ ಕರೆದರು. ದುಬೈ ಮುಂತಾದ ಕಡೆಯಿರುವ ಹಳೆಯ ವಿದ್ಯಾರ್ಥಿಗಳ ಸಹಾಯದಿಂದ ಕಂಪ್ಯೂಟರುಗಳನ್ನು ತರಿಸಿದರು. ಮಕ್ಕಳನ್ನು ಕರೆತರಲು ಉಚಿತ ವ್ಯಾನು ಇಟ್ಟರು. ಎಲ್ಲ ತರಗತಿಗಳಿಗೂ ಮಣೆ ಹೋಗಿ ಡೆಸ್ಕು ಬಂತು. ಉಚಿತ ಸಮವಸ್ತ, ಪುಸ್ತಕ, ಮಧ್ಯಾಹ್ನ ಊಟಕ್ಕೆ ಹಾಲು ವ್ಯವಸ್ಥೆಯಾಯಿತು. ಪ್ರತಿಭಾ ಕಾರಂಜಿಗೆ ಮಕ್ಕಳು ರಾಜ್ಯಮಟ್ಟಕ್ಕೂ ಹೋದರು. ವಾರ್ಷಿಕೋತ್ಸವ, ಪ್ರವಾಸ, ನಾಟಕ ಇಡಿಸಿದರು. ಇಷ್ಟಾದರೂ ಪ್ರತಿವರ್ಷ 5-10 ಹೊಸ ಮಕ್ಕಳಷ್ಟೇ ಸಿಗುತ್ತಿದ್ದಾರೆ. ಶಾಲೆಯ 125ನೇ ವರ್ಷಾಚರಣೆಯ ವೇಳೆಗೆ 125 ಮಕ್ಕಳಾದರೂ ಇರುವಂತೆ ಮಾಡಬೇಕು ಎಂಬ ಗುರಿ ತುಟ್ಟಿ ಕನಸಿನಂತೆ ಕಾಣುತ್ತಿರುವಾಗ ಕೊರೋನಾ ಬಂತು. ಹದಿನೈದು ದಿನವೆಂದು ಶುರುವಾದ ಲಾಕ್‌ಡೌನ್ ಒಂದೇಸಮ ಮುಂದುವರೆದು ಆ ವರ್ಷ ಶಾಲೆಯೂ ಇಲ್ಲ. ಪರೀಕ್ಷೆಯೂ ಇಲ್ಲ. ನರ್ಮದಕ್ಕೋರ ಸಂಗೀತಪಾಠವೂ ನಿಂತಿತು.

*

ಆಯ್ತಲ, ನೀವ್ ಹೇಳ್ದಂಗೇ ಆತು, ನಮ್ಮ ಹುಡ್ರನ್ನ ಕನ್ನಡ್ ಸಾಲಿಗೇ ಕಳಸುದಾಯ್ತು.’

ಸೋತ ದನಿಯಲ್ಲಿ ಗಣಪತಿಯ ತಾಯಿ ಹೇಳಿ ‘ಹಚಾ’ ಎಂದು ಬೆಕ್ಕನ್ನೋಡಿಸುವಳೋ, ಅಲ್ಲಿದ್ದ ಮನುಷ್ಯರನ್ನೋಡಿಸುತ್ತಿರುವಳೋ ತಿಳಿಯದಂತೆ ಗದರಿ ಮೀನು ಚೊಕ್ಕಮಾಡುವ ಕೆಲಸಕ್ಕೆ ತೆರಳಿದಳು. ಆ ಮಾತು ನರ್ಮದಕ್ಕೋರ ತಲೆಯಲ್ಲಿ ಒಂದೇಸಮ ಗುಂಗಿಹುಳದಂತೆ ಕೊರೆಯತೊಡಗಿತು. ಬಲೆಹಾಕುವ, ಮೀನುವ್ಯಾಪಾರ ಮಾಡುವ ಗಟ್ಟಿಗ ಅವಳ ಗಂಡ ಕೋವಿಡ್ ಬಂದು ತೀರಿಕೊಂಡಿದ್ದ. ವಯಸ್ಸಾದ ತಾಯ್ತಂದೆಯರು, ಸಣ್ಣಸಣ್ಣ ಮೂರು ಮಕ್ಕಳು, ಅಸ್ತಮಾ ರೋಗಿಯಾಗಿದ್ದ ಹೆಂಡತಿ ಹೊರಗೆಲ್ಲೂ ಹೋಗುವುದು ಬೇಡವೆಂದು ಎಲ್ಲ ತಾನೇ ನಿಭಾಯಿಸುತ್ತಿದ್ದ. ಅಂಥವಾ ತೀರಿಕೊಂಡು ಮನೆಯ ಆಧಾರವೇ ಕುಸಿದು ಬಿದ್ದಂತಾಗಿದೆ. ಅವರ ಮನೆಗೆ ಬಿಸಿಯೂಟದ ಕಿಟ್ ವಿತರಿಸಲು ಹೋದ ನರ್ಮದಕ್ಕೋರು ಮನೆಯ ಪರಿಸ್ಥಿತಿ, ಅವಳ ದುಃಖ, ಸೋತಭಾವ ಕಂಡು ದಂಗುಬಡಿದು ಹೋದರು.

ಹ್ಞಾಂ, ನರ್ಮದಕ್ಕೋರು ಯಾರೆಂದೇ ನಿಮಗೆ ಹೇಳಲಿಲ್ಲ ಅಲ್ಲವೆ? ಈ ಸುತ್ತಿಗೆಲ್ಲ ಹಳೆಯದಾದ ಮುಡಗೋಡು ಶಾಲೆಯ ಟೀಚರು ಅವರು. ಇಲ್ಲೆಲ್ಲ ಟೀಚರನ್ನು ಅಕ್ಕೋರು ಅಂತಲೇ ಕರೆಯುವುದು. ಅವರನ್ನು ಬರೀ ಅಕ್ಕೋರು ಅಂತ ಕರೆದರೆ ತುಂಬ ಕಮ್ಮಿ ಆದೀತು. ಆ ಶಾಲೆಯ ಜೀವಾಳ ಅವರು. ಅವರ ಸರ್ವಿಸ್ ಶುರುವಾಗಿದ್ದು ಮುಡಗೋಡು ಶಾಲೆಯಲ್ಲಿ. ಅಲ್ಲಿಗೆ ಸಮೀಪದ ಹಳ್ಳಿಯಲ್ಲಿ ಅವರ ಬಾಳಸಂಗಾತಿ ಗೋ ಡಾಕ್ಟರ್ ಆಗಿದ್ದಾರೆ. ಉಳಿದ ಅಕ್ಕೋರು, ಮಾಸ್ತರು ಶಾಲೆಯ ಸಮಯಕ್ಕೆ ಓಡಿಹೋಗಿ ನಿಂತರೆ ಇವರು ಮೊದಲೇ ಹೋಗುತ್ತಾರೆ. ಅವರು ಬರುವರೆಂದು ಮಕ್ಕಳು ಕೂಡಾ ಬೇಗ ಹೋಗುವವು. ಮಕ್ಕಳೊಡನೆ ಸ್ವಚ್ಛತೆ, ಗಿಡಕ್ಕೆ ನೀರು, ತರಕಾರಿ ಕೊಯಿಲು ಹೀಗೆ ಏನಾದರೊಂದು ಮಾಡುತ್ತಾರೆ. ಹೆಚ್ಚು ಓದಿ ಹೀಗೆ ಮಾಡು, ಹಾಗೆ ಅವರಂತೆ ಆಗು ಮುಂತಾಗಿ ಮಕ್ಕಳಲ್ಲಿ ಸ್ಫೂರ್ತಿ ಚಿಲುಮೆಯುಕ್ಕಿಸುತ್ತಾರೆ. ಚುರುಕಿನ ಮಕ್ಕಳನ್ನು ಗುರುತಿಸಿ ಆಸಕ್ತಿಗೆ ನೀರೆರೆಯುತ್ತಾರೆ. ಅವರ ಕೈಚೀಲದಲ್ಲಿ ಮಕ್ಕಳಿಗೆ ಓದಿ ಹೇಳುವಂತಹ ಪುಸ್ತಕಗಳು ಸದಾ ಇರುತ್ತವೆ.

covid diary

ಡಾ. ಕೃಷ್ಣ ಗಿಳಿಯಾರ್

ಆ ಶಾಲೆಗೆ ತಮ್ಮನೆ ಮಕ್ಕಳು ಹೋಗುತ್ತಿದ್ದಾರೆಂದು ಹೇಳಿಕೊಳ್ಳಲಿಕ್ಕೇ ಹೆಮ್ಮೆ ಪಡುವ ಕಾಲ ಒಂದಿತ್ತು. ಒಂಥರಾ ಶಕ್ತಿ ಸ್ಥಲ ಅದು. ಅಲ್ಲಿ ಕಲಿತ ವಿದ್ಯಾರ್ಥಿಗಳು ಏನೇನು ಆಗಿದ್ದಾರೆಂಬ ಲೆಕ್ಕವಿಲ್ಲ. ಗುಡ್ಡೆಯ ಮೇಲಿರುವ ಬಿಳೀ ಗೋಡೆ, ಕೆಂಪು ಹಂಚಿನ ಶಾಲೆಯ ಕಟ್ಟಡ ಎಷ್ಟೋ ದೂರದ ತನಕ ಕಾಣುತ್ತದೆ. ಇರುವೆಗಳ ತರಹ ಸಾಲಾಗಿ ಮಕ್ಕಳು ಗುಡ್ಡಹತ್ತಿ ಶಾಲೆಗೆ ಹೋಗುವುದನ್ನು ನೋಡುವುದೇ ಒಂದು ಚಂದ. ಏಳು ಕ್ಲಾಸಿಗೆ ಏಳು ಕೋಣೆ, ಗ್ರಂಥಾಲಯ, ಅಧ್ಯಾಪಕರ ಕೋಣೆ, ಶಿಶುವಿಹಾರ, ಎಲ್ಲ ಸೇರಿ ಇಂಗ್ಲಿಷ್ ಎಲ್ ಆಕಾರದ ಶಾಲೆಯ ಕಟ್ಟಡ ಗುಡ್ಡದ ತಲೆಯನ್ನು ಆವರಿಸಿಕೊಂಡಿದೆ. ಬಾವಿಯಲ್ಲಿ ಬೇಸಿಗೆಯ ಕೊನೆತನಕ ನೀರಿರುತ್ತದೆ. ಈ ತರಗತಿಯವರಿಗೆ ಇಂತಿಂಥದೆಂದು ಆವರಣದ ಗಿಡಮರಗಳನ್ನು ವಹಿಸಿಕೊಟ್ಟ ಕಾರಣ ಮಕ್ಕಳ ನಡುವಿನ ಸ್ಪರ್ಧೆಯಲ್ಲಿ ಗಿಡಗಳು ನಳನಳಿಸುತ್ತವೆ. ಶಾಲೆ ಎದುರಿರುವ ನಾಗಲಿಂಗ ಪುಷ್ಪದ ಮರ ದೊಡ್ಡ ಆಕರ್ಷಣೆ. ಆ ಸುತ್ತಿನಲ್ಲಿ ಅಂತಹ ಹೂವಿನ ಮರವೇ ಇಲ್ಲ. ಸುಲಿದ ತೆಂಗಿನಕಾಯಷ್ಟು ದೊಡ್ಡ ಕಾಯಿ, ವಿಶಿಷ್ಟ ಪರಿಮಳ ಬೀರುವ ಹೂವು, ಅದರ ಆಕಾರ, ದಳಗಳ ನಡುವಿರುವ ಶಿವಲಿಂಗ ಮತ್ತು ನಾಗರ ಹೆಡೆಗಳನ್ನು ಮಕ್ಕಳು ನೋಡುತ್ತ ನಿಲ್ಲುವರು. ದಣಪೆಯ ಆಚೆ ಒಂದು ಬಕುಲದ ಮರವೂ ಇದೆ. ಅದಕ್ಕೆ ಬುಗುಳು ಮರ ಎಂದೂ ಕರೆಯುತ್ತಾರೆ. ಆಗಸದ ನಕ್ಷತ್ರಗಳು ಉದುರಿ ಕೆಳಗೆ ಬಿದ್ದವೋ ಎನ್ನುವಂತೆ ಕಾಣುವ ಹೂವು ನೋಡಿದರೆ ಯಾರಿಗಾದರೂ ಹೆಕ್ಕಿ, ಸುರಿದು, ಮಂಡೆಗೇರಿಸುವ ಉಮೇದಿ ಬರುತ್ತದೆ. ಕೆಲವು ಹುಡುಗಿಯರು ಮನೆಯಿಂದ ಬಾಳೆನಾರು ತಂದು, ಶಾಲೆಗೆ ಬೇಗಬಂದು, ಹೂವು ಸುರಿಯುತ್ತ ಇರುವುದನ್ನು ನೋಡಬಹುದು.

ಇಂಥ ಶಾಲೆಯಲ್ಲಿರುವ ನರ್ಮದಕ್ಕೋರು ಸುತ್ತಮುತ್ತಲ ಊರವರು ಇಲ್ಲಿಗೇ ಮಕ್ಕಳನ್ನು ಕಳಿಸುವಷ್ಟು ಜನಪ್ರಿಯರು. ಅವರ ಸ್ಫೂರ್ತಿಯ ಮಾತು, ಬೆಂಬಲ, ಸಲಹೆಗಳಿಂದ ಕೆಲವು ಮಕ್ಕಳು ಇಂಜಿನಿಯರಿಂಗಿಗೆ  ಹೋದರು. ಕೆಲವರು ಟೀಚರಾದರು. ಹುಡುಗನೊಬ್ಬ ತಬಲಾ ಪಟುವಾದ, ಒಬ್ಬಳು ಲಾಯರಿಕೆಗೆ ಹೋದಳು. ನೀವು ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಹಾಕಿ ಎಂದು ಯಾರೋ ಹೇಳಿದರೆ, ‘ಕಲಿತ ನಮ್ಮ ಮಕ್ಕಳೇ ನನಗೆ ಪ್ರಶಸ್ತಿ’ ಎಂದು ನಿರಾಕರಿಸಿಬಿಟ್ಟರು. ಆಚೀಚೆ ಊರುಗಳ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲ ಎಂಬ ತಲೆಬಿಸಿ. ಎಷ್ಟೋ ಕಡೆ ಒಂದರಿಂದ ಏಳನೇ ತರಗತಿಯವರೆಗೆ ಹತ್ತಿಪ್ಪತ್ತು ಮಕ್ಕಳು ಇರುವುದಿದೆ. ಕೆಲವು ತರಗತಿಗಳಿಗೆ ಒಂದೇ ವಿದ್ಯಾರ್ಥಿ. ಕೆಲವದರಲ್ಲಿ ಎರಡು, ಕೆಲವಕ್ಕೆ ಇಲ್ಲ ಎಂದಾಗಿರುವುದೂ ಇದೆ. ಅತಿ ಕಡಿಮೆ ವಿದ್ಯಾರ್ಥಿಗಳಿರುವರೆಂದು ಶಾಲೆಗಳು ಮುಚ್ಚಿಹೋದದ್ದೂ ಇದೆ. ಶತಮಾನೋತ್ಸವ ಆಚರಿಸಿದ ಕನ್ನಡ ಶಾಲೆಗಳು ಇಂಗ್ಲಿಷ್ ಮೀಡಿಯಂ ಕಾನ್ವೆಂಟುಗಳೆದುರು ಪೇಲವಗೊಂಡು ನಿಂತಿವೆ. ಬರಬರುತ್ತ ಅಂಗನವಾಡಿಗಳಿಗೂ ಇದೇ ಸ್ಥಿತಿ ಬಂದಿದೆ. ಆದರೆ ಈ ಶಾಲೆ ಹಾಗಲ್ಲ. ಅಲ್ಲಿ ಕೋಣೆ ತುಂಬ ಮಕ್ಕಳಿದ್ದರು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ದುಃಖದ ವಿಷಯವೆಂದರೆ ಮುಡಗೋಡು ಶಾಲೆಗೂ ಆತಂಕ ಎದುರಾಗುವ ಕಾಲ ಬಂದದ್ದು. ಪಕ್ಕದೂರಿನಲ್ಲೇ ಒಂದು ಇಂಗ್ಲಿಷ್ ಶಾಲೆ ಶುರುವಾಯಿತು. ಥಳಥಳ ಸಮವಸ್ತ್ರದಲ್ಲಿ ಶಾಲೆ ಬಸ್‌ನಲ್ಲಿ ಹೋಗಿ ಬ್ಯಾಂಡ್ ಸೆಟ್ಟಿನೊಡನೆ ಇಂಗ್ಲಿಷ್ ಪ್ರೇಯರ್ ಹೇಳುವುದೇನು? ಹೊಚ್ಚಹೊಸ ಬಿಲ್ಡಿಂಗಿನಲ್ಲಿ ಕಂಪ್ಯೂಟರು ಕಲಿತು, ಕನ್ನಡ ಮಾತನಾಡಿದರೆ ಪದಕ್ಕೆ ಐದು ರೂಪಾಯಿಯಂತೆ ಫೈನ್ ಕಟ್ಟುವುದೇನು? ನೋಯಾ ಕಮ್ಮಾನ್ಯ ಲಿಸನ್ಯ ಎಂದು ಮಕ್ಕಳು ಇಂಗ್ಲೀಷಿನಲ್ಲಿ ಮಾತಾಡುವುದೇನು? ಯುಕೆಜಿ, ಎಲ್ಕೆಜಿಯಿಂದ ಶುರುವಾದ ಇಂಗ್ಲಿಷ್ ಶಾಲೆ ನಿಧಾನವಾಗಿ ಬೆಳೆಯಿತು. ಕಾಯಿಸುಳಿ ಫ್ಯಾಕ್ಟರಿ, ಗೇರು ಫ್ಯಾಕ್ಟರಿ, ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಕೆಲಸಕ್ಕೆ ಹೋಗುವ ಅಮ್ಮಂದಿರು ತಮಗೆ ಬರದ ಇಂಗ್ಲಿಷನ್ನು ಮಕ್ಕಳು ಕಲಿತು ನಗರ ಸೇರಿಕೊಳ್ಳಲಿ ಎಂದು ದುಡಿದದ್ದನ್ನೆಲ್ಲ ಫೀಸಿಗೆ ಸುರಿದರು. ಅಷ್ಟೊತ್ತಿಗೆ ನಲವತ್ತರ ಸಮೀಪದ ನರ್ಮದಕ್ಕೋರು ಮದುವೆಯಾಗಿ ಹದಿನೈದು ವರ್ಷದ ಬಳಿಕ ಬಸುರಾದರು. ತಪಾಸಣೆ, ಚಿಕಿತ್ಸೆ, ಹೆರಿಗೆ ಎಂದು ಹೆಚ್ಚುಕಮ್ಮಿ ಒಂದುವರ್ಷ ರಜೆಯ ಮೇಲೆ ಹೋಗಿಬಿಟ್ಟರು. ಶಾಲೆಯ ಮತ್ತಿಬ್ಬರು ಮಾಸ್ತರು ವರ್ಗವಾಗಿ ಹೋದಮೇಲೆ ಈಗಲ್ಲಿ ಮಕ್ಕಳೂ ಇಲ್ಲ, ನರ್ಮದಕ್ಕೋರೂ ಇಲ್ಲ. ಒಂದು ಕಾಲದಲ್ಲಿ ಏಳು ತರಗತಿಗಳು ಸೇರಿ ಮುನ್ನೂರಕ್ಕೂ ಮಿಕ್ಕಿ ಮಕ್ಕಳಿರುತ್ತಿದ್ದ ಮುಡಗೋಡು ಶಾಲೆಯಲ್ಲೀಗ ಏಳು ತರಗತಿಗಳಿಂದ ಐವತ್ತು ವಿದ್ಯಾರ್ಥಿಗಳೂ ಇಲ್ಲವಾಯಿತು.

ಅಕ್ಕೋರು ಶಾಲೆಗೆ ಬಂದು ನೋಡುತ್ತಾರೆ, ಮಕ್ಕಳಿಲ್ಲದೆ ಭಣಭಣ ಎನ್ನುತ್ತಿದೆ! ಈಗವರು ಹೆಡ್ ಅಕ್ಕೋರಾಗಿದ್ದಾರೆ. ಏನು ಮಾಡುವುದು? ಎಲ್ಲರನ್ನು ಸೇರಿಸಿ ಸಭೆ ಕರೆದರು. ದುಬೈ ಮುಂತಾದ ಕಡೆಯಿರುವ ಹಳೆಯ ವಿದ್ಯಾರ್ಥಿಗಳ ಸಹಾಯದಿಂದ ಕಂಪ್ಯೂಟರುಗಳನ್ನು ತರಿಸಿದರು. ಮಕ್ಕಳನ್ನು ಕರೆತರಲು ಉಚಿತ ವ್ಯಾನು ಇಟ್ಟರು. ಎಲ್ಲ ತರಗತಿಗಳಿಗೂ ಮಣೆ ಹೋಗಿ ಡೆಸ್ಕು ಬಂತು. ಉಚಿತ ಸಮವಸ್ತ, ಪುಸ್ತಕ, ಮಧ್ಯಾಹ್ನ ಊಟಕ್ಕೆ ಹಾಲು ವ್ಯವಸ್ಥೆಯಾಯಿತು. ಪ್ರತಿಭಾ ಕಾರಂಜಿಗೆ ಮಕ್ಕಳು ರಾಜ್ಯಮಟ್ಟಕ್ಕೂ ಹೋದರು. ವಾರ್ಷಿಕೋತ್ಸವ, ಪ್ರವಾಸ, ನಾಟಕ ಇಡಿಸಿದರು. ಇಷ್ಟಾದರೂ ಪ್ರತಿವರ್ಷ 5-10 ಹೊಸ ಮಕ್ಕಳಷ್ಟೇ ಸಿಗುತ್ತಿದ್ದಾರೆ. ಶಾಲೆಯ 125ನೇ ವರ್ಷಾಚರಣೆಯ ವೇಳೆಗೆ 125 ಮಕ್ಕಳಾದರೂ ಇರುವಂತೆ ಮಾಡಬೇಕು ಎಂಬ ಗುರಿ ತುಟ್ಟಿ ಕನಸಿನಂತೆ ಕಾಣುತ್ತಿರುವಾಗ ಕೊರೋನಾ ಬಂತು. ಹದಿನೈದು ದಿನವೆಂದು ಶುರುವಾದ ಲಾಕ್‌ಡೌನ್ ಒಂದೇಸಮ ಮುಂದುವರೆದು ಆ ವರ್ಷ ಶಾಲೆಯೂ ಇಲ್ಲ. ಪರೀಕ್ಷೆಯೂ ಇಲ್ಲ. ನರ್ಮದಕ್ಕೋರ ಸಂಗೀತಪಾಠವೂ ನಿಂತಿತು.

covid diary

ಡಾ. ಕೃಷ್ಣ ಗಿಳಿಯಾರ್

ನರ್ಮದಕ್ಕೋರಿಗೆ ಶಾಲೆಯಿಲ್ಲದೆ ಎಂಥದೋ ಖಾಲಿತನ. ಸುತ್ತಮುತ್ತ ಸಂಭವಿಸುವ ಸಾವುನೋವಿನ ನಡುವೆ ಏನೂ ಮಾಡದೇ ಕುಳಿತಿರುವೆನೆಂಬ ಭಾವ. ಕೆಲಸ ಮಾಡದೆ ಸಂಬಳ ಪಡೆಯುತ್ತಿರುವ ಪಾಪಪ್ರಜ್ಞೆ. ಗಂಟಿಗಳಿಗೆ ಲಸಿಕೆ ಹಾಕಿ ಅವುಗಳ ಕಿವಿಮೇಲೆ ಹಳದಿ ಕಾರ್ಡು ಅಂಟಿಸುವ ಕೆಲಸದಲ್ಲಿ ಊರೂರು ತಿರುಗಾಡುತ್ತಿದ್ದ ಅವರ ಪತಿಗೆ ಮೊದಲು ಕೋವಿಡ್ ಬಂತು. ಬಳಿಕ ಎಲ್ಲರೂ ಪಾಸಿಟಿವ್ ಆದರೂ ಹೆಚ್ಚು ಬಾಧಿಸದೆ ತಂಡಿಜ್ವರದಲ್ಲಿ ಮುಗಿದು ಹೋಯಿತು. ಕೊರೊನಾ ಬಂದು ಕಾಯಿಲೆಗಿಂತ ಹೆಚ್ಚು ಮನುಷ್ಯ ಸ್ವಭಾವಗಳ ಪರಿಚಯವಾಯಿತು.

ಆ ವೇಳೆಗೆ ಬಿಸಿಯೂಟದ ವಸ್ತುಗಳನ್ನು ಮನೆಮನೆಗೊಯ್ದು ಹಂಚುವ ಕೆಲಸ ಬಂದಿತು. ಕೆಲವರು ‘ಕಂಡವರ’ ಮನೆಗೆ ಹೋಗಲು ಹೆದರಿದರೆ, ಮತ್ತೆ ಕೆಲವರು ಇಲ್ಲದ ಕಾಯಿಲೆ ಸೃಷ್ಟಿಸಿಕೊಂಡು ತಪ್ಪಿಸಿಕೊಳ್ಳಲು ನೋಡಿದರು. ಆದರೆ ನರ್ಮದಕ್ಕೋರು ಮಾತ್ರ ಇಡೀ ಏರಿಯಾವನ್ನು ತಾನೊಬ್ಬಳೇ ಬೇಕಾದರೂ ಸುತ್ತಿ, ರೇಷನ್ ಕೊಟ್ಟು ಬಂದೇನು ಎಂದರು. ಈ ಮೊದಲೂ ಆ ಗಣತಿ, ಈ ಸರ್ವೇ, ಲೆಕ್ಕಪತ್ರ ಮುಂತಾಗಿ ಯಾವ ಕೆಲಸಕ್ಕೂ ಕಳ್ಳಬಿದ್ದವರಲ್ಲ. ಈಗಲೂ ಅದೇ ಉತ್ಸಾಹದಲ್ಲಿ ಹೊರಟರು.

ಅಂದು ಬೆಳಿಗ್ಗೆಯೇ ಆ ಕೇರಿಗೆ ಬಂದರು. ಒಂದು ಕಾಲದಲ್ಲಿ ಅಲ್ಲಿಂದ ಹದಿನೈದು ಇಪ್ಪತ್ತು ಮಕ್ಕಳು ಶಾಲೆಗೆ ಬರುತ್ತಿದ್ದವು. ಈಗ ಇಂಗ್ಲಿಷ್ ಶಾಲೆಗೆ ಆರ್​ಟಿಇ ಪ್ರವೇಶ ಸಿಕ್ಕು ಎರಡು ಮಕ್ಕಳಷ್ಟೇ ಬರುತ್ತಿವೆ. ಖಾಲಿಖಾಲಿ ರಸ್ತೆಮೇಲೆ ಸ್ಕೂಟಿಯಲ್ಲಿ ಬಂದಿಳಿದು ಕೇರಿ ಪ್ರವೇಶಿಸಿದರೆ ಬೇರೆ ಜಗತ್ತಿಗೆ ಬಂದಂತಾಯಿತು. ಬಾಳೆಪಟ್ಟೆ ನಾರು ತೆಗೆಯುವವರು, ಅಡಿಕೆ ಹಾಳೆ ಕತ್ತರಿಸಿ ನೆಲಸಾರಿಸುವ ತುಂಡು, ಹಾಳೆಟೊಪ್ಪಿ ಮಾಡುತ್ತಿರುವವರು, ವಾಟೆಕಾಯಿಯನ್ನು ತೆಳ್ಳಗೆ ಹೆಚ್ಚುತ್ತ ಒಣಗಿಸುವವರು, ಬಿಳುವ ಹಲಸಿನಕಾಯಿ ಸೋಯ್ಸಿ ಹಪ್ಪಳ, ಉಪ್ಕರಿಗೆ ಹೆಚ್ಚುತ್ತಿರುವವರು, ಬಾಳೆಲೆ ಮೇಲೆ ಹಲಸು ಮಾವುಗಳ ಹಣ್‌ಚಟ್ಟಿಗೆ ಹಚ್ಚುತ್ತಿರುವವರು, ಹಲಸಿನ ಎಲೆಗೆ ಹಂಚಿಕಡ್ಡಿ ಚುಚ್ಚಿ ಕಡುಬಿನ ಕೊಟ್ಟೆ ಮಾಡುವವರು – ಆಹಾ, ಲೋಕವನ್ನೇ ನಡುಗಿಸುತ್ತಿರುವ ಕೋವಿಡ್ ಇಲ್ಲಿದೆಯೋ ಇಲ್ಲವೋ ಎಂಬ ಅನುಮಾನ ಹುಟ್ಟುವಂತೆ ಎಲ್ಲರೂ ದಿನಚರಿಯ ಲೋಕದೊಳಗೆ ಮುಳುಗಿಬಿಟ್ಟಿದ್ದಾರೆ. ಹೆಚ್ಚಾಗಿ ಹೆಣ್ಣುಗಳೇ ಕೆಲಸದಲ್ಲಿ ತೊಡಗಿದ್ದಾರೆ. ಒಬ್ಬಳು ಕೌಳಿಕಾಯಿ, ಬಿಂಬ್ಲಿಕಾಯಿ, ಜಾನಗೆ ಹಣ್ಣುಗಳನ್ನೆಲ್ಲ ಒಟ್ಟಿಗೆ ರಾಶಿ ಹಾಕಿಕೊಂಡು ಕುಳಿತಿದ್ದಳು. ಉಪ್ಪಿನಕಾಯಿಗೇ? ಹುಳ್ಳನೆಯ ರುಚಿ ನೆನಪಾಗಿ ಬಾಯಲ್ಲಿ ನೀರು ತುಂಬಿತು. ಮಾಸ್ಕು, ಫೇಸ್‌ಶೀಲ್ಡಿನಿಂದ ಹೆಚ್ಚಿನವರಿಗೆ ಅಕ್ಕೋರ ಗುರುತು ಹತ್ತಲಿಲ್ಲ. ಯಾರೋ ಆರೋಗ್ಯ ಇಲಾಖೆಯವರು ಬಂದರೆಂದು ಕೆಲವರು ಕೈಯೊರೆಸುತ್ತ ಒಳಹೊಕ್ಕು ಬಾಗಿಲು ಹಾಕಿಕೊಂಡರು. ಇದೇನಿದು ನನ್ನ ಭಾರತವೇ? ಮಕ್ಕಳೆಲ್ಲಿ ಹೋದವು? ಟಿವಿ ಮುಂದೆ ಕೂತಿರುವವೇ? ಶಾಲೆ, ಕಾಲೇಜು ಒಂದು ವರ್ಷದಿಂದ ಇಲ್ಲದೆ ಸಂತಸವಾದಂತೆ ಬೇಸರವೂ ಆಗಿರಬಹುದು ಎಂದುಕೊಳ್ಳುತ್ತ ಹೋಗುವಾಗ ‘ಅಕ್ಕೋರೇ, ಅಕ್ಕೋರೇ’ ಎಂದು ಮೂರು ಮಕ್ಕಳು ಓಡೋಡಿ ಬಂದವು. ‘ಅರೆ ಗಣಪತಿ! ಆರಾಮಿದ್ಯೆನ?’ ಎಂದರು. ‘ಹೌದಕ್ಕೋರೆ. ಇದ್ ನನ್ ತಂಗಿ ಪೂಜ. ಇಂವಾ ಪ್ರಸಾದ, ನನ್ ತಮ್ಮ’ ಎಂದು ಉತ್ಸಾಹದಿಂದ ಅವರೆದುರು ನಿಂತ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಮನೇಲಿ ಯಂತ ಮಾಡ್ತ ಇದ್ಯ ತಮ?’

‘ಅವ್ವಿ ಹೀಂಗ್ ಮಾಡಬ್ಯಾಡ, ಹಾಂಗ್ ಮಾಡಬ್ಯಾಡ, ಇದು ಮಾಡು, ಅದು ಮಾಡು ಅಂತ ಕಟಕಟಗುಡ್ತೇ ಇರ‍್ತದೆ ಬರೀ.’

‘ನೀನು ಅವ್ಳಿಗ್ ಸಹಾಯ ಮಾಡು ಪಾಪ. ಆಗ ಸುಮ್ನರ‍್ತಾಳೆ.’

‘ನಾಯಂತ ಮಾಡುದು? ಅವ್ಳು ಒಳಗ್ ಹೊಕ್ಕುಕೆ ಕೊಡುದಿಲ್ಲ. ಅಕ್ಕೋರೆ, ಪುಸ್ಕ ಅದೆಯಾ?’

ಆಸೆಗಣ್ಣಿಂದ ಅವರ ಬ್ಯಾಗಿನ ಕಡೆ ನೋಡುತ್ತ ಕೇಳಿದ. ‘ದಿನಕ್ಕೊಂದು ಕತೆ’ ಪುಸ್ತಕ ಅವನ ಕೈ ಸೇರಿತು. ಅಷ್ಟೊತ್ತಿಗೆ ಅವನ ಅವ್ವ ಮಂಡೆಕೂದಲು ಹಿಂದೆ ಸರಿಸುತ್ತ ಬಂದಳು. ಗಂಡನ ಸಾವಿನ ಬಳಿಕ ಏಕಾಂಗಿಯಾಗಿ ಕುಟುಂಬ ನಿರ್ವಹಣೆ ಮಾಡುತ್ತ ಸೋತು ಹೋಗಿದ್ದಾಳೆ. ಅವಳು ಕೆಮ್ಮುತ್ತಿದ್ದಾಳೆ. ಮಕ್ಕಳೂ ಕೆಮ್ಮುತ್ತಿವೆ. ತಮ್ಮ ಫೇಸ್‌ಶೀಲ್ಡ್ ಒಳಗಿನಿಂದಲೇ ಅವರಿಗೆಲ್ಲ ಮಾಸ್ಕು ಹಾಕಲು ಹೇಳಿದರು. ಅವ್ವ ಸೆರಗನ್ನೇ ಮುಖಕ್ಕಡ್ಡ ಕಟ್ಟಿದಳು. ಗಣಪತಿ ಒಳಗೆ ಓಡಿಹೋಗಿ ಮಾಸ್ಕುಗಳೆಂಬ ಬಟ್ಟೆಚೂರುಗಳನ್ನು ತಂದ. ಪ್ರಸಾದ ಸುರಿಸುತ್ತಿದ್ದ ಸುಂಬಳ ತೆಗೆದು, ತನ್ನ ಸೀರೆಗೆ ಒರೆಸಿ, ಬಾಯಿಗಡ್ಡ ಬಟ್ಟೆತುಂಡು ಕಟ್ಟಿದಳು. ಅವ ಒಂದೇಸಮ ನೆಕ್ಕಿನೆಕ್ಕಿ ಅದನ್ನು ಒದ್ದೆ ಮಾಡಿದ. ಕೋವಿಡ್ ಎಂದರೆ ಯಾರು ನೀನು ಎನ್ನುವಷ್ಟು ಧೈರ್ಯವಂತರಾದ ಇವರನ್ನು ಕಂಡು ಕೊರೊನಾಗೆ ನಾಚಿಕೆಯಾಗಿ ಓಡಿ ಹೋಗಲಿ ಎಂದು ಅಕ್ಕೋರು ಮನದಲ್ಲೇ ಪ್ರಾರ್ಥಿಸಿ ತಮ್ಮ ಬಳಿಯಿದ್ದ ಹೆಚ್ಚುವರಿ ಮಾಸ್ಕನ್ನು ಅವರಿಗೆ ಕೊಟ್ಟರು.

ಮಕ್ಕಳನ್ನು ಓದಿಸಬೇಕೆಂಬ ಅವಳ ಗಂಡನ ಕನಸಿಗೆ ಗಣಪತಿ, ಪೂಜಾ ಖಾಸಗಿ ಶಾಲೆ ಸೇರಿದ್ದರು. ಆ ಶಾಲೆಯವರೀಗ ಆನ್‌ಲೈನ್ ಕ್ಲಾಸ್ ನಡೆಸುತ್ತ, ವಾಟ್ಸಪ್‌ನಲ್ಲಿ ಹೋಂವರ್ಕ್ ಕೊಡುತ್ತ, ಫೀಸು ತುಂಬಿ ಎನ್ನುತ್ತಿದ್ದಾರೆ. ಫ್ಯಾಕ್ಟರಿ ನಿಂತುಹೋಗಿದೆ. ವಿಧವಾ ವೇತನವೇ ಜೀವನಾಧಾರವಾಗಿದೆ. ‘ಎಂತಾ ಮಾಡುದೋ ತಿಳೀತಿಲ್ಲೆ’ ಎಂದು ವ್ಯಾಕುಲಳಾಗಿ ಹೇಳತೊಡಗಿದಳು. ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳಿಸುವ ಅವಳ ಕನಸು ಭಗ್ನವಾದಂತಿತ್ತು.

‘ಫೀಸು ಕಟ್ಟಲಿಕ್ಕೆ ಇಷ್ಟು ಕಷ್ಟವಾದ್ರೆ ಯಾಕಲ್ಲಿಗೆ ಮಕ್ಕಳನ್ನ ಕಳಿಸಬೇಕು?’

ಅಕ್ಕೋರ ಧ್ವನಿಯಲ್ಲಿ ಕಂಡೂ ಕಾಣದಂತಿದ್ದ ಅಸಹನೆಯ ಎಳೆಯನ್ನು ಅವಳು ಛಕ್ಕನೆ ಗ್ರಹಿಸಿದಳು.

‘ಅಂದ್ರೆ? ದುಡ್ಡಿಲ್ದ ಬಡುವ್ರು ನಿಂ ಸಾಲೀಗ್ ಬರ‍್ಬೇಕು, ದುಡ್ಡಿರರು ಇಂಗ್ಲಿಷ್ ಕಲ್ತು ಛಲೋ ಕೆಲ್ಸ ತಕಬೇಕು ಅಂತ್ಲ? ನೀವ್ ನಿಮ್ ಹುಡ್ಗಿನ ಕನ್ನಡ್ ಸಾಲೀಗ್ ಕಳುಸ್ತಿರ ಹಂಗಾದ್ರೆ?’

ಅವಳ ತಕ್ಷಣದ ದಾಳಿಗೆ ಅಕ್ಕೋರು ಎಚ್ಚೆತ್ತರು. ಅವರ ಸೂಕ್ಷ್ಮ ಮನಸ್ಸಿಗೆ ತಮ್ಮ ವಾದದ ಅಸಮರ್ಪಕತೆ, ಶಿಥಿಲತೆ ಅರಿವಾಯಿತು. ಕೂಡಲೇ ಕನ್ನಡ ಶಾಲೆಯಲ್ಲಿ ಇಂಗ್ಲೀಷ್ ಕಲಿಸುತ್ತಿರುವುದನ್ನು, ಕನ್ನಡ ಶಾಲೆಯಲ್ಲಿ ಕಲಿತರೂ ಕೆಲಸ ಸಿಕ್ಕ ಉದಾಹರಣೆಗಳನ್ನು ಕೊಟ್ಟರು. ತಮ್ಮ ಮಗಳನ್ನು ಕನ್ನಡ ಶಾಲೆಗೇ ಹಾಕುವುದಾಗಿ ಹೇಳಿಬಿಟ್ಟರು. ಅವರು ಹೊರಡುವಾಗ,

‘ಅಕ್ಕೋರೆ, ನಾ ನೆಟ್ಟುದ್ ಸಂಪಿಗಿ ಗಿಡದಾಗ ಹೂ ಬಂದದೆಯ?’ ಎಂದ ಗಣಪತಿ. ‘ಕೆಟ್ ಪೋರ, ನೀನೆ ಬಂದು ನೋಡ್ಕಂಡ್ ಹೋಗ’ ಎಂದು ಪ್ರೀತಿಯಿಂದ ಗದರಿದರು. ‘ನಾ ಇನ್ ನಿಮ್ ಸಾಲಿಗೇ ಬರುದು. ಪೂಜ, ಸಂದೀಪ, ಸುರೇಖ, ಅನಿತ ಎಲ್ಲ ಅಲ್ಗೇ ಬರ್ತರಂತೆ’ ಎಂದು ಬಡಬಡ ಹೇಳಿಬಿಟ್ಟ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಅದು ಅಕ್ಕೋರಿಗೆ ಸಂತೋಷದ ಸುದ್ದಿ. ಆದರೆ ಆದರೆ… ಅವನಮ್ಮನಿಗೆ? ಅವಳಿಗದು ಸೋಲು ಅನಿಸಿದೆ. ಏನು ಮಾಡುವುದು? ತಮ್ಮ ಶಾಲೆ ಉಳಿಯಬೇಕು. ಹಾಗೆಯೇ ಕನ್ನಡ ಕಲಿತರೂ ಅನ್ನಕ್ಕೆ ಕಷ್ಟವಾಗದ ಉದ್ಯೋಗ ಸಿಗಬೇಕು. ಮಕ್ಕಳಿಂದ ಬೀಳ್ಕೊಂಡು ಮನೆಯತ್ತ ನಡೆದರೂ ಏನೇನೋ ಯೋಜನೆಗಳು. ಮಗಳನ್ನು ಕನ್ನಡ ಶಾಲೆಗೇ ಹಾಕುವ ನಿರ್ಧಾರ ಗಟ್ಟಿಯಾಯಿತು. ಆ ಬಗ್ಗೆ ಮನೆಯಲ್ಲಿ ಚರ್ಚೆಯಾಗಿತ್ತು. ಗಂಡ ಒಪ್ಪಿದ್ದರೂ ಮಾವ ಒಪ್ಪಿರಲಿಲ್ಲ. ‘ನಾವೆಲ್ಲ ಕನ್ನಡ ಮೀಡಿಯಂನಲ್ಲಿ ಓದಿದ್ದಲ್ವ?’ ಎಂದು ಇವರೆಂದರೆ ಮಾವ, ‘ಇಂಗ್ಲೀಷ್ ಮೀಡಿಯಂನಲ್ಲಿ ಕಲಿತಿದ್ರೆ ನೀನು ರೂಪನ ಥರ ಅಮೆರಿಕಕ್ಕೆ ಹೋಗ್ತಿದ್ದೆ’ ಎಂದು ಅಮೆರಿಕದಲ್ಲಿರುವ ತಮ್ಮ ಇಂಜಿನಿಯರ್ ಮಗಳ ಉದಾಹರಣೆ ಕೊಟ್ಟಿದ್ದರು. ಎಲ್ಲರೂ ಅಮೆರಿಕಕ್ಕೆ ಹೋದರೆ ಭಾರತದ ಜನ, ದನ, ಮಕ್ಕಳು, ಮುದುಕರನ್ನು ನೋಡಿಕೊಳ್ಳಲು ಯಾರಿರುತ್ತಾರೆ ಎಂಬ ಉತ್ತರ ಗಂಟಲಿಗೆ ಬಂದದ್ದು ವಯಸ್ಸಾದ ಮಾವನಿಗೇಕೆ ಎದುರುತ್ತರ ಕೊಡುವುದು ಎಂದು ಸುಮ್ಮನಾಗಿದ್ದರು. ಆದರೆ ಇವತ್ತು ಹೇಳಲೇಬೇಕು ಎಂದುಕೊಂಡರು.

ಮನೆಗೆ ಬಂದರೆ ಕೈಯಲ್ಲಿ ಸಕ್ಕರೆ ಕಾಳನ್ನಿಟ್ಟುಕೊಂಡ ಮಗಳು ಇರುವೆ ಗೂಡು ನೋಡುತ್ತಾ ಕುಳಿತಿದ್ದಳು.

‘ಚಿನ್ನೀ, ನೀನು ನಂ ಶಾಲೆಗೇ ಬರ‍್ತಿಯ?’ ‘ಅಂದ್ರೆ ನಿಂಜೊತೆ ಸ್ಕೂಟಿ ಮೇಲೆ ನನ್ನೂ ಕರ‍್ಕಂಡ್ ಹೋಗ್ತಿಯಾ?’ ‘ಹೌದು ಮಗಾ, ನನ್ಜೊತೆ ಹೋಗಿ ಬರದು’ ‘ಅದೇ, ನೀವ್ ಹಕ್ಕಿ ಸಾಕಿದಿರಲ ಆ ಸ್ಕೂಲಿಗಾ? ಓ, ಬರ‍್ತಿನಿ ಬರ‍್ತಿನಿ’

ಎಂದೋ ಒಮ್ಮೆ ಅಮ್ಮನ ಶಾಲೆಗೆ ಹೋದಾಗ ಪಾರಿಜಾತ ಗಿಡದಲ್ಲಿ ಕಂಡ ಹಕ್ಕಿಗೂಡನ್ನು ನೆನೆದು ಮಗಳು ಕುಣಿದು ಕುಪ್ಪಳಿಸಿದಳು. ಮಿಂದು, ಚಹ ಕುಡಿದರೂ ಇಂಗ್ಲಿಷ್ ಕಲಿತು ಅಮೆರಿಕಕ್ಕೆ ಹೋಗುವುದೇ ಯಶಸ್ಸೆಂದುಕೊಳ್ಳುವ ಮಾವ, ಗಣಪತಿಯ ಅಮ್ಮ, ಅಪ್ಪ ಕಣ್ಣೆದುರು ಬಂದರು. ‘ಅಪ್ಪಂಗಿಂತ ನಿಂಗೇ ಚೆನಾಗ್ ಗೊತ್ತು. ಹೆಂಗನ್ಸುತ್ತೋ ಹಾಗೆ ಮಾಡು’ ಎಂದು ಗಂಡ ಒಂದೇಮಾತಿನಲ್ಲಿ ಬೆಂಬಲ ಸೂಚಿಸಿ ಫೈಲಿನಲ್ಲಿ ಮುಳುಗಿದರು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ನಟರಾಜ ಬೂದಾಳರ ‘ದಾವ್ ದ ಜಿಂಗ್’ ಪುಸ್ತಕ ಕಪಾಟಿನಿಂದ ಹೊರಬಂತು.

‘ಗಿಡ್ಡವಾಗಿಸಬೇಕು ಎಂದುದನ್ನು ಉದ್ದಗೊಳಿಸು ದುರ್ಬಲಗೊಳಿಸಬೇಕು ಎಂದುದನ್ನು ಸಬಲಗೊಳಿಸು ಕೆಳಗಿಳಿಸಬೇಕು ಎಂದುಕೊಂಡುದನ್ನು ಮೇಲಕ್ಕೇರಿಸು ಇಸುಕೊಳ್ಳಬೇಕು ಎಂದುದನ್ನು ಕೊಟ್ಟುಬಿಡು ಇದನ್ನೇ ಅಂಗೈ ಮರೆಯ ದೀಪ ಎನ್ನುವುದು’

ಆಹಾ! ಅಕ್ಷರಗಳೇ ಅಂಗೈ ಮರೆಯ ದೀಪವಾಗಿ ಬೆಳಕುಗೊಂಡವು. * ಫೋಟೋ : ಎಸ್. ವಿಷ್ಣುಕುಮಾರ್ * ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ -15 ; ‘ನಮ್ಮನಿ ನಾಯಿಗ್ ಆರಾಮಿಲ್ರ, ಸ್ವಲ್ಪ ಬ್ಯಾಂಡೇಜು ಮುಲಾಮು ನಂಜಿನ್ ಗುಳಿಗಿ…’

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ಈ ಆನ್​ಲೈನ್​ ಪೌರೋಹಿತ್ಯ ಲಾಯಕ್ಕಿದ್ದು ಮಾರಾಯ್ರೇ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada