Covid Diary : ಕವಲಕ್ಕಿ ಮೇಲ್ ; ಈ ಆನ್‍ಲೈನ್ ಪೌರೋಹಿತ್ಯ ಲಾಯಕ್ಕಿದ್ದು ಮಾರಾಯ್ರೇ
Covid Trends : ಮಗು ಇರುವ ದೇಶದ ಅಕ್ಷಾಂಶ ರೇಖಾಂಶ ಹಿಡಿದು ಜಾತಕ ಮಾಡಿ, ಮುಹೂರ್ತ ಇಟ್ಟು ಕಾರ್ಯ ಮಾಡಿಸಬೇಕಾದ್ದರಿಂದ ಅವರಿಗೆ ರಾತ್ರಿಯಾಗಿಬಿಟ್ಟಿತು. ಅಲ್ಲಿ ಕೆನಡದಲ್ಲಿ ಬೆಳಗಿನ ಏಳೂವರೆ ಆಗುವಾಗ ಇವರಿಗಿಲ್ಲಿ ರಾತ್ರಿ ಒಂಭತ್ತು. ಈ ಮೊದಲು ವಿದೇಶದಲ್ಲಿರುವ ಊರುಮನೆಯ ಜನರಿಗೆ ರಾತ್ರಿ, ನಡುರಾತ್ರಿಯಲ್ಲಿ ಆನ್‍ಲೈನ್ ಪೌರೋಹಿತ್ಯ ಮಾಡಿಸುವ ಅವಕಾಶ ಬಂದರೂ, ‘ಬಂಗಾರ್ದ್ ಮೆಟ್ಟೂ ಹೇಳ್ ತಲೇಗ್ ಹಾಯ್ಕಂಬಲಾಗ್ತಾ?’ ಎಂದು ಡಾಲರ್ ದಕ್ಷಿಣೆಯನ್ನು ನಿರಾಕರಿಸಿದ್ದರು ಶಂಕರಯ್ಯನವರು.
ಅವರ ಮಗಳು ಅಪ್ಪನ ಎದುರೇ ಕುಳಿತು ಮೊಬೈಲು ಕ್ಯಾಮೆರಾ ಆನ್ ಮಾಡಿ ಹಿಡಿದಿದ್ದಾಳೆ. ಗಣಪತಿ ಪೂಜೆ, ಪ್ರಾರ್ಥನೆ ಬಳಿಕ ಸರಳವಾಗಿ ನಾಮಕರಣ ಆಯಿತು. ನೀರಿನಲ್ಲಿ ಕುಂಕುಮ ಕದರಿ ಅತ್ತೆ, ಅಳಿಯನೇ ಕದಲಾರತಿ ಮಾಡಿದರು. ಭಾರತಿಯ ಹಣೆಗೆ ಅಮ್ಮ ತಿಲಕ ಇಡುತ್ತಿರುವಾಗ ಮಗು ಬಟ್ಟಲಿಗೆ ಬೆರಳದ್ದಿ ಕುಂಕುಮದ ನೀರನ್ನು ಆರತಿಯೆತ್ತಿದ ಅಜ್ಜಿಯ ಹಣೆಗೆ ಇಟ್ಟುಬಿಟ್ಟಿತು. ಭಾರತದಿಂದ ನೋಡುವವರೆಲ್ಲ ಗಾಬರಿ ಬಿದ್ದರು. ವಿಧವೆ ಅವಳಮ್ಮನೂ ಹಣೆಮೇಲೆ ಕೈ ಒಯ್ದು ಒರೆಸಿಕೊಳ್ಳಲು ನೋಡಿದರು. ವಿಶ್ವಾಸ, ‘ಯಂತಕ್ಕೆ? ಇರ್ಲಿ’ ಎನ್ನುತ್ತ ಅವರ ಕೈ ತಡೆದಾಗ ಹಿಮರಾಶಿಯಂತೆ ತಣ್ಣಗಾಗಿ ನಿಂತುಬಿಟ್ಟರು. ಅಂತೂ ತನ್ನ ಹಣೆಗೆ ಕುಂಕುಮ ಏರಲು ಕೊರೊನಾ ಬರಬೇಕಾಯಿತು, ಕೆನಡಾ ತಲುಪಬೇಕಾಯಿತು. ಮೊಮ್ಮಗಳು ಹುಟ್ಟಬೇಕಾಯಿತು. ಅವರ ಮನದಲ್ಲಿ ಭೂತದ ನೆನಪಿನ ತರಂಗಗಳೆದ್ದವು. ತನ್ನಮ್ಮನೇನಾದರೂ ಇದ್ದರೆ ‘ಇಲ್ಲ ಇಲ್ಲ’ ಎಂದು ಹಾಸಿಗೆಯ ಮೇಲೆ ಮಲಗಿದಲ್ಲಿಂದಲೇ ಕೂಗುತ್ತಿದ್ದಳಲ್ಲವೇ ಎಂಬ ನೆನಪಾಯಿತು.
* ಕಡಲ ತಡಿಯ ಘಟ್ಟದ ಸೆರಗು. ತೋಟದಂಚಿನಲ್ಲಿ ಒಂಟಿಮನೆ. ರಾತ್ರಿ ಒಂಭತ್ತು ಗಂಟೆ. ಬಹುಶಃ ತಮ್ಮ ಪೌರೋಹಿತ್ಯದ ಅನುಭವದಲ್ಲಿ ಎಂದೂ ಮಗುವಿನ ನಾಮಕರಣದಂತಹ ಶುಭಕಾರ್ಯವನ್ನು ಈ ಸಮಯದಲ್ಲಿ ಶಂಕರಯ್ಯನವರು ಮಾಡಿಸಿರಲಿಲ್ಲ. ಮಗು ಇರುವ ದೇಶದ ಅಕ್ಷಾಂಶ ರೇಖಾಂಶ ಹಿಡಿದು ಜಾತಕ ಮಾಡಿ, ಮುಹೂರ್ತ ಇಟ್ಟು ಕಾರ್ಯ ಮಾಡಿಸಬೇಕಾದ್ದರಿಂದ ಅವರಿಗೆ ರಾತ್ರಿಯಾಗಿಬಿಟ್ಟಿತು. ಅಲ್ಲಿ ಕೆನಡದಲ್ಲಿ ಬೆಳಗಿನ ಏಳೂವರೆ ಆಗುವಾಗ ಇವರಿಗಿಲ್ಲಿ ರಾತ್ರಿ ಒಂಭತ್ತು ಆಗಿದೆ. ಈ ಮೊದಲು ವಿದೇಶದಲ್ಲಿರುವ ಊರುಮನೆಯ ಜನರಿಗೆ ರಾತ್ರಿ, ನಡುರಾತ್ರಿಯಲ್ಲಿ ಆನ್‍ಲೈನ್ ಪೌರೋಹಿತ್ಯ ಮಾಡಿಸುವ ಅವಕಾಶ ಬಂದರೂ, ‘ಬಂಗಾರ್ದ್ ಮೆಟ್ಟೂ ಹೇಳ್ ತಲೇಗ್ ಹಾಯ್ಕಂಬಲಾಗ್ತಾ?’ ಎಂದು ಡಾಲರ್ ದಕ್ಷಿಣೆಯನ್ನು ನಿರಾಕರಿಸಿದ್ದರು. ಆದರೆ ಕೆನಡಾದಲ್ಲಿ ಸಾಫ್ಟ್ವೇರ್ ಇಂಜಿನಿಯರಾದ ಮೇಲಿನ ಕುಂಟಿಗೆ ವಿಶ್ವಾಸನ ವಿಶ್ವಾಸಕ್ಕೆ ಮಣಿದು ಮಗುವಿನ ನಾಮಕರಣ ಮಾಡಿಸಲು ಒಪ್ಪಿಕೊಂಡರು. ಸಾವು, ಉಪವಾಸ, ಗ್ರಹಣಕಾಲ ಬಿಟ್ಟರೆ ಸೂಯಾಸ್ತದ ಬಳಿಕ ಅವರು ಸ್ನಾನ ಮಾಡುವುದಿಲ್ಲ. ಆದರಿಂದು ಬೇಗಬೇಗ ರಾತ್ರಿಯೂಟ ಮುಗಿಸಿ, ಸ್ನಾನ ಮಾಡಿ, ಪಂಚೆಯುಟ್ಟು ಕುಳಿತರು.
ಎರಡು ಕವುಳಿಗೆ ಸೌಟು ನೀರು ಈಚೆಯಿಂದ ಆಚೆ ಹಾಕಿ, ಏನೋ ಅಷ್ಟನ್ನು ಮಣಮಣ ಅಂದು ಕಾರ್ಯ ಮಾಡಿಸುವ ಡಂಭ ಪುರೋಹಿತರಂತಲ್ಲ ಅವರು. ಪರಾನ್ನ ಉಣ್ಣುವ ತಾವು ಪ್ರತಿದಿನ ಜಪ ತಪ ಉಪವಾಸ ಅನುಷ್ಠಾನ ಮಾಡಿ ಸತ್ಯಶುದ್ಧವಾಗಿರದೇ ಇದ್ದಲ್ಲಿ ತಲೆತಲಾಂತರಕ್ಕೂ ಪಾಪ ಸುತ್ತಿಕೊಳ್ಳುವುದೆಂದು, ‘ತಲೇಗ್ ಮಿಂದ್ರ್ ಕಾಲಿಗ್ ಬತ್ತು’ ಎಂದೂ ಧೃಢವಾಗಿ ನಂಬಿದ್ದರು. ಹಿರಿಯರ ಬಳುವಳಿಯಾಗಿ ಬಂದ ಪೌರೋಹಿತ್ಯಕ್ಕೆ ಶಿಷ್ಯವರ್ಗದ ಮನೆಗಳಿಗಷ್ಟೇ ಹೋಗಿಬರುತ್ತಾರೆ. ತಮ್ಮ ಕೆಲಸದ ಬಗೆಗೆ ಅಸೀಮ ಶ್ರದ್ಧೆ. ಹೋಮಕುಂಡದೆದುರು ಕುಳಿತು ‘ಅಗ್ನಯೇ ಸ್ವಾಹಾ, ಅಗ್ನಯೇ ಇದಂ ನಮಮ’ ಎಂದು ಎಡಗೈಯನ್ನು ಎದೆ ಮೇಲಿಟ್ಟು ಬಲಗೈ ಚಾಚಿ ಕಣ್ಮುಚ್ಚಿ ಹವಿಸ್ಸು ಅರ್ಪಿಸುತ್ತಿದ್ದರೆ, ಅಗ್ನಿದೇವನೇ ಬಂದು ಈಗವರ ಕೈಯಿಂದ ಪಾಲು ಪಡೆಯುವನೋ ಎನ್ನಬೇಕು. ಅವರ ವಾರಿಗೆಯ ಪುರೋಹಿತರು ಎಮ್ಮೆ ಕಟ್ಟುವ ಹಗ್ಗದಂತಹ ಚಿನ್ನದ ಸರ ಹಾಕಿಕೊಂಡು, ಹತ್ತು ಬೆರಳಿಗೆ ಎಂಟು ಉಂಗುರ ತೊಟ್ಟು, ಬೈಕು, ಕಾರುಗಳಲ್ಲಿ ಭರ್ರೆಂದು ಓಡಾಡುತ್ತ ದಿನಕ್ಕೊಂದು ಕಡೆ ಕಾಟಾಚಾರದ ಪೌರೋಹಿತ್ಯ ಮಾಡುತ್ತ ಲಕ್ಷಾಧೀಶರಾಗಿದ್ದರೆ, ಶಂಕರಯ್ಯನವರು ಮಾತ್ರ ನಡೆದು, ರಸ್ತೆ ತಲುಪಿ ಬಸ್ ಹಿಡಿದು ಶಿಷ್ಯವರ್ಗದ ಮನೆಗಳಿಗೆ ಹೋಗುತ್ತಾರೆ. ಕಿವಿಯ ಒಂಟಿ, ರುದ್ರಾಕ್ಷಿ ಬಿಟ್ಟರೆ ಬೇರೆ ಆಭರಣವಿಲ್ಲ.
ಅವರಿಗೆ ತಮ್ಮ ವೃತ್ತಿಯ ಮೇಲೆ ಗೌರವವಿದೆ. ಆದರೆ ಅದು ವ್ಯಾಪಾರವಾಗಿರುವುದಕ್ಕೆ ಸಿಟ್ಟಿದೆ. ಅದಕ್ಕಾಗಿಯೋ ಏನೋ ಮಗ ಸಂದೀಪ ಈ ವೃತ್ತಿ ಮಾಡುವುದು ಬೇಡವೆನಿಸಿ ಇಂಜಿನಿಯರಿಂಗಿಗೆ ಕಳಿಸಿದರು. ಮೆಡಿಕಲ್ ಕಲಿಯುವ ಮಗಳು ಸುಹಾಸಿನಿಯಂತೂ ಮಹಾ ನಾಸ್ತಿಕಳಾಗಿ ಪೌರೋಹಿತ್ಯವೇ ಅನಗತ್ಯ ವೃತ್ತಿ ಎಂದು ವಾದಿಸುವಳು. ಅವರವರ ಕಾರ್ಯ ಅವರವರೇ ಮಾಡಿಕೊಳ್ಳಬೇಕು. ಮಗಳೇ ಎಂದು ಕರೆಯಲಿಕ್ಕೆ, ಚಕ್ಕುಲಿ ಹೋಳಿಗೆ ಮಾಡಲಿಕ್ಕೆ, ಕಟ್ಟಿದ ಮನೆಯ ಮೆಟ್ಟಿಲು ಹತ್ತಲಿಕ್ಕೆ ಮುಹೂರ್ತ, ಪುರೋಹಿತರು ಯಾಕೆ ಬೇಕು ಎಂದವಳ ವಾದ. ಎಳತರಲ್ಲೇ ಅಮ್ಮನನ್ನು ಕಳೆದುಕೊಂಡ ಮಕ್ಕಳು ವಿಧವೆಯಾಗಿ ಮನೆಸೇರಿದ್ದ ತಮ್ಮ ಅಕ್ಕನ ಕೊಂಯ್ಞಾರದಲ್ಲಿ ಶಿಸ್ತಿಲ್ಲದೆ ಬೆಳೆದು ಹೀಗಾಗಿದ್ದಾರೆ ಎಂದುಕೊಳ್ಳುವ ಶಂಕರಯ್ಯನವರು ಮನೆತನದ ವೃತ್ತಿಯ ಮೇಲೆ ಮಕ್ಕಳಿಗೆ ಗೌರವ ಇಲ್ಲದ್ದಕ್ಕೆ ಬೇಸರಗೊಳ್ಳುವರು.
ಈಗ ಲಾಕ್‍ಡೌನೆಂದು ಸಂದೀಪ, ಸುಹಾಸಿನಿ ಇಬ್ಬರೂ ಮನೆಯಲ್ಲಿದ್ದಾರೆ. ಆನ್‍ಲೈನ್ ತರಗತಿ, ಕೆಲಸಗಳಿಗಾಗಿ ಹೆಚ್ಚು ದುಡ್ಡು ಕೊಟ್ಟು ಹೈಸ್ಪೀಡ್ ನೆಟ್ ಖರೀದಿಸಿದ್ದಾರೆ. ಇದುವರೆಗೆ ಅಪ್ಪಯ್ಯ ಇಂಟರ್ನೆಟ್ ಎಂಬ ಕಡಲ ದಂಡೆ ನೋಡಿದವರಲ್ಲ. ಈಗ ವಿಶ್ವಾಸನಿಗಾಗಿ ವಾಟ್ಸಪ್ ಪ್ರವೇಶಿಸುವಂತಾಯಿತು. ಅಪ್ಪಯ್ಯನಿಗೂ ವರ್ಕ್ ಫ್ರಂ ಹೋಂ ಎಂದು ಟೀಕಿಸುತ್ತ ಸುಹಾಸಿನಿ ಅರೆಬರೆ ಮನಸ್ಸಿನಿಂದ ಅದನ್ನು ನಡೆಸುವುದು ಹೇಗೆಂದು ತಿಳಿಸಿಕೊಟ್ಟಳು. ಈ ಕ್ಷಣ ಆಧುನಿಕರಾದಂತೆ ಕಾಣುವ ಅಪ್ಪಯ್ಯ ಮರುಘಳಿಗೆ ಸಂಪ್ರದಾಯವಾದಿಯಂತೆ ಆಡುವುದು ನೋಡಿ ಒಮ್ಮೊಮ್ಮೆ ಅವಳಿಗೆ ಸಿಟ್ಟು ಬರುತ್ತದೆ. ಸಿಂಗಲ್ ಪೇರೆಂಟ್ ಆಗಿ ತಮ್ಮನ್ನು ಸಾಕಿದ ತಂದೆಯವರ ಮನ ನೋಯಿಸಬಾರದೆಂದು ಅಣ್ಣ ಹೇಳಿದ್ದು ನೆನಪಾಗಿ ಸುಮ್ಮನಾಗುತ್ತಾಳೆ. ಈಗ ಅವಳು ಹೇಳಿಕೊಟ್ಟದ್ದನ್ನು ಅಪ್ಪಯ್ಯ ತಕ್ಷಣ ಕಲಿತರು. ಒಂದೆರೆಡು ವಾರಗಳಲ್ಲಿ ವಾಟ್ಸಪ್ ರೂಢಿಯಾಯಿತು. ಒಂದು ತಾಸು ಇಂಟರ್ನೆಟ್ ಬಳಸಿದರೆ ಎಷ್ಟು ದುಡ್ಡು ಖರ್ಚು ಆದೀತು ಎಂದೊಮ್ಮೆ ಕೇಳಿದಾಗ, ‘ತೊವೆ ಸುರಿಯೋರ್ಗೆ ಹೆಸರ ಧಾರಣೆ ಎಂತಕ್ಕೆ’ ಎಂದು ಹೇಳಬೇಕೆಂದುಕೊಂಡ ಮಾತು ಮನದಲ್ಲುಳಿಯಿತು. ಇಂಟರ್ನೆಟ್‍ಗೆ ಆಗುವ ಕಡಿಮೆ ಖರ್ಚು ಕೇಳಿ ಶಂಕರಯ್ಯನವರು ದಂಗಾದರು. ತಮ್ಮ ಮಾತು, ಮಂತ್ರಗಳು ರಾಜ್ಯ, ದೇಶ ದಾಟಿ ಅಷ್ಟು ಕಡಿಮೆ ಖರ್ಚಿನಲ್ಲಿ, ಅಷ್ಟು ತಕ್ಷಣಕ್ಕೆ ಹೋಗುವುದಲ್ಲ ಎಂದವರಿಗೆ ಮಹದಾಶ್ಚರ್ಯವಾಯಿತು. ತಮ್ಮ ಬಸ್‍ಚಾರ್ಜಿಗಿಂತ ಕಡಿಮೆ ದುಡ್ಡಿನಲ್ಲಿ ಕೂತಲ್ಲೇ ಪೌರೋಹಿತ್ಯ ಮಾಡಿಸಬಹುದೆಂದರೆ ಈ ಕಾಲ ಅಡ್ಡಿಯಿಲ್ಲ ಎಂದೂ ಅನಿಸಿತು.
***
ಅಲ್ಲಿ ಟೊರಾಂಟೋನಲ್ಲಿ ಈಗ ಬೆಳಗಿನ ಏಳೂವರೆ. ಡೌನ್‍ಟೌನಿನ ಹದಿಮೂರನೇ ಮಹಡಿಯ ಎರಡು ಬೆಡ್‍ರೂಮಿನ ಮನೆಯಲ್ಲಿ ವಿಶ್ವಾಸ್ ಸ್ನಾನ ಮಾಡಿ ಸಿದ್ಧವಾಗಿದ್ದಾನೆ. ಅವನ ಹೆಂಡತಿ ಭಾರತಿ, ವರ್ಷ ತುಂಬುತ್ತ ಬಂದ ಹೆಣ್ಣುಮಗು, ಬಾಣಂತನಕ್ಕೆ ಭಾರತದಿಂದ ಬಂದ ಅವಳಮ್ಮ ಎಲ್ಲರೂ ಹೊಸಬಟ್ಟೆ ಉಟ್ಟಿದ್ದಾರೆ. ಲಾಕ್‍ಡೌನೆಂದು ನಾಲ್ಕು ಗೋಡೆಯ ಮಧ್ಯೆಯೇ ಒಂದೂವರೆ ವರ್ಷದಿಂದ ಇದ್ದಾರೆ. ಭಾರತದಿಂದ ಅವಳಮ್ಮ ಬಂದ ಕೂಡಲೇ ಮೂರು ಬೆಡ್ರೂಮಿನ ಮನೆಗೆ ಶಿಫ್ಟ್ ಮಾಡಬೇಕೆಂದುಕೊಳ್ಳುತ್ತಿದ್ದಾಗ ಕೊರೊನಾ ಅಮರಿಕೊಂಡಿತು. ಊಹೆ ಮಾಡಿಕೊಳ್ಳದಿದ್ದ ರೀತಿಯಲ್ಲಿ ಬದುಕು ಬದಲಾಯಿತು. ಭಾರತಿಗೆ ಬೇಬಿ ಶವರ್ (ಬಯಕೆ ಶಾಸ್ತ್ರ) ಆಗಲಿಲ್ಲ. ಮಗುವಿಗೆ ನಾಮಕರಣವಾದರೂ ಮಾಡಬೇಕೆಂದು ಈಗ ಸಿದ್ಧಗೊಂಡಿದ್ದರು.
ಬೆಳಕು ಹರಿಯುತ್ತದೆ, ಸಂಜೆಯಾಗುತ್ತದೆ. ಭಾರತಿ ಸಂಬಳವಿಲ್ಲದ ರಜೆ ಮುಂದುವರೆಸಿ ತನ್ನಮ್ಮ, ಮಗುವಿನೊಡನೆ ಕಾಲ ಕಳೆಯುತ್ತಿದ್ದರೆ, ವಿಶ್ವಾಸನ ಕೆಲಸ ಮನೆಯಿಂದಲೇ ನಡೆಯುತ್ತಿದೆ. ಗ್ಲಾಸ್ ಕಿಟಕಿಯಿಂದ ದೂರದಲ್ಲಿ ಲೇಕ್ ಸುಪೀರಿಯರ್ ಹೊಳೆಯುವುದು ಕಾಣಿಸುತ್ತಿದೆ. ನಿರ್ಜನ ರಸ್ತೆಗಳು. ತಂತಮ್ಮ ಮನೆಯೊಳಗೆ ಬಂಧಿತರಾಗಿರುವ ಜನರು. ಬೆಳಿಗ್ಗೆ ಆರಕ್ಕೆದ್ದು ಕೂತರೆ ರಾತ್ರಿಯವರೆಗೂ ಒಂದೇಸಮ ಕೆಲಸ, ಸಭೆಗಳು. ಕೂತುಕೂತು ಹೊಟ್ಟೆ ಬಂದಿದೆ. ತನ್ನ ಬಾಲ್ಯ, ಬೆಳೆದ ಮನೆ, ಅಡಿಗೆ, ಹಬ್ಬ, ಆಚರಣೆ ಎಲ್ಲವೂ ನೆನಪಾದರೆ ಮರಳಿ ಇಂಡಿಯಾಗೆ ಹೋಗಿಬಿಡಬೇಕೆನಿಸುತ್ತದೆ. ಮನೆಯಿಂದ ಮಾಡುವ ಕೆಲಸವನ್ನು ಇಂಡಿಯಾದಿಂದಲೇ ಮಾಡುವಂತಾದರೆ ಎಂಬ ಕನಸು ಕಟ್ಟುತ್ತಾನೆ. ಮೂವರು ಹೆಂಗಸರು ಮಾತ್ರ ಅಡುಗೆ, ಮಗುವಿನ ಆರೈಕೆ, ಮಾತು ಎಂದು ಹೊತ್ತು ಕಳೆಯುತ್ತಾರೆ. ಒಟ್ಟಾರೆ ಎಲ್ಲರಿಗೂ ಸಂಭ್ರಮ, ಉಲ್ಲಾಸಗಳಿರದೆ ಏಕತಾನತೆಯಿಂದ ಬದುಕು ಸಾಗುತ್ತಿದೆ. ಮಹಾಮೌನವೊಂದು ಒಳಗೊಳಗೇ ಬೆಳೆಯುತ್ತಿರುವ ಅನುಭವವಾಗುತ್ತಿದೆ.
ಅದರಿಂದ ಹೊರಬರಲೋ ಎಂಬಂತೆ ನಾಮಕರಣದ ಸಂಭ್ರಮಕ್ಕೆ ಸಿದ್ಧರಾಗಿದ್ದಾರೆ. ಮೊದಲೇ ತಂದು ಫ್ರಿಜ್ಜಿನಲ್ಲಿಟ್ಟಿದ್ದ ಹೂಹಣ್ಣುಗಳನ್ನು ಜೋಡಿಸಿಟ್ಟಿದ್ದಾರೆ. ಅರಿಶಿನ, ಅಕ್ಕಿ ಕಲಸಿ ಅಕ್ಷತೆ ಮಾಡಿದ್ದಾರೆ. ಅಕ್ಕಿ ಹಿಟ್ಟು, ರವೆ ಸೇರಿಸಿ ರಂಗೋಲಿಯಾಗಿಸಿ ಅಮ್ಮ ಗಣಪತಿ ಮಂಡಲ ಬರೆದಿದ್ದಾರೆ. ತೆಂಗಿನಕಾಯಿ ಇಲ್ಲ. ಗಂಧ ಇಲ್ಲ. ಎಂದೋ ತಂದಿಟ್ಟಿದ್ದ ಅಗರಬತ್ತಿ ಇದೆಯಾದರೂ ಅದರ ಹೊಗೆಗೆ ಫೈರ್ ಅಲಾರ್ಮ್ ಮೊಳಗಿದರೆ ಕಷ್ಟವೆಂದು ಧೂಪವೂ ಇಲ್ಲ. ಒಂದಷ್ಟು ಇದೆ. ಹಲವಷ್ಟು ಇಲ್ಲ. ಅಂತೂ ಟೊರಾಂಟೋ ನಗರದೊಳಗಿನ ಮನೆಯಲ್ಲಿ ಭಾರತದಂತಹ ವಾತಾವರಣ ಸೃಷ್ಟಿಯಾಗಿದೆ. ಅಲ್ಲಿನ ನೀರು, ಅನ್ನ, ಕಸುವುಗಳನ್ನು ಹೀರಿ ಬೆಳೆದಿರುವ ಮಗುವು ‘ವಿಭಾ’ ಎಂಬ ಭಾರತದ ಹೆಸರನ್ನು ಹೊರಲು ಸಿದ್ಧವಾಗಿದೆ.
ಅವರಿಗೆ ಸರಿಯಾಗಿ ಏಳೂವರೆ ಆದಾಗ ಈ ಮೊದಲೇ ಮಾತಾಡಿಕೊಂಡಂತೆ ಬಂಧುಗಳೊಡನೆ ಸಂಪರ್ಕ ಸಾಧಿಸಿದರು. ಐದು ಸ್ಥಳಗಳಲ್ಲಿದ್ದ ಇಪ್ಪತ್ತೆರೆಡು ಜನ ಕಾಲ್‍ನಲ್ಲಿ ಬಂದರು. ಎಲ್ಲರ ಮುಖ ಟಿವಿ ಸ್ಕ್ರೀನಿನಲ್ಲಿ ಕಂಡು, ಎಲ್ಲರೂ ಹಾಯ್ ಹಾಯ್ ಎಂದು ಕೂತಲ್ಲೇ ಒಬ್ಬರನ್ನೊಬ್ಬರು ಮಾತನಾಡಿಸುತ್ತ, ಮಗುವನ್ನು ಬಾಲಭಾಷೆಯಲ್ಲಿ ಕರೆಯುತ್ತ, ಕಣ್ಣಾರೆ ಕಂಡ ಸಂಭ್ರಮ, ಹಿತ ಅನುಭವಿಸುತ್ತ ಇರುವಾಗ ಶಂಕರಯ್ಯನವರು ಬಂದರು.
ಅವರ ಮಗಳು ಅಪ್ಪನ ಎದುರೇ ಕುಳಿತು ಮೊಬೈಲು ಕ್ಯಾಮೆರಾ ಆನ್ ಮಾಡಿ ಹಿಡಿದಿದ್ದಾಳೆ. ಗಣಪತಿ ಪೂಜೆ, ಪ್ರಾರ್ಥನೆ ಬಳಿಕ ಸರಳವಾಗಿ ನಾಮಕರಣ ಆಯಿತು. ನೀರಿನಲ್ಲಿ ಕುಂಕುಮ ಕದರಿ ಅತ್ತೆ, ಅಳಿಯನೇ ಕದಲಾರತಿ ಮಾಡಿದರು. ಭಾರತಿಯ ಹಣೆಗೆ ಅಮ್ಮ ತಿಲಕ ಇಡುತ್ತಿರುವಾಗ ಮಗು ಬಟ್ಟಲಿಗೆ ಬೆರಳದ್ದಿ ಕುಂಕುಮದ ನೀರನ್ನು ಆರತಿಯೆತ್ತಿದ ಅಜ್ಜಿಯ ಹಣೆಗೆ ಇಟ್ಟುಬಿಟ್ಟಿತು. ಭಾರತದಿಂದ ನೋಡುವವರೆಲ್ಲ ಗಾಬರಿ ಬಿದ್ದರು. ವಿಧವೆ ಅವಳಮ್ಮನೂ ಹಣೆಮೇಲೆ ಕೈ ಒಯ್ದು ಒರೆಸಿಕೊಳ್ಳಲು ನೋಡಿದರು. ವಿಶ್ವಾಸ, ‘ಯಂತಕ್ಕೆ? ಇರ್ಲಿ’ ಎನ್ನುತ್ತ ಅವರ ಕೈ ತಡೆದಾಗ ಹಿಮರಾಶಿಯಂತೆ ತಣ್ಣಗಾಗಿ ನಿಂತುಬಿಟ್ಟರು. ಅಂತೂ ತನ್ನ ಹಣೆಗೆ ಕುಂಕುಮ ಏರಲು ಕೊರೊನಾ ಬರಬೇಕಾಯಿತು, ಕೆನಡಾ ತಲುಪಬೇಕಾಯಿತು. ಮೊಮ್ಮಗಳು ಹುಟ್ಟಬೇಕಾಯಿತು. ಅವರ ಮನದಲ್ಲಿ ಭೂತದ ನೆನಪಿನ ತರಂಗಗಳೆದ್ದವು. ತನ್ನಮ್ಮನೇನಾದರೂ ಇದ್ದರೆ ‘ಇಲ್ಲ ಇಲ್ಲ’ ಎಂದು ಹಾಸಿಗೆಯ ಮೇಲೆ ಮಲಗಿದಲ್ಲಿಂದಲೇ ಕೂಗುತ್ತಿದ್ದಳಲ್ಲವೇ ಎಂಬ ನೆನಪಾಯಿತು.
ಅವರನ್ನು ನೋಡುತ್ತ ಎಲ್ಲರ ಮನದಲ್ಲೆದ್ದ ವಿಚಾರಗಳು ಟಿವಿ ಪರದೆಯ ಮೇಲೆ ಢಿಕ್ಕಿ ಹೊಡೆದವು. ಅಂದುಕೊಂಡದ್ದಕ್ಕಿಂತ ಹತ್ತು ನಿಮಿಷ ಮುಂಚೆಯೇ ಎಲ್ಲ ಮುಗಿದುಹೋಯಿತು. ಶಂಕರಯ್ಯನವರ ಘಂಟಾನಾದದಂತಹ ಧ್ವನಿ, ಸ್ಪಷ್ಟ ಮಂತ್ರೋಚ್ಛಾರ ಕೇಳುವಾಗ ದಂಪತಿಗಳಿಗೆ ತಮ್ಮ ಮಗುವಿನ ಸುತ್ತ ಒಂದು ಸುರಕ್ಷಾ ಕವಚ ಏರ್ಪಡುತ್ತಿರುವ ಭಾಸವಾಯಿತು. ವಿಶ್ವಾಸನ ಕುಟುಂಬ ಅಲ್ಲಿಂದಲೇ ಸಾಷ್ಟಾಂಗ ನಮಸ್ಕರಿಸಿ, ಸದಾಶಯದ ನುಡಿಗಳನ್ನಾಡಲು ಕೇಳಿಕೊಂಡರು.
ಶಂಕರಯ್ಯನವರು ಕಂಠ ಸರಿಮಾಡಿಕೊಳ್ಳುವಾಗ ತಮ್ಮೆದುರು ಮೊಬೈಲನ್ನು ಅಲ್ಲಾಡದಂತೆ ಹಿಡಿದು ಕುಳಿತು ಸುಹಾಸಿನಿಯ ಮುಖದ ಮೇಲೆ ವ್ಯಂಗ್ಯ ಸುಳಿದು ಹೋದದ್ದನ್ನು ಗಮನಿಸಿದರು. `ಸುಟ್ಟೇವು ಸುಡು ಮುದ್ಕಿಗೆ ಸುಂಬ್ಳ ತೆಗೆಯುಲೆ ಇನ್ನೊಬ್ಳು ಅಂಬಂಗೆ’ ತಮ್ಮ ಕೆಲಸಕ್ಕೆ ಮತ್ತೊಬ್ಬರು ಬೇಕಾದರೆ ಎಂದು ಅವರಿಗೇ ಅನಿಸಿತು. ಕೂಸು ಅವರವರ ಕಾರ್ಯ ಅವರವರೇ ಮಾಡಿಕೊಂಡರೆ ಏನಾದೀತು ಎಂದು ಯೋಚಿಸುತ್ತಿರಬಹುದು. ಹೌದೆಂದು ತಮಗೂ ಅನಿಸಿತ್ತಲ್ಲವೆ? ತಮ್ಮ ಶಿಷ್ಯವರ್ಗದ ಮನೆಯವರಿಗೆ ಅವರವರೇ ಶ್ರಾದ್ಧ ಮಾಡಿಕೊಳ್ಳಲು ಹೇಳಿದ್ದರಲ್ಲವೆ? ಏನಾಯಿತು? ಪಿತೃಗಳೇನು ಭೂಮಿಗಿಳಿದು ಗೌಜಿ ಹಾಕಿದರೇ? ಇಲ್ಲವಲ್ಲ?
‘ನಿಂಗೊವ್ಕೆ ಒಂದು ಅಂತರಂಗದ ಮಾತು ಮೊದಾಲ್ ಹೇಳೊ. ಈ ಒಂದ್ವರ್ಷ ನಾ ಎಲ್ಲೂ ಹೋಗಿದ್ನಿಲ್ಲೆ. ಆನು ರಾಶ್ಶೀ ವಿಚಾರ ಮಾಡ್ದಿ. ನಂಗೊವ್ಕೆ ಬುದ್ಧಿ ಹೇಳುಲೇ ಈ ಕೊರೊನಾ ಬಂಜಿಕ್ಕು ಅನಸ್ತಿದ್ದು. ಈ ವರ್ಷ ಮಂತ್ರೋಕ್ತ ಶ್ರಾದ್ಧ ನಡೆಲಿಲ್ಲ. ಪೂಜೆ, ವ್ರತ, ಹಬ್ಬ, ಹವನ, ಪ್ರವೇಶ, ಲಗ್ನನೂ ಶಾಸ್ತ್ರೋಕ್ತ ನಡೆಲಿಲ್ಲ. ದೇವಸ್ಥಾನ ಮಟದ್ ಬಾಗ್ಲು ತೆಗೀಲಿಲ್ಲ. ಏನಾತು? ಎಂಥಾದೂ ಇಲ್ಲೆ! ಮಳಗಾಲ ಬಂತು ಹೋತು. ಹಂಗೇ ಚಳಿ, ಬ್ಯಾಸ್ಗೆ ಕಾಲ ಬಂದ್ವು, ಹೋದೊ. ಅಷ್ಟು ಜನನ, ಅಷ್ಟು ಸಾವು. ಹೌದ ಇಲ್ಯ? ಇದರರ್ಥ ನಾವ್ ಮಾಡೊ ಕಾರ್ಯಕಟ್ಲೆ ಬೇಕು ಹೇಳ್ ಇಲ್ಲೆ. ಬರಿತ್ನೆ ಮಾಡುದೆಯ. ಅಲ್ದಾ? ಹೀಂಗಿರ್ತ ಕಾಲಕ್ ತಕ್ಕಂಗೆ ನಾವೂ ಬದಲಾಗೋ..’
ಸುಹಾಸಿನಿಗೆ ಅಚ್ಚರಿ. ಇದೇನು, ಅಪ್ಪಯ್ಯ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಅನ್ನುತ್ತಿದ್ದಾರಲ್ಲ? ಎರಡೂ ಕೈ, ಹುಬ್ಬು, ಕಣ್ಣುಗಳನ್ನು ಬಳಸಿ ಸಾಭಿನಯವಾಗಿ ಮಾತಾಡುತ್ತಿದ್ದಾರೆ. ಒಳ್ಳೇ ನಟನಾಗಬಹುದಿತ್ತು ಅಪ್ಪಯ್ಯ. ಅದಕ್ಕೇ ಅವರ ಶಿಷ್ಯವರ್ಗ ಅವರನ್ನು ಬಿಟ್ಟು ಬೇರೆಯವರು ಬೇಡ ಅನ್ನುವುದೇ?
‘ಕಾಲ ಹೇಳಿದ್ ಪಾಠ ಕಲ್ತಕದಿದ್ರೆ ಬದುಕುಲಾಗ್ತಿಲ್ಲೆ. ಮಂದೇವ್ರೇ ಮಣ್ಣು ತಿಂತಿರುವಾಗ ಮಾರಮ್ಮುಂಗೆ ಹೋಳ್ಗೆ ಕೊಡುಲಾಗ್ತ? ಇಲ್ಲೆ. ಹಂಗೇ, ಕೊರೊನ ಹೇಳಿ ಎಲ್ಲರ ಬುಡ ಅಲುಗ್ತ ಇದ್ದು. ಎಲ್ಲ ಬದ್ಲಾಗಿಕ್ಕಿದ್ದು. ನಿಂ ಕಷ್ಟಕ್ಕೆ ಪರಿಹಾರ ನೀವ್ ಹುಟ್ಟಿದ್ ಘಳಿಗೇಲಿ ಬರ್ಕಂಡಿರಲ್ಲ. ಜಾತ್ಕಗೀತ್ಕ ತೋರುಸ್ತ ಕೂರಡಿ. ನಿಂ ಕಷ್ಟುದ್ ಪರಿಹಾರಕ್ಕೆ ಅವ್ರ್ ಯಾರೋ ಜಪಾ ಮಾಡ್ಲಿ ಅಂತ ದುಡ್ ಕಳಿಸಡಿ. ಮುಹೂರ್ತ ಗಿಹೂರ್ತ ಅಂತ ಕಾಯ್ತ ಕೂರಡಿ. ಎಲ್ಲ ಸುಳ್ಳು. ಮನಃಶುದ್ಧಿಯಿಂದ ನಿಮ್ದು ನೀವೇ ಅನುಕೂಲ ಇದ್ದಾಗ ಮಾಡ್ಕಣಿ. ತೆಳಿತ್ತಾ?’
ಏನು ಹೇಳ್ತಿದಾರೆ ಅಪ್ಪಯ್ಯ? ಸುಹಾಸಿನಿಗೆ ನಂಬಲಾಗುತ್ತಿಲ್ಲ!
‘ನಮ್ಮದೀಗ ಎಲ್ಲಾ ಅತಿ ಆಗೋಯ್ಜು. ಆಹಾರ, ಆಭರಣ, ಆಚರಣೆ, ಆಡಂಬರ ಎಲ್ಲವ್ದೂ ಅತಿ. ಅತಿಗೊಂದು ಮಿತಿ ಹಾಕ್ಕಳೊ. ಆ ಗೆರೆಯೆಳೆಯುಲೇ ಕೋವಿಡ್ ಬಂದಿದ್ದು. ಹಂಗಾಗಿ ಇನ್ನು ನಿಂನಿಮ್ ವ್ರತ, ಆಚರಣೆನೆಲ್ಲ ನೀವೇ…’
ಅಷ್ಟೊತ್ತಿಗೆ ಅವರ ಮನೆಯ ನಾಯಿ ತೋಟಕ್ಕೆ ಬಂದ ಹಂದಿಯನ್ನು ಕಂಡಿತೋ ಏನೋ, ಇದ್ದಕ್ಕಿದ್ದಂತೆ ಬೊಗಳುತ್ತ ಅತ್ತಿಂದಿತ್ತ ಇತ್ತಿಂದತ್ತ ತಾರಾಡತೊಡಗಿತು. ಅತ್ತೆ ಒಳಗಿನಿಂದ ಹಚಾ ಎಂದು ಕೂಗಿದಾಗ ಸುಹಾಸಿನಿ ಧಡ್ಡನೆ ಎಚ್ಚೆತ್ತಳು. ಇಷ್ಟೊತ್ತು ಅವಳ ಎಚ್ಚರಗನಸಿನಲ್ಲಿ ಅಪ್ಪಯ್ಯ ಕ್ರಾಂತಿಕಾರಕವಾಗಿ ಬದಲಾಗಿದ್ದರು. ಆದರೆ ವಾಸ್ತವದಲ್ಲಿ, ‘ಸಂಪ್ರದಾಯ, ಹಿರಿಯರಲ್ಲಿ ಭಯಭಕ್ತಿ, ದೈವಭಕ್ತಿ, ಪಾಪಪುಣ್ಯಗಳು ಕುಸಿದುಬಿದ್ದ ಕಲಿಗಾಲದಲ್ಲಿ ಕೋವಿಡ್ ಪ್ರಳಯರೂಪಿಯಾಗಿ ಬಂದಿದೆ. ಇಂಥಾ ಕಾಲದಲ್ಲಿ ದೇಶದಿಂದ ದೂರವಿದ್ದರೂ ಸ್ವಧರ್ಮದ ಸಂಪ್ರದಾಯಗಳನ್ನು ಮುಂದುವರೆಸುತ್ತಿರುವ ವಿಶ್ವಾಸ್-ಭಾರತಿ ದಂಪತಿಗಳಿಗೆ, ಅವರ ಕುಟುಂಬಕ್ಕೆ, ಇಷ್ಟಮಿತ್ರರಿಗೆ ಭಗವಂತನು ಆಯುರಾರೋಗ್ಯ, ಸಕಲ ಸೌಭಾಗ್ಯವನ್ನುಂಟುಮಾಡಲಿ. ಮನಸ್ಸಂಕಲ್ಪ ಸಿದ್ಧಿರಸ್ತು. ಕಾಲಕ್ಕೆ ತಕ್ಕಂತೆ ನೀವು ಬದಲಾದಿರಿ. ನಾವೂ ಬದಲಾಗಬೇಕು. ಇನ್ನುಮುಂದೆ ನಾನು ನನ್ನ ಸೇವೆಯನ್ನು ಆನ್‍ಲೈನ್ ಆಗಿಯೂ ಕೊಡಲಿದ್ದೇನೆ. ಅವಶ್ಯವಿದ್ದವರು ಚಿ. ವಿಶ್ವಾಸನ ಬಳಿ ನಂಬರು ತೆಗೆದುಕೊಂಡು ಕರೆ ಮಾಡಬಹುದು. ಶುಭಾಶಿಷಃ’ ಎಂದು ಎರಡೂ ಕೈಯೆತ್ತಿ ಆಶೀರ್ವದಿಸಿದರು!
* ಪದಗಳ ಅರ್ಥ
ಶಿಷ್ಯವರ್ಗ = ಅವರವರ ಹೊಕ್ಕುಬಳಕೆಯ, ಅವರನ್ನೇ ನೆಚ್ಚಿಕೊಂಡವರ ಸಮೂಹ ಕೌಳಿಗೆ ಸೌಟು = ಆಚರಣೆಯ ವೇಳೆ ತಟ್ಟೆಯಲ್ಲಿಟ್ಟುಕೊಳ್ಳುವ ನೀರಿನ ಲೋಟ, ಚಮಚದಂತಹ ಸೌಟು ಪರಾನ್ನ = ಬೇರೆಯವರ ಮನೆಯ ಊಟ, ದಾನದಿಂದ ಬಂದ ದ್ರವ್ಯದ ಬಳಕೆ ಬಂಗಾರ್ದ್ ಮೆಟ್ಟೂ ಹೇಳ್ ತಲೇಗ್ ಹಾಯ್ಕಂಬಲಾಗ್ತಾ? = ಬಂಗಾರದ ಚಪ್ಪಲಿ ಎಂದು ತಲೆಗೆ ಹಾಕಿಕೊಳ್ಳಬಹುದೆ? ತಲೇಗ್ ಮಿಂದ್ರ್ ಕಾಲೀಗ್ ಬತ್ತು = ತಲೆಗೆ ಸ್ನಾನ ಮಾಡಿದ ನೀರು ಕಾಲಿಗೆ ಬರುತ್ತದೆ ಕೊಂಯ್ಞಾರ = ಮುದ್ದು ತೊವೆ ಸುರಿಯೋರ್ಗೆ ಹೆಸರ ಧಾರಣೆ ಎಂತಕ್ಕೆ = ತೊವೆ ಎಂದರೆ ಹೆಸರು ಬೇಳೆಯಲ್ಲಿ ಮಾಡುವ ಮೇಲೋಗರ. ಸುಟ್ಟೇವು ಸುಡು ಮುದ್ಕಿಗೆ ಸುಂಬ್ಳ ತೆಗೆಯುಲೆ ಇನ್ನೊಬ್ಳು ಅಂಬಂಗೆ = ಸುಟ್ಟೇವು (ಮುಳುಕ) ಎಂಬ ಅತಿಸಾಮಾನ್ಯ ತಿಂಡಿ ಮಾಡುವ ಮುದುಕಿಗೆ ಸುಂಬಳ ತೆಗೆಯಲು ಒಬ್ಬ ಸಹಾಯಕರನ್ನು ಕೊಟ್ಟಹಾಗೆ. ಅನವಶ್ಯ. ನಿಂಗೊವ್ಕೆ = ನಿಮಗೆ ಆನು = ನಾನು ಮಾಡ್ದಿ = ಮಾಡಿದೆ ನಂಗೊವ್ಕೆ = ನಮಗೆ ಬಂಜಿಕ್ಕು ಅನಸ್ತಿದ್ದು = ಬಂದಿರಬಹುದು ಅನಿಸುತ್ತಿದೆ ಬರಿತ್ನೆ = ಸುಮ್ಮನೆ ಬೇಕು ಹೇಳಿ ಇಲ್ಲೆ = ಬೇಕೆಂದಿಲ್ಲ ಆಗೋಯ್ಜು = ಆಗಿಹೋಗಿದೆ * ಫೋಟೋ : ಎಸ್. ವಿಷ್ಣುಕುಮಾರ್ * ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 14 ; ನೋಯಾ ಕಮ್ಮಾನ್ಯಾ ಲಿಸನ್ಯಾ, ಕನ್ನಡಾ ಮಾತಾಡಿದ್ಯೋ ಫೈವ್ ರೂಪೀಸ್ ಫೈನ್ ಪುಟ್ಯಾ
ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ಗಂಡ ಈಗ ಬಂದಾರೆ ಎಲ್ಲ ಮುಗ್ದು ಕೈಕಾಲು ಬಿದ್ದೋದ ಮ್ಯಾಲೆ’
Published On - 1:55 pm, Sun, 13 June 21