Covid Diary : ಕವಲಕ್ಕಿ ಮೇಲ್ ; ‘ಗಂಡ ಈಗ ಬಂದಾರೆ ಎಲ್ಲ ಮುಗ್ದು ಕೈಕಾಲು ಬಿದ್ದೋದ ಮ್ಯಾಲೆ’

‘ನಮ್ಮನೆಯರು ಬೆಂಗ್ಳೂರಿನಾಗೆ ಅದಾರೆ’ ಎಂದೇ ಹೇಳುವಳು. ಅದರಾಚೆ ಮಾತು ಬೆಳೆಸುವುದಿಲ್ಲ. ಹೀಗೆ ಊರಿಗೂ ಬರದೆ, ಯಾರಿಗೂ ಹೇಳದೇ ಅಲ್ಲೆಲ್ಲೋ ಇದ್ದುಬಿಟ್ಟ ಗಂಡ, ಈಗ ಕೊರೋನಾ ಆಗಿ ಗುಣವಾದ ಮೇಲೆ ಮರಳಿ ಬಂದಿದ್ದಾನೆಂಬುದು ಊರಲ್ಲಿ ಬಿಸಿ ಸುದ್ದಿಯಾಗಿ ಹರಡಿದೆ. ಅವನನ್ನು ಕಂಡ ಹಳೆಯ ಪರಿಚಯದವರು ಎಲ್ಲಿದ್ದೆ, ಏನೂ ಸುದ್ದಿನೇ ಇರ್ಲಿಲ್ಲ? ಎಂದರೆ ಒಂದು ಮಾತೂ ಆಡುವುದಿಲ್ಲವಂತೆ!’

Covid Diary : ಕವಲಕ್ಕಿ ಮೇಲ್ ; ‘ಗಂಡ ಈಗ ಬಂದಾರೆ ಎಲ್ಲ ಮುಗ್ದು ಕೈಕಾಲು ಬಿದ್ದೋದ ಮ್ಯಾಲೆ’
Follow us
ಶ್ರೀದೇವಿ ಕಳಸದ
|

Updated on:Jun 12, 2021 | 1:29 PM

ಹಳ್ಳಿಯಲ್ಲಿ ನೀವು ಕೇಳದಿದ್ದರೂ ಸುದ್ದಿ ಎಲ್ಲಿಂದಲೋ ಹರಿದುಬಂದು ನಿಮ್ಮ ಕಿವಿ ತಲುಪುತ್ತದೆ. ಹಾಗೆ ಇಪ್ಪತ್ತೈದು ವರ್ಷ ಕೆಳಗೆ ಅವಳನ್ನು ಬಿಟ್ಟು ಎಲ್ಲೋ ಹೋಗಿ ನಾಪತ್ತೆಯೆ ಆಗಿಬಿಟ್ಟಿದ್ದ ಗಂಡ ಈಗ ಬಂದಿರುವನೆನ್ನುವ ಸುದ್ದಿ ತಿಳಿದು ಬಂತು. ಅವಳನ್ನು, ಎಳೆಯ ಮಕ್ಕಳನ್ನೂ ಬಿಟ್ಟು ಅವ ಬೆಂಗಳೂರಿಗೆ ಹೋಗಿಬಿಟ್ಟಿದ್ದ. ಅಲ್ಲಿ ಹೋಟೆಲೊಂದರಲ್ಲಿ ಕೆಲಸ ಮಾಡಿಕೊಂಡು ಆವಾಗೀವಾಗ ದುಡ್ಡು ಕಳಿಸುತ್ತಿದ್ದ. ಆದರೆ ಏನಾಯಿತೋ?! ಹೆಂಡತಿ ಮಕ್ಕಳ, ತಾಯ್ತಂದೆಯರ ಭಾರ ತಡೆದುಕೊಳ್ಳುವ ಆದಾಯ ತನಗೆ ಇಲ್ಲವೆನಿಸಿತೋ, ಏನೋ, ಅಂತೂ ಸಂಪರ್ಕ ಕಡಿದುಕೊಂಡುಬಿಟ್ಟ. ಹತ್ತು ಹದಿನೈದು ವರ್ಷದಿಂದ ಪತ್ರವಿಲ್ಲ, ಫೋನಿಲ್ಲ, ಹಣ ಬರುವುದಿಲ್ಲ, ಅವನಿಂದ ಸುದ್ದಿಯೇ ಇಲ್ಲ. ಅವಳೆಲ್ಲೆಲ್ಲಿ ಹುಡುಕಿಸಿದರೂ ಪತ್ತೆಯಿರಲಿಲ್ಲ. ಗಂಡನಿಲ್ಲದ ಗಂಡನ ಮನೆಯಲ್ಲೂ ಉಳಿಯದೆ, ಕುಲ ಹೊರಗೆ ಮಾಡಿದ ತವರಿನಲ್ಲೂ ನಿಲ್ಲದೆ ನಮ್ಮ ಸಣ್ಣ ಹಳ್ಳಿ (ಅಡವಿಯೊಳಗೊಳಗಿನ ಊರುಗಳಿಗೆ ಇದೇ ‘ಪೇಟೆ’!)ಗೆ ಬಂದು ನೆಲೆಸಿದ್ದಳು.

*

ಆ ಒಂಟಿ ಹೆಣ್ಣುಜೀವವನ್ನು ನೋಡುತ್ತಿರುವುದು ಈವಾಗಲ್ಲ, ಇಪ್ಪತ್ತೈದು ವರ್ಷಕ್ಕಿಂತ ಹೆಚ್ಚಾಗಿರಬಹುದು. ಈ ಊರಿಗೆ ಬಂದಮೇಲೆ ನಮ್ಮ ಬಿಡಾರ ಅತ್ತಿತ್ತ ಬದಲಾಯಿತು. ಅವಳು ಮಾತ್ರ ಆ ಪುಟ್ಟ ಗೂಡಿನಲ್ಲೇ ಇದ್ದಾಳೆ. ಅವಳ ಪುಟ್ಟ ಮನೆ ಹಾಯ್ದೇ ಮನೆಯಿಂದ ಕ್ಲಿನಿಕ್‍ಗೆ ನಡೆದು ಬರಬೇಕು. ಅವಳಿಗೆ ಇಬ್ಬರು ಮಕ್ಕಳು. ನಮ್ಮ ಮಕ್ಕಳಿಗಿಂತ ನಾಲ್ಕೈದು ವರ್ಷ ದೊಡ್ಡವರಿರಬಹುದು. ಊರಿನಲ್ಲಿ ಹೆಚ್ಚುವರಿ ಮನೆಕೆಲಸಗಳಿದ್ದರೆ ಅವಳನ್ನು ಕರೆಯುವರು. ಯಾರದಾದರೂ ಮನೆಯಲ್ಲಿ ಕಾರ್ಯಕಟ್ಲೆ, ಮದುವೆ, ಬಾಣಂತನ ಇದೆಯೆಂದಾದರೆ ಅವಳು ಹೋಗಿ ಸಹಾಯ ಮಾಡುವಳು. ಮಳೆಗಾಳಿ ಮುಗಿದು ನವರಾತ್ರಿ ಶುರುವಾಗುವಾಗ ಮನೆಯಂಗಳದ, ಹಿತ್ತಿಲಿನ ಕಳೆ ಕೀಳುವ ಕೆಲಸ ಬರುವುದು. ಅದಲ್ಲದೆ ತನ್ನ ಕಾಸಿಗೆ ಬೇಕಾದರೆ ತೋಟಕ್ಕೆ ಸೊಪ್ಪು-ದರಕು ಹೊರುವಳು. ಅಡಕೆ ಸುಲಿಯುವಳು. ಬೇಸಿಗೆಯಲ್ಲಿ ನೀರು ಹಾಯಿಸುವ ಕೆಲಸ ಮಾಡುವಳು. ಆರಾಮಿಲ್ಲದವರ ಮನೆಗೆ ಮೂರು ಕಿಲೋಮೀಟರು ದೂರದ ಗ್ರಾಮಚಾವಡಿಯಿಂದ ರೇಷನ್ ಹೊತ್ತು ತರುವಳು. ಮಗು-ಬಾಣಂತಿಗೆ ಮೀಯಿಸುವ ಕೆಲಸ ಮಾಡಿ ಬಾಣಂತನವನ್ನು ಬೆಚ್ಚಗಾಗಿಸುವಳು. ನಮ್ಮ ಹಿತ್ತಿಲು, ಅಂಗಳದ ಕಳೆ ಕಿತ್ತು ಚೊಕ್ಕ ಮಾಡಲಿಕ್ಕೂ ಒಂದೆರೆಡು ಸಲ ಬಂದಳು. ನಮ್ಮ ಸಾರಥಿ ಹೇಳುವ ಪ್ರಕಾರ ಗಂಡಸರಿಗೆ ಕೊಡುವಷ್ಟು ದಿನಗೂಲಿಯನ್ನು ಕಳೆ ಕೀಳುವುದೆಂಬ ‘ಸುಮಾರಿನ’ ಹೆಣ್ಣು ಕೆಲಸಕ್ಕೆ ಕೊಟ್ಟದ್ದು ಕಂಡು ಬರಲು ಹೆದರಿದಳು. ಒಟ್ಟಾರೆ ತಾತ್ಕಾಲಿವಾದ ಸೀಸನಲ್ ಕೆಲಸಗಳನ್ನು ಮಾಡುತ್ತ ನಾಕು ಕಾಸು ಗಳಿಸುತ್ತಿದ್ದಳು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಅವಳ ಮಗಳು ಹೈಸ್ಕೂಲಿಗೇ ಶಾಲೆ ಬಿಟ್ಟು, ಟೈಲರಿಂಗ್ ಕಲಿತಳು. ಹತ್ತಿರದಲ್ಲೇ ಶುರುವಾದ ಗಾರ್ಮೆಂಟ್ ಫ್ಯಾಕ್ಟರಿಗೆ ಸೇರಿ ನಾಕು ಕಾಸು ಗಳಿಸುವಂತಾದಳು. ದುಡಿಮೆಗೆ ಇನ್ನೊಂದು ಹೆಗಲು ಜೊತೆಯಾದ ಮೇಲೆ ಮಂಡೆ ತುಂಬ ಹರಡಿ ಹಾರಾಡುತ್ತಿದ್ದ ಅವಳ ತಲೆ ಕೂದಲು ನೀಟಾಗಿ ಬಾಚಿಕೊಂಡು ಒಂದು ತುರುಬಾಯಿತು. ಸೀರೆ ಮೇಲಿದ್ದ ಅಡುಗೆಮನೆಯ, ತೋಟ, ಕೊಟ್ಟಿಗೆ, ಬೈಲಿನ ಕಲೆಗಳೆಲ್ಲ ತೊಳೆದುಕೊಂಡು ಚೊಕ್ಕವಾದವು. ಕಿವಿಯಲ್ಲಿ ಒಂದು ಚೂರು ಹಳದಿ ಲೋಹ ಕೆಂಪು ಹರಳಿನ ಕುಡುಕಾಗಿ ಅರಳಿ ಕೂತಿತು. ಕರಿಯ ಮಣಿ ಪೋಣಿಸಿಟ್ಟ ಸರ ಹೋಗಿ ತೆಳ್ಳನೆಯ ಚಿನ್ನದ ಒಂದೆಳೆ ಸರ ಕುತ್ತಿಗೆಗೆ ಹತ್ತಿ ಕುಳಿತಿತು. ಅವಳ ಮಗನೂ ಅಕ್ಕನ ಹಾಗೆ ಒಂಭತ್ತನೆಯ ಇಯತ್ತೆ ಮುಗಿಸಿ ಹೈಸ್ಕೂಲು ಬಿಟ್ಟ. ಅಲ್ಲಿಲ್ಲಿ ಕೆಲಸ ಮಾಡಿ ಹದಿನೆಂಟು ತುಂಬಿದ್ದೇ ಡ್ರೈವಿಂಗ್ ಲೈಸೆನ್ಸ್ ಮಾಡಿಕೊಂಡ. ಕಲ್ಲು ಕ್ವಾರಿಯ ಗಾಡಿಯ ಕ್ಲೀನರಾಗಿದ್ದವ ಬರಬರುತ್ತ ಡ್ರೈವರನಾದ.

ಎರಡು ವರ್ಷ ಕೆಳಗೆ ಮಗಳ ಮದುವೆ ಆಯಿತು. ಕಳೆದ ವರ್ಷ ಕೊರೊನ ನಡುವೆ ಬಾಣಂತನವೂ ಆಯಿತು. ಬಳಿಕ ಅಬ್ಬೆ ಮಗ ಮಾತ್ರ ಮನೆಯಲ್ಲಿರುವುದು. ಕಷ್ಟಪಟ್ಟು ದುಡಿವ, ಚಟಗಾರನಲ್ಲದ ಮಗ ಇರುವುದರಿಂದ ಅವಳು ದುಡಿಯುವ ಅಗತ್ಯವಿಲ್ಲ. ಆದರೆ ಸಮಯ ಕಳೆಯಬೇಕಲ್ಲ ಎಂದು ಅಂಗೈಯಗಲ ಜಾಗದಲ್ಲೇ ಹಿತ್ತಲಲ್ಲಿ, ಅಂಗಳಲ್ಲಿ ನಾಲ್ಕಾರು ಭಟ್ಕಳ ಮಲ್ಲಿಗೆಯ ಗಿಡ ಮಾಡಿದ್ದಾಳೆ. ಪ್ರತಿದಿನ ಮೊಗ್ಗು ಕೊಯ್ದು, ಹೆಣೆದು ಎರಡು ಕಾಸು ಗಳಿಸುತ್ತಾಳೆ. ಮಲ್ಲಿಗೆ ಅಂಟಿಗೆ ಮಣ್ಣು ಸಗಣಿ ನೀರು ಚಿಪ್ಪಿಕಲ್ಲು ಅದುಇದು ಹಾಕುತ್ತ ಕೈಯಾಡಿಸುತ್ತ ಅವಳ ದಿನ ಕಳೆಯುತ್ತದೆ. ಗಿಡದ ಪ್ರತಿ ಮೊಗ್ಗೂ ಅವಳನ್ನು ನೋಡುತ್ತಲೇ ಮೂಡುತ್ತವೆ. ಅವಳನ್ನು ನೋಡುತ್ತಲೇ ಬೆಳೆಯುತ್ತವೆ. ಅವಳ ಕೈ ತಾಗಿದರಷ್ಟೇ ಅವು ಅರಳುತ್ತವೆ. ತನ್ನ ಪುಟ್ಟ ಮನೆಯ ಹೊರಗೆ ಅವಳು ಮಲ್ಲಿಗೆ ಹೆಣೆಯುತ್ತ ಕೂತಿರುವುದನ್ನು ದಿನಾ ಬೆಳಿಗ್ಗೆ ನೋಡಬಹುದು.

covid diary

ಡಾ. ಕೃಷ್ಣ ಗಿಳಿಯಾರ್

ಅವಳು ಹೂವಿನಂತೆ ಮೂಕಜೀವಿ. ಮಾತು ಬಲು ಕಡಿಮೆ. ತನ್ನ ಬಗ್ಗೆ ಏನೂ ಹೇಳಿಕೊಂಡದ್ದೇ ಇಲ್ಲ. ಹಾಗಾಗಿಯೇ ಅವಳೊಡನೆ ಇಲ್ಲದ ಗಂಡನ ಬಗೆಗೆ ತಲೆಗೊಂದು ಸುದ್ದಿ ಊರಲ್ಲಿ ಚಾಲ್ತಿಯಲ್ಲಿದೆ. ಆದರೆ ಅದ್ಯಾವುದಕ್ಕೂ ಇವಳು ತಲೆ ಕೆಡಿಸಿಕೊಳ್ಳುವವಳಲ್ಲ. ಕೊರೊನ ಒಂದು ಮುಗಿದ ಕೂಡಲೇ ಮಗನಿಗೊಂದು ಮದುವೆ ಮಾಡುವ ಯೋಚನೆ ಇದೆಯೆಂದು ಬಿಪಿ ನೋಡಿಸಿಕೊಳ್ಳಲು ಬಂದಾಗೊಮ್ಮೆ ಹೇಳಿದ್ದಾಳೆ. ಮದುವೆ, ಮುಂಜಿ ನಡೆಯದೆ ಹೂವಿನ ವ್ಯಾಪಾರ ನಿಂತಿದೆಯೆಂದು ಒಂದು ದಿನ ಉದ್ದನೆಯ ಮಾಲೆ ತಂದುಕೊಟ್ಟಿದ್ದಳು.

ಕೊರೋನಾ ಕಾಲದಲ್ಲಿ ನನ್ನ ಕ್ಲಿನಿಕ್ ಸಮಯ, ಕೆಲಸದ ರೀತಿಗಳೆಲ್ಲ ಬದಲಾದ ಹಾಗೆ ಅವಳ ಮನೆಯ ಮುಂದಿನ ವಾತಾವರಣವೂ ಬದಲಾಗಿದ್ದದ್ದು ಇತ್ತೀಚೆಗೆ ಗಮನಕ್ಕೆ ಬಂತು. ನಾನು ಹಾದು ಹೋಗುವಾಗ ಮನೆಯ ಮುಂದಿನ ಕಟ್ಟೆ ಮೇಲೆ ಹೂವು ಕಟ್ಟುವ ಅವಳಿರಲಿಲ್ಲ. ಬಿಳಿ ಗಡ್ಡದ ಒಬ್ಬ ವಯಸ್ಸಾದ ವ್ಯಕ್ತಿ ಕಾಣಿಸಿದರು. ಕಾಲು ಮಡಚಿ ಕಟ್ಟೆ ಮೇಲೆ ತುದಿಗಾಲಲ್ಲಿ ನೆಲ ನೋಡುತ್ತ ಕೂತಿದ್ದರು. ಇದು ಅಂದಿನದಷ್ಟೇ ಅಲ್ಲ, ದಿನನಿತ್ಯದ ಚಿತ್ರವಾಗಿ ಬದಲಾಗಿದೆ. ಅವಳೆಲ್ಲಿ ಹೋದಳೋ ಅಂದುಕೊಳ್ಳುತ್ತಿರುವಾಗ ಆ ಮನೆಯ ಹಿಂದೆ ಒಂದು ಸಣ್ಣ ಬಿಡಾರ ಏಳುತ್ತಿರುವುದು ಕಾಣುತ್ತಿದೆ.

ಹಳ್ಳಿಯಲ್ಲಿ ನೀವು ಕೇಳದಿದ್ದರೂ ಸುದ್ದಿ ಎಲ್ಲಿಂದಲೋ ಹರಿದುಬಂದು ನಿಮ್ಮ ಕಿವಿ ತಲುಪುತ್ತದೆ. ಹಾಗೆ ಇಪ್ಪತ್ತೈದು ವರ್ಷ ಕೆಳಗೆ ಅವಳನ್ನು ಬಿಟ್ಟು ಎಲ್ಲೋ ಹೋಗಿ ನಾಪತ್ತೆಯೆ ಆಗಿಬಿಟ್ಟಿದ್ದ ಗಂಡ ಈಗ ಬಂದಿರುವನೆನ್ನುವ ಸುದ್ದಿ ತಿಳಿದು ಬಂತು. ಅವಳನ್ನು, ಎಳೆಯ ಮಕ್ಕಳನ್ನೂ ಬಿಟ್ಟು ಅವ ಬೆಂಗಳೂರಿಗೆ ಹೋಗಿಬಿಟ್ಟಿದ್ದ. ಅಲ್ಲಿ ಹೋಟೆಲೊಂದರಲ್ಲಿ ಕೆಲಸ ಮಾಡಿಕೊಂಡು ಆವಾಗೀವಾಗ ದುಡ್ಡು ಕಳಿಸುತ್ತಿದ್ದ. ಆದರೆ ಏನಾಯಿತೋ?! ಹೆಂಡತಿ ಮಕ್ಕಳ, ತಾಯ್ತಂದೆಯರ ಭಾರ ತಡೆದುಕೊಳ್ಳುವ ಆದಾಯ ತನಗೆ ಇಲ್ಲವೆನಿಸಿತೋ, ಏನೋ, ಅಂತೂ ಸಂಪರ್ಕ ಕಡಿದುಕೊಂಡುಬಿಟ್ಟ. ಹತ್ತು ಹದಿನೈದು ವರ್ಷದಿಂದ ಪತ್ರವಿಲ್ಲ, ಫೋನಿಲ್ಲ, ಹಣ ಬರುವುದಿಲ್ಲ, ಅವನಿಂದ ಸುದ್ದಿಯೇ ಇಲ್ಲ. ಅವಳೆಲ್ಲೆಲ್ಲಿ ಹುಡುಕಿಸಿದರೂ ಪತ್ತೆಯಿರಲಿಲ್ಲ.

ಗಂಡನಿಲ್ಲದ ಗಂಡನ ಮನೆಯಲ್ಲೂ ಉಳಿಯದೆ, ಕುಲ ಹೊರಗೆ ಮಾಡಿದ ತವರಿನಲ್ಲೂ ನಿಲ್ಲದೆ ನಮ್ಮ ಸಣ್ಣ ಹಳ್ಳಿ (ಅಡವಿಯೊಳಗೊಳಗಿನ ಊರುಗಳಿಗೆ ಇದೇ ‘ಪೇಟೆ’!)ಗೆ ಬಂದು ನೆಲೆಸಿದ್ದಳು. ಒಂಟಿಯಾಗಿ ಸಂಸಾರ ಮಕ್ಕಳನ್ನು ನಿಭಾಯಿಸಲು ಏನೇನು ಕಷ್ಟಪಟ್ಟಳೋ? ಕೇಳಿದವರಿಗೆ ‘ನಮ್ಮನೆಯರು ಬೆಂಗ್ಳೂರಿನಾಗೆ ಅದಾರೆ’ ಎಂದೇ ಹೇಳುವಳು. ಅದರಾಚೆ ಮಾತು ಬೆಳೆಸುವುದಿಲ್ಲ. ಹೀಗೆ ಊರಿಗೂ ಬರದೆ, ಯಾರಿಗೂ ಹೇಳದೇ ಅಲ್ಲೆಲ್ಲೋ ಇದ್ದುಬಿಟ್ಟ ಗಂಡ, ಈಗ ಕೊರೋನಾ ಆಗಿ ಗುಣವಾದ ಮೇಲೆ ಮರಳಿ ಬಂದಿದ್ದಾನೆಂಬುದು ಊರಲ್ಲಿ ಬಿಸಿ ಸುದ್ದಿಯಾಗಿ ಹರಡಿದೆ. ಅವನನ್ನು ಕಂಡ ಹಳೆಯ ಪರಿಚಯದವರು ಎಲ್ಲಿದ್ದೆ, ಏನೂ ಸುದ್ದಿನೇ ಇರ್ಲಿಲ್ಲ? ಎಂದರೆ ಒಂದು ಮಾತೂ ಆಡುವುದಿಲ್ಲವಂತೆ!

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಇದೆಲ್ಲ ಹೌದೋ ಅಲ್ಲವೋ ನನಗೆ ತಿಳಿಯುವ ಆಸಕ್ತಿ, ಸಮಯ ಇರಲಿಲ್ಲ. ಒಂದು ದಿನ ಸಂಜೆ ಆಕೆಯೇ ಕ್ಲಿನಿಕ್ಕಿಗೆ ಬಂದು ಸುಮಾರು ಹೊತ್ತು ಕೂತಳು. ‘ಪಿತ್ತ ಕೆಣಕದೆ ಕಾಂತದೆರಾ, ರಾಶೀ ತಲೆ ತಿರುಗ್ತು. ಅದ್ಕೆ ಬಿಪಿ ಹೆಚ್ಚಾಯ್ತನ ನೋಡ್ಕ ಹೋಗುವಾಂತ ಬಂದೆ’ ಎಂದಳು. ಬಿಪಿ ಸರಿ ಇತ್ತು. ತಲೆ ತಿರುಗಲು ಬಿಪಿ ಅಲ್ಲದೆ ಬೇರೆ ಕಾರಣಗಳೂ ಇರುತ್ತವೆ ಎಂದು ಕಿವಿ ನೋಡಿದೆ. ಎರಡೂ ಕಿವಿತಮಟೆ ವಟ್ಟೆ! ಸಣ್ಣಂದಿನಲ್ಲಿ ಕಿವಿ ಸೋರುತ್ತಿದ್ದವಂತೆ. ಈಗ ಕಣ್ಣು ಉರಿಯಾಯಿತು ಎಂದು ಪ್ರತಿವಾರ ಕಿವಿಗೆ ತೆಂಗಿನೆಣ್ಣೆ ಬಿಡುವಳಂತೆ.

‘ನಿಮ್ಮ ತಲೆನ ನೀವೇ ತಿರುಗಿಸಿಕೊಳ್ತ ಇದಿರ. ಕಿವಿನೇನು ಮಿಷನ್ನ ಎಣ್ಣೆ ಬಿಡಕ್ಕೆ?’ ಎಂದು ಕಿಚಾಯಿಸಿ ದೇಹಶಾಸ್ತ್ರ, ರೋಗಶಾಸ್ತ್ರಗಳನ್ನು ಸರಳವಾಗಿ ಹೇಳಿದೆ. ಅವಳೇ ಕೊನೆಯ ಪೇಶೆಂಟ್. ಮುಗಿಸಿ ಹೊರಡುವ ಎಂದರೆ ಅವಳು ಏಳುತ್ತಲೇ ಇಲ್ಲ. ಪೇಶೆಂಟ್ ರಿಜಿಸ್ಟರನ್ನು ತುಂಬುತ್ತ ಕೂತೆ. ಸ್ವಲ್ಪ ಹೊತ್ತಲ್ಲಿ ಸೊರಸೊರ ಶಬ್ದ ಕೇಳಿತು. ಕತ್ತೆತ್ತಿ ನೋಡಿದರೆ, ನಾನು ನಿರೀಕ್ಷಿಸಿರಲೇ ಇಲ್ಲ, ಭೋರೆಂದು ಅಳತೊಡಗಿದಳು. ಅಷ್ಟುಹೊತ್ತು ಮಳೆ ಸುರಿಯಿತು. ಬಳಿಕ ಶಾಂತಿ.

‘ಈ ಕೊರೊನ ಒಂದ್ ನಂಗೇ ಬಂದು ಸತ್ರೆ ಲಾಯ್ಕ್ ಆಗ್ತಿತ್ತು. ಬರುಹಂಗ್ ಯಂತ ಮಾಡುದು ಹೇಳಿ ಅಮಾ’, ಆಚೀಚೆ ನೋಡಿ ಕಣ್ಣೊರೆಸಿಕೊಂಡು ಹೇಳಿದಳು.

ಅರೆ, ಎಲ್ಲರೂ ಕೊರೊನಾ ಬರಬಾರದಂತಹ ವ್ಯಾಕ್ಸೀನು, ಮಾಸ್ಕು, ಲಾಕ್‍ಡೌನ್, ಜಪತಪ, ಯಜ್ಞಯಾಗ ಮಾಡುತ್ತಿದ್ದರೆ ಈಕೆ ಬರಲು ಏನು ಮಾಡಬೇಕೆಂದು ಕೇಳುತ್ತಾಳಲ್ಲ? ಕೊರೊನಾಗಿಂತ ಭಯಾನಕವಾದದ್ದು ಏನಾಗಿರಬಹುದು ಎಂದು ಕಣ್ಣರಳಿಸಿದೆ. ಒಂದಷ್ಟು ಹೊತ್ತು ಮೌನ. ಮೇಲುನೋಟಕ್ಕೆ ತುಂಬ ಶಾಂತವಾಗಿರುವಂತೆ ಕಾಣುವ ಇವಳು ಒಳಗೊಂದು ಜ್ವಾಲಾಮುಖಿಯಂತೆ ಇದ್ದಾಳೆನಿಸಿ ಗ್ಯಾಸ್ ಒಲೆಯ ಉರಿ ನೆನಪಾಯಿತು. ತಣ್ಣನೆಯ ಬೆಂಕಿ. ಧಗಧಗವೆನ್ನದ ಬೆಂಕಿ ಅದು. ಆದರೆ ನನ್ನ ಹೋಲಿಕೆಗೆ ನನಗೇ ನಗು ಬಂತು. ತಣ್ಣನೆಯ ಬೆಂಕಿ ಎಂದೆಲ್ಲಾದರೂ ಇರಲು ಸಾಧ್ಯವೇ? ಅಷ್ಟರಲ್ಲಿ ಲಾವಾರಸ ಹರಿಯತೊಡಗಿತು.

‘ಹೇಳುಕ್ ಸುಮಾರು ಅಂತ ಇಷ್ಟ್ ವರ್ಷ ನುಂಗ್ ನುಂಗಿ ಇಟ್ಟೆ ಅಮಾ. ಮಕ್ಳಿಗೆ ಅಪ್ಪ ಇಲ್ಲ ಅನುಸ್ದಂಗೆ ಏನೋ ಒಂದ್ ಹೇಳ್ಕಂಡ್ ಸಂಸಾರ ನಡಸ್ದೆ. ತಾನು ಇದಿನ, ಸತ್ತಿದಿನ ಅಂತ ಒಂದ್ ಮಾತ್ ಹೇಳ್ದ ಇದ್ದವ್ರು ಈಗ ಕರೊನ ಆಗಿ, ಅಲ್ಲಿ ಎಲ್ಲ ಬಂದ್ ಆದ್ಮೇಲೆ ಇಲ್ಗೆ ಬಂದಾರೆ. ಹಿಂಗಾಗೋಯ್ತು, ನಿಂಗೆಷ್ಟ್ ಬ್ಯಾಜಾರಾಯ್ತ ಏನ, ಹ್ಯಾಂಗ್ ಮಾಡಿದ್ಯ ಏನ ಅಂತ ಒಂದ್ ಸೊಲ್ಲು? ಬೇತಾಳನಂಗೆ ಸುಮ್ ಕೂರುದು ಬಿಟ್ರೆ ಇದುತಂಕ ಒಂದ್ ಮಾತಿಲ್ಲ. ಹಾಕಿರೆ ಉಂಡ್ರು, ಇಲ್ಲಂದ್ರೆ ಮನಿ ಹೊರ್ಗೇ ಕೂತ್ಕಂಡಿರ್ತ್ರು. ಮಗಳ ಮದಿ ಆದಾಗ ಹಳೇ ಅಡ್ರಸ್ಸಿಗೆ ಪತ್ರ ಹಾಕುಸ್ದೆ, ಜನ ಕಳ್ಸಿ ಬೆಂಗ್ಳೂರೆಲ್ಲ ಹುಡುಕುಸ್ದೆ. ಊಂಹ್ಞೂಂ, ಎಲ್ಲೆಲ್ಲೂ ಸುದ್ದಿಲ್ಲ. ಈಗ ಬಂದಾರೆ. ಅವ್ರ ಮಕ ನೋಡ್ರೆ ಸಾಕು, ಸಿಟ್ ಬಂದ್ ಕುಣಿವಂಗಾಗ್ತದೆ. ಹುಡ್ಗ ನೋಡ್ರೆ ಕಳದ ಹೋದ ಅಪ್ಪ ಬಂದ್ಬಿಟ್ಟನೇನೋ ಅನ್ನಂಗೆ ಆ ತರ ಕುಸಿ ಮಾಡ್ತಾನೆ. ದಿನಾ ಮೀನ ಮೊಟ್ಟೆ ತಕಬರ್ತಾನೆ. ಬೆಂಗ್ಳೂರ್ನಾಗಿದ್ದಂವ ಬಂದಾನೆ ಅಂತ ಸಂಡಾಸು ರೂಮು ಕಟುಸ್ತ ಅದಾನೆ. ಹುಡ್ಗಿ, ಅಳಿಯನು ಅಷ್ಟೆ. ಕುಸಿ ಅವುರ್ಗೆ. ಆದ್ರೆ ನಂಗೆ ಸಿಟ್ಟೇ ಕಮ್ಮಿಯಾಗ್ತಿಲ್ಲ.’

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಈಗ ಬಂದಿರುವ ಆತನಿಗೂ ತನಗೂ ಸಂಬಂಧವೇ ಇಲ್ಲ; ಆತ ಯಾರೋ ಅಪರಿಚಿತ, ತನ್ನ ಮಕ್ಕಳ ಅಪ್ಪ ಅಲ್ಲ ಎಂದೇ ಅವಳಿಗೆ ಅನಿಸಿದೆಯಂತೆ. ಇದೇ ಸಿಟ್ಟು ಮುಂದುವರೆದು ಅವನಿದ್ದಲ್ಲಿ ತಾನು ಇರುವುದಿಲ್ಲ ಅಂತ ಮಗನಿಗೆ ಹೇಳಿಬಿಟ್ಟಿದ್ದಾಳಂತೆ. ಅದು ತನ್ನ ಮನೆ. ಅವಳೇ ಕೈಯಾರ ಕಲ್ಲು, ಮಣ್ಣು ಹೊತ್ತು ಕಟ್ಟಿಸಿದ್ದು. ತಾನು ಅಲ್ಲೇ ಸಾಯುವುದು. ಅಪ್ಪನ ಮೇಲೆ ಅಷ್ಟು ಪ್ರೀತಿ ಇದ್ದರೆ ಮಗ ಅವರಿಗೆ ಬೇರೆ ಬಿಡಾರ ಕಟ್ಟಿಸಿಕೊಡಲಿ ಅಂದಿದ್ದಾಳಂತೆ. ದೀರ್ಘಕಾಲ ವಂಚಿಸಲ್ಪಟ್ಟ ಅನುಭವ, ಒಂಟಿತನದ ಸಂಕಟ, ಮಕ್ಕಳಿಂದ ಸಮಾಜದಿಂದ ಎದುರಿಸಿರಬಹುದಾದ ಪ್ರಶ್ನೆಗಳು ಅವಳನ್ನು ಪೆಡಸುಗೊಳಿಸಿದ್ದವು. ಸಿಟ್ಟಿನಿಂದ ‘ನಾ ಹೇಳಿದ್ದು ತಪ್ಪಾ?’ ಎಂದಳು.

ಖಂಡಿತ ತಪ್ಪಲ್ಲ.

ನೆನಪುಗಳಿಲ್ಲದೇ ಇದ್ದರೆ ಮನುಷ್ಯರು ನೀರು, ಮಾಂಸದ ಗುಪ್ಪೆ ಅಷ್ಟೆ. ನೆನಪುಗಳೇ ನಮ್ಮನ್ನು ನಾವಾಗಿಸಿರುವುದು. ಆದರೆ ಅವೇ ನೆನಪುಗಳು ನಮ್ಮೊಳಗೇ ಬಾವಿ ತೋಡಿ ಏಳಲಾರದಂತೆ ಮುಳುಗಿಸಲೂಬಹುದು. ಅವಳಿಗೆ ಭೂತಕಾಲವು ಮಾಯದ ಗಾಯವಾಗಿ ನೋವುಣಿಸುತ್ತಿದೆ. ಮರೆಯಲಿಚ್ಛಿಸುವ ಭೂತಕಾಲದ ಗಾಯ ಅವನು. ಮತ್ತೆಮತ್ತೆ ನೋಡಿದಾಗ ಮತ್ತೆಮತ್ತೆ ಗಾಯವೇ ಕಣ್ಮುಂದೆ ಬರುತ್ತದೆ. ಅದು ಮರೆಯಬೇಕೆಂದರೆ ಅವನ ಹೊಸ ಚಿತ್ರಗಳು ಮೂಡಬೇಕು. ಹಳೆಯ ಚಿತ್ರಗಳು ಅಳಿಸಿ ಹೋಗಬೇಕು. ಇದೆಲ್ಲ ಸಮಯಾಧೀನ. ಕಾಲವೇ ಗಾಯ ಮಾಯಿಸಬೇಕು. ಅಲ್ಲಿಯವರೆಗೆ ಕಾಯುವುದು ಸುಲಭವೇ?

‘ಅವರೇನಾದ್ರೂ ತಪ್ಪಾಯ್ತು ಅಂತ ನಿಮ್ಮತ್ರ ಕೇಳಿದರೆ?’ ‘ಆಗ ಕತೆ ಬೇರೆನೇ ಅಮ. ಅವ್ರು ಅದ್ನ ಕೇಳ್ಳಿಲ್ಲ ಅಂತ್ಲೆ ಸಿಟ್ ನಂಗೆ.’ ‘ಕ್ಷಮೆ ಇಟ್ಕೊಳಿ ಅಮ್ಮ, ಸಿಟ್ಟು ಕೆಲವೊಮ್ಮೆ ನಮ್ಮನ್ನೇ ತಿಂದುಬಿಡುತ್ತೆ. ಅದು ಬೆಂಕಿ ತರಹ. ಎದುರಿದ್ದವರನ್ನೂ ಸುಡುತ್ತೆ. ಅದುಮಿ ಒಳಗಿಟ್ಟುಕೊಂಡರೆ ನಮ್ಮನ್ನೂ ಸುಡುತ್ತೆ.’

ಸಿಟ್ಟು, ಅಸಹಾಯಕತೆಗಳು ಹಗೆಯಾಗಿ ಮಾರ್ಪಟ್ಟರೆ ಹಲ್ಲಿನಲ್ಲಿ ವಿಷ ತುಂಬಿಕೊಂಡ ಹಾಗೆ. ಕಚ್ಚಿಯೇ ಇಳಿಯಬೇಕು. ಸಿಟ್ಟು ಮಾಡಬೇಡಿ ಎಂದು ಎಷ್ಟು ಸುಲಭದಲ್ಲಿ ಹೇಳಿಬಿಟ್ಟೆ? ಸುಳಿವೇ ಕೊಡದೆ ದಶಕಗಟ್ಟಲೆ ದೂರವಿದ್ದ ಬಾಳಸಂಗಾತಿ ಮರಳಿ ಬಂದಾಗ ಸಿಟ್ಟು ಮೂಡದಿರಲು ಸಾಧ್ಯವೇ?

‘ಮದಿ ಆಗ್ದೇ ಒಬ್ರೇ ಇದ್ರೆ ಒಂಥರ. ಮದಿ ಆಗಿ ಗಂಡ ಬಿಟ್ಟ, ಗಂಡ ಸತ್ತ ಅಂದ್ರೆ ಅದಾರೂ ಒಂಥರ. ಆದ್ರೆ ಹೀಂಗೆ, ಇದಾನಾ ಇಲ್ವ ಗೊತ್ತಿಲ್ದಂಗೆ ಹೆಂಗ್ ಬಾಳೇ ಮಾಡಿರ್ಬೋದು ಲೆಕ್ಕ ಹಾಕಿ. ಮಕ್ಳ ಜೊತೆ ಒಬ್ಳೇ ದೆವ್ವದಂಗೆ ಇದ್ದೆ. ಮಕ್ಳಿಲ್ಲದಿದ್ರೆ ಸತ್ತಾರೂ ಹೋಗುಕಾಯ್ತಿತ್ತು ಅಮಾ. ಈಗ ಬಂದಾರೆ ಎಲ್ಲ ಮುಗ್ದು ಕೈಕಾಲು ಬಿದ್ದೋದ ಮ್ಯಾಲೆ. ಆ ಮಕ ನೋಡಕ್ಕಿಂತ ನಂಗೆ ಕೊರೊನ ಬಂದು ಜೀಂವಾ ಹೋದ್ರು ಅಡ್ಡಿಲ್ಲ ಅನಿಸ್ತಿದೆ. ಎಂತಕ್ ಇರಬೇಕ್ ನಮ್ಮಂತ ಗತಿಗೆಟ್ಟರು?’

ಭೋರಾಡಿ ಅಳತೊಡಗಿದಳು. ಯಾವ ಸಂತೈಕೆಗೂ ತಹಬಂದಿಗೆ ಬರುವಂತೆ ಕಾಣುತ್ತಿಲ್ಲ. ಈ ದುಃಖಮೂಲವೇ ಬೇರೆ. ಪರಿಹಾರ ಮಾರ್ಗವೂ ಭಿನ್ನವೇ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಹೆಣ್ಣಾದ ಕಾರಣಕ್ಕೆ ಅನುಭವಿಸೋ ನೋವಿಗೆ ಕೊನೆ ಅಂತಿಲ್ಲ. ಇಷ್ಟೆಲ್ಲ ವರ್ಷ ಯಾವುದು ನಿಮ್ಮ ಹತ್ರ ಇರಲಿಲ್ಲ ಅಂತ ಸಂಕಟ ಅನುಭವಿಸಿದ್ರೋ, ಈಗದು ನಿಮ್ಮ ಹತ್ರ ಬಂದಿದೆ. ಹ್ಞೂಂ ಅನ್ನಕ್ಕೂ, ಉಂಹ್ಞೂಂ ಅನ್ನಕ್ಕೂ ಸ್ವಲ್ಪ ಸಮಯ ತಗೊಳ್ಳಿ. ಯಾವುದೇ ತೀರ್ಮಾನ ತಗೊಳೋ ಮುಂಚೆ ಮಕ್ಕಳ ಹತ್ರ ಮಾತಾಡಿ. ಜಗಳ ಆದ್ರೂ ಪರವಾಗಿಲ್ಲ, ಬಂದವರ ಹತ್ರನೂ ಮಾತಾಡಿ. ಅಷ್ಟಾದಮೇಲೂ ನಿಮಗೆ ಬೇರೆನೇ ಇರಬೇಕು ಅನಿಸಿದ್ರೆ ಮಗಳ ಮನೆಯಲ್ಲಿ ಒಬ್ರು, ಮಗನ ಜೊತೆ ಒಬ್ರು ಇರಬೋದಲ್ಲ? ಯಾವುದಕ್ಕೂ ದುಡುಕಬೇಡಿ’ ಎಂದು ಸೂಚಿಸಿ ಅತ್ತತ್ತು ಸುಸ್ತಾದವರನ್ನು ಬೀಳ್ಕೊಂಡೆ. ಆತನನ್ನು ಒಮ್ಮೆ ಮಾತಾಡಿಸಬೇಕಲ್ಲ, ಹೇಗೆ ಎಂದು ಯೋಚಿಸುತ್ತ ಮನೆ ಮುಟ್ಟಿದೆ.

* ಫೋಟೋ : ಎಸ್. ವಿಷ್ಣುಕುಮಾರ್

* ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 13 ; ‘ಈ ಆನ್​ಲೈನ್​ ಪೌರೋಹಿತ್ಯ ಲಾಯಕ್ಕಿದ್ದು ಮಾರಾಯ್ರೇ’

ಇದನ್ನೂ ಓದಿ :Covid Diary ; ಕವಲಕ್ಕಿ ಮೇಲ್ : ‘ಮೇಡಂ, ಹೋಪ್ಲೆಸ್ ಅನಿಸ್ತಿದೆ ಇಂವಾ ಬಿಟ್ ಹೋದ ಅಂತ ಕಾಣ್ತ ಇದೆ’ 

Published On - 1:02 pm, Sat, 12 June 21

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್