Covid Diary ; ಕವಲಕ್ಕಿ ಮೇಲ್ : ‘ಮೇಡಂ, ಹೋಪ್ಲೆಸ್ ಅನಿಸ್ತಿದೆ ಇಂವಾ ಬಿಟ್ ಹೋದ ಅಂತ ಕಾಣ್ತ ಇದೆ’
Lockdown : ‘ತಮ್ಮ ಸೃಜನಶೀಲ ಆಲೋಚನೆಗಳಂತೆ ಕಾಯಿಲೆಯೂ ಅಮೂರ್ತವಾದದ್ದು ಎಂದು ಭಾವಿಸಿರುತ್ತಾರೆ. ಹಾಗಾಗಿಯೇ ಸಮಾಜಕ್ಕಾಗಿ ಬದುಕು ಮೀಸಲಿಟ್ಟ ಎಷ್ಟೋ ಅಮೂಲ್ಯ ಜೀವಗಳನ್ನು ನಾವಿಂದು ಕಳೆದುಕೊಂಡಿರುವುದು. ಆದರೆ ವಿಜ್ಞಾನ ವಿಜ್ಞಾನವೇ. ರೋಗ ರೋಗವೇ.‘
ಅಸಂಖ್ಯ ನೋವಿನ ಹಕ್ಕಿಗಳು ವಿಷಾದದ ಹಾಡು ಹಾಡುತ್ತಾ ಹಾರುತ್ತಿರುವ ಋತು ಇದು. ಒಂದು ಅದೃಶ್ಯ ವೈರಸ್ಸಿಗೆ ಎಷ್ಟು ಉದಾತ್ತ, ಉತ್ತಮ ಚೇತನಗಳನ್ನು ಕಳೆದುಕೊಂಡೆವು? ಬೇರೆಯವರ ನೋವಿಗೆ ಮಿಡಿಯುವ, ಕಷ್ಟಕ್ಕೆ ಒದಗುವ, ಲೋಕಸುಖಕ್ಕೆ ದುಡಿಯುವ ಅಂಥವರಿಗೆ ಕಾಯಿಲೆ ಯಾಕೆ ಬರುತ್ತದೆ? ಎಷ್ಟೋ ಬದುಕುಗಳಿಗೆ ಊರುಗೋಲಾಗಬಲ್ಲ ಅಂಥ ಉಸಿರುಗಳೇಕೆ ನಿಲ್ಲುತ್ತವೆ? ತಮ್ಮ ಓಟವಿನ್ನು ಮುಗಿಯಿತು, ಇನ್ನು ನಿಮ್ಮದು ಎಂದು ನೆನಪಿಸಲೆಂದೇ? ಸಾವು, ಬದುಕಿನ ಕೆಲವು ಪ್ರಶ್ನೆಗಳಿಗೆ ಉತ್ತರವಿಲ್ಲ. ಯಾಕೆಂದರೆ ಅವು ಅಸಲಿಗೆ ಪ್ರಶ್ನೆಗಳೇ ಅಲ್ಲ. ಹೀಗೆ ಆಯಿತು ಎಂದರೆ ಆಯಿತು ಅಷ್ಟೇ. ನಮ್ಮ ನಡುವೆ ಇನ್ನೂ ತುಂಬ ಕೆಲಸವಿತ್ತು ಎನ್ನುವುದು ನಿಜ. ಕಾಯರೂಪದಲ್ಲಿ ಇನ್ನವರು ಕಾಣಲಾರರು ಎನ್ನುವುದೂ ವಾಸ್ತವ. ಮುಂದಿನ ಹೆಜ್ಜೆಯಿಡಲು ಕಹಿ ಗುಟುಕುಗಳನ್ನು ಅರಗಿಸಿಕೊಳ್ಳಲೇಬೇಕು. ವಿಶ್ವಚೇತನವೇ, ಆ ಜೀವಗಳಿಗೊಂದಿಷ್ಟು ದುಃಖ ಸಹಿಸುವ ಶಕ್ತಿ ಕೊಡು. ನಮಗೆಲ್ಲ ಅವರ ಕನಸಿನ ಬೀಜಗಳನ್ನು ಪೊರೆವ ಧಾರಣ ಶಕ್ತಿ ನೀಡು.
* ಆವಾಗೀವಾಗ ನನಗೊಂದು ಮೆಸೇಜು ಬರುವುದಿತ್ತು: ‘ಮೇಡಂ, ನಿಮ್ಮತ್ರ ಹೊಗಳಿಸಿಕೊಳ್ಳುವ ಆಸೆ.’ ಅದರ ಜೊತೆಗೆ ವಾಟ್ಸಪ್‌ನಲ್ಲಿ ರಕ್ತ ತಪಾಸಣೆಯ ರಿಪೋರ್ಟೂ ಇರುತ್ತಿತ್ತು. ಉತ್ತಮ ಶುಗರ್ ಕಂಟ್ರೋಲ್ ಆಗಿರುವ, ಕೊಬ್ಬು ಕಡಿಮೆಯಾಗಿರುವ ಸೂಚನೆಗಳು ವರದಿಯಲ್ಲಿರುತ್ತಿದ್ದದ್ದು ಹೆಚ್ಚು. ‘ವೆರಿ ಗುಡ್, ಕೀಪ್ ಇಟ್ ಅಪ್’ ಎಂದೋ, ಥಂಬ್ಸ್ ಅಪ್ಪಿನ ಜೊತೆ ಒಂದು ಹೂಗೊಂಚಲು ಒತ್ತಿಯೋ ನನ್ನ ಮೆಚ್ಚುಗೆ ಸೂಚಿಸುತ್ತಿದ್ದೆ. ಆವಾಗೀವಾಗ ಘಟ್ಟದ ಮೇಲಿರುವ ತಮ್ಮ ಕಾಲೇಜು-ಮನೆಯಿಂದ ಇಲ್ಲಿ ನಮ್ಮೂರಿನ ಪಕ್ಕ ಇರುವ ತಮ್ಮ ಮೂಲಮನೆಗೆ, ಮೂಲಸೆಲೆಗೆ ಬರುವಾಗ ದಾರಿ ಮೇಲೆ ಸಿಗುವ ನನ್ನ ಕ್ಲಿನಿಕ್ಕಿಗೆ ಆಕಸ್ಮಿಕ ಭೇಟಿ ಕೊಟ್ಟು; ತೂಕ, ಬಿಪಿ ನೋಡಿಕೊಂಡು; ಪುಸ್ತಕ, ರಾಜಕಾರಣ, ಹೋರಾಟದ ಮಾತಾಡಿ; ‘ಇಟ್ಟುಕೊಂಡಿರಿ’ ಎಂದು ನಾನು ಕೊಟ್ಟ ತುರ್ತು ಔಷಧಿಗಳನ್ನು ಪಡೆದು ಹೋಗುವುದು ಅವರ ರೂಢಿ. ಒಮ್ಮೆ ಹಾಗವರು ಬಂದಾಗ ತೂಕ ತುಂಬ ಇಳಿದಂತೆ ಕಂಡಿತು. ಕಣ್ಣ ಕೆಳಗಿನ ಚರ್ಮ ಜೋತು ಬಿದ್ದಿದೆ. ಹೇಗಾದರೂ ಆಗಲಿ, ಒಮ್ಮೆ ಶುಗರ್ ನೋಡಿಸಿಬಿಡಿ ಎಂದದ್ದೇ ಕೂಡಲೇ ನೋಡಿಸಿದರು. ಶುಗರ್ ಬಹುವೇ ಹೆಚ್ಚಿತ್ತು. ‘ಮತ್ತೆಲ್ಲಿ ಹೋಗಕ್ಕೂ ಈಗ ಪುರ್ಸತ್ತಿಲ್ಲ, ನೀವೇ ಮಾತ್ರೆ ಹೇಳಿ, ಶುರು ಮಾಡ್ತೆ’ ಎಂದು ತೆಗೆದುಕೊಳ್ಳಲು ಶುರು ಮಾಡಿದರು. ಬಳಿಕ ಎಲ್ಲ
ತಪಾಸಣೆ ಆಗಿ ದಿನವೂ ವಾಕ್, ನಿಯಮಿತ ಊಟ, ನಿದ್ರೆ ಎಂದು ತಮ್ಮನ್ನು ‘ಶಿಸ್ತು’ ಮಾಡಿಕೊಂಡಿದ್ದರು. ತನಗೆ, ತನ್ನ ಸಂಗಾತಿಗೆ, ವಿದ್ಯಾರ್ಥಿಗಳು, ಸಂಘಟನೆಯವರು ಮತ್ತಿತರರಿಗೆ ಆರಾಮಿಲ್ಲದಿರುವಾಗ ಅವರಿಂದ, ಅವರ ಬಾಳಸಂಗಾತಿಯಿಂದ ನನಗೆ ಫೋನು ಬರುವುದಿತ್ತು. ಮೆಡಿಕಲ್ ಶಾಪಿನಲ್ಲೇ ನಿಂತು ಮಾಡುತ್ತಿದ್ದ ಫೋನಾದ್ದರಿಂದ ಸಾಧಾರಣವಾಗಿ ಎತ್ತಿ ಉತ್ತರಿಸುತ್ತಿದ್ದೆ.
ಅವರಿಗೆ ತಕ್ಕ ಬಾಳ ಸಂಗಾತಿ ಸಿಕ್ಕಿದ್ದಳು. ಇಬ್ಬರೂ ಸಮಾಜಕ್ಕೆ ತಮ್ಮನ್ನು, ತಮ್ಮ ಸಂಸಾರವನ್ನು ತೆತ್ತುಕೊಂಡರು. ವಿಶಾಲ ಸಮಾಜದಲ್ಲೇ ತಮ್ಮ ಕುಟುಂಬವನ್ನು ಕಂಡ ಜೀವಗಳು ಅವು. ಅವರಿಗಿವರು ತಮಾಷೆ ಮಾಡುತ್ತ, ಇವರನ್ನವರು ಕೀಟಲೆ ಮಾಡುತ್ತ ನಗುತ್ತ, ಸೀರಿಯಸ್ ವಿಷಯಗಳ ಚರ್ಚಿಸುತ್ತ ನೋಡಲು ಹಬ್ಬ ಎನ್ನುವಂತಿರುವರು. ಎಲ್ಲವೂ ಹೀಗೆಯೇ ಇರುವುದೇನೋ ಎಂದು ನಾವು ಭಾವಿಸಿರುವಾಗ..
ಅವರಿಂದ ತಿಂಗಳ ಕೆಳಗೆ ‘ಆಕ್ಸಿಜನ್ ಲೆವೆಲ್ ಸಾಧಾರಣವಾಗಿ ಎಷ್ಟಿರುತ್ತದೆ?’ ಎಂಬ ಮೆಸೇಜು ಬಂದಿತು. ಕ್ಲಿನಿಕ್ಕಿನಲ್ಲಿದ್ದೆ, ನೋಡಿರಲಿಲ್ಲ. ಬಳಿಕ ಅವರ ಸಂಗಾತಿಯ ಕರೆ ಬಂತು. ತುಂಬ ಜ್ವರ, ನೆಗಡಿ, ಗಂಟಲುರಿ. ಏನು ಮಾಡುವುದು? ಅವರು ಸಂಘಟನೆ ಎಂದು ಎಲ್ಲೆಲ್ಲೋ ಸುತ್ತಾಡುವವರು. ಒಂದೇಸಮ ವಿದ್ಯಾರ್ಥಿಗಳು, ಜನರ ಸಂಪರ್ಕದಲ್ಲಿರುವವರು. ಕೋವಿಡ್ ಟೆಸ್ಟ್ ಮಾಡಿಸಿ ಎಂದದ್ದೇ ಇಬ್ಬರೂ ಹೋಗಿ ಟೆಸ್ಟ್ ಮಾಡಿಸಿದರು. ವರದಿ ಬರುವವರೆಗೆ ಮಾತ್ರೆ ತಗೊಂಡರು. ಅವರಿಗೆ ಕೋವಿಡ್ ಬಂದಿತ್ತು, ಸಂಗಾತಿಗೆ ಇಲ್ಲ.
‘ತಾಲೂಕಾಸ್ಪತ್ರೆಯಲ್ಲಿ ಮನೇಲೇ ಟ್ರೀಟ್ಮೆಂಟ್ ತಗೊಳ್ಳಿ ಸಾಕು ಅಂತಿದಾರೆ. ಆದ್ರೆ ನಾವಿರದು ಬಾಡ್ಗೆ ಮನೆ. ಒಂದೇ ಬಾತ್ರೂಂ ಅದೆ. ಅವಳು ನೆಗೆಟಿವ್ ಬಂದಿದಾಳೆ. ರಿಸ್ಕ್ ಬ್ಯಾಡ ಅಂತ ನಾನು ಆಸ್ಪತ್ರೆಗೆ ಅಡ್ಮಿಟ್ ಆಗ್ಬಿಟ್ಟೆ’ ಎಂದಿದ್ದರು. ಒಂದು ವಾರ ಹಿಂದೆ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ದಾಸ್ತಾನು ಇಟ್ಟುಕೊಳ್ಳಿ, ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ವೈದ್ಯರ ಬಳಿ ಹೇಳಿ ಬಂದಿದ್ದರಂತೆ. ಇಂದು ಅವರನ್ನು ಕಂಡು ವೈದ್ಯರು, ‘ಆಕ್ಸಿಜನ್ ಎಲ್ಲ ಇಟ್ಟಿದೇವೆ, ಬನ್ನಿ ಬನ್ನಿ’ ಎಂದು ಹಾಸ್ಯ ಮಾಡಿದರಂತೆ. ಹೆದರಬೇಡಿ, ಹತ್ತು ದಿನ ಇದ್ದು ಬನ್ನಿ ಎಂದರೆ, ‘ಹೆದ್ರಿಕೆ ಎಂತಿಲ್ಲ. ಇಲ್ಲೀತಂಕ ನಾವಿಬ್ರು ಒಂದಿಪ್ಪತ್ ಸಲ ಟೆಸ್ಟ್ ಮಾಡಿದ್ವಿ. ಯಾವಾಗೂ ನೆಗೆಟಿವ್ ಬಂದಿತ್ತು. ಇವತ್ತು ಪಾಸಿಟಿವ್ ಬಂದದೆ, ಅಷ್ಟೆಯ’ ಎಂದು ತಮ್ಮ ಕಂಪ್ಯೂಟರು, ಪುಸ್ತಕಗಳೊಡನೆ ಅಡ್ಮಿಟ್ ಆದರು. ‘ಇದುತಂಕ ಓದಕ್ಕೆ ಆಗ್ದೆ ಇರುವ ಪುಸ್ತಕಗಳನ್ನು ಈಗ ಓದಿ ಮುಗಿಸ್ತೇನೆ’ ಅಂದುಕೊಂಡಿದ್ದರು. ಲೇಶ ಮಾತ್ರ ಭಯವೂ ಇರಲಿಲ್ಲ. ಅನೂಹ್ಯವಾದದ್ದು ಸಂಭವಿಸಬಹುದೆನ್ನುವ ಛಾಯೆಯೇ ಇಲ್ಲ.
ಮರುದಿನ ನಡುರಾತ್ರಿ ಮೆಸೇಜುಗಳು ಬಂದವು: ‘ನಡುಕ ಬಂದು ಎಚ್ಚರಾಯಿತು. ಬೆವರುತ್ತ ಇದೆ, ಸ್ವಲ್ಪ ಎದೆ ಕಟ್ಟಿದಂತೆ ಆಗುತ್ತಿದೆ’, ‘ಮೇಡಂ, ಮತ್ತೆರೆಡು ಸಲ ಹಾಗೇ ಆಯಿತು. ಆದರೆ ಏನೂ ತ್ರಾಸಿಲ್ಲ, ಆರಾಮಿದೇನೆ’ ಎಂದು. ಮೆಸೇಜು ಬರುವುದರಲ್ಲಿ ನಾನು ಮಲಗಿದ್ದೆ. ಅವರು ಕಾಲ್ ಮಾಡಬಹುದಿತ್ತು, ಮಾಡಲಿಲ್ಲ. ಕೊನೆಯ ಮೆಸೇಜು ಬೆಳಗಿನಜಾವ ಮೂರು ಗಂಟೆಗೆ ಬಿಟ್ಟಿದ್ದರು. ನಾನು ನಾಲ್ಕು ಗಂಟೆಗೆ ನೋಡಿದೆ. ಈಗ ಮಲಗಿರಬಹುದೋ ಎಂದು ನಾನೂ ಕಾಲ್ ಮಾಡದೇ ‘ಸ್ಟಾಫ್ ಕರೀರಿ, ಫೀಲ್ ಫ್ರೀ ಟು ಕಾಲ್ ಇಫ್ ನೆಸೆಸ್ಸರಿ’ ಎಂದು ಮೆಸೇಜಿನಲ್ಲೇ ಉತ್ತರಿಸಿದೆ. ಬೆಳಿಗ್ಗೆ ಏಳುವುದರಲ್ಲಿ ‘ಸಿಸ್ಟರ್ ಬಂದರು, ಬಿಪಿ ಆಕ್ಸಿಜನ್ ಪಲ್ಸ್ ಟೆಂಪರೇಚರ್ ಎಲ್ಲ ಸರಿ ಇದೆ ಅಂದರು. ಸ್ವಲ್ಪ ಮಲಗಬೋದಾ ನೋಡ್ತೆ’ ಎಂಬ ಮೆಸೇಜು ಇತ್ತು. ಅವರ ಸಂಗಾತಿ ರಾತ್ರಿಯೇ ಆಸ್ಪತ್ರೆಗೆ ಹೋಗಿ ಬಂದಿದ್ದಳು.
ಅಂದು ಸಂಜೆ ಕರೆ ಮಾಡಿದಾಗ ಅವರಿಗೆ ಮಾತನಾಡಲಿಕ್ಕೇ ಆಗುತ್ತಿಲ್ಲ, ಅಷ್ಟು ಕೆಮ್ಮು. ಮೇಲೆಮೇಲೆ ಕೆಮ್ಮು ಬರುತ್ತಿದೆ. ‘ನೀವು ಮಾತಾಡ್ಬೇಡಿ, ಇಲ್ಲಿ ಕೇಳಿ’ ಎಂದೆ. ‘ಯಾರ್ಗೂ ಮಾತಾಡಿಲ್ಲ, ತುಂಬ ಜನಕ್ಕೆ ಹೇಳೇ ಇಲ್ಲ. ಆದ್ರೆ ನಮ್ಮಕ್ಕನ ಹತ್ರ ಒಂದ್ಸಲ ನೀವು ಮಾತಾಡ್ಬಿಡಿ, ಟೆನ್ಶನ್ ಮಾಡ್ಕತಾಳೆ’ ಎಂದರು. ಸದಾ ತನ್ನಕ್ಕನ ಒಳಿತು ಬಯಸುತ್ತಿದ್ದ ಅವ್ವನಂತಹ ತಮ್ಮ. ಅವರಿಗಷ್ಟು ವಿಷಯ ಹೇಳಿ, ‘ಸಂಧ್ಯಾದೇವಿ ಅವರದೊಂದು ಒಳ್ಳೇ ಸಂಕಲನ ಇದೆ. ಕಡೆಗೆ ಪದ್ಯ ಓದ್ತೀನಿ’ ಅಂದಿದ್ದೆ. ಅವರ ಸಂಗಾತಿಯ ಬಳಿ ಸಿಟಿ ಸ್ಕ್ಯಾನ್, ಮತ್ತಿತರ ಟೆಸ್ಟ್ ಆಗಬೇಕು, ಅದು ಅಲ್ಲಿಲ್ಲವಾದ್ದರಿಂದ ಬೇರೆಡೆ ಶಿಫ್ಟ್ ಮಾಡುವುದು ಒಳ್ಳೆಯದು ಎಂದೆ. ತುಂಬ ಚುರುಕಿನ, ಜಾಣ ಸಂಗಾತಿಯಾದ ಅವಳಿಗೂ, ಅವರ ಹಿತೈಷಿಗಳಿಗೂ ಹಾಗೆನಿಸಿತ್ತು. ಅವಳು ರಾತ್ರಿಯಿಡೀ ಅಲ್ಲಿ ಇಲ್ಲಿ ಕರೆಮಾಡಿ, ಎಲ್ಲವನ್ನು ಹೊಂದಿಸಿಕೊಂಡಿದ್ದಳು. ಬೆಳಗಾದ ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಂದರು. ಸಿಟಿ ಸ್ಕ್ಯಾನ್, ರಕ್ತ ತಪಾಸಣೆಗಳ ರಿಪೋರ್ಟ್ ಬಂದವು. ಅವರ ಶ್ವಾಸಕೋಶ ಎಷ್ಟು ದಾಳಿಗೊಳಗಾಗಿದೆ, ಏನಾಗಲಿದೆ ಎಂಬ ಮುನ್ಸೂಚನೆ ಅಂದೇ ಸಿಕ್ಕಿಬಿಟ್ಟಿತು.
ಇಡಿಯ ರಾಜ್ಯಕ್ಕೇ ಅವರು ಸಂಗಾತಿ. ಅದರಾಚೆಗೂ ಅವರ ಬಳಗವಿದೆ. ಸಿಂಹಾಸನ ಏರಿರುವವರಿಂದ ಹಿಡಿದು ಎರೆಹುಳುವಿನ ತನಕ ಎಲ್ಲರೂ ಅವರ ಬಳಗವೇ. ತಗಾ, ಅವರಿಗೆ ಆರಾಮಿಲ್ಲ ಎಂದದ್ದೇ ಎಲ್ಲರ ಫೋನು, ವಿಚಾರಣೆ, ಸಹಾಯ, ಪ್ರಶ್ನೆಗಳು ಒಂದೇಸಮ ಹರಿದು ಬಂದವು. ‘ಇಡೀ ರಾತ್ರಿ ಒಂದು ನಿಮಿಷ ಕಣ್ಣು ಮುಚ್ಚಿಲ್ಲ ಮೇಡಂ, ಬರೀ ಕೆಮ್ಮು’ ಎಂಬ ಮೆಸೇಜು ಬಂತು. ‘ಯಾರತ್ರನೂ ಮಾತಾಡ್ಬೇಡಿ. ನನ್ನತ್ರನೂ. ಬರೀ ಮೆಸೇಜು ಹಾಕಿ’ ಎಂದುತ್ತರಿಸಿದ್ದೆ. ಇತ್ತ ಅವರ ಸಂಗಾತಿಯೂ ರಾತ್ರಿಯಿಡೀ ಮಲಗದೆ ಪಿಪಿಇ ಹಾಕುವುದು, ಹೋಗಿ ಬರುವುದು ಮಾಡುತ್ತ ಎಚ್ಚರದಿಂದಿದ್ದಳು.
ಅದು ನನ್ನೊಡನೆ ಅವರ ಕೊನೆಯ ಸಂವಹನ. ಮುಂದಿನದೆಲ್ಲ ಇಳುಕಲಿನತ್ತ ಜಾರುಬಂಡಿಯ ಓಟ. ಆಕ್ಸಿಜನ್ ಇಳಿಯುತ್ತ ಹೋಯಿತು. ವಾರ್ಡಿನಿಂದ ಐಸಿಯುಗೆ. ಐಸಿಯುನಿಂದ ವೆಂಟಿಲೇಟರ್‌ಗೆ. ಇಷ್ಟು ದಿನ ಎಂದೂ ಮಲಗಿದ್ದಿಲ್ಲ ಇರಬೇಕು, ಒಂದು ವಾರವಾಗುವುದರಲ್ಲಿ ಮಲಗಿ ಮಲಗಿ ಬೆನ್ನೆಲ್ಲ ಹುಣ್ಣು. ಅವರ ಜೀವ ಸಂಗಾತಿಯೋ, ಕಣ್ಣೆದುರೇ ಇಳಿದುಹೋಗುತ್ತಿರುವ ಪ್ರಾಣ ಚೇತನವನ್ನು ನೋಡನೋಡುತ್ತ ಅಧೀರಳಾಗುತ್ತಿದ್ದರೂ ಅದೆಲ್ಲೆಲ್ಲಿಂದಲೋ ಧೈರ್ಯ, ಶಕ್ತಿ ತುಂಬಿಕೊಳ್ಳುತ್ತ ಆಸ್ಪತ್ರೆಯ ಮೆಟ್ಟಿಲ ಮೇಲೆ, ಕಟ್ಟೆ ಮೇಲೆ, ಟೆಂಟಿನಲ್ಲಿ ಕಾಲ ಕಳೆದಳು. ಪಿಪಿಇ ಕಿಟ್ ಹಾಕಿ ದಿನಕ್ಕೆ ನಾಲ್ಕಾರು ಸಲ ಒಳಹೊರಗೆ ಓಡಾಡಿ ಆಹಾರದ ನಳಿಗೆಯಲ್ಲಿ ಗಂಜಿ ಹಾಕಿದಳು. ಮೈ ಒರೆಸಿದಳು. ಡಯಾಪರ್ ಬದಲಿಸಿದಳು. ತನ್ನವ ಈಗಲೋ ಇನ್ನೆರೆಡು ದಿನಕ್ಕೋ ಕಣ್ಣು ಬಿಟ್ಟಾನೆಯೇ ಎಂದು ಕೈಕಾಲುಗಳ ಚಲನವಲನಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾದಳು. ವೈದ್ಯರೊಡನೆ ಮಾತನಾಡಿದಳು. ಬಂಧುಬಾಂಧವರು ಗೆಳೆಯರ ಬಳಗದೊಡನೆ ಮಾತನಾಡಿದಳು. ಎಲ್ಲರಿಗು ಅವರು ಹೇಗಿದ್ದಾರೆ ಎಂಬ ಸುದ್ದಿ ಬಿಡುತ್ತ ತಾನೂ ಗಟ್ಟಿಯಾಗುತ್ತ ಹೋದಳು. ‘ಈ ಡಾಕ್ಟರ ಬಳಿ ಒಮ್ಮೆ ಮಾತನಾಡುವಿರಾ?’ ಎಂದು ತಿರುವನಂತಪುರದ ಒಬ್ಬ ವೈದ್ಯರ ನಂಬರ್ ಕೊಟ್ಟಳು. ಆದರೆ ಒಂದು ಹಂತದಲ್ಲಿ ‘ಮೇಡಂ, ಹೋಪ್ಲೆಸ್ ಅನಿಸ್ತಿದೆ. ಇಂವಾ ಬಿಟ್ ಹೋದ ಅಂತ ಕಾಣ್ತ ಇದೆ’ ಎಂದು ಸೋತ ಧ್ವನಿಯಲ್ಲಿ ಹೇಳಿದ್ದಳು. ಹೇಳುವಾಗ ಮುಚ್ಚಿಟ್ಟರೂ ಧ್ವನಿಯ ಅಧೀರತೆ, ವಿಷಾದ ನನ್ನನ್ನೂ ಕಲಕಿ ಹಾಕಿತು. ‘ನಾ ಅವನನ್ನ ಯಾವತ್ತೂ ನನಗೊಬ್ಳಿಗೇ ಸೇರಿದಂವ ಅಂದ್ಕಂಡಿರಲಿಲ್ಲ. ಸಮೂಹಕ್ಕೆ ಅಂತನೇ ಬದುಕಿದ್ವಿ. ಸಾಮೂಹಿಕವಾಗಿ ಎಲ್ಲದರೊಡನೆ ಬದುಕಿದ್ವಿ. ಈಗಲೂ ಅವನಿಗಾಗಿ ಸಮಾಜವೇ ಚಿಂತಿಸ್ತ ಇರುವಾಗ ನನ್ನ ದುಃಖವೂ ಸಾಮೂಹಿಕವೇ ಅನಿಸ್ತಿದೆ. ಎಷ್ಟು ಜನರ ಫೋನು, ಮೆಸೇಜು, ಅಬ್ಬಬ್ಬ’ ಎಂದಿದ್ದಳು.
ಅವ ವಿದ್ಯಾರ್ಥಿ ದೆಸೆಯಿಂದಲೂ ವಿಭಿನ್ನ ಚಿಂತನೆಗಳ ಜೀವ. ಎಂದೂ ಸೋತೆ ಎನ್ನದವ. ಕೋವಿಡ್ ಅವರೊಡನೆ ಭೀಕರ ಕಾಳಗಕ್ಕಿಳಿದಿತ್ತು. ಅವರ ರಕ್ತದಲ್ಲಿ ಕೆಲವು ಅಂಶಗಳು ಏರಿದವು, ಕೆಲವು ಇಳಿದವು. ಆದರೆ ಇಳಿಯಬೇಕಾದವು ಏರಿದವು, ಏರಬೇಕಾದವು ಇಳಿದವು. ಮೈಯೆಲ್ಲ ನಂಜು ವ್ಯಾಪಿಸಿ ಬಲಿಷ್ಠ ದೇಹದ ರೋಗನಿರೋಧಕಗಳು ವೈರಸ್ ಸೃಷ್ಟಿಸಿದ ಅನ್ಯಾಯದ ಯುದ್ಧ ಗೆಲ್ಲಲಾರದೆ ಕೈ ಚೆಲ್ಲಿದವು. ಅದೇ ಆಸ್ಪತ್ರೆಯಲ್ಲಿದ್ದ ನಮ್ಮ ವೃತ್ತಿಬಾಂಧವ ಗೆಳೆಯರೊಬ್ಬರು ಅವರನ್ನು ನೋಡಿ ಬಂದು ‘ಹೋಪ್ಸ್ ಇಲ್ಲ. ವೆರಿ ಬ್ಯಾಡ್ ಪ್ರೋಗ್ನೋಸಿಸ್’ ಎಂಬ ಸಂದೇಶ ಕಳಿಸಿದ್ದರು. ಅವರಷ್ಟು ಹೇಳಿ ಒಂದು ತಾಸು ಕಳೆದಿತ್ತೇನೋ, ಲೋಕಪ್ರೇಮಿಯ ಉಸಿರು ದೇಹವನ್ನು ಬಿಟ್ಟು ಲೋಕದೊಡನೆ ಲೀನವಾಯಿತು.
ಮರಣೋತ್ತರವಾಗಿ ದೇಹ ದಾನ ಮಾಡಿದ್ದರೂ ಕೊರೊನಾ ಸಾವು ಕಂಡ ದೇಹಗಳನ್ನು ತೆಗೆದುಕೊಳ್ಳುವುದಿಲ್ಲ. ಸಂಗಾತಿ ಅವರ ಕೊನೆಯ ಇಚ್ಛೆ ಪೂರೈಸಲು ಇನ್ನಿಲ್ಲದ ಶ್ರಮ ಹಾಕಿದಳು. ಆದರೂ ದೇಹದಾನ ಅಸಾಧ್ಯವೆಂದಾಯಿತು. ಕೊನೆಗೆ ಇಂದಲ್ಲ ನಾಳೆ ವೈದ್ಯಕೀಯ ಸಂಶೋಧನೆಗೆ ಉಪಯೋಗವಾಗಲಿ ಎಂದು ಭೂಮಿಯಾಳದಲ್ಲೊಂದು ಗುಹೆ ತೋಡಿ ಈಗಲಾದರೂ ನಿಶ್ಶಬ್ದದಲ್ಲಿ ವಿರಮಿಸು ಮಾರಾಯಾ; ನಾವು ಬರುವವರೆಗೆ ವಿರಾಮದಲ್ಲಿರು ಎಂದು ಅವರ ಮೂಲ ಮನೆಯ ಆವರಣದಲ್ಲಿ ಅಂತಿಮ ವಿದಾಯ ಹೇಳಿ ಬಳಗ ಬೀಳ್ಕೊಂಡಿತು. ಅತ್ತ ಕೇರಳದಲ್ಲಿ ಪಿಣರಾಯಿ ಗೆದ್ದಿದ್ದಾರೆ ಎಂದು ಸಂಭ್ರಮಿಸುವ ಜೀವವನ್ನು ಗೆಲುವು ಪ್ರಕಟವಾದ ದಿನವೇ ಲೋಕ ಕಳೆದುಕೊಂಡಿತು.
ಮನುಷ್ಯ ಮನೋದೇಹಿ. ‘ನಿಮ್ಮ ಬಳಿ ಹೊಗಳಿಸಿಕೊಳ್ಳುವ ಆಸೆ’ ಎಂದು ಈಗಲೂ ಅವರು ನಗುತ್ತ ಹೇಳುತ್ತಿರುವ ಭಾಸವಾಗುತ್ತಿದೆ. ಯಾವುದಕ್ಕೆ ಹೊಗಳಲಿ ವಿಠ್ಠಲ? ನರಳದೇ, ಹೊರಳದೇ ವೆಂಟಿಲೇಟರ್ ತನಕವೂ ನೀವು ಸಹಿಸಿಕೊಂಡ ದೈಹಿಕ ನೋವುಗಳಿಗೋ? ಉಸಿರಿನ ಕೊನೆಯ ತನಕ ನಿಮ್ಮನ್ನು ನೆಚ್ಚಿದವರ ಬಗೆಗೆ ತೋರಿಸಿದ ತಾಯ್ತನಕ್ಕೋ? ಅಸಂಖ್ಯ ಕನಸುಗಳನ್ನು ಯುವ ಮನಸ್ಸುಗಳಲ್ಲಿ ಬೀಜವಾಗಿ ಬಿತ್ತಿರುವುದಕ್ಕೊ? ನಿಮ್ಮ ತ್ರಾಣ, ಕಸುವುಗಳನ್ನು ತುಂಬಿಕೊಂಡಂತಿರುವ ಸಂಗಾತಿಗೆ ಧೈರ್ಯ ತುಂಬಿ ನಿರ್ಗಮಿಸಿದ್ದಕ್ಕೋ?
ಆತ ಸುಮನಸ, ಕನಸುಗಾರ, ತಾಯ್ತನದ ಜೀವ, ಶ್ರಮಜೀವಿ. ಒಳ್ಳೆಯ ಪೇಶೆಂಟ್. ಹೌದು. ಬಹುಪಾಲು ಆಕ್ಟಿವಿಸ್ಟ್ ಮತ್ತು ಸಾಹಿತಿಗಳು ಕೆಟ್ಟ ಪೇಶೆಂಟುಗಳು. ತಮ್ಮ ಅಶಿಸ್ತು, ಅನಿಯಮಿತತೆಯನ್ನು ಕಾಯಿಲೆ ಕೇಳುತ್ತದೆ ಎಂದವರು ತಿಳಿದಿರುತ್ತಾರೆ. ತಮ್ಮ ಸೃಜನಶೀಲ ಆಲೋಚನೆಗಳಂತೆ ಕಾಯಿಲೆಯೂ ಅಮೂರ್ತವಾದದ್ದು ಎಂದು ಭಾವಿಸಿರುತ್ತಾರೆ. ಹಾಗಾಗಿಯೇ ಸಮಾಜಕ್ಕಾಗಿ ಬದುಕು ಮೀಸಲಿಟ್ಟ ಎಷ್ಟೋ ಅಮೂಲ್ಯ ಜೀವಗಳನ್ನು ನಾವಿಂದು ಕಳೆದುಕೊಂಡಿರುವುದು. ಆದರೆ ವಿಜ್ಞಾನ ವಿಜ್ಞಾನವೇ. ರೋಗ ರೋಗವೇ. ಈ ಎಚ್ಚರ ಕಡಿಮೆಯಾದರೆ ಜನರಿಗೆ ಸಹಾಯ ಮಾಡುವ ಭರದಲ್ಲಿ ಎಷ್ಟೋ ಅಮೂಲ್ಯ ಜೀವಗಳು ತಮ್ಮನ್ನು ತಾವು ನಿಷ್ಕಾಳಜಿ ಮಾಡಿಕೊಳ್ಳುವುದನ್ನು ನೋಡಬಹುದು. ಬೆಂಕಿಯ ಜೊತೆ ವ್ಯವಹರಿಸುತ್ತ ಆಡುತ್ತ ಅದು ನಮ್ಮನ್ನು ಸುಡಲಾರದು ಎಂಬ ಹುಸಿ ವಿಶ್ವಾಸ ಹುಟ್ಟಬಹುದು. (ಈ ಮಾತನ್ನು ನಾನೂ ಪದೇಪದೇ ಹೇಳಿಕೊಳ್ಳುತ್ತೇನೆ.) ಈ ವಿಶ್ವಾಸ ಧೈರ್ಯವನ್ನೂ ಕೊಡುತ್ತದೆ ಜೊತೆಗೆ ಮೈಮರೆಯುವಂತೆಯೂ ಮಾಡುತ್ತದೆ. ಇದು ಹೊಸ ತಲೆಮಾರಿನ ವಿಠ್ಠಲ್‌ಗೆ ಚೆನ್ನಾಗಿ ಅರ್ಥವಾಗಿತ್ತು. ಆದರೂ ಅದೆಲ್ಲಿ ಮೈಮರೆತರು?
ಅದೇನೇ ಇರಲಿ, ಒಂದು ತಲೆಮಾರನ್ನು ಪ್ರತಿನಿಧಿಸುವಂತಿದ್ದ, ಒಬ್ಬರೆಂದರೆ ನೂರು ಜನರಿಗೆ ಸಮನಾಗಿದ್ದ, ಹರಿದುಹೋದದ್ದನ್ನು ಒಗ್ಗೂಡಿಸಿ ಹೊಲೆಯುವ ಹುಮ್ಮಸದ ಪ್ರತೀಕದಂತಿದ್ದ ವಿಠ್ಠಲನಿಗೆ ನಮ್ಮ ನಡುವೆ ಇನ್ನೂ ತುಂಬ ಕೆಲಸವಿತ್ತು ಎನ್ನುವುದು ನಿಜ. ಕಾಯರೂಪದಲ್ಲಿ ಇನ್ನವರು ಕಾಣಲಾರರು ಎನ್ನುವುದು ವಾಸ್ತವ.
ನಮ್ಮ ಉತ್ತರ ಕನ್ನಡದ ವಿಠ್ಠಲ, ಸಹಯಾನದ ವಿಠ್ಠಲ, ಚಿಂತನದ ವಿಠ್ಠಲ, ಸಮುದಾಯದ ವಿಠ್ಠಲ, ಸಂವಿಧಾನದ ವಿಠ್ಠಲ, ವಿದ್ಯಾರ್ಥಿ ವೃಂದದ ವಿಠ್ಠಲ, ಇನ್ನಕ್ಕ-ಮಾಧವಿ-ಛಾಯಳ ವಿಠ್ಠಲ, ಎಲ್ಲಕ್ಕಿಂತ ಮಿಗಿಲಾಗಿ ಯಮುನಳ ವಿಠ್ಠಲನಿಗಾಗಿ ಅದೆಷ್ಟು ಹಕ್ಕಿಗಳು ನೋವಿನ ಹಾಡು ಹಾಡುತ್ತಿವೆಯೋ?
ವಿಶ್ವಚೇತನವೇ, ಆ ಜೀವಗಳಿಗೊಂದಿಷ್ಟು ದುಃಖ ಸಹಿಸುವ ಶಕ್ತಿ ಕೊಡು. ನಮಗೆಲ್ಲ ಅವರ ಕನಸಿನ ಬೀಜಗಳನ್ನು ಪೊರೆವ ಧಾರಣ ಶಕ್ತಿ ನೀಡು.
* ನಾಳೆಗೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 12 ; ‘ಗಂಡ ಈಗ ಬಂದಾರೆ ಎಲ್ಲ ಮುಗ್ದು ಕೈಕಾಲು ಬಿದ್ದೋದ ಮ್ಯಾಲೆ’
ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ನಿಮ್ಮುನ್ನ ಬಿಟ್ರೆ ಮುಟ್ಟಿ ನೋಡೋ ಡಾಕ್ಟ್ರೇ ಇಲ್ಲಾಗಿದೆ ಇಡೀ ತಾಲೂಕಲ್ಲಿ
Published On - 12:42 pm, Fri, 11 June 21