Poetry ; ಅವಿತಕವಿತೆ : ಒಬ್ಬಂಟಿಗರಾಗುವ ಹೆಂಗಳೆಯರು ಬಿರುಗಾಳಿ ಬುಡಕೀಳದ ಹೆಮ್ಮರದ ಹಾಗೆ

Malayalam to Kannada : ‘ನಾನು ನನ್ನ ಅಭಿವ್ಯಕ್ತಿಗಾಗಿ ಗುರುತಿಸಿಕೊಂಡ ಒಂದು ಮಾರ್ಗ ಕಾವ್ಯ ಮತ್ತು ಅನುವಾದದ ಪ್ರಯತ್ನ. ಇವೆಲ್ಲ ನನ್ನ ಖಾಲೀತನವನ್ನು ತುಂಬುತ್ತವೆ ಎಂಬುದು ನನ್ನ ನಂಬಿಕೆ. ಮಾಸ್ತಿ, ಬೇಂದ್ರೆ, ಗಿರೀಶ ಕಾರ್ನಾಡ್, ಡಿವಿಜಿ, ಪುತಿನ ಮೊದಲಾದ ನಮ್ಮ ಹಿರಿಯರು ಬೇರೆ ಬೇರೆ ಮಾತೃಭಾಷೆಯ ಹಿನ್ನೆಲೆಯಿಂದ ಬಂದವರು ಹೀಗಾಗಿ ನಾನು ಹೇಗೆ ಕನ್ನಡ ಕಲಿತೆ ಅಂತ ಹೇಳಿದರೆ ನಾನು ಅನ್ಯನಾಗುವ ಸಾಧ್ಯತೆ ಇದೆ. ಆದ್ದರಿಂದ ನನ್ನನ್ನು ಕನ್ನಡದವನಾಗಿಯೇ ಗುರುತಿಸಿ.’ ತೇರಳಿ ಎನ್. ಶೇಖರ್

Poetry ; ಅವಿತಕವಿತೆ : ಒಬ್ಬಂಟಿಗರಾಗುವ ಹೆಂಗಳೆಯರು ಬಿರುಗಾಳಿ ಬುಡಕೀಳದ ಹೆಮ್ಮರದ ಹಾಗೆ
Follow us
|

Updated on: Jun 06, 2021 | 10:45 AM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ, ಅನುವಾದಕ ತೇರಳಿ ಎನ್. ಶೇಖರ್ ಅವರು ಮಲಯಾಳದ ಕವಿಗಳಾದ ಡಾ. ಸಂಧ್ಯಾ ಇ, ಡಾ. ಕಲಾ ಸಜೀವನ್, ಡಾ. ಸುಷಮಾ ಬಿಂದು ಮತ್ತು ಡಾ. ಸುನೀತಾ ಗಣೇಶ್ ಅವರ ಕವನಗಳನ್ನು ಅನುವಾದಿಸಿದ್ದಾರೆ. ಹಾಗೆಯೇ ಶೇಖರ್ ಅವರ ಕವಿತೆಗಳೂ ಇಲ್ಲಿವೆ. ಇವರು ಕೇರಳದ ತ್ರಿಶೂರ ಜಿಲ್ಲೆಯ ಗುರುವಾಯೂರಿನವರು. ಕನ್ನಡದಿಂದ ಮಲಯಾಳಕ್ಕೆ ಮಲಯಾಳದಿಂದ ಕನ್ನಡಕ್ಕೆ ಅನುವಾದ ಮಾಡುತ್ತ ಎರಡೂ ಭಾಷೆಯ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಅವರ ವೃತ್ತಿಜೀವನವೆಲ್ಲಾ ಕಳೆದಿದ್ದು ಕರ್ನಾಟಕದಲ್ಲಿ. ಸದ್ಯ ಕೇರಳದ ಪಾಲಕ್ಕಾಡ್​ ಜಿಲ್ಲೆಯ ಪಟ್ಟಾಂಬಿಯ ವಿಳಯೂರಿನಲ್ಲಿರುವ ‘ಲೋಗೋಸ್ ಬುಕ್ಸ್ ಪ್ರೈವೇಟ್ ಲಿಮಿಟೆಡ್’ ಮಲಯಾಳ-ಇಂಗ್ಲಿಷ್ ಪ್ರಕಾಶನ ಸಂಸ್ಥೆಯಲ್ಲಿ ಸಂಪಾದಕರಾಗಿದ್ದಾರೆ.

* ಅನುವಾದ ಕ್ಷೇತ್ರದಲ್ಲಿ ವಿಶೇಷವಾಗಿ ಮಲಯಾಳ ಕವಿತೆಗಳ ಕನ್ನಡ ಅನುವಾದದಲ್ಲಿ  ತೊಡಗಿಸಿಕೊಂಡು, ಕನ್ನಡದ ಭಾಷೆಯನ್ನು ತತ್ಸಂಬಂದಿ ಭಾವ, ಧ್ವನಿಶಕ್ತಿಯ ಸಾರ್ಥಕತೆಯನ್ನು ದಾಖಲಿಸಿದವರು ತೆರಳಿ ಶೇಖರ್ ಅವರು. ಓದುಗನ ಮನಸ್ಸನ್ನು ತಕ್ಷಣ ತನ್ನ ರೂಪದ ಕಾರಣವೋ, ಶೈಲಿಯ ಕಾರಣವೋ ಥಟ್ಟನೆ ಆಕರ್ಷಿಸುವಂತೆ ಕನ್ನಡದ ಕವಿತೆಗಳನ್ನೇ ಓದುತ್ತಿರುವ ಅನುಭವವನ್ನು ನೀಡುವಂತಹ ಪರಿಪೂರ್ಣತೆಯ ಪಾಕವನ್ನು ಅವರ  ಅನುವಾದಿತ ಕವಿತೆಗಳು ನೀಡುತ್ತವೆ. ಮಲಯಾಳ ಕವಿ ಸಂಧ್ಯಾ ಇ. ಅವರ ‘ಒಬ್ಬಂಟಿಗರಾಗುವ ಹೆಂಗಳೆಯರು’  ಕವಿತೆಯಲ್ಲಿ ಏಕಾಂಗಿ ಹೆಣ್ಣೊಬ್ಬಳ ಒಳತುಮುಲ, ಜೊತೆಗೆ ಮನೋಸ್ಥೈರ್ಯ ಎರಡೂ ಮೂಲದ ಸತ್ವವನ್ನು ಗ್ರಹಿಸಿ ಬರೆದಿದ್ದು ಅವರ ಅಪರೂಪದ ಭಾಷಾ ಸಾಮರ್ಥ್ಯಕ್ಕೆ ಸಾಕ್ಷಿ. ಪ್ರೇಮ, ಮೋಹ, ವಿರಹ, ಇವುಗಳ ಬೆನ್ನಲ್ಲಿಯೇ ಬೆನ್ನತ್ತಿ ಬರುವ ವಿಷಾದ ಇಲ್ಲಿಯ ಕವಿತೆಗಳಲ್ಲಿದೆ. ಸುನೀತಾ ಗಣೇಶ್ ಅವರ ಕವಿತೆಯಲ್ಲಿ  ವರ್ಚುವಲ್ ಜಗತ್ತಿನ ಸಂಗತಿಗಳ ಪ್ರೇಮಿಸುವುದರ ಪರಿಣಾಮಗಳು ಮತ್ತು ಅದರಾಚೆಯ ನಿಜ ಬದುಕಿನ ಆಶಯದ ಹಿಂದಿರುವ ಸಾರವನ್ನು ಕವಿ ಅದೆಷ್ಟು  ಸಮರ್ಥವಾಗಿ ಬಳಸಿದ್ದಾರೆ ಅಂದರೆ ವಿಶಿಷ್ಟ ಲಯವನ್ನು ಕನ್ನಡದ ಜಾಯಮಾನಕ್ಕೆ ತಕ್ಕಂತೆ ಬಳಸುವ ಇಂತಹ ಕವಿತೆಗಳ ಅನುವಾದವೂ ಅವರ ಅದಮ್ಯವಾದ ರಸಗ್ರಹಣತೆಯನ್ನು ವ್ಯಕ್ತಗೊಳಿಸುತ್ತವೆ. ನಾಗರೇಖಾ ಗಾಂವಕರ, ಕವಿ, ಅನುವಾದಕರು

* ಅನುಭವದ ತಳವನ್ನು ಬಿಸಿಲು ಕೋಲಿನ ಹಾಗೆ ಶಬ್ದಗಳ ಮೂಲಕ ಸಮರ್ಥವಾಗಿ ಕಾಣಿಸುವ ತೇರಳಿ ಎನ್​. ಶೇಖರ್ ಕನ್ನಡದ ಕಾವ್ಯಾಸಕ್ತರಿಗೆ ಪರಿಚಿತರು. ಏಕಕಾಲಕ್ಕೆ ಮಲೆಯಾಳಿಯೂ, ಕನ್ನಡಿಗರೂ ಆಗಿರುವ ಇವರು ಎರಡೂ ಭಾಷೆಯ ಸಂವೇದನೆಯನ್ನು ಕಡೆದು ಹೊಸ ಕಾವ್ಯ ರಚಿಸಿದ್ದಾರೆ. ಕವಿತೆ ಕಟ್ಟುವಲ್ಲಿ ಇವರು ಅಳವಡಿಸಿಕೊಂಡಿರುವ ವಿಧಾನ, ಸಾಧಿಸಿರುವ ಶೈಲಿ ಹೊಸ ಬಗೆಯದಾಗಿ ಒಡೆದು ಕಾಣುತ್ತದೆ. ಜೀವನದ ನಿತಾಂತ ತಾಣವನ್ನರಸಿ ಮನದ ಚಿತ್ತಾರ ಬಿಡಿಸಿಟ್ಟಿರುವ ಇವರ ಕವಿತೆಗಳು ಮಧುರಚೆನ್ನ, ಶಿವಪ್ರಕಾಶರಿಗಿಂತ ಭಿನ್ನವಾಗಿ ಜೀವನ ಮತ್ತು ಜೀವನ ಗ್ರಹಿಸುವ ಸಂಬಂಧದ ಸೂಕ್ಷ್ಮ ನೆಲೆಯಲ್ಲಿ ಮೈ ತಳೆಯುತ್ತ ಹೋಗುತ್ತವೆ. ಓದುಗರ ಮನೋಭಾವವಾಗಿ ರೂಪ ತಳೆದು, ಅವರ ಭಾವ ಜಗತ್ತಿನ ಭಾಗವಾಗುತ್ತವೆ. ಶ್ರೀಧರ ಪಿಸ್ಸೆ, ಲೇಖಕರು, ಅನುವಾದಕರು

*

ಒಬ್ಬಂಟಿಗರಾಗುವ ಹೆಂಗಳೆಯರು

ಡಾ. ಸಂಧ್ಯಾ ಇ

ಒಬ್ಬಂಟಿಗರಾಗುವ ಹೆಂಗಳೆಯರು ಬಿರುಗಾಳಿ ಬುಡಕೀಳದ, ಹೆಮ್ಮರದ ಹಾಗೆ ಅತಿಶಕ್ತರಾಗಿರುತ್ತಾರೆ ಕೆಳಗಿನ ಸಣ್ಣ ಅಲುಗಾಟಗಳಲ್ಲಿ ತೊನೆದಾಡುವಂಥವನ್ನು ಬೇರು ಕೀಳುವಂಥವನ್ನು ಗೆಲ್ಲುಗಳು ಮುರಿಯುವಂಥವನ್ನು ಉರುಳಿ ಬೀಳುವಂಥವನ್ನು ಅವರು ಕಡೆಗಣಿಸಿಯೇ ಬಿಡುತ್ತಾರೆ

ಸುನಾಮಿ ಅಲುಗಾಡಿಸದ ಬಂಡೆಗಲ್ಲಿನ ಹಾಗೆ ಮುಟ್ಟುವಂಥವನ್ನೆಲ್ಲ ಅಂಟಿಕೊಳ್ಳುವುದಕ್ಕೋ ಹೊಡೆದು ಕೆಳಬೀಳಿಸುವುದಕ್ಕೋ ಬಿಡದೆ ಭಾರಿ ತೆರೆಗಳೂ ನವುರು ಚಾಂದ್ರರಶ್ಮಿಗಳೂ ಮಿಸುಕಾಡದೆ ಒಂದು ಯುಗ ಮುಗಿಯುವವರೆಗೂ ಒಂಟಿ ತಪಸ್ಸುಗೈಯುತ್ತ ಅಚಂಚಲರಾಗಿ ನಿಂತೇ ಇರುತ್ತಾರೆ

ಇಲ್ಲದಿದ್ದಲ್ಲಿ ಒಬ್ಬಂಟಿಗರಾಗುವ ಹೆಂಗಳೆಯರು ವಿಷಾದವನ್ನು ವರಿಸಿದವರಾಗಿರುತ್ತಾರೆ ಬೇರೇನನ್ನೂ ತಿಳಿಯದೆ, ಕಾಣದೆ ಉತ್ತಮ ಪತಿವ್ರತೆಯರಂತೆ ಬೆಳಗು, ಮಧ್ಯಾಹ್ನ ಮತ್ತು ಸಂಜೆ ಒಂದೇ ಒಂದು ಧ್ಯಾನವ ತಿನ್ನುವವರು ಸಹಾಯ ಹಸ್ತಗಳನ್ನು ತೊರೆದು ಮರಣದ ಮಡುವಿನೆಡೆಗೆ ಮೆಲ್ಲ ಮೆಲ್ಲನೆ ಈಜುವವರು ಮೌನವನ್ನೇ ಅಭರಣಗಳನ್ನಾಗಿ ಮಾಡಿದವರು ದುಃಖದಿಂದ ಅರಿವೆಯನ್ನು ಧರಿಸಿದವರು ಏಕಾಂತತೆಯ ಮಂದಲಿಗೆ ಹಾಸುವವರು

ಒಬ್ಬಂಟಿಗರಾಗುವ ಹೆಂಗಳೆಯರು ಒಮ್ಮೆಯೂ ಗುನುಗು ಹಾಡನ್ನು ಹಾಡುವುದಿಲ್ಲ ಇಡೀ ಪ್ರಪಂಚ ಬೆಳದಿಂಗಳನ್ನು ಕುಡಿದು ನಿದ್ದೆಹೋಗಿರುವ ಶಾಂತತೆಯ ಕ್ರಿಸ್ಮಸ್ ರಾತ್ರಿಗಳಲ್ಲಿ ಆಕಾಶದತ್ತ ನೋಡುತ್ತ ಅಲಸಿಗರಾಗಿರುವುದಿಲ್ಲ ತುಂತುರು ಮಳೆಯ ಕುರಿತು ಕವಿತೆ ಬರೆಯುವುದಿಲ್ಲ ಝಣತ್ಕಾರದ ಪಾದಸರವನ್ನು ಧರಿಸುವುದಿಲ್ಲ ಒಬ್ಬಂಟಿಗರಾಗುವ ಹೆಂಗಳೆಯರು ಅಂತರಂಗದಲ್ಲೂ ನಗುವುದಿಲ್ಲ ಅಳುವುದಿಲ್ಲ.

* kala sajeevan sandhya e

ಮಲಯಾಳದ ಕವಿಗಳಾದ ಡಾ. ಕಲಾ ಸಜೀವನ್, ಡಾ. ಸಂಧ್ಯಾ ಇ.

*

ಉಯಿಲು

ಡಾ. ಕಲಾ ಸಜೀವನ್

ನನ್ನ ಆಕಾಶ ಮತ್ತು ಭೂಮಿ ಒಡತಿ ನಾನೇ. ನನ್ನ ಬೆಳದಿಂಗಳು, ಬಿಸಿಲು, ಬಣ್ಣ, ಗಂಧ ನಾನೇ.

ನನ್ನ ಗಾಳಿ, ಮಳೆ, ಕಾಡು, ಹೊಳೆ ಕಡಲು, ಹಡಗು ನಾನೇ.

ನನ್ನ ಬೆವರು, ಏದುಸಿರು, ರತಿ, ರೋಷ ನಾನೇ.

ನನ್ನ ಹೃದಯದ ಒಡತಿ, ದೇಹದ ಕೀಲಿಕೈ ಕಾಯುವಾಕೆ ಮತ್ತು ಆಸಕ್ತಿಗಳ ಅತಿಥೇಯಳು ನಾನೇ.

ನನ್ನ ಪಾನಪಾತ್ರೆಯ ಹದವಾದ ದ್ರಾಕ್ಷಾರಸ ಹಾಗೂ ಗೋದಿ ಫಸಲು ನಾನೇ.

ನನ್ನ ಬಿತ್ತನೆ, ಕಳೆ, ಕೊಯ್ಲು, ಮೆದೆ ನಾನೇ.

ನನ್ನ ಉಗ್ರಾಣಗಳನ್ನು ತುಂಬುವುದು ಖಾಲಿ ಮಾಡುವುದು ನಾನೇ.

ನನ್ನ ಹೂತೋಟದ ಮೊದಲ ಗಾಳಿಯ ಹಾಗೂ ಪರಾಗದ ಮಾರ್ಗದರ್ಶಿ ನಾನೇ.

ಎಲೆಗಳ ಕೆಡಹುವ ಶಿಶಿರ ಪೂರ್ಣ ಚಿಗುರಿಸುವ ವಸಂತ ನಾನೇ.

ನನ್ನೊಡಲಿನ ರಕ್ತಸೋರಿಕೆ ಉಸಿರಿನ ವಿಶ್ರಾಂತಿ ನಾನೇ.

ನನ್ನ ಪ್ರೇಮಸಾಕ್ಷ್ಯ ರತಿ ನಿರ್ವೇದ ನಾನೇ.

ನನ್ನ ಸ್ವಾತಂತ್ರ್ಯದ ಬಾವುಟ ದುಃಸ್ವಪ್ನದ ಗಣರಾಜ್ಯೋತ್ಸವ ನಾನೇ.

ನನ್ನ ಎದಿರು ನೋಡುವ ನಿರಾಸೆ ಕೊನೆಯಿರದ ಭರವಸೆ ನಾನೇ.

ನನ್ನ ಪ್ರಣಯ ನನ್ನ ಮರಣ ನಾನೇ.

ಓ ಅತಿಥಿಗಳೇ, ನೀವು ಹೊಸ್ತಿಲ ಬಳಿಯೇ ಕಾಯಿರಿ, ನಾನು ನನಗಾಗಿಯೇ ಬಾಗಿಲುಗಳನ್ನು ತೆರೆಯುವುದು. ಮತ್ತೆ ಬಾಗಿಲನ್ನು ಬಡಿದು ಕರೆಯದೆ ಹೊರಟು ಹೋಗಿರಿ ಇನ್ನೆಂದಿಗೂ ಹುಡುಕಿ ಬಾರದಿರಿ. ನೀವು ಹುಡುಕುತ್ತಿರುವ ಅವಳು ನಾನಲ್ಲ. *

sunitha ganesh sushama bindu

ಮಲಯಾಳದ ಕವಿಗಳಾದ ಡಾ. ಸುನೀತಾ ಗಣೇಶ್, ಡಾ. ಸುಷಮಾ ಬಿಂದು

ಪ್ರೇಮಿಸುವುದಾದರೆ

ಡಾ. ಸುನೀತಾ ಗಣೇಶ್

ಪ್ರೇಮಿಸುವುದಕ್ಕಾಗಿ ನೀವು ಇಲಿಯನ್ನು ಆರಿಸಿಕೊಳ್ಳಬಾರದು; ನೀವು ಬಿಲದೊಳಗಿನ ಕತ್ತಲನ್ನಷ್ಟೇ ಕಾಣುವಿರಿ.

ಪ್ರೇಮಿಸುವುದಕ್ಕಾಗಿ ನೀವು ಕಪ್ಪೆಯನ್ನು ಕಂಡು ಹಿಡಿಯಬಾರದು; ಆಳದ ಬಾವಿಯಲ್ಲಿ ತೊಟ್ಟು ನೀರಿಗಾಗಿ ನೀವು ದಾಹಿಸುವಿರಿ.

ನೀವು ಜೇಡದೊಂದಿಗೆ ಪ್ರೇಮವಿಟ್ಟುಕೊಳ್ಳಬಾರದು; ಅದು ತನ್ನ ನಿಲುವುಗಳನ್ನು ಕಾಲಿನಿಂದ ಕಾಲಿಗೆ ಬದಲಾಯಿಸುತ್ತಿರುತ್ತದೆ.

ಏಡಿಯನ್ನು ಪ್ರೇಮಿಸಲೇಬಾರದು; ಅದು ನಿಮ್ಮನ್ನು ಬಿಗಿಹಿಡಿದು ಕೊಲ್ಲುತ್ತದೆ.

ಪ್ರೇಮಿಸುವುದಕ್ಕಾಗಿ ನೀವೆಂದಿಗೂ ಧನಮೋಹಿಯನ್ನು ಆರಿಸಿಕೊಳ್ಳಬಾರದು; ಕೊರಳಿಗೆ ಕುಣಿಕೆ ಹಾಕಿ, ಹೊತ್ತು ಹೊತ್ತಿಗೆ ಹಾಲು ಹಿಂಡುವ ಹಸುವಾಗಿ ನೀವು ಬದಲಾಗುವಿರಿ.

ಸ್ವಾರ್ಥಿಯನ್ನು ನೀವು ಪ್ರೇಮಿಸಬಾರದು; ಅದು, ನೀವೇ ನಿಮ್ಮ ರಾಜ್ಯವನ್ನು ಕಡಿದು ಕಿರಿದುಗೊಳಿಸಿ ಸರಹದ್ದಿಗೆ ಒಳಪಡಿಸಿದಂತಾಗುತ್ತದೆ.

ಸಂಕುಚಿತ ಮನೋಭಾವದವನನ್ನು ನೀವು ತೊರೆಯಬೇಕು; ಅದು, ಹೂತೋಟದ ಮಧ್ಯದಲ್ಲಿರುವ ಶಿಲೆಯ ಸುರಂಗದೊಳಗೆ ಸಿಲುಕಿಕೊಂಡಂತಾಗುತ್ತದೆ.

ಪ್ರೇಮಿಸುವುದಾದರೆ ನೀವೊಂದು ಆಶಯವನ್ನು ಪ್ರೇಮಿಸಿ; ಮುಳ್ಳುಬೇಲಿಗಳನ್ನು ಉರುಳಿಸುತ್ತ ಅದು ನಿಮ್ಮನ್ನು ಕಡಲ ವಿಸ್ತಾರದ ಮೇಲೆ ಮುನ್ನಡೆಸುತ್ತ ಗಡಿಗಳಿಲ್ಲದ ಆಕಾಶಕ್ಕೇರಿಸುತ್ತದೆ.

*

ಮೋಹನದಾಸ ಮತ್ತು ಸಿದ್ಧಾರ್ಥ

ಡಾ. ಸುಷಮಾ ಬಿಂದು

1. ಗಾಂಧಿ ಅರ್ಧ ಬೆತ್ತಲೆಯಾದರೂ ಪೂರ್ಣ ಬೆತ್ತಲೆಯಾದರೂ ಕಸ್ತೂರಬಾ ಯಾವತ್ತೂ ಬಿಳಿಯ ವಸ್ತ್ರವನ್ನೇ ಉಡುತ್ತಿದ್ದರು.

ಯಾವ ಹುಣ್ಣಿಮೆಯಲ್ಲೂ ಪೂರ್ಣಗೊಳ್ಳದೆ ಹೆಣ್ಣುತನದ ಎಳೆ ಬೇರ್ಪಡದ ಕಾಮನೆಗಳನ್ನು ಚರಕದಲ್ಲಿ ನೂತು ಸತ್ಯಾನ್ವೇಷಣೆಯ ಕಾಲುದಾರಿಯಲ್ಲಿ ಅನುಯಾಯಿಗಳಿಲ್ಲದೆ ಏಕಾಂಗಿಯಾಗಿ ನಡೆದಾಕೆ.

ಕಣ್ಣು ನೀರಿನ ಕರಾವಳಿಯಲ್ಲಿ ಉಪ್ಪು ನಿಯಮವನ್ನು ಉಲ್ಲಂಘಿಸಲು ಗಾಂಧಿ ಬಂದಾರೆಂದು ಸುಮ್ಮನೆ ನೆನೆದಿರಬೇಕು ಅವರು. ಅದೆಷ್ಟು ಆಶಿಸಿರಬಹುದು ಕಸ್ತೂರಬಾ ಪೂರ್ಣಚಂದ್ರ ನಗುವ ಒಂದು ಹುಣ್ಣಿಮೆಯ ರಾತ್ರಿಯನ್ನು.

2. ಮಧ್ಯರಾತ್ರಿಯಲ್ಲಿ ಹೊಸ್ತಿಲನ್ನು ದಾಟಿಹೋದ ಬುದ್ಧನಿಗೆ ಜ್ಞಾನದಿಂದ ಬೋಧಿ ನೆರಳನ್ನು ಹಾಸಿದಾಗ ವಟವೃಕ್ಷವಾಗಬೇಕಾಗಿದ್ದ ಅರ್ಧಬೀಜಗಳೆಲ್ಲವೂ ಕುಡಿಯೊಡೆಯದೆ ನಾಶವಾಗಿ ಬಿರುಕೊಡೆದು ಮಲಗಿದಳು ಜೀವಜ್ಞಾನದ ಬಿರುಮಳೆಯನ್ನು ಕಾಯುತ್ತ ಯಶೋಧರೆ. *

Therly shekhar

ತೇರಳಿ ಎನ್. ಶೇಖರ್ ಅವರ ಕವಿತೆ ಕೈಬರಹದಲ್ಲಿ

‘ಒಂದೇ ಭಾಷೆಯವನಾಗಿ ಗುರುತಿಸಿಕೊಳ್ಳಲು ತೀರಾ ಇಷ್ಟವಿಲ್ಲ. ನಾನು ನನ್ನ ಅಭಿವ್ಯಕ್ತಿಗಾಗಿ ಗುರುತಿಸಿಕೊಂಡ ಒಂದು ಮಾರ್ಗ ಕಾವ್ಯ ಮತ್ತು ಅನುವಾದದ ಪ್ರಯತ್ನ. ಇವೆಲ್ಲ ನನ್ನ ಖಾಲೀತನವನ್ನು ತುಂಬುತ್ತವೆ ಎಂಬುದು ನನ್ನ ನಂಬಿಕೆ. ಮಾಸ್ತಿ, ಬೇಂದ್ರೆ, ಗಿರೀಶ ಕಾರ್ನಾಡ್, ಡಿವಿಜಿ, ಪುತಿನ ಮೊದಲಾದ ನಮ್ಮ ಹಿರಿಯರು ಬೇರೆ ಬೇರೆ ಮಾತೃಭಾಷೆಯ ಹಿನ್ನೆಲೆಯಿಂದ ಬಂದವರು. ಹೀಗಾಗಿ ಕನ್ನಡ ನನಗೆ ಹೇಗೆ ಹತ್ತಿರವಾಯಿತು ಎಂದು ಹೇಳಿದರೆ ನಾನು ಅನ್ಯನಾಗುವ ಸಾಧ್ಯತೆ ಇದೆ. ಆದ್ದರಿಂದ ನನ್ನನ್ನು ಕನ್ನಡದವನನ್ನಾಗಿಯೇ ಗುರುತಿಸಿ.’

ಕೆಳಗಿನ ಎರಡೂ ಕವಿತೆಗಳು : ತೇರಳಿ. ಎನ್. ಶೇಖರ್ * ರಾಜ ನಗ್ನನೆಂದ ಹುಡುಗ ಹೇಳಿದ್ದು

‘ಪೋಲಿ ಪಟಾಲಮ್ಮುಗಳ ದಾಳಿಗೆ ಹೆದರಿ ಪಲಾಯನ ಸೂಕ್ತ ಪಠಿಸುವ ಮಹಾವೀರರೇ ಎಲ್ಲ ಕಡೆ. ಬದ್ಮಾಶರೇ ಇಲ್ಲಿ ಛದ್ಮವೇಷವ ಧರಿಸಿ ದರ್ಬಾರು ನಡೆಸುತ್ತಾರೆ ಜರ್ಬಿನಿಂದ’ -ಎಂ. ಗೋಪಾಲಕೃಷ್ಣ ಅಡಿಗ

ಜುಲೈ ತಿಂಗಳ ಸೋನೆ ಮಳೆಯ ಈ ಕೊನೆಯ ದಿನಗಳಲ್ಲಿ ಅವರೆಲ್ಲರೂ ಆ ವಿಧಾನ ಮಾ ಮನೆಯೊಳಗೆ ನುಸುಳಿಕೊಂಡು ಏನು ಮಾಡುತ್ತಿರುವರು? -ಎಂದು ಎಲ್ಲಿಂದಲೋ ಕೇಳಿಬಂದ ಅಶರೀರವಾಣಿಗೆ ರಾಜ ನಗ್ನನೆಂದ ಹುಡುಗ ಹೇಳಿದ್ದು :

ಒಬ್ಬರು ಬಹುಶಃ ಅವರು ಸಭಾ ನಾಯಕರಿರಬಹುದು ಕಸಾಯಿಖಾನೆಯ ಶಸ್ತ್ರಗಳು ಮಚ್ಚು ಚೂರಿಗಳು ತಂದಿತ್ತರು.

ಕೆಲವರು ಬಹುಶಃ ಬುದ್ಧಿಶೂನ್ಯ ಕಟ್ಟಾಳುಗಳಿರಬಹುದು ಅವರು ‘ಪ್ರಜಾಪ್ರಭುತ್ವ’ವೆಂಬ ಜಗತ್ತಿನ ಅತ್ಯಂತ ಶ್ರೇಷ್ಠ ಅಜವನು ಸೆರೆ ಹಿಡಿದು ತಂದು ಕೈ ಕಾಲು ಬಂಧಿಸಿ ದುಂಡು ಮೇಜಿನ ಮೇಲೆ ಅಂಗಾತ ಮಲಗಿಸಿ ಬಳಿಕ ಹಿಂದೆ ಸರಿದರು!

ಉಳಿದವರಲ್ಲಿ ಒಬ್ಬ ಮುಖ್ಯರು ಮುಂದೆ ಬಂದರು ಅವರು ‘ಪ್ರಜಾಪ್ರಭುತ್ವ’ವನ್ನು ಸರಿಪಡಿಸುವುದಾಗಿ ಘೋಷಿಸಿ ಅದಕ್ಕೆ ಮಂತ್ರ ಪಠಿಸಿ ಜಲ ಕುಡಿಸಿದರು. ನಂತರ ವಿಚಲಿತರಾಗದೆ ನಿರ್ಲಿಪ್ತರಾಗಿ ಅತ್ಯಂತ ಶಾಂತತೆಯಿಂದ ಪ್ರಜಾಪ್ರಭುತ್ವದ ಕುತ್ತಿಗೆ ಕೊಯ್ದರು.

ಎಲ್ಲವೂ ಕ್ಷಣಾರ್ಧದಲ್ಲಿ ನೆರವೇರಿತು. ವಿಲಿ ವಿಲಿ ಒದ್ದಾಡುವ ಪ್ರಜಾಪ್ರಭುತ್ವವನ್ನು ಚೂರಿಯಿಂದ ನಾಜೂಕಾಗಿ ಚರ್ಮವನ್ನು ಸುಲಿದು ಮಚ್ಚಿನಿಂದ ಬೆತ್ತಲೆಯಾದ ಅಂಗಾಂಗಗಳನ್ನು ಕಡಿದು ಅವರೆಲ್ಲರೂ ಒಕ್ಕೊರಲಿನಿಂದ ಸ್ವಂತದ ರಾಷ್ಟ್ರಗೀತೆ ಹಾಡಿದರು : ‘ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ರಕ್ತವಿದೆಕೋ’

* Therly shekhar

ತೇರಳಿ ಎನ್. ಶೇಖರ್ ಅವರ ಕೃತಿಗಳು

ವಿಚಾರಿಸಿದ್ದರೆ…

ನಾವು ಸಮುದ್ರವನ್ನು ನೋಡುತ್ತಿದ್ದೆವು

ಇಂದು ನಾವು ಪ್ರೇಮಿಸಿದ್ದರ ಹಾಗೂ ಅಗಲಿದ್ದರ ನೆನಪಿನ ದಿನ

ಸಮುದ್ರವನ್ನು ತೋಯ್ಸುವ ಮಳೆಯನ್ನು ವೀಕ್ಷಿಸಬೇಕೆಂದು ಒಂದು ಪೊಟ್ಟಣ ಕಡಲೆಕಾಯಿ ಬೀಜವನ್ನು ಹಂಚಿಕೊಳ್ಳುತ್ತ ತಿನ್ನಬೇಕೆಂದು

ಬರುವುದೆಂಬ ಖಚಿತವಿರುವ ಒಂದು ಅಲೆಗೆ ಅಳಿಸಿಹಾಕಲು ದಡದ ಮರಳ ಮೇಲೆ ಅವಳ ಹೆಸರು ಬರೆದಿಡಬೇಕೆಂದು ನಮ್ಮ ನಡುವೆ ಮಾತಾಗಿತ್ತು.

ಪ್ರೇಮಿಸಿದ್ದು ಯಾಕೆಂದಾಗಲೀ ಅಗಲಿದ್ದು ಯಾಕೆಂದಾಗಲೀ ಪರಸ್ಪರ ವಿಚಾರಿಸಲೇ ಇಲ್ಲ ವಿಚಾರಿಸಿದ್ದರೆ ಯಾವ ಸುನಾಮಿಗೂ ಅಳಿಸಲಾಗದೆ ಅವಳ ಹೆಸರು ಹಾಗೆಯೇ ಉಳಿದುಬಿಡುತ್ತಿತ್ತು

ಇಂದು ನಾವು ಪ್ರೇಮಿಸಿದ್ದರ ಹಾಗೂ ಅಗಲಿದ್ದರ ನೆನಪಿನ ದಿನ

ಈಗ ಸಮುದ್ರ ನಮ್ಮನ್ನು ನೋಡುತ್ತಿದೆ.

*

ಪರಿಚಯ; ತೇರಳಿ ಎನ್. ಶೇಖರ್ : ಇವರ ಮೊದಲ ಕನ್ನಡ ಕವನ ಸಂಕಲನ ‘ಈ ಶಬ್ದ’, ಕೆ.ಜಿ. ಶಂಕರಪಿಳ್ಳೈ ಅವರ ಕವಿತೆಗಳು- ಮಲಯಾಳದಿಂದ ಕನ್ನಡಕ್ಕೆ, ‘1128ರಲ್ಲಿ ಕ್ರೈಂ 27’ – ಸಿ.ಜೆ. ಥಾಮಸ್ ಅವರ ನಾಟಕ, ಮಲಯಾಳದಿಂದ ಕನ್ನಡಕ್ಕೆ. ‘ತಿರಜ್ಞೆಡುತ್ತ ಕನ್ನಡ ಕವಿತಕಳ್’ – ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಎ.ಕೆ. ರಾಮಾನುಜನ್, ಕೆ. ಎಸ್. ನಿಸಾರ್ ಅಹಮದ್, ಎಚ್.ಎಸ್. ಶಿವಪ್ರಕಾಶ್, ಪ್ರತಿಭಾ ನಂದಕುಮಾರ್, ಎಂ. ಆರ್. ಕಮಲಾ, ಮೂಡ್ನಾಕೂಡು ಚಿನ್ನಸ್ವಾಮಿ ಮೊದಲಾದ ಇಪ್ಪತ್ತು ಕನ್ನಡ ಕವಿಗಳ ಆಯ್ದ ಕವಿತೆಗಳನ್ನು ಮಲಯಾಳಕ್ಕೆ ಅನುವಾದಿಸಲಾಗಿದೆ. * ಡಾ. ಸಂಧ್ಯಾ ಇ : ಕೇರಳದ ತ್ರಿಶೂರಿನ ಪ್ರಜ್ಯೋತಿ ನಿಕೇತನ್ ಕಾಲೇಜಿನಲ್ಲಿ ಸ್ಟ್ಯಾಟಿಸ್ಟಿಕ್ ವಿಭಾಗದ ಸಹಾಯಕ ಪ್ರೊಫೆಸರ್ ಆಗಿರುವ  ಸಂಧ್ಯಾ ಅವರು ಮಲಯಾಳ ಕವಿ ಮತ್ತು ಕಥೆಗಾರರು. ಇವರು ಅತ್ಯುತ್ತಮ ಯುವ ವಿಜ್ಞಾನಿಗಳಿಗೆ ಕೊಡಮಾಡುವ ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ ‘ಯಂಗ್ ಸೈಂಟಿಸ್ಟ್ ಪ್ರಶಸ್ತಿ, ಕ್ಯಾಲಿಕೇಟ್ ವಿಶ್ವವಿದ್ಯಾಲಯದ ಅತ್ಯುತ್ತಮ ಅಧ್ಯಾಪಕರಿಗೆ ನೀಡಲಾಗುವ ‘ಘನಿ’ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಕಟಿತ ಕೃತಿಗಳು : ‘ಸಾಗರ ನಿದ್ರಾ’, ‘ಪೇರಿಲ್ಲಾವಂದಿಯಿಲ್’, ‘ಅಮ್ಮಯುಳ್ಳದಿನಾಲ್’, ‘ಈ ಮಳೆಯುಡೆ ಒರು ಕಾರ್ಯಾಂ’, ‘ಕೈಕ್ಕುಡನ್ನಯಿಲೆ ಬುದ್ಧನ್’ (ಕವನ ಸಂಕಲನ ಗಳು); ‘ಅನಂತರ ಚಾರುಲತಾ’, ‘ಪಡಿಕಳ್ ಕಯರುನ್ನ ಪೆಣ್ಣುಕುಟ್ಟಿ’ (ಕಥಾಸಂಕಲನಗಳು) * ಡಾ. ಕಲಾ ಸಜೀವನ್ :  ಈಗಾಗಲೇ ತಮ್ಮ ಬಿಡಿ ಕವಿತೆಗಳು ಮತ್ತು ವಿಮರ್ಶಾ ಲೇಖನಗಳ ಮೂಲಕ ಸಾಕಷ್ಟು ಪರಿಚಿತರಾಗಿರುವ ಇವರು ತ್ರಿಶೂರಿನ ಪ್ರತಿಷ್ಠಿತ ಶ್ರೀ ಕೇರಳವರ್ಮ ಕಾಲೇಜಿನಲ್ಲಿ ಮಲಯಾಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು :’ಜಿಪ್ಸಿ ಪೆಣ್ಣು’ (ಕವನ ಸಂಕಲನ); ಕವಿ ವಳ್ಳತ್ತೋಳರ ‘ಅಚ್ಚನುಂ ಮಗಳುಂ’ (ಕಾವ್ಯ ಅಧ್ಯಯನ) * ಡಾ. ಸುನಿತಾ ಗಣೇಶ್ : ಕೇರಳದ ಪಾಲಕ್ಕಾಡ್ ಸರ್ಕಾರಿ ವಿಕ್ಟೋರಿಯಾ ಕಾಲೇಜಿನಲ್ಲಿ ಫಿಸಿಕ್ಸ್ ವಿಭಾಗದ ಅಧ್ಯಾಪಕರು. ಪ್ರಕಟಿತ ಕೃತಿಗಳು: ‘ಚೋರಮಳ’, ‘ಕಾಟ್ ಹೃದಯತ್ತೋಡ್ ಚೆಯ್ದದು’ (ಕವನ ಸಂಕಲನಗಳು); ‘ಕರಿಮಶಿ’ (ಕಾದಂಬರಿ), ‘ಬಂಗಾರುಕಳುಡೆ ಲೋಕಮ್’ (ವಿಜ್ಞಾನ ಕಾದಂಬರಿ), ‘ಪಾಪಮ್ಮಯುಡೆ ಪಂಚಿರಿ'(ಬಾಲ ಸಾಹಿತ್ಯ); ‘ಸೂರ್ಯ’ (ವಿಜ್ಞಾನ ಸಾಹಿತ್ಯ) * ಡಾ. ಸುಷಮಾ ಬಿಂದು : ಇವರು ಮೂಲತಃ ಪಾಲಕ್ಕಾಡ್ ಜಿಲ್ಲೆಯ ಆಟ್ಟಾಶ್ಶೇರಿ ಗ್ರಾಮದವರು. ಪ್ರೌಢಶಾಲಾ ಶಿಕ್ಷಕಿಯಾಗಿದ್ದಾರೆ. ಈಗಾಗಲೇ ತಮ್ಮ ಕಾವ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ಮಲಯಾಳಂ ಕಾವ್ಯಾಸಕ್ತರ ಗಮನ ಸೆಳೆದಿರುವ ಕವಯಿತ್ರಿ. ಪ್ರಕಟಿತ ಕೃತಿಗಳು : ‘ಒರುಉಂಬೆಟ್ಟೋಳ್’, ‘ಆಣ್ಣುಕೋಂದಿ’ (ಕವನ ಸಂಕಲನಗಳು) * ಇದನ್ನೂ ಓದಿ : Poetry : ಅವಿತಕವಿತೆ ; ಎಲ್ಲ ತೇದಿಗಳ ಜುಂಗು ಹಿಡಿದು ಕೆಂಪಗೆ ಕಂತುವಾಗಲು

Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?