Poetry : ಅವಿತಕವಿತೆ ; ಎಲ್ಲ ತೇದಿಗಳ ಜುಂಗು ಹಿಡಿದು ಕೆಂಪಗೆ ಕಂತುವಾಗಲು
Kannada Literature : ‘ಕಂಡದ್ದನ್ನು ನೇರ ಹೇಳಲಾಗದ ಹತಾಶೆ. ದುಃಖ. ಹೇವರಿಕೆ. ಅತಿಯಾದ ಕೋಪ, ಭಾವುಕತೆ, ಖಿನ್ನತೆಯ ಹಂತದವರೆಗೂ ಕೊಂಡೊಯ್ಯುವ ನಿರ್ಲಿಪ್ತತೆ. ವಿಪರೀತ ಎನ್ನುವಷ್ಟು ಸೋಮಾರಿತನ ಅದರ ನಡುವೆಯೇ ಅಂದುಕೊಂಡ ಬದುಕು ಇದಲ್ಲ ಎನ್ನುವ ದ್ವಂದ್ವ. ಕೇಳಿದರೆ ಎದುರಿದ್ದವರು ಮರುಳು ಎಂದುಕೊಂಡಾರು ಎನ್ನುವ ಮಹಾನ್ ಕೀಳರಿಮೆ. ಅಚಾನಕ್ ಒಳಹೊಕ್ಕ ಅತಿಯಾದ ಮುಜುಗರ. ಯಾರೋ ಬಲವಂತವಾಗಿ ಹೊರಿಸಿದ ಸಜ್ಜನಿಕೆ ಈ ಎಲ್ಲದುದರಿಂದ ದೂರ ಸರಿಯುವ ಸಲುವಾಗಿ ಎದೆಗೆ ಒತ್ತಿಕೊಂಡದ್ದು ಕವಿತೆಗಳನ್ನು.‘ ದೀಪ್ತಿ ಭದ್ರಾವತಿ
ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ದೀಪ್ತಿ ಭದ್ರಾವತಿ ಅವರ ಕವಿತೆಗಳು ನಿಮ್ಮ ಓದಿಗೆ.
* ಗದ್ಯ ಪದ್ಯ ಎರಡಕ್ಕೂ ಸೈ ಅನ್ನಿಸಿಕೊಳ್ಳುತ್ತಲೇ ಒಂದರ ನೆರಳು ಮತ್ತೊಂದಕ್ಕೆ ಸೋಕದಷ್ಟು ಜಾಗರೂಕತೆಯಿಂದ ಅಷ್ಟೇ ಭಿನ್ನವಾದ ಶೈಲಿಯನ್ನು ಒಗ್ಗಿಸಿಕೊಂಡು, ತನ್ನದೇ ಆದ ಛಾಪನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ನಮ್ಮ ನಡುವಿನ ಸೂಕ್ಷ್ಮ ಸಂವೇದನಾಶೀಲ ಬರಹಗಾರ್ತಿ ದೀಪ್ತಿ ಭದ್ರಾವತಿ. ನಾಡಿನ ಪ್ರಮುಖ ಕತೆಗಾರ್ತಿಯರ ನಡುವೆ ನಿಲ್ಲುವ ದೀಪ್ತಿ ಮೂಲತಃ ಕವಿ. ಒಂದು ಸಂವಾದದಂತೆ ಅಥವಾ ಸ್ವಗತಕ್ಕೆಂಬಂತೆ ಬರೆಯುವ ಆಕೆಯ ಬಹುತೇಕ ಕವಿತೆಗಳು ಹೆಣ್ಣಿನ ಅಂತರಂಗದಲ್ಲೇಳುವ ಅಲೆಗಳನ್ನು ಬಹು ಗಹನವಾಗಿ ಬಿಡಿಸಿಡುತ್ತವೆ. ಸಮಕಾಲೀನ ಬಿಕ್ಕಟ್ಟುಗಳಿಗೆ ಸ್ಪಂದಿಸುವ, ವ್ಯವಸ್ಥೆಯ ದುರಂತಕ್ಕೆ ಮರುಗುವ, ಹಿಡಿ ಪ್ರೀತಿಗೆ ಹಾತೊರೆಯುವ, ದಾಂಪತ್ಯದಲ್ಲೆದ್ದ ಅಪಸ್ವರದ ವೀಣೆಯನ್ನು ಶ್ರುತಗೊಳಿಸುವಂತಹ ಭಾವದ ಎಳೆಗಳನ್ನು ಜತನದಲ್ಲಿ ಕಟ್ಟುವಲ್ಲಿ ಅವರ ಕವಿತೆಗಳು ಯಶ ಸಾಧಿಸಿವೆ. ಶಬ್ಧಾಡಂಬರವಿಲ್ಲದೆ, ತನ್ನದೇ ಸಹಜವಾದ ಲಯ ಮತ್ತು ವಿಶಿಷ್ಟ ಓಘದಲ್ಲಿ ಬರೆಯುವ ಕಲೆಯನ್ನು ಸಿದ್ಧಿಸಿಕೊಂಡಿರುವ ಆಕೆ, ದಿನನಿತ್ಯದ ಕಣ್ಣಿಗೆ ಕಾಣುವ ವಸ್ತುವಿನಲ್ಲಿಯೇ ಕಾಣದ ಅರ್ಥವನ್ನು ಹೊಳೆಯಿಸಬಲ್ಲರು. ಭಾವತೀವ್ರತೆಯಿಂದಲೂ, ಸೂಕ್ಷ್ಮ ಗ್ರಹಿಕೆಯಿಂದಲೂ ನಮ್ಮನ್ನು ಸೆಳೆಯಬಲ್ಲರು. ಸ್ಮಿತಾ ಅಮೃತರಾಜ್, ಕವಿ, ಲೇಖಕಿ
* ತುಂಟತನದೊಂದಿಗೆ ಬದುಕಿನ ಬಗ್ಗೆ ಆಳವಾದ ನಂಬಿಕೆ, ವಿಶ್ವಾಸದ ಮೂಲಕ ಬರೆಯುವ ದೀಪ್ತಿಗೆ ಮಹಿಳೆಯಾಗಿ ಅಲ್ಲಿಯ ಶೋಷಣೆ, ನೋವುಗಳನ್ನು ಹಟಕ್ಕೆ ಬಿದ್ದು ವರ್ಣಿಸುವ ಉತ್ಸಾಹವಿಲ್ಲ. ಸ್ತ್ರೀವಾದಿ ಚಿಂತನೆಯ ಎಳೆಗಳು ಕವಿತೆಯ ಭಾಗವಾಗಿ ಸಹಜವಾಗಿ ಗೋಚರಿಸುತ್ತದೆಯೇ ಹೊರತು ಯಾವ ಕವಿತೆಯೂ ಅದರ ಮುಖವಾಣಿಯಾಗುವುದಿಲ್ಲ. ಡಾ.ಶುಭಾ ಮರವಂತೆ, ವಿಮರ್ಶಕರು
*
ಮಹಾಯಾನ
ಪಾದಗಳು ಪಾಲು ಕೇಳದ ಹಾಗೆ ಅವರು ನಡೆಯುತ್ತಾರೆ ಹಗಲು ಇರುಳು ಇರುಳು ಮತ್ತು ಹಗಲು
ಅವರ ಸುದೀರ್ಘ ಹೆಜ್ಜೆಯ ನಡುವಿನಲ್ಲೊಂದು ಭೂ ಮಧ್ಯೆ ರೇಖೆ ಹಾದು ಹೋಗುತ್ತದೆ ಶತಮಾನದ ಬೆವರು , ಹೆಪ್ಪುಗಟ್ಟಿದ ಕಣ್ಣ ಪಿಸುರು ಎದ್ದ ಧೂಳಿನ ಗುರುತುಗಳ ಬಗಲ ಚೀಲದಲ್ಲಿ ಹೆಕ್ಕಿಕೊಳ್ಳುತ್ತವೆ.
ಅವರು ನಡೆಯುತ್ತಾರೆ ಬಿದ್ದ ಹಾದಿಯ ನಡುವೆ ಬಿದ್ದ ಮುಳ್ಳೊಂದು ಸ್ವಪ್ನ ಪಕಳೆಗಳ ಪಕ್ಕೆಲುವು ಸೆಳೆದು ದೂಡುತ್ತದೆ ನೆತ್ತರು ಜಿನುಗಿದ ಕಾಲ್ಬೆರಳ ಒರೆಸಿಕೊಳ್ಳುವ ಹಸಿರುಗಣ್ಣಿನ ಪುಟ್ಟ ಹುಡುಗಿ “ರೊಟ್ಟಿ ಬೇಕು” ಸಣ್ಣಗೆ ಪಿಸುಗುಟ್ಟುತ್ತಾಳೆ ಅವರೆಲ್ಲ ಒಮ್ಮೆ ಬೆಚ್ಚಿ ಹಿಂತಿರುಗಿ ಮುಖ ನೋಡಿ, ಭಾಷೆ ಮರೆತವರ ಹಾಗೆ ಬೆನ್ನು ತೋರಿಸಿ ಹೊರಡುತ್ತಾರೆ..
ಅವರು ನಡೆಯುತ್ತಾರೆ ನಿಲ್ಲದ ಚರಪರ ಸದ್ದಿಗೆ ಎದ್ದು ಕೂತ ರಸ್ತೆಗಳು ಬುಸುಗುಟ್ಟಿ ನೋಡುತ್ತವೆ ಲೆಕ್ಕ ತಪ್ಪಿತು! ತಾರೆಯೊಂದು ಥುಪಕ್ಕನೆ ಎಲೆ ಅಡಿಕೆ ಉಗಿದು ಹೇಳುತ್ತದೆ ಬಾಗಿದ ಬೆನ್ನು, ಕಂದಿದ ಕಣ್ಣು ಹರಿದ ನೆಟ್ ಬನಿಯನ್ನಿನ ಗಾಳಿ ಆಗಷ್ಟೆ ಉಂಗುಷ್ಟ ಕಿತ್ತ ಹವಾಯ್ ಚಪ್ಪಲಿ, ಅವರೇ ಕಟ್ಟಿದ ಮಹಲುಗಳ ನಮ್ಮ ಡೈನಿಂಗ್ ಟೇಬಲ್ಲಿನವರೆಗೆ ಬರದೆ
ಮರ್ಯಾದೆ ಉಳಿಸುತ್ತವೆ.
*
ಅರ್ಧ ಸಿಗರೇಟು
ಇದ್ದ ಒಂದೇ ಒಂದು ರೊಟ್ಟಿ ಚೂರನ್ನು ನಾವಿಬ್ಬರು ಸಮಾ ಹಂಚಿಕೊಳ್ಳಬಹುದಿತ್ತು ನಿನ್ನ ಅರ್ಧ ಸುಟ್ಟ ಸಿಗರೇಟಿನ ತುಂಡು ನನ್ನ ಕಿತ್ತು ಹೋದ ಹಳೆಯ ರಬ್ಬರ್ ಬ್ಯಾಂಡು ನಾವೇ ಕಟ್ಟಿದ ಜೋಪಡಿಯಲ್ಲಿ ನಿರ್ವಾತ ಬಿದ್ದಿರವಾಗಲೂ ಒಡೆದ ಕನ್ನಡಿ ಬಿಂಬ ಹೆಕ್ಕಲು ಹೆಣಗಾಡುತ್ತಿತ್ತು ಕೊಟ್ಟ ಕಾವಿಗೆ ಕುಲಕಬೇಕಿದ್ದ ಹಕ್ಕಿ ಮರಿಯೊಂದು ಎದೆಯ ಬೇಗೆಯಲಿ ಕರಟಿ ಹೋಗಿದ್ದು ಹೊಸ ವ್ಯಾಖ್ಯಾನವೇನಲ್ಲ ಹುಂಬನಂತೆ ಮಧ್ಯದಲ್ಲಿಯೇ ಎದ್ದು ಹೋದ ನೀನು ಅಧೀರಳಂತೆ ಬಿಕ್ಕಿದ ನಾನು ಮರೆತ ಇತಿಹಾಸದ ಪುಟಗಳಂತೆ ಕಾಣಿಸುವುದು ಇಲ್ಲಿ ಹೊಸತಲ್ಲ.
ನಾನು ಕವಿತೆ ಬರೆಯುತ್ತೀನೊ ಕವಿತೆ ನನ್ನನ್ನು ಬರೆಯುತ್ತದೆಯೋ ಈಗಲೂ ಗ್ರಹಿಸಲಾಗಿಲ್ಲ. ಒಂದು ಕಾಲಕ್ಕೆ ಬಿಡುವಿಲ್ಲದಂತೆ ಹರಟುತ್ತಿದ್ದ. ಗಂಭೀರತೆ ಎನ್ನುವುದು ನನಗೆ ಸಂಬಂಧಿಸಿದ್ದೆ ಅಲ್ಲ ಎನ್ನುವಂತಿದ್ದ ನಾನು ಮೌನದ ಹಂದರದೊಳಗೆ ಇಷ್ಟೊಂದು ಗಹನವಾಗಿ ಇಳಿದಿದ್ದು ಯಾವಾಗ ಎನ್ನುವುದು ಕೂಡ ಅರಿವಿಲ್ಲ. ಬಹುಶಃ ಅಪ್ಪನ ಸಾವು, ಮದುವೆ ಆ ನಂತರದ ಹೆಣ್ಣಿನ ಜವಬ್ದಾರಿಗಳು. ಹೇರಲ್ಪಡುವ ಕಟ್ಟಳೆಗಳು. ಆಸ್ಪತ್ರೆ ಕಾರಿಡಾರ್ಗಳಲ್ಲಿ ಒಟ್ಟೊಟ್ಟಿಗೆ ಕಾಣುತ್ತಿದ್ದ ಬಡತನ, ನೋವು ಸಂತಸ ಕೆಲಸ ನನ್ನನ್ನು ತೀರ ಅಂತಮುರ್ಖಿಯಾಗಿಸುವಲ್ಲಿ ಮಹತ್ತರ ಪಾತ್ರ ವಹಿಸಿರಬೇಕು.
ಜಗದ ಸಂತೆಯ ನಡುವೆಯೂ ಒಬ್ಬಂಟಿ ಕೂರಲು ಹವಣಿಸುವ ತಿಕ್ಕಲುತನ. ಒಂದೆಡೆ ನಿಲ್ಲಲು ಅನುವು ಮಾಡದ ಅಲೆಮಾರಿ ಮನಸ್ಸು. ಕಂಡದ್ದನ್ನು ನೇರ ಹೇಳಲಾಗದ ಹತಾಶೆ. ದುಃಖ. ಹೇವರಿಕೆ. ಅತಿಯಾದ ಕೋಪ, ಭಾವುಕತೆ, ಖಿನ್ನತೆಯ ಹಂತದವರೆಗೂ ಕೊಂಡೊಯ್ಯುವ ನಿರ್ಲಿಪ್ತತೆ. ವಿಪರೀತ ಎನ್ನುವಷ್ಟು ಸೋಮಾರಿತನ ಅದರ ನಡುವೆಯೇ ಅಂದುಕೊಂಡ ಬದುಕು ಇದಲ್ಲ ಎನ್ನುವ ದ್ವಂದ್ವ. ಕೂತಲ್ಲಿ ನಿಂತಲ್ಲಿ ಮುಖಾಮುಖಿಯಾಗಿ ಒದ್ದಾಡಿಸುತ್ತಿದ್ದ ಸಾವಿರಾರು ಪ್ರಶ್ನೆಗಳು. ಕೇಳಿದರೆ ಎದುರಿದ್ದವರು ಮರುಳು ಎಂದುಕೊಂಡಾರು ಎನ್ನುವ ಮಹಾನ್ ಕೀಳರಿಮೆ. ಅಚಾನಕ್ ಒಳಹೊಕ್ಕ ಅತಿಯಾದ ಮುಜುಗರ. ಯಾರೋ ಬಲವಂತವಾಗಿ ಹೊರಿಸಿದ ಸಜ್ಜನಿಕೆ ಈ ಎಲ್ಲದುದರಿಂದ ದೂರ ಸರಿಯುವ ಸಲುವಾಗಿ ಎದೆಗೆ ಒತ್ತಿಕೊಂಡದ್ದು ಕವಿತೆಗಳನ್ನು. ಕಾಲೇಜು ದಿನಗಳಲ್ಲಿ ಬರವಣಿಗೆ ಆರಂಭವಾದರೂ ಅದು ಬೆರಳು ಬೆಸೆದುಕೊಂಡದ್ದು ಬದುಕು ಒಂದು ಹಂತಕ್ಕೆ ಬಂದ ನಂತರವೇ. ಗೆಳತಿಯಂತೆ ಸಂವಾದಿಸುವುದಕ್ಕೆ, ಗೆಳೆಯನಂತೆ ಹೆರಳು ನೇವರಿಸುವುದಕ್ಕೆ ಅಮ್ಮನ ಹಾಗೆ ಗದರುವುದಕ್ಕೆ ಮಗಳ ಹಾಗೆ ತಕರಾರು ತೆಗೆಯುವುದಕ್ಕೆ ಹೆಜ್ಜೆಯ ಪ್ರತಿ ಊರಿನ ಜೊತೆಗಿರುವುದು ನನ್ನ ಈ ಕವಿತೆಗಳೇ
* ಹಳೆಯ ವಾಚು
ಮರಳು ಒಂಟಿಗಾಡಿನಲಿ ನಿಂತು ನಿನ್ನನ್ನೇ ಕರೆಯುವುದನ್ನು ಎಂದಾದರು ಗಮನಿಸಿದ್ದೀಯ?
ನಾನು ಬಲ್ಲೆ ಕಟ್ಟಿದ ಕೊರಳಿಗೆ ಹೊರಡುವ ದನಿಗೆ ಓಗೊಡದಷ್ಟು ಮರಗಟ್ಟಿದ್ದೀಯೆ
ಆ ಬದಿಯಿಂದ ಹೊರಟ ಎಂದೋ ಬಿಟ್ಟು ಹೋದ ಹೊರಳ ಗೀಚುಗಳು ಈಗಲೂ ಚಲಿಸುವ ನಿನ್ನ ಹಳೆಯ ವಾಚು ಹರಿದ ಅಂಗಿ ತುಕ್ಕು ಹಿಡಿದ ರೇಟರ್ ಅಗಲಿಸಿ ಬಿಟ್ಟೆದ್ದ ಕಣ್ಣೋಟ ನನ್ನ ಕಪಾಟುಗಳಲ್ಲಿ ಕೂತು ಬಿಕ್ಕಳಿಸುತ್ತವೆ
ಸೆಳೆದುಕೊಳ್ಳುತ್ತೇನೆ ನಿರ್ಜನ ಬೀದಿಗಳ ಎಲ್ಲ ನಿಗೂಢತೆಗಳನ್ನು ನೀನೇ ಹಾಡಿದ ಲಾಲಿ ಕೊಡಿಸಿದ ಫ್ರಾಕು, ತೊಡಿಸಿದ ಹೊಸ ಚಪ್ಪಲಿ ಜೋತು ಬಿದ್ದ ಹಳೆಯ ಹ್ಯಾಂಗರಿನಲ್ಲಿ ಆಲಾಪಕ್ಕಿಳಿಯುತ್ತವೆ
ಸಿಕ್ಕು ತುಂಬಿದ ಪುಪ್ಪಸದೊಳಗೆ ನಿನ್ನ ನೀಲಿಗಣ್ಣಿನ ಚಿತ್ರಕ್ಕೆ ಬಣ್ಣ ಬಳಿಯುತ್ತ ಅಲೆಯುತ್ತೇನೆ ಹರಕು ಸಂಭ್ರಮದ ಆಕಾಶದಲಿ ನಂಟು ಅನಾಥ ತೇಲುವಾಗಲೆಲ್ಲ ನಾನು ಕಾಣದ ನಿನ್ನ ಹುಟ್ಟು ನೀನು ನೋಡದ ನನ್ನ ಸಾವು ನಮ್ಮ ಅನಾಮಿಕತೆಗೆ ಸಾಕ್ಷ್ಯ ಬರೆಯುತ್ತವೆ.
*
ಶೀತಲ ತೆಳು ಗಾಳಿ
ಬೆಳಕಿನ ಭಾರಕ್ಕೆ ನನ್ನ ಕಣ್ಣೆವೆಗಳು ಮುಚ್ಚಿಕೊಳ್ಳುತ್ತವೆ ನಾನು ಹಗಲಿನಲಿ ನಿದ್ರಿಸುತ್ತೇನೆ ಶಬ್ಧ ಡಂಗುರದ ಈ ಹೊತ್ತು ಎದೆ ಮಾತಿಗಳಿವ ಮುನ್ನ ಅಪಶೃತಿಗಳ ಶೃತಗೊಳಿಸುವುದು ಹೇಗೆಂದು ಈವರೆಗೂ ತಿಳಿದಿಲ್ಲ
ಒಳ ಪದರದ ಹೊದಿಕೆಯೊಳಗೆ ಶೀತಲ ತೆಳುಗಾಳಿಯೊಂದು ಹೇಗೆ ಸೇರಿಕೊಳ್ಳುತ್ತದೆಯೆಂದು ಯೋಚಿಸ ಪ್ರತಿಕ್ಷಣವೂ ಕಂಪಿಸುತ್ತೇನೆ
ಹತ್ತಿ ಇಳಿವ ರಭಸ ಓಡಿ ದಣಿವ ವಿರಹ ಎಲ್ಲ ತೇದಿಗಳ ಜುಂಗು ಹಿಡಿದು ಕೆಂಪಗೆ ಕಂತುವಾಗಲು ನೈತಿಕ ಯಾವುದೆಂದು ಅಳೆಯಲಾಗುವುದಿಲ್ಲ ಗುಡ್ಡೆ ಬಿದ್ದ ಕನಸುಗಳು ನಿಶ್ಯಬ್ಧ ರಾತ್ರಿಯ ಸಂಗಕ್ಕೆ ಹಾತೊರೆಯುತ್ತವೆ ಅನೈತಿಕ ದುಃಖವೊಂದನ್ನು ಸಕ್ರಮಗೊಳಿಸಿಕೊಳ್ಳಲಾಗದೆ ಸೋಲುತ್ತವೆ ಆಗೀಗ ಎಚ್ಚರಗೊಳ್ಳುತ್ತೇನೆ ಮತ್ತದೇ ಬೆಳಕು ಸುತ್ತ ಸರಿದಾಡಿ ಮೈ ಮೇಲೆ ಸವಾರಿ ಹೂಡಿ ಜಗತ್ತಿನ ವಾಸನೆಯ ಮೂಗಿನೊಳಗೆ ತುರುಕುತ್ತವೆ ನಾನು ಮತ್ತೆ ಸತ್ತಂತೆ ಬಿದ್ದುಕೊಳ್ಳುತ್ತೇನೆ.
*
ನಿಜಕ್ಕೂ
ಹೇಳಿದಳು ಆಕೆ ನಿಧಾನ ನಿಟ್ಟುಸಿರಿಟ್ಟು ಹೇಳಲೋ ಬೇಡವೋ ಎನ್ನುವ ಸಂದಿಗ್ಧ ದೀಪ ಹಚ್ಚಿಟ್ಟು
ಆ ಆ ಇರುಳು ನಿಜಕ್ಕು ಚನ್ನಾಗಿರಲಿಲ್ಲ ಕಣೇ ಒಂದು ಸೆಣೆಸಾಟ, ಒಂದು ಕೊಸರಾಟ, ಎಳೆದಾಟ, ಹೊಯ್ದಾಟ ಕೊನೆಗೊಂದು ಸಣ್ಣ ನರಳಾಟವು ಊಹೂಂ ಸಂಭವಿಸಲೇ ಇಲ್ಲವೆ
ಇದ್ದ ಸೂಜಿಗಲ್ಲುಗಳು ಅದುರಿ ಬೀಳುವಾಗ ಎಳೆಸೆಳಸು ನೋವ ಜಾಡೊಂದು ಕೊಸರಿ ಕೊನರಿತು ನೋಡು ಸೋತ ಬೆವರು ಕಣ್ಣ ತುದಿಯಲ್ಲಿ ಆಗಷ್ಟೆ ಹುಟ್ಟಿದ ಹೊಸ ಕಂಬನಿ ಯಾವುದಕ್ಕು ಅಸ್ತಿತ್ವದ ಸುಖ ಜೋತುಕೊಳ್ಳಲಿಲ್ಲ ಮುಗಿದ ವಸಂತ ಚೈತ್ರ ಅರಳುವ ಮುನ್ನ ಹಿಗ್ಗೊಂದು ಹಾವಾಗಿ ಮೈಯ್ಯೆಲ್ಲ ಬೇವಾಗಿ ಉಕ್ಕಿದ ಹೆಬ್ಬರಳ ಗೀಚು ಖಾಲಿ ಆಗಸ ನೋಡುವಾಗ ಹುಲಿಯ ಘರ್ಜನೆಯೊಂದು ಪಕ್ಕದಲ್ಲಿ ಹಾದು ಹೋದಂತೆ ಭಾಸವಷ್ಟೆ.
* ಪರಿಚಯ : ದೀಪ್ತಿ ಭದ್ರಾವತಿಯವರು ದಕ್ಷಿಣ ಕನ್ನಡದ ಮರವಂತೆಯವರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ, ಕನ್ನಡ ಸ್ನಾತಕೋತ್ತರ ಪದವಿ, ಹಿಂದಿಯಲ್ಲಿ ವಿಶಾರದ ಪದವಿಯನ್ನು ಪಡೆದಿದ್ದಾರೆ. ಕಾಗದದ ಕುದುರೆ, ಗ್ರೀನ್ ರೂಮಿನಲ್ಲಿ, ಆ ಬದಿಯ ಹೂವು, ಗೀರು ಇವರ ಕೃತಿಗಳು. ‘ಆ ಬದಿಯ ಹೂವು’ ಕೃತಿಗೆ ಮಾಸ್ತಿ ಕಥಾ ಪ್ರಶಸ್ತಿ ಸಂದಿದೆ. ಅಲ್ಲದೆ ವಿಭಾ ಸಾಹಿತ್ಯ ಪ್ರಶಸ್ತಿ, ಗೀತಾ ದೇಸಾಯಿ ದತ್ತಿ ನಿಧಿ ಪ್ರಶಸ್ತಿ, ಮುಂಬೈಯ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, ಶಾರದಾ ವಿ ರಾವ್ ದತ್ತಿ ನಿಧಿ ಪ್ರಶಸ್ತಿ, ಧಾರವಾಡದ ಹರಪನಹಳ್ಳಿ ಭೀಮವ್ವ ಪ್ರಶಸ್ತಿ, ಮಂಡ್ಯದ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಸ್ಪರ್ಧೆ ಬಹುಮಾನ, ಚೇತನಧಾರ ಟ್ರಸ್ಟ್ ಕಾವ್ಯ ಪ್ರಶಸ್ತಿ, ಗುರುಸಿದ್ಧ ಬಸವಶ್ರೀ ಪ್ರಶಸ್ತಿ ಮತ್ತು ವಿವಿಧ ಪತ್ರಿಕೆಗಳ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳು, ‘ಗೀರು’ ಕಥಾಸಂಕಲನಕ್ಕೆ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿಯೂ ಲಭಿಸಿದೆ.
ಇದನ್ನೂ ಓದಿ : Poetry : ಅವಿತಕವಿತೆ : ಜೀವದ ಒಳಮಾಲು ಬಸಿದ ಮೊಟ್ಟೆಚಿಪ್ಪಿನ ಹಾಗೆ ಭಿದುರವಿದ್ದಾರು
Published On - 9:31 am, Sun, 30 May 21