Poetry : ಅವಿತಕವಿತೆ : ಜೀವದ ಒಳಮಾಲು ಬಸಿದ ಮೊಟ್ಟೆಚಿಪ್ಪಿನ ಹಾಗೆ ಭಿದುರವಿದ್ದಾರು

‘ಆ ಕ್ಷಣವು ಇನ್ನೊಂದಾಗಿ ಮುಂದುವರೆದು ಇಲ್ಲವಾದಾಗ- ಪದ್ಯವೂ ಇಲ್ಲವಾಗಬಹುದು. ಇಂದು ನನ್ನೊಳಗೆ ಮೂಡಿ ಬರೆಬರೆಯೆಂದು ಒತ್ತಾಯಿಸಿ ಉಂಟಾದ್ದು- ಮುಂದೊಮ್ಮೆ ನನಗೇ ‘ಗಡುವು’ ತೀರಿದ ಔಷಧದ ಹಾಗನ್ನಿಸಬಹುದು. ಅನಿಸಿದ್ದೂ ಇದೆ. ಯಾವ ಕಾಲಕ್ಕೂ ತೀರದೆ ಇದ್ದು- ಹುಟ್ಟಿನಲ್ಲೇ ‘ಎಟರ್ನಿಟಿ’ಯನ್ನು ಒಡನಿಟ್ಟುಕೊಂಡ ಕವಿತೆಯನ್ನು ನಾನು ಬರೆದೇ ಇಲ್ಲ. ಅಂಥದೊಂದು ‘ಚಿರಂತನ’ತೆಯಲ್ಲಿ ನನಗೆ ನಂಬಿಕೆಯೂ ಇಲ್ಲ. ‘ ನಾಗರಾಜ ವಸ್ತಾರೆ

Poetry : ಅವಿತಕವಿತೆ : ಜೀವದ ಒಳಮಾಲು ಬಸಿದ ಮೊಟ್ಟೆಚಿಪ್ಪಿನ ಹಾಗೆ ಭಿದುರವಿದ್ದಾರು
ಕವಿ ನಾಗರಾಜ ವಸ್ತಾರೆ
Follow us
ಶ್ರೀದೇವಿ ಕಳಸದ
|

Updated on:May 23, 2021 | 9:44 AM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ನಾಗರಾಜ ವಸ್ತಾರೆ ಅವರ ಕವಿತೆಗಳು ನಿಮ್ಮ ಓದಿಗೆ.

*

ಎಲ್ಲೆಲ್ಲು ಎಂಥ ಕಠಿಣಾವಸ್ಥೆಯಲ್ಲು ನೀನ ಆವಿರ್ಭವಿಸುವೆಯಲ್ಲ! ನಿಜ ಹೇಳು, ಕಣ್ಣುಬೆಳಕಿನಿಂದ ಕತ್ತಲಿಗೆ ಹೊರಳಿಕೊಳ್ಳುವ ಕಾಲಾವಧಿ ನಿನಗೆ ದಕ್ಕಿದ್ದೆಲ್ಲಿ? ನಿನ್ನೊಡಲಗೆ ಇವೆಲ್ಲ ಹೇಗೆ ಒಗ್ಗಿಕೊಂಡಿದೆ! ಅದೇ ನಿನ್ನ ಸಾಮರ್ಥ್ಯ. ಛೇ! ಸಾಮರ್ಥ್ಯವಲ್ಲ, ಅದು ನಿನ್ನ ವಿನಯ. ಎರಕಕ್ಕೆ ಸರಿಯಾದ ಕರಗುವಿಕೆ. ಶರಣಾಗತಿಯೇ ನಿನ್ನ ಸಾಮರ್ಥ್ಯ. ಆ ತಳಾತಳದ ನೆಲೆಯಲ್ಲಿ ಜೇಡನಬಲೆ ಕೋನ-ರೇಖೆಗಳಿಗೆ ಇಳಿಯುತ್ತದೆ. ಒಂದು ಹುಳು ಎಷ್ಟೊಂದು ಘನವಾಗುತ್ತದೆ. ಸೂರ್ಯನಿಗೆ ಶುಕ್ರದೆಸೆ, ಮಳೆಗಮಾನು ಮೂಡಿಸಿ ಮನಸುಕ್ಕಿದಂತೆ ಕಣ್ಣುಕ್ಕುತ್ತದೆ. ಬಣ್ಣಗಳು ಬಂಡೇಳುತ್ತವೆ. ಕನ್ನಡಕವೆಂಬುದು ಮೂಗು ಹೊತ್ತ ನೊಗವಾಗುತ್ತದೆ. ನವ್ಯ ನವ್ಯೋತ್ತರವನ್ನೆಲ್ಲ ಆಚೆ ನೂಕಿ ಉಜ್ಜುವುದರ ಪರಿಕಲ್ಪನೆ ಹೊಸ ಪರಿಣಾಮದಲ್ಲಿ ತೆರೆದುಕೊಳ್ಳುತ್ತದೆ. ಅಲ್ಲಿ ಸ್ಖಲನಕ್ಕೆ ಆಯಾಮವಿಲ್ಲ. ನಿರಾಯಕ್ಕೆ ಆಯ! ಅಲ್ಲಿ ಸತ್ಯವೆಂದೂ ಪರಮವಲ್ಲ. ಸಾವನ್ನು ಅದರ ಅವಸಾನದವರೆಗೆ ಬದುಕಬಹುದು. ಅಲ್ಲಿ ತುಲನೆ ತಪ್ಪಿಯೇ ತೆರಹು. ಅನುಭವವಿಲ್ಲದೆ ಭವ ಮೀರಲಾಗದು. ಭವಬಂಧದಲ್ಲಿ ಹೊಸ ಪದಗುಚ್ಛಗಳ ಸಂಯೋಗ. ಪದಾರ್ಥ ಕಳಚಿದ ಪದ್ಯ! ನೀನೆಂದರೆ ಅದೇ ಅಲ್ಲವೇ? ಪದದ ಅರ್ಥವನ್ನು ಕಳಚುವ ಮಾಯಾವಿ! ವಿಕ್ರಮ ಹತ್ವಾರ, ಕವಿ, ಕಥೆಗಾರ

ವಸ್ತಾರೆ ಪದ್ಯಗಳ ಕುರಿತಾಡುವಾಗ ‘ಸಮಕಾಲೀನ ಇತರರ’ ಬಗ್ಗೆ ಯೋಚಿಸಲೇಬೇಕಾಗುತ್ತದೆ. ಎಲ್ಲರೂ ಹೈಬ್ರೋಯಿಸಂನಲ್ಲಿ ನಿಲವೊಂದನ್ನು ಹೊಂದದಿದ್ದರೆ ಧಡ್ಡರಂತೆ ಕಂಡುಬಡುತ್ತೇವೇನೋ ಎಂಬ ಆತಂಕದಲ್ಲಿ ಸುಭಗರಂತೆ ಬರೆಯುತ್ತಿದ್ದರೆ, ವಸ್ತಾರೆ ತೀರಾ ಖಾಸಗಿಯಾದ ಕ್ಷಣವೊಂದನ್ನು ರಾಜಕುಮಾರಿಯು ಮುತ್ತಿಟ್ಟಾಗ ಯುವಕನಾಗುವ ಕಪ್ಪೆಯ ಮಕ್ಕಳ ಕತೆಗೊಯ್ದು ಜೋಡಿಸಿ- ಕಾಮ, ಯೌವ್ವನ, ಹುಚ್ಚುಕಲ್ಪನೆಗಳೆಲ್ಲವನ್ನೂ ಒಂದು ತಮಾಷೆಯ ಅಚ್ಚರಿಯಲ್ಲಿ ಮುಗುಮ್ಮಾಗಿ ತೋರಿಸಿ ಎರಕಹೊಯ್ದುಬಿಡುತ್ತಾರೆ. ಅವಿನಾಶ್ ಜಿ. ಲೇಖಕ, ಅನುವಾದಕ

avitha kavithe

ಕಲೆ : ಮದನ ಸಿ.ಪಿ.

1.

ವಿನಾಕಾರಣವುಂಟಾದ ಮೃತ್ಯುವನ್ನು ಕೊಲೆ ಅನ್ನಬಹುದು ಹತ್ಯೆಯೆನ್ನುವುದು ಇನ್ನೊಂದು ಮಾತು ಸಂಹಾರವೆಂದರೆ ಇನ್ನೂ ಹಿರಿದು ಬಲಿಯೆಂಬುದು ಈ ನಡುವಿನ ತುಸು ತಗ್ಗು

ತಂತಾನೇ ಬಂದಿರದ ಸಾವನ್ನು ಹೇಳುವ ರೀತಿ ಯಲ್ಲೊಂದು ರೀತಿಯಿದೆ ಘನತೆ ಯಿದೆ ತತ್ತ್ವವಿದೆ ಸಿದ್ಧಾಂತವೂ ಇದೆ

ನಾನು ಸುಮ್ಮನೆ ಸತ್ತಿದ್ದಲ್ಲಿ ಇವಾವುವೂ ಇಲ್ಲದೆ ಸುಮ್ಮನೆ ಸತ್ತಿರುತ್ತಿದ್ದೆ

ಇಕೋ ನೀವು ನನ್ನನ್ನು ಕೊಂದಿರಾಗಿ ಏನೆಲ್ಲ ಅರ್ಥೈಕೆ ಎಷ್ಟೆಲ್ಲ ವಿಶ್ಲೇಷಣೆ ಸಾವಂತಹ ಸಾವಿಗೂ ಹಲಕೆಲ ಕೋನ ಅಷ್ಟಷ್ಟೇ ಫಲನ

ನನ್ನನ್ನು ನಂಬುವವರಿಗೆ ನಾನಿಲ್ಲವಾಗಿ ನಾನೊಬ್ಬ ಹುತಾತ್ಮ ಎದುರಿಕ್ಕಿಕೊಂಡವರಿಗೆ ನನ್ನ ಸಾವೇ ನನಗೆ ಶಾಸ್ತಿ

ಇರಲಿ ಸುಮ್ಮನೆ ಕೊಲೆಗೆ ಹಮ್ಮಿನ ಬೆಲೆಯೀವ ಪ್ರೆಸ್ಸುಗಿಸ್ಸು ಮೀಡಿಯಾ ಕವರೇಜಿ ಗೇನನ್ನುವುದು

ನನ್ನ ತರುವಾಯದ ಲೋಕದ ತಮಾಷೆಯೇ ಇದಿರ ಬಹುದು

ಈ ಜಗತ್ತಿನ ನಾಲಿಗೆಕತ್ತಿಗೆ ದಿನವೂ ಕತ್ತೊಡ್ಡುವ ಕುರಿ ಕೋಳಿ ಕೋಣ ಗಳನ್ನೊಮ್ಮೆ ಕೇಳಿ ಇತ್ಯರ್ಥಿಸುವುದು ವಾಸಿ

2.

ಕೆಲವರು ಅದಿಬದಿಯವರಿಗಿಂತ ಹೆಚ್ಚು ಬದುಕಬಹುದು ಓರಗೆಯವರ ಆಯಸ್ಸಿಗೂ ಹೆಚ್ಚು ಹೆಚ್ಚು ವಯಸ್ಸಿನ ಕೂಡ ಮೈಸವೆಯಿಸಬಹುದು ಕೆಲವೊಮ್ಮೆ ವಯಸೇ ಆಯಸಿನೆದುರು ತಗ್ಗಿಬಗ್ಗಿ ಡೊಗ್ಗುಸಲಾಮು ಹೊಡೆದು ಹಿಮ್ಮೆಟ್ಟಬಹುದು ಇಂಥವರ ಮನಸು ಏನೂ ಮುಟ್ಟಲೊಲ್ಲದ ಆದರೆ ಎಲ್ಲವೊಳಗೊಂಡ ಆಕಾಶದಂತಿರಬಹುದು

ಬಹುಪಾಲು ಮಂದಿ ಸಾವುನೋವಿರಲಿ ಹಸಿವು ನೀರಡಿಕೆಗಳನೂ ತಡೆಯಲನುವಿಲ್ಲದೆ ಜೀವದ ಒಳಮಾಲು ಬಸಿದ ಮೊಟ್ಟೆಚಿಪ್ಪಿನ ಹಾಗೆ ಭಿದುರವಿದ್ದಾರು ಅಥವಾ ಮುಟ್ಟಲೆಟುಕದ ಸೊಳ್ಳೆಯ ಹಾಗೆ ಪದೇಪದೇ ಸಾವಿನ ಚಪ್ಪಾಳೆ ತಪ್ಪಿಸಿಕೊಂಡು ಉಳಿದಾರು ಇನ್ನು ಮನಸೆಂಬುದೂ ಸೋಪುಗುಳ್ಳೆಯ ಹಾಗೆ ಒಡೆಯಲಿಕ್ಕೆಂದೇ ಆದುದಿದ್ದೀತು

ಇವೆರಡರೊಳಗೆ ನಾನೆಲ್ಲೆಂಬ ನಿರ್ಣಯದೊಳಗೆ ಸಾವಿರುವುದು

avitha kavithe

ನಾಗರಾಜ ವಸ್ತಾರೆ ಕೈಬರಹದೊಂದಿಗೆ

ನನ್ನ ಮಟ್ಟಿಗಷ್ಟೇ ಆಡುವುದಾದರೆ- ನಾನು ಏನನ್ನೂ, ಯಾವುದನ್ನೂ ನೆಚ್ಚಿಕೊಂಡವನೆಂದು ಅನ್ನಿಸುವುದಿಲ್ಲ.  ಡಿಸೈನಿನ ಬೋಧೆ ಮತ್ತು ಅಭ್ಯಾಸಗಳಲ್ಲಿ ಸಮಸಮವಾಗಿ ತೊಡಗಿರುವ ನನಗೆ, ಈ ಬಗೆಯ ಕ್ಲೇಮು ಆ ಕ್ಷಣದ ಸತ್ಯವಷ್ಟೇ ಅಂತನಿಸುತ್ತದೆ. ಆ ಹೊತ್ತಿನ ಅಡಾವುಡಿ ಅಂತನಿಸುತ್ತದೆ. ಅಲ್ಲದೆ, ಡಿಸೈನನ್ನೇ ಬದುಕಿನ ಮೂಲಧಾತುವಾಗಿ ಇಟ್ಟುಕೊಂಡು ಬದುಕು ನೂಕಿಕೊಂಡಿರುವ ನನಗೆ- ವಿನ್ಯಾಸಗಾರಿಕೆಗೂ, ಪದ್ಯಗಾರಿಕೆಗೂ ವ್ಯತ್ಯಾಸವುಂಟೆಂದು ಅನ್ನಿಸಿಯೇ ಇಲ್ಲ. ಆರ್ಕಿಟೆಕ್ಚರು ಮತ್ತು ಸಾಹಿತ್ಯ- ಇವೆರಡೂ ಬದುಕಿನೊಟ್ಟಿಗಿನ ನೇರ ಲೇವಾದೇವಿಯೊಡನೆ, ಬದುಕಿನ ಸ್ಟಿಮುಲಸ್ಸಿನ ಮೇರೆಗೆ ಜರುಗುತ್ತವಾಗಿ, ಇವೆರಡಕ್ಕೂ ಹೆಚ್ಚಾಗಿ ಬದುಕೇ ಮಿಗಿಲಿನದನಿಸುತ್ತದೆ.

ಇಷ್ಟಿದ್ದೂ, ಕವಿತೆಗಳ ವಿಚಾರವಾಗಿ ಆಡುವುದಾದರೆ- ಅದು ನನಗೆ ಉಳಿದೆಲ್ಲ ಸಾಹಿತ್ಯಪ್ರಕಾರಗಳಿಗಿಂತ ಹೆಚ್ಚು ಆಪ್ತವೇನೋ. ‘ಫಸ್ಟ್ ಲವ್’ ಅನ್ನುವರಲ್ಲ ಹಾಗೆ.  ಜಗತ್ತಿನ ಯಾವುದೇ ಸಂಗತಿಯನ್ನೂ ಯಾರೇ ಆದರೂ ಪದ್ಯದೊಳಗೆ ಹಿಡಿದಿಡಬಹುದೆಂಬ ನಂಬುಗೆ ನನಗಿದೆ. ಈ ‘ಯಾವುದೇ’ ಮತ್ತು ‘ಯಾರೇ’ ಎಂಬುದನ್ನು ನಾನು ಒತ್ತಿ ಒತ್ತಿ ಹೇಳಬಯಸುತ್ತೇನೆ. ಇಲ್ಲದಿದ್ದಲ್ಲಿ, ಪಾರಂಪರಿಕ ಸಾಹಿತ್ಯದ ಗಂಧಗಾಳಿಯಿಲ್ಲದ ನನ್ನೊಳಗೆ ಪದ್ಯವೆಲ್ಲಿ ಹುಟ್ಟುತಿತ್ತು? ಅಥವಾ, ನಾನು ಪದ್ಯವೆಂದೆಣಿಸಿ ಬರೆದಿದ್ದು  ಇದೇ ಪಾರಂಪರಿಕ ನೆಲೆಯಲ್ಲಿ ಪದ್ಯವೇ ಹೌದೇ?

ಅರಿಯೆ.

ಆದರೆ, ಯಾವುದೇ ಭಾಷೆಯೂ ತನಗೆ ತಾನೇ ಪದ್ಯಾತ್ಮಕವಾಗಿದೆ ಅಂತನಿಸುತ್ತದೆ. ಭಾಷೆಯೊಂದರ ಕೈನಾಡಿಯನ್ನು ಸರಿಯಾಗಿ ಹಿಡಿದ ಪಕ್ಷಕ್ಕೆ- ಅದರ ನುಡಿಯೇ ತನ್ನೆಲ್ಲ ಮಿಡಿದುಡಿಗಳೊಡನೆ ಒಂದು ಸುಂದರ ಪದ್ಯದ ಹಾಗೆ ಕೇಳಸಿಗುತ್ತದೆ. ಅಂದಮೇಲೆ, ನಾನಾಡುವ ಕನ್ನಡವು ಪದ್ಯವಲ್ಲವೇ? ಪದ್ಯಾತ್ಮಕವಲ್ಲವೇ? ಇಂತಹ ಕನ್ನಡದ್ದೊಂದು ಒಳಮಿಡಿಯು ನನಗೆ ದಕ್ಕಿದೆಯೆಂದಾದರೆ, ಕನ್ನಡವೇ ನನಗೆ ದಕ್ಕಿಸಿದೆಯೆಂದ ಮೇಲೆ ಸೌಭಾಗ್ಯವೇ ತಾನೇ?

ಇಷ್ಟಿದ್ದೂ, ಪದ್ಯವೆನ್ನುವುದು ಆ ಗಳಿಗೆಯ ಪುಳಕ ಮಾತ್ರ. ಕ್ಷಣವೊಂದರ ಉತ್ಕಟ ಅನುಭವದ ನೆಲೆಯಲ್ಲಿ ಉಂಟಾಗುವ ಪದ್ಯವು ಆ ‘ಕ್ಷಣೌತ್ಕಟ್ಯ’ದ ಪ್ರತೀಕವಷ್ಟೇ ಇರಬಹುದು. ಅಷ್ಟೇ ಭಂಗುರವೂ ಇರಬಹುದು. ಅಂದರೆ, ಆ ಕ್ಷಣವು ಇನ್ನೊಂದಾಗಿ ಮುಂದುವರೆದು ಇಲ್ಲವಾದಾಗ- ಪದ್ಯವೂ ಇಲ್ಲವಾಗಬಹುದು. ಇಂದು ನನ್ನೊಳಗೆ ಮೂಡಿ ಬರೆಬರೆಯೆಂದು ಒತ್ತಾಯಿಸಿ ಉಂಟಾದ್ದು- ಮುಂದೊಮ್ಮೆ ನನಗೇ ‘ಗಡುವು’ ತೀರಿದ ಔಷಧದ ಹಾಗನ್ನಿಸಬಹುದು. ಅನಿಸಿದ್ದೂ ಇದೆ. ಯಾವ ಕಾಲಕ್ಕೂ ತೀರದೆ ಇದ್ದು- ಹುಟ್ಟಿನಲ್ಲೇ ‘ಎಟರ್ನಿಟಿ’ಯನ್ನು ಒಡನಿಟ್ಟುಕೊಂಡ ಕವಿತೆಯನ್ನು ನಾನು ಬರೆದೇ ಇಲ್ಲ. ಅಂಥದೊಂದು ‘ಚಿರಂತನ’ತೆಯಲ್ಲಿ ನನಗೆ ನಂಬಿಕೆಯೂ ಇಲ್ಲ.

avitha kavithe

ವಸ್ತಾರೆಯವರ ಪುಸ್ತಕಗಳು

3.

ವಯಸ್ಸು ವಿಧಿಸಿದ ಅತ್ಯುಗ್ರ ಶಿಕ್ಷೆ ಯೆಂದರೆ ಅವರು ಉಪ್ಪು ವರ್ಜಿಸಹೇಳಿದ್ದು ಬದುಕಿನ ಮರ್ಜಿ ತಪ್ಪಿದ್ದು ಮಾರ್ಜಿನೇ ಇಲ್ಲವೆಂದಿದ್ದು

ಬಿಡದೆಯೇ ಸತ್ತೀಯೆಂದು ಅವರ ಎಚ್ಚರಿಕೆ ಬಿಡದೆಯೇ ಇದ್ದೇನೆಂದು ಇವನ ಸೆಡ್ಡು

ಜಟಾಪಟಿಯೇ ಮೊದಲಾಯಿತು. ಪಥ್ಯಾಪಥ್ಯಗಳದ್ದು. ಬದ್ಧಾಬದ್ಧಗಳದ್ದೂ.

ಉಪ್ಪು, ಉಪ್ಪೇರಿ, ಉಪ್ಪಿನಕಾಯಿ… ಯಿತ್ಯಾದಿ ಯಿರದ ಬದುಕು ಬದುಕೇ ಅಂದ ಉಪ್ಪುಪ್ಪಾಗಿಯೇ ಇದ್ದುಬಿಟ್ಟ

ಗೋಗರೆಯುವಾಗ ಉಪ್ಪಿನಕಾಯಿ ನೆಂಚಿ ಬಿಟ್ಟೇನೆಂದು ಗೊರೆದ

ಇವನು ಸತ್ತಂದು ಕಡಲಿನ ಉಪ್ಪು ಕರಗಿತು ಕಡುವಾಗಿ ಇವನೇ ತಾನಾಯಿತು

*

ಪರಿಚಯ : ವೃತ್ತಿಯಿಂದ ಆರ್ಕಿಟೆಕ್ಟ್ ಆಗಿರುವ ನಾಗರಾಜ ವಸ್ತಾರೆ ಆರ್ಕಿಟೆಕ್ಚರಿನ ಬೋಧನೆ ಮತ್ತು ಅಭ್ಯಾಸಗಳೆರಡರಲ್ಲೂ ಸಮಸಮವಾಗಿ ತೊಡಗಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಗೂ ಹೆಚ್ಚು ಪ್ರ್ಯಾಕ್ಟೀಸು ನಡೆಸುತ್ತಿರುವ ಅವರು ನಾಡಿನ ಕೆಲವು ಪ್ರತಿಷ್ಠಿತ ವಿನ್ಯಾಸಶಾಲೆಗಳಲ್ಲಿ ಡಿಸೈನು ಕಲಿಸುತ್ತಾರೆ. ಸಾಹಿತ್ಯ ಅವರ ವೃತ್ತಿಯಾಚೆಗಿನ ಅಭಿರುಚಿ. ಈವರೆಗೆ ಹದಿನಾರು ಪುಸ್ತಕಗಳನ್ನು ಪ್ರಕಟಿಸಿದ್ದು- ಕಥೆ, ಕಾದಂಬರಿ, ಪ್ರಬಂಧ ಮತ್ತು ಪದ್ಯಗಳನ್ನು ಬರೆದಿದ್ದಾರೆ. ‘ವಸ್ತಾರೆ ಪದ್ಯಗಳು’ ಮತ್ತು ‘ವಸ್ತಾರೆ ಇನ್ನೂ ಎಪ್ಪತ್ತೈದು’ ಅವರ ಕವನಸಂಕಲನಗಳು.

ಇದನ್ನೂ ಓದಿ : Poetry : ಅವಿತಕವಿತೆ ; ಗೀರು ಕಾಣದಂತೆ ಅವನು ಒಡಕು ಕಾಣದಂತೆ ಅವಳು

Published On - 9:38 am, Sun, 23 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ