Covid Diary : ಕವಲಕ್ಕಿ ಮೇಲ್ ; ‘ಸತ್ಯಕ್ಕೆ ಬ್ಹಾಳ ಮುಖಗಳಿರ‍್ತವೆ ಎಲ್ವನ್ನೂ ಮುಟ್ಟಿ ನೋಡಬೇಕ, ಇಲ್ದಿದ್ರೆ ಗೊಣಕ್ಕಂತ ಸತ್ತೋಗಿಬಿಡ್ತೀವಿ’

Asha Workers : ‘ನಿನ್ನೆದೇ ಯೋಚನೆ ಮಾಡಿದ್ರೆ ಡಿಪ್ರೆಸ್ ಆಗುತ್ತೆ. ನಾಳೆದೇ ಯೋಚನೆ ಮಾಡಿದ್ರೆ ಟೆನ್ಶನ್ ಆಗುತ್ತೆ. ಅದಕ್ಕೇ ಈ ಮಹಾಪ್ರಳಯ ಮುಗಿಯೋತಂಕ ಇವತ್ತಿಂದು ಇವತ್ತಿಗೆ, ಎಷ್ಟು ಸಾಧ್ಯನೋ ಅಷ್ಟು ಕೆಲಸ, ಸಹಾಯ. ಶಾಂತಿ ಸೃಷ್ಟಿಸಿಕೊಳ್ಳದಿದ್ರೆ ಏನೂ ಮಾಡಕ್ಕಾಗಲ್ಲ. ಸುಮ್ನೆ ಶಕ್ತಿಪಾತ.’

Covid Diary : ಕವಲಕ್ಕಿ ಮೇಲ್ ;  ‘ಸತ್ಯಕ್ಕೆ ಬ್ಹಾಳ ಮುಖಗಳಿರ‍್ತವೆ ಎಲ್ವನ್ನೂ ಮುಟ್ಟಿ ನೋಡಬೇಕ, ಇಲ್ದಿದ್ರೆ  ಗೊಣಕ್ಕಂತ ಸತ್ತೋಗಿಬಿಡ್ತೀವಿ’
Follow us
|

Updated on:Jun 07, 2021 | 9:48 AM

ಬಡತನದ ತವರಿನವರು ಪಿಯುಸಿಗೇ ಓದು ಬಿಡಿಸಿ ಮದುವೆ ಮಾಡಿದ್ದರು. ತವರಿನಷ್ಟೇ ಬಡತನದ ಗಂಡನ ಮನೆ. ಗಂಡನಾದರೂ ತಕ್ಕ ಜೊತೆಯಾದನೇ? ದುಡಿದದ್ದಷ್ಟನ್ನೂ ಕುಡಿದು ಕಳೆದು, ತನ್ನ ಪ್ರಾಣವನ್ನೂ ಕಳೆದುಕೊಂಡಿದ್ದ. ಹೆಚ್ಚು ಓದಬೇಕೆಂಬ ಹಂಬಲವಿದ್ದ ಚುರುಕಿನ ಹುಡುಗಿ ಎಳೆಯ ವಿಧವೆಯಾಗಿ ಇಬ್ಬರು ಮಕ್ಕಳ ತಾಯಿಯಾಗಿ ಗಂಡನ ಮನೆಯ ಕೂಡು ಕುಟುಂಬದಲ್ಲಿ ಕಳೆದುಹೋಗಿದ್ದಳು. ಆ ಹೊತ್ತಿಗೆ ಸಿಕ್ಕ ಆಶಾ ಕಾರ್ಯಕರ್ತೆಯ ಕೆಲಸ ತನ್ನ ಮೇಲೇ ತನಗೆ ಗೌರವ, ಭರವಸೆ ಹುಟ್ಟಿಸಿತ್ತು. ಆದರೆ ಕೋವಿಡ್ ಶುರುವಾದಾಗ ಕೆಲಸ ಬಿಡು ಎಂಬ ಒತ್ತಡ ಮನೆಯಲ್ಲಿ ಕೇಳಿಬಂತು. ಅವಳಿಂದಲೇ ಕಾಯಿಲೆ ಬರಬಹುದು ಎಂಬಂತೆ ಮನೆಯವರು ವರ್ತಿಸಿದರು. ಸ್ವತಂತ್ರ ಬದುಕಿಗೆ ಇಷ್ಟಾದರೂ ಆಧಾರವಾದ ಕೆಲಸ ಬಿಡಲು ಒಪ್ಪದೇ ಮನೆಯನ್ನೇ ಬಿಟ್ಟಳು. ತನ್ನ ತಾಯಿ, ಮಕ್ಕಳೊಂದಿಗೆ ಒಂದು ಸಣ್ಣಗೂಡಿಗೆ ಬಂದುಬಿಟ್ಟಿದ್ದಾಳೆ. ಈ ಸಮಾಜದಲ್ಲಿ ಒಂಟಿ ಹೆಣ್ಣಾಗಿ ಬದುಕುವುದು ಎಂದರೇನೆಂಬ ಅರಿವಾಗುತ್ತಿದೆ.

*

ಮನೆಯೆದುರು ಏನೋ ಸಿಡಿದ ಸದ್ದಾಯಿತು. ಈರುಳ್ಳಿ ಹೆಚ್ಚುತ್ತ ಕಣ್ಣೀರು ಸುರಿಸುತ್ತಿದ್ದ ಆಶಾ ಕಾರ್ಯಕರ್ತೆ ಕವಿತಾ ಬಾಗಿಲಾಚೆ ಬಂದಳು. ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿದ್ದ ಹುಡುಗನನ್ನು ಅವನ ಗೆಳೆಯರು ಪಟಾಕಿ ಸಿಡಿಸುತ್ತ ಬೈಕ್ ಮೆರವಣಿಗೆಯಲ್ಲಿ ಮನೆಗೆ ಕರೆದೊಯ್ಯುತ್ತಿದ್ದಾರೆ. ಗೆದ್ದು ಬಾ ಗೆಳೆಯ ಎಂದು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದವರು ಗೆದ್ದು ಬಂದವನನ್ನು ಗುಂಪುಗೂಡಿ ಕರೆದೊಯ್ಯುತ್ತಿದ್ದಾರೆ. ಅವರಿಗೆ ಪಟಾಕಿಯಾದರೂ ಎಲ್ಲಿ ಸಿಕ್ಕಿತು? ಅವಳ ಏರಿಯಾದಲ್ಲಿ ಈಗ ಹತ್ತು ಪಾಸಿಟಿವ್ ಪ್ರಕರಣಗಳಿವೆ. ಒಂದು ವಾರದಲ್ಲಿ ಮೂರು ಸಾವು ಆಗಿದೆ. ಆದರೂ ಜನರಿಗೆ ಬುದ್ಧಿ ಬರುವುದಿಲ್ಲವಲ್ಲ ಎಂದು ರೇಗಿಕೊಂಡಳು. ಅವಳು ಮನೆಯ ಹೊರಗೆ ಬಂದದ್ದೇ ಬೈಕುಗಳು ಜೋರಾಗಿ ಪೊಂಯ್ಞ್ ಪೊಂಯ್​ಗೊಡತೊಡಗಿದವು. ಅವಳ ಕಡೆ ನೋಡಿ ಊಳಿಡುವಂತೆ ಕೆಲವರು ಕೂಗಿದರು. ಕವಿತಾಗೆ ಗೊತ್ತು. ತನ್ನ ಮೇಲೆ ಊರಲ್ಲಿ ಯಾರಿಗೂ ಈಗ ಪ್ರೀತಿಯಿಲ್ಲ ಎಂದು. ಹೇಗಾದರೂ ಬದುಕಬೇಕೆನ್ನುವ ಜನ ಕಟು ಸತ್ಯ ಹೇಳುವ ತನ್ನನ್ನು ಮೆಚ್ಚುವುದಿಲ್ಲವೆಂದು ಗೊತ್ತಾಗಿದೆ.

ಆ ಎಲೆಕ್ಟ್ರಿಕಲ್ಸ್ ಅಂಗಡಿಯವನ ಮುಖ ಕಣ್ಣೆದುರು ಬಂತು. ಪಾಸಿಟಿವ್ ಆದರೂ ಅಂಗಡಿ ತೆಗೆದಿಟ್ಟುಕೊಂಡಿದ್ದ. ಒಂದೆರೆಡು ಬಾರಿ ಹೋಗಿ ಅಂಗಡಿ ಮುಚ್ಚಬೇಕೆಂದು, ಮನೆಯೊಳಗೆ ಪ್ರತ್ಯೇಕವಾಗಿರಬೇಕೆಂದು, ಉಳಿದವರ ಟೆಸ್ಟ್ ಮಾಡಿಸಿ ಎಂದು ಹೇಳಿದರೂ ಹ್ಞೂಂ ಎನ್ನದೇ, ಊಂಹ್ಞೂ ಎನ್ನದೇ, ಇವಳ್ಯಾರೋ ಎನ್ನುವಂತೆ ವೈಂಡಿಂಗ್ ಮುಂದುವರೆಸಿದ್ದ. ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸಿ, ಪಿಡಿಒ ಸಮೇತ ಹೋಗಿಬಂದರೂ ಉಪಯೋಗವಾಗಲಿಲ್ಲ. ತೆರೆದ ಅಂಗಡಿಯ ಫೋಟೋ ತೆಗೆಯುವಾಗ, ಏನ್ ಬರ‍್ಕತಿರೋ ಬರ‍್ಕಳಿ’ ಎಂದು ಮೈಮೇಲೇರಿ ಬಂದವನಿಂದ ಅಂತರ ಕಾಯ್ದುಕೊಳ್ಳಲು ಇವರೇ ದೂರ ಸರಿದರು. ಬೇಸಗೆಯಲ್ಲಿ ಪಂಪ್‌ಸೆಟ್ ರಿಪೇರಿ, ಖರೀದಿ ಹೆಚ್ಚಿರುತ್ತದೆ. ಆಗವನಿಗೆ ಭರ್ಜರಿ ವ್ಯಾಪಾರ ಇರುತ್ತದೆ. ರಿಪೇರಿಯನ್ನೂ ಮಾಡುವುದರಿಂದ ಎಲ್ಲರಿಗೂ ಬೇಕಾದವನಾಗಿದ್ದಾನೆ. ಫೋನ್ ಮಾಡಿ ಅಂಗಡಿ ತೆಗೆಸಿ ರಿಪೇರಿ ಮಾಡಿಸುತ್ತಾರೆ. ಬಾಕಿಯಿರುವ ಕೆಲಸ, ಜನರ ಬೇಡಿಕೆಯೇ ಅವನಿಗೆ ಹುಂಬ ಧೈರ್ಯ ಕೊಟ್ಟಿದೆ. ಅದಕ್ಕೇ ಇರಬೇಕು, ಎಲ್ಲರೂ ಅಂಗಡಿ ತೆಗೆತೆಗೆ ಎನ್ನುವಾಗ ‘ಅಂಗಡಿ ಮುಚ್ಚು’ ಎನ್ನುವ ಕವಿತಾ ಮೇಲೆ ಅವನಿಗೆ ಯಮಸಿಟ್ಟು ಬಂದಿದೆ. ಆದರೆ ಅವಳು ಬಿಡುವಳೆ? ಪಿಎಎಸ್​ಐ ಕರೆಸಿ ಬಾಗಿಲು ಮುಚ್ಚಿಸಿದಳು. ಮೇಲಿನ ಅಧಿಕಾರಿಗಳು ಬಂದು ನಿಯಮ ಹೇಳಿದರೆ ಒಪ್ಪುವ ಜನರು ತನ್ನ ಮಾತಿಗೇಕೆ ಕಿಮ್ಮತ್ತು ಕೊಡುವುದಿಲ್ಲ ಎಂದು ಒಳಗೊಳಗೇ ಕುದಿದಳು. ‘ಪುಟಗೋಸಿ ಹೆಂಗ್ಸು ಅವ್ಳು. ಬಂದು ಬಾಕ್ಲು ಮುಚ್ಚು ಅಂತಾಳೆ, ಏನು ಅವ್ಳಜ್ಜ ದುಡ್ ಕೊಡ್ತಾನಾ ಅಂಗ್ಡಿ ಸಾಲ ತರ‍್ಸುಕೆ?’ ಎಂದು ಎಲ್ಲರೆದುರೇ ಹೇಳಿದ ಅವನ ಮಾತು ಕಿವಿಯಲ್ಲಿ ರಿಂಗಣಿಸುತ್ತದೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಇವನದು ಈ ಕತೆಯಾದರೆ ಪಕ್ಕದ ಹಳ್ಳಿಯ ದುಬಾಯಿ ರಿಟರ್ನ್ ವ್ಯಕ್ತಿಯದು ಮತ್ತೊಂದು ಕತೆ. ಆ ಹಳ್ಳಿಯಲ್ಲಿ ಪಾಸಿಟಿವ್ ಇಲ್ಲ ಎನ್ನುವಷ್ಟು ಕಡಿಮೆ. ಅವ ಏರ್‌ಪೋರ್ಟಿನಿಂದ ಸೀದಾ ಕ್ವಾರಂಟೈನ್ ಕೇಂದ್ರಕ್ಕೆ ಹೋಗಿದ್ದ. ನೆಗೆಟಿವ್ ಆಗಿ ಐದು ದಿನವಾದರೂ ಊರಿಗೆ ಬರಲು ಆಗುತ್ತಿಲ್ಲ. ಅವನ ಪಕ್ಕದ ಮನೆಯವರು ತಗಾದೆ ಮಾಡುತ್ತಿದ್ದಾರೆ. ‘ಕೊರೊನ ಹೌದಾದ್ರು ಟೆಸ್ಟಲ್ಲಿ ಇಲ್ಲ ಅಂತ್ಲೇ ಬತ್ತದಂತೆ. ಅವಂಗೆ ಜ್ವರಗಿರ ಬಂದು ರ‍್ಗೆಲ್ಲ ಹಬ್ಬಿಸಿದ್ರೆ ನಾವು ಸುಮ್ನಿರಲ್ಲ’ ಎಂದು ಧಮಕಿ ಹಾಕಿದ್ದಾರೆ. ಸ್ವತಃ ಅವನಮ್ಮನಿಗೇ ಹೆದರಿಕೆಯಂತೆ. ಅದಕ್ಕೇ ಹೋಟೆಲ್ ರೂಮಿನಲ್ಲಿ ಉಳಿದುಕೊಂಡಿದ್ದಾನೆ. ಊರಿನ ಹಿರಿಯರಿಗೆ ಫೋನ್ ಮಾಡಿ ಬರುವ ಬಗ್ಗೆ ಕೇಳುತ್ತಿದ್ದಾನೆ. ಕವಿತಾಗೂ ಕರೆ ಮಾಡಿ, ‘ಮೇಡಂ’ ಎಂದು ಸಂಬೋಧಿಸಿದಾಗ ಅವಳು ತನ್ನ ಕಿವಿಗಳನ್ನು ತಾ ನಂಬಲಿಲ್ಲ.

‘ಸರ್, ಊರೋರನ್ನೆಲ್ಲ ಯಾಕ್ ಕೇಳ್ತಿರ? ಎಲ್ಲರ‍್ನೂ ಒಪ್ಸಿ ಮನೆಗೆ ಬರದು ಅಂದ್ರೆ ಇನ್ನೊಂದು ತಿಂಗ್ಳು ನೀವು ಹೋಟ್ಲಲ್ಲಿರಬೇಕು. ಸುಮ್ನೆ ಕ್ವಾರಂಟೈನ್ ಮುಗುದ್ಮೇಲೆ ಬರ‍್ತ ಇರಿ. ಮನೆಯಿಂದ ಒಂದೆರೆಡು ವಾರ ಹೊರಗೆ ಹೋಗ್ಬೇಡಿ. ಮನೇಲೂ ಒಂದ್ಕಡೆ ಇದ್ಬಿಡಿ. ಬರ‍್ತ ಮನೆಯವ್ರೂ, ಉಳಿದೋರೂ ಸುಮ್ಮನಾಗ್ತಾರೆ. ಕೊರೊನ ಬರೋದಾದ್ರೆ ನಿಮ್ಮಿಂದ್ಲೆ ಬರಬೇಕಾ? ಇಲ್ಲಿ ಆಗ್ಲೇ ಬೇಕಾದಷ್ಟು ಇದೆ’ ಎಂದಳು. ತನಗೆ ಸರ್ ಎಂದು ಕರೆದದ್ದೇ ಅಲ್ಲದೆ ಬನ್ನಿ ಎಂಬ ಭರವಸೆ ನೀಡಿದ ಅವಳ ಮೇಲೆ ಅವನಿಗೆ ತುಂಬ ವಿಶ್ವಾಸ ಹುಟ್ಟಿತ್ತು.

ತನ್ನ ಏರಿಯಾದಲ್ಲೇ ಹೆಚ್ಚು ಗಡ್‌ಬಡ್ ಆಗುತ್ತಿದೆಯೆ? ಅವೇರ್​ನೆಸ್ ಕೊಟ್ಟದ್ದು ಸಾಕಾಗಲಿಲ್ಲವೇ ಎಂದುಕೊಳ್ಳುವಾಗ ಆ ಮನ ಕಲಕುವ ಘಟನೆ ನೆನಪಾಯಿತು. ಬೆಂಗಳೂರಿನಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿದ್ದ ಅವನ ಕುಟುಂಬದ ಎಲ್ಲರೂ ಅಲ್ಲಿ ಪಾಸಿಟಿವ್ ಆದರು. ಇವನಿಗೆ ಸೀರಿಯಸ್ ಆಗಿ, ಬೆಂಗಳೂರಿನಲ್ಲಿ ಬೆಡ್ ಸಿಗದೇ ಇಲ್ಲಿಯ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸಿನಲ್ಲಿ ಬಂದು ಸೇರಿದ. ಗುಣವಾದರೆ ಬೆಳ್ಳಿಮಕ್ಕಿ ಹನುಮಂತ ದೇವರಿಗೆ ಬಂಗಾರದ ಮುಖಕವಚ ಮಾಡಿಕೊಡುವೆನೆಂದು ಹರಕೆ ಹೊತ್ತಿದ್ದ. ಆದರೆ ಒಂದು ಮಧ್ಯಾಹ್ನದ ಊಟ ಮುಗಿಸಿ ಬೆಡ್ ಮೇಲೆ ಕೂತವ ಇದ್ದಕ್ಕಿದ್ದಂತೆ ಕುಸಿದು ತೀರಿಕೊಂಡ. ವಯಸ್ಸಾದ ತಾಯ್ತಂದೆಗಳಿಗೆ ಏನು ಮಾಡುವುದೋ ತಿಳಿಯಲಿಲ್ಲ. ಬೆಂಗಳೂರಿನಲ್ಲಿ ಪಾಸಿಟಿವ್ ಆಗಿ ಇಬ್ಬರು ಮಕ್ಕಳೊಂದಿಗೆ ಮನೆವಾಸದಲ್ಲಿದ್ದ ಹೆಂಡತಿಗೂ ಶವವನ್ನು ಅಲ್ಲಿಗೆ ತರಿಸಿಕೊಳ್ಳಲು ಆಗಲಿಲ್ಲ. ನೆಂಟರಿಷ್ಟರು ಹೆದರಿ ಬಳಿ ಸುಳಿಯಲಿಲ್ಲ. ಒಂದು ವಾರ ಮಾರ್ಚುರಿಯಲ್ಲಿ ಕಳೆದ ಅವನ ದೇಹ ಕೊನೆಗೆ ಜಿಲ್ಲಾ ಕೇಂದ್ರದ ಮುಸ್ಲಿಂ ಬಾಂಧವರ ತಂಡವೊಂದರಿಂದ ಹಿಂದೂ ವಿಧಿವಿಧಾನದ ಪ್ರಕಾರ ಅಂತ್ಯ ಸಂಸ್ಕಾರ ಕಂಡಿತು. ಒಂದು ಮತದವರನ್ನು ಗುರಿಯಾಗಿಸಿ ಅವರಿಂದಲೇ ಕೊರೊನಾ ಹರಡುತ್ತಿರುವುದು ಎಂದು ನಿಂದಿಸುವವರ ಹಗೆಯ ಮಾತುಗಳು ಈ ಪ್ರಕರಣದ ಬಳಿಕ ಸ್ವಲ್ಪ ಶಮನವಾದೀತು ಎಂದು ಆಶಾ ಭಾವನೆ ತಳೆದಳು. ಆ ಸುದ್ದಿಯನ್ನೇ ವಾಟ್ಸಪ್ ಸ್ಟೇಟಸ್ ಮಾಡಿ ಹಾಕಿಕೊಂಡಿದ್ದಾಳೆ.

ಆದರೆ ಕೋವಿಡ್‌ನಿಂದ ಸತ್ತರೆ ಬಂಧುಗಳಿಂದ ಪ್ರೀತಿಯ ವಿದಾಯವಿಲ್ಲ, ಗೌರವವೂ ಸಿಗುವುದಿಲ್ಲ ಎಂಬ ಸತ್ಯ ಅವಳ ಒಳಗನ್ನೇ ಬಗೆದು ನೋವುಂಟುಮಾಡಿತು. ಅದಕ್ಕೆ ಸರಿಯಾಗಿ ಅವಳ ಬದುಕಿತ್ತು. ಬಡತನದ ತವರಿನವರು ಪಿಯುಸಿಗೇ ಓದು ಬಿಡಿಸಿ ಮದುವೆ ಮಾಡಿದ್ದರು. ತವರಿನಷ್ಟೇ ಬಡತನದ ಗಂಡನ ಮನೆ. ಗಂಡನಾದರೂ ತಕ್ಕ ಜೊತೆಯಾದನೇ? ದುಡಿದದ್ದಷ್ಟನ್ನೂ ಕುಡಿದು ಕಳೆದು, ತನ್ನ ಪ್ರಾಣವನ್ನೂ ಕಳೆದುಕೊಂಡಿದ್ದ. ಹೆಚ್ಚು ಓದಬೇಕೆಂಬ ಹಂಬಲವಿದ್ದ ಚುರುಕಿನ ಹುಡುಗಿ ಎಳೆಯ ವಿಧವೆಯಾಗಿ ಇಬ್ಬರು ಮಕ್ಕಳ ತಾಯಿಯಾಗಿ ಗಂಡನ ಮನೆಯ ಕೂಡು ಕುಟುಂಬದಲ್ಲಿ ಕಳೆದುಹೋಗಿದ್ದಳು. ಆ ಹೊತ್ತಿಗೆ ಸಿಕ್ಕ ಆಶಾ ಕಾರ್ಯಕರ್ತೆಯ ಕೆಲಸ ತನ್ನ ಮೇಲೇ ತನಗೆ ಗೌರವ, ಭರವಸೆ ಹುಟ್ಟಿಸಿತ್ತು. ಆದರೆ ಕೋವಿಡ್ ಶುರುವಾದಾಗ ಕೆಲಸ ಬಿಡು ಎಂಬ ಒತ್ತಡ ಮನೆಯಲ್ಲಿ ಕೇಳಿಬಂತು. ಅವಳಿಂದಲೇ ಕಾಯಿಲೆ ಬರಬಹುದು ಎಂಬಂತೆ ಮನೆಯವರು ವರ್ತಿಸಿದರು. ಸ್ವತಂತ್ರ ಬದುಕಿಗೆ ಇಷ್ಟಾದರೂ ಆಧಾರವಾದ ಕೆಲಸ ಬಿಡಲು ಒಪ್ಪದೇ ಮನೆಯನ್ನೇ ಬಿಟ್ಟಳು. ತನ್ನ ತಾಯಿ, ಮಕ್ಕಳೊಂದಿಗೆ ಒಂದು ಸಣ್ಣಗೂಡಿಗೆ ಬಂದುಬಿಟ್ಟಿದ್ದಾಳೆ. ಈ ಸಮಾಜದಲ್ಲಿ ಒಂಟಿ ಹೆಣ್ಣಾಗಿ ಬದುಕುವುದು ಎಂದರೇನೆಂಬ ಅರಿವಾಗುತ್ತಿದೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಯಾಕೋ ಒಮ್ಮೆ ಡಾಕ್ಟರ್ ಮೇಡಂ ನೋಡಿಬರುವಾ ಎನಿಸಿತು. ಅವರ ಕ್ಲಿನಿಕ್ಕಿಗೆ ಆವಾಗೀವಾಗ ಹೋಗಿ ಬರುತ್ತಾಳೆ. ಅವರಿಬ್ಬರ ನಡುವೆ ಊರವರ ಕಾಯಿಲೆ-ಸಾವು-ಬಸುರು-ಜನನದ ಮಾಹಿತಿ ವಿನಿಮಯ, ಜೊತೆಗಷ್ಟು ಆಪ್ತ ಸಮಾಲೋಚನೆ ನಡೆಯುತ್ತದೆ. ಕ್ಲಿನಿಕ್‌ನ ಒಂದು ಪಕ್ಕ ಮೇಡಂ ಇಟ್ಟಿರುವ ‘ಭಗತ್‌ಸಿಂಗ್ ಓದುವ ಮನೆ’ಯಿಂದ ಪುಸ್ತಕ, ಪತ್ರಿಕೆ ತಂದು ಓದುತ್ತಿರುತ್ತಾಳೆ.

ಅಂದು ತಿಂಡಿ ಮುಗಿಸಿ, ಮಾಸ್ಕ್, ಶೀಲ್ಡ್ ತೊಟ್ಟುಕೊಂಡಳು. ಬ್ಯಾಗಿನಲ್ಲಷ್ಟು ಅನ್ನ ಕಟ್ಟಿಕೊಂಡು, ನೀರಬಾಟಲಿ, ಸ್ಯಾನಿಟರಿ ಪ್ಯಾಡ್ ಇಟ್ಟುಕೊಂಡು ಚಿಂಟು ಟಿವಿಯಲ್ಲಿ ಮುಳುಗಿಹೋದ ಮಕ್ಕಳನ್ನು ಕಂಡು ವ್ಯಾಕುಲಳಾಗಿ ಹೊರಬಿದ್ದಳು. ಕ್ಲಿನಿಕ್ಕಿಗೆ ಮೊದಲು ಹೋಗುವಾ ಅಂತ ಹೋದರೆ ಜನರ ಗ್ವಾಲೆ! ಇದೇನು? ರಸ್ತೆಯ ತನಕ ಜನ ತುಂಬಿದ್ದಾರೆ! ಮೇಡಂ ಸಹಾಯಕ, ಸಹಾಯಕಿಯರು ದೂರ ಕೂರಿಸಲು, ಮಾಸ್ಕ್ ಹಾಕಿಸಲು ಹೆಣಗುತ್ತ ಕೂಗುತ್ತಿದ್ದಾರೆ. ರೋಗಿಗಳ ಜಂಗುಳಿಯಲ್ಲಿ ಅವ ಕಂಡ. ಅವ ಪಾಸಿಟಿವ್ ಬಂದಿದ್ದ. ಕೋವಿಡ್ ಆಸ್ಪತ್ರೆಗಲ್ಲದೆ ಬೇರೆಕಡೆ ಹೋಗಬಾರದು ಎಂದು ಮನೆಗೆ ಹೋಗಿ ಹೇಳಿಬಂದಿದ್ದಳು. ಆದರೂ ಇಲ್ಲಿ ಬಂದಿದ್ದು ಕಂಡು ಸಿಟ್ಟುಬಂತು. ‘ರಿಪೋರ್ಟ್ ಮಾಡ್ತೀನಂತ ಗನಾ ಹೇಳಬೇಕು’ ಎಂದು ಹುಡುಕಿದರೆ ಅವಳನ್ನು ನೋಡಿದ್ದೇ ಅವ ಪರಾರಿಯಾದ.

‘ಭಾರತ ದೇಶದಲ್ಲಿ ಶೇ 30 ರಷ್ಟು ಜನರಿಗೆ ಒಂದು ಕೋಣೆಯ ಮನೆಯಿದೆ. ಶೇ 33 ಜನರಿಗೆ ಎರಡು ಕೋಣೆಯ ಮನೆಯಿದೆ. ಶೇ 14 ಜನ ಸ್ಲಮ್ಮುಗಳಲ್ಲಿ ವಾಸಿಸುತ್ತಾರೆ.’

ಓದುಮನೆಯ ಪತ್ರಿಕೆಯೊಂದರಲ್ಲಿ ಸುದ್ದಿ ವಿಶ್ಲೇಷಣೆ ಓದಿ ಕವಿತಾ ಬೆಚ್ಚಿ ಬಿದ್ದಳು. ಅರೆ, ಪಾಸಿಟಿವ್ ಇರುವವರನ್ನು ಹೋಂ ಐಸೊಲೇಷನ್ ಅಂತ ಕಳಿಸಿದರೆ ಶೇ. 77  ಜನರಿಗೆ ಅಂತಹ ಮನೆಗಳೇ ಇಲ್ಲ! ಐಸೊಲೇಷನ್ ಸಾಧ್ಯ ಇರುವುದು ಶೇ. 23 ಜನರಿಗೆ ಮಾತ್ರ. ಹಾಗಾದರೆ ಏನು ಮಾಡುತ್ತಿದ್ದೇವೆ ನಾವು? ತಾನು ಹೇಳುತ್ತಿರುವುದರಲ್ಲೇ ಇರುವ ಅಸಮರ್ಪಕತೆ ಆ ಕ್ಷಣ ಅವಳ ಅರಿವಿಗೆ ದಕ್ಕಿತು. ಇದುವರೆಗೆ ರೋಗದ, ರೋಗ ನಿಯಂತ್ರಣದ ದೃಷ್ಟಿಯಿಂದಷ್ಟೇ ಕೊರೊನಾವನ್ನು ನೋಡಿ ಜನರನ್ನು ಬೈಯುತ್ತಿದ್ದವಳು ಈ ಎರಡು ಸಾಲು ಓದಿದ್ದೇ ಯೋಚನಾ ಮಗ್ನಳಾದಳು. ರೋಗಿಯ ದೃಷ್ಟಿಯಿಂದ ರೋಗವನ್ನು ಅರ್ಥ ಮಾಡಿಕೊಳ್ಳದೇ ಇರುವುದೇ ಕಾಯಿಲೆ ನಿಯಂತ್ರಣಕ್ಕೆ ಬರದಿರಲು ಮುಖ್ಯ ಕಾರಣ ಎನ್ನುವುದು ಅವಳಿಗೆ ಹೊಳೆದು ಹೋಯಿತು. ಆ ಗ್ಯಾರೇಜಿವನ, ಹುಡುಗರು, ಸತ್ತ ಬೆಂಗಳೂರಿಗನ ಹೆಂಡತಿ ತಾಯ್ತಂದೆ, ದುಬೈಯವನ ಕುಟುಂಬದವರು ಮೊದಲಾಗಿ ಉಲ್ಟಾ ದಿಕ್ಕಿನಲ್ಲಿ ಪಾಸಿಟಿವ್ ಆದವರ ಬಗ್ಗೆ ಯೋಚಿಸಿದಳು. ಪೇಶೆಂಟುಗಳ ಕಡಲಲ್ಲಿ ದಾರಿ ಮಾಡಿಕೊಂಡು ಒಳಗೆ ಹೋದಳು.

‘ಮೇಡಂ, ಆರಾಮಿದಿರ ತಾನೆ? ಅದೇ ಆ ಪಾಸಿಟಿವ್ ಇದ್ದೋನು ಇಲ್ಲಿ ಕೂತಿದ್ದ. ನನ್ನ ನೋಡಿದ್ದೇ ಓಡೋದ. ನೀವು ಹುಶಾರು’ ಎಂದಳು. ಅವರಾದರೋ,

‘ಅದು ಅವನೊಬ್ಬನ ಕತೆಯಲ್ಲ ಕವಿತಾ. ಇಂಥ ಎಷ್ಟು ಜನ ದಿನಾ ಬರ‍್ತಾರೋ? ಯಾರಿಗೆ ಯಾರು ಹೇಳೋರು? ಎಷ್ಟಂತ ಹೇಳೋದು? ಯಾರಿಗೂ ನಾವು ಹೇಳೋ ಮಾತಿನ ಬಗ್ಗೆ ನಂಬಿಕೆ ಇಲ್ಲ. ಇತ್ತೀಚೆಗೆ ನಂಗೇ ನನ್ನ ಮಾತಿನ ಮೇಲೆ ನಂಬಿಕೆ ಕಮ್ಮಿಯಾಗ್ತ ಇದೆ’ ಎಂದರು.

ಹೌದು. ಅವಳಿಗೂ ಬರಬರುತ್ತ ತನ್ನ ಮಾತಿನ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಪಾಸಿಟಿವ್ ಇರಬಹುದು ಎಂದುಕೊಂಡ ಎಷ್ಟೋ ಜನ ಟೆಸ್ಟೂ ಮಾಡಿಕೊಳ್ಳದೆ, ಔಷಧವನ್ನೂ ತೆಗೆದುಕೊಳ್ಳದೆ, ಏನೂ ಅವಘಡ ಆಗದೇ, ಏನಾಯ್ತು ನೋಡಿದ್ಯಾ ಎಂದು ಅವಳನ್ನೇ ಹಂಗಿಸುವಂತೆ ಆರಾಮಾಗಿಬಿಟ್ಟಿದ್ದಾರೆ. ಇದು ಅವಳಲ್ಲಿ ಕೊಂಚ ಧೈರ್ಯ ತುಂಬಿರುವುದು ಸುಳ್ಳಲ್ಲ. ಹಾಗಾದರೆ ಈ ಕಾಯಿಲೆ ನಿಜಕ್ಕೂ ಸರ್ಕಾರ ಹೇಳುತ್ತಿರುವಷ್ಟು ಸೀರಿಯಸ್ ಅಲ್ಲವೆ?

‘ಸತ್ಯಕ್ಕೆ ಬಾಳ ಮುಖಗಳಿರ‍್ತಾವೆ ಕವಿತಾ. ಎಲ್ಲವನ್ನು ಮುಟ್ಟಿ ನೋಡಬೇಕು. ಇಲ್ದಿದ್ರೆ ಗೊಣಕ್ಕಂತ ಸತ್ತೋಗಿಬಿಡ್ತೀವಿ. ನಾ ಏನಂದ್ಕಂಡಿದೀನಿ ಗೊತ್ತ? ನಿನ್ನೆದೇ ಯೋಚನೆ ಮಾಡಿದ್ರೆ ಡಿಪ್ರೆಸ್ ಆಗುತ್ತೆ. ನಾಳೆದೇ ಯೋಚನೆ ಮಾಡಿದ್ರೆ ಟೆನ್ಶನ್ ಆಗುತ್ತೆ. ಅದಕ್ಕೇ ಈ ಮಹಾಪ್ರಳಯ ಮುಗಿಯೋತಂಕ ಇವತ್ತಿಂದು ಇವತ್ತಿಗೆ, ಎಷ್ಟು ಸಾಧ್ಯನೋ ಅಷ್ಟು ಕೆಲಸ, ಸಹಾಯ. ಶಾಂತಿ ಸೃಷ್ಟಿಸಿಕೊಳ್ಳದಿದ್ರೆ ಏನೂ ಮಾಡಕ್ಕಾಗಲ್ಲ. ಸುಮ್ನೆ ಶಕ್ತಿಪಾತ’ ಎಂದರು ತಣ್ಣಗೆ.

‘ಆದ್ರೆ ಈ ಜನಾ ಯಾಕಿಷ್ಟ್ ಸುಳ್ಳಾಡ್ಬೇಕು ಮೇಡಂ? ಮನೆಮನೆ ತಿರುಗಿ ಸರ್ವೀಸ್ ಕೊಟ್ರೂ ತಲೆಗೊಂದು ಮಾತಾಡ್ತಾರೆ. ಒಂದು ಕೇಸ್ ಪಾಸಿಟಿವ್ ಬಂದ್ರೆ ಆಶಾಗೆ ದುಡ್ಡು ಬರುತ್ತಂತೆ, ಅದ್ಕೇ ಮನೆಮನೆ ಅಡ್ಡಾಡ್ತಾಳೆ ಅಂತಾರಂತೆ. ವ್ಯಾಕ್ಸೀನ್ ಕೊಡುವಾಗ್ಲೂ ಹಾಗೇ. ತಮ್ಮ ಒಳ್ಳೇದಕ್ಕೆ ಮಾಡದನ್ನೂ ಜನ ಯಾಕ್ ಅರ್ಥ ಮಾಡ್ಕಳಲ್ಲ?’ ಮಾತಾಡುವ ದನಿಯಲ್ಲೇ ಕೋಪ ಉಕ್ಕುತ್ತಿತ್ತು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ನಂನಮ್ಮ ಕಾಯಿಲೆಯನ್ನ, ಊನವನ್ನ ಒಪ್ಪಿ, ತೋರಿಸಿಕೊಳ್ಳೋಕೆ ಯಾರ್ಗೂ ಇಷ್ಟ ಇರಲ್ಲ ಕವಿತಾ. ಎಲ್ರೂ ಮುಚ್ಚಿಡಕ್ಕೆ ನೋಡ್ತೀವಿ. ನಾನೂ ಅಷ್ಟೆ, ನೀವೂ ಅಷ್ಟೆ. ‘ನಾನು’ ಅಂದ್ರೆ ಏನೋ ಅಂದ್ಕೊಂಡಿರ‍್ತಿವಲ್ಲ, ಹಾಗಲ್ಲ ಅಂತಾದಾಗ ಗಾಬರಿಯಾಗುತ್ತೆ. ಇದೆಲ್ಲ ಸೈಕಾಲಜಿ. ತಲೆಬಿಸಿ ಮಾಡ್ಬೇಡಿ. ಕರ್ತವ್ಯ ಅಂತ ಮಾಡ್ತಾ ಹೋಗಣ. ಈ ಮಹಾ ಪ್ರವಾಹನ ಈಜಿ ಆಚೆದಡ ಸೇರಣ, ಆಯ್ತಾ?’ ಎಂದು ನಗುತ್ತ ಸ್ಟೆಥ್‌ನಲ್ಲೇ ಬೈ ಎಂದರು.

ಮನೆ ಭೇಟಿಯ ದಾರಿಯಲ್ಲಿ ಮಾಸ್ತಿಯಮ್ಮನಿಗೆ ವಂದಿಸಿ ಹೊರಬೀಳುವಾಗ ಇದ್ದಕ್ಕಿದ್ದಂತೆ, ಎಷ್ಟು ಮಂದಿರ ಕಟ್ಟಿದರೂ ಜನ ಹೀಗೇ ಇರುವುದಾದರೆ ದೇವರಾದರೂ ಯಾಕೆ ಬೇಕು ಎನಿಸಿತು. ಅಯ್ಯೋ, ದೇವರ ಬಗ್ಗೆ ಹೀಗೆಂದುಕೊಂಡೆನಲ್ಲ ಎಂದು ಭಯವಾಗಿ ಎಡಬಲ ಗಲ್ಲ ತಟ್ಟಿಕೊಂಡಳು. ಮಂದಿರ ಕಟ್ಟಿಸಿ ಹೊರಗಿನ ದೇವರಿಗಾಗಿ ಬಡಿದಾಡುತ್ತ ಒಳಗಿನ ದೇವರನ್ನು ಕಾಣದೇ ಇರುವುದಕ್ಕೆ ಹೀಗಾಗಿರಬಹುದು ಎಂದ ಒಳದನಿ ಕೇಳಿತು. * ಪದ ಅರ್ಥ ಗ್ವಾಲೆ = ಗುಂಪು * ಫೋಟೋ : ಎಸ್. ವಿಷ್ಣುಕುಮಾರ್

* ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ -8 ; ‘ಈ ಲೇಡೀಸನ್ನ ನಂಬಬಾರದು ಲವ್ ಅಂತೂ ಮಾಡಲೇಬಾರದು’ 

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ನಿಂ ತಾಲೂಕಿನ ಟೆಸ್ಟ್ ಟಾರ್ಗೆಟ್ ರೀಚ್ ಆಗಿಲ್ಲ, ಯಾಕಯ್ಯಾ?’

Published On - 9:39 am, Mon, 7 June 21