Covid Diary : ಕವಲಕ್ಕಿ ಮೇಲ್ ; ‘ನಿಂ ತಾಲೂಕಿನ ಟೆಸ್ಟ್ ಟಾರ್ಗೆಟ್ ರೀಚ್ ಆಗಿಲ್ಲ, ಯಾಕಯ್ಯಾ?’

Covid Diary : ಕವಲಕ್ಕಿ ಮೇಲ್ ; ‘ನಿಂ ತಾಲೂಕಿನ ಟೆಸ್ಟ್ ಟಾರ್ಗೆಟ್ ರೀಚ್ ಆಗಿಲ್ಲ, ಯಾಕಯ್ಯಾ?’

Government : ‘ಮಿನಿಸ್ಟರ್ ಆಫೀಸಿಂದ ಒಂದೇ ಸಮ ಜೆಡಿ ಕಾಲ್. ಕಾಂಟಾಕ್ಟ್ ಟ್ರೇಸಿಂಗ್ ಮಾಡಿ, ಡೆತ್‌ರೇಟ್ ಕಮ್ಮಿ ಮಾಡಿ. ನೋಡು, ಆಕ್ಸಿಜನ್ 50, 60 ಆದ್ಮೇಲೆ ಉಪಯೋಗಿಲ್ಲ ಅಂತ ಪ್ರೈವೇಟ್​ನವರು ತಮ್ಮ ಕೇಸನ್ನ ನಮಿಗ್ ಹೊತ್ತಾಕಕ್ಕೆ ನೋಡ್ತಾರೆ. ಅಲ್ಲಿಂದ ಬಂದವ್ರು ಇಲ್ಲಿ ಸಾಯ್ತಾರೆ. ಡೆತ್‌ರೇಟ್ ಗೌರ್ಮೆಂಟಲ್ಲಿ ಜಾಸ್ತಿ ಅಂತ ಬೊಬ್ಬೆ ಬೀಳುತ್ತೆ. ಪ್ರೈವೇಟಿಂದ ಬಂದ ಹೋಪ್ಲೆಸ್ ಕೇಸಿಗೆ ಬೆಡ್ ಕೊಡ್ಬೇಡಿ ಇನ್ನು’

ಶ್ರೀದೇವಿ ಕಳಸದ | Shridevi Kalasad

|

Jun 06, 2021 | 2:53 PM

ಅಂತೂ ಆಸ್ಪತ್ರೆ ಮುಟ್ಟಿ, ತುಂಬಿ ತುಳುಕುವ ಕೋವಿಡ್ ವಾರ್ಡ್ ರೌಂಡ್ಸ್ ಮಾಡಿ ಮುಂದಿನವರಿಗೆ ಚಾರ್ಜ್ ಒಪ್ಪಿಸಿದರು. ಮತ್ತೆರೆಡು ಹೆರಿಗೆ ಕೇಸುಗಳು, ಒಂದು ಗರ್ಭಪಾತ ಎಂದು ಇಡಿಯ ದಿನ ಅಲ್ಲಿ, ಇಲ್ಲಿ ತಾರಾಡುವುದೇ ಆಯಿತು. ಲಸಿಕಾ ಕೇಂದ್ರದಲ್ಲೂ ಗಲಿಬಿಲಿ, ಗಲಾಟೆ. ವಿಶೇಷವೆಂದರೆ ಅವರ ಡ್ಯೂಟಿಯಲ್ಲಿ ಕೋವಿಡ್ ವಾರ್ಡಿನಲ್ಲಿ ಸಾವು ಆಗಿರಲಿಲ್ಲ. ಎರಡನೆಯ ದಿನವೂ ಸಾವಿಲ್ಲದೇ ಕಳೆಯುತ್ತಿದೆ ಎಂದುಕೊಳ್ಳುತ್ತ ಚಣ ಕುಳಿತರು. ಸ್ಥಳೀಯ ಸಂಜೆ ಪತ್ರಿಕೆಯಲ್ಲಿ, ‘ಸರ್ಕಾರಿ ಆಸ್ಪತ್ರೆಗಳೆಂಬ ನರಕ ಕೂಪಗಳು’ ಎಂಬ ತಲೆಬರಹ ಕಾಣಿಸಿತು. ಅಲ್ಲೆಲ್ಲೋ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ. ಬೆಂಗಳೂರಿನ ವೈದ್ಯರು ಔಷಧಿ, ಆಕ್ಸಿಜನ್, ಬೆಡ್ ಮಾರಿಕೊಂಡ ಸುದ್ದಿ. ಅದರ ಪಕ್ಕದಲ್ಲೇ ಬಾಕ್ಸ್ ಐಟಂ! ‘ಕೋವಿಡ್ ರೋಗಿಗಳು ಅಡ್ಮಿಟ್ ಆದರೆ ವೈದ್ಯರಿಗೆ, ನರ್ಸುಗಳಿಗೆ ಕಮಿಷನ್ ಬರುವುದೆ?

*

ತಾಲೂಕಾ ಸರ್ಕಾರಿ ಆಸ್ಪತ್ರೆಯ ಹೆರಿಗೆ ವೈದ್ಯರ ಮನೆ.

ಈಗ ಹೆರಿಗೆಯ ಜವಾಬ್ದಾರಿಯ ಜೊತೆಗೆ ಇಪ್ಪತ್ನಾಲ್ಕು ತಾಸಿನ ಕೋವಿಡ್ ವಾರ್ಡ್ ಡ್ಯೂಟಿಯೂ ಅವರ ಮೇಲಿದೆ. ಈ ವಾರ ಅವರು ಕೋವಿಡ್ ಮಾಡರೇಟರ್ ಆಗಿದ್ದಾರೆ. ನೈಟ್‌ಡ್ಯೂಟಿ ಮುಗಿಸಿ, ಬೆಳಿಗ್ಗೆ ಮನೆಗೆ ಬಂದರು. ಬೇಗ ಸ್ನಾನ ಮಾಡಿ ಮತ್ತೆ ಒಂಭತ್ತರ ಒಳಗೆ ಆಸ್ಪತ್ರೆಯಲ್ಲಿರಬೇಕು. ರಾತ್ರಿ ಎರಡು ಡೆಲಿವರಿ ಆಗಿವೆ. ಇತ್ತ ಕೋವಿಡ್ ವಾರ್ಡಿಗೂ ರೋಗಿಗಳು ಬಂದು ಅಡ್ಮಿಟ್ ಆಗುತ್ತಲೇ ಇದ್ದರು. ಒಂದು ತಾಸೂ ನಿದ್ದೆಯಾಗಿಲ್ಲ. ಆದರೂ ಮರುದಿನಕ್ಕೆ ಸಿದ್ಧಗೊಳ್ಳಬೇಕು. ಈಗ ಎಲ್ಲ ವೈದ್ಯರೂ ದಿನಾ ಒಬ್ಬರಂತೆ ಕೋವಿಡ್ ವಾರ್ಡ್ ಡ್ಯೂಟಿ ಮಾಡಬೇಕು. ತಂತಮ್ಮ ಸ್ಪೆಷಾಲಿಟಿಯ ಜೊತೆಗೆ ಕ್ಯಾಷುವಲ್ಟಿಯನ್ನೂ, ಕೋವಿಡ್ ಕೇಸುಗಳನ್ನೂ ನೋಡಿಕೊಳ್ಳಬೇಕು. ರಜೆಗಿಜೆ ಕೇಳುವಂತಿಲ್ಲ. ಡ್ಯೂಟಿ ಆಫ್ ಇಲ್ಲ. ತಮ್ಮ ಪೇಶೆಂಟ್ ಸಂಪರ್ಕದಿಂದ ವೈರಸ್ಸು ಮನೆಯವರಿಗೆ ಹಬ್ಬೀತೋ ಎಂಬ ಭಯದಿಂದ ಬಹುತೇಕ ವೈದ್ಯರುಗಳು ಐಬಿಯಲ್ಲೋ, ಹೋಟೆಲಿನಲ್ಲೋ ಉಳಿಯುತ್ತಾರೆ. ವಾರಕ್ಕೊಮ್ಮೆ ಮನೆಗೆ ಬಂದು ಬಟ್ಟೆಬರೆ ತಗೊಂಡು ಹೋದರೆ ಆಯಿತು.

ವಾರದಿಂದ ಸಂಗ್ರಹಗೊಂಡ ಬಟ್ಟೆ ತೊಳೆಯಲು ಹಾಕಿ, ತೊಳೆದ ಬಟ್ಟೆಯನ್ನು ಬ್ಯಾಗಿಗೆ ತುಂಬುತ್ತಿದ್ದರು. ತಿಂಡಿಗೆಂದು ಸರಸರ ದೋಸೆ, ಮಾವಿನ ಹಣ್ಣಿನ ಸೀಕರಣೆ ತಯಾರು ಮಾಡುತ್ತಿದ್ದ ಹೆಂಡತಿಗೆ ಬೇಗಬೇಗ ಮಾಡು ಎಂದು ಮತ್ತಷ್ಟು ಅವಸರಪಡಿಸಿದರು.

‘ಎಲ್ಲ ಸುಸೂತ್ರ ನಡಿತ ಇತ್ತು. ಇದೆಂಥ ರೋಗ ಬಂದ್ಬಿಡ್ತಲ? ದಿನಾ ಸಾವು, ದಿನಾ ಸಾವು, ಆಸ್ಪತ್ರೆಗೆ ಹೋಗದೇ ಬೇಡ ಅನಿಸ್ತಿದೆ’ ಅಂತ ಅದೆಷ್ಟನೆಯದೋ ಬಾರಿ ಅಂದುಕೊಂಡು ಶೇವ್ ಮಾಡತೊಡಗಿದರು. ಕಳೆದವಾರ ಕೋವಿಡ್ ಬಸುರಿಗೆ ಡೆಲಿವರಿಯಾಗಿ ಬ್ಲೀಡಿಂಗ್ ನಿಲ್ಲದೆ ಮಣಿಪಾಲಕ್ಕೆ ಹೋಗುವಾಗ ತೀರಿಕೊಂಡಿದ್ದಳು. ಅವಳ ಮನೆಯವರು ಪೊಲೀಸ್ ಕಂಪ್ಲೇಂಟ್ ಕೊಟ್ಟು, ಬೈದು, ಸಿಸ್ಟರುಗಳಿಗೆ ಹೊಡೆಯಲು ಮುಂದಾಗಿದ್ದರು. ಅವರ ಜೊತೆ ಅನಸ್ತೆಟಿಸ್ಟ್ ಆಗಿ ಹತ್ತಾರು ವರ್ಷದಿಂದ ಇದ್ದ ಗೆಳೆಯ ಕಳೆದ ತಿಂಗಳು ಕೋವಿಡ್‌ಗೆ ಬಲಿಯಾಗಿದ್ದರು. ಎಷ್ಟು ಪ್ರಾಮಾಣಿಕವಾಗಿ ದುಡಿದಿದ್ದ ಆತ? ಅಂಥವರಿಗೆ ಕಾಲವಿಲ್ಲ. ಮೈಗಳ್ಳರು, ಲೂಟಿಕೋರರು, ಇಡಿಯ ವೈದ್ಯವೃಂದಕ್ಕೇ ಕೆಟ್ಟ ಹೆಸರು ತರುವವರು ಆರಾಮಾಗಿರುತ್ತಾರೆ. ಯಾರೋ ಕೆಲವರು ಮಾಡಿದ್ದಕ್ಕೆ ಎಲ್ಲ ವೈದ್ಯರೂ ನಿಂದೆ, ಹಲ್ಲೆ ಎದುರಿಸುವಂತಾಗಿದೆ. ಯೂ ಟ್ಯೂಬಿನಲ್ಲಿ ಡಾಕ್ಟರನ್ನು ಹೊಡೆಯುವ ವೀಡಿಯೋ ನೋಡಿದ ಮೇಲೆ ಆಸ್ಪತ್ರೆಯ ವೈದ್ಯರ ತಂಡಕ್ಕೆ ಒಂದು ತರಹದ ದುಗುಡ, ಆಕ್ರೋಶ ಆವರಿಸಿದಂತಿದೆ. ಸ್ವಚ್ಛತೆಯವರು, ಸಿಸ್ಟರುಗಳು, ಲ್ಯಾಬಿನವರು, ಆಂಬುಲೆನ್ಸ್ ಡ್ರೈವರ್ ಮುಂತಾಗಿ ಎಲ್ಲರಿಗೂ ಒಂದು ತರಹದ ದಣಿವು. ಯಾರಲ್ಲಿ ಹೇಳುವುದು? ಯಾರನ್ನು ಯಾರು ನಿಯಂತ್ರಿಸುವುದು? ಒಂದೊಳ್ಳೆಯ ಮಾತು ಬರದ ತಮ್ಮ ಪ್ರೊಫೆಷನ್ನಿನ ಬಗೆಗೆ ಬೇಸರವಾಯಿತು. ಹಿಂದೆಯೇ ಆತ್ಮಮರುಕ ಹೆಚ್ಚಾಯಿತು ಎಂಬ ಎಚ್ಚರದ ನಗೆಯೂ ಸುಳಿದುಹೋಯಿತು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಸ್ನಾನಕ್ಕೆ ಹೊರಟಾಗ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಫೋನು.

‘ನಿಂ ತಾಲೂಕಿನ ಟೆಸ್ಟ್ ಟಾರ್ಗೆಟ್ ರೀಚ್ ಆಗಿಲ್ಲಲ, ಯಾಕಯ್ಯಾ?’ ‘ಟೆಸ್ಟ್ ಮಾಡಿ ಸಿಕ್ಕಾಪಟ್ಟೆ ಕೇಸ್ ಆಗ್ತಿದೆ, ಸಾಕು ನಿಲ್ಲಿಸ್ರಿ ಅಂತ ನಿನ್ನೆ ಆಫೀಸಿಂದ ಫೋನ್ ಬಂತಲ ಸರ್?’ ‘ಸುಮ್ನಿರೋ. ಯಾವ ನನ್ಮಗ ಅವ್ನು ಹಂಗೆ ಹೇಳದೋನು? ಅಲ್ಲಿ ನೋಡಿದ್ರೆ ಮಿನಿಸ್ಟರ್ ಆಫೀಸಿಂದ ಒಂದೇ ಸಮ ಜೆಡಿ ಕಾಲ್ ಮಾಡಿ ಕಾಂಟಾಕ್ಟ್ ಟ್ರೇಸಿಂಗ್ ಮಾಡಿ ಮಾಡಿ ಅಂತಿದಾರೆ. ಹೆಚ್ಚು ಕೇಸಿದ್ರೆ ಡೆತ್‌ರೇಟ್ ಕಮ್ಮಿ ಆಗುತ್ತೆ, ಟೆಸ್ಟ್ ಮಾಡಿ ಮಾಡಿ ಅಂತಿದಾರೆ. ನೋಡು, ಆಕ್ಸಿಜನ್ ೬೦, ೫೦ ಆದ್ಮೇಲೆ ಉಪಯೋಗಿಲ್ಲ ಅಂತ ಪ್ರೈವೇಟ್ನರು ತಮ್ಮ ಕೇಸ್ನ ನಮಿಗ್ ಹೊತ್ತಾಕಕ್ಕೆ ನೋಡ್ತಾರೆ. ಅಲ್ಲಿಂದ ಬಂದವ್ರು ಇಲ್ಲಿ ಸಾಯ್ತಾರೆ. ಡೆತ್‌ರೇಟ್ ಗೌರ್ಮೆಂಟಲ್ಲಿ ಜಾಸ್ತಿ ಅಂತ ಬೊಬ್ಬೆ ಬೀಳುತ್ತೆ. ಅದಕ್ಕೇ ಪ್ರೈವೇಟಿಂದ ಬಂದ ಹೋಪ್ಲೆಸ್ ಕೇಸಿಗೆ ಬೆಡ್ ಕೊಡ್ಬೇಡಿ ಇನ್ನು’ ‘ಝಡ್‌ಪಿ, ಟಿಪಿ, ಎಂಎಲ್‌ಎ ಎಲ್ರಿಂದ ತಗೊಳ್ಳಿ ಅಂತ ಒತ್ತಡ ಬರುತ್ತಲ ಸರ್.’ ‘ಯಾವನವ್ನು? ನನ್ನತ್ರ ಮಾತಾಡೂಂತ ಹೇಳಯ್ಯಾ.’

ಫೋನ್ ಕಟ್ ಆಯ್ತು. ಅವರಿಗೆ ಬೇರೆ ಫೋನು ಬಂದಿರಲು ಸಾಕು. ಬಳಿಕ ತಾಲೂಕಾ ಪಂಚಾಯ್ತಿ ಉಪಾಧ್ಯಕ್ಷೆಯ ಫೋನು.

‘ಡಾಕ್ಟ್ರೇ, ನಂ ಭಾವನ ಅಣ್ಣನ ಮಗ ಅಡ್ಮಿಟ್ ಆಗಿದಾನೆ, ಅದೇ ಕೇಶವ ಅಂತ. ಏನ್ ತೊಂದ್ರೆ ಇಲ್ಲಲ? ಎಲ್ಲ ಚೆನಾಗಿ ನೋಡ್ಕಬೇಕು ನೀವು. ನಂ ಊರ ಆಸ್ಪತ್ರೆಗೆ ಹೆಸರು ಬರಬೇಕು. ತುಂಬ ಕಂಪ್ಲೇಂಟ್ ಬರ‍್ತಿದೆ, ನಾನೇ ಜನರ ಹತ್ರ ತಡಿರಿ, ನಂ ಡಾಕ್ಟ್ರೇ ಇದಾರೆ ಅಂತ ಸುಮ್ನೆ ಮಾಡ್ತಿದೀನಿ’ ‘ಮೇಡಂ, ಅವರು ಪ್ರೈವೇಟಿಂದ ಬರುವಾಗಲೇ ಸ್ಯಾಚುರೇಷನ್ ಶೇ 70-75 ಇದೆ. ಸೀರಿಯಸ್ ಇದಾರೆ. ಅದಕ್ಕೆ ಇಲ್ಲಿ ಹೆಚ್ಚು ಏನೂ ಮಾಡಕ್ಕಾಗಲ್ಲ. ಅವರ ಕಡೆಯೋರಿಗೆ ಮುಂದೆ ಬೇಕಾದರೆ ಕರ‍್ಕಂಡು ಹೋಗಿ ಎಂದೆವು. ಮಂಗಳೂರು, ಕಾರವಾರ ಎಲ್ಲೂ ಬೆಡ್ಡಿಲ್ಲವಂತೆ. ನಮ್ಮ ಕೈಲಾದದ್ದು, ಅನುಕೂಲ ಇದ್ದಷ್ಟು ನಾವು ಮಾಡ್ತೇವೆ ಮೇಡಂ’ ‘ಹೌದಾ? ಏನೂ ತೊಂದ್ರೆ ಇಲ್ಲ ಅಂದಿದಾರೆ ಅಂತಂದ್ರು?’ ‘ಹಾಗಂದಿಲ್ಲ, ತುಂಬ ಸೀರಿಯಸ್ ಇದೆ ಅಂತನೇ ಹೇಳಿದೇವೆ.’

ಮೈ ಒರೆಸಿಕೊಳ್ಳುವಾಗ ಸಿಪಿಐ ಫೋನು. ಅವರ ಒಬ್ಬ ಕಾನ್‌ಸ್ಟೇಬಲ್ ಅಡ್ಮಿಟ್ ಆಗಿದಾನೆ. ಅವನಿಗೆ ಕೈ ತರತರ ನಡುಗುತ್ತದಂತೆ, ಏನು ಎತ್ತ?

‘ಅದು ಆಲ್ಕೋಹಾಲ್ ವಿತ್‌ಡ್ರಾವಲ್ ಕೂಡ ಇರಬಹುದು. ಅತವಾ ಕೋವಿಡ್‌ನಲ್ಲಿ ಏನೇನು ಆಗುತ್ತೋ ಹೇಳಕ್ಕಾಗಲ್ಲ. ಸದ್ಯಕ್ಕೆ ಸ್ಯಾಚುರೇಷನ್ ಚೆನಾಗಿದೆ, ನೋಡುವಾ.’

ಇನ್ನೇನು ತಿಂಡಿಗೆ ಕೂರಬೇಕು, ಸಿಸ್ಟರ್ ಫೋನು.

‘ಸರ್ ಆ ಪೇಶೆಂಟ್ ಸಿಕ್ಕಾಪಟ್ಟೆ ಗಲಾಟೆ ಮಾಡ್ತಿದಾನೆ. ಮೊದಲು ರ‍್ಯಾಪಿಡ್ ಟೆಸ್ಟ್ ನೆಗೆಟಿವ್ ಬಂದಿತ್ತು. ಇದು ಹೆಂಗೆ ಪಾಸಿಟಿವ್ ಆಗುತ್ತೆ? ನಂಗೇನೂ ಆಗಿಲ್ಲ, ನಾನು ಮನೆಗ್ ಹೋಗ್ತಿನಿ, ನೀವು ಸುಳ್ಳು ಸುಳ್ಳೇ ಕಾಯ್ಲೆ ಅಂತಿರಿ ಅಂತಿದಾನೆ.’ ‘ಮನೆಯೋರು ನೋಡಿದ್ರೆ ಅವ್ನನ್ನ ಕಳಿಸ್ಬೇಡಿ, ಕುಡಿತ ಕಂಟ್ರೋಲ್ ಮಾಡಕ್ಕಾಗಲ್ಲ ಅಂತಿದಾರೆ. ಅವ್ನಿಗೇನು ಬಂತಂತೆ? ಹೆಚ್ಚು ಗಲಾಟೆ ಹಾಕಿದ್ರೆ ಪೊಲೀಸ್ನೋರಿಗೆ ಫೋನ್ ಮಾಡ್ತಿವಿ ಅಂತ ಹೇಳಿ. ಈಗ ಬಂದೆ.’ ‘ಆಮೇಲೆ ಸರ್, ಲೇಬರ್ ರೂಂ ಸಿಸ್ಟರ್ ಹೇಳಲಿಕ್ಕೆ ಹೇಳಿದ್ರು. ಎರ‍್ಡು ಕೇಸ್ ಬಂದಿದಾವಂತೆ. ಒಂದು ಲೇಬರ್‌ನಲ್ಲಿದ್ದಾಳೆ. ಮತ್ತೊಬ್ಳು ಮುಂಚಿನ ಸಿಸೇರಿಯನ್, ನೋವಿಲ್ಲ.’ ‘ಆಯ್ತಾಯ್ತು, ಬಂದೆ.’

ತಿಂಡಿ ತಿನ್ನುವಾಗ ಮತ್ತೆ ಫೋನು. ಅಮೆರಿಕದಲ್ಲಿರುವವಳ ಅಪ್ಪ ಅಮ್ಮ ಇಬ್ಬರೂ ಇಲ್ಲಿ ಅಡ್ಮಿಟ್ ಆಗಿದಾರೆ. ಅವಳು ಅಲ್ಲಿಂದಲೇ ವಿಚಾರಿಸಿಕೊಳ್ಳುತ್ತ ಇದ್ದಾಳೆ.

‘ಗುಡ್ ಮಾರ್ನಿಂಗ್ ಡಾಕ್ಟರ್. ಸಾರಿ ಟು ಬಾದರ್ ಯು. ಒಂದು ಇನ್ಫೋ ಬೇಕಿತ್ತು. ನಮ್ಮ ಪೇರೆಂಟ್ಸ್‌ಗೆ ರೆಮ್ಡೆಸಿವಿರ್ ಹಾಕಿದೀರಾ?’ ‘ಹೌದಮ್ಮ.’ ‘ನೀವು ಏನೇನು ಕೊಡ್ತಿದಿರಿ ಅಂತ ಕೇಸ್ ಶೀಟ್ನಲ್ಲಿ ಬರೆಯಲ್ವ?’ ‘ಬರಿತಿವಲ್ಲಮ್ಮ, ಪ್ರತಿ ರೌಂಡ್ಸ್‌ನಲ್ಲು ನೋಟ್ ಹಾಕಿ ಪೇಶೆಂಟ್ ಬೆಡ್ ಪಕ್ಕನೆ ಇಡ್ತಿವಿ.’ ‘ಈಗ ಮತ್ತೊಂದು ಮಾಲಿಕ್ಯೂಲ್ ಬಂದಿದೆಯಂತಲ, ಇಲ್ಲಿ ಯುಎಸ್‌ನಲ್ಲಿ ಕೊಡ್ತಿದಾರೆ. ನಾನು ಬೇಕಾದ್ರೆ ಶಿಪ್ ಮಾಡ್ತಿನಿ.’ ‘ನೀವು ಶಿಪ್ ಮಾಡಿದ್ದು ಇಲ್ಲಿಗೆ ಮುಟ್ಟಲಿಕ್ಕೆ ಎಷ್ಟು ದಿನ ಆಗುತ್ತೆ ಹೇಳಿ?’ ‘ಓಹ್ ಸಾರಿ ಡಾಕ್ಟರ್, ಹೌದಲ್ಲ? ಆತಂಕದಲ್ಲಿ ಕೇಳಿದೆ. ಬೈ ದ ವೇ, ನಿಮ್ಮಲ್ಲಿ ವೆಂಟಿಲೇಟರಿಗೆ ಹಾಕಿದ ಪೇಶೆಂಟ್ ಎಷ್ಟು ಸಕ್ಸೆಸ್ ರೇಟ್ ಇದೆ? ಮೇಲಿಂದ ಒತ್ತಡ ಬಂದ್ರೆ ರಿಕವರ್ ಆಗ್ತಿದ್ದ ಕೇಸನ್ನೂ ತೆಗ್ದು ಮತ್ಯಾರೋ ಪಾಲಿಟಿಷಿಯನ್ಸ್‌ಗೆಲ್ಲ ವೆಂಟಿಲೇಟರ್ ಕೊಟ್ಬಿಡ್ತಾರೆ ಅಂತಾರೆ, ಹೌದಾ? ರೆಫರ್ ಮಾಡೋದಾದ್ರೆ ನೀವೇ ಬೆಡ್ ಅರೇಂಜ್ ಮಾಡ್ತಿರಾ?’ ‘ದಯವಿಟ್ಟು ರಾತ್ರಿ ಫೋನ್ ಮಾಡ್ತಿರಾ? ಮತ್ತೊಂದು ಕಾಲ್ ಬರ‍್ತಿದೆ’ ‘ಓಹ್, ಸಾರಿ ಡಾಕ್ಟರ್. ಥ್ಯಾಂಕ್ ಯೂ, ಥ್ಯಾಂಕ್ ಯೂ’

ಮತ್ತೆ ಬಂದ ಈ ಫೋನನ್ನು ಎತ್ತದಿರಲು ಸಾಧ್ಯವೇ? ತೊಂಭತ್ತು ದಾಟಿರುವ, ದೂರ ಇರುವ ಅಮ್ಮ. ಅವಳನ್ನು ನೋಡಲು ಹೋಗಿ ಎಂಟು ತಿಂಗಳಾಯಿತು.

‘ಹುಶಾರಿದ್ಯನ?’ ‘ಹೌದಮ, ನೀ ಹ್ಯಾಂಗಿದ್ಯ?’ ‘ನಮ್ಗೆಲ್ಲ ಎಂತ ಕೆಲ್ಸ ಇತ್ತ್? ನಾವ್ ಆರಾಮೆಯ.’ ‘ಈಗ ಆಸ್ಪತ್ರಿಗ್ ಹೋಯ್ಕ್. ನಾ ಸಂಜಿಗ್ ಫೋನ್ ಮಾಡ್ತೆ, ಅಕ್ಕ?’ ‘ಅಕ್ಕು. ಆದ್ರೆ ಇವತ್ ನಿಮ್ಮಪ್ಪನ ಶ್ರಾದ್ಧ. ಒಂದ್ ಎಲಿನಾರು ಹೊರಗ್ ತೆಗ್ದಿಡ.’ ‘ಆಯ್ತಾಯ್ತು. ಇವ್ಳ್ ಮಾತಾಡ್ತ್ಲು ಈಗ. ನಂಗೆ ಅರ್ಜೆಂಟ್ ಹೋಪ್ದಿತ್ತ್.’ ‘ಈಗ್ ಅಲ್ಲೆ ಆಸ್ಪತ್ರೀಲೆ ಆಯ್ಕಂತ್ಯ? ಹುಶಾರು.’

ಅಮ್ಮನ ನಡುಗುವ ದನಿ ಕೇಳಿ ಅವಳ ಕಿರಿಯ ಮಗನಾದ ತನಗೆ ಅವಳಿಗಿಂತ ಹೆಚ್ಚು ವಯಸ್ಸಾದ ಹಾಗೆನಿಸಿತು.

‘ನಂಗೆ ತಿಂಡಿ ಸಾಕು ಕಣೆ. ಏನು ಬೇಡ ಅನಿಸ್ತಿದೆ. ಇದೊಂದು ಸೋತ ಯುದ್ಧ. ಲಾಸ್ಟ್ ವಾರ್. ಲಾಸ್ಟ್ ಬೈ ದ ಪೀಪಲ್ ಅಂಡ್ ದ ರೂಲಿಂಗ್ ಕ್ಲಾಸ್. ಆದ್ರೆ ನಮಗೆ ಮಾತ್ರ ನಿಮ್ಮತ್ರ ಇರೋ ಇದ್ದಬದ್ದ ಮುರುಕು ಆಯುದ ತಗಂಡು ಬಡಿದಾಡಿ ಅಂತಿದಾರೆ. ಸುಮ್ಮನೆ ಕೈಕಾಲು ಆಡಿಸ್ತ ಇದೀವಿ. ಕೊನೆಗೂ ಬದುಕೋರು ಬದುಕ್ತಾರೆ, ಹೋಗೋರು ಹೋಗ್ತಾರೆ. ಬ್ಲೇಮ್ ಮಾತ್ರ ನಮ್ಮ ಮೇಲೆ.’

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಹಂಗೆಲ್ಲ ಹತಾಶ ಆಗ್ಬೇಡಪ್ಪ. ನಾವೇ ಹಾಗಂದ್ರೆ ಹೇಗೆ? ಜನರಿಗೆ ತಿಳುವಳಿಕೆ ಇರಲ್ಲ, ಜನನಾಯಕರ ಮೂರ್ಖತನಕ್ಕೆ ಇನ್ನಷ್ಟು ತಿಳಿಗೇಡಿಗಳಂಗೆ ಆಡ್ತಾರೆ. ಯು ಬಿ ಆಪ್ಟಿಮಿಸ್ಟಿಕ್. ನೀನೇ ಎಷ್ಟು ಹೆರಿಗೆ ಮಾಡಿಸ್ತಿಯಲ, ಹೊಸದಷ್ಟು ಬರುತ್ತೆ, ಹಳೆಯದಷ್ಟು ಅಳಿಯುತ್ತೆ.’

‘ಇವತ್ನಿಂದ ಕಂಟ್ರಾಕ್ಟ್ ಲೇಬರ್ಸ್ ಸ್ಟ್ರೈಕ್ ಅಂತೆ. ಅವಕ್ಕೆ ನಾಕು ತಿಂಗ್ಳಿಂದ ಸಂಬಳ ಆಗಿಲ್ಲ. ಕೋವಿಡ್ ಡ್ಯೂಟಿ ನಾ ಮಾಡಲ್ಲ, ತಾ ಮಾಡಲ್ಲ, ನಂಗೆ ವಯಸ್ಸಾಯ್ತು ಕಾಯ್ಲೆ ಇದೆ ಅಂತ ಮೇಲಿಂದ ಕೆಳಗಿನ ತಂಕ ಎಲ್ಲ ತಪ್ಪಿಸಿಕೊಳ್ಳಕ್ ನೋಡ್ತಾ ಇದಾರೆ. ಯಾರಿಗೆ ಹೇಳದು? ಆಪ್ಟಿಮಿಸಂಗೆ ಏನಾದ್ರೂ ಜಾಗ ಇದೆಯಾ?’ ‘ಜನರ ಕಷ್ಟನೂ ನಿಜ. ನಮ್ಮ ಕಷ್ಟನೂ ನಿಜ. ನಾವು ರೋಗ ನಿರೋಗಗಳನ್ನು, ಸತ್ಯದ ಮುಖಗಳನ್ನು ತಿಳಿದೋರು, ಸಂಭಾಳಿಸಬೇಕು ಅಷ್ಟೆ. ದಿಸ್ ಟೂ ಶಲ್ ಪಾಸ್..’

ಅಂತೂ ಆಸ್ಪತ್ರೆ ಮುಟ್ಟಿ, ತುಂಬಿ ತುಳುಕುವ ಕೋವಿಡ್ ವಾರ್ಡ್ ರೌಂಡ್ಸ್ ಮಾಡಿ ಮುಂದಿನವರಿಗೆ ಚಾರ್ಜ್ ಒಪ್ಪಿಸಿದರು. ಮತ್ತೆರೆಡು ಹೆರಿಗೆ ಕೇಸುಗಳು, ಒಂದು ಗರ್ಭಪಾತ ಎಂದು ಇಡಿಯ ದಿನ ಅಲ್ಲಿ, ಇಲ್ಲಿ ತಾರಾಡುವುದೇ ಆಯಿತು. ಲಸಿಕಾ ಕೇಂದ್ರದಲ್ಲೂ ಗಲಿಬಿಲಿ, ಗಲಾಟೆ. ವಿಶೇಷವೆಂದರೆ ಅವರ ಡ್ಯೂಟಿಯಲ್ಲಿ ಕೋವಿಡ್ ವಾರ್ಡಿನಲ್ಲಿ ಸಾವು ಆಗಿರಲಿಲ್ಲ. ಎರಡನೆಯ ದಿನವೂ ಸಾವಿಲ್ಲದೇ ಕಳೆಯುತ್ತಿದೆ ಎಂದುಕೊಳ್ಳುತ್ತ ಚಣ ಕುಳಿತರು. ಸ್ಥಳೀಯ ಸಂಜೆ ಪತ್ರಿಕೆಯಲ್ಲಿ, ‘ಸರ್ಕಾರಿ ಆಸ್ಪತ್ರೆಗಳೆಂಬ ನರಕ ಕೂಪಗಳು’ ಎಂಬ ತಲೆಬರಹ ಕಾಣಿಸಿತು. ಅಲ್ಲೆಲ್ಲೋ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ. ಬೆಂಗಳೂರಿನ ವೈದ್ಯರು ಔಷಧಿ, ಆಕ್ಸಿಜನ್, ಬೆಡ್ ಮಾರಿಕೊಂಡ ಸುದ್ದಿ. ಅದರ ಪಕ್ಕದಲ್ಲೇ ಬಾಕ್ಸ್ ಐಟಂ! ‘ಕೋವಿಡ್ ರೋಗಿಗಳು ಅಡ್ಮಿಟ್ ಆದರೆ ವೈದ್ಯರಿಗೆ, ನರ್ಸುಗಳಿಗೆ ಕಮಿಷನ್ ಬರುವುದೆ?’

ನಂತರದ ಪುಟದಲ್ಲಿ ‘ಧನ್ವಂತರಿ ವಂದನ’ ಎಂಬ ಆನ್‌ಲೈನ್ ಕಾರ್ಯಕ್ರಮಕ್ಕೆ ಇಡೀ ಪುಟದ ಆಹ್ವಾನ. ‘ತಮ್ಮ ಜೀವವನ್ನೇ ಪಣಕ್ಕಿಟ್ಟು ಒತ್ತಡವಿದ್ದರೂ ಮರೆತು ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತಾ ಏರ್ಪಡಿಸಿದ ಕಾರ್ಯಕ್ರಮ ಇದು. ವೈದ್ಯಸಮೂಹಕ್ಕೆ ಸ್ಫೂರ್ತಿ, ಆತ್ಮಸ್ಥೈರ್ಯ ತುಂಬಲು ಮತ್ತು ಅಭಿನಂದಿಸಲು ಆಯೋಜಿಸಲಾಗಿದೆ. ಪಾಲ್ಗೊಳ್ಳಿ’

ಅವರಿಗೆ ಜೋಕಾಲಿಯಲ್ಲಿ ಆ ತುದಿಯಿಂದ ಈ ತುದಿಗೆ ತೂಗಿ ಎಳೆದು ಬಿಟ್ಟಂತೆ ಆಯಿತು. ಇಲ್ಲ. ಅದಕ್ಕೆ ಕುಗ್ಗಬಾರದು. ಇದಕ್ಕೆ ಉಬ್ಬಬಾರದು. ಇನ್ನು ನಾಲ್ಕು ವರ್ಷ ಸರ್ವೀಸ್ ಇದೆ. ಇದುವರೆಗೆ ಹೇಗೆ ಒಂದು ವ್ರತದಂತೆ ಒಂದು ದಿನ ತಪ್ಪದೆ, ಸುಮ್ಮನೆ ಕೂರದೆ ಕೆಲಸ ಮಾಡಿದೆನೋ, ಇನ್ನು ನಾಲ್ಕು ವರ್ಷವೂ ಹಾಗೆಯೇ ಮಾಡಬೇಕು. ಕೊರೋನಾ ಎಂಬ ಪ್ರಳಯದಂತಹ ಪ್ರವಾಹವನ್ನು ಜೀವಂತ ಈಜಿ ದಡ ಸೇರುವ ಧಾವಂತದಲ್ಲಿ ಎಲ್ಲರೂ ಅತಿ ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ ಸ್ತುತಿ, ನಿಂದೆಗಳು ಸಂಭವಿಸುವುದು ಸಹಜವೇ. ಈ ವೃತ್ತಿಯೇ ಅಂಥದ್ದಲ್ಲವೆ? ಎಂದುಕೊಳ್ಳುತ್ತ ಡ್ಯೂಟಿ ರೂಮಿನಿಂದ ಹೊರಬಿದ್ದರು.

ಕಡಲ ತಡಿಯ ಅವರ ಊರಿನಲ್ಲಿ ಆಸ್ಪತ್ರೆಯ ಪಕ್ಕವೇ ಲೈಟ್‌ಹೌಸ್ ಇದೆ. ನೂರಾರು ಮೆಟ್ಟಿಲು ಹತ್ತಿ ಮೇಲೆ ಹೋಗಿ ನಿಂತರು. ಇಡಿಯ ಪಟ್ಟಣದ ವಿಹಂಗಮ ನೋಟ ಕಾಣುತ್ತಿದೆ. ರಸ್ತೆಗಳು ಉದ್ದಾನುದ್ದ ನಿರ್ಜನವಾಗಿ ಮಲಗಿವೆ. ಕಡಲಿಗೋಡುತ್ತಿರುವ ನದಿ, ಅದಕ್ಕೆ ಅಡ್ಡ ಕಟ್ಟಿದ ಜೋಡಿ ಸೇತುವೆ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಪುಟ್ಟ ಪಾತಿ ದೋಣಿಗಳಲ್ಲಿ ನಾವಿಕರು ಬಲೆ ಹಾಕುತ್ತ ಮೀನು ಹಿಡಿವ ತಯಾರಿಯಲ್ಲಿದ್ದಾರೆ. ಹಕ್ಕಿಗಳು ಮರಳುತ್ತಿವೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಬದುಕಿನ ದೊಡ್ಡ ಗುಟ್ಟು ಎಂದರೆ ಇದರಲ್ಲಿ ಏನೂ ಗುಟ್ಟು ಇಲ್ಲ ಎನ್ನುವುದು. ಇಂದು ಮುಗಿಯಿತು ಎಂದರೆ ಮುಗಿಯಿತು ಅಷ್ಟೇ. ಇಂದಿನ ಹಾಗೆಯೇ ನಾಳೆಯೂ ಬಂದು ಮುಗಿಯುವುದು. ಒಮ್ಮೆ ಚಕ್ರದ ಅಡಿ, ಮತ್ತೊಮ್ಮೆ ಮೇಲೆ ಎಂದು ಫಿಲಸಾಫಿಕಲ್ ಆಗಿ ಯೋಚಿಸುತ್ತ ಸೂರ್ಯಾಸ್ತದ ಫೋಟೋ ತೆಗೆಯತೊಡಗಿದರು. ಅಂದು ರಾತ್ರಿ ಬರೆಯಬೇಕೆಂದುಕೊಂಡ ಬುದ್ಧನ ರೇಖಾಚಿತ್ರ ಅವರ ಬೆರಳುಗಳಲ್ಲಿ ಆಗಲೇ ಮೂಡತೊಡಗಿತು.

* ಪದಗಳ ಅರ್ಥ ಅಕ್ಕು = ಆಯ್ತು ಆಯ್ಕ = ತಂಗು * ಫೋಟೋ : ಎಸ್. ವಿಷ್ಣುಕುಮಾರ್ * ನಾಳೆ ನಿರೀಕ್ಷಿಸಿ ; ಕವಲಕ್ಕಿ – 7 : ‘ಸತ್ಯಕ್ಕೆ ಬ್ಹಾಳ ಮುಖಗಳಿರ‍್ತವೆ ಎಲ್ವನ್ನೂ ಮುಟ್ಟಿ ನೋಡಬೇಕ, ಇಲ್ದಿದ್ರೆ  ಗೊಣಕ್ಕಂತ ಸತ್ತೋಗಿಬಿಡ್ತೀವಿ’

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ಏಳ್ನೂರು ಕಿಲೊಮೀಟರ್ ನಡದ್ವಿ ಅಲ್ಲೊಂದ್ಕಡೆ ಸುರಂಗದಾಗ ಬೆಳಕಿಲ್ಲ ಕೈಯ್ಯಾಗ ಬಿಸ್ಕೀಟಿಲ್ಲ

Follow us on

Most Read Stories

Click on your DTH Provider to Add TV9 Kannada