Covid Diary : ಕವಲಕ್ಕಿ ಮೇಲ್ ; ‘ಮನೆ ಬೆಲೆ ಏನಂತ ಗೊತ್ತಾಗಕ್ಕೆ ಕೊರೊನಾ ಬರಬೇಕಾಯ್ತು’ 

ಮಾಸ್ತರು ಪದೇಪದೇ ಮೊಮ್ಮಕ್ಕಳ ನೆನೆದು ಗದ್ಗದಿತರಾಗುತ್ತಾರೆ. ಲಲಿತಮ್ಮ ಮಾತ್ರ, ‘ನನ್ನಪ್ಪ ಅವ್ವಿ ಬಿಟ್ ನಿಮ್ ಸಂಗ್ತಿ ಬರ‍್ಲಿಲ್ವ? ಈಗ ಮಕ್ಳು ನಮ್ಮನ್ ಬಿಟ್ಟು ಇದಾರೆ ಅಷ್ಟೆಯ. ನಮಗ್ ನಾವೇ. ಗ್ವಾಡಿಗ್ ಮಣ್ಣೇ, ಸುಮ್ನಿರಿ’ ಎಂದು ಇಬ್ಬರಿಗೆ ಇಷ್ಟು ದೊಡ್ಡ ಮನೆ ಏಕೆ ಬೇಕಿತ್ತೋ ಎಂದುಕೊಂಡು ದೇಖರೇಖೆಗೆ ಎದ್ದು ಹೋಗುತ್ತಾರೆ. ‘ಆ ಮಳ್ಳು ವಾಟ್ಸಪ್ ಬಿಟ್ಟು ಬಗೇಲ್ ಕೆಲ್ಸಾ ನೋಡಿ’ ಎಂದು ಗಂಡನಿಗೆ ಗದರುತ್ತಾರೆ.

Covid Diary : ಕವಲಕ್ಕಿ ಮೇಲ್ ; ‘ಮನೆ ಬೆಲೆ ಏನಂತ ಗೊತ್ತಾಗಕ್ಕೆ ಕೊರೊನಾ ಬರಬೇಕಾಯ್ತು’ 
Follow us
ಶ್ರೀದೇವಿ ಕಳಸದ
|

Updated on:Jun 21, 2021 | 9:35 AM

ಆರನೆಯ ತರಗತಿಯಿಂದಲೇ ಓದಿನ ಸಲುವಾಗಿ ಮನೆ ಬಿಟ್ಟಿದ್ದ ಮಗನಿಗೆ ಈ ಹಳ್ಳಿಯ ಬಗೆಗೆ ಯಾವ ನಂಟೂ ಇಲ್ಲ. ಕಂಫರ್ಟ್ಸ್ ಇರದ ಹಳ್ಳಿವಾಸವೆಂದರೆ ಅವನಿಗಾಗದು. ಆದರೆ ನೂರು ರೂಪಾಯಿಯಲ್ಲಿ ಆಸ್ಪತ್ರೆಗೆ ಹೋಗಿ ಔಷಧಿ ತರಲು ಸಾಧ್ಯವಿರುವ, ಅರ್ಧಗಂಟೆಯಲ್ಲಿ ಸಾಮಾನು ತರಲು, ಕರೆಂಟ್ ಬಿಲ್ ಕಟ್ಟಲು ಸಾಧ್ಯವಿರುವ ಹಳ್ಳಿಯ ಬದುಕಿನಲ್ಲೂ ಏನೋ ಆರಾಮವಿದೆ ಎನಿಸಿತು. ಹತ್ತು ವರ್ಷದ ಬಳಿಕ ಎರಡನೆಯ ಮಗಳು ಹುಟ್ಟಿದ್ದಕ್ಕೋ ಏನೋ, ಅಂತೂ ಹಿರಿಯ ಮಗಳು ವೈಷ್ಣವಿ ಹಠಮಾರಿಯಾಗತೊಡಗಿದ್ದಳು. ಸಿಟ್ಟು, ಮೊಂಡುತನ, ಹಿಂಸಾತ್ಮಕ ನಡವಳಿಕೆಯಿಂದ ಗಾಬರಿ ಹುಟ್ಟಿಸಿದ್ದಳು. ಅಂಥವಳು ಅಜ್ಜಅಜ್ಜಿಯರೊಡನೆ ಗೆಳೆತನ ಬೆಳೆಸಿ, ಅವರು ಹೇಳುವುದನ್ನೆಲ್ಲ ಎಕ್ಸೈಟಿಂಗ್ ಎಂದು ಬರೆದಿಟ್ಟುಕೊಳ್ಳುತ್ತ ಅಚ್ಚರಿ ಮೂಡಿಸಿದ್ದಳು. ಒಮ್ಮೆ ಹೆಂಡತಿಯೊಡನೆ ನಮ್ಮ ಆಸ್ಪತ್ರೆಗೆ ಬಂದವ, ‘ಮನೆ ಬೆಲೆ ಏನಂತ ಗೊತ್ತಾಗಕ್ಕೆ ಕೊರೊನಾ ಬರಬೇಕಾಯ್ತು’ ಎಂದು ಅರ್ಥಗರ್ಭಿತವಾಗಿ ಹೆಂಡತಿಯ ಕಡೆ ನೋಡಿ ನಕ್ಕಿದ್ದ.

*

‘ನೀವು ಡಾಕ್ಟ್ರೋ ಬಾಬರ‍್ರೋ?’

ಪೇಶೆಂಟ್ ಜೊತೆಗೆ ಒಬ್ಬರೇ ಒಳಬರಬೇಕೆಂಬ ಸಾಂಡ್ರಾ ಆದೇಶವನ್ನು ಉಲ್ಲಂಘಿಸಿ ಆ ಹುಡುಗಿ ಅಮ್ಮನ ಸಂದಿ ನುಸುಳಿಯೇಬಿಟ್ಟಿತ್ತು. ಅವಳು ಆಡುವಾಗ ಚೆಂಡು ಅಜ್ಜನ ನೆತ್ತಿಗೆ ಬಡಿದು ಗಾಯವಾಗಿತ್ತು. ರಕ್ತ ಬರದಂತೆ ಅಜ್ಜಿ ಅರಿಶಿನ, ಚಾಪುಡಿ ಸೇರಿಸಿ ಗಾಯಕ್ಕೆ ಒತ್ತಿದ್ದು ಹೆಪ್ಪುಗಟ್ಟಿದ ರಕ್ತದೊಡನೆ ಸೇರಿ ಕಾಂಕ್ರೀಟಿನ ಜೊತೆ ಮೆತ್ತಿಕೊಂಡಿತ್ತು. ಗಾಯ ಚೊಕ್ಕ ಮಾಡಲು ಸುತ್ತಮುತ್ತಲ ತಲೆಗೂದಲು ಕತ್ತರಿಸುತ್ತಿದ್ದಾಗ ಮಗು ಹೀಗೆ ಕೇಳಿತ್ತು.

‘ಶಟಪ್, ಎಂಥಾ ಮಾತಾಡ್ತಿಯೋ ಏನೋ?’

ಅಮ್ಮ ರೇಗಿ ಅದರ ಭುಜದ ಮೇಲೊಂದು ಪೆಟ್ಟುಕೊಟ್ಟಳು. ತಡಬಡವಿಲ್ಲದೆ ಅಮ್ಮನ ತೊಡೆಗೆ ಪಟಪಟಪಟಪಟ ಏಟು ಹಾಕತೊಡಗಿತು. ಮುಖವುಬ್ಬಿ ಹಠ ಶುರುವಾಗುವ ಸೂಚನೆ ಬಂತೆಂದು ಕಾಣುತ್ತದೆ, ಅಜ್ಜ ಕೇಳಿದರು:

‘ನಾನಿಂಗೆ ಪುಗ್ಗೆ ತಂದ್ಕೊಡ್ತೆ ಮಗಾ, ಅಕ್ಕಾ…’

ಪುಗ್ಗಿ ಹೆಸರು ಕೇಳಿದ್ದೇ ಕೈ ಕೆಳಗಿಳಿಯಿತು. ಹುಬ್ಬುಗಂಟಿಕ್ಕಿ ಬೇಡವೆಂದು ತಲೆಯಲ್ಲಾಡಿಸಿತು. ಹೆಚ್ಚು ಬೇಕೆನ್ನುವಳೇನೋ ಎಂದು ಅಜ್ಜ,

‘ಅಡ್ಡಿಲ್ಲಡ್ಡಿಲ್ಲ, ಐದು ಪುಗ್ಗಿ ಬರ‍್ತೆ ಆಯ್ತಾ?’ ಎಂದರು.

‘ನೋ’ ‘ಹಂಗಾರೆ ಎಷ್ಟ್ ಬೇಕು?’ ‘ಒನ್ ಟೂ ಥ್ರೀ ಬೇಕು ನಂಗೆ’

ಅಲ್ಲಿದ್ದವರೆಲ್ಲ ಫಳ್ಳನೆ ನಕ್ಕೆವು. ಅವಳಮ್ಮ ಎಳೆದುಕೊಂಡು ಹೊರಹೋದಳು.

‘ನನ್ ಮಮ್ಮಗಳು ಶರಣ್ಯ. ಬಾರೀ ಚರ‍್ಕು. ಮೊಬೈಲು, ಕಂಪ್ಯೂಟರನ್ನ ಹೆಂಗ್ ಒತ್ತತದೆ ಅಂದ್ರೆ..’

ಅಜ್ಜ ಮೊಮ್ಮಗಳ ಯಂತ್ರಕೌಶಲದ ಬಗೆಗೆ ಒಂದೇಸಮ ಹೇಳುವಾಗ ಡ್ರೆಸ್ಸಿಂಗ್ ಮುಗಿಯಿತು.

ಅವರು ಎಂಭತ್ತರ ಹರೆಯದ ಗೋಪಾಲ ಮಾಸ್ತರು. ಇಡೀ ಸೇವಾವಧಿಯನ್ನು ಸಣ್ಣಸಣ್ಣ ಹಳ್ಳಿಗಳ ಪ್ರಾಥಮಿಕ ಶಾಲೆಗಳಲ್ಲಿ ಕಳೆದಿದ್ದರು. ಅವರ ಹೆಂಡತಿ ಲಲಿತ, ಕೈಯಿಕ್ಕಿದಲ್ಲಿ ತೋಟ ಎಬ್ಬಿಸುವ ಹಸಿರುಮಾತೆ. ಮಾಸ್ತರು ನಿವೃತ್ತರಾದ ಮೇಲೆ ತಮ್ಮೂರಿಗೆ ಸಮೀಪವಿರುವ ಈ ಊರಿನಲ್ಲಿ ಹತ್ತು ಗುಂಟೆ ಜಾಗ ಕೊಂಡು ಮನೆ ಕಟ್ಟಿದ್ದರು. ಲಲಿತಮ್ಮ ತೆಂಗು ಬಾಳೆ ಅಡಿಕೆ ಮಾವು ಪೇರಲೆ ಹಲಸಿನ ಹಸಿರು ಸಿರಿ ಎಬ್ಬಿಸಿರುವರು. ಇಬ್ಬರೂ ಗಿಡಮರಗಳೊಡನೆ ಸಮಯ ಕಳೆಯುವರು.

ಅವರ ಮಗಳು ದೀಪಾ ಅಬುದಾಭಿಯಲ್ಲಿದ್ದರೆ, ಮಗ ದೀಪಕ್ ಬೆಂಗಳೂರಿನಲ್ಲಿದ್ದಾನೆ. ಎರಡು ವರ್ಷಕ್ಕೊಮ್ಮೆ ಮಗಳು ಅಬುದಾಭಿಯಿಂದ ಬರುವಳು. ಮಗನಿಗೆ, ಅವನ ಹೆಂಡತಿ ಸುವಿಧಾಗೆ ವಿದೇಶಕ್ಕೆ ಹೋಗುವ ಅವಕಾಶವಿದ್ದರೂ ತಾಯ್ತಂದೆಯರಿಬ್ಬರನ್ನೇ ಬಿಟ್ಟು ಮಕ್ಕಳಿಬ್ಬರೂ ಹೊರಗಿರುವುದು ಬೇಡವೆಂದು ಬೆಂಗಳೂರಿನಲ್ಲಿದ್ದಾರೆ. ಅವರನ್ನೂ ಬೆಂಗಳೂರಿಗೇ ಬನ್ನಿರೆಂದು ಕರೆಯುತ್ತಾನೆ. ಅಪ್ಪ ಅಮ್ಮ ಮಾತ್ರ ‘ಕೈಲಾದಷ್ಟ್ ದಿನ ಮಾಡ್ಕತೀವಿ, ಆಮೇಲ್ ನಿಮ್ಮತ್ರನೇ’ ಎನ್ನುತ್ತಾ ಮುಗುಮ್ಮಾಗಿ ಉಳಿಯುತ್ತಾರೆ.

ಅವರಿಗಿವರು ಇವರಿಗವರು ಎನ್ನುವಂತಿರುವ ಜೋಡಿಯದು. ಮಾಸ್ತರು ಬೆಳಿಗ್ಗೆ ಬೇಗನೆದ್ದುಬಿಡುವರು. ಬಿಸಿನೀರು ಕುಡಿದು ತೋಟದಲ್ಲೊಮ್ಮೆ ಕಾಲಾಡಿಸಿ, ಚಹಾ ಮಾಡಿಕೊಂಡು ಕುಡಿದು, ಪೇಟೆಗೆ ಹೊರಡುವರು. ನಂದಿನಿ ಕೊಟ್ಟೆ ಹಿಡಿದು, ಪೇಪರು ಪಡೆದು, ಬಸ್ ಕಾಯುವ ವಿದ್ಯಾರ್ಥಿಗಳನ್ನು ಕಂಡು ನಿಂತು, ಸ್ವಚ್ಛತೆ ಶಿಸ್ತು ಶಿಕ್ಷಣದ ಬಗೆಗೆ ಉಪದೇಶದ ಸುರಿಮಳೆ ಸುರಿಸಿ, ಎದುರು ಬಂದವರನ್ನು ‘ದೀರ್ಘಾಯುಷ್ಮಾನ್ ಭವ’ ಎಂದು ದೇವಭಾಷೆಯಲ್ಲಿ ಪುಕ್ಕಟೆ ಹರಸಿ ಮನೆಕಡೆಗೆ ಹೋಗುವರು. ಅಷ್ಟೊತ್ತಿಗೆ ಮನೆಯಲ್ಲಿ ಏನಾದರೊಂದು ಬಿಸಿಯಾಗಿ ತಯಾರಾಗಿರುವುದು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಹೀಗೆ ಆರಾಮವಾಗಿ ವಿಶ್ರಾಂತ ಜೀವನ ಕಳೆಯುವವರಿಗೆ ಕೊರೋನಾ ಎಂಬುದೊಂದು ಬಂದಿದೆಯೆಂದು ನಂಬಲಿಕ್ಕೇ ಕಷ್ಟವಾಯಿತು. ಮಾಸ್ಕ್ ಹಾಕದೇ ಓಡಾಡುವರು. ಒಮ್ಮೆ ನಾನು, ‘ಇದು ಹಾಕ್ಕೊಂಡು ನೋಡಿ ಉಸಿರು ಕಟ್ಟಲ್ಲ’ ಎಂದು ಎನ್-95 ಮಾಸ್ಕ್ ಕೊಟ್ಟು ಕಳಿಸಿದರೂ ಮಾಸ್ಕ್​ತಹಿತರಾಗಿಯೇ ಕಾಣಿಸುವರು. ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುವ ಮಗ ಸೊಸೆಯರು ಹತ್ತನೇ ಕ್ಲಾಸಿನ ವೈಷ್ಣವಿ, ಐದು ವರ್ಷದ ಶರಣ್ಯಳ ಜೊತೆಗೆ ಬೆಂಗಳೂರು ಬಿಟ್ಟು ಬಂದಾಗಲೇ ಕೊರೊನಾ ಎಂಬುದು ಗಹನ ಕಾಯಿಲೆಯೆಂದು ಅವರಿಗೆ ಗೊತ್ತಾದದ್ದು.

ಬೆಂಗಳೂರು ಲಾಕ್‌ಡೌನ್ ಆದಾಗ ಎರಡು ವಾರಕ್ಕೆಂದು ಬಂದವರು ಅದು ವಿಸ್ತರಣೆಯಾಗತೊಡಗಿದಂತೆ ಇಲ್ಲೇ ನಿಂತರು. ಮೂರು ತಿಂಗಳು ಸರಿಯಿತು. ಗೂಗಲ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಇನ್ನು ಒಂದು ವರ್ಷ ಮನೆಯಿಂದಲೇ ಕೆಲಸ ಮಾಡಿ ಎಂದಾಗ ಒಮ್ಮೆ ಬೆಂಗಳೂರಿಗೆ ಹೋಗಿ ಬೇಕಿದ್ದನ್ನೆಲ್ಲ ತಂದುಕೊಂಡರು.

ಆರನೆಯ ತರಗತಿಯಿಂದಲೇ ಓದಿನ ಸಲುವಾಗಿ ಮನೆ ಬಿಟ್ಟಿದ್ದ ಮಗನಿಗೆ ಈ ಹಳ್ಳಿಯ ಬಗೆಗೆ ಯಾವ ನಂಟೂ ಇಲ್ಲ. ಕಂಫರ್ಟ್ಸ್ ಇರದ ಹಳ್ಳಿವಾಸವೆಂದರೆ ಅವನಿಗಾಗದು. ಆದರೆ ನೂರು ರೂಪಾಯಿಯಲ್ಲಿ ಆಸ್ಪತ್ರೆಗೆ ಹೋಗಿ ಔಷಧಿ ತರಲು ಸಾಧ್ಯವಿರುವ, ಅರ್ಧಗಂಟೆಯಲ್ಲಿ ಸಾಮಾನು ತರಲು, ಕರೆಂಟ್ ಬಿಲ್ ಕಟ್ಟಲು ಸಾಧ್ಯವಿರುವ ಹಳ್ಳಿಯ ಬದುಕಿನಲ್ಲೂ ಏನೋ ಆರಾಮವಿದೆ ಎನಿಸಿತು. ಹತ್ತು ವರ್ಷದ ಬಳಿಕ ಎರಡನೆಯ ಮಗಳು ಹುಟ್ಟಿದ್ದಕ್ಕೋ ಏನೋ, ಅಂತೂ ಹಿರಿಯ ಮಗಳು ವೈಷ್ಣವಿ ಹಠಮಾರಿಯಾಗತೊಡಗಿದ್ದಳು. ಸಿಟ್ಟು, ಮೊಂಡುತನ, ಹಿಂಸಾತ್ಮಕ ನಡವಳಿಕೆಯಿಂದ ಗಾಬರಿ ಹುಟ್ಟಿಸಿದ್ದಳು. ಅಂಥವಳು ಅಜ್ಜಅಜ್ಜಿಯರೊಡನೆ ಗೆಳೆತನ ಬೆಳೆಸಿ, ಅವರು ಹೇಳುವುದನ್ನೆಲ್ಲ ಎಕ್ಸೈಟಿಂಗ್ ಎಂದು ಬರೆದಿಟ್ಟುಕೊಳ್ಳುತ್ತ ಅಚ್ಚರಿ ಮೂಡಿಸಿದ್ದಳು. ಒಮ್ಮೆ ಹೆಂಡತಿಯೊಡನೆ ನಮ್ಮ ಆಸ್ಪತ್ರೆಗೆ ಬಂದವ, ‘ಮನೆ ಬೆಲೆ ಏನಂತ ಗೊತ್ತಾಗಕ್ಕೆ ಕೊರೊನಾ ಬರಬೇಕಾಯ್ತು’ ಎಂದು ಅರ್ಥಗರ್ಭಿತವಾಗಿ ಹೆಂಡತಿಯ ಕಡೆ ನೋಡಿ ನಕ್ಕಿದ್ದ.

ಮಗ ಬಂದದ್ದೇ ಮಾಸ್ತರ ಮನೆಯ ಸ್ವರೂಪವೇ ಬದಲಾಯಿತು. ಆನ್‌ಲೈನ್ ಕೆಲಸಕ್ಕೆ, ಕ್ಲಾಸುಗಳಿಗೆ ವೇಗದ ಇಂಟರ್ನೆಟ್ ಬಂತು. ಕಾರು ನಿಲ್ಲಿಸಲು ಕಂಪೌಂಡ್ ಒಡೆದು ದೊಡ್ಡ ಗೇಟು ಇಡಿಸಿದರು. ಕಾರ್ ಶೆಡ್, ಅಟ್ಯಾಚ್ಡ್ ಬಾತ್‌ರೂಮಿನ ಒಂದು ಕೋಣೆ ಕಟ್ಟಿಸಿದರು. ಎರಡು ಕೋಣೆಗಳಿಗೆ ಎಸಿ ಬಂತು. ಬಾವಿಯ ಕೆಂಪು ನೀರು ಕುಡಿಯುವುದು ಕಷ್ಟವೆಂದು ಬೋರ್​ವೆಲ್ ಆಯಿತು. ತೆಂಗಿನಮರಗಳಿಗೆ ಸ್ಪ್ರಿಂಕ್ಲರ್ ಅಳವಡಿಸಿದರು. ಮಾಸ್ತರು ಬಿಳಿಪಂಚೆ ಬಿಟ್ಟು ಬರ್ಮುಡ ಏರಿಸಿ ಓಡಾಡಿದರು. ಕೆಲವೊಮ್ಮೆ ಕಾರಲ್ಲಿ ಆಸ್ಪತ್ರೆಗೆ ಬರುವರು.

ಗೋಪಾಲ ಮಾಸ್ತರಿಗೆ ವಯಸ್ಸು ಹತ್ತುವರ್ಷ ಕಡಿಮೆ ಆದಂತೆ, ಆಯಸ್ಸು ಹತ್ತುವರ್ಷ ಹೆಚ್ಚಾದಂತೆ ಕಾಣತೊಡಗಿತು. ಅವರ ಅರವತ್ತನೇ ಮದುವೆ ವಾರ್ಷಿಕೋತ್ಸವದ ನೆನಪಿಗೆ ಮಗ ಇಬ್ಬರಿಗೂ ಒಂದೊಂದು ಸ್ಮಾರ್ಟ್ ಫೋನ್ ಕೊಡಿಸಿದ. ಇಬ್ಬರಿಗೂ ವಾಟ್ಸಪ್ ಕಲಿಸಿ, ಕುಟುಂಬದ ಒಂದು ಗ್ರೂಪ್ ಮಾಡಿ ವಿಡಿಯೋಕಾಲ್‌ನಲ್ಲಿ ದೀಪಾಳನ್ನು ತೋರಿಸಿಯೂ ಬಿಟ್ಟ. ಈಗ ಬಂಧುಬಳಗದವರೊಂದಿಗೆ ಮಾಸ್ತರು ವಾಟ್ಸಪ್ಪಿನಲ್ಲಿ ಬ್ಯುಸಿ. ಕೂತಲ್ಲೇ ನೆಂಟರ ಜೊತೆ ನಂಟು ಬೆಳೆಸಿಕೊಂಡಿದ್ದಾರೆ. ಈ ನೆಮ್ಮದಿ, ಖುಷಿಯೇ ಶಾಶ್ವತವೇನೋ ಎನ್ನುವಂತೆ ಹಗುರವಾಗಿಬಿಟ್ಟಿದ್ದಾರೆ.

ಆದರೆ ಎಲ್ಲರಿಗೂ ಹೀಗೆನಿಸಿತ್ತೆಂದು ಹೇಳಬರುವುದಿಲ್ಲ. ಸೊಸೆ ಸುವಿಧಾಗೆ ಮನೆಯಿಂದಲೇ ಕೆಲಸ ಎಷ್ಟು ಮಾತ್ರಕ್ಕೂ ಸರಿಯಾಗುತ್ತಿಲ್ಲ. ಒಮ್ಮೊಮ್ಮೆ ಕೆಲಸದ ಒತ್ತಡ, ಮಕ್ಕಳ ಕಾಟಕ್ಕೆ ಬೇಸತ್ತು ಆಫೀಸಿಗೆ ಹೋಗಿ ಕೆಲಸ ಮಾಡುವುದು ಯಾವಾಗಲೋ ಎನಿಸುತ್ತದೆ. ಮಕ್ಕಳ ಕ್ಲಾಸು, ಗಂಡನ ತನ್ನ ಆಫೀಸ್ ಕೆಲಸ ಒಂದೇ ಸಮಯಕ್ಕೆ ಬಂದು ಯಾವುದರ ಮೇಲೂ ಗಮನ ಕೂರಿಸಲು ಆಗುತ್ತಿಲ್ಲ. ವಯಸ್ಸಾದ ಅತ್ತೆಯೊಬ್ಬರಿಗೇ ಕೆಲಸ ವಹಿಸಲು ಆಗುವುದಿಲ್ಲ ಬೇಕರಿ, ಸ್ವಿಗ್ಗಿ, ಜೊಮಾಟೊ ಎಂಥದೂ ಇಲ್ಲದ ಇಲ್ಲಿ ಅಡುಗೆ ತಿಂಡಿ ಮಾಡಿಮಾಡಿ ಸಾಕಾಗಿ ಹೋಗಿದೆ. ಮೂರು ಹೊತ್ತೂ ರುಚಿರುಚಿಯಾಗಿ ಏನು ಒದಗಿಸುವುದೋ ಎನ್ನುವುದೇ ಅನುದಿನದ ಚಿಂತೆಯಾಗಿದೆ. ಅವಳು ಈಸಲ ನಾರ್ತ್ ಈಸ್ಟ್​ಗೆ ಟ್ರಿಪ್ ಹಾಕಿದ್ದಳು. ಕಂಪನಿಯ ಮಹಿಳಾ ಸಂಘದಲ್ಲಿ ಫ್ಯಾಷನ್ ಶೋ ಇಡಿಸಿದ್ದಳು. ಮದುವೆ ಆಗಿ 20 ವರ್ಷ ಆಯ್ತು. ವೈಷ್ಣವಿಗೆ 15 ವರ್ಷ ಆಯ್ತು. ಮನೆ ಕೊಂಡು 10 ವರ್ಷ ಆಯ್ತು. ಶರಣ್ಯಂಗೆ ವರ್ಷ ಆಯ್ತು. ಎಲ್ಲ ಐದರ ಗುಣಿಲೆಯಲ್ಲಿ ಬಂದಿವೆ, ಈ ಸಲ ಎಲ್ಲಾದನ್ನೂ ವಿಶೇಷವಾಗಿ ಅದ್ದೂರಿಯಾಗಿ ಮಾಡಬೇಕೆಂದು ಪ್ಲ್ಯಾನ್ ಮಾಡಿದ್ದರು. ಯಾವುದೂ ಇಲ್ಲವಾಗಿ ನಿರಾಸೆಯಾಗಿದೆ. ಆತಂಕಕ್ಕೆ ಮುಟ್ಟಿನ ಅತಿಸ್ರಾವ ಶುರುವಾಗಿ, ಬಿಳಿಚಿಕೊಂಡು ಆಸ್ಪತ್ರೆಗೆ ಹೋಗಿಬಂದಿದ್ದಾಳೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಇನ್ನು ಲಲಿತಮ್ಮನ ಸ್ಥಿತಿಯೂ ಸ್ವಲ್ಪ ಹೀಗೇ. ಅಡುಗೆ ಕೆಲಸವೆಂಬ ತಿದಿಯನ್ನು ಎಷ್ಟು ಒತ್ತಿದರೇನು, ಗಾಳಿ ಖಾಲಿಯಾಗುವುದೇ? ಇದೂ ಹಾಗೆ. ಬಿಂಬ್ಲಿ ತೆಗೆಯಲೂ ಅವರಿಗೆ ಪುರುಸೊತ್ತಿಲ್ಲ. ತಾಜಾ ತರಕಾರಿ ಬರುವುದಿಲ್ಲ. ಪಾರ್ಲೆಜಿ ಬಿಟ್ಟರೆ ತಿಂಡಿ ಸಿಗುವುದಿಲ್ಲ. ಮೀನಿನವ ಬರುತ್ತಿಲ್ಲ. ಬೆಂಗಳೂರಿನವರಿಗೆ ಮೀನು ಇಷ್ಟವಿಲ್ಲ. ಏನು ಮಾಡುವುದು? ಒಂದು ದೊಡ್ಡ ಮಗೆಕಾಯಿ ಹೆಚ್ಚಿದರೆ ಅದರಲ್ಲಿ ಹುಳಿ, ಬೀಜದ ತಂಬ್ಳಿ, ಸಿಪ್ಪೆಯ ಚಟ್ನಿ, ತಿರುಳನ್ನು ದೋಸೆಗೆ ಹಾಕಿ ನಾಲ್ಕು ಪದಾರ್ಥ ಮಾಡುವರು. ಒಂದಿನ ಬಳಚು ಬಂತೆಂದು ಬಸಳೆ ಹುಡುಕಿ ತಂದು ಬಳಚು-ಬಸಳೆ ಸುಕ್ಕಾ ಮಾಡಿದರು. ಎಸ್ಸೆಲ್ಸಿ ಪರೀಕ್ಷೆ ಮುಂದೆಹೋಗಿ, ಓದಿ ಬೋರಾದ ವೈಷ್ಣವಿ ನಿಧಾನ ಅಜ್ಜಿಯೊಡನೆ ಸಖ್ಯ ಬೆಳೆಸಿದ್ದಳು. ಅವಳಿಗೆ ಆಣ್ಬದ ಸುಕ್ಕಾದ ಪರಿಮಳ ಗೊತ್ತಿರಲಿಲ್ಲ. ಏಡಿ, ಕಲ್ಗ, ಮಿಗದ ಮಾಂಸ ಈ ಮೊದಲು ತಿಂದೇ ಇರಲಿಲ್ಲ. ಪೇರಲೆ ಕುಡಿ, ನೆಲ್ಲಿ ಕುಡಿ, ಮಾವಿನ ಕುಡಿ, ಗುಲಾಬಿ ಕುಡಿ, ಹುಣಸೆ ಕುಡಿಗೆಲ್ಲ ಜೀರಿಗೆ ಕಾಳುಮೆಣಸು ಹಾಕಿ ರುಬ್ಬಿ ಅಜ್ಜಿ ಮಾಡುವ ಏಕಪಾನಿಯ ರುಚಿ ನೋಡಿಯೇ ಇರಲಿಲ್ಲ. ಅಜ್ಜಿಯ ಅಡುಗೆಯ ಲೋಕವೊಂದು ವಿಸ್ಮಯ ಅವಳಿಗೆ.

‘ಮದ್ಲಿಕೆಲ್ಲ ಸಂತೆನೂ ಇಲ್ಲ, ಮಣ್ಣೂ ಇಲ್ಲ. ಪ್ಲವರ್, ಕೋಸು, ಕ್ಯಾಬೇಜು, ಪುದಿನದ ಹೆಸ್ರೆ ಗೊತ್ತಿರ್ಲಿಲ್ಲ. ಅಮ್ಮಮ್ಮ ಹೀಂಗೇ ಒಂದ್ಸಲ ಹೋದ್ಲಲ ಸಂದ್ರೆ ಸೆರಗು ತುಂಬ ಏನೇನೋ ತರೋಳು. ವಂದೆಲಗ, ಸೋರೆಸೊಪ್ಪು, ಹರಗಿ ಸೊಪ್ಪು, ಬಸಳೆ ಸೊಪ್ಪು, ತಗಟೆ ಸೊಪ್ಪು, ಚಕ್ರಮುನಿ, ಸಂಬಾರ ಬಳ್ಳಿ, ಕಾಕಿಸೊಪ್ಪು, ಮೆಣಸಿನ ಕುಡಿ, ತೊಂಡೆಕುಡಿ ಅಬಬಾ ಎಷ್ಟ್ ಸೊಪ್ಪು! ಕಳೆ, ಕಳೆ ಅಂತಾರಲ್ಲ ಮಗಾ, ಕಳೆ ಗಿಡ ಸರ‍್ಸಿದ್ರೆನೆ ಬೆರಿಕೆ ಸೊಪ್ಪು ಆಗದು. ಇನ್ನು ಗಿನ್ನಿ ಗೆಡ್ಡೆ, ಗೊನ್ನಿ ಗೆಡ್ಡೆ, ಸುವರ್ಣ ಗೆಡ್ಡೆ, ಕೆಸಿನ ಗೆಡ್ಡೆ, ಬೆಲಗೆಂಡೆ ತರದ್ ಅದೆಷ್ಟ್ ಗೆಂಡೆನೋ…’

ಹಲಸಿನಕಾಯಿ ಸೊಳೆ ಬೇಯಿಸಿ, ಉಪ್ಪು ಮೆಣಸು ಓಮ ಹಾಕಿ ರುಬ್ಬಿ, ಬಾಳೆಲೆಯ ಮೇಲೆ ಹಪ್ಪಳ ಹಚ್ಚುತ್ತ ಅಜ್ಜಿ ಹೇಳಿದ ಸಂಗತಿಗಳು ಅವಳಿಗೆ ಹೊಚ್ಚಹೊಸವು. ಇದೇನೂ ಗೊತ್ತಿರದ ತನ್ನ ಫ್ರೆಂಡುಗಳನ್ನು ದಂಗುಬಡಿಸಬೇಕು ಎಂದು ಅಜ್ಜಿ ಮಾತನ್ನು ಅವರು ಹೇಳಿದಂತೆಯೇ ಟೈಪಿಸಿಟ್ಟುಕೊಂಡಳು:

‘ಅಜ್ಜೀಸ್ ಮೆನು’ ನುಗ್ಗೆ ಹೂವು ಹರ‍್ದು ಚಟ್ನಿ, ಅತ್ತಿಕುಡಿ ಚಿಗುರಿನ ತಂಬುಳಿ, ಅತ್ತಿಕಾಯಿ-ತೆಂಗಿನಕಾಯಿ ಸುಟ್ಟು ಚಟ್ನಿ, ಕಾಡಕೆಸದ ಚಟ್ನಿ, ಹಲಸಿನಕಾಯಿ ಹುಳಿ, ಹಲಸಿನಕಾಯಿ ಪಲ್ಯ, ದಾನಿಬೇಳೆ ಸ್ಞೀಂ, ಹಲಸಿನಹಣ್ಣಿನ ಕಡಬು-ಪಾಯ್ಸ-ಸುಟ್ಟೇವು, ಮುರುಗಲು ಹಣ್ಣಿನ ಸಾರು, ಚೊಗತೆ ಸೊಪ್ಪಿನ ಪಲ್ಯ.

ಜುಮ್ಮನಕಾಯಿ ಇದೆ ನೋಡು ಮಗಾ, ತೇಫಳ ಅಂತನೂ ಅಂತಾರೆ, ಅದ್ರಲ್ಲಿ ಪಳದಿ ಮಾಡಬೋದು. ಕುಚ್ಚಕ್ಕಿ ಅನ್ನದ ಜೊತೆ ಲಾಯ್ಕ್ ಆಗ್ತು. ಬಾಳೆಕಾಯಿ, ಅದ್ರ ಕುಕ್ಕುಡ ಅಂದ್ರೆ ಕುಂಟಿಗಿ, ದಿಂಡು ಎಲ್ಲಾದ್ರಲ್ಲೂ ಪದಾರ್ಥ ಮಾಡುಕಾಗ್ತು. ಜೀರಿಗೆ ಬೆಳ್ಳುಳ್ಳಿ ಹಾಕಿ ಹರ‍್ದು ಘಮ್ಮನ್ಸಿ ಚಿಟಬದನೆ ಚಟ್ನಿ ಮಾಡ್ತೆ ರಾತ್ರಿಗೆ, ಅಕ್ಕಾ?

ಅನ್ನ ಬಾಗಿದ ತೆಳಿಗೆ ಉಪ್ಪು, ಒಂದ್ ಒಗ್ಗರಣೆ, ಮಜ್ಜಿಗೆ ಹಾಕಿದ್ರೆ ಗಂಜಿತೆಳಿ ಸಾರು ಆಗ್ತು. ಕಮ್ತೀರ ಮನೆ ರುಕ್ಮಾಯಮ್ಮ ಹೇಳಿಕೊಟ್ಟಿದ್ದು ಒಂದಿದೆ ಮಗಾ – ಏನೂ ಇಲ್ದಾಗ ತಾಮ್ರದ್ ಪಾತ್ರೆನ, ಖಾಲಿ ಪಾತ್ರೆನ ಸರೀ ಕಾಸಿ ಅದ್ಕೆ ನೀರು ಹಾಕಿ ಒಂದು ಇಂಗಿನ ಒಗ್ಗರಣೆ ಕೊಡತಾರಂತೆ. ಅದ್ಕೆ ತೋಪಾ ಅಂಬಟ್ ಅಂತಾರೆ. ಪಾತ್ರೆ ಕಾದ ಪರಿಮಳ ಬರ‍್ತದಲ, ಅಷ್ಟೆಸಾಕು.

ಅಜ್ಜಿಯ ನೆನಪಿನ ಬಂಡಿ ಅವಳ ಅಜ್ಜಿಯ ಕಾಲದಿಂದ ಮೊಮ್ಮಗಳ ಕಡೆಗೆ ವೇಗವಾಗಿ ಸಾಗಿತು. ಮತ್ತೆಮತ್ತೆ ಕೇಳಿ ಬರೆದಿಟ್ಟುಕೊಂಡಳು. ಅವಳ ತವರಾದ ಮರಬಳ್ಳಿಯ ಬೆಟ್ಟಕ್ಕೆ ಹೋದಾಗ ಕಿತ್ತುಕೊಟ್ಟ ಹಣ್ಣಿನ ಹೆಸರು ಕೇಳಿದಳು. ಮೊಮ್ಮಗಳು ತಾನು ಹೇಳುವುದನ್ನು ಬರೆದಿಡುತ್ತಿದ್ದಾಳೆ ಎಂದು ಗೊತ್ತಾದದ್ದೇ ಅಜ್ಜಿ, ‘ತಡೆ ಮಗಾ, ಇದೂ ಒಂದ್ ಬರ‍್ಕ’ ಎಂದು ಗುಡ್ಡೆಯ ಮೇಲಿನ ಹಣ್ಣುಗಳ ಯಾದಿಯನ್ನೇ ಕೊಟ್ಟಳು. ಬಿಳಿ ಮುರುಗಲು, ಕರಿ ಮುರುಗಲು, ಮುಳ್ಳಣ್ಣು, ಕರಿ ಮುಳ್ಳಣ್ಣು, ಕಡ್ಲಣ್ಣು, ಕವಳೆಹಣ್ಣು, ಉಲಗೆಹಣ್ಣು, ಗುಡ್ಡೆಗೇರು, ಸಂಪಿಗೆ ಹಣ್ಣು, ಕಳ್ಳಿಹಣ್ಣು, ಕಾರಿಹಣ್ಣು, ಮುಳ್ಚುಂಜಿ ಹಣ್ಣು, ಬಿಳುಮರ‍್ನ ಹಣ್ಣು, ನೇರಳೆಹಣ್ಣು, ಶಳ್ಳೆಹಣ್ಣು, ಇಳ್ಳೆಹಣ್ಣು, ನರಕ್ಲಹಣ್ಣು… ಅಯ್ಯಯ್ಯೋ! ತಾಳು, ತಾಳಜ್ಜಿ ಎಂದು ಅಜ್ಜಿಯ ಜ್ಞಾನ, ರುಚಿ ಸಮೃದ್ಧಿಯ ಎದುರು ವೈಷ್ಣವಿ ದಂದುಬಡಿದಳು. ತಾನು ತುಂಬ ಬಡವಳೆನಿಸಿಬಿಟ್ಟಿತು.

ಇತ್ತ ವೈಷ್ಣವಿ-ಅಜ್ಜಿಯ ಬಂಡಿ ಗಲಗಲವೆಂದು ಸಾಗಿದ್ದರೆ ಅಲ್ಲತ್ತ ಶರಣ್ಯ-ಅಜ್ಜನ ಕುದುರೆ ಚಂಗುಚಂಗೆಂದು ಓಡುತ್ತಿತ್ತು. ಬೆಳಿಗ್ಗೆ ಒಂಭತ್ತಕ್ಕೆ ಸರಿಯಾಗಿ ತಿಂಡಿ ತಿನಿಸಿ, ಯೂನಿಫಾರ್ಮ್ ಹಾಕಿಸಿ, ತಲೆ ಬಾಚಿ, ಕಂಪ್ಯೂಟರ್ ಎದುರು ಕೂರಿಸಬೇಕು. ಅಮ್ಮ, ಅಪ್ಪ ಆಫೀಸಿನ ಕೆಲಸದಲ್ಲಿರುವುದರಿಂದ, ಅಕ್ಕನೊಡನೆ ಜಗಳವಾಗುವುದರಿಂದ ಅಜ್ಜನೇ ಕೂರಬೇಕು. ಶರಣ್ಯ ಮಿಸ್ ಮುಖವನ್ನೇ ನೋಡುತ್ತ ಕೂತು ಹೇಳಿದ್ದು ಬರೆದುಕೊಳ್ಳುವುದೇ ಇಲ್ಲ. ಒಂದುದಿನ ಮಿಸ್ ಪಕ್ಕ ಅವರ ಬೆಕ್ಕು ಬಂತು. ‘ಅಜ್ಜ ಅಜ್ಜ ಇಲ್ನೋಡು ಕ್ಯಾಟು’ ಎಂದು ಕರೆದಳು. ಅಜ್ಜ ಮೊಮ್ಮಗಳು ಕ್ಯಾಟು ನೋಡುವುದರಲ್ಲಿ ಮಿಸ್ ವಾಟ್ ವಾಟೆಂದು ಗದರುವುದೂ ಕೇಳಲಿಲ್ಲ. ಪಕ್ಕದ ರೂಮಿನಲ್ಲಿ ಕುಳಿತ ಸುವಿಧಾಗೆ ಕೇಳಿದರೂ ಇವರಿಬ್ಬರೂ ಬೆಕ್ಕನ್ನೇ ನೋಡುತ್ತಿದ್ದಾರೆ. ‘ಅರೆರೆ ತಂಗೀ ಆ ಬೆಕ್ನ ಬಾಲ ನೋಡ, ಎಷ್ಟ್ ದಪ್ಪದೆ?’ ಎಂದು ಅಜ್ಜ ಹೇಳುತ್ತಿದ್ದಾರೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಶರಣ್ಯಳಿಗೆ ಮಾಸ್ಕ್ ಹಾಕಿ ಕೂರಲು ಇಷ್ಟವಿಲ್ಲ. ‘ಅಜ್ಜ, ನೋ, ತೆಗಿತಿನಿ’ ಎನ್ನುವಳು. ‘ಹೌದಪ್ಪ, ಮಳ್ಳು, ಮನೆ ಒಳಗೆಂತಕೆ ಹಾಕ್ಕಬೇಕೋ ಏನ?’ ಎಂದು ಅಜ್ಜನೆಂದರೆ, ‘ಥಥ, ಮಾಸ್ಕ್ ನೆಕ್ಕಬೇಡ. ವೆಟ್ ಆಯ್ತು’ ಎಂದು ಅಕ್ಕ ಬೈಯುವಳು.

ಒಂದುದಿನ ಅಮ್ಮ ಆಚೆ ಹೋದದ್ದೇ ಹುಡುಗಿಯು, ‘ಅಜ್ಜಾ, ನಂಗೆ ಇದು ಸಾಕು. ಚಿಂಟು ಹಾಕ್ಕೊಡು. ಗೇಮು ಹಾಕ್ಕೊಡು’ ಎಂದು ಪೀಡಿಸಿದಳು. ಅಜ್ಜ ಅವಳ ಆಜ್ಞಾನುವರ್ತಿಯಾದರು. ಸುವಿಧಾಗೆ ಮಿಸ್ ಮೆಸೇಜು ಮಾಡಿದಾಗ ಬಂದು ನೋಡುತ್ತಾಳೆ, ಇಬ್ಬರೂ ನಗುತ್ತ ಗೇಮ್ ಆಡುತ್ತಿದ್ದಾರೆ. ಸೀರಿಯಸ್‌ನೆಸ್ ಅನ್ನುವುದೇ ಮಾಸ್ತರಾಗಿದ್ದ ಮಾವನಿಗಿಲ್ಲವಲ್ಲ! ಆನ್‌ಲೈನ್ ಕ್ಲಾಸ್ ಎಂದರೆ ಆಟವೇ ಎಂದು ಸುವಿಧಾಗೆ ರೇಗಿತು. ಇಲ್ಲೇ ಇದ್ದರೆ ಅಜ್ಜಅಜ್ಜಿ ಮಕ್ಕಳನ್ನು ಕೊಬ್ಬಿಸಿ ಇವು ಡಿಸಿಪ್ಲಿನ್ ಮರೆಯುತ್ತವೆ, ಎಜುಕೇಷನ್ ಎಕ್ಕುಟ್ಟಿ ಹೋಗುವುದೆಂಬ ಆತಂಕವಾಯಿತು.

ಗೋಪಾಲ ಮಾಸ್ತರು ಎಷ್ಟು ವಿದ್ಯಾರ್ಥಿಗಳನ್ನು ನೋಡಿರಲಿಲ್ಲ? ಆದರೆ ಅವರ ಕಾಲ ಈಗಿನಂತಲ್ಲ. ‘ನಂ ಕೂಸಂಗೆ ಕುಂಡಿ ಮ್ಯಾಲ್ ಗನ್ನಾ ನಾಕು ಬಿಡಿ. ಪಾಟಿ ಬಳಕಡ್ಡಿ ಹಿಡುದಿಲ್ಲ’ ಎಂದು ಅವ್ವಿಯೇ ಹೇಳಿ ಹೋಗುವಳು. ಗದ್ದೆಕೊಯ್ಲು, ನೆಟ್ಟಿ, ಮಳೆಯೆಂದರೆ ಹುಡುಗರೇ ಇಲ್ಲ. ಶೇಂಗಾ ಕೀಳುವ ಕಾಲದಲ್ಲಿ ದಿನಾ ಒಬ್ಬೊಬ್ಬರ ಮನೆಯಿಂದ ಒಂದೊಂದು ಪೊಟ್ಲೆ ಹಸಿಶೇಂಗಾ ಬರುವುದು. ಐದನೆತ್ತೆವರೆಗೆ ಪಾಟಿ ಬಳಕಡ್ಡಿ. ಆಮೇಲೆ ಪೇನ್ಸಲ್. ಪೆನ್ನು ಕಾಣಲು ಹೈಸ್ಕೂಲಿಗೇ ಹೋಗಬೇಕು. ಮಸಿ ವಾಂತಿ ಮಾಡುವ ಪೆನ್ನುಗಳು. ಮಸಿ ಕಕ್ಕಿದರೆ ತಲೆಗೆ ತೀಡುವುದು. ರವಿವಾರ ಮಹಾಯಾಗ. ಎಲ್ಲ ಪೆನ್ನುಗಳಿಗೆ ಇಂಕು ತುಂಬುವುದು, ನಿಬ್ಬು ತೆಗೆದು ಒರೆಸಿ ಹಾಕುವುದು, ಸರಿಯಾಗಿ ಇಂಕು ಇಳಿಯದಿದ್ದರೆ ಬ್ಲೇಡಿನಲ್ಲಿ ನಿಬ್ಬಿನ ನಾಲಗೆ ಸೀಳಿ ಕೊಡವಿ ಹಾಕುವುದು, ಸಡಿಲವಾದರೆ ಕಾಗದದ ತುಂಡಿಟ್ಟು ತಿರುಪುವುದು ಮುಂತಾಗಿ ಪೆನ್ನಿನ ಕೆಲಸವೇನು ಕಡಿಮೆಯದೇ? ಬಾಲ್‌ಪೆನ್ ಬಂದಮೇಲೆ ಮಸಿ ಕುಡಿಕೆಯೇ ಇಲ್ಲ. ಈಗ ಮಸಿ, ಪೆನ್ನು, ಪಾಟಿ, ಪಟ್ಟಿ ಏನೂ ಇಲ್ಲ. ಎಲ್ಲ ಇ-ಪಟ್ಟಿ, ಇ-ಪೆನ್ನು! ‘ಶಾರದಾ ಪೂಜೆ ಹ್ಯೆಂಗ್ ಮಾಡ್ತೆ? ಪುಸ್ತಕ ಇಡ್ತಿರಾ, ಮೊಬೈಲಾ?’ ಎಂದು ಅಜ್ಜ ಕೇಳುವಾಗ ಮಗುವಿಗೆ ತಲೆಬುಡ ಅರ್ಥವಾಗದು.

ಅಂತೂ ಏನಾದರಾಗಲಿ, ಶರಣ್ಯಂಗೆ ತನ್ನ ಅಜ್ಜ ಎಷ್ಟು ಒಳ್ಳೆಯವನು ಎನಿಸಿದೆ. ಅವನೂ ತಾನೂ ಒಂದೇ ಎಂದುಕೊಂಡು ಮೊಬೈಲ್ ಆಟಕ್ಕೆ ಕರೆಯುತ್ತಾಳೆ. ನಾವು ಇನ್ಮೇಲೆ ಜೊತೆಗಿರಣ ತಾತಾ ಎನ್ನುತ್ತಾಳೆ.

ಆದರೆ ಎಲ್ಲ ಒಳ್ಳೆಯದೂ ಒಂದುದಿನ ಕೊನೆಗೊಳ್ಳಲೇಬೇಕು. ವೈಷ್ಣವಿಯ ಎಸ್ಸೆಲ್ಸಿ ಮುಗಿದು ಪಿಯುಸಿಗೆ ಸೇರಿಸಿದರು. ಇಲ್ಲಿ ಇರುವ ಏಕೈಕ ಸೇವೆ ಬಿಎಸ್ಸೆನ್ನೆಲ್ ಎಷ್ಟು ನಿಧಾನ ಎಂದರೆ ಅವಳ ಕ್ಲಾಸೂ ಸಾಗದು. ಇವರ ಕೆಲಸವೂ ಮುಂದೆಹೋಗದು. ಒಂದು ಮಳೆ ಬಂದದ್ದೇ ಕರೆಂಟು ಹೋಗುವುದು. ಕೂಡಲೇ ಸಿಗ್ನಲ್ ಇಲ್ಲವಾಗುವುದು. ಕೆಲಸವೂ ಇಲ್ಲ, ಪಾಠವೂ ಇಲ್ಲ. ಎಷ್ಟೊಳ್ಳೆಯ ಮೊಬೈಲ್, ಕಂಪ್ಯೂಟರ್ ಇದ್ದರೂ ಸಿಗ್ನಲ್ ಇಲ್ಲದಿದ್ದರೆ ಏನು ಮಾಡುವುದು? ಈ ರಗಳೆಯ ಜೊತೆಗೆ ಅವರ ಮನೆ ಒಂದುವರ್ಷದಿಂದ ಖಾಲಿ ಬಿದ್ದು ಫರ್ನಿಚರು, ಸಾಮಾನುಗಳೆಲ್ಲ ಧೂಳು ಹಿಡಿದಿದ್ದವು.

ಲಾಕ್‌ಡೌನ್ ಆದದ್ದು ಅನ್‌ಲಾಕ್ ಆಗತೊಡಗಿದಂತೆ ಊರಿಗೆ ಬಂದ ಹೆಜ್ಜೆಗಳು ಮರಳಿ ಬೆಂಗಳೂರಿಗೆ ಹೊರಟವು.

ಈಗ ಶರಣ್ಯ ದಿನಾ ವಾಟ್ಸಪ್‌ಕಾಲ್ ಮಾಡಿ ಅಜ್ಜನಿಗೆ ಮಗ್ಗಿ ಒಪ್ಪಿಸುತ್ತಾಳೆ. ವೈಷ್ಣವಿಗೆ ತನ್ನ ಇನ್‌ಸ್ಟಾಗ್ರಾಮ್ ಪೇಜಿನಲ್ಲಿ ಹೊಸಹೊಸದು ಹಾಕಲು ಅಜ್ಜಅಜ್ಜಿಯರು ಇನ್‌ಫಿನಿಟ್ ಸೋರ್ಸ್ ಎನಿಸಿಬಿಟ್ಟಿದ್ದಾರೆ. ಮಗ ಸೊಸೆ ತಮ್ಮ ಆತಂಕ, ಡೆಡ್‌ಲೈನುಗಳಲ್ಲಿ ಮುಳುಗಿ ಹೋಗಿದ್ದಾರೆ. ಮಾಸ್ತರು ಪದೇಪದೇ ಮೊಮ್ಮಕ್ಕಳ ನೆನೆದು ಗದ್ಗದಿತರಾಗುತ್ತಾರೆ. ಲಲಿತಮ್ಮ ಮಾತ್ರ, ‘ನನ್ನಪ್ಪ ಅವ್ವಿ ಬಿಟ್ ನಿಮ್ ಸಂಗ್ತಿ ಬರ‍್ಲಿಲ್ವ? ಈಗ ಮಕ್ಳು ನಮ್ಮನ್ ಬಿಟ್ಟು ಇದಾರೆ ಅಷ್ಟೆಯ. ನಮಗ್ ನಾವೇ. ಗ್ವಾಡಿಗ್ ಮಣ್ಣೇ, ಸುಮ್ನಿರಿ’ ಎಂದು ಇಬ್ಬರಿಗೆ ಇಷ್ಟು ದೊಡ್ಡ ಮನೆ ಏಕೆ ಬೇಕಿತ್ತೋ ಎಂದುಕೊಂಡು ದೇಖರೇಖೆಗೆ ಎದ್ದು ಹೋಗುತ್ತಾರೆ. ‘ಆ ಮಳ್ಳು ವಾಟ್ಸಪ್ ಬಿಟ್ಟು ಬಗೇಲ್ ಕೆಲ್ಸಾ ನೋಡಿ’ ಎಂದು ಗಂಡನಿಗೆ ಗದರುತ್ತಾರೆ.

* ಪದಗಳ ಅರ್ಥ ಪುಗ್ಗಿ = ಬಲೂನು ಕೊಟ್ಟೆ = ಪ್ಯಾಕೆಟ್ ಬಿಂಬ್ಲಿ = ಜೇಡರ ಬಲೆ ಬಳಚು = ಚಿಪ್ಪು ಕಲ್ಗ = ಬಂಡೆಗಳ ಮೇಲ್ಮೈಯಲ್ಲಿ ಚಿಪ್ಪಿನೊಳಗೆ ಬೆಳೆವ ಮೃದ್ವಂಗಿ ಆಣ್ಬ = ಅಣಬೆ ಸುಕ್ಕಾ = ಪಲ್ಯ ಮಿಗ = ಕಾಡುಹಂದಿ ಕುಮ್ರಿ = ನೀರು ನಿಲ್ಲದ, ಇಳಿಜಾರಿರುವ ‘ಬೆಟ್ಟು’ ಜಾಗ. ದಾನಿಬೇಳೆ ಸ್ಞೀಂ = ಹಲಸಿನ ಬೀಜ ಬೇಯಿಸಿ/ಸುಟ್ಟು ಕಾಯಿ ಬೆಲ್ಲ ಹಾಕಿದ್ದು ಅಮ್ಮಮ್ಮ = ಅಮ್ಮನ ಅಮ್ಮ, ಅಜ್ಜಿ ಬೆಲಗೆಂಡೆ = ಗೆಣಸು ಮಗೆ = ಬಣ್ಣದ ಸೌತೆ ಕುಕ್ಕುಡ ಅಥವಾ ಕುಂಟಿಗೆ = ಬಾಳೆಮೂತಿ ಅಕ್ಕಾ = ಆಯ್ತಾ? ಚಿಟಬದನೆ = ದ್ರಾಕ್ಷಿಯಷ್ಟು ಪುಟ್ಟ ಬದನೆಕಾಯಿ ಲಾಯ್ಕ್ = ಒಳ್ಳೆಯದಾಗಿ, ಚೆನ್ನಾಗಿ ಮಾಡ್ತೆ = ಮಾಡ್ತೀನಿ ಕಮ್ತೀರು = ಕೊಂಕಣಿ ಭಾಷಿಕ ಕಾಮತರು (ಸಾಧಾರಣವಾಗಿ ಕಿರಾಣಿ ವ್ಯಾಪಾರಸ್ಥರು) ಆಗ್ತು = ಆಗುತ್ತದೆ ಬಳಕಡ್ಡಿ = ಬಳಪ ಪೊಟ್ಲೆ = ಪೊಟ್ಟಣ

* ಫೋಟೋ : ಎಸ್. ವಿಷ್ಣುಕುಮಾರ್

* ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ -22 ; ‘ಕೊಡುವಾಗ ಕೈನೋಡು, ತಗೊಳ್ಳುವಾಗ ಮುಖನೋಡು’ * ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ಪ್ರಾಣಿ ಪಕ್ಷಿಗಳಿಗೆ ತಾಯ್ತನ ತೋರಿಸುವವಳು ತಾನು ತಾಯಿ ಆಗಲಾರೆ ಎನ್ನುವಳಲ್ಲ?

Published On - 9:12 am, Mon, 21 June 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ