Covid Diary : ಕವಲಕ್ಕಿ ಮೇಲ್ ; ಪ್ರಾಣಿ ಪಕ್ಷಿಗಳಿಗೆ ತಾಯ್ತನ ತೋರಿಸುವವಳು ತಾನು ತಾಯಿ ಆಗಲಾರೆ ಎನ್ನುವಳಲ್ಲ?

Vibes : ‘ವೈಬ್ಸ್ ಅಂದ್ರೆ ಎಷ್ಟೋ ದೂರದಲ್ಲಿ ಇರೋರಿಗೂ ನೀವು ಶುದ್ಧ ದೇಹ, ಮನಸ್ಸಿನಿಂದ ಪ್ರಾರ್ಥನೆ ಮಾಡಿ ವೈಬ್ಸ್ ಕಳಿಸಿದರೆ ಅವರು ಗುಣ ಆಗ್ತಾರೆ. ಮೆಡಿಸಿನ್‌ಗಿಂತ ಹೆಚ್ಚು ವರ್ಕಾಗುತ್ತೆ ಅದು. ನಾನು ಆಮ್‌ಸ್ಟರ್‌ಡ್ಯಾಂನಲ್ಲಿದ್ದಾಗ ಶಿರಸೀಲಿದ್ದ ನಮ್ಮಪ್ಪನ್ನ ಹೀಗೆ ಪಾಸಿಟಿವ್ ವೈಬ್ಸ್ ಕಳಿಸಿ ತುಂಬ ಸಲ ಉಳಿಸ್ಕಂಡಿದ್ದೆ. ಹಾಗೆ ಮಾವಂಗೆ ಕಳಿಸ್ಲಿಲ್ಲ’

Covid Diary : ಕವಲಕ್ಕಿ ಮೇಲ್ ; ಪ್ರಾಣಿ ಪಕ್ಷಿಗಳಿಗೆ ತಾಯ್ತನ ತೋರಿಸುವವಳು ತಾನು ತಾಯಿ ಆಗಲಾರೆ ಎನ್ನುವಳಲ್ಲ?
Follow us
ಶ್ರೀದೇವಿ ಕಳಸದ
|

Updated on:Jun 20, 2021 | 1:29 PM

ಚದರ ಕಿಲೋಮೀಟರಿಗೆ 11 ಸಾವಿರ ಜನರಿರುವ ಬೆಂಗಳೂರಿನಿಂದ ಬಂದ ಅವರು, ಚದರ ಕಿಲೋಮೀಟರಿಗೆ 140  ಜನರಿರುವ ಈ ಗುಡ್ಡಗಾಡು ಜಿಲ್ಲೆಗೆ ಅನಿವಾರ್ಯವಾಗಿ ಬಂದಿದ್ದರು. ಅವನ ಮನೆ ಜನವಸತಿ ಅತಿಕಡಿಮೆ ಇರುವ ಗಟ್ಟದ ಬರೆಯಲ್ಲಿದೆ. ಗುಡ್ಡ ಹತ್ತಿಳಿದು ಸುತ್ತಿ ಸಾಗಬೇಕು. ಅಂಥಲ್ಲಿ ಹತ್ತಾರು ಎಕರೆ ಅಡಕೆ ತೋಟದ ಒಡೆಯರು ಅವರು. ಅವರಂತಹದೇ ಮತ್ತೆ ನಾಲ್ಕಾರು ತೋಟ, ಮನೆಗಳು. ತೋಟದ ಹಿಂದೆಯೇ ಎತ್ತರದ ಬೆಟ್ಟ, ದಟ್ಟ ಕಾಡು. ಮನೆಗೆಲಸ, ತೋಟದ ಕೆಲಸ, ಕಾಡಿನ ಒಡನಾಟ ಬಿಟ್ಟರೆ ಉಳಿದ ಚಟುವಟಿಕೆ ಸಾಧ್ಯವಿಲ್ಲ. ಅವಳ ತವರುಮನೆಯೂ ಇಂತಹುದೇ ಜಾಗದಲ್ಲಿದೆ. ಆದರೆ ಅಂಥಲ್ಲಿ ಇರಲು ಅವಳಿಗೆ ಏನೂ ಇಷ್ಟವಿಲ್ಲ. ಬೆಂಗಳೂರಿನಲ್ಲಿರಬೇಕೆಂದು ಇಂಜಿನಿಯರಿಂಗ್ ಮಾಡಿದ್ದಳು. ಎರಡು ವರ್ಷ ಹಾಲೆಂಡಿನಲ್ಲಿ ಕೆಲಸ ಮಾಡಿ ತಿರುಗಿ ಬಂದಿದ್ದಳು. ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಯಾಗಬೇಕೆಂದು ಏನೇನೋ ಕನಸು ಕಂಡಿದ್ದಳು.

* ‘ಈ ಮಗು ಬೇಡ ಮೇಡಂ. ಬರೀ ದುಃಖ, ಬೋರು. ಲೈಫಲ್ಲಿ ಒಳ್ಳೇದೇನೂ ಇಲ್ಲ ಅನಿಸ್ತಿದೆ. ಇಂಥ ಟೈಮಲ್ಲಿ ಹುಟ್ಟಿದ ಮಗುವಿನ ಲಕ್ಕೂ ಸರಿ ಇರಲ್ಲ. ಅದಕ್ಕೂ ಕಷ್ಟಗಳೇ ಬರಬೋದು. ಸೋ…’

‘ಓದಿದವರಂತೆ ಕಾಣ್ತೀರಿ, ಇನ್ನೂ ಜಾತಕ ಲಕ್ ಅಂತ ನಂಬ್ತಾ ಇದೀರಲ್ಲ. ಎಲ್ಲ ಕಾಲದಲ್ಲೂ ಕಷ್ಟ ಇದ್ದದ್ದೇ. ಹಾಗಂತ ಹುಟ್ಟುಸಾವು ನಿಂತವೇ?’

ಮೇಡಂ ನಿಮಗ್ಗೊತ್ತಿಲ್ಲ. ನನ್ನ ಗ್ರಹಚಾರ ಸರಿಯಿಲ್ಲ. ಬರೀ ಕಳಕೊಳ್ಳೋದೇ ಆಗಿದೆ. ಯಾವಕಡೆ ತಿರುಗಿದ್ರೂ ನೋವು, ಸಂಕಟ, ಆತಂಕನೇ ಇದೆ. ಪ್ಲೀಸ್, ಅಬಾರ್ಷನ್ ಮಾಡಿ’

ದೊಡ್ಡ ಕಣ್ಣರಳಿಸಿ ನನ್ನನ್ನೇ ಕಣ್ಣು ಮಿಟುಕಿಸದೆ ನೋಡುತ್ತ ನಿಂತಿದ್ದಳು. ಸ್ನೇಹವಾಗಲೀ ದುಃಖವಾಗಲೀ ಕಾಣಿಸದ ನಿರ್ಭಾವುಕ ಮುಖ. ದಿಟ್ಟಿಸುವ ಪರಿಯಲ್ಲೇ ಎಲ್ಲ ಸರಿಯಿಲ್ಲ ಎಂದು ಗೊತ್ತಾಯಿತು. ಅವಳೂ ಅವನೂ ಸಾಫ್ಟ್​ವೇರಿಗರು. ಮದುವೆಯಾಗಿ ವಿದೇಶದ ಹನಿಮೂನ್ ಮುಗಿಸಿ ಬೆಂಗಳೂರಿಗೆ ಬಂದಿದ್ದರಷ್ಟೆ, ಲಾಕ್‌ಡೌನ್ ಆಯಿತು. ಒಂದು ವರ್ಷ ಮನೆಯಿಂದಲೇ ಕೆಲಸ ಎಂದ ಕಾರಣ ಹತ್ತು ತಿಂಗಳಿಂದ ಇಲ್ಲೇ ಇದ್ದಾರೆ. ಈಗವಳು ಗರ್ಭವತಿ. ಆದರೆ ಅವಳಿಗದು ಬೇಡ.

‘ದುಃಖ, ಬೋರುಗಳೆಲ್ಲ ಮಗು ಬಂದ್ರೆ ಕಮ್ಮಿ ಆಗಬಹುದು, ಮೊದಲನೇ ಗರ್ಭ ತೆಗೆಸುವುದು ಒಳ್ಳೇದಲ್ಲ, ಇನ್ನೊಂದ್ಸಲ ಇಬ್ಬರೂ ಯೋಚಿಸಿ’

ಇಷ್ಟು ಹೇಳುವುದು ವೈದ್ಯೆಯಾಗಿ ನನ್ನ ಕರ್ತವ್ಯವೆಂದು ಹೇಳಿದೆ. ಆದರೆ ಎತ್ತ ಎಳೆದರೂ ಒಂದೇ ದಿಕ್ಕಿನತ್ತ ಹರಿಯುತ್ತಿರುವ ಲಾವಾ. ಸಂಗಾತಿಯ ಅಭಿಪ್ರಾಯ ತಿಳಿಯಲು ‘ಹೌದೇ?’ ಎಂದು ಅವನತ್ತ ತಿರುಗಿದೆ. ನಾನು ಯಾರಂತ ಗೊತ್ತಾಯಿತಾ ಎಂದು ಕೇಳಿದ. ಪರಿಚಿತ ನಗೆಯ ಕಣ್ಣು. ಆದರೆ ಗುರುತು ಹತ್ತಲಿಲ್ಲ. ಕ್ರಾಪಿನ ಕೂದಲನ್ನೆತ್ತಿ ಮೇಲುಹಣೆಯ ಮೇಲೆ ‘ನೀವೇ ಹಾಕಿದ ಹೊಲಿಗೆ’ ಎಂದು ತೋರಿಸಿದಾಗ ನೆನಪಾಯಿತು. ನನ್ನ ಪ್ರಾಕ್ಟೀಸಿನ ಆರಂಭದ ದಿನಗಳು. ಅವನಾಗ ಐದಾರು ವರ್ಷದ ಹುಡುಗ. ಅಮ್ಮಅಪ್ಪನ ಕಣ್ತಪ್ಪಿಸಿ ದನಕ್ಕೆ ಹಸಿಮೇವು ತರಲು ಬೇಣಕ್ಕೆ ಹೋದವನಿಗೆ ಕತ್ತಿ ತಿರುಗಿ ಬಂದು ಹಣೆಗೆ ಬಡಿದು ದೊಡ್ಡ ಗಾಯವಾಗಿತ್ತು. ಹೊಲಿಗೆ ಹಾಕಿದ್ದೆವು. ಒಂದುಚೂರೂ ಅಲ್ಲಾಡದೆ, ಅಳದೆ, ಹೆದರದೆ ಮಲಗಿ ಹೊಲಿಗೆ ಮಾಡಿಸಿಕೊಂಡ ಪೋರ ಆಶ್ಚರ್ಯ ಹುಟ್ಟಿಸಿದ್ದ. ಈಗದನ್ನೆಲ್ಲ ನೆನಪಿಸಿದ.

‘ಇದರಲ್ಲಿ ನಂದೇನೂ ಇಲ್ಲ ಮೇಡಂ, ಅವಳಿಷ್ಟ’ ಎಂದವನು ಹೊರಗೆಹೋದ.

‘ಯೋಚ್ನೆ ಮಾಡಕ್ಕೇನೂ ಇಲ್ಲ ಮೇಡಂ. ಮಗು ಬಂದರೆ ಇನ್ನಷ್ಟು ತಲೆನೋವು. ನಮ್ಮ ಸಂಕಟ ಅಲ್ದೆ ಅದರ ಸಂಕಟನೂ ನೋಡಬೇಕು. ನಮ್ಗೆ ಏನಾಗುತ್ತೆ ಅಂತನೇ ಗೊತ್ತಿಲ್ಲ, ಅದಕ್ಕೇನಾಗುತ್ತೋ ಅಂತ ವರಿ ಮಾಡಬೇಕು. ಬೇಡವೇ ಬೇಡ’

‘ಇಷ್ಟು ನಿರಾಶರಾಗಬೇಡಿ ಸ್ಮಿತಾ. ಹೊರಗೆ ನೋಡಿ, ನಿಮ್ಮ ಪ್ರತಿ ಪ್ರಶ್ನೆಗೂ ಪ್ರಕೃತಿಯಲ್ಲಿ ಉತ್ತರವಿದೆ. ಪ್ರತಿ ಸಮಸ್ಯೆಗೂ ಅಲ್ಲಿ ಪರಿಹಾರವಿದೆ.’

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ನಮ್ಮನೆಯೋರೂ ನಿಮ್ಮಂಗೆ ಪ್ರಕೃತಿ ಪ್ರಕೃತಿ ಅಂತಾರೆ. ಬೆಂಗಳೂರಲ್ಲಿ ಕೂತರೂ ಮಳೆಸುರಿಯೋ ಶಬ್ದ, ನೀರು ಹರಿಯೋ ಶಬ್ದ, ಹಕ್ಕಿ ಕೂಗೋ ಶಬ್ದದ ಹಿನ್ನೆಲೆ ಮ್ಯೂಸಿಕ್ ಇಟ್ಕೊಂಡು ಕೆಲಸ ಮಾಡ್ತಾರೆ. ಆದ್ರೆ ನಂಗೆ ಪ್ರಕೃತಿ ಅಂದ್ರೆ ಬೋರು. ಮರ, ಗಿಡ, ಪಕ್ಷಿಪ್ರಾಣಿಗಳನ್ನ ನೋಡಿ ನೋಡಿ ಒಂತರಾ ಡಿಪ್ರೆಷನ್ ಬರುತ್ತೆ. ಜೀವನದಲ್ಲಿ ಉತ್ಸಾಹನೇ ಹೋಗುತ್ತೆ. ನಗು ಇಲ್ಲ, ಮಾತಿಲ್ಲ, ಸಂತೋಷನೇ ಇಲ್ಲ.’

‘ನಿಮಗೆ ಹಾಗನಿಸುತ್ತಾ? ಪ್ರಕೃತಿಯಲ್ಲಿ ಎಷ್ಟೊಂದು ಜೀವಂತಿಕೆ, ಚೈತನ್ಯ ಇದೆಯಲ್ಲ ಸ್ಮಿತಾ? ಇಲ್ಲಿನ ಪ್ರಕೃತಿ ನೋಡೇ ನಾವಿಲ್ಲಿ ನಿಂತುಬಿಟ್ವಿ’

‘ಅಯ್ಯೋ, ಪ್ರಕೃತಿಯಲ್ಲಿ ಬರೀ ದುಃಖನೇ ಇದೆ. ಒಂದು ಪುಟ್ಟ ಹಕ್ಕಿ ನಮ್ಮನೆಯ ಮಾಡು ಇಳಕಲಿಗೆ ಗೂಡು ಕಟ್ಟಿತ್ತು. ನೋಡನೋಡ್ತ ಕೆಂಬೂತ ಅದರ ಮೂರು ನೀಲಿ ಮೊಟ್ಟೆನ ಕುಕ್ಕಿ ತಿಂದುಹೋಯ್ತು. ನಾಯಿಗಳಂತೂ ಯಾವಾಗ್ಲೂ ಕಚ್ಚಾಡ್ತಾವೆ. ಕೆಂದನಾಯಿ ಮತ್ತೆ ಎರಡು ಮರಿಗಳನ್ನ ಚಿರತೆ ಎತ್ಕೊಂಡೋಯ್ತು. ನಮ್ಮನೆ ಬೆಕ್ಕು ಮರಿ ಹಾಕಿತ್ತು. ಇನ್ನೂ ಕಣ್ಣು ಸಹ ಒಡೆದಿರಲಿಲ್ಲ. ಅದ್ರ ಮೂರೂ ಮರಿಗಳನ್ನ ಮಾಳ ಅಲುಬಿ ಹಾಕ್ತು. ಬೆಕ್ಕಿನ ಒದ್ದಾಟ ನೋಡ್ಬೇಕಿತ್ತು ನೀವು. ಆದ್ರೆ ಅದೇ ಬೆಕ್ಕು ಅಳಿಲಿನ ಎರಡು ಮರಿ ಹಿಡ್ಕಂಡು ಬಂತು. ಪಾಪ, ಪುಟ್ಟ ಮರಿಗಳನ್ನ ಹೆಂಗೆ ಆಟ ಆಡಿಸ್ತು ಅಂದ್ರೆ ತಿಂದಾರೂ ತಿನ್ನುತ್ತ? ಅದೂ ಇಲ್ಲ, ಬರೀ ಚಿನ್ನಾಟ. ಒಂದನ್ನ ರೆಸ್ಕ್ಯೂ ಮಾಡಿ ತೆಂಗಿನಮರದ ಮೇಲಿಟ್ಟೆ. ಆದ್ರೆ ಅದು ಸಹ ಕೆಳಗೆ ಬಿದ್ದು ಮತ್ತೆ ಬೆಕ್ಕಿನ ಬಾಯಿಗೇ ಸಿಕ್ತು. ಪಾಪ…’

ಬಿಕ್ಕಿಬಿಕ್ಕಿ ಅಳಲು ಶುರು ಮಾಡಿದಳು. ಅವಳು ಕೊಟ್ಟ ಉದಾಹರಣೆಗಳೆಲ್ಲ ತಾಯಿ ಮಗುವಿನ ಅಗಲಿಕೆ, ಅನಾಥ ಭಾವದ ಸುತ್ತಲೇ ಇದ್ದವು. ಪ್ರಾಣಿಗಳಿಗಿಷ್ಟು ತಾಯ್ತನ ತೋರಿಸುವವಳು, ಮರಿಗಳಿಗಾಗಿ ಅಳುವವಳು ತಾನು ತಾಯಿ ಆಗಲಾರೆ ಎನ್ನುವಳಲ್ಲ?

ಚದರ ಕಿಲೋಮೀಟರಿಗೆ 11 ಸಾವಿರ ಜನರಿರುವ ಬೆಂಗಳೂರಿನಿಂದ ಬಂದ ಅವರು, ಚದರ ಕಿಲೋಮೀಟರಿಗೆ 140  ಜನರಿರುವ ಈ ಗುಡ್ಡಗಾಡು ಜಿಲ್ಲೆಗೆ ಅನಿವಾರ್ಯವಾಗಿ ಬಂದಿದ್ದರು. ಅವನ ಮನೆ ಜನವಸತಿ ಅತಿಕಡಿಮೆ ಇರುವ ಗಟ್ಟದ ಬರೆಯಲ್ಲಿದೆ. ಗುಡ್ಡ ಹತ್ತಿಳಿದು ಸುತ್ತಿ ಸಾಗಬೇಕು. ಅಂಥಲ್ಲಿ ಹತ್ತಾರು ಎಕರೆ ಅಡಕೆ ತೋಟದ ಒಡೆಯರು ಅವರು. ಅವರಂತಹದೇ ಮತ್ತೆ ನಾಲ್ಕಾರು ತೋಟ, ಮನೆಗಳು. ತೋಟದ ಹಿಂದೆಯೇ ಎತ್ತರದ ಬೆಟ್ಟ, ದಟ್ಟ ಕಾಡು. ಮನೆಗೆಲಸ, ತೋಟದ ಕೆಲಸ, ಕಾಡಿನ ಒಡನಾಟ ಬಿಟ್ಟರೆ ಉಳಿದ ಚಟುವಟಿಕೆ ಸಾಧ್ಯವಿಲ್ಲ. ಅವಳ ತವರುಮನೆಯೂ ಇಂತಹುದೇ ಜಾಗದಲ್ಲಿದೆ. ಆದರೆ ಅಂಥಲ್ಲಿ ಇರಲು ಅವಳಿಗೆ ಏನೂ ಇಷ್ಟವಿಲ್ಲ. ಬೆಂಗಳೂರಿನಲ್ಲಿರಬೇಕೆಂದು ಇಂಜಿನಿಯರಿಂಗ್ ಮಾಡಿದ್ದಳು. ಎರಡು ವರ್ಷ ಹಾಲೆಂಡಿನಲ್ಲಿ ಕೆಲಸ ಮಾಡಿ ತಿರುಗಿ ಬಂದಿದ್ದಳು. ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಯಾಗಬೇಕೆಂದು ಏನೇನೋ ಕನಸು ಕಂಡಿದ್ದಳು. ಇಂಥ ಎಷ್ಟೋ ತರುಣ ಜೀವಗಳ ಕನಸನ್ನು ಪೊರೆದ ಬೆಂಗಳೂರೆಂಬ ಜನರಕಾಡು ಇದ್ದಕ್ಕಿದ್ದಂತೆ ಬಂದೆರಗಿದ ಕೋವಿಡ್ ಕಾಡ್ಗಿಚ್ಚಿಗೆ ಬಯಲುಗೊಂಡಿತು. ಬೆಂಗಳೂರಿಗರು ಬುಡದ ‘ಕೊಂಪೆ’ಗಳಿಗೆ ತಿರುಗಿ ಬರುವಂತಾಯಿತು. ಇದನ್ನವಳು ಸೋಲೆಂದೇ ಭಾವಿಸಿದ್ದಳು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಪ್ರತಿ ರವಿವಾರ ಗುಡ್ಡಬೆಟ್ಟ ಎಂದು ಮಕ್ಕಳಿಗೆ ಕಾಡು ಸುತ್ತಿಸುವ ಉಮೇದಿನಲ್ಲಿ ನಾವೂ ಆ ಊರಿಗೊಮ್ಮೆ ಹೋಗಿದ್ದೆವು. ಅಲ್ಲಿಯದು ಕಟ್ಟೇಕಾಂತ. ಇಷ್ಟಪಟ್ಟವರಿಗೆ ಮಹದಾನಂದ ನೀಡುವ ತಾಣ. ಏಕಾಂತ ಇಷ್ಟವಿಲ್ಲದ ಗುಂಪುಜೀವಿಗಳಿಗೆ ಜೈಲು ಸಮಾನ. ಅವಳಿಗದು ಜೈಲಿನಂತೇ ಕಂಡಿತ್ತು. ಬಂದು ವರ್ಷ ಆಗುತ್ತ ಬಂತು. ಇನ್ನೂ ಒಂದು ವರ್ಷ ಮನೆಯಿಂದ ಕೆಲಸವೇ ಮುಂದುವರಿಯುವುದು ಎಂದಾಗ ಅವಳಿಗೆ ಬದುಕಿನಲ್ಲಿ ಭರವಸೆಯೇ ಮಾಯವಾಯಿತು.

ಇಬ್ಬರೂ ಮಾತನಾಡಿಕೊಂಡೇ ಬಂದಿದ್ದರು, ತಮ್ಮಿಷ್ಟದಂತೆ ಕುಟುಂಬಯೋಜನೆ ಮಾಡಿಕೊಂಡರು. ಐದು ದಿನ ಬಿಟ್ಟು ಮತ್ತೊಮ್ಮೆ ಬಂದರು. ನನ್ನ ಬಗ್ಗೆ ಅಷ್ಟಿಷ್ಟು ಸರ್ಚ್ ಮಾಡಿಕೊಂಡು ಬಂದಿದ್ದಳೆಂದು ಕಾಣುತ್ತದೆ, ನಿಮ್ಮ ಎಲ್ಲಾ ಬುಕ್ಸ್ ಬೇಕು ಎಂದಳು. ಆಟೋಗ್ರಾಫ್ ತಗೊಂಡಳು. ಯಾವ ರಿಬೇಟೂ ಬೇಡವೆಂದು ಪುಸ್ತಕಗಳ ಹಿಂದೆ ನಮೂದಿಸಿದಷ್ಟೇ ದುಡ್ಡು ಕೊಟ್ಟಳು. ಅವಳೂ ಕವಿತೆ, ಬರಹ ಬರೆಯುವ ಸೂಕ್ಷ್ಮ ಮನದ ಹುಡುಗಿ ಎಂದು ಮಾತನಾಡುತ್ತ ತಿಳಿಯಿತು. ‘ನಿಮ್ಮ ಹತ್ರ ಪರ್ಸನಲ್ ಆಗಿ ಮಾತನಾಡಬೇಕು. ನಿಮ್ಮ ಪೇಶೆಂಟ್ಸ್ ಕಳಿಸಿ, ಅಲ್ಲೀವರೆಗೂ ಕಾಯುತ್ತೇನೆ’ ಎಂದಳು. ಪೇಶೆಂಟ್ ನೋಡಿ ಮುಗಿಸಿ, ನನ್ನ ಎಡ ಬಲ ಕೈಗಳನ್ನು ಅತ್ತ ಊಟಕ್ಕೆ ಕಳಿಸಿ, ನಾವಿಬ್ಬರೇ ಕುಳಿತೆವು.

‘ಮೇಡಂ, ಯಾಕೋ ನಿಮ್ಮನ್ನ ನೋಡಿದ್ರೆ ಎಲ್ಲ ಕನ್ಫೆಷನ್ ಮಾಡ್ಕೊಂಡು ಬಿಡಬೇಕು, ನೀವೇ ಸೂಟಬಲ್ ಅನಿಸಿತು. ಅದಕ್ಕೇ ನಮ್ಮನೆಯೋರಿಗೆ ಹೊರಗಿರಕ್ಕೆ ಹೇಳಿ ಬಂದಿದೀನಿ. ನಾ ಹೇಳೋದು ಕೇಳಿ ನಾನೆಷ್ಟು ಕೆಟ್ಟೋಳು ಅಂತ ಅನಿಸಬಹುದು ನಿಮ್ಗೆ.’

‘ಅಂತವೆಲ್ಲ ಮನಸ್ಸಲ್ಲಿ ಇಟ್ಕೋಬೇಡ. ಅದೇನು ಹೇಳು ಸ್ಮಿತಾ’

‘ನಂಗನಿಸ್ತಾ ಇದೆ, ನಾನು ತುಂಬ ತಪ್ಪು ಮಾಡಿದಿನಿ, ಪಾಪಿ ಅಂತ. ಅದಕ್ಕೇ ಕೊರೊನಾ, ಮಿಡತೆ, ನೆರೆ ಅಂತ ಏನೇನೋ ಆಗ್ತಾ ಇದೆ.’

‘ಇದೆಂಥ ಮಾರಾಯ್ತಿ? ಒಂದಕ್ಕೊಂದು ಸಂಬಂಧ ಇಲ್ಲದಂತಾ ವಿಷಯ ಹೇಳ್ತಿದೀಯಲ. ನಿನ್ನ ತಪ್ಪಿಗೆ ಇಡೀ ಪ್ರಪಂಚಕ್ಕೇ ಕೊರೊನಾ ಬರುತ್ತಾ? ಪ್ರಪಂಚದ ತುಂಬ ಪಾಪಿಗಳು ತುಂಬಿದಾರೆ, ನೀನೊಬ್ಳೇ ಅಲ್ಲ.’

‘ನಿಮಗ್ಗೊತ್ತಿಲ್ಲ ಮೇಡಂ. ನಾನು ಏನೋ ಸಿಟ್ಟಿಗೆ ತಪ್ಪು ಮಾಡಿಬಿಟ್ಟೆ. ಅದಕ್ಕೇ ಹೀಗೆಲ್ಲ ಆಗ್ತಿರದು. ನಾವು ಹನಿಮೂನಿಂದ ಬಂದಕೂಡ್ಲೇ ಬೆಂಗ್ಳೂರು ಲಾಕ್‌ಡೌನ್ ಆಯ್ತು. ಮನೆ ಸೆಟ್ ಮಾಡ್ಕೊಂಡಿರ್ಲಿಲ್ಲ. ಮಾವ ಇಲ್ಲೇ ಬಂದ್ಬಿಡಿ ಅಂದರೂಂತ ಬಂದ್ಬಿಟ್ವಿ. ಆದ್ರೆ ಹಾಂಗ್‌ಕಾಂಗ್ ಹನಿಮೂನ್ ಮುಗ್ಸಿ ಇಲ್ಲಿ ಬಂದ್ಮೇಲೆ ಈ ಕೊಂಪೇಲಿ ನಂಗೆ ಎಷ್ಟು ಬೇಜಾರು ಆಯ್ತೂಂದ್ರೆ ಮಾವನ ಮೇಲೆ ಸಿಟ್ ಬಂದೋಯ್ತು. ಮಾವ ಹೇಳಿದ್ದಕ್ಕೇ ಅಲ್ವ ನಾವಿಲ್ಲಿ ಬಂದಿದ್ದು? ಅವರು ಹೇಳದಿದ್ರೆ, ಅವರಿಲ್ಲದಿದ್ರೆ ನಾವು ಆರಾಮಾಗಿ ಬೆಂಗಳೂರಲ್ಲಿ ಇರಬೋದಿತ್ತು ಅನಿಸ್ತಿಸ್ತು. ಪ್ರತಿದಿನಾ ಇದೇ ನೆಗೆಟಿವ್ ವೈಬ್ಸ್ ತಲೇಲಿ. ಇಡಿಯ ದಿನ ಅವ್ರನ್ನ ಬೈಕೊಂಡೆ. ಅದ್ಕೇ ನಮ್ಮಾವ ಹೋಗ್ಬಿಟ್ರು.’

‘ಏನು, ನಿಮ್ಮಾವ ತೀರಿಕೊಂಡ್ರಾ? ಯಾವಾಗ? ಗೊತ್ತಾಗ್ಲೇ ಇಲ್ಲ?`

‘ನೋಡಿದ್ರಾ ಮೇಡಂ ನಿಮಗೆಷ್ಟು ಆಶ್ಚರ್ಯ ಆಯ್ತು ಅಂತ? ಮಾವ ಕೋವಿಡ್ ಆಗಿ ತರ‍್ಕೊಂಡ್ರು. ಈ ತಾಲೂಕಿನ ಮೊದಲ ಕೊರೊನಾ ಡೆತ್ ಅವರದ್ದು. ನಾನು ಒಂದ್ಸಲ ಅವರೆದುರು ಕೆಮ್ಮಿಬಿಟ್ಟಿದ್ದೆ. ನಾವೇನೂ ಪಾಸಿಟಿವ್ ಆಗಲಿಲ್ಲ, ಆದ್ರೂ ಫಾರಿನ್ನಿಂದ ಬಂದು ಎಸಿಂಪ್ಟಮ್ಯಾಟಿಕ್ ನೆಗೆಟಿವ್ ಆಗಿ, ಮಾವಂಗೆ ನಾವೇ ಕೋವಿಡ್ ತಾಗಿಸಿದ್ವಿ ಅಂತ ನಮ್ಮನೆಯೋರು ಪಾಪಪ್ರಜ್ಞೇಲಿ ನರಳ್ತಿದಾರೆ. ನಾನಾಗ ಪಾಸಿಟಿವ್ ವೈಬ್ಸ್ ಕಳಿಸಬೋದಿತ್ತು, ಕಳಿಸಲಿಲ್ಲ. ಕಳಿಸುವಾಗ ಲೇಟ್ ಆಯ್ತು, ಅದು ಸಾಕಾಗಲಿಲ್ಲ. ಅದಕ್ಕೇ ತೀರಿಕೊಂಡ್ರು.’

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಏನು ಹೇಳ್ತಿದೀ ಸ್ಮಿತಾ? ಏನು ವೈಬ್ಸ್ ಅಂದ್ರೆ?’

‘ಅಂದ್ರೆ ಎಷ್ಟೋ ದೂರದಲ್ಲಿ ಇರೋರಿಗೂ ನೀವು ಶುದ್ಧ ದೇಹ, ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡಿ ವೈಬ್ಸ್ ಕಳಿಸಿದರೆ ಅವರು ಗುಣ ಆಗ್ತಾರೆ. ಮೆಡಿಸಿನ್‌ಗಿಂತ ಹೆಚ್ಚು ವರ್ಕಾಗುತ್ತೆ ಅದು. ನಾನು ಆಮ್‌ಸ್ಟರ್‌ಡ್ಯಾಂನಲ್ಲಿದ್ದಾಗ ಶಿರಸೀಲಿದ್ದ ನಮ್ಮಪ್ಪನ್ನ ಹೀಗೆ ಪಾಸಿಟಿವ್ ವೈಬ್ಸ್ ಕಳಿಸಿ ತುಂಬ ಸಲ ಉಳಿಸ್ಕಂಡಿದ್ದೆ. ಹಾಗೆ ಮಾವಂಗೆ ಕಳಿಸ್ಲಿಲ್ಲ’

‘ಇದೆಲ್ಲ ಎಂಥ ನಾನ್‌ಸೆನ್ಸ್ ನಂಬ್ಕಂಡಿದಿ ಮಾರಾಯ್ತಿ? ಸೈನ್ಸ್ ಓದಿರೋ ಹುಡುಗಿ ಅಲ್ವ ನೀನು?’

‘ಅಯ್ಯೋ, ನಾನ್‌ಸೆನ್ಸ್ ಅಲ್ಲ ಮೋಸ್ಟ್ ಸೆನ್ಸಿಬಲ್ ವೇ ಆಫ್ ಸೇವಿಂಗ್ ಯುವರ್ ಬಿಲವೆಡ್. ನಾನು ಎಲ್ಲಾದ್ನೂ ಶುದ್ಧವಾಗಿಟ್ಕೊಂಡು ತುಂಬ ಜನರನ್ನ ವೈಬ್ಸ್ ಕಳಿಸಿ ಉಳಿಸಿದೀನಿ. ನಮ್ಮನೆ ನಾಯಿಮರೀನೂ ಸಹಾ, ಇನ್ನೇನು ಸತ್ತೋಗ್ತಿತ್ತು, ಉಳಿಸಿದೀನಿ. ಸೈನ್ಸ್ ಓದಿದ ಮಾತ್ರಕ್ಕೆ ಅಳೋದು, ನಗೋದು, ಭಾವುಕರಾಗೋದು, ನಂಬೋದನ್ನ ಬಿಡ್ತಿವಾ ನಾವು? ಅದ್ರಲ್ಲೂ ಒಳ್ಳೇದ್ ಮಾಡೋದ್ರಿಂದ ಫಲ ಸಿಗುತ್ತೆ, ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತೆ ಅಂತ ಹೇಳಕ್ಕೆ ಸೈನ್ಸ್ ಹತ್ರ ಆಗಲ್ಲ. ಅದ್ಕೆ ತುಂಬ ಜನಕ್ಕೆ ಅದರ ಮೇಲೆ ನಂಬ್ಕೆ ಇಲ್ಲ.’

ಹಳಿ ತಪ್ಪಿದ ಬಂಡಿ. ಮಾತು ಮುಂದುವರೆಸಿ ಉಪಯೋಗವಿಲ್ಲ.

‘ನೀನಷ್ಟೇ ಅಲ್ಲ ಸ್ಮಿತಾ, ಎಲ್ಲರೂ ತಪ್ಪು ಮಾಡಿದಿವಿ. ಭೂಮಿಯನ್ನ ಪ್ರಕೃತಿಯನ್ನ ಹಾಳು ಮಾಡಿದಿವಿ. ಆದರೆ ಈಗಲೂ ಕಾಲ ಮಿಂಚಿಲ್ಲ, ಸರಿ ಮಾಡಬೋದು. ಮಾಡಣ. ನೀನು ಹೀಗೆ ನೆಗೆಟಿವ್ ಯೋಚ್ನೆ ಇಟ್ಕೋಬೇಡ.’

‘ನಿಮಗ್ಗೊತ್ತಿಲ್ಲಾ, ಕೆಲವನ್ನೆಲ್ಲ ಸರಿ ಮಾಡಕ್ಕಾಗಲ್ಲ ಮೇಡಂ. ಮಾವ ಹೋದೋರು ವಾಪಸ್ ರ‍್ತಾರಾ? ನಾನು ತುಂಬ ತಪ್ಪು ಮಾಡ್ದೆ. ತುಂಬತುಂಬ ತಪ್ಪು ಮಾಡ್ದೆ. ಇನ್ನೂ ಮಾಡ್ತನೇ ಇದೀನಿ. ಕುಮಾರಿಯರ ಸಂಘಕ್ಕೆ ಸೇರಿ ಪವಿತ್ರ ಪರ್ವತ ಹತ್ತಿಬಂದೆ. ಬ್ರಹ್ಮಚರ್ಯ ಒಳ್ಳೇದು, ಅದೇ ನಮ್ಮ ಶಕ್ತಿಮೂಲ ಅಂತ ಬೆಹೆನ್ಜಿ ಒಬ್ರು ಹೇಳಿದ್ದನ್ನೇ ನಂಬಿ ಇವ್ರಿಗೆ ತುಂಬ ತೊಂದ್ರೆ ಕೊಟ್ಟೆ. ಕನ್ಯತ್ವ ಹೋಗಿ ವೈಬ್ಸ್ ಕಳಿಸೋ ನನ್ ಪವರ್ ಹೊರಟೋದ್ರೆ ಏನು ಅನ್ನೋ ಭಯ. ಆದ್ರೆ ಮದುವೆಯಾಗಿ ಬ್ರಹ್ಮಚರ್ಯ ಅನ್ಬಾರ್ದು, ಆಗ ಇವ್ರಿಗೆ ಮೋಸ ಮಾಡ್ದಂಗೆ ಆಗುತ್ತೆ ಅಂತ ಈಗ ಗೊತ್ತಾಗ್ತ ಇದೆ. ಏನೂ ಮಾಡಕ್ಕಾಗ್ತ ಇಲ್ಲ.’

ಭೋರೆಂದು ಅಳತೊಡಗಿದಳು. ಸುಣ್ಣದಂತೆ ಬೆಳ್ಳಗಿದ್ದ ಅವಳ ಮೂಗು, ಕಣ್ಣು, ಮುಖವೆಲ್ಲ ಅತ್ತತ್ತು ಕೆಂಪಾದವು. ಮುಂದೆ ಎದೆಮೇಲೆ ಇಳಿಬಿದ್ದಿದ್ದ ಉದ್ದನೆಯ ಜಡೆ ಮೇಲೆ ಕಣ್ಣೀರಹನಿ ಸುರಿಯತೊಡಗಿದವು. ಮುಖ ಮುಚ್ಚಿಕೊಂಡೂ ಅಳುತ್ತಿಲ್ಲ. ಕಣ್ಣೀರು ಒರೆಸಿಕೊಳ್ಳುತ್ತಲೂ ಇಲ್ಲ. ನನ್ನನ್ನು ದಿಟ್ಟಿಸಿ ನೋಡುತ್ತಾ ಹೋ ಎಂದು ಮಗುವಿನಂತೆ ಅಳುತ್ತಿದ್ದಾಳೆ.

ಓಹೋ, ಇದು ಮಂಡೆಪೆಟ್ಟೇ ಸರಿ. ಈ ಬಂಡಿಯನ್ನು ಇಂಜಿನ್ನು ತಂದೇ ಹಳಿಗೇರಿಸಬೇಕು. ಅಕ್ಕಮಹಾದೇವಿ ಹೇಳಿದಂತೆ ತೆರಣಿಯ ಹುಳು ತನ್ನ ಸುತ್ತ ತಾನೇ ನೂಲು ಸುತ್ತಿಕೊಳ್ಳುವಂತೆ ಇದ್ದಾಳೆ. ಸಮಾಧಾನದ ಮಾತಿನಿಂದ ಏನೂ ಉಪಯೋಗವಿಲ್ಲ.

‘ನಿನ್ನ ಬೆರಳು ಎಷ್ಟುದ್ದ, ಎಷ್ಟು ಚಂದ ಇದೆಯಲ್ಲ ಸ್ಮಿತಾ? ನೀನು ಆರ್ಟಿಸ್ಟಾ?’

‘ನಾನು ಏನೂ ಅಲ್ಲ. ನಾನು ದಪ್ಪ, ನಾನು ಬರೀ ವೇಸ್ಟು, ಬರೀ ಗೋಳು, ಬರೀ ಪಾಪಿ. ನಾನು ಚೆನ್ನಾಗಿಲ್ಲ, ನನ್ನ ಯಾವ ಭಾಗನೂ ಚೆನ್ನಾಗಿಲ್ಲ. ಈ ದೇಹ ಅಶುದ್ಧ ಆಗೋಗಿದೆ. ಎಲ್ರೂ ದಪ್ಪ ದಪ್ಪ ಅಂದ್ರೇ ಹೊರತು ಯಾವ್ದಾದ್ರೂ ಭಾಗ ಚೆನಾಗಿದೆ ಅಂತ ಇದುತಂಕ ಯಾರೂ ಹೇಳಲಿಲ್ಲ. ನೀವೇ ಹೇಳಿದ್ದು.’

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಏ, ಸುಳ್ಳು. ಸುಂದರಿ ನೀನು ಅಂತ ನಿಮ್ಮಮ್ಮ ಹೇಳಲಿಲ್ವ? ನಿನ್ನ ಫ್ರೆಂಡ್ ಹೇಳಲಿಲ್ವ? ನಿನ್ನ ಗಂಡ ಹೇಳಲಿಲ್ವ?’

ಏನು ನೆನಪಾಯಿತೋ ಮುಖ ಲಜ್ಜೆಗೊಂಡಿತು. ಅಳು ತಹಬಂದಿಗೆ ಬಂತು. ಅಷ್ಟೊತ್ತಿಗೆ ಅವಳ ಗಂಡನ ಕಾಲ್ ಬಂತು. ಅವ ಹೊರಗೆ ನಿಂತು ಕರೆ ಮಾಡುತ್ತಿದ್ದ. ಬನ್ನಿ ಎಂದು ಕರೆದಳು. ಅವ ಒಳಬಂದದ್ದೇ ಅನಿರೀಕ್ಷಿತವಾಗಿ ಅವನನ್ನು ತಬ್ಬಿ, ‘ಐ ಲವ್ ಹಿಂ. ದಪ್ಪ ಇದ್ರೂ ನಂಗೆ ಪರ್ವಾಗಿಲ್ಲ, ನಂಗೆ ನೀನೇ ಬೇಕು ಅಂತ ಮದುವೆಯಾಗಿದಾರೆ ಮೇಡಂ. ನಂಗೆ ಇವರಂದ್ರೆ ತುಂಬಾ ಪ್ರೀತಿ. ಅವರನ್ನು ಕಳಕೊಂಡ್ರೆ ನಾ ಬದುಕಲ್ಲ’ ಎಂದು ಮತ್ತೆ ಅಳತೊಡಗಿದಳು. ತಮ್ಮ ಅಂತಃಪುರದ ಗೀತೆಗಳು ಬೀದಿಯಲ್ಲಿ ಹಾಡಲ್ಪಡುವುದು ಅವನಿಗೆ ಹೊಸದಲ್ಲ ಅನಿಸುತ್ತದೆ. ಅವಳ ಹೆಗಲು ತಬ್ಬಿ ನಡೆಸಿಕೊಂಡು ಹೊರಗೊಯ್ದ.

ಅವನ ಬಳಿ ಮಾತನಾಡಬೇಕಿತ್ತು, ಆಗಲಿಲ್ಲ. ಕೊನೆಗೆ ಒಪಿಡಿ ರಿಜಿಸ್ಟರಿನಿಂದ ಅವನ ಫೋನ್ ನಂಬರು ತೆಗೆದುಕೊಂಡೆ. ಅವನದೇ ಎಂದಾದಮೇಲೆ ಅವಳಿಗೆ ಚಿಕಿತ್ಸೆ ಕೊಡಿಸಬೇಕೆಂದು ವಾಟ್ಸಪ್ ಮೆಸೇಜಿನಲ್ಲಿ ತಿಳಿಸಿದೆ.

ಒಂದು ವಾರದ ಬಳಿಕ ಅವಳಿಂದ ಒಂದು ಮೆಸೇಜ್ ಬಂತು.

‘ಫುಲ್ ಡಿಪ್ರೆಷನ್ ಮೇಡಂ. ಏನೂ ಬರೆಯಕ್ಕೆ, ಓದಕ್ಕೆ ಇಷ್ಟ ಆಗ್ತ ಇಲ್ಲ. ತುಂಬ ಜನ ಹತ್ತಿರದವರ ಸಾವು ನೋಡಿ, ಕೇಳಿ ಬೇಜಾರು, ಭಯ. ಕೋವಿಡ್ ಮನುಷ್ಯರನ್ನು ಉಳಿಸಲ್ಲ. ನಿಮ್ಮ ಕಾಳಜಿ ಮಾಡ್ಕೊಳಿ. ನನ್ನ ಆಯುಸ್ಸನ್ನು ದೇವ್ರು ನಿಮ್ಗೆ ಕೊಡಲಿ. ಚೆನ್ನಾಗಿರಿ. ನಿಮ್ಮ ಒಂದು ಪುಸ್ತಕ ಮಾತ್ರ ಓದಕ್ಕಾಯ್ತು. ಅಪೂರ್ವ ಪ್ರತಿಭೆ. ಕರುಣೆ, ಒಳ್ಳೆಯತನ ಎಲ್ಲಾದೂ ಇದೆ. ಐ ಆಮ್ ಶ್ಯೂರ್, ಇನ್ನೂ ಒಳ್ಳೆಯ ಬುಕ್ಸ್ ಬರಿತಿರಿ. ನನ್ನ ನೆನಪು ಮಾಡ್ಕೊತಾ ಇರಿ, ಇದ್ದಲ್ಲಿಯೇ ಖುಷಿ ಆಗ್ತೀನಿ.’

ಅಯ್ಯೋ, ಇವಳಿಗೇನಾಯಿತು ಎಂದು ನಾನು ಆತಂಕಗೊಳ್ಳುವಾಗ ‘ಈ ಮನೆಯ ವಾಸ್ತು ಏನೂ ಸರಿ ಇಲ್ಲ. ಅದ್ಕೇ ಎಲ್ಲ ಉಲ್ಟಾ ಆಗ್ತಿದೆ’ ಎಂಬ ಅವಳ ಮೆಸೇಜೂ, ‘ನಾಳೆ ಬೆಂಗಳೂರಿಗೆ ಪಯಣ’ ಎಂಬ ಅವನ ಮೆಸೇಜೂ ಒಟ್ಟಿಗೆ ಬಂದವು. ಇಬ್ಬರಿಗೂ ಹಾರೈಸಿದೆ.

ಬಳಿಕ ನಾನು ಮರೆತೇಬಿಟ್ಟಿದ್ದೆ. ಇತ್ತೀಚೆಗೆ ಅವನ ಮೆಸೇಜು ಬಂದಾಗಲೇ ನೆನಪಾದದ್ದು. ಅವಳ ಅಧ್ಯಾತ್ಮಿಕ ಮೆಂಟರ್ ಆಗಿದ್ದ ಬೆಹೆನ್ಜಿಯನ್ನು ಕರೆಸಿ, ಅವರಿಂದ ಹೇಳಿಸಿ, ಸೈಕಿಯಾಟ್ರಿಸ್ಟ್ ಬಳಿ ಕರೆದೊಯ್ದೆನೆಂದೂ, ಈಗ ಉಲ್ಲಾಸದಿಂದಿರುವಳೆಂದೂ, ಕೆಲಸವನ್ನು ಮನೆಯಿಂದಲೇ ಮಾಡುತ್ತಿದ್ದಾಳೆಂದೂ ಬರೆದಿದ್ದ. ಅವಳೀಗ ಐದು ತಿಂಗಳ ಬಸುರಿ ಎಂದೂ ಕೊನೆಗೆ ನಾಚಿ ತಿಳಿಸಿದ್ದ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಂಡಿದೀರಿ, ಖುಷಿಯಾಯ್ತು’ ಎಂದು ಉತ್ತರಿಸಿದೆ. ‘ದುಂಡಗಿನ ಪಿಜ್ಜಾವನ್ನು ಚೌಕ ಕವರಿನಲ್ಲಿಟ್ಟು ಪ್ಯಾಕ್ ಮಾಡಿ ತ್ರಿಕೋನಾಕಾರದ ತಟ್ಟೆಯಲ್ಲಿ ತಿನ್ನುತ್ತೇವೆ. ಏಕೆ? ಇದು ಅರ್ಥವಾಗಿರುವುದರಿಂದ ಮನುಷ್ಯರೂ ಅರ್ಥವಾಗಿದಾರೆ’ ಎಂದು ಸ್ಮೈಲಿಯೊಂದನ್ನು ರವಾನಿಸಿದ. ಗಾಯವಾದರೂ ನೋವೆನ್ನದೆ ಹೊಲಿಗೆ ಹಾಕಿಸಿಕೊಂಡ ಹುಡುಗ. ಕೂದಲಿನಲ್ಲಿ ಕಲೆ ಮುಚ್ಚಿಟ್ಟು, ಅದನ್ನೆತ್ತಿ ತೋರಿಸಿ ಗುರುತು ಹೇಳಿದ ಹುಡುಗ. ನಿಮಗೆ ಒಳ್ಳೆಯದಾಗಲಿ. * ಫೋಟೋ : ಡಾ.  ನಿಸರ್ಗ * ನಾಳೆ ನಿರೀಕ್ಷಿಸಿ : ‘ಮನೆ ಬೆಲೆ ಏನಂತ ಗೊತ್ತಾಗಕ್ಕೆ ಕೊರೊನಾ ಬರಬೇಕಾಯ್ತು’ 

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ಹೊದಿಕೆ ಸರಿಸಿದರೆ ಬಿಟ್ಟ ಕಣ್ಣು ಬಿಟ್ಟುಕೊಂಡು ಗಪ್ಪತಿ ತಣ್ಣಗಾಗಿದ್ದ

Published On - 1:19 pm, Sun, 20 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ