ನಮ್ಮನೆಯ ಸಾಕುಪ್ರಾಣಿಗಳಿಗೂ ಕೊರೊನಾ ಬಾಧೆ: ಅಂಜಿಕೆ ಅನಗತ್ಯ, ಎಚ್ಚರಿಕೆ ಅತ್ಯಗತ್ಯ
ಈ ಮೊದಲೂ ಬಾವಲಿ ಮತ್ತು ಪ್ಯಾಂಗೋಲಿನ್ಗಳನ್ನು ಚೀನೀಯರು ತಿನ್ನುತ್ತಿದ್ದರು. ಆಗ ಕಾಣಿಸದ, ಹರಡದ ಕೊರೊನಾ ಸೋಂಕು ಈಗ ಏಕಾಏಕಿ ಏಕೆ ಕಾಣಿಸಿಕೊಂಡಿತು? ಈ ಪ್ರಶ್ನೆಗೆ ವಿಜ್ಞಾನಿಗಳ ಉತ್ತರ ಹೀಗಿದೆ.
ಕೊರೋನಾ ವೈರಾಣುವಿನ ವಿವಿಧ ಪ್ರಭೇಧಗಳು ಹಂದಿ, ನಾಯಿ, ಹಕ್ಕಿಗಳು, ಮೀನು ಇತ್ಯಾದಿಗಳನ್ನು ಬಾಧಿಸುತ್ತಿದ್ದರೂ ಈ ಪ್ರಾಣಿಗಳಿಂದ ಮನುಷ್ಯರಿಗೆ ಸೋಂಕು ಹರಡಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಆದರೂ ಈ ಕುರಿತು ಹೆಚ್ಚಿನ ಸಂಶೋಧನೆ ಬೇಕು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಮನೆಗಳಲ್ಲಿ ಪ್ರಾಣಿ ಸಾಕಿರುವವರನ್ನು ಕಾಡುವ ಹಲವು ಪ್ರಶ್ನೆಗಳಿಗೆ ಈ ಲೇಖನದ ಮೂಲಕ ಉತ್ತರಿಸಲು ಯತ್ನಿಸಿದ್ದಾರೆ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್.ಬಿ.ಶ್ರೀಧರ.
ನಮ್ಮ ರಾಜ್ಯದಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ಮನೆಗಳಲ್ಲಿ ಹೆಚ್ಚಾಗಿ ಸಾಕುತ್ತಾರೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ಎರಡೂ ಪ್ರಾಣಿಗಳನ್ನು ಸಾಕಿರುವವರಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಸಮಾಜದಲ್ಲಿ ಹಲವು ತಪ್ಪು ಮಾಹಿತಿ ಹರಿದಾಡುತ್ತಿವೆ. ನಿಜ ಏನು ಎಂದರೆ, ಕೊರೊನಾ ವೈರಾಣು ಶ್ವಾನಗಳನ್ನು ಹೆಚ್ಚು ಬಾಧಿಸುವುದಿಲ್ಲ. ಸೋಂಕಿತ ನಾಯಿಗಳಲ್ಲಿ ವಾಂತಿ-ಭೇದಿ, ಬಿಳಿರಕ್ತ ಕಣಗಳ ಕಡಿಮೆಯಾಗುವಿಕೆ ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಇದಕ್ಕೆ ಉತ್ತಮ ಚಿಕಿತ್ಸೆ ಇಲ್ಲ. ಆದರೆ ನಿಯಮಿತವಾಗಿ ಇದಕ್ಕೆಂದೇ ಇರುವ ಲಸಿಕೆಯನ್ನು ಬಳಸುವುದರಿಂದ ಈ ಕಾಯಿಲೆಯನ್ನು ತಡೆಯಬಹುದು. ನಾಯಿಗಳಲ್ಲಿ ಸೋಂಕು ತರುವ ಈ ಪ್ರಭೇದದ ವೈರಸ್ಸು ಮನುಷ್ಯನಿಗೆ ಯಾವುದೇ ರೋಗವನ್ನುಂಟು ಮಾಡುವುದಿಲ್ಲ.
ಬೆಕ್ಕುಗಳಲ್ಲಿಯೂ ಕೊರೋನಾ ವೈರಾಣುಗಳ ಪೀಡೆಯಿಂದ ಕಾಯಿಲೆ ಬರಬಹುದಾದರೂ ಇದು ಹೊಟ್ಟೆಯ ಪೆರಿಟೋನಿಯಂ ಪದರದ ಉರಿಯೂತವನ್ನುಂಟು ಮಾಡುತ್ತದೆ. ತೀವ್ರ ಸಾಂಕ್ರಾಮಿಕವಾದ ಈ ಕಾಯಿಲೆಗೆ ಅನೇಕ ಬೆಕ್ಕುಗಳು ಬಲಿಯಾಗಿವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಬೆಕ್ಕುಗಳನ್ನು ಈ ಕಾಯಿಲೆ ಬಹುಬೇಗ ಕಾಡುತ್ತದೆ. ಮರಿ ಬೆಕ್ಕುಗಳು ಈ ವೈರಾಣುಗಳಿಗೆ ಮೊದಲ ಟಾರ್ಗೆಟ್. ಈ ಕಾಯಿಲೆಯನ್ನು ಅಷ್ಟು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಿಲ್ಲ. ಈಗ ಇದಕ್ಕೆ ಲಸಿಕೆ ತಯಾರಿಸಲಾಗಿದ್ದು ಇದನ್ನು ಮೂಗಿನ ಮೂಲಕ ನೀಡಲಾಗುತ್ತದೆ. ಒಮ್ಮೆ ಈ ಕಾಯಿಲೆ ಬೆಕ್ಕಿಗೆ ಬಂದರೆ ಬೆಕ್ಕನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಚಿಕ್ಕ ಬೆಕ್ಕಿನ ಮರಿಗಳಿಗೆ ಈ ಕಾಯಿಲೆ ಮಾರಕ.
ಸುಮಾರು ನಾಲ್ಕೈದು ವಿಧದ ಕೊರೋನಾ ವೈರಾಣುಗಳು ಹಂದಿಗಳನ್ನು ಭಾಧಿಸುತ್ತವೆ. ಇವುಗಳಲ್ಲಿ ಪೋರ್ಸೈನ್ ಎಪಿಡೆಮಿಕ್ ಡಯೇರಿಯಾ ತೀವ್ರಗತಿಯಲ್ಲಿ ಒಂದು ಹಂದಿಯಿಂದ ಮತ್ತೊಂದು ಹಂದಿಗೆ ಹಬ್ಬುತ್ತದೆ. ತೀವ್ರತರನಾದ ಭೇದಿ, ವಾಂತಿ, ಶರೀರದ ತಾಪಮಾನ ಇಳಿಯುವುದು, ನಿರ್ಜಲೀಕರಣ ಇತ್ಯಾದಿ ಲಕ್ಷಣಗಳು ಹಂದಿಗಳಲ್ಲಿ ಕಂಡು ಬರುತ್ತವೆ. ಶೇ 80ರಿಂದ 100ರಷ್ಟು ಸಂದರ್ಭದಲ್ಲಿ ಸಾವು ಕಂಡುಬರುತ್ತದೆ. ಲಸಿಕೆ ಹಾಕಿ ತಡೆಯುವುದೊಂದೇ ಹಂದಿಗಳನ್ನು ಉಳಿಸಿಕೊಳ್ಳಲು ಇರುವ ದಾರಿ.
ಇದನ್ನೂ ಓದಿ: ಸಾಕುಪ್ರಾಣಿಗಳು ಮತ್ತು ಕೊರೊನಾ ಸೋಂಕು: ಸತ್ಯ ಮತ್ತು ಮಿಥ್ಯಗಳು
ಪೋರ್ಸೈನ್ ಹೀಮ್ ಅಗ್ಲುಟಿನೇಟಿಂಗ್ ಕೊರೋನಾ ವೈರಸ್ ಸಹ ಹಂದಿಗಳಲ್ಲಿ ಅಷ್ಟೇ ತೀವ್ರವಾದ ಕಾಯಿಲೆ. ಇದರಲ್ಲಿಯೂ ಸಹ ಹಂದಿಮರಿಗಳು ಸಾವಿಗೀಡಾಗುತ್ತವೆ. ಮಿದುಳು ಜ್ವರದಲ್ಲಿನ ಲಕ್ಷಗಳು ಕಾಣಿಸಿಕೊಂಡು ತೀವ್ರವಾದ ವಾಂತಿ ಇರುತ್ತದೆ. ಇದಕ್ಕೂ ಸೂಕ್ತ ಚಿಕಿತ್ಸೆ ಇಲ್ಲ. ಲಸಿಕೆಯಿಂದ ಮಾತ್ರ ತಡೆಯಬಹುದು. ಒಮ್ಮೆ ಬಂದರೆ ಎಲ್ಲಾ ಭಾಧಿತ ಹಂದಿಗಳು ಸತ್ತು ತನ್ನಿಂದತಾನೇ ನಿಯಂತ್ರಣಕ್ಕೆ ಬರಬೇಕು.
ಆಕಳು, ಕುದುರೆಗಳಲ್ಲಿ ಕೊರೋನಾ ಬಾಧೆ ಹಸುಗಳ ಕರುಗಳಲ್ಲಿ ಈ ಕಾಯಿಲೆ ಒಮ್ಮೊಮ್ಮೆ ಕಂಡುಬರುತ್ತದೆ. ತೀವ್ರವಾದ ಭೇದಿ, ನಿರ್ಜಲೀಕರಣ ಮತ್ತು ಹಸಿವಿಲ್ಲದಿರುವಿಕೆ ಈ ಕಾಯಿಲೆಯ ಲಕ್ಷಣಗಳು. ಶ್ವಾಸಕೋಶದ ಉರಿಯೂತವೂ ಇರುತ್ತದೆ. ಇದಕ್ಕೆ ಉತ್ತಮ ಲಸಿಕೆ ಇಲ್ಲ. ಕುದುರೆ, ಕತ್ತೆ ಮತ್ತು ಈ ಜಾತಿಯ ಇತರ ಪ್ರಾಣಿಗಳಲ್ಲಿ ಈ ಕಾಯಿಲೆ ಬಂದಾಗ ಭೇದಿ ಮತ್ತು ಹೊಟ್ಟೆನೋವು ಕಂಡು ಬರುತ್ತದೆ. ಚಿಕಿತ್ಸೆಯ ನಂತರ ಬಹುತೇಕ ಪ್ರಾಣಿಗಳು ಚೇತರಿಸಿಕೊಳ್ಳುತ್ತವೆ.
ಹಕ್ಕಿಗಳಲ್ಲಿ ಕೊರೊನಾ ಸೋಂಕು ಏವಿಯನ್ ಇನ್ಫೆಕ್ಷಿಯಸ್ ಬ್ರೊಂಕೈಟಿಸ್ ಎಂಬ ವೈರಾಣು ಪಕ್ಷಿಗಳಲ್ಲಿ ಈ ಕಾಯಿಲೆ ಹರಡುತ್ತದೆ. ಹಕ್ಕಿಗಳಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಗುರುತಿಸಲಾಗದ ಕಾಯಿಲೆಯನ್ನುಂಟು ಮಾಡುತ್ತದೆ. ಒಮ್ಮೆ ಸೋಂಕು ವ್ಯಾಪಿಸಿದರೆ ಹಲವು ಹಕ್ಕಿಗಳು ಸಾಯುತ್ತವೆ. ಮರಣೋತ್ತರ ಪರೀಕ್ಷೆಯಲ್ಲಿ ಈ ಪಕ್ಷಿಗಳು ಮೂತ್ರಜನಕಾಂಗ ಹಾಳಾಗಿರುವುದು ಗೋಚರಿಸಿದೆ.
ಇದನ್ನೂ ಓದಿ: ಪ್ರಾಣಿಗಳಿಂದ ಮನುಷ್ಯರಿಗೆ ಬಂತೇ ಕೊರೊನಾ ಸೋಂಕು? ಚೀನಾದಲ್ಲಿ ನಿಜಕ್ಕೂ ನಡೆದದ್ದು ಏನು?
ಕೋಳಿಯಿಂದ ಮನುಷ್ಯರಿಗೆ ಕೊರೋನಾ ಹರಡುವುದೇ? ಖಂಡಿತಾ ಇಲ್ಲ. ಕೋಳಿಗಳು ಬಾವಲಿ, ಪೆಂಗೋಲಿನ್, ಪುನುಗು ಬೆಕ್ಕು, ಒಂಟೆಗಳಂತೆ ಕೊರೋನಾ ವೈರಾಣು ವಾಹಕವೂ ಅಲ್ಲ. ಅದಕ್ಕೆ ಕೊರೋನಾ ಕಾಯಿಲೆ ಬರುವುದೂ ಇಲ್ಲ. ಮನುಷ್ಯನಿಗೆ ಇವುಗಳಿಂದ ಕಾಯಿಲೆ ಬರುವುದಂತೂ ದೂರವೇ ಉಳಿಯಿತು. ಕೋಳಿಗಳಿಂದ ಕೊರೋನಾ ಬರುತ್ತದೆ ಎಂದು ಸಾವಿರಾರು ಸಂಖ್ಯೆಯಲ್ಲಿ ಕೋಳಿಗಳನ್ನು ಹತ್ಯೆ ಮಾಡಲಾಯಿತು. ಜನರು ಇದ್ದಕ್ಕಿದ್ದಂತೆ ಕೋಳಿ ತಿನ್ನುವುದನ್ನು ನಿಲ್ಲಿಸಿದ ಕಾರಣ ಆ ಉದ್ಯಮು ನೆಲ ಕಚ್ಚಿತು. ಇದು ನಮ್ಮ ಮೂರ್ಖತನಕ್ಕೆ ಒಂದು ದೊಡ್ಡ ಉದಾಹರಣೆ. ವಿಜ್ಞಾನಿಗಳು ಎಷ್ಟೇ ಹೇಳಿದರೂ, ಕೇವಲ ವದಂತಿ ಹಾಗೂ ಊಹಾಪೋಹಗಳನ್ನು ನಂಬಿ ವಿಜ್ಞಾನವನ್ನು ಮೂಲೆಗೊತ್ತಿದ್ದರ ಪರಿಣಾಮ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಕುಕ್ಕುಟ ಉದ್ಯಮ ನೆಲ ಕಚ್ಚಿತು.
ಚೀನಾದಲ್ಲಿ ಆಗ ಕಾಣಿಸದೇ, ಈಗೇಕೆ ವ್ಯಾಪಿಸಿತು ಕೊರೊನಾ ಸೋಂಕು? ಈ ಮೊದಲೂ ಬಾವಲಿ ಮತ್ತು ಪ್ಯಾಂಗೋಲಿನ್ಗಳನ್ನು ಚೀನೀಯರು ತಿನ್ನುತ್ತಿದ್ದರು. ಆಗ ಕಾಣಿಸದ, ಹರಡದ ಕೊರೊನಾ ಸೋಂಕು ಈಗ ಏಕಾಏಕಿ ಏಕೆ ಕಾಣಿಸಿಕೊಂಡಿತು? ಈ ಪ್ರಶ್ನೆಗೆ ವಿಜ್ಞಾನಿಗಳ ಉತ್ತರ ಹೀಗಿದೆ. ಆಗ ರೋಗಕಾರಕ ವಿರುಲಂಟ್ ವೈರಸ್ ಅವುಗಳ ದೇಹದಲ್ಲಿ ಇರಲಿಕ್ಕಿಲ್ಲ. COVID-19 ಕಾಯಿಲೆ ಉಂಟುಮಾಡುವ ವೈರಾಣು ಇತ್ತೀಚೆಗಷ್ಟೇ ಪತ್ತೆಯಾಗಿರಬಹುದು ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಆದರೆ ಇವೆಲ್ಲಾ ಊಹೆಯ ಉತ್ತರಗಳು. ಈ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ. ಸಂಶೋಧನೆಗೆ ಸಮಯ, ಹಣ ಮತ್ತು ತಾಳ್ಮೆ ಬೇಕು.
(ಲೇಖಕ ಡಾ.ಎನ್.ಬಿ.ಶ್ರೀಧರ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು)
Coronavirus Infection in Pet Animals no Need to fear Precautions Necessary Says Expert
ಇದನ್ನೂ ಓದಿ: ಕೊರೊನಾ 3ನೇ ಅಲೆ; ಮಕ್ಕಳಿಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಇಲಾಖೆ
ಇದನ್ನೂ ಓದಿ: ಕೊರೊನಾದ 3ನೇ ಅಲೆ ಖಚಿತ… ಯಾವಾಗ ಬರಬಹುದು ಅನ್ನುವ ಬಗ್ಗೆಯಷ್ಟೇ ಭಿನ್ನಾಭಿಪ್ರಾಯ: ಏನದರ ಲೆಕ್ಕಾಚಾರ?
Published On - 3:27 pm, Sun, 20 June 21