ಪ್ರಾಣಿಗಳಿಂದ ಮನುಷ್ಯರಿಗೆ ಬಂತೇ ಕೊರೊನಾ ಸೋಂಕು? ಚೀನಾದಲ್ಲಿ ನಿಜಕ್ಕೂ ನಡೆದದ್ದು ಏನು?

ಮನುಷ್ಯರಿಗೆ ಕಾಯಿಲೆಮಾಡುವ ಕೊರೋನಾ ವೈರಾಣು ಮತ್ತು ಪೆಂಗೋಲಿನ್​ಗಳ ದೇಹದೊಳಗಿರುವ ವೈರಾಣುಗಳಿಗೆ ಶೇ 90ರಷ್ಟು ಹೋಲಿಕೆಯಾಗುತ್ತವೆ ಎಂಬುದು ವಿಜ್ಞಾನಿಗಳ ಅಂಬೋಣ. ಹಾಗಿದ್ದರೆ ಈ ವೈರಾಣು ಪೆಂಗೋಲಿನ್​ಗಳಿಗೆ ಎಲ್ಲಿಂದ ಬಂತು? ಈ ಲೇಖನದಲ್ಲಿ ವಿವರಿಸಿದ್ದಾರೆ ಡಾ.ಎನ್​.ಬಿ.ಶ್ರೀಧರ.

ಪ್ರಾಣಿಗಳಿಂದ ಮನುಷ್ಯರಿಗೆ ಬಂತೇ ಕೊರೊನಾ ಸೋಂಕು? ಚೀನಾದಲ್ಲಿ ನಿಜಕ್ಕೂ ನಡೆದದ್ದು ಏನು?
ಬಾವಲಿ (ಪ್ರಾತಿನಿಧಿಕ ಚಿತ್ರ)
Ghanashyam D M | ಡಿ.ಎಂ.ಘನಶ್ಯಾಮ

| Edited By: Apurva Kumar Balegere

Jun 16, 2021 | 9:14 PM

ಮನುಷ್ಯರಿಗೆ ಕಾಯಿಲೆಮಾಡುವ ಕೊರೋನಾ ವೈರಾಣು ಮತ್ತು ಪೆಂಗೋಲಿನ್​ಗಳ ದೇಹದೊಳಗಿರುವ ವೈರಾಣುಗಳಿಗೆ ಶೇ 90ರಷ್ಟು ಹೋಲಿಕೆಯಾಗುತ್ತವೆ ಎಂಬುದು ವಿಜ್ಞಾನಿಗಳ ಅಂಬೋಣ. ಹಾಗಿದ್ದರೆ ಈ ವೈರಾಣು ಪೆಂಗೋಲಿನ್​ಗಳಿಗೆ ಎಲ್ಲಿಂದ ಬಂತು? ಕೊರೊನಾ ಸೋಂಕು ವನ್ಯಮೃಗಗಳಿಂದ ಸಾಕುಪ್ರಾಣಿಗಳಿಗೆ ಆ ಮೂಲಕ ಮನುಷ್ಯರಿಗೆ ಹೇಗೆ ಹರಡಿರಬಹುದು ಎಂದು ಈ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್​.ಬಿ.ಶ್ರೀಧರ.

ಕಾಡಿನಲ್ಲಿ ಹಾರಾಡುವ ಬಾವಲಿಗಳು ವೈರಾಣು ವಾಹಕಗಳಾದ ವಿಚಾರ ಈ ಹಿಂದೆಯೇ ದೃಢಪಟ್ಟಿದೆ. ಇರುವೆಯನ್ನು ತಿನ್ನುವ ಪೆಂಗೋಲಿನ್​ಗಳ ದೇಹದಲ್ಲಿ ಬಾವಲಿ ಹಿಕ್ಕೆಯ ಮೂಲಕ ಈ ವೈರಾಣುಗಳು ಹೋಗಿರಬಹುದು ಎನ್ನುತ್ತವೆ ವೈಜ್ಞಾನಿಕ ಲೇಖನಗಳು. ಚೀನಾದಲ್ಲಿ ಪೆಂಗೋಲಿನ್ ಅಳಿವಿನ ಅಂಚಿನಲ್ಲಿರುವ ಕಾಡು ಪ್ರಾಣಿ. ಇದೊಂದು ಸಸ್ತನಿ. ಕಾಡಿನಲ್ಲಿ ತನ್ನ ಪಾಡಿಗೆ ತಾನು ಇರುವೆಗಳನ್ನು ಗೆದ್ದಲುಗಳನ್ನು ತನ್ನ ಉದ್ದನೇ ಅಂಟಾದ ನಾಲಿಗೆಯ ಮೂಲಕ ತಿಂದು ಬದುಕುವ, ಯಾರಿಗೂ ತೊಂದರೆ ಕೊಡದ ಪಾಪದಜೀವಿ. ತನ್ನ ಉದ್ದನೆಯ ಅಂಟಾದ ನಾಲಿಗೆಯನ್ನು ಹುತ್ತದೊಳಗೆ ಹಾಕಿ ಗೆದ್ದಲು, ಇರುವೆಗಳನ್ನು ತಿನ್ನುವಾಗ ಸ್ವಾಭಾವಿಕವಾಗಿಯೇ ಕೊರೋನಾ ವೈರಾಣು ಹೊಂದಿದ ಬಾವಲಿಯ ಹಿಕ್ಕೆಗಳು ಅದರ ದೇಹದೊಳಗೆ ಹೋಗಿವೆ. ಅದಕ್ಕೆ ತಿಳಿಯದಂತೆ ಪೆಂಗೋಲಿನ್ ಕೊರೋನಾ ವಾಹಕವಾಗಿದೆ ಎನ್ನುವುದು ವಿಜ್ಞಾನಿಗಳ ವಿಶ್ಲೇಷಣೆ.

ಚೀನೀಯರು ಪೆಂಗೋಲಿನ್​ಗಳನ್ನೂ ತಿನ್ನುತ್ತಾರೆ. ಇದರ ಮಾಂಸ ತಿಂದರೆ ಗಂಡಸರಲ್ಲಿ ಲೈಂಗಿಕ ಶಕ್ತಿ ಜಾಸ್ತ್ತಿಯಾಗುತ್ತೆ, ಪೀಚಾಗಿರುವ ಚೀನಿ ಹೆಂಗಸರ ಸ್ತನಗಳು ದಪ್ಪಗಾಗುತ್ತವೆ, ಸೌಂದರ್ಯ ಜಾಸ್ತಿಯಾಗುತ್ತೆ, ಅಪಸ್ಮಾರ ಪರಿಹಾರವಾಗುತ್ತೆ, ಋತುಚಕ್ರ ಸಮಯದ ನೋವು ಮಾಯವಾಗುತ್ತೆ, ಕಾಲುಗಂಟು ನೋವು ಕಡಿಮೆಯಾಗುತ್ತೆ, ಚರ್ಮರೋಗ ಗುಣವಾಗುತ್ತೆ, ಗಾಯಗಳು ಬೇಗ ಗುಣವಾಗುತ್ತವೆ ಎಂಬುವೂ ಸೇರಿದಂತೆ ಹಲವು ಅವಾಸ್ತವಿಕ ಮೂಢನಂಬಿಕೆಗಳಿವೆ. ಪೆಂಗೊಲಿನ್​ಗಳ ಮೈಮೇಲಿರುವ ಚಿಪ್ಪುಗಳೂ ಸಹ ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತವೆ. ಈ ಚಿಪ್ಪುಗಳನ್ನು ಆಲಂಕರಿಕ ಸಾಧನ ತಯಾರಿಸಲು ಬಳಸಲಾಗುತ್ತದೆ. ಇದೂ ಸಹ ಪೆಂಗೋಲಿನ್ನುಗಳ ಅವಿರತ ಹತ್ಯೆಗೆ ಮತ್ತೊಂದು ಕಾರಣ.

ಬಾವಲಿಗಳಿಂದ ಮನುಷ್ಯರಿಗೆ ಬಂದಿದ್ದು ಹೇಗೆ? ಬಾವಲಿಗಳು ಎಲ್ಲಾ ರೀತಿಯ ಕೊರೋನಾ ವೈರಾಣು ಹರಡುವಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸಿವೆ. ಸಿವಿಯರ್ ಅಕ್ಯುಟ್ ರೆಸ್ಪ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಎಂದು ಕರೆಯುವ ಮನುಷ್ಯನ ಸಾವನ್ನು ಅಪೇಕ್ಷಿಸುವ ಕೊರೋನಾ ವೈರಾಣು ಕಾಯಿಲೆ ಸಹ ಬಾವಲಿಗಳಿಂದಲೇ ಹರಡಿದೆ. ಈ ಹಿನ್ನೆಲೆಯಲ್ಲಿ ಬಾವಲಿಗಳನ್ನು ಅತಿಥೇಯ ಸಂಗ್ರಾಹಕ ಎನ್ನಬಹುದು. ಈಗ ಬರುತ್ತಿರುವ Covid-19 ಕಾಯಿಲೆಗೆ ಕಾರಣವಾದ ಕೊರೊನಾವೈರಸ್ ಒಂಟೆಗಳ ಮೂಲಕ ಮನುಷ್ಯರಿಗೆ ಹರಡಲು ಮೂಲ ಕಾರಣ ಬಾವಲಿಗಳು. ಮಧ್ಯಪ್ರಾಚ್ಯ ದೇಶಗಳಲ್ಲಿ ಕೊರೊನಾ ಮಹಾಮಾರಿ ಜನನವಾಗಿದ್ದು ಇದರಿಂದಲೇ. ಬಹುಶಃ ಇದರಿಂದಾಗಿಯೇ COVID-19 ಕಾಯಿಲೆಗೆ ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಮೆರ್ಸ್) ಎಂದು ಕರೆಯುವುದು. ಬಾವಲಿಗಳಿಂದ ಒಂಟೆಗಳಿಗೆ ಸಾಗಿದ ಕೊರೋನಾವೈರಸ್ ಮಧ್ಯಪ್ರಾಚ್ಯದ ಜನರಿಗೆ ಹಬ್ಬಿರಬಹುದು ಎಂಬ ಪ್ರತೀತಿ ಇದೆಯಾದರೂ ಇದು ಬಾವಲಿಗಳಿಂದ ಹೇಗೆ ಒಂಟೆಗಳಿಗೆ ತಗುಲಿತು ಮತ್ತು ಈ ಸರಣಿ ಹೇಗಾಯಿತು ಎಂಬ ಬಗ್ಗೆ ವಿಜ್ಞಾನಿಗಳಿಗೆ ಅವರದೇ ಜಿಜ್ಞಾಸೆ ಇದೆ. ನಮ್ಮ ದೇಶದೆಲ್ಲೆಡೆ ಮಧ್ಯಪ್ರಾಚ್ಯ ದೇಶಗಳಿಗೆ ಹೋಗಿ ಬಂದವರಿಂದ ಹರಡಿದ ಕೊರೋನಾ ಪೀಡಿತರ ಸಂಖ್ಯೆ ಜಾಸ್ತಿ ಇರುವುದಕ್ಕೆ ಇದೇ ಕಾರಣವಿರಬಹುದೇನೋ?

ಪಾಪದ ಪುನುಗುಬೆಕ್ಕು ಕಾರಣವಾಯ್ತೇ? ಪುನುಗು ಬೆಕ್ಕು (ಹಿಮಾಲಯನ್ ಪಾಮ್ ಸಿವೆಟ್ ಕ್ಯಾಟ್) ಇವು ಬೆಕ್ಕಿನ ಜಾತಿಗೆ ಸೇರಿಲ್ಲ. ಮುಂಗುಸಿ ಜಾತಿಗೆ ಸೇರಿದ ಇವು ಹಲ್ಲಿ, ಹಾವು, ಕಪ್ಪೆ, ಇಲಿ ಇತ್ಯಾದಿ ಹಿಡಿದು ತಿನ್ನುತ್ತವೆ. ಚೈನಾದ ಹುವಾನಿನಲ್ಲಿ ಇವುಗಳನ್ನು ಹಿಡಿದು ಹುರಿದು ಮುಕ್ಕಿದ್ದರಿಂದ ಕೊರೋನಾ ಕಾಯಿಲೆ ಬಂದಿರಬಹುದೆಂದು ಊಹಿಸಲಾಗಿದೆ. ಇವು ಮಹತ್ತರವಾದ ಕೊರೋನಾ ವಾಹಕಗಳು. ನಮ್ಮ ದೇಶದ ಈಶಾನ್ಯ ಪ್ರಾಂತ್ಯದಲ್ಲಿ ಇವು ಇದ್ದರೂ ಸಹ ಯಾರು ಇವನ್ನು ತಿನ್ನುವ ಗೊಡವೆಗೆ ಹೋಗುವುದಿಲ್ಲ. ಬದಲಾಗಿ ಇವುಗಳಿಂದ ಹೊರಸೂಸುವ ಪುನುಗು ಎಂಬ ಸುಗಂಧ ದ್ರವ್ಯಕ್ಕೆ ಆಸೆ ಪಟ್ಟು ಬೇಟೆಯಾಡಿ ಇವು ವಿನಾಶದಂಚು ತಲುಪಿವೆ. ಈ ಪ್ರಾಣಿಗಳು ಚೈನಾ, ಭಾರತ ಮತ್ತು ಮಲೇಶಿಯಾದಲ್ಲಿದ್ದರೂ ಚೀನಿಯರು ಹಾವು, ಹುಳು ಹುಪ್ಪಟೆ ಮತ್ತು ಈ ತರಹದ ಇಲ್ಲಸಲ್ಲದ ಪ್ರಾಣಿಗಳನ್ನು ಮುಕ್ಕುವುದರಿಂದ ಕೊರೋನಾ ಕಾಯಿಲೆ ಬಂದಿದೆ ಎಂದು ಸಂಶೋಧನೆ ಹೇಳುತ್ತದೆ. ಚೀನಾದ ಗುವಾಂಗ್ ಎಂಬ ಸ್ಥಳದ ಹೊಟೇಲೊಂದರಲ್ಲಿ ಅತ್ಯಂತ ಕೊಳಕು ರೀತಿಯಲ್ಲಿ ಈ ಸಿವೆಟ್ ಬೆಕ್ಕುಗಳನ್ನು ಕಡಿದು ಗ್ರಾಹಕರಿಗೆ ಹುರಿದು ಉಣಬಡಿಸಿದ್ದಕ್ಕೆ ಸಾರ್ಸ್ ಮಹಾಮಾರಿಯೂ ಸಹ ನುಸುಳಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

Dr-NB-Sridhara

ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್​.ಬಿ.ಶ್ರೀಧರ

ಒಂಟೆಗಳ ಹಾಲಿನಿಂದ ಹರಡಿತ್ತೆ ಸೋಂಕು? ಒಂಟಿ ಡುಬ್ಬದ ಡ್ರೊಮೇಡರಿ ಒಂಟೆಗಳು ಕೊರೋನಾ ವೈರಾಣುಗಳ ವಾಹಕಗಳು ಎಂಬುದು ವಿವಾದಾತೀತವಾಗಿ ಸಾಬೀತಾಗಿದೆ. MERS-19 ಕಾಯಿಲೆಯನ್ನು ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಮೆರ್ಸ್) ಅಥವಾ ಮಧ್ಯಪ್ರಾಚ್ಯ ಶ್ವಾಸಕೋಶದ ತೊಂದರೆ ಎಂದೂ ಕರೆಯುತ್ತಾರೆ. ಮಧ್ಯಪ್ರಾಚ್ಯ ದೇಶಗಳಾದ ಈಜಿಪ್ಟ್, ಒಮನ್, ಕತಾರ್ ಮತ್ತು ಸೌದಿ ಅರೇಬಿಯಾ ದೇಶಗಳಲ್ಲಿ ಇದು 2012ನೇ ಸಾಲಿನಲ್ಲಿಯೇ ಕಾಣಸಿಕೊಂಡು ಮರಣ ಮೃದಂಗ ಬಾರಿಸಿತ್ತು. ಅಲ್ಲಿ ಒಂಟೆಗಳ ಸಂಖ್ಯೆ ಜಾಸ್ತ್ತಿ ಇದ್ದು, ಅವುಗಳಿಂದಲೇ ಇವು ಮನುಷ್ಯರಿಗೆ ಬಂದಿವೆ ಎಂದು ಹೇಳಲಾಗುತ್ತಿದೆ. ಹಾಗೆಂದು ಒಂಟೆಗಳಲ್ಲಿ ಯಾವುದೇ ರೋಗಲಕ್ಷಣ ಕಂಡು ಬರದೇ ಇರುವುದರಿಂದ ಒಂಟೆಗಳು ಈ ವೈರಾಣುಗಳ ಸಂಗ್ರಾಹಕಗಳಾಗಿ ಕೆಲಸ ಮಾಡುತ್ತವೆ ಎನ್ನಲಾಗಿದೆ. ಈ ವೈರಾಣು ಒಂಟೆಗಳ ಹಾಲಿನಲ್ಲಿ ಹೇರಳವಾಗಿ ಸ್ರವಿಸಲ್ಪಡುತ್ತದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಒಂಟೆ ಹಾಲು ಔಷಧಿಯೆಂದು ಪರಿಗಣಿಸಲ್ಪಡುತ್ತದೆಯಂತೆ. ಕಾಯಿಸದೇ ಕುಡಿದ ಒಂಟೆ ಹಾಲಿನಿಂದ ಮತ್ತು ಔಷಧವೆಂದು ಕುಡಿದ ಒಂಟೆ ಮೂತ್ರದಿಂದ ಮನುಷ್ಯರಿಗೆ ವೈರಾಣು ಹರಡಿತು ಎಂಬುದು ಪ್ರತೀತಿ.

ಒಂಟೆಗಳಲ್ಲಿ ಹೇಗೆ ಈ ವೈರಾಣು ಬಂತು ಎನ್ನುವುದೂ ಸಹ ಕುತೂಹಲಕಾರಿ. 1950ರಲ್ಲಿ ಕತಾರಿನ ಜನಸಂಖ್ಯೆ ಕೇವಲ 16,000. ಆದರೆ ತೈಲ ಸಂಪತ್ತು ಪತ್ತೆಯಾದ ನಂತರ ಅನೇಕ ದೇಶಗಳಿಂದ ವಲಸೆ ಬಂದು ಹೋದವರಿಂದ ಅದು ತುಂಬಿ ಹೋಗಿದೆ. 2016ರ ಹೊತ್ತಿಗೆ ಇದು 26,17,634 ತಲುಪಿತು. ಅರಬ್ ದೇಶಗಳಲ್ಲಿ 1983ರಿಂದ 2000ರ ಅವಧಿಯಲ್ಲಿ ತೈಲ ಕಂಪನಿಗಳು ಅಗಾಧವಾದ ತೈಲ ಸಂಪತ್ತನ್ನು ಪತ್ತೆ ಹಚ್ಚಿದವು. ಇವುಗಳನ್ನು ಅವುಗಳ ಸ್ಥಾನದಿಂದ ಮಾರುಕಟ್ಟೆಗೆ ಒಯ್ಯಲು ಉತ್ತಮ, ಕಡಿಮೆ ಖರ್ಚಿನ ಸಾಧನ ಬೇಕಿತ್ತು. ಆಗಿಂದ ಪ್ರಾರಂಭವಾಗಿದ್ದು ಈ ಒಂಟೆಗಳ ಸಾಕಣೆ ಮತ್ತು ಅವುಗಳ ಮೂಲಕ ತೈಲ ಸಾಗಣೆ. ಸರ್ಕಾರವೂ ಸಹ ಒಂಟೆ ಸಾಗಣೆ ಪ್ರೋತ್ಸಾಹಿಸಿತು. ಪರಿಣಾಮವಾಗಿ ಒಂಟೆಗಳ ಸಂಖ್ಯೆಯಲ್ಲಿ ಅಗಾಧ ಏರಿಕೆಯಾಯಿತು. ಈ ಒಂಟೆಗಳನ್ನು ಸಾಕುವವರು ಒಂಟೆಗಳ ಸಂಖ್ಯೆಯೊಂದಿಗೇ ಜಾಸ್ತಿಯಾದರು. ಒಂಟೆಗಳ ಜೊತೆಯೇ ಇರುವ ಇವರಿಗೆ ಒಂಟೆಗಳನ್ನು ಭಾಧಿಸದ ಆದರೆ ಮನುಷ್ಯರನ್ನು ಕಾಡುವ ಕೊರೋನಾ ವೈರಾಣು ಬಾಧೆ ಜಾಸ್ತಿಯಾಯಿತು. ಇವರು ಪಟ್ಟಣಕ್ಕೆ ಬಂದು ಪಟ್ಟಣದ ಜನರಿಗೆ ಈ ವೈರಾಣು ಬಾಧೆ ತಗಲಿಸಿದರು. ವಿದೇಶಕ್ಕೆ ಮತ್ತು ಪೇಟೆಗೆ ಹೋಗಿ ಬಂದ ಜನ ಇಡೀ ಪ್ರಪಂಚಕ್ಕೆ ಕೊರೋನಾ ವೈರಾಣುವನ್ನು ಬಳುವಳಿಯಾಗಿ ನೀಡಿದರು.

(ಮುಂದುವರಿಯುವುದು)

ಇದನ್ನೂ ಓದಿ: ಸಾಕುಪ್ರಾಣಿಗಳು ಮತ್ತು ಕೊರೊನಾ ಸೋಂಕು: ಸತ್ಯ ಮತ್ತು ಮಿಥ್ಯಗಳು

ಇದನ್ನೂ ಓದಿ: ಅಲರ್ಜಿ ಮತ್ತು ಕೊವಿಡ್​ ಲಕ್ಷಣಗಳ ಮಧ್ಯೆ ಗೊಂದಲವೇ? ಪರಿಹಾರಕ್ಕಾಗಿ ಇಲ್ಲಿದೆ ಸರಳ ಸಲಹೆಗಳು

(Did Humans get Coronavirus infection from Animals What Scientists say)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada