Covid Diary : ಕವಲಕ್ಕಿ ಮೇಲ್ ; ಕ್ಷಮಿಸಿ, ತರುಣ ಭಾರತದ ಕಥೆಯಲ್ಲಿ ‘…….‘ ಪದ ಬಹಳಸಲ ಪ್ರಯೋಗಿಸಿದೆ

Religious Extremism : ಪ್ರೇಮದ ಹೆಸರಿನ ಧರ್ಮಯುದ್ಧವೆಂದು ಬೊಬ್ಬೆ ಹಾಕಿ, ಕೋಮುದಂಗೆ ಎಬ್ಬಿಸಲಾಯಿತು. ಈ ಕಡೆಯವರ ಸೊಕ್ಕು ಆ ಕಡೆಯವರ ಒಣಹೆಮ್ಮೆಗೆ ಮಿತಿಯಿಲ್ಲ. ಎರಡೂ ಧರ್ಮದ ಅನುಯಾಯಿಗಳು ಕಾದಾಟಕ್ಕಿಳಿದಾಗ ಈ ಮರಿನಾಯಕರು ದೊಡ್ಡವರಾಗಲು ಯತ್ನಿಸಿದರು. ಮಾರುತಿಗೆ ಕೈತುಂಬ ಕೆಲಸ. ರೋಚಕ ಕೆಲಸ. ತಕ್ಷಣಕ್ಕೆ ಮಾಡಿ ಮುಗಿಸಿದರೆ ತಕ್ಷಣವೇ ಲಕ್ಷಾಂತರ ಲಾಭ ಬರುವ ಕೆಲಸ.

Covid Diary : ಕವಲಕ್ಕಿ ಮೇಲ್ ; ಕ್ಷಮಿಸಿ, ತರುಣ ಭಾರತದ ಕಥೆಯಲ್ಲಿ ‘.......‘ ಪದ ಬಹಳಸಲ ಪ್ರಯೋಗಿಸಿದೆ
Follow us
ಶ್ರೀದೇವಿ ಕಳಸದ
|

Updated on:Jun 16, 2021 | 11:52 AM

ಅವನನ್ನು ನಾಲ್ಕು ವರ್ಷ ಕೆಳಗೆ ನೋಡಿದಾಗ ಕುಡಿದು ಕುಡಿದು ಬೊಜ್ಜುಹೊಟ್ಟೆ ಬಂದಿತ್ತು. ಗುಟ್ಕಾ ತಿಂದು ಹಲ್ಲು ಕಪ್ಪಾಗಿತ್ತು. ಅಮಲಿಗೆ ಕೆಂಪೇರುತ್ತಿದ್ದ ಕಣ್ಣು, ಚೌರ ಮಾಡಿಕೊಳ್ಳದೆ ತಮ್ಮಿಷ್ಟದಂತೆ ಬೆಳೆದ ಗಡ್ಡಮೀಸೆ ತಲೆಗೂದಲುಗಳಿಂದ ಅಶಿಸ್ತಿನ ಮನುಷ್ಯನಂತೆ ಕಾಣುತ್ತಿದ್ದವ ಈಗ ಆರೋಗ್ಯವಾಗಿಬಿಟ್ಟಿದ್ದಾನೆ. ಜೈಲೊಳಗೇ ಇದ್ದಿದ್ದು ಬೆಳ್ಳಗಾಗಿದ್ದಾನೆ. ಗುಟ್ಕಾ ಇಲ್ಲದೆ ಹಲ್ಲೂ ಬೆಳ್ಳಗಾಗಿವೆ. ಎಣ್ಣೆಯಿಲ್ಲದೆ ಕಣ್ಣೂ ಬೆಳ್ಳಗಾಗಿವೆ. ಟ್ರಿಮ್ ಮಾಡಿದ ತಲೆಗೂದಲು ಗಡ್ಡಗಳೂ ಅಲ್ಲಿಲ್ಲಿ ಬೆಳ್ಳಗಾಗತೊಡಗಿವೆ. ನನ್ನ ಕಂಡವನೇ ನಗಾಡಿದ. ಅವನ ಜೊತೆಯ ಕೆಲವು ಖೈದಿಗಳಿಗೆ ಕೊರೊನಾ ಪಾಸಿಟಿವ್ ಆಯಿತಂತೆ. ಇವನಿಗೂ ಆಗಿ, ಹೆಚ್ಚಾಗಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರಂತೆ. ಜೈಲುಗಳಲ್ಲಿ ಖೈದಿಗಳ ಸಂಖ್ಯೆ ಕಡಿಮೆ ಮಾಡಲು ಸನ್ನಡತೆಯವರನ್ನು ಬಿಡಬೇಕೆಂಬ ಆದೇಶ ಬಂದು, ಇವನನ್ನೂ ಬಿಟ್ಟಿದ್ದಾರೆ. ವಾರಕ್ಕೊಮ್ಮೆ ಸ್ಟೇಷನ್ನಿಗೆ ಹೋಗಿ ಸಹಿ ಕೊಟ್ಟು ಬರಬೇಕು. ಸನ್ನಡತೆ ತೋರದಿದ್ದರೆ ಮತ್ತೆ ಜೈಲು ಕರೆಯುತ್ತದೆ ಎಂದವನಿಗೆ ಅರಿವಾಗಿದೆ.

*

ಕೊರೋನಾ ಯರ‍್ಯಾರಿಗೆ ಯಾವ್ಯಾವ ಪಾಠ ಕಲಿಸುತ್ತಿದೆಯೋ ಹೇಳಲಾಗದು. ಕೆಲವರಿಗೆ ಶಿಕ್ಷೆ, ಕೆಲವರಿಗೆ ಬಿಡುಗಡೆ. ಕೆಲವರಿಗೆ ಒಳ್ಳೆಯದು, ಕೆಲವರಿಗೆ ಕೆಟ್ಟದು. ಕೆಲವೊಮ್ಮೆ ನಾನು ನೋಡುತ್ತಿರುವುದು ಕನಸಲ್ಲ ತಾನೇ ಎಂದು ಅಚ್ಚರಿ ಮೂಡಿದ್ದೂ ಇದೆ. ನಾಲ್ಕು ವರ್ಷ ಕೆಳಗೆ ಜೈಲುವಾಸಿಯಾಗಿದ್ದ ಮಾರುತಿ ಇತ್ತೀಚೆಗೆ ಕ್ಲಿನಿಕ್ಕಿಗೆ ಬಂದು ಎದುರು ನಿಂತು ಇಂಥದೇ ಒಂದು ಶಾಕ್ ನೀಡಿದ ಎನ್ನಬಹುದು.

ಈ ಮಾರುತಿಯ ಕತೆ ಅಷ್ಟೇನು ವಿಶೇಷ ಎನ್ನುತ್ತೀರಾ? ಅವನ ಕತೆ ಇವತ್ತಿನ ತರುಣ ಭಾರತದ ಕತೆ. ಅದಕ್ಕೇ ನಿಮಗದನ್ನು ಹೇಳಬೇಕು.

ಮಾರುತಿ ತಿಂಗಳಿಗೊಮ್ಮೆಯಾದರೂ ನನ್ನ ಬಳಿ ಬರುತ್ತಿದ್ದ. ಅಜಮಾಸು ಇಪ್ಪತ್ತೆಂಟು ಕಿಮೀ ದೂರದ ಘಟ್ಟಪ್ರದೇಶದ ಅಡವಿಯಲ್ಲಿ ಅವನ ಊರು. ಅರ್ಧ ದೂರ ನಡೆದು, ಒಂದು ಮಣ್ಣು ರಸ್ತೆ ತಲುಪಿ ಮತ್ತರ್ಧ ದೂರ ಟೆಂಪೋ/ಜೀಪಿನಲ್ಲಿ ಬರಬೇಕು. ಈ ವರ್ಷ ಮಾಡಿದ ರಸ್ತೆ ಬರುವ ವರ್ಷಕ್ಕೆ ಇರುವುದಿಲ್ಲ, ಅಷ್ಟೊಂದು ನೀರು ಹರಿಯುವ, ಮಣ್ಣು ಕುಸಿಯುವ ದಾರಿ ಅದು. ಈ ಪ್ರದೇಶವನ್ನಾಳಿದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಗೆ ‘ಕಾಳುಮೆಣಸಿನ ರಾಣಿ’ ಎಂದು ಹೆಸರು ಬರಲು ಕಾರಣವಾದ ವಿಪುಲ ಕಾಳುಮೆಣಸಿನ ಬಳ್ಳಿಗಳಿರುವ ದಟ್ಟಡವಿ ಅವನೂರು. ಹೊಟ್ಟೆಬಟ್ಟೆಗೆ ತೊಂದರೆಯಿಲ್ಲದಷ್ಟು ಗದ್ದೆ ತೋಟವಿರುವವರು ಅವರು.

ಮನೆಯವರ ಸೀಕುಸಂಕಟಕ್ಕೆ ನಮ್ಮ ಬಳಿಯೇ ಬರುವ ಕುಟುಂಬ ಅವರದು. ಅರಣ್ಯವಾಸಿಗಳು ಒಮ್ಮೆ ಒಬ್ಬರನ್ನು ನಂಬಿದರೆ ಮುಗಿಯಿತು, ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ಎಂದು ಪೂರಾ ನಂಬಿಬಿಡುತ್ತಾರೆ. ಈ ನಂಬಿಕೆ ಸುಲಭಕ್ಕೆ ಬರುವುದಿಲ್ಲ, ಬಂದದ್ದು ಹೋದರೆ ಮತ್ತೆ ಸರಿಯಾಗುವುದೂ ಇಲ್ಲ. ಬುಡಕಟ್ಟುಗಳ ಸ್ವಭಾವದಲ್ಲೇ ಹೀಗಿದೆಯೋ ಅಥವಾ ಅವರ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯಿಂದ ಹೀಗಿರುವರೋ ಅರಿತವರು ಹೇಳಬೇಕು. ಅಂತೂ ನಾನು ಬಂದ ಹೊಸದರಲ್ಲಿ ಅವರ ಸಮುದಾಯದ ಲೀಡರ್ ತರಹ ಇದ್ದ ಅವನಮ್ಮ, ಎರಡು ಮಕ್ಕಳ ತಾಯಿ, ವಿಧವೆ, ತನ್ನವರನ್ನು ಗುಂಪುಗುಂಪಾಗಿ ಕರೆತರುತ್ತಿದ್ದಳು. ಹಿಂದೆಮುಂದೆ ಅಳೆದು ಸುರಿದು ಪರೀಕ್ಷಿಸಿ ಕೊನೆಗೆ ಖಾಯಂ ನಮ್ಮ ಬಳಿ ಬರುವವರೇ ಆದರು. ಅವರ ಬಾಳೆಯ ಮರದಲ್ಲಿ ಗೊನೆ ಇರಬಹುದು ಇಲ್ಲದಿರಬಹುದು ಎನ್ನುವುದು ಎಷ್ಟು ಸಹಜವೋ, ಕೈಯಲ್ಲಿ ದುಡ್ಡು ಇರಬಹುದು ಇಲ್ಲದಿರಬಹುದು ಎನ್ನುವುದೂ ಅಷ್ಟೇ ಸಾಮಾನ್ಯ. ಬಂದಾಗ ಹಿಂದಿನ ಬಾಕಿ ಕೊಟ್ಟು ಹೋಗುತ್ತಾರೆ. ಹೆಚ್ಚಿದ್ದಾಗ ಇಟ್ಟು ಹೋಗುತ್ತಾರೆ. ಆ ಬುಡಕಟ್ಟು ಸಮುದಾಯದಲ್ಲಿ ದಗಲ್ಬಾಜಿಗಳು ಇಲ್ಲವೆಂದಲ್ಲ, ಆದರೆ ಕಡಿಮೆ. ಅವರಲ್ಲಿ ಬಹುತೇಕ ಕುಟುಂಬಗಳು ಅರಣ್ಯ ಉತ್ಪನ್ನಗಳನ್ನು, ಕಾಡು ಕಡಿದು ಮಾಡಿದ ಸಣ್ಣ ಗದ್ದೆತೋಟದಲ್ಲಿ, ಕಾಟಿ ಮಂಗಗಳು ಉಳಿಸಿದ್ದನ್ನು ತಮಗೆಂದುಕೊಂಡು ಬದುಕಿವೆ. ಅತಿಸಿಹಿಯ ಬೆಲ್ಲ ಮಾಡುತ್ತಾರೆ. ಕರಿಕರಿ ಬೆಲ್ಲವನ್ನು ಮುದ್ದೆಯಂತೆ ದುಂಡಗೆ ಕಟ್ಟಿ ಒಣಗಿದ ವಾಲೆಗರಿಯಲ್ಲಿ ಸುತ್ತಿಡುತ್ತಾರೆ. ಘಮ್ಮನೆಯ ‘ಪಾಯ್ಸದ ಅಕ್ಕಿ’ ಬೆಳೆಯುತ್ತಾರೆ. ಇವೆಲ್ಲ ನಮ್ಮ ಅಡುಗೆ ಮನೆಯನ್ನೂ ತಲುಪಿರುವುದರಿಂದ ಗೊತ್ತು. ಅವರ ಹಾಸಿಗೆ ಸಣ್ಣದು, ಕೈಕಾಲು ಚಾಚಿ ಮಲಗುವವರೂ ಕಡಿಮೆ. ಹಾಗಾಗಿ ಇದ್ದಷ್ಟೇ ಅವರಿಗೆ ಸಾಕಾಗುತ್ತದೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಇಂತಿಪ್ಪ ಸಮುದಾಯಗಳಲ್ಲಿ ಕೇರಿಗೊಬ್ಬರೋ ಇಬ್ಬರೋ ಸಾಹಸಿಗಳು, ಧೈರ್ಯಶಾಲಿಗಳು ಬರುತ್ತಾರೆ. ಕೆಲವರು ಮುಂದಾಳುಗಳಾಗಿ ಇರುತ್ತಾರೆ. ಕೆಲವರು ದುಸ್ಸಾಹಸಕ್ಕಿಳಿದು ಕೇಡಿಗರಾಗಿರುವುದೂ ಇದೆ. ಅವೆರೆಡರ ನಡುವಿನ ಗೆರೆ ತೆಳು. ನಮ್ಮ ಮಾರುತಿ ಅಂಥ ಸಾಹಸಿ. ನಾವು ಮೊದಲು ಅವನನ್ನು ನೋಡಿದಾಗ ಕನ್ನಡ ಶಾಲೆ ಬಿಟ್ಟು ತನ್ನ ಅವ್ವಿಯ ಜೊತೆ ಗುಡ್ಡ, ಬೆಟ್ಟಗಳ ತಿರುಗುವ ಪೋರನಾಗಿದ್ದ. ಬಳಿಕ ಕೆಲಸಕ್ಕೆ ಹೋಗಲು ಶುರುಮಾಡಿದ. ಅವಳ ಸೊಂಟದ ಕವಳದ ಚೀಲದಿಂದ ಮಧು ಪ್ಯಾಕೆಟ್ ಎಗರಿಸಿ ತಾನೂ ತಿನ್ನುತ್ತಿದ್ದ. ಮನೆಯ ತೋಟವಾದರೇನು? ಕೆಲಸ ಮಾಡಲಿಲ್ಲವೆ, ತನಗೂ ದುಡ್ಡು ಕೊಡು ಎಂದು ಕೇಳಿ, ಹಣ ಪಡೆದು, ಗೋಬಿ ಕಬಾಬ್ ತಿನ್ನಲು ನಡೆದು ಹೋಗುತ್ತಿದ್ದ. ಕದ್ದು ಕಳ್ಳಭಟ್ಟಿ ಕುಡಿಯುತ್ತಿದ್ದ. ಹೆಚ್ಚು ಮಾತನಾಡ. ದೇಹದಲ್ಲಿ ಬಲು ಗಟ್ಟಿಗ. ಒಮ್ಮೆ ಸೊಪ್ಪು ಕಡಿಯುವಾಗ ಕೈ ಕಡಿದುಕೊಂಡಿದ್ದವ ಹೊಲಿಗೆ ಹಾಕುವಾಗಲೂ ಕಮಕ್ ಕಿಮಕ್ ಅಂದಿರಲಿಲ್ಲ.

ಅವನಿಗೆ ಏನೇನೋ ಮಾಡಬೇಕು, ಎಲ್ಲೆಲ್ಲೋ ಹೋಗಬೇಕು ಎಂಬ ಉಮೇದಿ. ಆದರೆ ಸ್ಪಷ್ಟವಾಗಿ ಮಾರ್ಗದರ್ಶನ ನೀಡುವವರಿಲ್ಲ. ನಿಜ ಹೇಳುವವರನ್ನು ಅವ ನಂಬಲಿಲ್ಲ. ಅವನು ನೆಚ್ಚಿದ ಆಕಾಶಕ್ಕೆ ಏಣಿಯಿಡುವ ದೋಸ್ತರ ಸಲಹೆಗಳು ಕೈಗೂಡುವಂಥವಲ್ಲ. ಒಮ್ಮೆ ಬಂದವನು ಇದ್ದಕ್ಕಿದ್ದಂತೆ, ‘ಮಿಲಿಟ್ರಿಗ್ ಸೇರಿದ್ರೆ ಹ್ಯಾಂಗೆ?’ ಎಂದಿದ್ದ. ಯಾವುದೋ ಕೆಲಸದಲ್ಲಿದ್ದವಳು ಆಗಬಹುದು ಎಂದಿದ್ದೆ. ಕೆಲವು ದಿನದಲ್ಲಿ, ‘ಎರಡು ಪೊಯಿಂಟ್ ಎತ್ತರ ಕಮ್ಮಿ, ಆಗುದಿಲ್ಲ ಅಂದಾರೆ. ಹೈಟ್ ಆಗುಕೆ ಏನರೆ ಬರ‍್ಕೊಡಿ’ ಅಂದ. ಮದ್ದು ತಿಂದು ಎತ್ತರ ಹೆಚ್ಚಾಗುವುದಿಲ್ಲ, ಅದು ನಿನ್ನ ಅಮ್ಮ ಅಪ್ಪ ಅಜ್ಜ ಅಜ್ಜಿಯರಿಂದ ವಂಶವಾಹಿಯಾಗಿ ಬಂದದ್ದು ಮಾರಾಯಾ ಎಂದು ಅರ್ಥಮಾಡಿಸಲು ನಾನು ಹೆಣಗುತ್ತಿದ್ದರೆ ಅವ ಮೇಲೆಲ್ಲೋ ನೋಡುತ್ತ ಕಾಲು ಕುಣಿಸುತ್ತ ನಿಂತಿದ್ದ. ‘ಒಂದ್ ಜಂತು ಮದ್ದು ಕೊಡಿ’ ಅಂದ. ‘ಚೌತಿ ಹಬ್ಬಕ್ ರಜಿ ಕೊಡ್ತಾರೆ?’ ಎಂದ. ‘ಇಲ್ಲಿಂದ ಬೆಂಗ್ಳರ‍್ಗೆ ಎಷ್ಟ್ ಚಾರ್ಜ್ ಅದೆ?’ ಕೇಳಿದ. ಹೀಗೆ ಒಂದಕ್ಕೊಂದು ಸಂಬಂಧವಿಲ್ಲದ ಪ್ರಶ್ನೆಗಳು. ಉತ್ತರ ಗ್ರಹಿಸುವನೋ ಇಲ್ಲವೋ ಅನುಮಾನ. ಅವನ ಯೋಚನೆಯ ಪ್ರವಾಹದಿಂದ ಒಂದು ಬೊಗಸೆ ಎತ್ತಿ ಇಲ್ಲಿ ಒಗೆಯುತ್ತಿದ್ದ. ನಮಗದು ತುಂಡುತುಂಡು ಮಾತಿನಂತೆ ಕೇಳುವುದು. ಒಂದು ದಿನ ಅವನ ಅವ್ವಿ ಸ್ವಲ್ಪ ಬುದ್ಧಿ ಹೇಳಿ, ಮನೆಯ ಹತ್ತಿರ ಕೆಲಸ ಮಾಡುವುದು ಬಿಟ್ಟು ಅಲ್ಲೆಲ್ಲೆಲ್ಲೋ ಹೋಗಿ ಸಾಯುವುದು ಬೇಡ ಎಂದು ನನ್ನೆದುರಿಗೇ ಅವನನ್ನು ಬೈದಿದ್ದಳು. ಆದರೆ ಯಾರ ಮಾತೂ ನಿಲ್ಲಲಿಲ್ಲ. ಗೋವಾಗೆ ಮೀನುಗಾರಿಕೆಗೆ ಬೋಟಿಗೆ ಹೋಗುವುದೇ ಸೈ ಎಂದು ಹಠ ಹಿಡಿದು ಹೊರಟ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಶ್ರಮಿಕ ಸಮುದಾಯಗಳು ಗೋವಾಕ್ಕೆ ದುಡಿಯಲು ಹೋಗುವುದು ನಮ್ಮ ಸೀಮೆಗೆ ಸಾಮಾನ್ಯ. ಹುಡುಗರು ಒಂಭತ್ತನೇ ಕ್ಲಾಸಿನ ತನಕ ಹೇಗಾದರೂ ಶಾಲೆಯನ್ನು ಸಹಿಸಿಕೊಂಡು ಹತ್ತನೇ ಇಯತ್ತೆಗೆ ಮುಕ್ತಿ ಪಡೆಯುತ್ತಾರೆ. ಮೂರ್ನಾಲ್ಕು ವರ್ಷ ಅಲ್ಲಿಲ್ಲಿ ಕೆಲಸ ಮಾಡಿ ಹದಿನೆಂಟು ತುಂಬಿದ್ದೇ ಗೋವಾ ಕಡೆಗೆ ಮುಖ ಮಾಡುತ್ತಾರೆ. ಬೇಕರಿ, ಹೋಟೆಲ್, ಸ್ಪಾ, ಬಾರ್, ಮೀನುಗಾರಿಕೆ, ಐಸ್ ಫ್ಯಾಕ್ಟರಿ, ಐಸ್‌ಕ್ರೀಂ ಪಾರ್ಲರ್, ಮನೆಗೆಲಸ, ತೋಟದ ಕೆಲಸ ಮುಂತಾದ ಕೆಲಸಕ್ಕೆ ಹೋಗುತ್ತಾರೆ. ಇವನೂ ಹಾಗೆ ಶಾಲೆ ಬಿಟ್ಟವರ ಸಂಗ್ತಿ ಗೋವಾಗೆ ಹೋದ. ಅವನ ಸ್ಥಿತಿ ಹಸಿದ ಗಂಟಿಯನ್ನು ಗದ್ದೆಗೆ ಬಿಟ್ಟಂತೆ ಆಯಿತು. ಪ್ರತಿವಾರದ ಕೊನೆಗೆ ಕೈಗೆ ಬರುವ ಒಂದಷ್ಟು ಹಣ. ಅವ್ವಿಯ ಕರಕರೆಯಿಲ್ಲ. ಕೇಳುವವರಾರೂ ಇಲ್ಲ. ಅವ ನಡೆದದ್ದೇ ದಾರಿ. ದುಡಿದಿದ್ದರಲ್ಲಿ ಹೆಚ್ಚುಪಾಲು ಕಳೆದ. ನಡುವೆ ಅಷ್ಟಿಷ್ಟು ಅವ್ವಿಗೆ ಕಳಿಸುವ. ಒಂದು ಮಳೆಗಾಲ ಎರಡೂವರೆ ತಿಂಗಳು ಮೀನುಗಾರಿಕೆ ನಿಷೇಧದ ರಜೆಯಿದ್ದಾಗ ಮನೆಗೆ ಬಂದವ ಈ ವರ್ಷವೇ ಮದುವೆ ಮಾಡು ಎಂದು ಹಠ ಹಿಡಿದ. ಹುಡುಗಿ ನೋಡುವಷ್ಟಾದರೂ ಪುರುಸೊತ್ತು ಬೇಡವೇ ಎಂದು ಅವ್ವಿ ಬೈದದ್ದಕ್ಕೆ ಅದೆಲ್ಲೋ ಬೆಟ್ಟದ ಬದಿಯ ಕೇರಿಯೊಂದಕ್ಕೆ ಹೋಗಿ, ಎಳೆಯ ಹುಡುಗಿಯನ್ನು ಕಂಡು, ಒಂದೇ ವಾರದಲ್ಲಿ ‘ಲವ್’ ಮಾಡಿ, ಅವಳನ್ನೇ ಮದುವೆ ಆಗುವುದು ಎಂದು ಎಬ್ಬಿಸಿಕೊಂಡು ಬಂದ. ಅಮ್ಮ ಮದುವೆ ಮಾಡಿದಳು. ಅವಳು ನಮ್ಮ ಆಸ್ಪತ್ರೆಯಲ್ಲೇ ಒಂದಾದಮೇಲೊಂದು ಮೂರು ಹೆತ್ತಳು.

ಅವನಿಗೆ ಬೇಗಬೇಗ ಹೆಚ್ಚೆಚ್ಚು ದುಡಿಯುವ ಉತ್ಸಾಹ ಉಕ್ಕಿ ಹರಿದ ಕಾಲವದು. ಗೋವಾಗೆ ಹೋಗದೇ ಇಲ್ಲೇ ನಿಂತ. ಆದರೆ ಇಲ್ಲಿನ ದುಡಿಮೆ ಸಾಕಾಗಲಿಲ್ಲ. ಹೆಚ್ಚೆಚ್ಚು ಗಳಿಸಲೆಂದು ಎಲ್ಲೆಲ್ಲಿ ಕೈಯಿಟ್ಟನೋ? ಅನಾಯಾಸವಾಗಿ ದೊಡ್ಡ ನಿಧಿ ಸಿಕ್ಕೀತೆಂದು ಹುತ್ತಕ್ಕೂ ಕೈಹಾಕಿದ. ಗುಹೆಯೊಳಗೂ ಹೋಗಿಬಂದ. ಥಟ್ಟನೆ ಗಳಿಸುವ ಉಮೇದಿಗೆ ಕಳ್ಳ ನಾಟ, ಕಳ್ಳಭಟ್ಟಿ, ಕಳ್ಳನೋಟು… ಕ್ಷಮಿಸಿ. ಕಳ್ಳ ಪದವನ್ನು ತುಂಬ ಸಲ ಪ್ರಯೋಗಿಸಿದೆ. ಹಾಗೆ ನೋಡಿದರೆ ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸಿ ಅವನಿಗೆ ಇಲ್ಲದಂತೆ ಮಾಡಿರುವ ನಾವೇ ಕಳ್ಳರು. ಆದರೂ ಲೋಕದ ಭಾಷೆಯಲ್ಲಿ ಅವ ಏನಾದ ಎನ್ನಲು ಈ ಪದ ಬಳಸಬೇಕಾಯ್ತು. ಹ್ಞಾಂ, ಮೂವರು ದೋಸ್ತರೊಡನೆ ಇಂಥವೇ ವ್ಯವಹಾರ ನಡೆಸಿದ. ಒಂದಷ್ಟು ಹಣ, ಮತ್ತಷ್ಟು ಆರೋಪ, ಹೊಡೆತ, ಗುದ್ದಾಟ. ಕುಡಿತವಂತೂ ದಿನನಿತ್ಯ ಇದ್ದೇ ಇತ್ತು. ಚಿಕ್ಕಪುಟ್ಟದ್ದಕ್ಕೆ ಎಳೆಹೆಂಡತಿಯ ಕೈಕಾಲು ಮುರಿಯುವಂತೆ ಹೊಡೆಯುವುದು ನಡೆದೇ ಇತ್ತು.

ಸಮುದ್ರದ ಅಲೆಗಳಂತೆ ಅವಳು ಸಂತಸವನ್ನೂ ದುಃಖವನ್ನೂ ಜೊತೆಜೊತೆಗೆ ಅನುಭವಿಸುತ್ತ ಬೆಳೆದಳು. ಆ ಎಳೆಯ ಹೆಣ್ಣಿನ ದಣಿದ ಮುಖ ಕಂಡಾಗಲೆಲ್ಲ ಹೊಟ್ಟೆಯಲ್ಲಿ ಮುಳ್ಳುಗಿಡ ಬೆಳೆದ ಅನುಭವವಾಗುತ್ತಿತ್ತು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಹೀಗಿರುತ್ತ ಅವನಿಗೆ ರಾಜಕೀಯ ನಾಯಕರ ಪರಿಚಯವಾಯಿತು. ಅವರೇನು ದೊಡ್ಡ ನಾಯಕರಲ್ಲ. ಊರುಕೇರಿ ಮಟ್ಟದಲ್ಲಿ ಜಾತಿ, ಧರ್ಮವನ್ನೇ ಮೂಲ ಬಂಡವಾಳ ಮಾಡಿಕೊಂಡ ಗೋಸುಂಬೆ ಅವರು. ಅಂಥವರಿಗೆ ಮಾರುತಿಯಂಥವರೇ ಬೇಕು. ಪ್ರೇಮ ವಿಫಲತೆಗೆ ಹುಡುಗನೊಬ್ಬ ಕೆರೆಯಲ್ಲಿ ಮುಳುಗಿ ಸತ್ತದ್ದಕ್ಕೆ ಜಾತಿಧರ್ಮದ ಬಣ್ಣ ಬಳಿದು, ಪ್ರೇಮದ ಹೆಸರಿನ ಧರ್ಮಯುದ್ಧವೆಂದು ಬೊಬ್ಬೆ ಹಾಕಿ, ಕೋಮುದಂಗೆ ಎಬ್ಬಿಸಲಾಯಿತು. ಈ ಕಡೆಯವರ ಸೊಕ್ಕು ಕಡಿಮೆಯಿಲ್ಲ. ಆ ಕಡೆಯವರ ಒಣಹೆಮ್ಮೆಗೆ ಮಿತಿಯಿಲ್ಲ. ಎರಡೂ ಧರ್ಮದ ಅನುಯಾಯಿಗಳು ಕಾದಾಟಕ್ಕಿಳಿದಾಗ ಈ ಮರಿನಾಯಕರು ದೊಡ್ಡವರಾಗಲು ಯತ್ನಿಸಿದರು. ಮಾರುತಿಗೆ ಕೈತುಂಬ ಕೆಲಸ. ರೋಚಕ ಕೆಲಸ. ತಕ್ಷಣಕ್ಕೆ ಮಾಡಿ ಮುಗಿಸಿದರೆ ತಕ್ಷಣವೇ ಲಕ್ಷಾಂತರ ಲಾಭ ಬರುವ ಕೆಲಸ.

ಮೂವರೂ ದೋಸ್ತರು ಕೈಹಾಕಿದರು. ಕೈಗೆ ದುಡ್ಡು ಹತ್ತುವ ಬದಲು ಕೋಳ ಬಂದವು. ಆ ನಾಯಕರಾದರೋ ಇವರು ಯಾರು ಎಂದೇ ತನಗೆ ಗೊತ್ತಿಲ್ಲ, ತಮ್ಮ ಹೆಸರು ಕೆಡಿಸಲು ವಿರೋಧ ಪಕ್ಷದವರು ಛೂ ಬಿಟ್ಟ ವ್ಯಕ್ತಿಗಳಿವರು ಎಂದು ಹೇಳಿ ಕೈತೊಳೆದುಕೊಂಡರು.

ವಿಧವೆ ಅವ್ವಿ, ಮೂವರು ಮಕ್ಕಳು, ಹೆಂಡತಿಯನ್ನು ಮನೆಯಲ್ಲಿ ಬಿಟ್ಟು ಇವ ಜಿಲ್ಲಾ ಕಾರಾಗೃಹವಾಸಿಯಾದ. ಜೈಲಿನಂದ ಮನೆಗೆ ಪದೇಪದೇ ಪತ್ರ ಹಾಕಿಸುತ್ತಿದ್ದ, ‘ಲಾಯರ್ ಗೊತ್ತು ಮಾಡಿ ನನ್ನ ಬಿಡಿಸಿ, ಬಿಡಿಸಿ’ ಅಂತ. ಒಮ್ಮೆ ಅವಳು ಪತ್ರ ತಂದು ತೋರಿಸಿದ್ದಳು. ಸ್ವಲ್ಪ ಪ್ರಬುದ್ಧಳಂತೆ ಕಾಣುತ್ತಿದ್ದಳು. ಅವಿವೇಕಿ ಗಂಡನ ಸಹವಾಸದಲ್ಲಿ ಲೋಕವನ್ನು ಮತ್ತೊಂದು ತುದಿಯಿಂದ ಅರಿತುಕೊಂಡಿದ್ದಳು. ಪತ್ರ ಓದಿ, ನಮಗೆ ತಿಳಿದ ಲಾಯರೊಬ್ಬರ ನಂಬರು ಕೊಟ್ಟೆ. ಅದಕ್ಕವಳು, ‘ಅಲ್ಲೇ ಇರ್ಲಿ ಸುಮ್ನಿರಿ ಅಮಾ, ಗನ್ನಾ ನಾಕು ಬೀಳ್ಬೇಕು ಅವ್ರಿಗೆ, ಹಂಗಾದ್ರೆ ಬುದ್ದಿ ಬತ್ತದೆ. ನಂಗಂತೂ ಸಾಕಾಗ್ ಹೋಗದೆ. ತಿಂದ್ ಅನ್ನ ಮೈಗೆ ಹತ್ತುಕ್ ಕೊಡುದಿಲ್ಲ ಹಂಗೆ. ಕರ್ಕರೆ ದೇವ್ರಿಗೆ ಮರದ್ ಜಾಗಂಟೆನೇ ಸೈಯಿ, ಅಲ್ಲೇ ಇರ್ಲಿ’ ಎಂದು ಶಾಕ್ ನೀಡಿದ್ದಳು. ಹದಿನೈದು ದಿನಕ್ಕೊಮ್ಮೆ ಕಾರವಾರ ಜೈಲಿಗೆ ಹೋಗುವಳಂತೆ. ಹೋಗುವಾಗ ಮೀನ, ಮಟನ, ಕೋಳಿ ಎಲ್ಲ ಒಯ್ಯುವಳಂತೆ. ಮಕ್ಕಳನ್ನೇ ಜೊತೆ ಮಾಡಿಕೊಂಡು ಜೈಲಿಗೆ ಹೋದರೂ ಜೊತೆ ಯಾರು ಬಂದರೆಂದು ಕೇಳುವನಂತೆ. ಇಪ್ಪತ್ತು ಸಾವಿರ ತಂದುಕೊಡು, ಬಿಡುಗಡೆ ಮಾಡಿಕೊಂಡು ಬರುವೆ ಎನ್ನುತ್ತಾನಂತೆ. ಅವಳ ಮೈಮೇಲೆ ಎರಡು ತಾಳಿ ಬಿಟ್ಟರೆ ಬೇರೆ ಬಂಗಾರವಿಲ್ಲ. ಒಂದು ಹಾಳೆ ಗದ್ದೆ ಮಾರಿ ದುಡ್ಡು ಒಯ್ದರೆ ಊಟಕ್ಕೇನು ಮಾಡುವುದು ಎಂದರೆ ಅವನಲ್ಲಿ ಉತ್ತರವಿಲ್ಲ. ‘ಹೊರಗ್ ಬಂದ್ಮೇಲೆ ಮಾಡ್ತೆ ನಿಂಗೆ’ ಎಂದು ಗದರಿಸುವನಂತೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಇಂಥ ಎಲ್ಲ ಅಂತೆಗಳು ಕಾಲಕಾಲಕ್ಕೆ ನನ್ನನ್ನು ತಲುಪುತ್ತಿದ್ದವು. ಅವಳು ಬೇಸತ್ತು, ಬೇಸರಗೊಂಡು, ವಿಷಣ್ಣಳಾಗಿ ಹೇಳುತ್ತಿದ್ದಳು. ಕಳೆದ ವರ್ಷ ಲಾಕ್‌ಡೌನ್ ಬಂದಾಗ ತನಗೀಗ ಕಾರವಾರಕ್ಕೆ ಹೋಗುವ ಕೆಲಸ ತಪ್ಪಿತು ಎಂದು ನಿಟ್ಟುಸಿರಿಟ್ಟಿದ್ದಳು. ಅದಾದ ಬಳಿಕ ಅವಳನ್ನು ಕಂಡಿರಲಿಲ್ಲ.

ಇವತ್ತು ಗಂಡನ ಜೊತೆ ಬಂದಿದ್ದಾಳೆ! ಮಾರುತಿ ಮಾಸ್ಕು ತೆಗೆದು ನಕ್ಕು ಕೈಮುಗಿದ.

ಅವನನ್ನು ನಾಲ್ಕು ವರ್ಷ ಕೆಳಗೆ ನೋಡಿದಾಗ ಕುಡಿದು ಕುಡಿದು ಬೊಜ್ಜುಹೊಟ್ಟೆ ಬಂದಿತ್ತು. ಗುಟ್ಕಾ ತಿಂದು ಹಲ್ಲು ಕಪ್ಪಾಗಿತ್ತು. ಅಮಲಿಗೆ ಕೆಂಪೇರುತ್ತಿದ್ದ ಕಣ್ಣು, ಚೌರ ಮಾಡಿಕೊಳ್ಳದೆ ತಮ್ಮಿಷ್ಟದಂತೆ ಬೆಳೆದ ಗಡ್ಡಮೀಸೆ ತಲೆಗೂದಲುಗಳಿಂದ ಅಶಿಸ್ತಿನ ಮನುಷ್ಯನಂತೆ ಕಾಣುತ್ತಿದ್ದವ ಈಗ ಆರೋಗ್ಯವಾಗಿಬಿಟ್ಟಿದ್ದಾನೆ. ಜೈಲೊಳಗೇ ಇದ್ದಿದ್ದು ಬೆಳ್ಳಗಾಗಿದ್ದಾನೆ. ಗುಟ್ಕಾ ಇಲ್ಲದೆ ಹಲ್ಲೂ ಬೆಳ್ಳಗಾಗಿವೆ. ಎಣ್ಣೆಯಿಲ್ಲದೆ ಕಣ್ಣೂ ಬೆಳ್ಳಗಾಗಿವೆ. ಟ್ರಿಮ್ ಮಾಡಿದ ತಲೆಗೂದಲು ಗಡ್ಡಗಳೂ ಅಲ್ಲಿಲ್ಲಿ ಬೆಳ್ಳಗಾಗತೊಡಗಿವೆ. ನನ್ನ ಕಂಡವನೇ ನಗಾಡಿದ. ಅವನ ಜೊತೆಯ ಕೆಲವು ಖೈದಿಗಳಿಗೆ ಕೊರೊನಾ ಪಾಸಿಟಿವ್ ಆಯಿತಂತೆ. ಇವನಿಗೂ ಆಗಿ, ಹೆಚ್ಚಾಗಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರಂತೆ. ಜೈಲುಗಳಲ್ಲಿ ಖೈದಿಗಳ ಸಂಖ್ಯೆ ಕಡಿಮೆ ಮಾಡಲು ಸನ್ನಡತೆಯವರನ್ನು ಬಿಡಬೇಕೆಂಬ ಆದೇಶ ಬಂದು, ಇವನನ್ನೂ ಬಿಟ್ಟಿದ್ದಾರೆ. ವಾರಕ್ಕೊಮ್ಮೆ ಸ್ಟೇಷನ್ನಿಗೆ ಹೋಗಿ ಸಹಿ ಕೊಟ್ಟು ಬರಬೇಕು. ಸನ್ನಡತೆ ತೋರದಿದ್ದರೆ ಮತ್ತೆ ಜೈಲು ಕರೆಯುತ್ತದೆ ಎಂದವನಿಗೆ ಅರಿವಾಗಿದೆ.

‘ಮೇಡಂ, ಈಗ ಬುದ್ದಿ ಬಂದದೆ. ಅಲ್ಲಿಗ್ ಹೋದಮ್ಯಾಲೆ ಮನೆ ಅಂದ್ರೇನು ಅಂತ ಗೊತ್ತಾಗದೆ. ಕೊರೊನ ಬಂದ್ ಸತ್ ಹೋಯ್ತೆ ಅಂತ ಮಾಡಿದ್ದೆ. ಏನ, ನಿಂ ಆಸಿರ್ವಾದ, ಉಳ್ಕಂಡ್ ಬಂದೆ. ನಾ ಇಲ್ದೇ ಇರುವಾಗ ಹುಡ್ರು, ಅವ್ವಿನೆಲ್ಲ ಕಾಪಾಡಿದೀರಿ, ನಿಂ ಉಪಕಾರ ಮರ‍್ಯಲ್ಲ. ಬೇಡ್ಕ ಬಂದಾರೂ ಸಾಲ ತೀರಿಸ್ತೆ’ ಎಂದು ಕೈಮುಗಿದ. ಜೈಲಿನಲ್ಲಿದ್ದಾಗ ತಾನು ನೇಯ್ದದ್ದು ಎಂದು ಚಂದದ ಚೌಕುಳಿ ವಿನ್ಯಾಸದ ಹಾಸಿಗೆಯ ಹೊದಿಕೆ ಕೊಟ್ಟ!

ಅಲ್ಲಿ ಹೋದಮೇಲೆ ಅರ್ಥವಾಗುವಂತೆ ಮಾತಾಡಲು ಕಲಿತಿದ್ದಾನೆ. ಚರ್ಮ, ಕೂದಲುಗಳಂತೆ ಮನಸ್ಸೂ ಬಿಳಿಯಾಗಿದೆ ಎಂದು ಖುಷಿಯಾಯಿತು. ಅವನಾಚೆ ಹೋದಮೇಲೆ ಅವಳು ಬಂದಳು. ತನ್ನ ತಪಾಸಣೆ, ಔಷಧಿ ಮುಗಿದು ದುಡ್ಡು ಕೊಡುವಾಗ ನನ್ನ ಟೇಬಲಿನ ಮೇಲೊಂದು ಚೀಟಿ ಹೊತ್ತಾಕಿದಳು.

ಒಟ್ಟು 228 ಕೆಜಿ 9 ಕೆಜಿ ಚೂಳಿ (2 ಚೂಳಿ, 4.5 ತಲಾ) — 219 – 4.3 (ಜುಟ್ಟು) — 214.7 30 ಕೆಜಿ = 6441/-

ತಲೆಬುಡ ಅರ್ಥವಾಗಲಿಲ್ಲ. ‘ಇದೆಂತ ಮಾರಾಯ್ತಿ’ ಎಂದೆ. ಇವತ್ತು ಅವರು ಕಾಯಿಫ್ಯಾಕ್ಟರಿಗೆ ತೆಂಗಿನಕಾಯಿ ತಂದಿದ್ದಾರೆ. ಒಟ್ಟು 228 ಕೆಜಿ. ಅವರು ತಂದ ಎರಡು ಚೂಳಿಯ ತೂಕ 9 ಕೆಜಿ ಹಾಗೂ ತೆಂಗಿನಕಾಯಿಯ ಜುಟ್ಟಿನ ತೂಕ 4.3 ಕೆಜಿ ಕಳೆದು 214.7 ಕೆಜಿ ಬಂದಿದೆ. ಕೆಜಿಗೆ 30 ರೂಪಾಯಿಯಂತೆ 6,441 ರೂಪಾಯಿ ಬಂದಿದೆ. ಹದಿಮೂರು ತೆಂಗಿನಮರದಿಂದ ತಿಂಗಳಿಗೆ ಇಷ್ಟು ಬರುತ್ತದೆ.

‘ಈ ದುಡ್ಡು ಇಟ್ಕಣಿ. ಅಮ್ಮಂಗೆ ಕೊಡುದದೆ ಅಂತ ತಕಬಂದೀನಿ. ಒಂದ್ ಹೊಲಿಗಿ ಮಿಷನ್ ತಕಳುವಾ ಹೇಳಿ. ಇನ್ನೊಂದ್ಸಲ ಬಂದಾಗ ತಗಂತೆ’ ಎಂದಳು.

‘ಈಗ ಹೇಗೆ?’ ಎಂದೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಈಗ ಪರವಾಯಿಲ್ಲ, ಜೈಲು ಕೊರೊನ ಎಯ್ಡೂ ಬುದ್ದಿ ಕಲ್ಸಿದಾವೆ. ನಂಬಕ್ಕೇ ಆಗಲ್ಲ ಇವ್ರು ಅಂತ ಹಂಗ್ ಬದ್ಲಾಗಾರೆ. ತಂ ಬಟ್ಟೆ ತಾವೇ ಸೆಳ್ಕಂತ್ರು ಈಗ. ಮಕ್ಳು ಮರಿನ ನೋಡ್ಕಂತ್ರು. ಮತ್ ಮೊದ್ಲಿನಂಗೇ ಏನರೆ ಮಾಡಿದ್ರೆ ಅವ್ರಿಗಲ್ಲಿ ಜೈಲು ಮಾವ ಕಾಯ್ತೇ ಇರ‍್ತಾನೆ. ನಾನ್ ಅವ್ರುನ್ ಬಿಟ್ಟಾಕಿ ಅಪ್ಪನ ಮನಿಗೋಯ್ತೆ ಅಂತ ಹೇಳ್ಬಿಟ್ಟಿದಿನಿ’ ಎಂದು ಪಿಸುಗುಟ್ಟಿದಳು. ಬ್ಯಾಂಕಿನ ಸಾಲ ತೆಗೆದು ಎರಡು ಎಮ್ಮೆ ಕಟ್ಟುವ ಯೋಚನೆ ಇದೆ ಎಂದು ನನ್ನ ಪರ್ಸೆಂಬ ಬ್ಯಾಂಕಿಗೆ ತನ್ನ ದುಡ್ಡು ಜಮಾ ಮಾಡಿ ನಸುನಗುತ್ತ ಗೆಲುವಾಗಿ ಹೊರ ಹೋದಳು.

* ಪದಗಳ ಅರ್ಥ

ಕಾಟಿ = ಕಾಡೆಮ್ಮೆ ಮಧು ಪ್ಯಾಕೆಟ್ = ಗುಟ್ಕಾ ಬ್ರ್ಯಾಂಡ್ ಕವಳ = ಎಲೆ ಅಡಿಕೆ ಗಂಟಿ = ದನ ಕಳ್ಳ ನಾಟ = ಅರಣ್ಯ ಇಲಾಖೆ ಅನುಮತಿಯಿಲ್ಲದೆ ಕದ್ದು ಕೊಯ್ದು ಮಾರುವ ಮರಮುಟ್ಟು ಕರ್ಕರೆ = ರಗಳೆ ಮಾಡುವ ಎಣ್ಣೆ = ಹೆಂಡ ಚೂಳಿ = ಕಾಯಿ ತುಂಬು ದೊಡ್ಡ ಹೆಡಿಗೆ, ಬಿದಿರು ಬುಟ್ಟಿ * ಫೋಟೋ : ಎಸ್. ವಿಷ್ಣುಕುಮಾರ್ * ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 17 : ‘ಅಮಾ, ನಂಗೆ ಕಣ್ಣಲ್ ನೀರು ಹುಟ್ಟೂವಂತ ಮದ್ದೇನಾದ್ರು ಕೊಡ್ರ’

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ನಮ್ಮನಿ ನಾಯಿಗ್ ಆರಾಮಿಲ್ರ, ಸ್ವಲ್ಪ ಬ್ಯಾಂಡೇಜು ಮುಲಾಮು ನಂಜಿನ್ ಗುಳಿಗಿ’

Published On - 11:46 am, Wed, 16 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ