Covid Diary : ಕವಲಕ್ಕಿ ಮೇಲ್ ; ‘ನಮ್ಮನಿ ನಾಯಿಗ್ ಆರಾಮಿಲ್ರ, ಸ್ವಲ್ಪ ಬ್ಯಾಂಡೇಜು ಮುಲಾಮು ನಂಜಿನ್ ಗುಳಿಗಿ…’

Animals : ‘ಕೊರೊನ ಕೊರೊನ ಅಂತ ಬರಿ ಮನುಷ್ರುದಷ್ಟೇ ನೋಡ್ಕಬಿಟ್ರೆ ಸಾಕಾಗುದಿಲ್ರಾ. ಮೂಕಪಶುಗಳ್ನೂ ನೋಡ್ಬೇಕಲ. ಅವುಕ್ಕೂ ಶೀಕುಸಂಕ್ಟ ಬತ್ತವೆ. ಅವ್ಕೇನಾರಾ ಆದ್ರೆ ನಮಿಗ್ ಉಂಬುಕಾಗುದಿಲ್ಲ, ನೋಡುಕಾಗುದಿಲ್ಲ. ಈ ಸುತ್ತಿಗ್ ಒಬ್ರು ಗೋಡಾಕ್ಟ್ರೂ ಇಲ್ಲ, ಸಾಯ್ಲಿ’

Covid Diary : ಕವಲಕ್ಕಿ ಮೇಲ್ ; ‘ನಮ್ಮನಿ ನಾಯಿಗ್ ಆರಾಮಿಲ್ರ, ಸ್ವಲ್ಪ ಬ್ಯಾಂಡೇಜು ಮುಲಾಮು ನಂಜಿನ್ ಗುಳಿಗಿ...’

ಅಷ್ಟರಲ್ಲಿ ಒಂದು ದಿನ, ಮನೆಯೆದುರು ಒಂದು ಬೈಕು ನಿಂತಿತು. ‘ದಾಸೀ’ ಎಂದೇನೋ ಅವರು ಕರೆದರಿರಬೇಕು. ತಗಾ, ಆ ನಾಯಿಯ ಆನಂದವನ್ನು ಏನೆಂದು ವರ್ಣಿಸುವುದು? ತನ್ನನ್ನು ತೊರೆದು ಹೋದ ಅಮ್ಮನನ್ನು ಮರಳಿ ಕಂಡಂತಹ ಮಗುವಿನ ಆನಂದ. ಒಂದೇಸಮ ಬಾಲ ಅಲ್ಲಾಡಿಸುತ್ತ, ಅವರ ಬೈಕಿನ ಹಿಂದೆಮುಂದೆ ಸುಳಿದು ಹಾರಿ ಕುಂಯ್ಞ್‍ಕುಂಯ್ಞ್ ಎಂದು ಹಾಡಿ, ಅತ್ತು, ಕರೆಯುತ್ತಿದೆ. ಕೊನೆಗೆ ತಿಳಿಯಿತು, ಅವರು ಅದರ ಮೂಲ ಪೋಷಕರು. ಲಾಕ್‍ಡೌನ್ ಸಮಯದಲ್ಲಿ ಶಾಲೆಯಿಲ್ಲ ಎಂದು ತಮ್ಮ ಮೂಲ ಊರಿಗೆ ಹೋಗಿದ್ದವರು ಈಗ ಮರಳಿ ಬಂದಿದ್ದರು. ಅವರು ಮುಂದೆ ಹೋದರೆ ಇದು ಅವರ ಹಿಂದೇ ಓಡಿತು. ಅವರದನ್ನು ಒಯ್ದರೋ, ಮತ್ತೇನೋ, ಈಗದು ಎಲ್ಲೂ ಕಾಣುತ್ತಿಲ್ಲ. ಅಂತೂ ಕೋವಿಡ್ ಕಷ್ಟ ಮೂಕಪ್ರಾಣಿಗಳನ್ನೂ ಬಿಟ್ಟಿಲ್ಲ.

*

ಇನ್ನೇನು ಕ್ಲಿನಿಕ್ ಬಾಗಿಲು ಮುಚ್ಚಬೇಕು ಎನ್ನುವುದರಲ್ಲಿ ‘ತಡೆರಿ ತಡೆರಿ’ ಎಂದವರು ಓಡೋಡಿ ಬಂದರು.

‘ನಮ್ಮನಿ ನಾಯಿಗ್ ಒಂದ್ ಆರಾಮಿಲ್ರ, ಎಲ್ಲೋ ಲಡಾಯ ಮಾಡ್ಕಬಂದು ಕುತಿಗಿ ಮೇಲೆ ಗನ್ನಾ ಗಾಯ ಆಗದೆ. ಏಳಗತಿಯಿಲ್ಲ, ಮನಿಕ್ಕ ಬಿಟ್ಟದೆ. ಕಟ್ಟುಕ್ ಸ್ವಲ್ಪ ಬ್ಯಾಂಡೇಜು, ಮಲಾಮಿನ ಟ್ಯೂಬು, ನಂಜಿಂದು ನೋವಿಂದು ಗುಳಿಗಿ ಕೊಡಿ. ಹಂಗೇ ಕೋಳಿಗು ಜರ ಬಂದಂಗೆ ಕಾಂತದೆ, ಏನಾರಾ ಕೊಡಿ’ ಎಂದರು.

ನನಗೆ ಗಾಬರಿಯಾಯಿತು. ಯಾರಿವರು ಎಂದು ನೋಡಿದೆ. ಎತ್ತರದ, ಯಕ್ಷಗಾನ ವೇಷಧಾರಿಯಂತೆ ಉದ್ದ ತಲೆಗೂದಲು ಬಿಟ್ಟ, ಮಾಸ್ಕಿನ ಹೊರಗೆ ಗಡ್ಡ ಇಣುಕುವಂತಿದ್ದ ವ್ಯಕ್ತಿ. ಅವರ ಕೆಂಪುಕಣ್ಣು ನೋಡಿ ಕೋಳಿಅಂಕದಲ್ಲಿ ದಿನರಾತ್ರಿ ಗುಡ್ಡೆ ಮೇಲೆ ಕಳೆಯುವವರಿರಬಹುದೇ ಎಂಬ ಕಲ್ಪನೆ ಹುಟ್ಟಿತು. ಕುತ್ತಿಗೆಯಲ್ಲಿ ನೇತಾಡುತ್ತಿದ್ದ ಹೊರಡೊಂಕಿದ ಎರಡು ಪ್ರಾಣಿಯುಗುರುಗಳು ಅವರ ‘ಕಾಡುತನ’ವನ್ನು ದೃಢಗೊಳಿಸುವಂತಿದ್ದವು. ಕೈಗೆ ಸ್ಟೀಲ್ ಕಡಗ. ಚಾಚಿದ ಮುಂಗೈ ಮೇಲೆ ಗದೆ ಅರಳಿಸಿ ನಿಂತ ಅಭಯದ ಹನುಮಂತ. ಉದ್ದ ಉಗುರುಗಳ ಬೆರಳಿಗೆ ಆಮೆಯುಂಗುರ, ಯಾವ್ಯಾವುದೋ ಬಣ್ಣಬಣ್ಣದ ಹರಳಿನ ಉಂಗುರಗಳು. ಓಹೋ, ಇದ್ಯಾರೋ ಹೊಸ ಜನ. ಎಲ್ಲರೂ ಕೋವಿಡ್, ಮಿಡತೆ, ತೌತೆ ಎಂದು ಹೆದರಿ ಸಾಯುತ್ತಿದ್ದರೆ ಇವರು ಆರಾಮಿರುವವರ ತರಹ ಕಾಣಿಸಿದರು.

ಇಷ್ಟು ತರಂಗಗಳು ನನ್ನ ಮನದಲ್ಲಿ ಹಾದುಹೋಗುವುದರಲ್ಲಿ ಅವರಿಗೆ ಪ್ರಾಣಿಗಳಿಗೆಲ್ಲ ಮದ್ದು ಕೊಡುವುದಿಲ್ಲ ಎಂದಿದ್ದೆ. ಈ ತರಹದ ಬೇಡಿಕೆ ಹಳ್ಳಿಯ ವೈದ್ಯರಿಗೆ ಹೊಸದಲ್ಲ. ನಾಯಿ ಬೆಕ್ಕು ಕೋಳಿಗಳ ದೇಹರಚನೆ, ಅವಕ್ಕೆ ಕೊಡಬಲ್ಲ ಔಷಧ, ಅವುಗಳ ತೂಕ, ಡೋಸೇಜ್ ಏನೂ ಗೊತ್ತಿಲ್ಲದೆ ಔಷಧಿ ಕೊಡುವುದು ಸರಿಯಲ್ಲ ಎಂದು ನನ್ನ ಭಾವನೆ. ಮನುಷ್ಯರಿಗೆ ಬಳಸುವ ಡೈಕ್ಲೋಫೆನಾಕ್ ಎಂಬ ನೋವು ನಿವಾರಕವನ್ನು ಪಶುಪಾಲನೆಯಲ್ಲೂ ಬಳಸಿ, ಅಂಥ ಪ್ರಾಣಿಗಳು ಸತ್ತಾಗ ಮಾಂಸ ತಿಂದ ರಣಹದ್ದುಗಳು ನಿರ್ವೀರ್ಯವಾಗುತ್ತಿವೆ, ವಂಶ ನಿರ್ವಂಶವಾಗುತ್ತಿದೆ ಎಂದು ಎಲ್ಲೋ ಓದಿದ ನೆನಪಿತ್ತು. ಹಾಗೆ ನಾನೂ ಮನುಷ್ಯರ ಮದ್ದು ಅವಕ್ಕೆ ಕೊಟ್ಟು ಇನ್ನೇನು ಅವಾಂತರವಾಗುವುದೋ ಎಂಬ ಎಚ್ಚರವೂ ಔಷಧ ಕೊಡದಂತೆ ತಡೆಯುತ್ತಿತ್ತು. ಆದರೆ ಎಷ್ಟೋ ಸಲ ಪ್ರಾಣಿಗಳ ಯಜಮಾನರು ಬಿಡದೇ, ನನಗೆ ಧೈರ್ಯ ತುಂಬಿ, ‘ಮಕ್ಳಷ್ಟೇ ತೂಕ ಇರ್ತಾವ್ರ ಕೋಳಿ. ನಾವ್ ತಿಂದುದ್ದೇ ತಿಂಬುದಲ? ಮಕ್ಳಿಗ್ ಕೊಡುಹಾಂಗ್ ಕೊಡ್ರ. ಗೋ ಡಾಕ್ಟ್ರು ಕೊಡುದೂ ಅದ್ನೆಯ’ ಅಂತ ಒಯ್ದದ್ದು ಇದೆ. ಈಗ ಅಪರೂಪವಾಗಿರುವ, ಮೊದಲೆಲ್ಲ ಬಹುಸಾಮಾನ್ಯವಾಗಿದ್ದ ಕೋಳಿಪಡೆಗಳ ಕಾಲದಲ್ಲಿ ಇದು ಹಲವು ಬಾರಿ ನಡೆದಿದೆ. ನಾನು ಕೊಟ್ಟ ಮದ್ದಿನಿಂದ ಪ್ರಾಣಿಗಳು ಗುಣ ಕಂಡವೋ, ಪರಂಧಾಮವನ್ನೈದಿದವೋ ಎಂಬ ಫೀಡ್‍ಬ್ಯಾಕ್ ಬರಲಿಲ್ಲವಾಗಿ ಔಷಧಿ ಕೊಡಲು ಇಂದಿಗೂ ಹಿಂಜರಿಕೆ ಉಳಿದುಕೊಂಡಿದೆ. ಆದರೆ ಈ ಜನ ಬಿಡುವಂತೆ ಕಾಣಲಿಲ್ಲ. ಸಾಮ, ದಾನ, ಭೇದಗಳನ್ನೆಲ್ಲ ಪ್ರಯೋಗಿಸಿದರು.

ಅಮ್ಮನವರ ಮನೆಯ ಬೆಟ್ಟದ ಕಣಿವೆಯಲ್ಲಿ ಅವರ ಏಕಾಂಗಿ ಮನೆಯಿದ್ದು ಪಟ್ಟೆಹುಲಿ ಬಂದು ನಾಯಿ ಮುರಿಯುವುದು ಸಾಮಾನ್ಯವಂತೆ. ಆದರೆ ಅವರು ಸಾಕಿರುವ ಈ ‘ಕಿಚ್ಚ’ ನಾಯಿಯು ಹುಲಿಬಾಯಿಗೆ ಇದುತನಕ ಸಿಕ್ಕಿಲ್ಲವಂತೆ. ಈಗ ಮೈತುಂಬ ಗಾಯ ಮಾಡಿಕೊಂಡುಬಂದಿದ್ದು ನೋಡಿದರೆ ಹುಲಿಯೊಡನೆ ಯುದ್ಧ ನಡೆದಿದ್ದರೂ ಇರಬಹುದು ಎಂಬ ಅನುಮಾನ ಅವರಿಗೆ. ಜೊತೆಗೆ ಮಳೆ ಸುರಿದು ಕೋಳಿಗೂಡಲ್ಲಿ ನೀರು ತುಂಬಿ ಅವು ಕಣ್ಣು ಕೂರುತ್ತ ಕೂತಿವೆಯಂತೆ. ‘ಕೊರೊನ ಕೊರೊನ ಅಂತ ಬರಿ ಮನುಷ್ರುದಷ್ಟೇ ನೋಡ್ಕಬಿಟ್ರೆ ಸಾಕಾಗುದಿಲ್ರಾ. ಮೂಕಪಶುಗಳ್ನೂ ನೋಡ್ಬೇಕಲ. ಅವುಕ್ಕೂ ಶೀಕುಸಂಕ್ಟ ಬತ್ತವೆ. ಅವ್ಕೇನಾರಾ ಆದ್ರೆ ನಮಿಗ್ ಉಂಬುಕಾಗುದಿಲ್ಲ, ನೋಡುಕಾಗುದಿಲ್ಲ. ಈ ಸುತ್ತಿಗ್ ಒಬ್ರು ಗೋಡಾಕ್ಟ್ರೂ ಇಲ್ಲ, ಸಾಯ್ಲಿ’ ಮುಂತಾಗಿ ಅಲವತ್ತುಕೊಂಡರು. ಈ ದುರಿತ ಕಾಲದಲ್ಲಿ ಪ್ರಾಣಿಗಳಿಗೂ ಇಷ್ಟು ಕರುಣೆ ತೋರಿಸುವ ಮನುಷ್ಯರು ಇದ್ದಾರಲ್ಲ, ಹೋಗಲಿ ಎಂದು ಎರಡು ಗುಳಿಗೆ ಮುಲಾಮು ಕೊಟ್ಟು, ನನಗೆ ಗೊತ್ತಿರುವ ನಾಯಿ ಡಾಕ್ಟರ ನಂಬರ್ ಕೊಟ್ಟು ಕಳಿಸಿದೆ.

covid diary

ಕೆಂಪಿ

ಅದೇ ಸುಮಾರಿಗೆ ಒಂದು ದಿನ ಕ್ಲಿನಿಕ್ ಮುಗಿಸಿ ಮನೆಗೆ ಬರುತ್ತಿದ್ದೆ. ನಿರ್ಜನ ರಸ್ತೆಯ ಮೇಲೆ ನಾಯಿಮರಿಯೊಂದನ್ನು ನಾಲ್ಕಾರು ದೊಡ್ಡ ನಾಯಿಗಳು ಹಿಡಿದು ಹಲುಬುತ್ತಿವೆ. ಅಯ್ಯೋ, ಕಚ್ಚಾಡಲಿಕ್ಕೆ ನಾಯಿ ಜಾತಿಗೆ ಏಕಿಷ್ಟು ಹುಕಿಯೋ ಎಂದು ಅವನ್ನೆಲ್ಲ ಓಡಿಸಿ ಮರಿಯ ಬಳಿ ಹೋದರೆ ನನ್ನ ಕಂಡದ್ದೇ ಓಡಿಹೋಗಿ ಚರಂಡಿಯಲ್ಲಿ ಅವಿತಿತು. ಸ್ವಲ್ಪ ಹೊತ್ತಿಗೆ ಕುಂಯ್ಞ್ ಕುಂಯ್ಞ್ ಎಂದು ಮೇಲೆ ಬಂದು ಮತ್ತೆ ಆ ಬೀದಿನಾಯಿಗಳ ಬಾಯಿಗೆ ಸಿಲುಕಿತು. ಎಲಎಲಾ, ನಿನಗೆ ರಕ್ಷಿಸುವವರಾರು ಕಚ್ಚುವವರಾರು ಗೊತ್ತಾಗಲ್ಲವೇ ನಾಯೇ ಎಂದುಕೊಂಡು ಮನೆಗೆ ಹೋದೆ. ಈ ಚಿತ್ರ ಮತ್ತೆ ಒಂದೆರೆಡು ಸಲ ಪುನರಾವರ್ತನೆಯಾಯಿತು. ಮರಿಯೆಂದರೆ ಸಣ್ಣಮರಿಯಲ್ಲ, ಇತ್ತ ದೊಡ್ಡಕ್ಕೂ ಬೆಳೆದಿಲ್ಲ. ಎರಡು ಮೂರು ತಿಂಗಳ ಮರಿ ಇರಲಿಕ್ಕೆ ಸಾಕು. ಅದನ್ನು ರಕ್ಷಿಸುವ ಅಮ್ಮನೂ ಇಲ್ಲವೇ ಎನಿಸಿತು. ಯಾರೋ ತಮ್ಮನೆಯಲ್ಲಿ ಹಾಕಿದ ಮರಿ ಇಲ್ಲಿ ತಂದು ಬಿಟ್ಟು ಹೋಗಿರಬೇಕು.

ಇಲ್ಲಂತೂ ಊರೂರುಗಳಲ್ಲಿ ಬೀದಿ ನಾಯಿಗಳಿವೆ. ವರ್ಷಕ್ಕೆ ನಾಲ್ಕಾರು ಮರಿ ಹಾಕುವ ಹೆಣ್ಣುಗಳು ಬೀದಿನಾಯಿಯಾಗುತ್ತವೆ. ಕೋಳಿ ಅಂಗಡಿ, ಹೋಟೆಲು, ಬೀದಿಬದಿಯ ತಿನಿಸು ಮಾರಾಟ ಇರುವ ಕಡೆ ಹುಲುಸಾಗಿರುತ್ತವೆ. ಅದಿಲ್ಲದಿದ್ದರೆ ಹುಟ್ಟುವುದೇ ಸಾಯಲು ಎನ್ನುವಂತೆ ಅವರಿರವ ಕಾಲಡಿ ಗಾಡಿಯಡಿ ಸಿಕ್ಕು, ಗಾಯವಾಗಿ ಸಾಯುತ್ತವೆ. ಅಥವಾ ಹಸಿವಿನಿಂದ, ಮಣ್ಣುಮಸಿ ತಿಂದು ಆಗುವ ಹೊಟ್ಟೆಹುಳುವಿನಿಂದ ಪಟಪಟ ಸಾಯುತ್ತವೆ.

ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಒಂದೆರೆಡು, ಕೆಲವೊಮ್ಮೆ ಇನ್ನೂ ಹೆಚ್ಚು ನಾಯಿಗಳಿರುತ್ತವೆ. ಅವು ಅರೆಸಾಕಿದ ನಾಯಿಗಳು. ನಗರದ ಒಡೆಯರಂತೆ ಹಳ್ಳಿಗಳಲ್ಲಿ ನಾಯಿಗಳಿಗೆ ಮೀಯಿಸಿ, ವ್ಯಾಕ್ಸೀನ್ ಕೊಡಿಸಿ, ಡಾಗ್‍ಫುಡ್ ಹಾಕಿ, ಅವಕ್ಕೆ ಒಂದು ಮನೆ ಕಟ್ಟಿಸಿ, ಮನೆಯೊಳಗೇ ಇಟ್ಟುಕೊಂಡು ಸಾಕುವುದಿಲ್ಲ. ಒಂದಷ್ಟು ಪ್ರೀತಿ, ಒಂದಷ್ಟು ಆಹಾರ. ಮತ್ತೆ ಉಳಿದದ್ದು ಅವೇ ನೋಡಿಕೊಳ್ಳುತ್ತವೆ. ಮಂಗ-ದನಗಳನ್ನು ಓಡಿಸುವುದು, ಹೊಲ ಮನೆ ಕಾಯುವುದು ಅವುಗಳ ಕೆಲಸ. ಸಾಕುವವರು ಗಂಡುನಾಯಿ ಸಾಕುವುದು ಹೆಚ್ಚು. ಅಕಸ್ಮಾತ್ ಹೆಣ್ಣುನಾಯಿ ಸಾಕಿದವರೂ ಬೀದಿನಾಯಿಯಾಗೇ ಸಾಕಿರುತ್ತಾರೆ. ತಮ್ಮ ಮನೆಯ ಹೆಣ್ಣುಗಳಿಗೆ ಕುಟುಂಬಯೋಜನೆ ಮಾಡಲು ಯೋಚಿಸದವರು ಹೆಣ್ಣು ನಾಯಿ, ಬೆಕ್ಕುಗಳಿಗೆ ಕುಟುಂಬಯೋಜನೆ ಮಾಡಿಸುವರೇ? ಅವು ಮರಿಹಾಕಿ ಕಣ್ಣು ಒಡೆದದ್ದೇ ಎಲ್ಲೆಲ್ಲೋ ಬಿಟ್ಟುಬರುತ್ತಾರೆ.

ಈ ಹೆಣ್ಣು ಮರಿಯೂ ಅಂಥದೇ ಒಂದು ಇರಬಹುದೆನ್ನಿಸಿತು. ಉಳಿದ ನಾಯಿಗಳನ್ನು ಹಚಾ ಎಂದು ಓಡಿಸಿದ ಮೇಲೆ ಒಂದು ದಿನ ನಮ್ಮ ಅಂಗಳದಲ್ಲೆ ಒಂದು ಮೂಲೆಯಲ್ಲಿ ಗಳಿಗೆ ಹೊತ್ತು ನಿಂತಿತು. ದೂರದಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದೆ! ಕೆಂದ ಬಣ್ಣದ ನಾಯಿ. ಕುತ್ತಿಗೆ, ಬಾಲದ ತುದಿ, ಕಾಲಿನ ಮೇಲೆ ಬಿಳಿಪಟ್ಟೆ. ಬಾಗಿದ ಎರಡು ಕಿವಿ. ಕರಿಯ ಕಣ್ಣು. ಮೆಲ್ಲಗೆ ಮನೆಯೊಳಗೆ ಹೋಗಿ ಎರಡು ಬಿಸ್ಕತ್ ತಂದು ಅಲ್ಲಿಟ್ಟು ಒಳಹೋದೆ. ತುಂಬ ಹಸಿದಿದೆ, ಆದರೆ ಜೀವಭಯ ಹಸಿವಿಗಿಂತ ಜೋರಾಗಿದೆ. ಎರಡು ಬಿಸ್ಕತ್ತು ಎತ್ತಿಕೊಂಡು ಅತ್ತ ಓಡಿಹೋದ ಅದು ತೋರಿಸಿದ ಹಿಂಜರಿಕೆ, ದ್ವಂದ್ವ, ಭಯಗಳು ಅಯ್ಯೋ ಪಾಪ ಎನಿಸುವಂತೆ ಮಾಡಿತು. ಪ್ರಾಣಿಪ್ರೇಮಿ ಮಗಳಿಗಂತೂ ನೋಡಿದ್ದೇ ಅದು ಇಷ್ಟವಾಗಿಬಿಟ್ಟಿತು. ಅವಳ ಮಾತೃಪ್ರಜ್ಞೆ ಜಾಗೃತಗೊಂಡು ಅದನ್ನು ಮುಟ್ಟಲು, ವಿಶ್ವಾಸ ಗಳಿಸಲು ಹರಸಾಹಸಪಟ್ಟಳು. ಅದಕ್ಕೆ ಸಿಹಿ ಎಂದರೆ ಪ್ರಾಣ. ಉಪ್ಪುತುಪ್ಪನ್ನ ಪ್ರೀತಿ. ಬಾಳೆಯ ಹಣ್ಣೆಂದರೆ ಬಲು ಇಷ್ಟ. ಮೀನು, ಮಾಂಸ, ಮೊಟ್ಟೆ, ಹಾಲುಗಳು ಬೌಲಿಗೆ ಹಾಕಿದ ಕ್ಷಣಾರ್ಧದಲ್ಲಿ ಖಾಲಿಯಾಗುತ್ತವೆ. ಅದು ಮರಿಯಾಗಿದ್ದಾಗ ತಿಂದ ಹೊಡೆತಕ್ಕೆ ಈಗ ಮುಟ್ಟಲು ಬಿಡುತ್ತಿಲ್ಲ ಮುಂತಾಗಿ ಅದರ ಒಳಹೊರಗುಗಳ ಅಧ್ಯಯನ ಮಾಡಿದಳು.

ಅಲ್ಲಿಂದ ಇಲ್ಲಿಯವರೆಗೆ ಈ ಒಂದೂಕಾಲು ವರ್ಷದಲ್ಲಿ ಹೆಣ್ಣು ನಾಯಿಮರಿಗೆ ಕೆಂಪಿ ಎಂಬ ಹೆಸರಿಟ್ಟು, ಮೀನುಮೊಟ್ಟೆಹಾಲು ಎಂದು ಅದರಿಷ್ಟದ್ದನ್ನೆಲ್ಲ ಹಾಕಿ, ಮುಟ್ಟಿ, ಮೀಯಿಸಿ, ವ್ಯಾಕ್ಸೀನ್ ಕೊಡಿಸಿದೆವು. ಮನುಷ್ಯರು ಹತ್ತಿರ ಬರುವುದೇ ಹೊಡೆಯಲಿಕ್ಕೆ ಎನ್ನುವಷ್ಟು ಅಂಜುಕುಳಿಯಾಗಿದ್ದ ಅದರ ಕುತ್ತಿಗೆಗೊಂದು ಬೆಲ್ಟ್ ಹಾಕಿ, ಮನೆಯೊಳಗೂ ಬರುವಷ್ಟು, ಮುಟ್ಟಿಸಿಕೊಳ್ಳುವಷ್ಟು ಧೈರ್ಯದ ನಾಯಿಯಾಗಿ ಮಾಡಿದೆವು. ಕುಟುಂಬ ಯೋಜನೆ ಆಪರೇಷನ್ ಮಾಡಿಸಿದೆವು.

ಆದರೆ ಮನುಷ್ಯರೆಷ್ಟೇ ಪ್ರೀತಿ ಮಾಡಿದರೂ ಅದಕ್ಕೆ ತನ್ನ ಜಾತಿಯ ಜೀವಿಯ ಸಾಂಗತ್ಯ ಕೊಡುವ ಆನಂದವೇ ಬೇರೆ. ಕಳೆದ ಲಾಕ್‍ಡೌನ್ ಸಮಯದಲ್ಲಿ ಕೆಂಪಿಯ ಜೊತೆಗೆ ಮತ್ತೊಂದು ಮರಿ ಆಡುತ್ತಿತ್ತು. ಅದೂ ಅನಾಥ ಮರಿಯಿರಬೇಕು. ಬೇರೆನಾಯಿಗಳ ಗುಂಪು ಅದನ್ನೂ ಅಟ್ಟಿಸಿಕೊಂಡು ಕಚ್ಚಲು ಬರುತ್ತಿದ್ದವು. ಮೈತುಂಬ ಕೆಂಪು ಬಿಳಿ ದಾಸದಾಸ ಪಟ್ಟೆಯ ನಾಯಿ. ನಾವು ಹಾಕಿದ್ದಾದರೂ ಏನು? ಎಲ್ಲೋ ಒಂದು ದಿನ ಅನ್ನ, ಎರಡು ದೋಸೆ. ಅಷ್ಟಕ್ಕೆ ನಮ್ಮನ್ನು ಕಂಡಕೂಡಲೇ ಬಾಲವನ್ನು ಉರೂಟಾಗಿ ಒಂದು ಸುತ್ತು ಪೂರಾ ತಿರುಗಿಸುತ್ತ ಹಿಂದೆಹಿಂದೇ ಬರುತ್ತಿತ್ತು. ಅದು ಕೆಂಪಿಯ ಜೊತೆ ಗೆಳೆತನ ಬೆಳೆಸಿತು. ಎರಡೂ ಸೇರಿದರೆ ಆಡುವ ಚೆಲ್ಲಾಟ ನೋಡಲು ಎರಡು ಕಣ್ಣು ಸಾಲದು. ಅವರನ್ನಿವರು ಓಡಿಸುವುದು, ಇವರನ್ನವರು ಅಟ್ಟುವುದು. ಅವರನ್ನಿವರು ಕಚ್ಚಿದಂತೆ ಮಾಡುವುದು, ಇವರನ್ನವರು ಹತ್ತುವುದು. ಮಳೆ ಬಂದರೂ ಲೆಕ್ಕಿಸದೇ ಮಣ್ಣು ಬಗೆಯುವುದು, ನೆಟ್ಟ ಗಿಡಗಳ ಬಗೆದುಹಾಕುವುದು, ಬಟ್ಟೆ ತುಂಡರಿಸುವುದು, ಊರ ಮೇಲಿನ ಯಾರ್ಯಾರ ಮನೆಯದೋ ಚೊಂಬು, ಪೈಪು, ಚಪ್ಪಲಿ, ಚಂಪೆ ತಂದು ಕಡಿಯುವುದು – ಒಂದೇ ಎರಡೇ? ಅದೆಷ್ಟು ಆಟಗಳು!

ನಮ್ಮ ಕೆಂಪಿಯ ಅರ್ಧ ಸೈಜಿನ ಅದು ಆಡಿ ಆಡಿ ದಣಿದು ಮಲಗುವುದಿತ್ತು. ಆಗ ನೋಡಬೇಕು, ಇದಕ್ಕೆ ಸೊಕ್ಕು, ಸಿಟ್ಟು. ಅದನ್ನು ಕಚ್ಚಿಕಚ್ಚಿ ಎಬ್ಬಿಸಿ ಆಟಕ್ಕೆಳೆಯುತ್ತಿತ್ತು. ಆದರೆ ಕೆಂಪಿ ಅದರ ಜೊತೆ ಎಷ್ಟು ಆಟ ಬೇಕಾದರೂ ಆಡೀತು, ಅದಕ್ಕೂ ಒಂದು ತುಂಡು ತಿನಿಸು ಬಿತ್ತೋ, ಮುಗಿಯಿತು. ಅದನ್ನು ಓಡಿಸಿ, ಅಟ್ಟಿಸಿಕೊಂಡು ಹೋಗಿ, ಕಚ್ಚಿ ಬರುತ್ತಿತ್ತು. ಅರೆ, ಇದೆಂತಾ ಒಕ್ಕುಂಟ್ಳಿತನದ ಗೆಳೆತನ ಈ ಕೆಂಪಿಯದು ಎಂದು ನಾವು ಮನುಷ್ಯ ಸ್ವಭಾವಗಳನ್ನು ನಾಯಿಗೆ ಆರೋಪಿಸಿ ಬೇಸರಗೊಳ್ಳುತ್ತಿದ್ದೆವು. ಎರಡನ್ನು ಒಟ್ಟು ಹೇಗೆ ಸಂಬಾಳಿಸುವುದೋ ಎಂದುಕೊಳ್ಳುತ್ತಿದ್ದೆವು.

ಅಷ್ಟರಲ್ಲಿ ಒಂದು ದಿನ, ಮನೆಯೆದುರು ಒಂದು ಬೈಕು ನಿಂತಿತು. ‘ದಾಸೀ’ ಎಂದೇನೋ ಅವರು ಕರೆದರಿರಬೇಕು. ತಗಾ, ಆ ನಾಯಿಯ ಆನಂದವನ್ನು ಏನೆಂದು ವರ್ಣಿಸುವುದು? ತನ್ನನ್ನು ತೊರೆದು ಹೋದ ಅಮ್ಮನನ್ನು ಮರಳಿ ಕಂಡಂತಹ ಮಗುವಿನ ಆನಂದ. ಒಂದೇಸಮ ಬಾಲ ಅಲ್ಲಾಡಿಸುತ್ತ, ಅವರ ಬೈಕಿನ ಹಿಂದೆಮುಂದೆ ಸುಳಿದು ಹಾರಿ ಕುಂಯ್ಞ್‍ಕುಂಯ್ಞ್ ಎಂದು ಹಾಡಿ, ಅತ್ತು, ಕರೆಯುತ್ತಿದೆ. ಕೊನೆಗೆ ತಿಳಿಯಿತು, ಅವರು ಅದರ ಮೂಲ ಪೋಷಕರು. ಲಾಕ್‍ಡೌನ್ ಸಮಯದಲ್ಲಿ ಶಾಲೆಯಿಲ್ಲ ಎಂದು ತಮ್ಮ ಮೂಲ ಊರಿಗೆ ಹೋಗಿದ್ದವರು ಈಗ ಮರಳಿ ಬಂದಿದ್ದರು. ಅವರು ಮುಂದೆ ಹೋದರೆ ಇದು ಅವರ ಹಿಂದೇ ಓಡಿತು. ಅವರದನ್ನು ಒಯ್ದರೋ, ಮತ್ತೇನೋ, ಈಗದು ಎಲ್ಲೂ ಕಾಣುತ್ತಿಲ್ಲ. ಅಂತೂ ಕೋವಿಡ್ ಕಷ್ಟ ಮೂಕಪ್ರಾಣಿಗಳನ್ನೂ ಬಿಟ್ಟಿಲ್ಲ.

covid diary

ಮನೆಯ ಬೆಕ್ಕಿನೊಂದಿಗೆ ಕೆಂಪಿ

ಈಗ ನಮ್ಮ ಕೆಂಪಿ ಮತ್ತೆ ಏಕಾಂಗಿ. ಉಳಿದ ಹೆಣ್ಣುನಾಯಿಗಳು ಮರಿಹಾಕುವ ಸಮಯ ಬಂದಾಗ ಗಂಡುಗಳಿಗೆ ಆಪ್ತವಾಗುತ್ತವೆ. ಕೆಂಪಿ ಗಂಡುಗಳಿಗೂ ಬೇಡ. ಹೆಣ್ಣುಗಳಿಗೆ ಹೊಟ್ಟೆಕಿಚ್ಚು. ಇನ್ನು ನಮ್ಮ ಮನೆಯ ಬೆಕ್ಕು ಹತ್ತು ವರ್ಷದ ಹಿರಿಯಳು. ಅದಕ್ಕೆ ಇತ್ತೀಚೆಗಷ್ಟೇ ಬಂದು, ಹೆಚ್ಚೆಚ್ಚು ಪ್ರೀತಿ, ಗಮನ ಗಳಿಸಿಕೊಂಡ ಕೆಂಪಿಯ ಮೇಲೆ ಹೊಟ್ಟೆಕಿಚ್ಚು. ಅಥವಾ ನಮಗೆ ಹಾಗನಿಸಿದೆ. ತನಗೆ ಸಿಟ್ಟುಬಂದಾಗ ಪಾಪದ ಕೆಂಪಿ ಮಲಗಿದಲ್ಲಿ, ಕೂತಲ್ಲಿ ಹೋಗಿ ಹೊಡೆದು ಬರುತ್ತದೆ. ಶಾಂತವಾಗಿದ್ದರೆ ನಾಯಿಯ ಎರಡು ಕಾಲಡಿ ನುಸುಳಿ ಬಾಗಿಲು ದಾಟಿ ಹೊರಹೋಗುತ್ತದೆ. ಈಗ ಹೌದು, ಈಗ ಅಲ್ಲದ ಬೆಕ್ಕಿನ ಸೊಕ್ಕು ಕೆಂಪಿಯನ್ನು ಮತ್ತಷ್ಟು ಪುಕ್ಕಿಯಾಗಿ, ಒಂಟಿಯಾಗಿ ಇರುವಂತೆ ಮಾಡಿದೆ. ಆದರೆ ನಮ್ಮ ಅತಿಸುಂದರಿಗೆ ಜೊತೆಯಿಲ್ಲವಲ್ಲ ಎಂದು ನಾವು ದುಃಖಿಸುತ್ತಿದ್ದರೆ ಕೆಂಪಿ ಅದೆಲ್ಲೋ ಹೋಗಿ ತನಗೊಂದು ಸಂಗಾತಿಯನ್ನು ಕರೆದುಕೊಂಡು ಬಂದು ಕೆಟ್ಟಾಟ ಆಡುತ್ತದೆ. ಕೋಳಿಪಿಳ್ಳೆ ಹೊತ್ತು ತರುತ್ತದೆ. ತೆಂಗಿನಮರದಿಂದ ಉದುರಿಬಿದ್ದ ಚೆನ್ಪುಳಿಯನ್ನೋ, ಕಾಯಿಸಿಪ್ಪೆಯನ್ನೋ ದೊಡ್ಡ ಬೇಟೆಯೋ ಎಂಬಂತೆ, ತನ್ನ ಶೌರ್ಯಸಾಹಸವನ್ನು ನೋಡಿ ಎಂದು ನಮಗೆ ತೋರಿಸುವವರಂತೆ ಕಚ್ಚಿಕೊಂಡು ಬರುತ್ತದೆ.

ಕೋವಿಡ್ ಹೆಚ್ಚುವರಿ ಹೊರಿಸಿದ ಕೆಲಸಗಳೇನೇ ಇರಲಿ, ಕೆಂಪಿಯೆಂಬ ಸಂಗಾತಿಯನ್ನು ನಮಗೆ ಕೊಟ್ಟಿದೆ. ವ್ಯಾಕ್ಸೀನ್ ಹಾಕಿಸಿದ್ದರೂ ವಿಕ್ಕಿ ಎಂಬ ಬಿಳಿಯ ಮುಧೋಳ ನಾಯಿಯನ್ನು ಡಿಸ್ಟೆಂಪರ್ ವೈರಸ್ಸಿಗೆ ಕಳೆದುಕೊಂಡಿದ್ದೆವು. ಆ ಜಾಗವನ್ನೀಗ ಕೆಂಪಿ ತುಂಬಿದ್ದಾಳೆ. ಕೋವಿಡ್ ಬಿಟ್ಟು ಬೇರೆ ಯೋಚಿಸಲು ನಮ್ಮ ತಲೆಗೆ ಗ್ರಾಸ ಒದಗಿಸಿದ್ದಾಳೆ. ಅದರ ದೆಸೆಯಿಂದ ನಮ್ಮೆದೆಗಳೂ ಆರ್ದ್ರಗೊಂಡಿವೆ. ಎಲ್ಲೋ ಒಂದು ಕುಂಯ್ಕ್ ಎಂಬ ಸದ್ದಾದರೆ ಸಾಕು, ನಾಯಿಮೇಲೆ ಯಾರೋ ಶತ್ರುಗಳು ದಾಳಿ ನಡೆಸಿರಬಹುದೆಂದು ಊಹಿಸಿ ಅದರ ರಕ್ಷಣೆಗೆ ಕಾಲುಗಳು ಓಡುತ್ತವೆ.

***

ಈಗ ಶಾಲೆಯಿಲ್ಲ, ಕಾಲೇಜಿಲ್ಲ. ತುಂಬ ಜನ ಅಮ್ಮಂದಿರು ಮಕ್ಕಳನ್ನು ಹೇಗೆ ಸುಧಾರಿಸುವುದೋ ಗೊತ್ತಾಗುತ್ತಿಲ್ಲ ಎಂದು ಕಳವಳ ಪಡುತ್ತಾರೆ. ಈವರೆಗೆ ಮಕ್ಕಳಿಗೆ ಮೊಬೈಲು ಕೊಡದೆ ಕಾಯ್ದುಕೊಂಡಿದ್ದವರು ಆನ್‍ಲೈನ್ ಕ್ಲಾಸೆಂದು ಮೊಬೈಲು ಅವರ ಕೈಯಲ್ಲೇ ಇಡುವಂತಾಗಿದೆ. ಇಡಿಯ ದಿನ ಮೊಬೈಲು, ಕಂಪ್ಯೂಟರಿನಲ್ಲಿ ಎಳೆಯ ಮಕ್ಕಳೂ ಮುಳುಗಿವೆ. ಮಕ್ಕಳ ಪಾಲಕರಿಗೆ ನನ್ನ ಸಲಹೆಯೆಂದರೆ, ಒಂಟಿತನ ನೀಗಿಕೊಳ್ಳಲು, ಮಕ್ಕಳಿಗೆ ಅನುಭೂತಿ ಕರುಣೆ ಪರಿಸರ ಪ್ರೀತಿ ಬೆಳೆಸಲು ಪ್ರಾಣಿಗಳ ಸಂಗ ಒದಗಿಸಿ. ಪ್ರತಿ ಮನೆಯು ಒಂದಾದರೂ ಪ್ರಾಣಿಯನ್ನು ಹೊಂದಿರಲಿ. ಅದನ್ನೂ ಕುಟುಂಬದ ಇತರ ಸದಸ್ಯರಷ್ಟೇ ಕಾಳಜಿ, ಪ್ರೀತಿಯಿಂದ ನೋಡಿಕೊಳ್ಳಿ. ಒಂದು ಬೆಕ್ಕಿನಮರಿ, ನಾಯಿಮರಿ ಮನೆಯಲ್ಲಿದ್ದರೆ ಸಾಕು, ಇಡೀ ಮನೆಯ ಕಳೆ, ಮನುಷ್ಯರ ವರ್ತನೆಯೇ ಬೇರೆಯಾಗುತ್ತದೆ. ನಿರ್ಜೀವ ಮೊಬೈಲು, ಟಿವಿಯೆದುರು ಮಕ್ಕಳು ಕಾಲ ಕಳೆಯಬಾರದೆಂದರೆ ಸಸ್ಯ, ಪ್ರಾಣಿಗಳನ್ನು ಅವರಿಗೆ ಪರಿಚಯಿಸುವುದೇ ದಾರಿಯಾಗಿದೆ. ಮನೆಯಲ್ಲಿಟ್ಟು ಸಾಕಲು ಅನುಕೂಲವಿಲ್ಲದವರು, ಇಷ್ಟವಿಲ್ಲದವರು ಬೀದಿಯಲ್ಲಿ ಹೊಟ್ಟೆಗಿಲ್ಲದೆ ತಿರುಗುವ ದನ, ನಾಯಿ, ಬೆಕ್ಕು, ಮಂಗ, ಕಾಗೆ, ಪಾರಿವಾಳ ಮುಂತಾಗಿ ಯಾವುದಾದರೂ ಜೀವಿಯನ್ನು ಕಾಳಜಿ ಮಾಡಬಹುದು. ಕೊಟ್ಟದ್ದಕ್ಕಿಂತ ಹತ್ತುಪಟ್ಟು ಹೆಚ್ಚು ಸಂತೋಷ ಅನುಭವಿಸಬಹುದು. ಇದು ನನ್ನ ಮಕ್ಕಳಿಂದ ನಾನು ಕಲಿತ ಪಾಠ.

ಅಷ್ಟಕ್ಕೂ ಭೂಮಿ ಮನುಷ್ಯರದಷ್ಟೇ ಅಲ್ಲ. ಅದು ವೈರಸ್, ಬ್ಯಾಕ್ಟೀರಿಯಾ, ಸೊಳ್ಳೆ, ಹುಳಗಳಿಂದ ಹಿಡಿದು ಆನೆ, ಹುಲಿ, ಕರಡಿ, ಹಾವು, ಮನುಷ್ಯರ ತನಕ ಎಲ್ಲರಿಗೂ ಸೇರಿದ್ದು. ಜೀವ ಅಜೀವರೊಂದಿಗಿನ ಸಹಜೀವನವೇ ಬಾಳಿನ ಸಂಕಟಗಳಿಗೆ ಮದ್ದು.

*
ಪದಗಳ ಅರ್ಥ

ಚಂಪೆ = ಚಿಂದಿ ಬಟ್ಟೆ
ಚೆನ್ಪುಳಿ = ಅತಿ ಎಳೆಯ ತೆಂಗಿನ ಮಿಡಿ
ಕಣ್ಣುಕೂರುತ್ತ = ತೂಕಡಿಸುತ್ತ
*
ಫೋಟೋ : ಕೃಷ್ಣ ದೇವಾಂಗಮಠ
*
ನಾಳೆ ನಿರೀಕ್ಷಿಸಿ; ಕವಲಕ್ಕಿ – 16  : ಕ್ಷಮಿಸಿ, ತರುಣ ಭಾರತದ ಕಥೆಯಲ್ಲಿ ಈ ‘ಪದ’ ಬಹಳಸಲ ಪ್ರಯೋಗಿಸಿದೆ

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ನೋಯಾ ಕಮ್ಮಾನ್ಯಾ ಲಿಸನ್ಯಾ, ಕನ್ನಡಾ ಮಾತಾಡಿದ್ಯೋ ಫೈವ್ ರೂಪೀಸ್ ಫೈನ್ ಪುಟ್ಯಾ