ಮಕ್ಕಳಿದ್ದ ಆಟೋ ನ್ಯೂಟ್ರಲ್ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ: ಮುಂದೇನಾಯ್ತು? ವಿಡಿಯೋ ನೋಡಿ
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಒಬ್ಬ ಯುವಕ ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್‌ನಲ್ಲಿಟ್ಟು ಹಿಂದಕ್ಕೆ ತಳ್ಳಿದ ಘಟನೆ ನಡೆದಿದೆ. ಬೈಕ್ ತೆಗೆಯಲು ಸ್ಥಳಾವಕಾಶ ಇಲ್ಲದಿದ್ದಕ್ಕೆ ಸಿಟ್ಟಾಗಿದ್ದ ಯುವಕ ಈ ಕೃತ್ಯ ಎಸಗಿದ್ದಾನೆ. ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಸಿಕ್ಕಿದ್ದು, ಯುವಕನಿಗೆ ಎಚ್ಚರಿಕೆ ನೀಡಲಾಗಿದೆ. ವಾಹನ ನಿಲುಗಡೆ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಜನರಿಗೆ ಸೂಚಿಸಿದ್ದಾರೆ.
ಹಾಸನ, ಜೂನ್ 08: ಹಾಸನ ಜಿಲ್ಲೆಯಲ್ಲಿ ಯುವಕನೋರ್ವ ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್ ಮಾಡಿ ಯುವಕ ಹಿಂದೆ ತಳ್ಳಿದ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದ ನೆಹರು ನಗರದಲ್ಲಿ ನಡೆದಿದೆ. ಕೂಡಲೇ ಓಡಿ ಬಂದ ಚಾಲಕ ಆಟೋವನ್ನು ಹಿಡಿದು ನಿಲ್ಲಿಸಿದ್ದು, ದುರ್ಘಟನೆ ತಪ್ಪಿದೆ. ಶುಕ್ರವಾರ ಬೆಳಗ್ಗೆ ಅಂಗಡಿಯಲ್ಲಿ ದಿನಸಿ ಖರೀದಿಸಲು ಚಾಲಕ ಆಟೋವನ್ನು ರಸ್ತೆ ಬದಿ ನಿಲ್ಲಿಸಿ ತೆರಳಿದ್ದರು. ಆಟೋದಲ್ಲಿ ಮಕ್ಕಳಿದ್ದರು. ರಸ್ತೆ ಬದಿಯ ಪಾರ್ಕಿಂಗ್ ಸ್ಥಳದಲ್ಲಿ ಯುವಕ ಬೈಕ್ ನಿಲ್ಲಿಸಿದ್ದನು. ಬೈಕ್ ಹಿಂದೆ ಆಟೋ ಪಾರ್ಕ್ ಮಾಡಲಾಗಿತ್ತು.
ಇದರಿಂದ ಇದ್ದಿದ್ದರಿಂದ ಬೈಕ್ ತೆಗೆಯಲಾಗದೆ ಯುವಕ ಪರದಾಡಿದ್ದಾನೆ. ಆಗ, ಸಿಟ್ಟಿನಿಂದ ಯುವಕ ಆಟೋ ಬಳಿ ಹೋಗಿ ಮಕ್ಕಳನ್ನು ನೋಡಿಯೂ ನ್ಯೂಟ್ರಲ್ ಮಾಡಿ ಹಿಂದೆ ತಳ್ಳಿದ್ದಾನೆ. ಆಟೋ ವೇಗವಾಗಿ ಹಿಂದೆ ಚಲಿಸೋದನ್ನು ಕಂಡು ಸ್ಥಳದಲ್ಲಿದ್ದವರು ಗಾಬರಿಯಲ್ಲಿ ಕೂಗಾಡಿದ್ದು ಕೂಡಲೆ ಸ್ಥಳಕ್ಕೆ ಬಂದ ಚಾಲಕ ಆಟೋ ನಿಲ್ಲಿಸಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೀಡಿಯೋ ಪರಿಶೀಲನೆ ನಡೆಸಿದ ಪೊಲೀಸರು ಯುವಕನನ್ನು ಕರೆಸಿ ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ. ವಾಹನ ಸವಾರರು ವಾಹನ ಪಾರ್ಕಿಂಗ್ ವೇಳೆ ನಿಯಮ ಪಾಲನೆ ಮಾಡುವಂತೆಯೂ ಎಚ್ಚರಿಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.