Sydney Diary : ಇಂಥ ಹೋರಾಟದ ಶೋಕಿಗಳೇ ನಮ್ಮೊಳಗಿನ ಪ್ರಜ್ಞೆಯನ್ನು ಮತ್ತೆ ಮತ್ತೆ ಎತ್ತಿಹಿಡಿಯುತ್ತಿರುವುದು

Pseudo Activism : "ನಾವು ಕಸದವರಲ್ಲ ಕಸ ಸ್ವಚ್ಛಗೊಳಿಸುವವರು" ಸರಿ. ಈ ಬೋರ್ಡ್ ಮುಖಾಂತರ ಅವರಿಗೆ ಮರ್ಯಾದೆ ಕೊಟ್ಟಂತೇನೋ ಆಯಿತು. "ಸ್ವಚ್ಛಗೊಳಿಸುವವರು" ಅಂತ ಹೊಸ ಹೆಸರು ಕೊಟ್ಟದ್ದಾಯಿತು. ಮುಂದೇನು? ಹೆಸರು ಬದಲಾವಣೆಯಿಂದ ಮರ್ಯಾದೆ ಹೆಚ್ಚಾಯಿತೆ?’ ಶ್ರೀಹರ್ಷ ಸಾಲಿಮಠ

Sydney Diary : ಇಂಥ ಹೋರಾಟದ ಶೋಕಿಗಳೇ ನಮ್ಮೊಳಗಿನ ಪ್ರಜ್ಞೆಯನ್ನು ಮತ್ತೆ ಮತ್ತೆ ಎತ್ತಿಹಿಡಿಯುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Oct 17, 2021 | 1:47 PM

Sydney Diary – ಸಿಡ್ನಿ ಡೈರಿ – 5 : ಇದು ನಾನು ಎರಡೋ ಮೂರನೆಯ ತರಗತಿಯಲ್ಲಿದ್ದಾಗ ನಡೆದ ಕತೆ. ನಮ್ಮೂರಲ್ಲಿ ನಮ್ಮನೆಗೆ ದನಕಾಯಲು ಹುಡುಗನೊಬ್ಬ ಬರುತ್ತಿದ್ದ. ನನಗಿಂತ ಎರಡು ವರ್ಷ ದೊಡ್ಡವನು. ಅವನ ಹೆಸರು ಮೈಲಾರಿ. ಒಂದು ದಿನ ಮೈಲಾರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದ. ಅದಾವುದೋ ತುರ್ತು ಬರಲಾಗಿ ಅದನ್ನು ನಿಭಾಯಿಸುವ ಕೌಶಲ ಮೈಲಾರಿಯ ಬಳಿ ಮಾತ್ರ ಇದ್ದುದರಿಂದ ಆತನನ್ನು ಕರೆದುಕೊಂಡು ಬರಲು ನನ್ನನ್ನು ಆತನ ವಿಳಾಸ ವಿವರಿಸಿ ಕಳಿಸಲಾಯಿತು. ನಾನು ಮೈಲಾರಿಯ ಕೇರಿಯ ಬಳಿ ಬರುತ್ತಿದ್ದಂತೆ ಕೇರಿಗೆ ಅಡ್ಡಲಾಗಿ ಒಂದು ಬೊಂಬನ್ನು ಕಟ್ಟಲಾಗಿತ್ತು. ಬೊಂಬಿನ ಮುಂದೆ ಒಬ್ಬ ಹೆಂಗಸು ನಿಂತಿದ್ದಳು. ನನಗೆ ಯಾರು ಬೇಕಾಗಿತ್ತು ಅಂತ ಕೇಳಿದಳು. ನಾನು “ಮೈಲಾರಿ” ಅಂತ ಹೇಳಿದೆ. “ತಡಿ ಕರಿತಿನಿ” ಅಂತ ಹೇಳಿ “ಮೈಲಾರೀeeeeee ..” ಅಂತ ರಾಗವಾಗಿ ಕೂಗುತ್ತಾ ಹೋದಳು. ನಾನು ಆಕೆಯ ಹಿಂದೆ ಹೊರಡುತ್ತಿದ್ದಂತೆ ಆಕೆ ನನ್ನನ್ನು ಅಲ್ಲೇ ತಡೆದು “ಇಲ್ಲೆ ಇರು ಬರಬೇಡ” ಅಂತ ಹೇಳಿ ಹೋದಳು. ನನಗೆ ಭಯಂಕರ ಅವಮಾನವಾದಂತಾಯಿತು. ದೊಡ್ಡ ಭೂಮಾಲಿಕರ ಮನೆಯ ಹುಡುಗ ನಾನು. ನನ್ನನ್ನು ಈ ಯಃಕಶ್ಚಿತ್ ಹೆಂಗಸು ಕೇರಿಯೊಳಗೆ ಬರದಂತೆ ತಡೆಯುವುದೆಂದರೇನು? ಮುಖ ಊದಿಸಿಕೊಂಡು ಬಂದೆ. ಶ್ರೀಹರ್ಷ ಸಾಲಿಮಠ

ಟೀಮ್ ಲಂಚ್​ಗಾಗಿ ತಂಡದವರೆಲ್ಲ ಕೂತಿದ್ದರು. ಹಾಗೇ ಮಾತಾಡುತ್ತಾ ರೇಸಿಸಂ ಅಂದರೆ ವರ್ಣಬೇಧ ನೀತಿಯ ಬಗ್ಗೆ ಮಾತು ಬಂತು. ಅಲ್ಲಿದ್ದವಲ್ಲಿ ಇಬ್ಬರೋ ಮೂವರೋ ಮಾತ್ರ ಬಣ್ಣದವರು (Coloured People) ಉಳಿದವರೆಲ್ಲ ಬಿಳಿಯರು. ಅಲ್ಲಿದ್ದ ಬಹುತೇಕರು ಒಂದು ಕಾಲದಲ್ಲಿ ಆಸ್ಟ್ರೇಲಿಯಾ ವರ್ಣಬೇಧ ನೀತಿ ನಡೆಸಿತ್ತಾದರೂ ದೇಶದ ಕಾನೂನೇ ಅದಕ್ಕೆ ಬೆಂಬಲವಿತ್ತಿತ್ತಾದರೂ ಈಗ ಆ ರೀತಿ ಇಲ್ಲವೆಂದೂ ವರ್ಣಬೇಧ ನೀತಿಯ ವಿರುದ್ಧ ಕಾನೂನುಗಳು ಬಂದಿವೆಯೆಂದೂ ಹಾಗೂ ಬಿಳಿಜನಗಳು ಬಣ್ಣದ ಜನಗಳ ಜೊತೆಗೆ ಸೌಹಾರ್ದದಿಂದ  ಬದುಕುತ್ತಿದ್ದಾರೆಂದೂ ಇತ್ತೀಚೆಗೆ Black Lives Matter ನಲ್ಲಿ ಸಾಕಷ್ಟು ಬಿಳಿಯರು ಭಾಗವಹಿಸಿದ್ದೂ ಆಸ್ಟ್ರೇಲಿಯಾದಲ್ಲಿ ವರ್ಣಬೇಧ ಕೊನೆಗೊಂಡಿದೆಯೆಂದೂ ಚರ್ಚಿಸುತ್ತಿದ್ದರು.

ನನಗೆ ಊಟ ಮಾಡುವಾಗ ಮಾತಾಡುವುದು ಇಷ್ಟವಾಗುವುದಿಲ್ಲ. ಮಾತು ಮತ್ತು ಊಟ ಎರಡನ್ನೂ ಒಟ್ಟಿಗೆ ಮಾಡಿದರೆ ನಾಲಗೆ ಎರಡೂ ಕಡೆ ಮಗನ ಹರಿಸಲಾಗದೇ ಎರಡರ ಸ್ವಾದವೂ ಕೆಟ್ಟು ಹೋಗುತ್ತದೆ ಎಂಬುದು ನನ್ನ ವಾದ. ಜೊತೆಗೆ ಚರ್ಚೆಗಳಿಂದ ದೂರವಿರುವುದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪೂರಕ ಅಂತ ನಾನು ಇತ್ತೀಚೆಗೆ ಕಂಡುಕೊಡಿರುವುದರಿಂದ ಈ ಚರ್ಚೆಯಿಂದಲೂ ದೂರವೇ ಇದ್ದು ಆಹಾರವನ್ನು ಆಸ್ವಾದಿಸುತ್ತಿದ್ದೆ. ನಡುವೆ ಸುಮ್ಮನಿರಲಾರದೆ ನಮ್ಮ ಸೀನಿಯರ್ ಒಬ್ಬಳು, “ಶ್ರೀ ನಿನ್ನ ಅಭಿಪ್ರಾಯವೇನು? ವರ್ಣಭೇದ ನೀತಿ ಇಲ್ಲ ಎಂದು ನಾನು ಪ್ರತಿಪಾದಿಸುತ್ತಿರುವುದು ಸರಿಯೇ?” ಅಂತ ಕೇಳಿದಳು.

ನಾನು “Predators always feel forest is peaceful” ಅಂತ ಕ್ವಚಿತ್ತಾಗಿ ಹೇಳಿ ಮತ್ತೆ ಊಟದಲ್ಲಿ ತೊಡಗಿಕೊಂಡೆ. ಆಕೆಗೆ ಆಘಾತವಾಯಿತೊ ನಿಜವಾಗಲೂ ಅರ್ಥವಾಗಲಿಲ್ಲವೊ ಗೊತ್ತಿಲ್ಲ.

“ಏನು ಹಾಗಂದರೆ?” ಅಂತ ಕೇಳಿದಳು. ನಾನು ಊಟದ ಬಟ್ಟಲನ್ನು ಬದಿಗಿಟ್ಟು “ನಿನ್ನ ಹಣೇಬರಹ ಕೇಳಿಸಿಕೊ” ಎಂಬ ಧಾಟಿಯಲ್ಲಿ ಹೇಳತೊಡಗಿದೆ.

“ನೀವು ಪಬ್​ಗೆ ಗೆಳೆಯರ ಗುಂಪಿನೊಡನೆ ಹೋಗುತ್ತೀರಲ್ಲವೇ? ಅದರಲ್ಲಿ ಎಷ್ಟು ಜನ ಬಣ್ಣದವರಿದ್ದಾರೆ?”

“ಯಾರೂ ಇಲ್ಲ. ಆದರೆ ಯಾರಾದರೂ ಬಂದರೆ ಬೇಡವೆನ್ನುವುದಿಲ್ಲ. ಅವರು ಬರುವುದಿಲ್ಲ ಅಂದರೆ ನಾವೇನು ಮಾಡಕಾಗುತ್ತದೆ?”

“ಸರಿ. ಹಾಗೆ ನೀವು ಕರೆದದ್ದು ಎಷ್ಟು ಜನರನ್ನು? ಬರುವುದಿಲ್ಲ ಎಂದವರೆಷ್ಟು ಜನ?”

“ನಾನಾಗಿ ಯಾಕೆ ಕರೆಯಲಿ? ಅವರು ಬರಬೇಕು ಬಂದರೆ ನಾನು ಬೇಡ ಅನ್ನುವುದಿಲ್ಲ.”

“ನಿಮ್ಮ ಗೆಳೆಯರ ಬಳಗದಲ್ಲಿದ್ದಾರಲ್ಲ ಅವರೆಲ್ಲ ಯಾವ ದೇಶದವರು?”

“ಆಸ್ಟ್ರೇಲಿಯಾ, ಜರ್ಮನಿ, ಅಮೇರಿಕ, ನ್ಯೂಜಿಲೆಂಡ್, ಇಟಲಿ, ಯುಕೆ ನನಗೆ ಎಲ್ಲಾ ದೇಶದ ಗೆಳೆಯರಿದ್ದಾರೆ” ಎಂದಳು ಹೆಮ್ಮೆಯಿಂದ.

“ಹಾಗಿದ್ದರೆ ಈ ವಿದೇಶಿಯರು ಬಿಳಿಯರು ಮಾತ್ರ ಯಾಕೆ ಆಗಿದ್ದಾರೆ? ಇಂಡೋನೇಷಿಯಾ, ಇಂಡಿಯಾ, ಫಿಲಿಪೈನ್ಸ್, ಶ್ರೀಲಂಕಾ, ನೈಜೀರಿಯಾ, ಕೆನ್ಯಾ ಇವೆಲ್ಲ ವಿದೇಶಗಳೇ ತಾನೆ? ಇವೂ ಸಹ ವಿದೇಶಗಳೇ ತಾನೆ? ಈ ವಿದೇಶದ ಜನರೇಕೆ ಇಲ್ಲ?”

ಆಕೆ ಯಾಕೊ ಸುಮ್ಮನಾದಳು. ನಾನು ಮುಂದುವರಿಸಿದೆ.

“ಮೊನ್ನೆ ಸ್ಕ್ವಿಡ್ ಗೇಮ್ ವೆಬ್ ಸೀರೀಸ್ ಬಗ್ಗೆ ಚರ್ಚೆ ನಡೆಯುತ್ತಿತ್ತಲ್ಲ. ಅದರಲ್ಲಿ ಎಲ್ಲರ ಅಭಿಪ್ರಾಯ ಕೇಳಿದಿರಿ. ನನ್ನ ಮತ್ತು (ಇನ್ನಿಬ್ಬರು ಬಣ್ಣದವರನ್ನು ತೋರಿಸಿ) ಅವರ ಅಭಿಪ್ರಾಯ ಏಕೆ ಕೇಳಲಿಲ್ಲ?”

“ಬಹುಷಃ ನೀವು ನೋಡಲಿಕ್ಕಿಲ್ಲ ಅಂದುಕೊಂಡೆ”

“ಯಾಕೆ ಹಾಗನ್ನಿಸಿತು? ನಮ್ಮನ್ನು ನೋಡಿದಿರಾ ಅಂತ ಕೇಳಬಹುದಿತ್ತಲ್ಲ? ನಮಗೆ ಅದನ್ನು ನೋಡುವಷ್ಟು ಬುದ್ಧಿಮತ್ತೆಯಾಗಲಿ ಅಭಿರುಚಿಯಾಗಲಿ ಎಲ್ಲ ಎಂದು ಮೊದಲೇ ನೀವು ನಿರ್ಧರಿಸಿಕೊಂಡಿದ್ದಿರಲ್ಲವೇ? ಈ ನಿರ್ಧಾರಕ್ಕೆ ಬಂದದ್ದು ಯಾವ ಆಧಾರದ ಮೇಲೆ? ಬಣ್ಣ ಅಲ್ಲವಷ್ಟೇ?”

ಆಕೆಯ ಮುಖ ಸಪ್ಪಗಾಯಿತು.

“ಹೋಗಲಿ ಈಗಲೂ ಬಣ್ಣದವರ ಬಡಾವಣೆಗಳಲ್ಲಿ ಬಿಳಿಯರು ಕಾಣುವುದೇಕೆ ಕಡಿಮೆ? ಹಾಗೆಯೇ ನಿಮ್ಮ ಮೀಡಿಯಾಗಳಲ್ಲಿ ಬಣ್ಣದವರೇಕಿಲ್ಲ? ” ಅಂತ ಕೇಳಿದೆ.

ಆಕೆ ಮುಖ ಮುಖ ನೋಡಿದಳು.

“ಇನ್ನು ನಾನು ಊಟ ಶುರುಮಾಡಬಹುದಾ?” ಅಂತ ಕೇಳಿ ನನ್ನ ಬಟ್ಟಲನ್ನು ಎದುರಿಗೆ ಎಳೆದುಕೊಂಡೆ. ಅಷ್ಟರಲ್ಲಿ ಮತ್ತೊಬ್ಬ ಬಾಯಿ ಹಾಕಿ “ನೀನು ಹಾಗೆ ಜನರಲೈಸ್ ಮಾಡಬಾರದು ಗೆಳೆಯಾ? ನಾವೆಲ್ಲ ನಿಮ್ಮೊಡನೆ ಒಟ್ಟಿಗೆ ಊಟಕ್ಕೆ ಕೂತಿಲ್ಲವೇ ಇವಾಗ?” ಅಂತ ಕೇಳಿದ.

“That’s the meanest sentence I can digest” ಅಂತ ಹೇಳಿ ಊಟ ಮುಂದುವರಿಸಿದೆ.

ಕೊನೆ ಸಾಲು ಅರಗಿಸಿಕೊಳ್ಳಲು ಅಷ್ಟು ಕಷ್ಟ ಯಾಕೆಂದರೆ ಆದು ಆತನಲ್ಲಿ ಬೇರು ಬಿಟ್ಟಿರುವ ವರ್ಣ ಶ್ರೇಷ್ಠತೆಯ ಪ್ರಜ್ಞೆಯನ್ನೂ ಅದನ್ನು ಆತ ಬಿಡಲು ಸಿದ್ಧವಿಲ್ಲದಿರುವುದನ್ನೂ ಸೂಚಿಸುತ್ತದೆ.

ಫೇಸ್​ಬುಕ್​ನಲ್ಲಿ ಅನೇಕರು ಮಾಡುವ ಕಮೆಂಟನ್ನು ಅನೇಕಬಾರಿ ಕಂಡಿದ್ದೇನೆ. ನಾನು ಬ್ರಾಹ್ಮಣನಾದರೂ ದಲಿತರ ಜೊತೆ ಕೂತು ಊಟ ಮಾಡುತ್ತೇನೆ, ಅವರನ್ನು ಮನೆಗೆ ಕರೆಯುತ್ತೇನೆ, ಗೌಡರಾದರೂ ಕೂಲಿಯವರ ಜೊತೆ ಗೌರವದಿಂದ ಮಾತನಾಡುತ್ತೇನೆ, ಲಿಂಗಾಯತನಾದರೂ ಮಾಂಸ ತಿನ್ನುವವರ ಜೊತೆ ಗೆಳೆತನ ಮಾಡಿಕೊಂಡಿದ್ದೇನೆ ಇತ್ಯಾದಿ ಇತ್ಯಾದಿ. ಬಲವಾಗಿ ಒಳಗೆ ಕೂತಿರುವ ಜಾತಿಪ್ರಜ್ಞೆಯ ಆಧಾರದ ಮೇಲೆಯೇ ತಾನೆ ತಾನು ತನಗಿಂತ ಭಿನ್ನ ಸಂಪ್ರದಾಯದವರೊಂದಿಗೆ ತಾನು ಸಹಜವಾಗಿ ನಡೆದುಕೊಳ್ಳಬೇಕಾದದ್ದನ್ನೆ ಶ್ರೇಷ್ಠ ನಡೆವಳಿಕೆ ಅಂದುಕೊಂಡಿರುವುದು? ತಾವು ಜನ್ಮದಿಂದ ಪಡೆದುಕೊಂಡು ಬಂದ ಹಿನ್ನಡಾವಳಿಗಳ ಆಧಾರದ ಮೇಲೆಯೇ ತಮ್ಮ ಈಗಿನ ನಡವಳಿಕೆಯ ಶ್ರೇಷ್ಠತೆಯನ್ನು ಅಳೆಯುತ್ತಾರೆ. ಇದೊಂದು ಪ್ರಜ್ಞೆಯನ್ನು ದಾಟುವುದು ದೊಡ್ಡ ದೊಡ್ಡ ಬರಹಗಾರರಿಗೂ, ಹೋರಾಟಗಾರರಿಗೂ ಪ್ರಗತಿಪರ ಚಿಂತಕರಿಗೂ ಸಹ ಸಾಧ್ಯವಾಗಿಲ್ಲ.

ಒಂದೊಳ್ಳೆ ಉದಾಹರಣೆ ಎಂದರೆ ಮಂಗಳೂರು ಮೂಲದ ಕಮ್ಯೂನಿಸ್ಟ್ ಹೋರಾಟಗಾರರೊಬ್ಬರು ಬಿಜೆಪಿಯ ಪರವಾಗಿ ಹೇಳಿಕೆ ಕೊಟ್ಟುಬಿಟ್ಟರು. ಅದಕ್ಕೆ ಪ್ರಗತಿಪರರೆಲ್ಲ ಅವರ ಜಾತಿಯ ಹಿನ್ನೆಲೆಯನ್ನು ತಂದು ಅವರು ಬ್ರಾಹ್ಮಣರಾದ್ದರಿಂದ ಈ ರೀತಿ ಯೂಟರ್ನ್ ಹೊಡೆದಿದ್ದಾರೆಂದು ದೂರಿದರು. ಅದಕ್ಕೆ ಅವರ ಮಗಳು ತಂದೆಯ ಪರವಾಗಿ ಸ್ಪಷ್ಟೀಕರಣ ಕೊಟ್ಟು ಅವರು ತನ್ನನ್ನು ತನಗಿಂತ ಕೆಳಜಾತಿಯ ಹುಡುಗನ ಜೊತೆಗೆ ಮದುವೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆಂದೂ, ಅಳಿಯನನ್ನು ಗೌರವದಿಂದ ಕಾಣುತ್ತಾರೆಂದೂ, ತಮ್ಮದೇ ಮನೆಯಲ್ಲಿ ಮಾಂಸ ತಿನ್ನುವ ಅಳಿಯನಿಗಾಗಿ ಬೇರೆ ಅಡುಗೆ ಮಾಡಿಕೊಟ್ಟಿದ್ದಾರೆಂದೂ ಆ ಕಾರಣದಿಂದ ತಮ್ಮ ತಂದೆಯಲ್ಲಿ ಜಾತಿಶ್ರೇಷ್ಠತೆಯ ಪ್ರಜ್ಞೆ ಇಲ್ಲವೆಂದೂ ಪ್ರತಿಪಾದಿಸಿದ್ದರು. ಅದನ್ನು ಓದಿ ಪಶ್ಚಾತ್ತಾಪ ಪಟ್ಟ ಈ ಹಿಂದೆ ಅವರನ್ನು ಟೀಕಿಸಿದ್ದ ಪ್ರಗತಿಪರರೆಲ್ಲ ಪಾಪಪ್ರಜ್ಞೆಯಿಂದ ಮಗಳ ಪೋಸ್ಟನ್ನೂ ಸಹ ವೈರಲ್ ಮಾಡಿದರು. ನನಗೆ ಈ ತುಳಿತಕ್ಕೊಳಗಾದ ವರ್ಗವನ್ನು ಮೂರ್ಖರನ್ನಾಗಿ ಮಾಡುವುದು ಎಷ್ಟು ಸುಲಭವಾಗಿದೆಯಲ್ಲ ಎನ್ನಿಸಿಬಿಟ್ಟಿತು! ತನ್ನದೇ ಮನೆಯಲ್ಲಿ ಮಗಳ ಗಂಡನಿಗೆ ಆತ ಮಾಂಸಾಹಾರಿಯೆಂಬ ಕಾರಣಕ್ಕಾಗಿ ಬೇರೆ ಅಡುಗೆ ಮನೆ ಮಾಡಿಕೊಡುವವನು ಯಾರ ರೀತಿಯಲ್ಲಿ ಜಾತಿಪ್ರಜ್ಞೆ ಮತ್ತು ಶ್ರೇಷ್ಠತೆಯ ವ್ಯಸನವನ್ನು ಬಿಟ್ಟಿದ್ದಾನೆ? ತಾನೂ ಮತ್ತು ಮಾಂಸ ತಿನ್ನುವ ಅಳಿಯನೂ ಬೇರೆ ಬೇರೆ ರೀತಿಯ ಮನುಷ್ಯರು ಎಂಬ ಸ್ಪಷ್ಟ ಸಂದೇಶವನ್ನು ಆತ ಬೇರೆ ಅಡುಗೆ ಮನೆ ಮಾಡಿಕೊಡುವ ಮೂಲಕ ಕೊಡಲಿಲ್ಲವೇ?

ಇದು ಒಂದಲ್ಲ ಲಂಕೇಶ್, ತೇಜಸ್ವಿ, ಶಿವರಾಮ ಕಾರಂತ, ಮಾಸ್ತಿ, ಅನಂತಮೂರ್ತಿ ಮತ್ತಿತರ ಅನೇಕ ಬರಹಗಾರರು, ಹೋರಾಟಗಾರರು ಸಹ ಪಾಳಯಗಾರಿಕೆಯ ಮನಃಸ್ಥಿತಿಯಿಂದ ಹೊರಬರಲು ಸಾಧ್ಯವಾಗದಿರುವುದು ಕಾಣುತ್ತದೆ. ಒಮ್ಮೊಮ್ಮೆ ದಲಿತ ಸಾಹಿತ್ಯವೆಂಬುದು ಕನ್ನಡದಲ್ಲಿ ಹುಟ್ಟದೇ ಹೋಗಿದ್ದರೆ ನಮ್ಮ ಪೀಳಿಗೆ ಅದ್ಯಾವ ಪರಿ ದಲಿತ ಸಂವೇದನೆಯಿಂದ ದೂರವುಳಿಯುತ್ತಿತ್ತು ಎಂದು ನೆನೆಸಿಕೊಂಡರೆ ದಿಗಿಲಾಗುತ್ತದೆ. ಇದೇ ಕಾರಣಕ್ಕಾಗಿ ದಲಿತ ಹಿಂದುಳಿದವರ ಮತ್ತು ಮಹಿಳಾ ಹೋರಾಟಗಳನ್ನು ಪ್ರಬಲ ಜಾತಿಯ ಗಂಡಸುಗಳು ಮುನ್ನಡೆಸಬಾರದು ಅಂತ ನಾನು ಅನೇಕ ಬಾರಿ ಪ್ರತಿಪಾದಿಸಿದ್ದೇನೆ. ಸದ್ಯಕ್ಕೆ ತಮ್ಮ ಜಾತಿಪ್ರಜ್ಞೆಯನ್ನು ಮೀರುವುದೊಂದೇ ಅವರು ದಲಿತರ ಪರವಾಗಿ ನಡೆಸಬಹುದಾದ ಹೋರಾಟ!

Sydney Diary Shriharsha Salimat

ಸೌಜನ್ಯ : ಫೇಸ್​ಬುಕ್

ಆದರೆ ಈ ಪ್ರಜ್ಞೆಗಳು ಆಗಾಗ ಹೋರಾಟದ ಶೋಕಿಯ ಮೂಲಕವೇ ಹೊರಬರುತ್ತಿರುತ್ತವೆ. ಇತ್ತೀಚೆಗೆ ಹೊಸದಾಗಿ ಇಂತಹ ಶೋಕಿಯೊಂದು ಒಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಯಿತು. “ನಾವು ಕಸದವರಲ್ಲ ಕಸ ಸ್ವಚ್ಛಗೊಳಿಸುವವರು” ಸರಿ. ಈ ಬೋರ್ಡ್ ಮುಖಾಂತರ ಅವರಿಗೆ ಮರ್ಯಾದೆ ಕೊಟ್ಟಂತೇನೋ ಆಯಿತು. “ಸ್ವಚ್ಛಗೊಳಿಸುವವರು” ಅಂತ ಹೊಸ ಹೆಸರು ಕೊಟ್ಟದ್ದಾಯಿತು. ಮುಂದೇನು? ಹೆಸರು ಬದಲಾವಣೆಯಿಂದ ಮರ್ಯಾದೆ ಹೆಚ್ಚಾಯಿತೆ? ಈ ಬೋರ್ಡ್ ಬರೆಸಿದವರು ಮತ್ತು ಹಂಚಿಕೊಂಡವರು ಅವರನ್ನು ಮನೆಗೆ ಹಬ್ಬದ ದಿನ ಕರೆದು ಊಟಕ್ಕೆ ಹಾಕುತ್ತಾರೆಯೆ? ಅವರ ಮಕ್ಕಳ ಜೊತೆ ತಮ್ಮ ಮಕ್ಕಳನ್ನು ಆಡಲು ಬಿಡುತ್ತಾರೆಯೇ? ಅವರು ಸಮಾಜಕ್ಕೆ ಬಹಳ ಮುಖ್ಯವಾದ್ದರಿಂದ ಆಫೀಸರುಗಳಿಗೆ ಕೊಡುವಷ್ಟೇ ಸಂಬಳ ಅವರಿಗೆ ಕೊಡಿ ಅಂತ ಬೋರ್ಡ್ ಹಾಕಿಕೊಳ್ಳುತ್ತಾರೆಯೆ? ಇವರ ಮನೆ ತೊಳೆಯಲು ನೂರು ರೂಪಾಯಿ ಹೆಚ್ಚು ಕೇಳಿದ ತಕ್ಷಣ “ನೋಡ್ರಿ ಎಷ್ಟು ದುಡ್ಡು ಕೇಳ್ತಾರೆ ಎಷ್ಟು ಸೊಕ್ಕು ಬಂದಿದೆ ಇವರಿಗೆ” ಅಂತ ಹೇಳುವುದು ಬಿಡುತ್ತಾರೆಯೇ? ಇಂತಹ ಬೋರ್ಡ್ ಶೋಕಿಗಳು ಪ್ರಬಲ ಜಾತಿಯವರಲ್ಲಿ ಜಾಸ್ತಿ. ಈ ಹೀಗೆಯೆ ಮಂಡ್ಯದ ಮೂಲದ ಪ್ರಗತಿಪರ ಗುಂಪೊಂದು ಕನಿಷ್ಟ ಇಷ್ಟು ಮಟ್ಟದ ಓದನ್ನು ಪಡೆದವರಿಗೆ ಮಾತ್ರ ಮತ ಹಾಕುವ ಅಧಿಕಾರವನ್ನು ಕೊಡಬೇಕು ಅಂತ ಪ್ರತಿಪಾದಿಸಿತ್ತು. ಅಕಸ್ಮಾತ್ ಈ ರೀತಿ ಕಾನೂನು ಜಾರಿಗೆ ಬಂದರೆ “ಕಸ ಸ್ವಚ್ಛಗೊಳಿಸುವ”ವರಲ್ಲಿ ಶೇ.90 ರಷ್ಟು ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವವರು ದೂರ ಉಳಿಯುತ್ತಾರೆ ಅಂತ ಕೂಡ ಈ ಸುಶಿಕ್ಷಿತ ವರ್ಗಕ್ಕೆ ಹೊಳೆಯಲಿಲ್ಲ.

ಇದೇ ಕಾರಣದಿಂದ ಅಂಬೇಡ್ಕರ್ ಗಾಂಧೀಜಿಯ ಅನೇಕ ದಲಿತೋದ್ಧಾರ ಸುಧಾರಣೆಗಳನ್ನು ವಿರೋಧಿಸಿದ್ದು. ತಮ್ಮನ್ನು “ಹರಿಜನ” ಎಂಬ ಹೆಸರಿನಿಂದ ಕರೆಯಬಾರದೆಂದೂ ದಲಿತರು ಎಂದೇ ಕರೆಯಬೇಕೆಂದು ಬಲವಾಗಿ ಹೇಳಿದ್ದು. ಯಾಕೆಂದರೆ ಸಂಸ್ಕೃತ ಹೆಸರಿನಿಂದ ಕರೆದು ಅವರಿಗೆ ಒಣಮರ್ಯಾದೆ ಕೊಟ್ಟಂತೆ ಮಾಡುವುದು ಮತ್ತದೇ ಪ್ರಬಲಜಾತಿಯ ಹೃದಯವೈಶಾಲ್ಯವನ್ನು ವೈಶಾಲ್ಯವನ್ನು ತೋರಿಸಿಕೊಳ್ಳುವ ಶೋಕಿಯ ಭಾಗವೇ! ಈಗಲೂ ಸಹ ದಲಿತರಿಗೆ ಗುಡಿಯ ಪ್ರವೇಶ ದೊರಕಿಸಿಕೊಡುವ ಗಾಂಧೀಜಿಯ ಪ್ರಯತ್ನ ಯಶಸ್ವಿಯಾಗಿಲ್ಲ ಅದೇ ಅವರಿಗೆ ಎಲ್ಲ ಸಾಮಾಜಿಕ ಸನ್ನಿವೇಶಗಳಲ್ಲಿ ಸಮಾನ ಭಾಗವಹಿಸುವಿಕೆಯ ಅವಕಾಶ ತಂದುಕೊಟ್ಟ ಅಂಬೇಡ್ಕರ್ ಪ್ರಯತ್ನ ಸಾಕಷ್ಟು ಯಶಸ್ವಿಯಾಗಿದೆ. ತುಳಿತಕ್ಕೊಳಗಾದ ವರ್ಗಗಳ ಹೋರಾಟವನ್ನು ಅದೇ ಸಮುದಾಯದವರು ವಹಿಸಿಕೊಳ್ಳಬೇಕೆ ಹೊರತು ಪ್ರಬಲ ಜಾತಿಯವರಲ್ಲ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಗಾಂಧೀಜಿ ತಮ್ಮ ಪ್ರಬಲ ವರ್ಗದ ಹೆಚ್ಚುಗಾರಿಕೆಯ ಪ್ರಜ್ಞೆಯನ್ನು ಮೀರುವಲ್ಲಿ ಇನ್ನೂ ಸ್ವಲ್ಪ ಹೆಚ್ಚಿನ ಉದಾರತೆ ತೋರಿದ್ದರೆ ಸಾಕಾಗಿತ್ತು.

ಇದು ನಾನು ಎರಡೋ ಮೂರನೆಯ ತರಗತಿಯಲ್ಲಿದ್ದಾಗ ನಡೆದ ಕತೆ. ನಮ್ಮೂರಲ್ಲಿ ನಮ್ಮನೆಗೆ ದನಕಾಯಲು ಹುಡುಗನೊಬ್ಬ ಬರುತ್ತಿದ್ದ. ನನಗಿಂತ ಎರಡು ವರ್ಷ ದೊಡ್ಡವನು. ಅವನ ಹೆಸರು ಮೈಲಾರಿ. ಒಂದು ದಿನ ಮೈಲಾರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದ. ಅದಾವುದೋ ತುರ್ತು ಬರಲಾಗಿ ಅದನ್ನು ನಿಭಾಯಿಸುವ ಕೌಶಲ ಮೈಲಾರಿಯ ಬಳಿ ಮಾತ್ರ ಇದ್ದುದರಿಂದ ಆತನನ್ನು ಕರೆದುಕೊಂಡು ಬರಲು ನನ್ನನ್ನು ಆತನ ವಿಳಾಸ ವಿವರಿಸಿ ಕಳಿಸಲಾಯಿತು. ನಾನು ಮೈಲಾರಿಯ ಕೇರಿಯ ಬಳಿ ಬರುತ್ತಿದ್ದಂತೆ ಕೇರಿಗೆ ಅಡ್ಡಲಾಗಿ ಒಂದು ಬೊಂಬನ್ನು ಕಟ್ಟಲಾಗಿತ್ತು. ಬೊಂಬಿನ ಮುಂದೆ ಒಬ್ಬ ಹೆಂಗಸು ನಿಂತಿದ್ದಳು. ನನಗೆ ಯಾರು ಬೇಕಾಗಿತ್ತು ಅಂತ ಕೇಳಿದಳು. ನಾನು “ಮೈಲಾರಿ” ಅಂತ ಹೇಳಿದೆ. “ತಡಿ ಕರಿತಿನಿ” ಅಂತ ಹೇಳಿ “ಮೈಲಾರೀeeeeee ..” ಅಂತ ರಾಗವಾಗಿ ಕೂಗುತ್ತಾ ಹೋದಳು. ನಾನು ಆಕೆಯ ಹಿಂದೆ ಹೊರಡುತ್ತಿದ್ದಂತೆ ಆಕೆ ನನ್ನನ್ನು ಅಲ್ಲೇ ತಡೆದು “ಇಲ್ಲೆ ಇರು ಬರಬೇಡ” ಅಂತ ಹೇಳಿ ಹೋದಳು. ನನಗೆ ಭಯಂಕರ ಅವಮಾನವಾದಂತಾಯಿತು. ದೊಡ್ಡ ಭೂಮಾಲಿಕರ ಮನೆಯ ಹುಡುಗ ನಾನು. ನನ್ನನ್ನು ಈ ಯಃಕಶ್ಚಿತ್ ಹೆಂಗಸು ಕೇರಿಯೊಳಗೆ ಬರದಂತೆ ತಡೆಯುವುದೆಂದರೇನು? ಮುಖ ಊದಿಸಿಕೊಂಡು ಬಂದೆ.

ಆಮೇಲೆ ಮೈಲಾರಿ ಇರುವ ಓಣಿಯನ್ನು “ಹರಿಜನ ಕೇರಿ” ಅಂತ ಕರೆಯುತ್ತಾರೆ ಅಂತ ಮುಂದೆ ತಿಳಿಯಿತು. ಬಹುಷಃ ನನಗೆ ಮೊದಲ ಬಾರಿಗೆ ಸಮಾಜದಲ್ಲಿದ್ದ ಒಂದು ಹೊಸ ಸಮೀಕರಣದ ಬಗ್ಗೆ ಗೊತ್ತಾಯಿತು. ನಮ್ಮನೆಯಲ್ಲಿ ನನಗೆ ಯಾರೂ ಆ ಕೇರಿಗೆ ಹೋಗಬಾರದು ಅಂತ ಹೇಳಲಿಲ್ಲ. ಆದರೆ ಅವರೇ ಬಿಟ್ಟುಕೊಳ್ಳುವುದಿಲ್ಲವಲ್ಲ ಅದಕ್ಕೆ ನಾವು ಹೋಗುವುದಿಲ್ಲ! ಯಾಕೆ ಬಿಟ್ಟುಕೊಳ್ಳುತ್ತಿಲ್ಲ? ಏಕೆಂದರೆ ಅವರಿಗೆ ಒಂದು ಅಡ್ಡಗೋಡೆ ನಮ್ಮಲ್ಲಿ ಕಾಣುತ್ತಿರಬಹುದಲ್ಲವೇ, ಬಣ್ಣದ ಜನರಿಗೆ ಬಿಳಿಯ ಜನರಲ್ಲಿ ಕಾಣುತ್ತಿರುವಂತೆ? ನಾವು ದಿನವೂ ಒಡನಾಡುವ ಗೆಳೆಯರಲ್ಲಿ ಆ ಜನರೆಷ್ಟು ಇದ್ದಾರೆ? ನಮ್ಮ ಮಕ್ಕಳ ಗೆಳೆಯರಲ್ಲಿ ಎಷ್ಟು ಜನ ಇದ್ದಾರೆ? ಅವರು ಮಾತಾಡುವ ಕನ್ನಡಕ್ಕಿಂತ ನಾನು ಮಾತಾಡುವ ಕನ್ನಡ ಶ್ರೇಷ್ಠ ಅಂತ ನಾವು ಅಂದುಕೊಂಡಿಲ್ಲವೇ? ಈ ವಿಲೀನ ಅನ್ನುವುದು ಇಂದಿಗೂ ಸಾಧ್ಯವಾಗಿಲ್ಲ. ವಿಲೀನಕ್ಕೆ ಹೋರಾಟ ಬೇಕಿಲ್ಲ. ಪ್ರಬಲವರ್ಗದವರು ತಮ್ಮ ವರ್ಗಪ್ರಜ್ಞೆಯನ್ನು ದುರ್ಬಲಗೊಳಿಸಬೇಕು ಅಷ್ಟೇ!

ಹಿಂದಿನ ಕಂತು : Sydney Diary : ಮದುವೆಯಾಗಿ ಇನ್ನೊಂದು ಜೀವಿಯ ಹಕ್ಕನ್ನು ಕಸಿದುಕೊಂಡು ಬದುಕುವುದು ಏಕೆ?

Published On - 1:23 pm, Sun, 17 October 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ